ನವದೆಹಲಿ: ಸಂಸತ್ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ಒಟ್ಟು 542 ನೂತನ ಸಂಸದರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಲಾಪ ಆರಂಭಕ್ಕೂ ಮುನ್ನ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಮನಾಥ ಕೋವಿಂದ್ ಅವರು ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಸಂಸತ್ ಅಧ್ಯಕ್ಷ ವೀರೇಂದ್ರ ಕುಮಾರ್, ಹಿರಿಯ ಸದಸ್ಯರ ಸಮಿತಿಯ ಕೊಡಿಕುನ್ನಿಲ್ ಸುರೇಶ್ ಮತ್ತು ಭತ್ರುಹರಿ ಮಹ್ತಬ್ ಉಪಸ್ಥಿತರಿದ್ದರು.
ವಿಶೇಷವಾಗಿ ರಾಜ್ಯದಿಂದ ಆಯ್ಕೆಯಾದ ಸಂಸದರಾದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ ಸದಾನಂದ ಗೌಡ, ಕಾನೂನು ಸಚಿವ ಪ್ರಹ್ಲಾದ್ ಜೋಷಿ ಹಾಗೂ ಸುರೇಶ್ ಅಂಗಡಿ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಚುನಾವಣೆ ವೇಳೆ ಅಕ್ರಮ ಹಣ ಹಂಚುವಿಕೆ ಆರೋಪದ ಮೇಲೆ ತಮಿಳುನಾಡಿನ ಚುನಾವಣೆಯನ್ನು ರದ್ದು ಮಾಡಿರುವುದರಿಂದ ಓರ್ವ ಚುನಾಯಿತ ಸದಸ್ಯನ ಸ್ಥಾನ ಭರ್ತಿಯಾಗಬೇಕಿದೆ ಹಾಗೂ ಆಂಗ್ಲೋ ಇಂಡಿಯನ್ ಸಮುದಾಯದಿಂದ ಇಬ್ಬರು ಸಂಸದರನ್ನು ಇನ್ನೂ ಆಯ್ಕೆ ಮಾಡಬೇಕಿದೆ. ಮೂವರ ಆಯ್ಕೆಯ ನಂತರ ಸಂಸತ್ ನ ಸಂಪೂರ್ಣ 545 ಸಂಸದರ ಸ್ಥಾನ ಭರ್ತಿಯಾಗಲಿದೆ.
ಕೇಂದ್ರ ಬಜೆಟ್ ಮತ್ತು ತ್ರಿವಳಿ ತಲಾಖ್ ಕಾಯ್ದೆ ರೂಪಿಸುವುದೇ ಸರ್ಕಾರದ ಪ್ರಸ್ತುತ ಪ್ರಮುಖ ಗುರಿಯಾಗಿದ್ದು, ಜುಲೈ 5ರಂದು ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಇದಕ್ಕೂ ಒಂದು ದಿನ ಮೊದಲು ಭಾರತದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುವುದು.
ಸಂಸತ್ ಕಲಾಪ ಒಟ್ಟು 30 ದಿನಗಳು ನಡೆಯಲಿದ್ದು, ಜುಲೈ 26ರಂದು ಅಂತ್ಯವಾಗಲಿದೆ. ಈ ಅವಧಿಯಲ್ಲಿ ವಿವಾದಾತ್ಮಕ ತ್ರಿವಳಿ ತಲಾಕ್ ಸೇರಿದಂತೆ ಒಟ್ಟು 10 ಸುಗ್ರೀವಾಜ್ಞೆಗಳಿಗೆ ಸಂಸತ್ತಿನ ಅನುಮೋದನೆ ಪಡೆಯುವ ಇರಾದೆಯನ್ನು ಮೋದಿ ಸರ್ಕಾರ ಹೊಂದಿದೆ.
ಲೋಕಸಭೆಯ ಸಭಾಧ್ಯಕ್ಷರ ಚುನಾವಣೆ ಬುಧವಾರ ನಡೆಯಲಿದೆ, ಆನಂತರ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರ ಉಪಸ್ಥಿತಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಸಾಂಪ್ರದಾಯಿಕ ಭಾಷಣ ಮಾಡಲಿದ್ದಾರೆ.
ಬಿಜೆಪಿ ಸಂಸದೀಯ ಪಕ್ಷ ಪ್ರಧಾನಿ ನರೇಂದ್ರ ಮೋದಿ ಅವರನ್ನು ಲೋಕಸಭೆಯ ನಾಯಕನಾಗಿ ಮರು ಆಯ್ಕೆ ಮಾಡಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಉಪ ಪ್ರಧಾನಿಯಾಗಿ ಆಯ್ಕೆ ಮಾಡಿದೆ.
ರಾಜ್ಯಸಭೆಯ ನಾಯಕನಾಗಿ ತಾವರ್ ಚಂದ್ ಗೆಹ್ಲೋಟ್ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಉಪ ನಾಯಕವಾಗಿ ಆಯ್ಕೆಯಾಗಿದ್ದಾರೆ.
ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಪ್ರತಿಪಕ್ಷವಾಗಿ ಕಾಂಗ್ರೆಸ್ ಲೋಕಸಭೆ ಹಾಗೂ ರಾಜ್ಯಸಭೆಗೆ ಪಕ್ಷನ ನಾಯಕನನ್ನು ಇನ್ನೂ ಆಯ್ಕೆ ಮಾಡಬೇಕಿದೆ.
ಈ ಬಾರಿಯ ಲೋಕಸಭೆಯಲ್ಲಿ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಹೆಚ್. ಡಿ ದೇವೇಗೌಡ ಸೇರಿದಂತೆ ಪ್ರಮುಖ ನಾಯಕರಾದ ಬಿಜಿಪಿಯ ಎಲ್. ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಸುಷ್ಮಾ ಸ್ವರಾಜ್ ಮತ್ತು ಉಮಾಭಾರತಿ, ಕಾಂಗ್ರೆಸ್ ಪಕ್ಷದ ಮಲ್ಲಿಕಾರರ್ಜುನ ಖರ್ಗೆ, ಜ್ಯೋತಿರಾದಿತ್ಯ ಸಿಂಧ್ಯಾ ಅವರ ಅನುಪಸ್ಥಿತಿ ಕಾಡಲಿದೆ.
ಅಲ್ಲದೇ ಈ ಬಾರಿಯ ಲೋಕಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಗೃಹ ಸಚಿವ ಅಮಿತ್ ಶಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ, ಭಯೋತ್ಪಾದನಾ ಆರೋಪ ಹೊತ್ತ ಪ್ರಗ್ಯಾ ಸಿಂಗ್ ಠಾಕೂರ್, ಕ್ರಿಕೆಟರ್ ಗೌತಮ್ ಗಂಭೀರ್, ನಟ ರವಿ ಕೃಷ್ಣನ್, ನಟಿ ಸನ್ನಿ ಡಿಯೋಲ್, ಗಾಯಕ ರಾಜ್ ಹಂಸ್ ಮೊದಲ ಬಾರಿಗೆ ಸಂಸತ್ ಪ್ರವೇಶಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಪಕ್ಷದ ಸಭೆ ನಡೆಸಿ “ಸಂಸತ್ ಕಲಾಪ ಹೊಸ ಹುರುಪು ಮತ್ತು ನೂತನ ಆಲೋಚನೆಗಳ ಮೂಲಕ ಆರಂಭವಾಗಬೇಕು,” ಎಂದು ಸಲಹೆ ನೀಡಿದ್ದಾರೆ.