ಭಾರತ ಸಾರ್ವಭೌಮ ರಾಷ್ಟ್ರ. ವಿವಿಧತೆಯಲ್ಲಿ ಏಕತೆಯನ್ನು ಸಾರುವ, ಎಲ್ಲಾ ಧರ್ಮಕ್ಕೂ ಸಮಾನ ಸಾಂವಿಧಾನಿಕ ಹಕ್ಕನ್ನು ನೀಡಿರುವ ರಾಷ್ಟ್ರ. ಆದರೆ ದೇಶದ ಪ್ರಜೆಗಳು ನಮ್ಮ ವಿವಿಧ ಧರ್ಮಕ್ಕೆ ದೇಶದಲ್ಲಿರುವ ಪ್ರಾಶಸ್ತ್ಯದ ಬಗೆಗಿನ ಅವರ ಅಭಿಪ್ರಾಯವನ್ನು ಸಂಗ್ರಹಿಸಲು ನಡೆಸಿರುವ ಕೂತೂಹಲಕಾರಿ ಅಧ್ಯಯನವೊಂದು ಬಿಡುಗಡೆಯಾಗಿದೆ.
ಭಾರತದಲ್ಲಿ ಎಲ್ಲಾ ಧರ್ಮಕ್ಕೂ ಸಮಾನ ಸ್ಥಾನಮಾನವಿದೆ ಎಂದು ನಾಲ್ಕರಲ್ಲಿ ಮೂರು ಭಾರತೀಯರು ನಂಬಿದ್ದಾರೆ ಹಾಗೂ ಐದನೇ ವ್ಯಕ್ತಿ ಯಾವುದೇ ಭಾವನೆಯನ್ನು ಹೊಂದಿಲ್ಲ ಎಂಬ ಅಚ್ಚರಿಯ ಅಂಶವನ್ನು ಈ ವರದಿ ಹೊರಗೆಡಹಿದೆ.
ಭಾರತದ ಸಾಮಾಜಿಕ ಜಾಲತಾಣ ಮತ್ತು ಸ್ಮಾರ್ಟ್ ಫೋನ್ ಬಳಕೆದಾರರ ರಾಜಕೀಯ ಒಲವಿನ ಬಗ್ಗೆ ಪತ್ತೆ ಮಾಡಲು ಸೆಂಟರ್ ಫರ್ ಸ್ಟಡೀಸ್ ಆಫ್ ಡೆವಲಪಿಂಗ್ ಸೊಸೈಟೀಸ್ (CSDS) ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಸಾಮಾಜಿಕ ಜಾಲತಾಣ ಬಳಕೆ ಮಾಡದವರಿಗಿಂತ ಮಾಡುವವರೇ ಹಿಂದೂಗಳಲ್ಲಿ ಹೆಚ್ಚಿದ್ದಾರೆ. ಇದರಲ್ಲಿ ಸಾಮಾಜಿಕ ಜಾಲತಾಣ ಬಳಸದ ಶೇಕಡಾ 19ರಷ್ಟು ಪ್ರಜೆಗಳು ಭಾರತ ಕೇವಲ ಹಿಂದೂಗಳದ್ದು ಎಂದು ಹಾಗೂ ಸಾಮಾಜಿಕ ಜಾಲತಾಣ ಬಳಸುವ ಶೇಕಡಾ 19ರಷ್ಟು ಮಂದಿ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ವರದಿ ತಿಳಿಸುತ್ತದೆ.
ಇದೇ ರೀತಿ ಸಾಮಾಜಿಕ ಜಾಲತಾಣ ಬಳಸದ ಶೇಕಡಾ 73ರಷ್ಟು ಪ್ರಜೆಗಳು ಹಾಗೂ ಸಾಮಾಜಿಕ ಬಳಸುವ ಶೇಕಡಾ 75ರಷ್ಟು ಮಂದಿ “ಭಾರತದಲ್ಲಿ ಎಲ್ಲಾ ಧರ್ಮಕ್ಕೂ ಸಮಾನ ಸ್ಥಾನಮಾನವಿದೆ” ಎಂದು ನಂಬಿದ್ದಾರೆ ಎಂಬ ಅಂಶವನ್ನು ಬಯಲಿಗೆಳೆದಿದೆ.
