ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದೆ. ಇಬ್ಬರು ಪಕ್ಷೇತರ ಶಾಸಕರು ಆಪರೇಷನ್ ಕಮಲದ ಬಲೆಯಿಂದ ಪಾರಾಗಿ ಕೊನೆಗೂ ದೋಸ್ತಿ ಸರ್ಕಾರದ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಮೈತ್ರಿಕೂಟಕ್ಕೂ, ತಮಗೂ ಅಧಿಕಾರದ ಬಲ ಖಾತ್ರಿಪಡಿಸಿಕೊಂಡಿದ್ದಾರೆ. ಇದು ಖಂಡಿತವಾಗಿಯೂ ವಿನ್ – ವಿನ್ ಸಂದರ್ಭ.
ಆದರೆ, ಸಂಪುಟ ವಿಸ್ತರಣೆಯ ಈ ರಾಜಕೀಯ ಬೆಳವಣಿಗೆಯಲ್ಲಿ ನಿಜವಾಗಿಯೂ ಮೇಲುಗೈ ಸಾಧಿಸಿರುವುದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ. ಹೌದು, ಸಂಪುಟ ವಿಸ್ತರಣೆಯ ವಿಷಯದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಹಗ್ಗಜಗ್ಗಾಟ ಮತ್ತು ಆ ಬಳಿಕ ಕೆಲವು ಕಾಂಗ್ರೆಸ್ ಹಿರಿಯ ನಾಯಕರ ಗುರಿಯಾಗಿದ್ದದ್ದೇ ಸಿದ್ದರಾಮಯ್ಯ. ಮಾಜಿ ಮುಖ್ಯಮಂತ್ರಿ ಪಕ್ಷ ಮತ್ತು ಸರ್ಕಾರದ ಮೇಲೆ ಸಾಧಿಸಿರುವ ಹಿಡಿತವನ್ನು ಕಳಚುವುದು ಹೇಗೆ? ಪಕ್ಷ ಮತ್ತು ಸರ್ಕಾರದಲ್ಲಿ ತಮ್ಮ ಆಪ್ತರನ್ನೇ ಮುನ್ನೆಲೆಗೆ ತರುತ್ತಿರುವುದನ್ನು ತಡೆಯುವುದು ಹೇಗೆ? ಆ ಮೂಲಕ ಮೂಲ ಕಾಂಗ್ರೆಸ್ಸಿಗರನ್ನು ಬದಿಗೆ ಸರಿಸುತ್ತಿರುವ ಸಿದ್ದರಾಮಯ್ಯ ಅವರನ್ನೇ ಬದಿಗೆ ತಳ್ಳುವುದು ಹೇಗೆ? ಎಂಬ ಲೆಕ್ಕಾಚಾರದ ಕಾರಣದಿಂದಾಗಿಯೇ ಸಂಪುಟ ವಿಸ್ತರಣೆ ವಿಳಂಬವಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ಗುಟ್ಟು.
ಅಲ್ಲದೆ, ಕಾಂಗ್ರೆಸ್ ಹಿರಿಯ ನಾಯಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು. ಅದಕ್ಕಾಗಿ ಸಂಪುಟ ವಿಸ್ತರಣೆಯ ಬದಲಿಗೆ ಸಂಪುಟ ಪುನರ್ ರಚನೆಯಾಗಬೇಕು. ಆ ಮೂಲಕ ಈಗಾಗಲೇ ಪ್ರಮುಖ ಖಾತೆಗಳನ್ನು ಹೊಂದಿರುವ ಸಿದ್ದರಾಮಯ್ಯ ಬಣದವರನ್ನು ಸಂಪುಟದಿಂದ ಹೊರಹಾಕಿ ತಾವು ಸ್ಥಾನ ಪಡೆಯಬೇಕು ಎಂಬುದು ಮೂಲ ಕಾಂಗ್ರೆಸ್ ನಾಯಕರ ಪಟ್ಟಾಗಿತ್ತು. ಆ ವಿಷಯದಲ್ಲೇ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್, ಸಚಿವ ರಾಮಲಿಂಗಾರೆಡ್ಡಿ ಮತ್ತು ರೋಷನ್ ಬೇಗ್ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ವಿರುದ್ಧ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ನಾಯಕರ ಈ ಅಂತಃಕಲಹ ಹೈಕಮಾಂಡ್ ವರೆಗೂ ತಲುಪಿತ್ತು. ಆದರೆ, ಕೊನೆಗೂ ಸಂಪುಟ ಪುನರ್ ರಚನೆಯೂ ಇಲ್ಲದೆ, ಯಾವೊಬ್ಬ ಕಾಂಗ್ರೆಸ್ ಹಿರಿಯ ನಾಯಕರಿಗೂ ಸಂಪುಟದಲ್ಲಿ ಸ್ಥಾನವೂ ಇಲ್ಲದೆ ಸಂಪುಟ ವಿಸ್ತರಣೆ ನಡೆದಿದೆ.
