ಬಳ್ಳಾರಿಯ ಜಿಂದಾಲ್ ಉಕ್ಕು ಕಂಪನಿಗೆ ಸರ್ಕಾರಿ ಭೂಮಿ ನೀಡುವ ಪರಭಾರೆ ಮಾಡುವ ರಾಜ್ಯ ಸರ್ಕಾರದ ತೀರ್ಮಾನ ಈಗ ವಿವಾದಕ್ಕೀಡಾಗಿದೆ. ಖಾಸಗಿ ಕಂಪನಿಯೊಂದಕ್ಕೆ ಉದ್ಯಮ ಚಟುವಟಿಕೆಗಾಗಿ ಸಾರ್ವಜನಿಕ ಆಸ್ತಿಯನ್ನು ಗುತ್ತಿಗೆ ಆಧಾರದ ಮೇಲೆ ನೀಡುವುದನ್ನು ಬಿಟ್ಟು, ಏಕಾಏಕಿ ತೀರಾ ಬಿಡಿಗಾಸಿನ ಬೆಲೆಗೆ ಮಾರಾಟ ಮಾಡಲು, ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ಕಾಂಗ್ರೆಸ್- ಜೆಡಿಎಸ್ ದೋಸ್ತಿ ಸರ್ಕಾರ ಉಮೇದಿನಲ್ಲಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಪ್ರತಿಪಕ್ಷ ಬಿಜೆಪಿ, ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಇದೇ ವಿವಾದವನ್ನು ಅಸ್ತ್ರವಾಗಿ ಬಳಸಿಕೊಂಡಿದ್ದು, ಶುಕ್ರವಾರದಿಂದ ಆಹೋರಾತ್ರಿ ಧರಣಿಯನ್ನೂ ಆರಂಭಿಸಿದೆ. ಈ ನಡುವೆ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಧರಣಿ ಆರಂಭವಾಗುತ್ತಲೇ, ಇತ್ತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ರಾಜ್ಯ ಸರ್ಕಾರ ಒಂದು ಹೆಜ್ಜೆ ಹಿಂದಿಟ್ಟಿದ್ದು, ಭೂ ಪರಭಾರೆ ವಿಷಯಕ್ಕೆ ಸಂಬಂಧಿಸಿದಂತೆ ಅದರ ಸಾಧಕ-ಬಾಧಕ ಅಧ್ಯಯನಕ್ಕೆ ಸಂಪುಟ ಉಪ ಸಮಿತಿ ರಚಿಸಿ, ಸಮಿತಿಯ ವರದಿ ಬಳಿಕ ಭೂಮಿಯನ್ನು ಪರಭಾರೆ ಮಾಡುವುದೇ ಅಥವಾ ಗುತ್ತಿಗೆಗೆ ನೀಡುವುದೇ ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.
ಅಷ್ಟರಮಟ್ಟಿಗೆ ಇದು ಬಿಜೆಪಿ ಹೋರಾಟಕ್ಕೆ ಸಂದ ಜಯ. ಆದರೆ, ಈ ಭೂ ವಿವಾದ ರಾಜ್ಯ ರಾಜಕಾರಣ ಮತ್ತು ಜನಪರ ಹೋರಾಟದ ವಿಷಯದಲ್ಲಿ ಈಗಾಗಲೇ ಹಲವು ಬಗೆಯ ಚರ್ಚೆಯನ್ನು ಹುಟ್ಟುಹಾಕಿದೆ. ಆ ಹಿನ್ನೆಲೆಯಲ್ಲಿ ಈಗಿನ ಸರ್ಕಾರದ ಸಂಪುಟ ಉಪ ಸಮಿತಿಯ ಫಲಿತಾಂಶ ಏನೇ ಇರಲಿ, ಈ ವಿವಾದ ರಾಜಕೀಯವಾಗಿ ಒಂದು ಮಹತ್ವದ ಸಂಗತಿಯಾಗಿ ಚರಿತ್ರೆಯ ಪಾಲಾಗಲಿದೆ ಮತ್ತು ರಾಜಕೀಯ ಮತ್ತು ಜನಪರ ಹೋರಾಟದ ರಂಗದಲ್ಲಿ ಭವಿಷ್ಯದ ಮೇಲೆ ತನ್ನದೇ ಛಾಪು ಮೂಡಿಸಲಿದೆ ಎಂಬುದು ನಿರ್ವಿವಾದ.
