ನರೇಂದ್ರ ಮೋದಿ 2014ರ ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರತಿ ವರ್ಷ 1 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಮೋದಿಯ ಐದು ವರ್ಷ ಅಧಿಕಾರ ಅವಧಿ ಮುಗಿಯುವ ಹೊತ್ತಿಗೆ ಭಾರತ ನಲ್ವತ್ತು ವರ್ಷಗಳಲ್ಲೇ ಅತಿ ಗರಿಷ್ಠ ಪ್ರಮಾಣದ ನಿರುದ್ಯೋಗ ಸಮಸ್ಯೆ ಎದುರಿಸುತ್ತಿತ್ತು. ಮೋದಿ ಮತ್ತೆ ಇನ್ನೈದು ವರ್ಷ ಅಧಿಕಾರಕ್ಕೆ ಬಂದು ಪವಡಿಸಿದ್ದಾರೆ. ಈ ಬಾರಿ ಚುನಾವಣಾ ಪ್ರಚಾರದಲ್ಲಿ ಉದ್ಯೋಗ ಭರವಸೆಯನ್ನೇನೂ ನೀಡದಿದ್ದರಿಂದ ಪ್ರತಿವರ್ಷ ಒಂದು ಕೋಟಿ ಉದ್ಯೋಗ ಸೃಷ್ಟಿಯಾಗುವ ಭರವಸೆಯನ್ನು ಯಾರೂ ಇಟ್ಟುಕೊಳ್ಳಬೇಕಿಲ್ಲ.
ಹಾಗೆಯೇ ಇರುವ ಉದ್ಯೋಗಗಳ ರಕ್ಷಣೆ ಆಗುತ್ತದೆ ಎಂದೂ ಯಾರೂ ಭರವಸೆ ಇಟ್ಟುಕೊಳ್ಳುವಂತಿಲ್ಲ. ಟೆಲಿಕಾಂ ವಲಯದಲ್ಲಿ ಅಗ್ರಸ್ಥಾನದಲ್ಲಿದ್ದ, ಮೋದಿ ಸರ್ಕಾರ ಬಂದ ನಂತರ ದಯನೀಯ ಸ್ಥಿತಿ ತಲುಪಿರುವ ಭಾರತ್ ಸಂಚಾರ್ ನಿಗಮ ನಿಯಮಿತದ (BSNL) 54,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇತ್ತ ನಷ್ಟದಲ್ಲಿರುವ ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಅಥವಾ ಮುಚ್ಚಲು ಕೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. BSNL ಮತ್ತು MTNL ಸೇರಿದಂತೆ 71 ಸಾರ್ವಜನಿಕ ವಲಯದ ಉದ್ಯಮಗಳು ನಷ್ಟ ಅನುಭವಿಸಿವೆ. ಇವುಗಳನ್ನು ಹಂತಹಂತವಾಗಿ ಖಾಸಗೀಕರಣಗೊಳಿಸುವ ಅಥವಾ ಬಂದ್ ಮಾಡುವ ಸಿದ್ದತೆ ನಡೆದಿದೆ. BSNL ಒಂದರಿಂದಲೇ 54,000 ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆಂದರೆ, ಮುಂಬರುವ ದಿನಗಳಲ್ಲಿ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಎಷ್ಟು ಲಕ್ಷಕ್ಕೇರಬಹುದು ಊಹಿಸಿ!
