ಮುಂದಿನ ನಾಲ್ಕು ಗಂಟೆಯಲ್ಲಿ ಕೆಲಸಕ್ಕೆ ಮರಳಿ, ಇಲ್ಲವೇ ಆಸ್ಪತ್ರೆಯಿಂದ ಹೊರನಡೆಯಿರಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಟ್ಟೆಚ್ಚರಕ್ಕೂ ಕಿಮ್ಮತ್ತು ನೀಡದ ಪಶ್ಚಿಮಬಂಗಾಳದ ಕಿರಿಯ ವೈದ್ಯರು ಸತತ ಮೂರನೇ ದಿನವೂ ತಮ್ಮ ಮುಷ್ಕರವನ್ನು ಮುಂದುವರಿಸಿದ್ದಾರೆ. ಈ ನಡುವೆ, ಮುಷ್ಕರ ನಿರತ ಕಿರಿಯ ವೈದ್ಯರಿಗೆ ಬೆಂಬಲ ಘೋಷಿಸಿರುವ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಶುಕ್ರವಾರ ದೇಶವ್ಯಾಪಿ ವೈದ್ಯರ ಮುಷ್ಕರಕ್ಕೆ ಕರೆ ನೀಡಿದೆ.
ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ಸರ್ಕಾರ ಅಧಿಕಾರದಲ್ಲಿರುವ ಪಶ್ಚಿಮಬಂಗಾಳದ ರಾಜಧಾನಿ ಕೊಲ್ಕತ್ತಾದ ಎನ್ ಆರ್ ಎಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ರೋಗಿಯ ಕಡೆಯವರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಆ ಘಟನೆಯಲ್ಲಿ ಕಿರಿಯ ವೈದ್ಯ ಪರಿಬಹೊ ಮುಖರ್ಜಿ ಎಂಬುವರ ತಲೆಗೆ ಪೆಟ್ಟು ಬಿದ್ದು ತೀವ್ರ ಗಾಯಗೊಂಡಿದ್ದರು. ಜೊತೆಗೆ ಇತರ ಕೆಲವು ವೈದ್ಯಕೀಯ ಸಿಬ್ಬಂದಿಗೂ ಗಾಯಗಳಾಗಿದ್ದವು. ಆ ಘಟನೆಯ ಹಿನ್ನೆಲೆಯಲ್ಲಿ ಕಿರಿಯ ವೈದ್ಯರು ದಿಢೀರ್ ಮುಷ್ಕರ ಆರಂಭಿಸಿದ್ದರು.
ಬಳಿಕ ಸಾರ್ವಜನಿಕರು ಮತ್ತು ತೃಣಮೂಲ ಕಾರ್ಯಕರ್ತರು ಹಾಗೂ ಮುಷ್ಕರನಿರತ ವೈದ್ಯರ ನಡುವೆ ಒಂದೆರೆಡು ಕಡೆ ಸಂಘರ್ಷದ ಘಟನೆಗಳು ವರದಿಯಾಗಿದ್ದವು. ಕೊಲ್ಕತ್ತಾ ನ್ಯಾಷನಲ್ ಮೆಡಿಕಲ್ ಕಾಲೇಜು ಮತ್ತು ಕಾಲೇಜಿನ ಹಾಸ್ಟೆಲ್ ಮೇಲೆ ಕೆಲವರು ದಾಳಿ ನಡೆಸಿದ ಪ್ರಕರಣವೂ ನಡೆದಿತ್ತು. ಈ ನಡುವೆ, ಮುಷ್ಕರನಿರತ ವೈದ್ಯರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ದೂರುಗಳೂ ಕೇಳಿಬಂದಿವೆ. ಅಲ್ಲದೆ, ಸ್ವತಃ ಸಿಎಂ ಮಮತಾ ಬ್ಯಾನರ್ಜಿ ಅವರೇ ಎನ್ ಆರ್ ಎಸ್ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ತಪ್ಪಿತಸ್ಥರಿಗೆ ಶಿಕ್ಷೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೆ ತಾವು ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲ ಎಂದು ಕಿರಿಯ ವೈದ್ಯರು ಪಟ್ಟು ಹಿಡಿದ್ದಾರೆ.