ಏಕೆಂದರೆ, ಮುಖ್ಯವಾಗಿ ಕಳೆದ ಮೇ 27ರ ಸಚಿವ ಸಂಪುಟ ಸಭೆಯಲ್ಲಿ ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಬಗ್ಗೆ ಪ್ರಸ್ತಾವನೆ ಇಡುತ್ತಲೇ, ಸಭೆಯಲ್ಲಿಯೇ ಆ ಬಗ್ಗೆ ತೀವ್ರ ವಿರೋಧ ಎದುರಾಗಿತ್ತು. ಆ ಬಳಿಕ ಹಿರಿಯ ಕಾಂಗ್ರೆಸ್ ನಾಯಕ ಎಚ್ ಕೆ ಪಾಟೀಲ್ ಅವರೇ ಭೂ ಪರಭಾರೆ ವಿರೋಧಿಸಿ ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದರು ಮತ್ತು ಆ ಪತ್ರ ಬಹಿರಂಗವಾಗುವ ಹಾಗೂ ಸ್ವತಃ ಪಾಟೀಲರೇ ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ಇದೊಂದು ಬಹುದೊಡ್ಡ ಹಗರಣದ ಸ್ವರೂಪದಲ್ಲಿ ಸಾರ್ವಜನಿಕ ಚರ್ಚೆಗೆ ಈಡಾಗಿತ್ತು. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಒಳಗೇ ಹಿರಿಯ ನಾಯಕರ ನಡುವೆಯೇ ಈ ವಿವಾದ ಒಂದು ಸಂಘರ್ಷವನ್ನು ಹುಟ್ಟುಹಾಕಿದೆ ಮತ್ತು ಆ ಕಾರಣಕ್ಕೆ ಇದು ಪಕ್ಷದ ಆಂತರಿಕ ವ್ಯವಹಾರಗಳಲ್ಲಿ ಮಗ್ಗುಲ ಮುಳ್ಳಾಗಿ ಕೂತಿದೆ.
ಹಾಗೇ, ಜೆಡಿಎಸ್ ಪಾಲಿಗೂ ಇದು ಸಾಕಷ್ಟು ಇರಿಸು ಮುರಿಸಿಗೆ ಕಾರಣವಾಗಿದ್ದು, ಒಂದು ಕಡೆ ಗ್ರಾಮ ವಾಸ್ತವ್ಯದ ಮೂಲಕ ಗ್ರಾಮೀಣ ಬಡವರು, ಕೃಷಿಕರ ಪರ ಸರ್ಕಾರ ತಮ್ಮದು ಎಂಬುದನ್ನು ಮರು ಖಾತ್ರಿಪಡಿಸಲು ಸಿಎಂ ಯತ್ನಿಸುತ್ತಿರುವ ಹೊತ್ತಲ್ಲೇ, ಕೃಷಿ ಭೂಮಿಯನ್ನು ಕಾರ್ಪೊರೇಟ್ ಸಂಸ್ಥೆಯೊಂದಕ್ಕೆ ಪರಭಾರೆ ಮಾಡುವ ನಿರ್ಧಾರದ ಮೂಲಕ ಸ್ವತಃ ಕುಮಾರಸ್ವಾಮಿ ಅವರ ವರ್ಚಸ್ಸಿಗೆ ಕುಂದು ಎದುರಾಗಿದೆ. ಹಾಗೇ, ರೈತ ಪರ ಪಕ್ಷ ಎಂಬ ಜೆಡಿಎಸ್ ಪಕ್ಷದ ಹೆಗ್ಗಳಿಕೆ ಕೂಡ ಈಗ ಜನಸಾಮಾನ್ಯರ ಕಣ್ಣಲ್ಲಿ ಅನುಮಾನಕ್ಕೆ ಎಡೆಯಾಗಿದೆ.