ಈ ನಡುವೆ ಬಹುಕೋಟಿ ಐಎಂಎ ಹಗರಣ ಸ್ಫೋಟಗೊಳ್ಳುತ್ತಲೇ ರೆಬೆಲ್ ಸ್ಟಾರ್ ರೋಷನ್ ಬೇಗ್ ಅವರ ದನಿ ಉಡುಗಿಹೋಗಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡಿದ್ದಕ್ಕೇ ತಮ್ಮ ವಿರುದ್ಧ ಐಎಂಎ ಹಗರಣದಲ್ಲಿ ಭಾಗಿಯಾದ ಆರೋಪಗಳು ಕೇಳಿಬರುತ್ತಿವೆ. ಆ ಮೂಲಕ ನನ್ನನ್ನು ತುಳಿಯುವ ಪ್ರಯತ್ನ ಮಾಡಲಾಗುತ್ತಿದೆ ಎನ್ನುವ ಮೂಲಕ ಸ್ವತಃ ರೋಷನ್ ಬೇಗ್, ತಮ್ಮ ರಾಜಕೀಯ ಬಂಡಾಯ ಇನ್ನು ಮುಗಿದ ಅಧ್ಯಾಯ ಎಂಬ ಸೂಚನೆ ನೀಡಿದ್ದಾರೆ. ಅದೇನೇ ಇರಲಿ, ಸದ್ಯಕ್ಕಂತೂ ಐಎಂಎ ಹಗರಣ, ಕಾಂಗ್ರೆಸ್ ಪಕ್ಷದಲ್ಲೇ ಎದ್ದಿದ್ದ ಸಿದ್ದರಾಮಯ್ಯ ವಿರುದ್ಧದ ದನಿಯನ್ನು ತಾತ್ಕಾಲಿಕವಾಗಿಯಾದರೂ ಅಡಗಿಸಲಿದೆ ಎಂಬುದು ನಿರ್ವಿವಾದದ ಸಂಗತಿ.
ಹಾಗೇ, ಸರ್ಕಾರದ ಸಂಖ್ಯಾಬಲವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಬ್ಬರು ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಪ್ರಶ್ನೆ ಬಂದಾಗ, ಸಿದ್ದರಾಮಯ್ಯ ಸದ್ಯ ಖಾಲಿ ಇರುವ ಜೆಡಿಎಸ್ ನ ಎರಡು ಸಚಿವ ಸ್ಥಾನಗಳ ಕೋಟಾದಡಿಯಲ್ಲೇ ಅವರಿಗೆ ಅವಕಾಶ ನೀಡಬೇಕು. ಕಾಂಗ್ರೆಸ್ ಬಳಿ ಇರುವ ಒಂದು ಸ್ಥಾನವನ್ನು ಕಾಂಗ್ರೆಸ್ ನಾಯಕರಿಗೆ ನೀಡಲಾಗುವುದು ಎಂಬ ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಎಚ್ ಡಿ ದೇವೇಗೌಡ ಸೇರಿದಂತೆ ಜೆಡಿಎಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಇದೀಗ, ಇಬ್ಬರು ಪಕ್ಷೇತರ ಪೈಕಿ ಒಬ್ಬರು ಕಾಂಗ್ರೆಸ್ ಕೋಟಾದಲ್ಲಿ, ಮತ್ತೊಬ್ಬರು ಜೆಡಿಎಸ್ ಕೋಟಾದಲ್ಲಿ ಸಂಪುಟಕ್ಕೆ ಸೇರಿದ್ದಾರೆ. ಹಾಗಾಗಿ ಈ ಕೋಟಾ ವಿಷಯದಲ್ಲಿ ಕೂಡ ಸಿದ್ದರಾಮಯ್ಯ ತಮ್ಮ ಪಟ್ಟು ಬಿಡದೆ ಅರ್ಧ ಜಯ ಸಾಧಿಸಿದ್ದಾರೆ.