ಈ ನಡುವೆ, ಸಿಎಂ ಮಮತಾ ಬ್ಯಾನರ್ಜಿ ಅವರು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಹಿರಿಯ ವೈದ್ಯರಿಗೆ ಪತ್ರ ಬರೆದು, ರೋಗಿಗಳ ಚಿಕಿತ್ಸೆಗೆ ಅಡ್ಡಿಯಾಗದಂತೆ ಸಹಕರಿಸಿ ಎಂದು ಮನವಿ ಮಾಡಿದ್ದರು. ಅಲ್ಲದೆ, ಕೊಲ್ಕತ್ತಾದ ಎಸ್ ಎಸ್ ಕೆಎಂ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು. ಈ ವೇಳೆ, ಅವರು, ‘ಇನ್ನು ನಾಲ್ಕು ಗಂಟೆಯಲ್ಲಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗದೇ ಇದ್ದರೆ, ಕೆಲಸ ಕಳೆದುಕೊಳ್ಳುತ್ತೀರಿ. ನಿಮ್ಮಂತೆಯೇ ಪೊಲೀಸರು ಸಾರ್ವಜನಿಕ ಕರ್ತವ್ಯದಲ್ಲಿರುತ್ತಾರೆ. ಅಂತಹ ಸಂದರ್ಭದಲ್ಲಿ ಅವರೂ ಜೀವ ಕೊಡುತ್ತಾರೆ. ಹಾಗಂತ ಅವರು ನಿಮ್ಮಂತೆ ಮುಷ್ಕರ ಮಾಡುವುದಿಲ್ಲ. ನಿಮ್ಮದು ಅಗತ್ಯ ಸೇವೆ. ಜನರ ಜೀವ ಉಳಿಸುವ ಕಾರ್ಯ ಎಂಬುದು ನೆನಪಿರಲಿ’ ಎಂದಿದ್ದರು.
ಅದೇ ವೇಳೆ, ‘ಆಸ್ಪತ್ರೆಗಳ ಮುಂದೆ ಮುಷ್ಕರ ನಡೆಸುತ್ತಿರುವವರ ಪೈಕಿ ವೈದ್ಯರಿಗಿಂತ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರೇ ಹೆಚ್ಚಿದ್ದಾರೆ. ವೈದ್ಯರ ಹೆಸರಿನಲ್ಲಿ ಬಿಜೆಪಿ ಮತ್ತು ಸಿಪಿಎಂ ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಹಿಂದೂ-ಮುಸ್ಲಿಂ ಕೋಮು ಭಾವನೆಗಳನ್ನು ಕೆರಳಿಸಲು ಈ ಮುಷ್ಕರಕ್ಕೆ ಕುಮ್ಮಕ್ಕು ನೀಡಲಾಗುತ್ತಿದೆ. ಸರ್ಕಾರದ ಕಡೆಯಿಂದ ವೈದ್ಯರ ಮೇಲಿನ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಕ್ರಮಕೈಗೊಳ್ಳಲಾಗಿದೆ. ಹಲ್ಲೆ ನಡೆಸಿದವರ ಬಂಧನವಾಗಿದೆ. ಪೊಲೀಸರು ವೈದ್ಯರಿಗೆ ಅಗತ್ಯ ಭದ್ರತೆ ನೀಡಿದ್ದಾರೆ. ಭವಿಷ್ಯದಲ್ಲಿ ಅಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವ ಭರವಸೆಯನ್ನೂ ಸರ್ಕಾರ ನೀಡಿದೆ. ಆದಾಗ್ಯೂ ವೈದ್ಯರು ಹಠಮಾರಿ ಧೋರಣೆ ತಳೆಯುತ್ತಿರುವುದರ ಹಿಂದೆ ಬಾಹ್ಯ ಶಕ್ತಿಗಳ ಕುಮ್ಮಕ್ಕಿದೆ’ ಎಂಬ ಗಂಭೀರ ಆರೋಪವನ್ನೂ ದೀದಿ ಮಾಡಿದ್ದಾರೆ.
