ನವದೆಹಲಿ: ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಲ್ಲದೆ ನೇರವಾಗಿ ಐಎಸ್, ಐಪಿಎಸ್, ಐಎಫ್ಎಸ್ ನಂಥ ಉನ್ನತ ಹುದ್ದೆಗಳನ್ನು ಅಲಂಕರಿಸುವ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಲ್ಪಿಸಿದೆ.
ಸರ್ಕಾರ ಹಲವು ಇಲಾಖೆಗಳಲ್ಲಿರುವ ಜಂಟಿ ಕಾರ್ಯದರ್ಶಿ ಮಟ್ಟದ 10 ಹುದ್ದೆಗಳ ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಸರ್ಕಾರಿ ಅಥವಾ ಖಾಸಗೀ ವಲಯ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ “ಪ್ರತಿಭಾನ್ವಿತ ಹಾಗೂ ಪ್ರೇರಿತ” ಯುವಕರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಪತ್ರಿಕಾ ಜಾಹೀರಾತು ತಿಳಿಸಿದೆ.
ಕಂದಾಯ, ಹಣಕಾಸು ಸೇವೆ, ಆರ್ಥಿಕ ವ್ಯವಹಾರ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ನೌಕಾಸೇವೆ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಹೊಸ ಹಾಗೂ ಮರುಪರಿಷ್ಕೃತ ಇಂಧನ, ನಾಗರೀಕ ವಿಮಾನಯಾನ ಸೇವೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರು ಈ ಹುದ್ದಗೆ ಅರ್ಜಿ ಸಲ್ಲಿಸಬಹುದು. ಈ ಮೇಲಿನ ಎಲ್ಲಾ ವಲಯದ ಹುದ್ದೆಗಳೂ ಮೇಲಧಿಕಾರಿ ಸ್ಥಾನವನ್ನು ಅಲಂಕರಿಸುವ ಹುದ್ದೆಗಳಾಗಿದೆ ಎಂದು ತಿಳಿಸಲಾಗಿದೆ.
“ನುರಿತ, ಪ್ರವೀಣ ಭಾರತೀಯರು ದೇಶ ಕಟ್ಟುವಲ್ಲಿ ಆಸಕ್ತಿ ಉಳ್ಳವರು ಸರ್ಕಾರದ ಸೇವೆಗೆ ಜಂಟಿ ಕಾರ್ಯದರ್ಶಿ ಹುದ್ದೆಗೆ ಸೇರುವ ಮೂಲಕ ಮುಂದಾಗಬಹುದು ಎಂದು ಭಾರತ ಸರ್ಕಾರದ ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಕನಿಷ್ಠ 40ವರ್ಷ ವಯೋಮಾನದ ಹಾಗೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳಿಂದ ಪದವಿ ಪಡೆದಿರಬೇಕು. ಉನ್ನತ ಅಥವಾ ಸ್ನಾತಕೋತ್ತರ ಪದವಿ ಪಡೆದವರಿಗೆ ನೇಮಕಾತಿ ಪ್ರಕ್ರಿಯೆ ವೇಳೆ ಪ್ರಾಧಾನ್ಯತೆ ನೀಡಲಾಗುವುದು.
ನೇಮಕಾತಿಯಾದ ನಂತರ ಸೇವೆಗೆ ಸೇರಿದ ದಿನದಿಂದ ಮೂರು ವರ್ಷಗಳ ಅವಧಿಗೆ ಒಪ್ಪಂದದ ಮೇಲೆ ಕೆಲಸ ಮಾಡಬೇಕಾಗುತ್ತದೆ. ವ್ಯಕ್ತಿಯ ಕಾರ್ಯತತ್ಪರತೆ ಆಧಾರದ ಮೇಲೆ ಮೂರು ವರ್ಷದ ಒಪ್ಪಂದವನ್ನು ಐದು ವರ್ಷಕ್ಕೆ ಏರಿಕೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಯಾವುದೇ ಖಾಸಗಿ ವಲಯದಲ್ಲಿ, ಕಂಪನಿಗಳಲ್ಲಿ, ಕನ್ಸಲ್ಟೆನ್ಸಿ ಸಂಸ್ಥೆಗಳಲ್ಲಿ, ಅಂತಾರಾಷ್ಟ್ರೀಯ ಅಥವಾ ಬಹುರಾಷ್ಟ್ರೀಯ ಕಂಪನಿಗಳಲ್ಲಿ, ಸ್ವಾಯತ್ತ ಸಂಸ್ಥೆ, ವಿಶ್ವವಿದ್ಯಾಲಯ, ಸಾರ್ವಜನಿಕ ವಲಯದಲ್ಲಿ ಜಂಟಿ ಕಾರ್ಯದರ್ಶಿ ಹುದ್ದೆಗೆ ಸಮಾನವಾದ ಹುದ್ದೆಯನ್ನು ಕನಿಷ್ಠ 15 ವರ್ಷದಿಂದ ನಿರ್ವಹಿಸುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇದು ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸರ್ಕಾರಿ ಹುದ್ದೆಯಲ್ಲಿರುವವರೂ ಅರ್ಜಿ ಸಲ್ಲಿಸಬಹುದು.
ಆಯ್ಕೆಯಾದ ಅಭ್ಯರ್ಥಿಯ ಆರಂಭಿಕ ವೇತನ ಶ್ರೇಣಿ ಮಾಸಿಕ 1,44,200 ರೂಪಾಯಿಗಳಿಂದ 2,18,200 ರೂಪಾಯಿ ಆಗಿರಲಿದೆ. ಅಲ್ಲದೇ ಹುದ್ದೆಗೆ ಅನ್ವಯಿಕ ಭತ್ಯೆಗಳು, ಅನ್ವಯಿಕ ಸೌಲಭ್ಯಗಳು ದೊರೆಯಲಿದೆ.
ನೇಮಕವಾದವರು ಸಿಸಿಎಸ್ ನಿಯಮದನ್ವಯ ಸಾರ್ವಜನಿಕ ಸೇವೆಗೆ ಬದ್ಧರಾಗಿರಬೇಕು ಮತ್ತು ಇತರೆ ಮಾಹಿತಿಗಳು ಕಾನೂನು, ಕಟ್ಟಳೆಗಳನ್ನು ಸರ್ಕಾರ ಆಗ್ಗಾಗ್ಗೆ ಆದೇಶಿಸುತ್ತದೆ.
ನೇಮಕವಾದವರನ್ನು ಮೂರು ತಿಂಗಳ ಮುನ್ನ ನೋಟಿಸ್ ಮೂಲಕ ನೇಮಕಾತಿ ರದ್ದು ಮಾಡಬಹುದು ಅಥವಾ ಕೆಲಸದಿಂದ ವಜಾಗೊಳಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಕಮಿಟಿ ನಡೆಸುವ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 30.
ಜಂಟಿ ಕಾರ್ಯದರ್ಶಿಗಳು ಭಾರತ ಸರ್ಕಾರದ ಪ್ರಮುಖ ನಿರ್ಣಾಯಕ ನಿರ್ಧಾರಗಳನ್ನು ನಿರ್ವಹಿಸಬೇಕಿದೆ ಮತ್ತು ಪ್ರಮುಖ ನೀತಿಗಳ ರಚನೆ, ಅವುಗಳ ಜಾರಿ, ಹಲವು ಯೋಜನೆಗಳ ಜಾರಿ ಮತ್ತು ವಿವಿಧ ಇಲಾಖೆಗಳ ಯೋಜನೆಗಳನ್ನು ನಿಯೋಜಿಸಲಾಗುವುದು. ನೇಮಕವಾದವರು ಸಚಿವಾಲಯದ ಕಾರ್ಯದರ್ಶಿ/ಹೆಚ್ಚುವರಿ ಕಾರ್ಯದರ್ಶಿಗೆ ವರದಿ ನೀಡಬೇಕಾಗುತ್ತದೆ.