ಇನ್ನು ಸಂಪುಟ ಸೇರಿರುವ ರಾಣೆಬೆನ್ನೂರು ಶಾಸಕ ಆರ್ ಶಂಕರ್, ಅದರ ಬೆನ್ನಲ್ಲೇ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸುವ ಕುರಿತ ಪತ್ರವನ್ನೂ ನೀಡಿದ್ದಾರೆ. ಆ ಮೂಲಕ ಶಂಕರ್ ಇನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಶಾಸಕರಾಗಲಿದ್ದು, ಸಂಪುಟದಲ್ಲಿ ಕೂಡ ಅವರು ಕಾಂಗ್ರೆಸ್ ಕೋಟಾದ ಸಚಿವರಾಗಿ ಮುಂದುವರಿಯಲಿದ್ದಾರೆ. ಶಂಕರ್ ಕೂಡ ಸಿದ್ದರಾಮಯ್ಯ ಅವರ ಸಮುದಾಯದವರೇ ಆಗಿದ್ದು, ಅವರ ಆಪ್ತರೂ ಆಗಿರುವುದರಿಂದ ಸಹಜವಾಗೇ ಈ ಬೆಳವಣಿಗೆ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲದೆ, ಪಕ್ಷ ಮತ್ತು ಸರ್ಕಾರದಲ್ಲಿ ಸಿದ್ದರಾಮಯ್ಯ ಬಲವೃದ್ಧಿಯ ವಿಷಯದಲ್ಲಿ ಪೂರಕ ಬೆಳವಣಿಗೆಯೇ ಆಗಿದೆ.
ಈ ಎರಡೂ ಸಂಗತಿಗಳು ಸದ್ಯದ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹೇಗೆ ಅಂತಿಮವಾಗಿ ಸದ್ಯದ ರಾಜಕೀಯ ವಿದ್ಯಮಾನಗಳನ್ನು ತಮ್ಮ ಪರವಾಗಿ ತಿರುಗಿಸಿಕೊಂಡರು ಎಂಬುದನ್ನು ಹೇಳಿದರೆ, ಜೆಡಿಎಸ್ ಪಕ್ಷದ ಆಂತರಿಕ ವಲಯದಲ್ಲಿ ಕೇಳಿಬರುತ್ತಿರುವ ಮತ್ತೊಂದು ಸಂಪುಟ ವಿಸ್ತರಣೆಯ ವಿಷಯ ಕೂಡ ಮತ್ತೆ ಸಿದ್ದು ಪರವಾಗೇ ಪರಿಸ್ಥಿತಿಯನ್ನು ತಿರುಗಿಸುವ ಸಾಧ್ಯತೆ ಹೆಚ್ಚಿದೆ.
ಮಾಧ್ಯಮಗಳಿಗೆ ಜೆಡಿಎಸ್ ಹಿರಿಯ ನಾಯಕ ವೈ ಎಸ್ ವಿ ದತ್ತಾ ಅವರು ಹೇಳಿರುವಂತೆ, ಪಕ್ಷದ ಕೋಟಾದಲ್ಲಿ ಖಾಲಿ ಇರುವ ಮತ್ತೊಂದು ಸಚಿವ ಸ್ಥಾನಕ್ಕೆ ಮುಸ್ಲಿಮರೊಬ್ಬರಿಗೆ ಅವಕಾಶ ಕಲ್ಪಿಸುವ ಯೋಚನೆ ಇದೆ. ಹಾಗೇ ಅಲ್ಲದೆ ಹಾಲಿ ನಾಯಕರೊಬ್ಬರಿಗೆ ಪಕ್ಷದ ಹೊಣೆ ವಹಿಸಿ ಅವರ ಸ್ಥಾನಕ್ಕೆ ಮತ್ತೊಬ್ಬ ಹಿರಿಯರನ್ನು ಸಂಪುಟಕ್ಕೆ ಸೇರಿಸುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಮತ್ತೊಮ್ಮೆ ಸಂಪುಟ ವಿಸ್ತರಣೆ ನಡೆಯಲಿದ್ದು, ಜೆಡಿಎಸ್ ಕಡೆಯಿಂದ ಇಬ್ಬರಿಗೆ ಅವಕಾಶ ಸಿಗಲಿದೆ.
ಅಂದರೆ; ಮುಸ್ಲಿಂ ಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಕ್ ಅವರಿಗೆ ಸಂಪುಟದಲ್ಲಿ ಅವಕಾಶ ನೀಡುವುದು ಜೆಡಿಎಸ್ ವರಿಸ್ಠರ ಲೆಕ್ಕಾಚಾರ. ಅಲ್ಲದೆ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್ ವಿಶ್ವನಾಥ್ ಅವರ ಮನವೊಲಿಸಿ ಅವರಿಗೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಪ್ರಮುಖ ಖಾತೆ ನೀಡುವುದು ಮತ್ತು ಈಗಾಗಲೇ ಅದೇ ಸಮುದಾಯಕ್ಕೆ(ಕುರುಬ) ಸೇರಿರುವ ಹಿರಿಯ ಸಚಿವ ಬಂಡೆಪ್ಪ ಕಾಶೆಂಪೂರ್ ಅವರನ್ನು ಸಂಪುಟದಿಂದ ಕೈಬಿಟ್ಟಿ ಪಕ್ಷದ ಅಧ್ಯಕ್ಷರನ್ನಾಗಿ ಮಾಡುವುದು ವರಿಷ್ಠರ ಲೆಕ್ಕಾಚಾರ ಎನ್ನಲಾಗಿದೆ.
