“ಚೆ ಗುವಾರಾ” ಎಂದರೆ ಯಾರಿಗೆ ಗೊತ್ತಿಲ್ಲ?
ಕಮ್ಯುನಿಷ್ಟ್, ಕಮ್ಯುನಿಸಂ ಎಂಬ ಶಬ್ದಗಳನ್ನು ಕೇಳಿದರೇ ಅಸಹನೆ ತೋರಿಸುವವರೂ ಸಹ ಚೆ ಹೆಸರು ಕೇಳಿದರೆ ರೋಮಾಂಚನಗೊಳ್ಳುವ ಹೆಸರು ಚೆ. ಅರ್ಜೆಂಟೀನಾದಲ್ಲಿ ಹುಟ್ಟಿ (ಜೂನ್ 14, 1928), ವೈದ್ಯಕೀಯ ಓದಿ, ಮೋಟಾರ್ ಬೈಕಿನಲ್ಲೇ ಸುಮಾರು 7800 ಮೈಲು ದೂರದ ಪ್ರಯಾಣದಲ್ಲಿ, ಗೆಳೆಯನೊಂದಿಗೆ ಇಡೀ ಲ್ಯಾಟಿನ್ ಅಮೆರಿಕಾದ ಹಳ್ಳಿ ಹಳ್ಳಿಗಳನ್ನು ಕಂಡು, ಸರ್ವಾಧಿಕಾರಿ ಆಳ್ವಿಕೆಯಲ್ಲಿ ತತ್ತರಿಸಿರುವ ಜನರ ಬದುಕುಗಳನ್ನು ಕಂಡುಬಂದು, ನಂತರ ಕುಷ್ಟರೋಗಿಗಳ ಕಾಲೋನಿಯಲ್ಲಿ ಕುಷ್ಟ ರೋಗಿಗಳ ಸೇವೆ ಮಾಡಿ, ಕ್ಯೂಬಾ ದೇಶವನ್ನು ಸರ್ವಾಧಿಕಾರದ ಆಳ್ವಿಕೆಯಿಂದ ವಿಮೋಚನೆಗೊಳಿಸಲೆಂದು ಗೆರಿಲ್ಲಾ ಯೋಧನಾಗಿ ಹೋರಾಡಿ, ಫಿಡೆಲ್ ಕ್ಯಾಸ್ಟ್ರೋನೊಂದಿಗೆ ಸೇರಿಕೊಂಡು ಕ್ರಾಂತಿಯನ್ನು ಯಶಸ್ವಿಗೊಳಿಸಿ (ಜನವರಿ 8, 1959), ಕಮ್ಯುನಿಷ್ಟ್ ಕ್ಯೂಬಾ ಸರ್ಕಾರದಲ್ಲಿ ಕೈಗಾರಿಕಾ ಮಂತ್ರಿಯಾಗಿ ಸೇವೆ ಸಲ್ಲಿಸಿ, ಕೊನೆಗೆ ಮಂತ್ರಿಗಿರಿಯನ್ನು ತ್ಯಜಿಸಿ ಬೊಲಿವಿಯಾ ದೇಶದ ಬಡವರ ವಿಮೋಚನೆಗಾಗಿ ಮತ್ತೆ ಗೆರಿಲ್ಲಾ ಪಡೆ ಕಟ್ಟಿ ಹೋರಾಡುವ ಸಂದರ್ಭದಲ್ಲಿ ಅಮೆರಿಕದ ಬೇಹುಗಾರಿಕೆ ಪಡೆ ಸಿಐಎ ನಡೆಸಿದ ಸಂಚಿಗೆ ಬಲಿಯಾಗಿ, ಸೆರೆಸಿಕ್ಕು ಕೊಲೆ ಮಾಡಲ್ಪಟ್ಟ (ಅಕ್ಟೋಬರ್ 9, 1967) ಚೆ ಗುವಾರಾ ಜಾಗತಿಕ ಕ್ರಾಂತಿಕಾರಿ. “ಶುದ್ಧ ಮನುಷ್ಯರಾಗಿ ಬದುಕುವ ದಾರಿ ಎಂದರೆ ಕಮ್ಯುನಿಷ್ಟ್ ಆಗಿ ಬದುಕುವುದು, “ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಅನ್ಯಾಯದ ವಿರುದ್ಧ ನಿನ್ನ ಎದೆ ಕಂಪಿಸಿದರೆ ನೀನು ನನ್ನ ಸಂಗಾತಿ” ಎಂಬ ಪ್ರಸಿದ್ಧ ಮಾತಗಳಿಗೆ ಚೆ ಅನೇಕರ ಸ್ಮರಣೆಯಲ್ಲಿದ್ದಾರೆ.
