ಹಲವರ ನಿರೀಕ್ಷೆಯಂತೆ ಮಾಜಿ ಕೇಂದ್ರ ಸಚಿವ ಜೆ ಪಿ ನಡ್ಡಾ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಅಧಿಕೃತ ಘೋಷಣೆ ಹೊರಡಿಸಿದೆ.
“ಅಮಿತ್ ಶಾ ಜೀ ಅವರ ನಾಯಕತ್ವದಲ್ಲಿ ಬಿಜೆಪಿ ಹಲವು ಚುನಾವಣೆಗಳನ್ನು ಗೆದ್ದಿದೆ. ಆದರೆ ಪ್ರಧಾನಿಯವರು ಅವರನ್ನು ಗೃಹ ಸಚಿವರಾಗಿ ನೇಮಕಗೊಳಿಸಿರುವುದರಿಂದ ಅಮಿತ್ ಶಾ ಜೀಯವರೇ ತಮ್ಮನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ಕೋರಿದ್ದರು. ಬಿಜೆಪಿಯ ಸಂಸದೀಯ ಮಂಡಳಿಯು ಜೆ ಪಿ ನಡ್ಡಾ ಅವರನ್ನು ಕಾರ್ಯಕಾರಿ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ” ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಹಿಮಾಚಲ ಪ್ರದೇಶದ ಬ್ರಾಹ್ಮಣ ಮುಖಂಡ ನಡ್ಡಾ ಬಿಜೆಪಿಯ ಸೈದ್ಧಾಂತಿಕ ಪೋಷಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ- ಆರೆಸ್ಸೆಸ್ಸಿನ ವಿಶ್ವಾಸಾರ್ಹ ಅಭ್ಯರ್ಥಿಯಾಗಿದ್ದು ಲೊ ಪ್ರೊಫೈಲ್ನಲ್ಲಿದ್ದುಕೊಂಡೇ ಚಾಣಾಕ್ಷ ತಂತ್ರಗಾರ ಎಂದು ಹೆಸರು ಮಾಡಿದ್ದಾರೆ.
ನರೇಂದ್ರ ಮೋದಿಯ ಮೊದಲ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ನಡ್ಡಾ ಅವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿ ನೀಡಲಾಗಿತ್ತು. 80ರಲ್ಲಿ 62 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿತ್ತು.