ನಿರುದ್ಯೋಗ ಪ್ರಮಾಣ ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿರುವ ಈ ಹೊತ್ತಿನಲ್ಲೇ ತಾಮ್ರೋದ್ಯಮದಲ್ಲಿ ಸುಮಾರು 10,000 ಉದ್ಯೋಗ ನಷ್ಟವಾಗುವ ಭೀತಿ ಎದುರಾಗಿದೆ. ಇದಕ್ಕೆ ಕಾರಣ ಮೋದಿ ಸರ್ಕಾರದ ನೀತಿಗಳು. ತಾಮ್ರದ ಸಿದ್ದದ ವಸ್ತುಗಳ ಆಮದಿನಿಂದಾಗಿ ದೇಶೀಯ ತಾಮ್ರೋದ್ಯಮ ತೀವ್ರ ಸಂಕಷ್ಟ ಎದುರಿಸುತ್ತಿದೆ. ಇದರಿಂದಾಗಿ ಉತ್ಪಾದನಾ ಘಟಕಗಳು ನಷ್ಟದ ಹಾದಿಯಲ್ಲಿದ್ದರೆ, ಘಟಕಗಳು ಮುಚ್ಚುವುದರಿಂದ ಮುಂದಿನ ಎರಡು ಮೂರು ವರ್ಷಗಳಲ್ಲಿ 10,000 ಉದ್ಯೋಗ ನಷ್ಟವಾಗಲಿದೆ. ಇತ್ತೀಚಿಗೆ ಸುಮಾರು 50 ಸಿದ್ದವಸ್ತುಗಳ ಘಟಕಗಳು ಮುಚ್ಚಿಹೋಗಿವೆ ಎಂದು ಭಾರತೀಯ ವಿದೇಶ ವ್ಯಾಪಾರ ಸಂಸ್ಥೆ (ಐಐಎಫ್ಟಿ) ಇತ್ತೀಚಿನ ಸಮೀಕ್ಷೆ ತಿಳಿಸಿದೆ ಎಂದು ಬಿಸ್ನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ವರದಿ ಮಾಡಿದೆ. ದೇಶೀಯ ತಾಮ್ರೋದ್ಯಮವು ಪ್ರಾಥಮಿಕ ಮತ್ತು ಸಿದ್ಧವಸ್ತುಗಳನ್ನೊಳಗೊಂಡಂತೆ ವಾರ್ಷಿಕ 60,000 ಕೋಟಿ ರುಪಾಯಿ ವಹಿವಾಟು ಹೊಂದಿದ್ದು, 1ಲಕ್ಷ ಮಂದಿ ನೇರವಾಗಿ ಉದ್ಯೋಗದಲ್ಲಿ ತೊಡಗಿದ್ದರೆ ಪರೋಕ್ಷವಾಗಿ ಉದ್ಯೋಗ ಪಡೆದಿರುವವರ ಸಂಖ್ಯೆ ಹಲವುಪಟ್ಟು ಹೆಚ್ಚಿದೆ. ಉತ್ತಮ ಗುಣಮಟ್ಟದ 10 ದಶಲಕ್ಷ ಟನ್ ತಾಮ್ರ ದೇಶೀಯವಾಗಿ ಉತ್ಪಾದನೆಯಾಗುತ್ತಿದ್ದು, ದೇಶೀಯ 7 ಲಕ್ಷ ಟನ್ ಬೇಡಿಕೆಯನ್ನು ಪೂರೈಸುತ್ತಿದೆ. ಅದಾನಿ ಮತ್ತು ವೇದಾಂತ ಕಂಪನಿಗಳು 2025ರ ವೇಳಗೆ ತಾಮ್ರದ ಉತ್ಪಾದನೆಯನ್ನು 24 ಲಕ್ಷ ಟನ್ ಗೆ ಏರಿಸುವ ಗುರಿ ಹೊಂದಿವೆ. ಆ ವೇಳೆಗೆ ದೇಶೀಯ ತಾಮ್ರ ಬಳಕೆ 15 ಲಕ್ಷ ಟನ್ ಗೆ ಏರುವ ಅಂದಾಜು ಇದೆ.
ದೇಶೀಯವಾಗಿ ಲಭ್ಯವಾಗುವ ಶುದ್ಧೀಕರಿಸಿದ ತಾಮ್ರ ಮತ್ತು ಮೌಲ್ಯವರ್ಧಿತ ವಸ್ತುಗಳು ಆಮದು ಮಾಡಿಕೊಳ್ಳುವುದನ್ನು ತಪ್ಪಿಸಿವೆ. ಆದರೆ, ಮುಕ್ತ ವ್ಯಾಪಾರ ಒಪ್ಪಂದದ (FTA) ಅಡಿಯಲ್ಲಿ ದೇಶಕ್ಕೆ ಆಮದಾಗುತ್ತಿರುವ ತಾಮ್ರವು ದೇಶೀಯ ಮಾರುಕಟ್ಟೆಯಲ್ಲಿ ಶೇ.40ರಷ್ಟು ಪಾಲು ಹೊಂದಿದೆ.