ಇಂತಹ ಚೆ ಗುವಾರಾ ಕ್ಯೂಭಾ ಸರ್ಕಾರದಲ್ಲಿ ಸಚಿವರಾಗಿದ್ದಾಗ ಭಾರತಕ್ಕೆ ರಾಜತಾಂತ್ರಿಕ ಭೇಟಿ ನೀಡಿದ್ದು ಅನೇಕರಿಗೆ ತಿಳಿದೇ ಇಲ್ಲ.
ಈ ಕುರಿತು ಸ್ಕ್ರೋಲ್ ಇನ್ ನಲ್ಲಿ ಪ್ರಕಟವಾದ ಈ ವರದಿ ಓದಿ, ಹಾಗೂ ಚೆ ಭಾರತಕ್ಕೆ ಭೇಟಿ ಇತ್ತಿದ್ದ ಫೋಟೋಗಳು ಕೊನೆಯಲ್ಲಿವೆ ನೋಡಿ.
2007ರಲ್ಲಿ ‘ಜನ್ ಸತ್ತಾ’ ಹಿಂದಿ ದಿನಪತ್ರಿಕೆಯ ಸಂಪಾದಕರಾದ ಓಂ ತನ್ವಿ 1959ರಲ್ಲಿ ಕ್ಯೂಬಾದ ಕ್ರಾಂತಿಕಾರಿ ಅರ್ನೆಸ್ಟೊ ಚೆಗುವಾರ ಭಾರತಕ್ಕೆ ಭೇಟಿ ನೀಡಿದ್ದ ಕುರಿತು ಕುತೂಹಲವುಂಟಾಯಿತು. ಯುವಜನರ ಟೀ-ಶರ್ಟುಗಳಲ್ಲಿ ಮಿಂಚುವ ಚೆ ಭಾರತಕ್ಕೆ ಬಂದಿದ್ದ ಕುರಿತು ಭಾರತದ ಜನರಿಗೆ ತಿಳಿಯದೇ ಇರಲು ಕಾರಣವೇನೆಂದು ಅವರು ತಲೆಕೆಡಿಸಿಕೊಂಡರು. ಚೆ ಗುವಾರಾ ಕಮ್ಯುನಿಷ್ಟ್ ರಷ್ಯಾ ಕುರಿತು ಟೀಕಿಸಿದ್ದು ಇಲ್ಲಿನ ಕಮ್ಯುನಿಷ್ಟರಿಗೆ ಹಿಡಿಸದೇ ಅವರು ಈ ವಿಷಯವನ್ನು ಪ್ರಚಾರಕ್ಕೆ ಕೊಂಡೊಯ್ಯದೇ ಇರಲು ಕಾರಣವಿರಬಹುದೇ ಎಂಬ ಯೋಚನೆ ಪತ್ರಕರ್ತ ತನ್ವಿ ಅವರಿಗೆ ಬಂತು.
ಈ ಬಗ್ಗೆ ಸರಿಯಾದ ಮಾಹಿತಿ ಪಡೆಯಬೇಕೆಂದು ಅವರು ತಮ್ಮ ಸಹೋದ್ಯೋಗಿಯನ್ನು ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಗೆ ಕಳಿಸಿಕೊಟ್ಟರು. ಅಲ್ಲಿ ಅಧಿಕಾರಿಗಳು ಚೆ ಭಾರತಕ್ಕೆ ಯಾವತ್ತೂ ಬಂದೇ ಇಲ್ಲವೆಂದೂ, ಬಂದಿದ್ದು ನಿಜವಾಗಿದ್ದರೆ ರಾಜತಾಂತ್ರಿಕ ಗ್ಯಾಲರಿಯಲ್ಲಿ ಫೋಟೋಗಳು ಇರುತ್ತಿದ್ದವು ಎಂದೂ ತಿಳಿಸಿದರು. ಆದರೆ ಚೆ ಭಾರತಕ್ಕೆ ಬಂದಿದ್ದಕ್ಕೆ ದಾಖಲೆ ಇದೆ ಎಂದು ತನ್ವಿ ತಿಳಿಸಿದಾಗ ಗ್ಯಾಲರಿಯಲ್ಲಿ ಸರಿಯಾಗಿ ಶೋಧಿಸಲಾಗಿ ಒಟ್ಟು 14 ಫೋಟೋಗಳು ದೊರೆತವು.