ಮತ್ತೊಂದು ಕಡೆ ಕಳೆದ ಒಂದು ವರ್ಷದ ಅವಧಿಯಲ್ಲಿ ಆಪರೇಷನ್ ಕಮಲದ ವಿಫಲ ಯತ್ನಗಳ ಬಳಿಕ, ಇದೇ ಮೊದಲ ಬಾರಿಗೆ ನಿಜವಾದ ಪ್ರತಿಪಕ್ಷದ ಪಾತ್ರ ವಹಿಸಲು ಪ್ರಯತ್ನ ನಡೆಸಿರುವ ಬಿಜೆಪಿಯ ಪಾಲಿಗೂ ಜಿಂದಾಲ್ ಭೂ ವಿವಾದ ಒಂದು ರೀತಿಯ ಉಮೇದು- ಆತಂಕದ ಮಿಶ್ರಫಲದ ಸೂಚನೆ ನೀಡಿದೆ. ಧರಣಿ ಆರಂಭಿಸುತ್ತಲೇ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವ ದಾಟಿಗೆ ಹೊರಳಿರುವುದು ಬಿಜೆಪಿ ಪಾಲಿಗೆ ಉಮೇದು ತಂದಿದ್ದರೆ, ಅದೇ ಹೊತ್ತಿಗೆ ಸ್ವತಃ ಜಿಂದಾಲ್ ಕಂಪನಿ ಇರುವ ತೋರಣಗಲ್ ಒಳಪಡುವ ಬಳ್ಳಾರಿಯ ಬಿಜೆಪಿ ನಾಯಕರಾದ ಶ್ರೀರಾಮುಲು ಸೇರಿದಂತೆ ಹಲವರು ಭೂಮಿ ಪರಭಾರೆಯ ಪರ ಇರುವುದು ಮತ್ತು ಮತ್ತೊಂದು ಕಡೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮತ್ತು ಜನಸಂಗ್ರಾಮ ಪರಿಷತ್ ಅಧ್ಯಕ್ಷ ಎಸ್ ಆರ್ ಹಿರೇಮಠ ಅವರ ನಡುವೆ ನಡೆದಿದೆ ಎನ್ನಲಾದ ರಹಸ್ಯ ಭೇಟಿ ಕೂಡ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಬಣದಲ್ಲಿ ಹೊಸ ಆತಂಕ ಹುಟ್ಟುಹಾಕಿದೆ.
ಶ್ರೀರಾಮುಲು ಅವರು ಬಿಜೆಪಿಯ ನಿಲುವಿಗೆ ವಿರುದ್ಧವಾಗಿ ಜಿಂದಾಲ್ ಪರ ಬ್ಯಾಟಿಂಗ್ ಮಾಡಲು, ಸ್ವತಃ ಗಣಿಗಾರಿಕೆ ಮತ್ತು ಉಕ್ಕು ಉದ್ಯಮದಲ್ಲಿ ತೊಡಗಿಸಿಕೊಂಡಿರುವುದು ಮತ್ತು ತಮ್ಮ ಪರಮಾಪ್ತ ಮಿತ್ರ ಹಾಗೂ ಬಿಜೆಪಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಅಕ್ರಮಗಳಲ್ಲಿ ಈ ಭೂ ಪರಭಾರೆಯೂ ಒಂದಾಗಿರುವುದು ಕಾರಣ ಎನ್ನಲಾಗುತ್ತಿದೆ.
ವಾಸ್ತವವಾಗಿ, ಈಗ ಜಿಂದಾಲ್ ಗೆ 3,667 ಎಕರೆ ಭೂಮಿ ಪರಭಾರೆ ವಿರುದ್ಧ ವಿರುದ್ಧ ಬೀದಿಯಲ್ಲಿ ಮಲಗಿ ಆಹೋರಾತ್ರಿ ಪ್ರತಿಭಟನಾ ಧರಣಿ ನಡೆಸುತ್ತಿರುವ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಸಿಎಂ ಅವಧಿಯಲ್ಲೇ, ಇದೇ ಬಿಜೆಪಿ ಸರ್ಕಾರ ಬರೋಬ್ಬರಿ ಐದು ಸಾವಿರ ಎಕರೆ ಭೂಮಿಯನ್ನು ಅದೇ ಬಳ್ಳಾರಿ ಜಿಲ್ಲೆಯಲ್ಲಿಯೇ ಬ್ರಹ್ಮಿಣಿ ಉಕ್ಕು ಕಾರ್ಖಾನೆಗೆ ನೀಡಿದ್ದರು.