ವೈದ್ಯರ ನಿರಂತರ ಮುಷ್ಕರ, ವೈದ್ಯಕೀಯ ಕಾಲೇಜು ಮತ್ತು ಹಾಸ್ಟೆಲ್ ಗಳ ಮೇಲಿನ ಗೂಂಡಾ ದಾಳಿ ಘಟನೆಗಳು, ವೈದ್ಯರ ಮುಷ್ಕರಕ್ಕೆ ಬೆಂಬಲವಾಗಿ ಐಎಂಎ ದಿಢೀರನೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವುದು, ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಿಂದಲೂ ರಾಜ್ಯದಲ್ಲಿ ಹಾಲಿ ಇರುವ ತೃಣಮೂಲ ಸರ್ಕಾರವನ್ನು ಉರುಳಿಸಲು ಮಾಡುತ್ತಿರುವ ನಿರಂತರ ಪ್ರಯತ್ನಗಳು, ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರ, ಹೀಗೆ ಹಲವು ಬೆಳವಣಿಗೆಗಳನ್ನು ಜೋಡಿಸಿಕೊಂಡು ನೋಡಿದರೆ, ಮಮತಾ ಬ್ಯಾನರ್ಜಿ ಅವರ ಆರೋಪದಲ್ಲಿ ನಿಜವಿಲ್ಲ ಎನ್ನಲಾಗದು.
ಒಬ್ಬ ವೈದ್ಯರ ಮೇಲೆ ನೊಂದ ರೋಗಿಗಳ ಕಡೆಯವರು ನಡೆಸಿದ ಹಲ್ಲೆಯ ಘಟನೆ ಖಂಡನೀಯ ಮತ್ತು ಅಂತಹ ಘಟನೆಗಳು ವೈದ್ಯರ ಮನೋಸ್ಥೈರ್ಯಕ್ಕೆ ಪೆಟ್ಟು ಕೊಡುತ್ತವೆ ಎಂಬುದು ತಳ್ಳಿಹಾಕಲಾಗದ ಸಂಗತಿ. ಆದರೆ, ಒಂದು ಹಲ್ಲೆ ಘಟನೆಯನ್ನೇ ಮುಂದಿಟ್ಟುಕೊಂಡು ಇಡೀ ರಾಜ್ಯದ ಸಾರ್ವಜನಿಕ ಆರೋಗ್ಯ ಸೇವೆಯನ್ನೇ ಬುಡಮೇಲು ಮಾಡಿ, ಲಕ್ಷಾಂತರ ಮಂದಿ ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡುವುದು ವೈದ್ಯಕೀಯ ನೈತಿಕತೆಯೇ? ಅಲ್ಲದೆ, ಒಂದು ರಾಜ್ಯದ ಒಂದು ಆಸ್ಪತ್ರೆಯಲ್ಲಿ ನಡೆದ ಒಂದು ಘಟನೆಯನ್ನೇ ಮುಂದಿಟ್ಟುಕೊಂಡು ಐಎಂಎ ನಂತಹ ಸಂಸ್ಥೆ, ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡುವುದರ ಹಿಂದೆ ಯಾವ ನೈತಿಕತೆಯ ನೆಲೆ ಇದೆ? ಪ್ರಭಾವಿ ಸಂಸ್ಥೆಯೊಂದು, ವೈದ್ಯಕೀಯ ಸೇವೆಯಂತಹ ಅಗತ್ಯ ಜೀವರಕ್ಷಕ ಸೇವೆಯನ್ನು ಹೀಗೆ ಒಂದು ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಅಸ್ತವ್ಯಸ್ಥಗೊಳಿಸುವುದು ಎಷ್ಟರಮಟ್ಟಿಗೆ ಸರಿ?