ಸರ್ಕಾರಿ ಕಡಗಳಲ್ಲಿ ದಾಖಲಿಸುವಾಗ ಚೆ ತನ್ನ ಅಧಿಕೃತ ಹೆಸರನ್ನು ನೀಡಿದ್ದರು – ಕಮ್ಯಾಂಡರ್ ಅರ್ನೆಸ್ಟೊ ಡೆ ಲಾ ಸೆರ್ನಾ ಎಂದು ಅವರು ಬರೆಸಿದ್ದರು. ಅವರು ಚೆ ಗುವಾರಾ ಎಂದು ವಿಶ್ವದಾದ್ಯಂತ ಖ್ಯಾತಿ ಪಡೆದಿದ್ದು ಬಹಳ ತಡವಾಗಿ. ಈ ಕಾರಣದಿಂದಲೇ ಅವರ ಫೋಟೋಗಳನ್ನು ರಾಜತಾಂತ್ರಿಕ ಗ್ಯಾಲರಿಯಲ್ಲಿ ಹುಡುಕಲು ಕಷ್ಟವಾಯಿತು ಎಂಬ ಸಮಜಾಯಿಷಿ ನಂತರ ಬಂತು.
ಈ ಫೋಟೋಗಳನ್ನು ಜನ್ ಸತ್ತಾ ಪತ್ರಿಕೆಯಲ್ಲಿ ತನ್ವಿ ಮೊದಲು ಪ್ರಕಟಿಸಿದಾಗ ಬಹಳ ಜನ ನಂಬಲೇ ಇಲ್ಲ. ಹೀಗಾಗಿ ಅವರು ಚೆಯವರ ಭಾರತದ ಭೇಟಿ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸೀದಾ ಕ್ಯೂಬಾಗೇ ಹೋದರು. ಇತರೆ ವಿಷಯಗಳೊಂದಿಗೆ ಚೆ ಭಾರತ ಪ್ರಯಾಣದ ಬಗ್ಗೆ ಬರೆದಿದ್ದ ಒಂದು ವರದಿ ಅಲ್ಲಿ ದೊರಕಿತು. ಭಾರತದ ಆಗಿನ ಪ್ರಧಾನಿ ನೆಹರೂ ಚೆ ಯವರಿಗೆ ನೀಡಿದ್ದ ಒಂದು ಮೆಮೆಂಟೋ ಹಾಗೂ ಕೋಲ್ಕತಾದಲ್ಲಿ ಚೆ ಸ್ವತಃ ತೆಗೆದಿದ್ದ ಮೂರು ಫೋಟೋಗಳು ಸಹ ತನ್ವಿಯವರಿಗೆ ಸಿಕ್ಕಿದವು.
ಅಲ್ಲದೇ, ಆ ಸಂದರ್ಭದಲ್ಲಿ ಆಲ್ ಇಂಡಿಯಾ ರೇಡಿಯೋಗಾಗಿ ಚೆ ಗುವಾರಾ ಅವರ ಸಂದರ್ಶನ ನಡೆಸಿದ್ದ ಕೆ ಪಿ ಭಾನುಮತಿ ಅವರನ್ನೂ ಸಹ ತನ್ವಿ ಪತ್ತೆ ಹಚ್ಚಿದರು. ಆಕೆ ಸಂದರ್ಶನದ ಸಮಯದ ಮತ್ತಷ್ಟು ಫೋಟೋಗಳನ್ನು ತನ್ವಿಯವರಿಗೆ ನೀಡಿದರಲ್ಲದೇ ಆ ಸಂದರ್ಶನವನ್ನು ನೆನಪಿಸಿಕೊಂಡು ತಾವು ಬರೆದ ಲೇಖನವನ್ನೂ ತೋರಿಸಿದರು. ಇದೆಲ್ಲರ ಜೊತೆಗೆ ಹಿಂದೂಸ್ತಾನ್ ಟೈಮ್ಸ್ನ ಫೋಟೋ ಆರ್ಕೈವ್ಸ್ ನಲ್ಲಿ ಸಹ ತನ್ವಿಯವರಿಗೆ ಚೆ ಭಾರತ ಭೇಟಿಯ ಕೆಲವು ಫೋಟೋಗಳು ದೊರೆತವು.