ಸ್ವಾರಸ್ಯಕರ ಸಂಗತಿ ಎಂದರೆ, ಬಿಜೆಪಿ ಸರ್ಕಾರ ತನ್ನ ದೊಡ್ಡ ಹೆಗ್ಗಳಿಕೆ ಎಂಬಂತೆ ಬಿಂಬಿಸಿದ್ದ 2010ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಕಂಪನಿ ಬರೋಬ್ಬರಿ 36 ಸಾವಿರ ಕೋಟಿ ವೆಚ್ಚದಲ್ಲಿ ಬಳ್ಳಾರಿಯಲ್ಲಿ ಉಕ್ಕು ಉದ್ಯಮ ಆರಂಭಿಸುವುದಾಗಿ ಎಂಒಯುಗೆ ಸಹಿ ಮಾಡಿತ್ತು ಮತ್ತು ಆ ಬೃಹತ್ ಕಂಪನಿಯ ಮಾಲೀಕರಾಗಿದ್ದದ್ದು ಅಂದು ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಮತ್ತು ಆ ಬಳಿಕ ಗಣಿ ಹಗರಣದಲ್ಲಿ ಜೈಲಿಗೆ ಹೋಗಿ ಬಂದ ಗಾಲಿ ಜನಾರ್ದನ ರೆಡ್ಡಿ! 2010ರಲ್ಲಿ ಸ್ವತಃ ಸರ್ಕಾರದ ಭಾಗವಾಗಿದ್ದ ಜನಾರ್ದನ ರೆಡ್ಡಿಗೆ ಬಿಡಿಗಾಸಿನ ಬೆಲೆಗೆ ಐದು ಸಾವಿರ ಎಕರೆ ಭೂಮಿಯನ್ನು ತಮ್ಮ ಕಂಪನಿಗೆ ಪಡೆದುಕೊಂಡು, ಬಳಿಕ ಉದ್ಯಮವನ್ನೂ ಆರಂಭಿಸದೆ, ತಮ್ಮ ಕಂಪನಿಯ ಸಹಿತ ಆ ಭೂಮಿಯನ್ನು ಎಕರೆಗೆ 15 ಲಕ್ಷ ದರದಲ್ಲಿ ಬೇರೊಂದು ಕಂಪನಿಗೆ ಮಾರಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ 2014ರ ಜುಲೈನಲ್ಲಿ ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಭೂಸುಧಾರಣೆ ವಿಧೇಯಕದ ಚರ್ಚೆಯ ವೇಳೆ ಸದನದಲ್ಲೂ ಪ್ರಸ್ತಾಪವಾಗಿತ್ತು. ಆದರೆ, ಈವರೆಗೆ ಆ ಭೂಮಿಯ ವಿಷಯದಲ್ಲಿ ಸರ್ಕಾರ ಏನು ಕ್ರಮಕೈಗೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ.
ಅಂದು ಯಾವುದೇ ಉದ್ಯಮ ಚಟುವಟಿಕೆಯನ್ನೇ ಆರಂಭಿಸದ ಮತ್ತು ಒಂದು ನಯಾಪೈಸೆ ಹೂಡಿಕೆಯನ್ನೂ ಮಾಡದ ಹಾಗೂ ಕೇವಲ ಕಾಗದಪತ್ರಗಳಲ್ಲಿ ಮಾತ್ರ ಅಸ್ತಿತ್ವಕ್ಕೆ ಬಂದಿದ್ದ ಒಂದು ಕಂಪನಿಗೆ ನೂರಾರು ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಪರಭಾರರೆ ಮಾಡಿದ್ದ ಬಿ ಎಸ್ ಯಡಿಯೂರಪ್ಪ ಅವರು ಇದೀಗ ಜಿಂದಾಲ್ ಭೂ ವಿವಾದದ ವಿರುದ್ಧ ಧರಣಿಗಿಳಿದಿದ್ದಾರೆ. ದಶಕದ ಹಿಂದಿನ ಈ ಭೂ ಪರಭಾರೆ ಈಗ ಜನಮಾನಸದಲ್ಲಿ ಮರೆತಿದ್ದರೂ, ಕೆಲವು ಬಿಜೆಪಿ ನಾಯಕರಿಗೆ ನೆನಪಿದೆ. ಹಾಗಾಗಿಯೇ ಬಿಎಸ್ ವೈ ಧರಣಿಯಿಂದ ಹಲವು ಹಿರಿಯ ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡಿದ್ದು, ಆಗಬಹುದಾದ ಮುಜುಗರದಿಂದ ಪಾರಾಗುವ ಪ್ರಯತ್ನ ಮಾಡಿದ್ದಾರೆ!