“ಸಾಮಾಜಿಕ ಜಾಲತಾಣದ ಬಳಕೆ ನಮ್ಮ ನಂಬಿಕೆಗಳ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ. ಜನರ ನಂಬಿಕೆ ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇದು ಉತ್ತಮ ವೇದಿಕೆಯಾಗಿದೆ,” ಎಂದೂ ಸಂಶೋಧನೆ ತಿಳಿಸುತ್ತದೆ.
ಮೇ ಸಮಯದಲ್ಲಿ ಸಂಶೋಧನೆ ನಡೆಸಿದೆ. ಒಟ್ಟಾರೆ 24,236 ಮತದಾರರನ್ನು ಈ ಸರ್ವೆಯಲ್ಲಿ ಸಂದರ್ಶನ ನಡೆಸಲಾಗಿದೆ.
ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್, ಇನ್ಸ್ ಟಾಗ್ರಾಂ, ಟ್ವಿಟ್ಟರ್ ಅನ್ನು ನಿತ್ಯ, ವಾರಕ್ಕೆ, ಅಪರೂಪಕ್ಕೆ ಹಾಗೂ ಬಳಸದೇ ಇರುವ ಹೀಗೆ ವಿವಿಧ ತೆರನಾದ ಬಳಕೆದಾರರನ್ನು ಸಂದರ್ಶಿಸಿದ್ದು ಇವರಲ್ಲಿ ವಾರಕ್ಕೊಮ್ಮೆ ವಾಟ್ಸಾಪ್, ಟ್ವಿಟರ್ ಮುಂತಾದುವನ್ನು ಬಳಸುವವರು ಹಾಗೂ ಬಳಸದೇ ಇರುವವರಲ್ಲಿ “ಭಾರತದ ಹಿಂದೂಗಳದ್ದು ಮಾತ್ರ” ಎಂಬ ನಂಬಿಕೆ ಪ್ರತಿನಿತ್ಯ ಸಾಮಾಜಿಕ ಮಾಧ್ಯಮ ಬಳಸುವವರಿಗಿಂತ ಹೆಚ್ಚಿನ ಮಟ್ಟದಲ್ಲಿದೆ ಎಂದು ವರದಿ ಹೇಳಿದೆ.
ಸಾಮಾಜಿಕ ಜಾಲತಾಣಕ್ಕೆ ಹೆಚ್ಚಾಗಿ ತೆರೆದುಕೊಳ್ಳದ ಮತದಾರರರಿಗೆ ಹೋಲಿಸಿದಲ್ಲಿ ವಾಟ್ಸಾಪ್, ಟ್ವಿಟರ್, ಫೇಸ್ಬುಕ್ಗಳಿಗೆ ಹೆಚ್ಚಾಗಿ ತೆರೆದುಕೊಂಡ ಹಿಂದೂ ಮತದಾರರು ಮುಸ್ಲಿಮರು ಹೆಚ್ಚಿನ ಮಟ್ಟದ ರಾಷ್ಟ್ರವಾದಿಗಳು ಎಂದು ನಂಬುತ್ತಾರೆ. ಅದೇ ವೇಳೆಯಲ್ಲಿ “ಮುಸ್ಲಿಮರು ದೇಶಭಕ್ತರಲ್ಲವೇ ಅಲ್ಲ” ಎಂದು ನಂಬಿರುವವರ ಸಂಖ್ಯೆಯೂ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿಯೇ ಹೆಚ್ಚಿದೆ ಎಂದೂ ಸಮೀಕ್ಷಾ ವರದಿ ವರದಿ ತಿಳಿಸಿದೆ.
ಒಟ್ಟಾರೆ ಸಾಮಾಜಿಕ ಜಾಲತಾಣ ಬಳಸುವ ಶೇಕಡಾ 28ರಷ್ಟು ಮತ್ತು ಸಾಮಾಜಿಕ ಜಾಲತಾಣ ಬಳಸದ ಶೇಕಡಾ 21ರಷ್ಟು ಜನರು ಮುಸ್ಲಿಮರು ಹೆಚ್ಚಾದ ದೇಶಭಕ್ತಿ ಹೊಂದಿರುವವರು ಎಂದು ನಂಬಿದ್ದರೆ, ಇದೇ ರೀತಿ ಶೇಕಡಾ 15ರಷ್ಟು: ಶೇಕಡಾ 12ರಷ್ಟು ಮಂದಿ ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ವರದಿಯ ಅಂಕಿಅಂಶ ವಿವರಿಸುತ್ತದೆ.