ಪತ್ರಕರ್ತ ತನ್ವಿ ಸರ್ಕಾರಿ ಸಂಗ್ರಹ ಮತ್ತಿತರ ಮೂಲಗಳಿಂದ ಪಡೆದು ಪ್ರಕಟಿಸಿದ ಚೆ ಗುವಾರಾ ಅವರ ಭಾರತ ಭೇಟಿಯ ಆ ಅಮೂಲ್ಯ ಅಪರೂಪದ 18 ಫೋಟೋಗಳು ಇಲ್ಲಿವೆ.
ಜುಲೈ 1,1959ರಂದು ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಚೆ ಗುವಾರಾ ಅವರನ್ನು ತಮ್ಮ ತೀನ್ ಮೂರ್ತಿ ನಿವಾಸಿ ಕಚೇರಿಯಲ್ಲಿ ಸ್ವಾಗತಿಸುತ್ತಿರುವುದು. ಫೋಟೋ/ಕುಂದನ್ಲಾಲ್, ಸರ್ಕಾರದ ಫೋಟೋ ವಿಭಾಗ
ಜುಲೈ 3,1959ರಂದು ರಕ್ಷಣಾ ಸಚಿವ ವಿ ಕೆ ಕೃಷ್ಣ ಮೆನನ್ ಅವರನ್ನು ಚೆ ಭೇಟಿ ಮಾಡಿದ ಸಂದರ್ಭ
ದೆಹಲಿಯ ಪಿಲಾನಾ ಬ್ಲಾಕ್ ನಲ್ಲಿ ಚೆ ಶಾಲೆಯೊಂದಕ್ಕೆ ಭೇಟಿ ನೀಡಿದ ಸಂದರ್ಭ/ ಸರ್ಕಾರದ ಫೋಟೋ ವಿಭಾಗ
ಭಾರತೀಯ ಯೋಜನಾ ಆಯೋಗದ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಚೆ
ವಾಣಿಜ್ಯ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಚೆ ಅವರಿಗೆ ಭಾರತದ ಚಹ, ಕಾಫಿ ಮತ್ತು ಸಿಗಾರ್ ನೀಡುತ್ತಿರುವುದು.
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಪ್ರಯೋಗಾಲಯವೊಂದರಲ್ಲಿ ಚೆ ಲೋಹ ಗುರುತಿಸುವ ಯಂತ್ರವನ್ನು (ಮೆಟಲ್ ಡಿಟೆಕ್ಟರ್) ವೀಕ್ಷಿಸುತ್ತಿರುವುದು
ದೆಹಲಿಯ ಪಿಲಾನಾ ಬ್ಲಾಕ್ ನಲ್ಲಿ ಸಮುದಾಯ ಯೋಜನಾ ಪ್ರದೇಶಕ್ಕೆ ಚೆ ಭೇಟಿ ನೀಡಿದಾಗ ಗಾಂಧಿ ಟೋಪಿ ಧರಿಸಿದ್ದ ಹಳ್ಳಿಯ ರೈತನೊಬ್ಬ ಹಾರ ಹಾಕಿ ಸನ್ಮಾನಿಸುತ್ತಿರುವ ಚಿತ್ರ/ಸರ್ಕಾರದ ಫೋಟೋ ವಿಭಾಗ
ಜೂನ್ 30, 1959ರಂದು ಪಲಂ ವಿಮಾನ ನಿಲ್ದಾಣದಲ್ಲಿ ಚೆ ಗುವಾರ ಮತ್ತು ಅವರ ಸಹೋದ್ಯೋಗಿಗಳು ಬಂದಿಳಿದ ಕ್ಷಣ. ತಲೆಗೆ ಟರ್ಬನ್ ಧರಿಸಿದವರು ವಿದೇಶಾಂಗ ಸಚಿವಾಲಯದ ಪ್ರೋಟೋಕಾಲ್ ಉಪಾಧ್ಯಕ್ಷ ಡಿ ಎಸ್ ಕೋಸಲ. ಎಡ ತುದಿಯಲ್ಲಿ ಚೆ ಪಕ್ಕದಲ್ಲಿ ಇರುವವರು ಚೆ ಸ್ವತಃ ತರಬೇತಿ ನೀಡಿ ಇರಿಸಿಕೊಂಡಿದ್ದ ಅವರ ಬಾಡಿಗಾರ್ಡ್.
ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರಿಗೆ ಚೆ ಗುವಾರಾ ಒಂದು ಬಾಕ್ಸ್ ತುಂಬಾ ಕ್ಯೂಬಾದ ಸಿಗಾರ್ ತಂದು ರಾಜತಾಂತ್ರಿಕ ಉಡುಗೊರೆಯಾಗಿ ನೀಡಿದ ಕ್ಷಣ
ಸಮುದಾಯ ಅಭಿವೃದ್ಧಿ ಮತ್ತು ಸಹಕಾರ ಇಲಾಖೆ ಸಚಿವ ಎಸ್ ಕೆ ಡೇ ಅವರು ಚೆಯವರನ್ನು ಜುಲೈ 3, 1959ರಂದು ನವದೆಹಲಿಯ ತಮ್ಮ ಕಚೇರಿಯಲ್ಲಿ ಸ್ವಾಗತಿಸಿದ ಸಂದರ್ಭ
ಜುಲೈ 1, 1959ರಂದು ಕೇಂದ್ರ ವಾಣಿಜ್ಯ ಸಚಿವ ನಿತ್ಯಾನಂದ ಕನೂಂಗೊ ಅವರೊಂದಿಗೆ ಚೆ ನೇತೃತ್ವದ ಕ್ಯೂಬಾದ ಪ್ರತಿನಿಧಿಗಳು ಮಾತುಕತೆ ನಡೆಸುತ್ತಿರುವುದು
ನವದೆಹಲಿಯಲ್ಲಿ ಸರ್ಕಾರದ ಫೋಟೋ ವಿಭಾಗದ ಕುಂದನ್ಲಾಲ್ ತೆಗೆದ ಚೆ ಪೋಟೋ
ದೆಹಲಿಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಸುಧಾರಿತ ಗೋಧಿ ತಳಿಯೊಂದರ ಮಾದರಿ ವೀಕ್ಷಿಸುತ್ತಿರುವ ಚೆ
ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಎ ಪಿ ಜೈನ್ ಅವರನ್ನು ಜುಲೈ 4, 1959ರಂದು ಚೆ ಭೇಟಿ ಮಾಡಿದ ಸಂದರ್ಭ
ಜುಲೈ 1, 1959ರಂದು ಚೆ ಗುವಾರಾ ಅವರಿಗೆ ದೆಹಲಿಯ ಓಕ್ಲಾ ಕೈಗಾರಿಕಾ ಎಸ್ಟೇಟಿನಲ್ಲಿ ಲೇತ್ ತಯಾರಿಸುವ ಯಂತ್ರವೊಂದನ್ನು ತೋರಿಸುತ್ತಿರುವುದು/ ಸರ್ಕಾರಿ ಫೋಟೋ ವಿಭಾಗ
ಕೆಪಿ ಭಾನುಮತಿ ಅವರು ಚೆ ಗುವಾರಾ ಅವರನ್ನು ಸಂದರ್ಶನ ನಡೆಸಿದ ಸಂದರ್ಭ. ಪಿ ಎನ್ ಶರ್ಮಾ ಅವರು ತೆಗೆದ ಫೋಟೋ, ಕೆ ಪಿ ಭಾನುಮತಿ ಅವರ ಸಂಗ್ರಹದಿಂದ ನೀಡಿದ್ದು
ಕೆಪಿ ಭಾನುಮತಿ ಅವರು ಚೆ ಗುವಾರಾ ಅವರನ್ನು ಸಂದರ್ಶನ ನಡೆಸಿದ ಸಂದರ್ಭ. ಪಿ ಎನ್ ಶರ್ಮಾ ಅವರು ತೆಗೆದ ಫೋಟೋ, ಕೆ ಪಿ ಭಾನುಮತಿ ಅವರ ಸಂಗ್ರಹದಿಂದ ನೀಡಿದ್ದುಜುಲೈ 2, 1959ರಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ಮುಖಪುಟದ ಒಂದು ಭಾಗ
Super