ಹಾಗೆ ನೋಡಿದರೆ, ಕಂಪನಿಯನ್ನೇ ಆರಂಭಿಸದೆ, ಕೇವಲ ಕಂಪನಿ ನೋಂದಣಿ ಮಾಡಿ ಸರ್ಕಾರಗಳಲ್ಲಿ ತಮಗಿರುವ ಪ್ರಭಾವ ಬಳಸಿ ಹತ್ತಾರು ಸಾವಿರ ಎಕರೆ ಭೂಮಿ ಮಂಜೂರಾತಿ ಮಾಡಿಸಿಕೊಂಡು, ಆ ಭೂಮಿಯನ್ನೇ ಆಧಾರವಾಗಿಟ್ಟು, ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳಿಂದ ಬಹುಕೋಟಿ ಸಾಲ ಪಡೆದು ಆ ಹಣವನ್ನು ಗಣಿ ಚಟುವಟಿಕೆಯಲ್ಲಿ ಹೂಡುವುದು ಗಾಲಿ ಜನಾರ್ದನ ರೆಡ್ಡಿಯವರ ಕಸುಬಾಗಿತ್ತು ಎಂದು ಅವರ ವಿರುದ್ಧ ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ ಕೂಡ ಹೇಳಿತ್ತು.
ಅದಕ್ಕೆ ಸಾಕ್ಷಿಯೆಂಬಂತೆ ರೆಡ್ಡಿ ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ಭಾಗದಲ್ಲಿ ಆಂಧ್ರ ಸರ್ಕಾರದಿಂದ ಇದೇ ಬ್ರಹ್ಮಿಣಿ ಸ್ಟೀಲ್ ಹೆಸರಿನಲ್ಲಿ ಪಡೆದಿದ್ದ 10 ಸಾವಿರ ಎಕರೆ ಭೂಮಿಯನ್ನು, ರೆಡ್ಡಿ ಗಣಿ ಹಗರಣದಲ್ಲಿ ಜೈಲು ಪಾಲಾದ ಬಳಿಕ ಚಂದ್ರಬಾಬು ನಾಯ್ಡು ಸರ್ಕಾರ ವಾಪಸು ಪಡೆದಿತ್ತು. ಕರ್ನಾಟಕದಲ್ಲಿ ಯಡಿಯೂರಪ್ಪ ಸರ್ಕಾರದಿಂದ ಪಡೆದಿದ್ದ ಭೂಮಿಯನ್ನು ಕೂಡ ತಮ್ಮ ಬ್ರಹ್ಮಿಣಿ ಸ್ಟೀಲ್ ಕಂಪನಿಯೊಂದಿಗೆ ಮಿತ್ತಲ್ ಕಂಪನಿಗೆ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಇದೆ. ಆದರೆ, ಸ್ವತಃ ಯಡಿಯೂರಪ್ಪ ಅವರ ಅವಧಿಯಲ್ಲೇ ನಡೆದಿರುವ ಈ ಐದು ಸಾವಿರ ಎಕರೆ ಭೂ ಪರಭಾರೆ ಮತ್ತು ಆ ಬಳಿಕ ಆ ಭೂಮಿಯನ್ನು ಮತ್ತೊಬ್ಬರಿಗೆ ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಿ, ರಿಯಲ್ ಎಸ್ಟೇಟ್ ದಂಧೆ ನಡೆಸಿರುವ ಬ್ರಹ್ಮಿಣಿ ಸ್ಟೀಲ್ ಭೂ ವಿವಾದದ ಬಗ್ಗೆ ರಾಜ್ಯದ ಮಾಧ್ಯಮಗಳಾಗಲೀ, ಸ್ವತಃ ಆಳುವ ಪಕ್ಷಗಳ ನಾಯಕರಾಗಲೂ ತುಟಿಬಿಚ್ಚುತ್ತಿಲ್ಲ ಎಂಬುದು ವಿಪರ್ಯಾಸ!
ಸಕಾಲಿಕ