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ವೃತ್ತಿನಿರತ ಸರ್ಕಾರಿ ವೈದ್ಯರ ಮೇಲೆ ಹಲ್ಲೆ ನಡೆದ ಮತ್ತು ರಾಜ್ಯ ಸರ್ಕಾರಗಳು ಮುಷ್ಕರನಿರತ ವೈದ್ಯರ ವಿರುದ್ಧ ಎಚ್ಚರಿಕೆ ನೀಡಿದ ಘಟನೆಗಳು ನಡೆದಾಗಲೂ ಐಎಂಎ ಇಂತಹದ್ದೇ ವಿಪರೀತದ ನಿರ್ಧಾರಗಳನ್ನು ಕೈಗೊಂಡಿತ್ತೆ? ಕರ್ನಾಟಕದ ಉತ್ತರಕನ್ನಡದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಕಳೆದ ವರ್ಷ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಯಾರೋ ಅಮಾಯಕ ಜನಸಾಮಾನ್ಯರು ತಮ್ಮವರನ್ನು ಕಳೆದುಕೊಂಡ ಹತಾಶೆಯಲ್ಲಿ ನಡೆಸಿದ ಹಲ್ಲೆಯನ್ನೇ ರಾಷ್ಟ್ರವ್ಯಾಪಿ ವಿವಾದವನ್ನಾಗಿ ಮಾಡುತ್ತಿರುವ ಐಎಂಎ, ಒಬ್ಬ ಜವಾಬ್ದಾರಿಯುತ ಸಂಸದ, ಕೇಂದ್ರ ಸಚಿವರಾಗಿ ಸರ್ಕಾರಿ ವೈದ್ಯರ ಮೇಲೆ ಆಸ್ಪತ್ರೆಯಲ್ಲೇ ಹಲ್ಲೆ ನಡೆಸಿದಾಗ ಯಾಕೆ ಇಂತಹ ದಿಟ್ಟ ಕ್ರಮಕ್ಕೆ ಮುಂದಾಗಲಿಲ್ಲ ಎಂಬ ಪ್ರಶ್ನೆಗಳು ಕಾಡುತ್ತವೆ ಮತ್ತು ಅಂತಹ ಪ್ರಶ್ನೆಗಳು ಐಎಂಎಯ ದೇಶವ್ಯಾಪಿ ಮುಷ್ಕರದ ಹಿಂದೆ ರಾಜಕೀಯ ವಾಸನೆ ಇರುವ ಬಗ್ಗೆ ಅನುಮಾನ ಹುಟ್ಟಿಸುತ್ತಿವೆ.
ಒಂದು ಕಾಲದ ಕಮ್ಯುನಿಸ್ಟರ ಭದ್ರಕೋಟೆಯನ್ನು ಛಿದ್ರಗೊಳಿಸಿ ತೃಣಮೂಲ ಕಾಂಗ್ರೆಸ್ ಪಾರುಪಥ್ಯ ಸ್ಥಾಪಿಸಿದ್ದ ಮಮತಾ ಬ್ಯಾನರ್ಜಿ ಕೂಡ, ರಾಜ್ಯದ ಆಡಳಿತ ನಡೆಸುವಲ್ಲಿ ಆಡಳಿತಶಾಹಿ ಮತ್ತು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯದೆ, ಸದಾ ದ್ವೇಷ ಮತ್ತು ಸವಾಲಿನ ವರಸೆಯನ್ನೇ ತಮ್ಮ ಹೆಗ್ಗುರುತು ಮಾಡಿಕೊಂಡದ್ದರ ಪರಿಣಾಮ ಇಂದು ಇಡೀ ರಾಜ್ಯದ ತುಂಬೆಲ್ಲಾ ಇಂತಹ ಪ್ರತೀಕೂಲ ವಿದ್ಯಮಾನಗಳು ತಾಂಡವವಾಡುತ್ತಿವೆ. ಸ್ವತಃ ರಾಜ್ಯದ ಚುಕ್ಕಾಣಿ ಹಿಡಿದ ಬಳಿಕವೂ ಅವರು ಪ್ರತಿಪಕ್ಷ ನಾಯಕಿಯಾಗಿ ಸದಾ ರಸ್ತೆಗಿಳಿದು ಹೋರಾಡುವ ತಮ್ಮ ಜಾಯಮಾನವನ್ನು ಬದಲಿಸಿಕೊಳ್ಳಲಿಲ್ಲ. ಹಾಗಾಗಿ ಆಡಳಿತ ಮತ್ತು ರಾಜಕೀಯ ವ್ಯವಸ್ಥೆಯ ಪಾಲಿಗೆ ಅವರು ಸದಾ ಪ್ರತಿರೋಧಿ ಭಯಂಕರೆಯಂತೆಯೇ ಕಂಡರು. ಇಂತಹ ಪರಿಸ್ಥಿತಿಯ ಲಾಭ ಪಡೆದು ರಾಜ್ಯದಲ್ಲಿ ತನ್ನ ಕೇಸರಿ ಧ್ವಜ ಹಾರಿಸಲು ಕಾಯುತ್ತಿದ್ದ ಬಿಜೆಪಿ, ಪರಿಸ್ಥಿತಿಯನ್ನು ಸಮರ್ಥವಾಗಿ ಬಳಸಿಕೊಂಡು ಅತೃಪ್ತ ಮತ್ತು ಅಸಹನೆಯ ಆಡಳಿತ ವ್ಯವಸ್ಥೆಯ ಮತ್ತು ಸಾಮಾಜಿಕ ವಾತಾವರಣದ ಬಲದ ಮೇಲೆ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಬಲವೃದ್ಧಿಸಿಕೊಂಡಿದೆ. ಈಗ ಅದರ ಮುಂದಿನ ಗುರಿ ರಾಜ್ಯದ ಅಧಿಕಾರ. ಹಾಗಾಗಿಯೇ ಚುನಾವಣೆಯ ಬಳಿಕ ನಿರಂತರ ರಾಜಕೀಯ ಹಿಂಸಾಚಾರ, ಗಲಭೆ, ಮುಷ್ಕರ, ಪ್ರತಿಭಟನೆಗಳು ನಿತ್ಯದ ವಿದ್ಯಮಾನಗಳಾಗಿವೆ. ಆ ಸಾಲಿಗೆ ಇದೀಗ ವೈದ್ಯರ ಮುಷ್ಕರ ಕೂಡ ಸೇರಿದೆ ಮತ್ತು ಅದಕ್ಕೆ ಐಎಂಎನಂತಹ ಬಹುತೇಕ ಬಿಜೆಪಿಪರ ಧೋರಣೆಯ ಸಂಸ್ಥೆಯ ಸಾಥ್ ಕೂಡ ಸಿಕ್ಕಿದೆ.
ಒಟ್ಟಾರೆ, ರಾಜಕೀಯವಾಗಿ ಬಿಜೆಪಿ ಪ್ರವೇಶಕ್ಕೆ ದಶಕಗಳ ಕಾಲ ತಡೆಯೊಡ್ಡಿಕೊಂಡೇ ಬಂದಿದ್ದ ಬಂಗಾಳದ ನೆಲದಲ್ಲಿ ಕೇಸರಿ ಪಡೆಯ ಪಾರುಪಥ್ಯ ಸ್ಥಾಪಿಸುವ ನಿಟ್ಟಿನಲ್ಲಿ ಮೊದಲ ಮೆಟ್ಟಿಲಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ಅರಾಜಕತೆ ಉಂಟಾಗಿದೆ ಎಂಬುದನ್ನು ಬಿಂಬಿಸುವ ಎಲ್ಲಾ ಪ್ರಯತ್ನಗಳೂ ಬಿರುಸುಗೊಂಡಿವೆ ಮತ್ತು ರಾಷ್ಟ್ರಪತಿ ಆಡಳಿತ ಹೇರಿಕೆಯತ್ತ ಪಶ್ಚಿಮಬಂಗಾಳ ಇಂಚಿಂಚೇ ಕ್ರಮಿಸತೊಡಗಿದೆ. ಅದಕ್ಕೆ ರಾಜಕೀಯ ತಂತ್ರಗಾರಿಕೆಯ ಕೊರತೆ ಮತ್ತು ಉದ್ಧಟತನದ ವರಸೆಗಳ ಮೂಲಕ ಸ್ವತಃ ಮಮತಾ ದೀದಿಯೇ ಅಂತಹ ಪ್ರಯತ್ನಗಳಿಗೆ ಪರೋಕ್ಷವಾಗಿ ಎಡೆಮಾಡಿಕೊಡುತ್ತಿರುವುದು ವಿಪರ್ಯಾಸ!