ಕೇಂದ್ರ ಸರ್ಕಾರದ ತೆರಿಗೆ ನೀತಿಯು ತಾಮ್ರದ ಸಿದ್ಧ ವಸ್ತುಗಳ ರಫ್ತು ಮಾಡುವ ದೇಶಗಳಿಗೆ ಉತ್ತೇಜಕವಾಗಿದ್ದು ದೇಶೀಯ ಉತ್ಪಾದಕರು ಸಂಕಷ್ಟ ಎದುರಿಸುತ್ತಿದ್ದಾರೆ. ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಯಲ್ಲಿರುವ ದೇಶಗಳಿಂದ ಆಮದಾಗುವ ತಾಮ್ರದ ಸಿದ್ದವಸ್ತುಗಳಿಗೆ ಶೂನ್ಯ ಆಮದು ತೆರಿಗೆ ಇದೆ. ಆದರೆ, ತಾಮ್ರ ಉತ್ಪಾದಿಸುವವರು ಕಚ್ಚಾ ವಸ್ತುಗಳನ್ನು (ಕಾಪರ್ ಕಾನ್ಸನ್ಟ್ರೇಟ್) ಆಮದು ಮಾಡಿಕೊಳ್ಳುವಾಗ ಶೇ.2.5ರಷ್ಟು ಆಮದು ತೆರಿಗೆ ಹೇರಲಾಗುತ್ತಿದೆ.
ಕೇಂದ್ರದ ಈ ವ್ಯತಿರಿಕ್ತ ತೆರಿಗೆ ನೀತಿಯಿಂದಾಗಿ ತಾಮ್ರದ ಸಿದ್ದವಸ್ತುಗಳ ಆಮದು ಕಳೆದ ಆರು ವರ್ಷಗಳಲ್ಲಿ ಪ್ರತಿ ವರ್ಷ ಸರಾಸರಿ ಶೇ.100ರಷ್ಟು ಹೆಚ್ಚಳವಾಗಿದೆ. ಕೇಂದ್ರ ಸರ್ಕಾರದ ಪ್ರತಿಕೂಲ ತೆರಿಗೆ ನೀತಿ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೈಮರಿ ಕಾಪರ್ ಪ್ರಡ್ಯೂಸರ್ಸ್ ಅಸೋಸಿಯೇಷನ್ (ಐಪಿಸಿಪಿಎ) ತಾಮ್ರದ ಕಚ್ಚಾವಸ್ತುಗಳ ಮೇಲೆ ಹೇರುತ್ತಿರುವ ಶೇ.2.5ರಷ್ಟು ಆಮದು ತೆರಿಗೆ ಕೈಬಿಡುವಂತೆ ವಿತ್ತ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದು, ದೇಶೀಯ ತಾಮ್ರೋದ್ಯಮದ ನೆರವಿಗೆ ಬರುವಂತೆ ಮನವಿ ಮಾಡಿದೆ. ಅಲ್ಲದೇ ಸಂಸ್ಕರಿತ ತಾಮ್ರದ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ.7.5ಕ್ಕೆ ಏರಿಸಬೇಕು, ತಾಮ್ರ ತಾಜ್ಯ ಮರುಬಳಕೆ ಮಾಡುವವರು ಪರಿಸರ ಸ್ನೇಹಿ ಸಂಸ್ಕರಣೆಗೆ ನಿಯಮ ಜಾರಿ ಮಾಡಬೇಕು ಹಾಗೂ ತಾಮ್ರತಾಜ್ಯದ ಆಮದಿನ ಮೇಲೆ ಪರಿಸರ ಸುಂಕ ಹೇರಬೇಕು ಎಂದೂ ಐಪಿಸಿಪಿಎ ಮನವಿ ಮಾಡಿದೆ. ಬಜೆಟ್ ಸಮಯದಲ್ಲಿ ಐಪಿಸಿಪಿಎ ಕಳೆದ ಐದು ವರ್ಷಗಳಿಂದಲೂ ಮನವಿ ಸಲ್ಲಿಸುತ್ತಲೇ ಇದೆ. ಆದರೆ, ಕೇಂದ್ರ ಸರ್ಕಾರ ತಾಮ್ರೋದ್ಯಮವನ್ನು ರಕ್ಷಿಸುವ ನಿಟ್ಟಿನಲ್ಲಿ ತೆರಿಗೆಯಲ್ಲಿನ ದೋಷ ನಿವಾರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.