ಹಾಗೊಂದು ವೇಳೆ ಈ ಲೆಕ್ಕಾಚಾರಗಳು ನಿಜವಾದಲ್ಲಿ, ಆಗಲೂ ಸಮನ್ವಯ ಸಮಿತಿಯಲ್ಲಿ ಸ್ಥಾನ ಪಡೆಯಲು ಹರಸಾಹಸ ಮಾಡಿದ್ದ ಎಚ್ ವಿಶ್ವನಾಥ್ ಮತ್ತು ಸಿದ್ದರಾಮಯ್ಯ ನಡುವಿನ ಪೈಪೋಟಿಯಲ್ಲಿ ಮತ್ತೆ ಸಿದ್ದು ಮೇಲುಗೈ ಸಾಧಿಸಿದಂತಾಗಲಿದೆ. ಏಕೆಂದರೆ, ಪ್ರಮುಖವಾಗಿ ರಾಜ್ಯ ದೋಸ್ತಿ ಸರ್ಕಾರದ ಮೇಲೆ ಹಿಡಿತ ಸಾಧಿಸಿರುವ ಸಿದ್ದರಾಮಯ್ಯ ಅವರನ್ನು ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂಬುದೇ ಕಳೆದ ಒಂದು ತಿಂಗಳಿಂದ ಎಚ್ ವಿಶ್ವನಾಥ್ ಅವರು ತಮ್ಮ ರಾಜೀನಾಮೆ ಸೇರಿದಂತೆ ನಡೆಸುತ್ತಿರುವ ಎಲ್ಲಾ ಪ್ರಯತ್ನಗಳ ಅಂತಿಮ ಗುರಿ ಎಂಬುದು ಗುಟ್ಟೇನೂ ಅಲ್ಲ. ವಿಶ್ವನಾಥ್ ಅವರ ಈ ಬಂಡಾಯದ ಹಿಂದೆ ಸ್ವತಃ ಜೆಡಿಎಸ್ ವರಿಷ್ಠರ ಕುಮ್ಮಕ್ಕು ಕೂಡ ಇದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ, ಇದೀಗ ರಾಜಕೀಯ ಬೆಳವಣಿಗೆಗಳು ಸಾಗುತ್ತಿರುವ ದಿಕ್ಕು ನೋಡಿದರೆ, ಅಂತಿಮವಾಗಿ ವಿಶ್ವನಾಥ್ ಮತ್ತು ತಮ್ಮ ನಡುವಿನ ರಾಜಕೀಯ ತಂತ್ರಗಾರಿಕೆಯ ಚದುರಂಗದಾಟದಲ್ಲಿಯೂ ಸಿದ್ದರಾಮಯ್ಯ ಪರವಾಗಿಯೇ ಪರಿಸ್ಥಿತಿ ವಾಲುತ್ತಿರುವಂತಿದೆ.
ಆ ಹಿನ್ನೆಲೆಯಲ್ಲಿ, ಸದ್ಯದ ಸಂಪುಟ ವಿಸ್ತರಣೆ ಮತ್ತು ಜೆಡಿಎಸ್ ಲೆಕ್ಕಾಚಾರದ ಭವಿಷ್ಯದ ಸಂಪುಟ ವಿಸ್ತರಣೆ; ಎರಡರಲ್ಲೂ ಪಕ್ಷೇತರರು ಅಥವಾ ದೋಸ್ತಿ ಪಕ್ಷಗಳ ನಾಯಕರು ಸಚಿವ ಸ್ಥಾನ ಪಡೆದು ಸಂಭ್ರಮಪಟ್ಟುಕೊಂಡರೂ, ಅಂತಿಮವಾಗಿ ರಾಜಕೀಯವಾಗಿ ಈ ಬೆಳವಣಿಗೆಗಳ ಲಾಭ ಮಾಜಿ ಸಿಎಂ ಸಿದ್ದು ಪಾಲಿಗೇ ಎಂಬುದು ವಿಪರ್ಯಾಸ!