ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಏನೇನೆಲ್ಲ ಪವಾಡಗಳು ನಡೆದಿವೆ. ಕೇವಲ ಅಂಕಿ ಅಂಶಗಳಲ್ಲೇ ದೇಶದ ಆರ್ಥಿಕ ಅಭಿವೃದ್ಧಿ ಮಾಡಿ ಮೋದಿ ಪವಾಡ ಮಾಡಿದ್ದಾರೆ. ದೇಶದಲ್ಲಿನ ನಿರುದ್ಯೋಗ ಸರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದಾಗಲೂ ಪಕೋಡ ಮಾರಾಟ ಮಾಡುವ ಪವಾಡ ಸದೃಶ ಪರಿಹಾರವನ್ನೂ ಕೊಟ್ಟಿದ್ದಾರೆ.
ಇಂತಿಪ್ಪ ಪ್ರಧಾನಿ ನರೇಂದ್ರಮೋದಿ ಅವರ ಮತ್ತೊಂದು ಮಹಾನ್ ಸಾಧನೆಯ ಬಗ್ಗೆ ಮಾಹಿತಿ ಬಂದಿದೆ.
ನರೇಂದ್ರ ಮೋದಿ ದೇಶದ ಪ್ರಧಾನಿ ಆದ ನಂತರ ಭಾರತದಲ್ಲಿ ವಿಸ್ಕಿ ಕುಡಿಯುವವರ ಸಂಖ್ಯೆ ಹೆಚ್ಚಿದೆ. 2014ರಿಂದ 2018ರ ಅವಧಿಯಲ್ಲಿ ದೇಶದಲ್ಲಿ ವಿಸ್ಕಿ ಮಾರಾಟ ಶೇ.50ರಷ್ಟು ಹೆಚ್ಚಳ ಕಂಡಿದೆ.
ಈ ಅವಧಿಯಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯಾಗಿರುವುದು ಮೋದಿ ಸರ್ಕಾರವೇ ನೀಡಿರುವ ಅಂಕಿ ಅಂಶಗಳ ಪ್ರಕಾರ ಶೇ.7ರಷ್ಟು. ಆದರೆ, ಮೋದಿ ಸರ್ಕಾರದಲ್ಲೇ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಅವರ ನಡೆಸಿರುವ ಸಂಶೋಧನೆ ಪ್ರಕಾರ ಆರ್ಥಿಕ ಅಭಿವೃದ್ಧಿಯಾಗಿರುವುದು ಶೇ.4.5ರಷ್ಟು ಮಾತ್ರ. ಮೋದಿ ಸರ್ಕಾರದ ಅಂಕಿ ಅಂಶಗಳ ನಿಖರತೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲೇ ಅನುಮಾನ ಎದ್ದಿದೆ. ಅದೇನೇ ಇರಲಿ, ದೇಶದ ಆರ್ಥಿಕತೆ ಶೇ.7ರಷ್ಟು ಅಭಿವೃದ್ಧಿಯಾಗಿದೆಯೋ ಅಥವಾ ಶೇ.4.5ರಷ್ಟು ಅಭಿವೃದ್ಧಿಯಾಗಿದೆಯೋ ಅದು ಚರ್ಚಾರ್ಹ ವಿಚಾರ. ಆದರೆ, ಇದೇ ಅವಧಿಯಲ್ಲಿ ವಿಸ್ಕಿ ಮಾರಾಟ ವಾರ್ಷಿಕ ಶೇ.11ಕ್ಕಿಂತ ಹೆಚ್ಚಳವಾಗಿದೆ. ಮೋದಿ ಅವರ ಮೊದಲ ನಾಲ್ಕು ವರ್ಷಗಳಲ್ಲೇ ಅಂದರೆ, 2014-2018ರ ನಡುವೆ ವಿಸ್ಕಿ ಮಾರಾಟ ಶೇ.50ರಷ್ಟು ಹೆಚ್ಚಳವಾಗಿದೆ.
ಇಂಟರ್ನ್ಯಾಷನಲ್ ವೈನ್ ಅಂಡ್ ಸ್ಪಿರಿಟ್ ರೀಸರ್ಚ್ (ಐಡಬ್ಲ್ಯುಎಸ್ಆರ್) ಅಂಕಿ ಅಂಶಗಳ ಪ್ರಕಾರ ಇಂಡಿಯನ್ ವಿಸ್ಕಿ 2014ರಲ್ಲಿ 115 ದಶಲಕ್ಷ ಕೇಸ್ ಗಳಷ್ಟು (ಒಂದು ಕೇಸ್ ಅಂದರೆ 9 ಲೀಟರ್) ಮಾರಾಟವಾಗಿದ್ದು 2018ರಲ್ಲಿ ಈ ಪ್ರಮಾಣ 176 ದಶಲಕ್ಷ ಕೇಸ್ ಗಳಿಗೆ ಏರಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ವಿಸ್ಕಿ ಮಾರಾಟ ಹೆಚ್ಚಳವಾಗುತ್ತಲೇ ಇದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, 2018ರಲ್ಲಿ ಪ್ರಮುಖ ವಿಸ್ಕಿ ಬ್ರಾಂಡ್ ಗಳಾದ ಇಂಪಿರಿಯಲ್ ಬ್ಲೂ ಶೇ.19ರಷ್ಟು ರಾಯಲ್ ಸ್ಟ್ಯಾಗ್ ಶೇ.16ರಷ್ಟು, ಮೆಕ್ಡೊವೆಲ್ ನಂಬರ್ 1 ಶೇ.10ರಷ್ಟು ಹೆಚ್ಚು ಮಾರಾಟ ದಾಖಲಿಸಿವೆ.
ಈ ನಾಲ್ಕು ವರ್ಷಗಳಲ್ಲಿ ದುಬಾರಿ ಮದ್ಯಪಾನೀಯಗಳಾದ ಸ್ಕಾಚ್ ವಿಸ್ಕಿ ಮತ್ತು ಅಮೆರಿಕನ್ ವಿಸ್ಕಿ ಮಾರಾಟ ಪ್ರಮಾಣದಲ್ಲಿ ಭಾರಿ ಏರಿಕೆಯೇನೂ ಆಗಿಲ್ಲ. ವಾರ್ಷಿಕ ಸರಾಸರಿ ಶೇ.1ರಷ್ಟು ಮಾತ್ರ ಹೆಚ್ಚಳವಾಗಿವೆ. ಕಡಿಮೆ ದರದ ವಿಸ್ಕಿ ಮಾರಾಟದಲ್ಲಿ ಮಾತ್ರ ಭಾರಿ ಏರಿಕೆ ಕಂಡಿದೆ. ಆಫೀಸರ್ಸ್ ಚಾಯ್ಸ್ ತಯಾರಿಸುವ ಅಲೈಯ್ಡ್ ಬ್ಲೆಂಡರ್ಸ್ ಕಂಪನಿಯ ಮುಖ್ಯಸ್ಥ ದೀಪಕ್ ರಾಯ್ ಪ್ರಕಾರ, ‘ಭಾರತೀಯರು ತ್ವರಿತವಾಗಿ ಮತ್ತೇರಿಸುವ ಮದ್ಯಪಾನ ಬಯಸುತ್ತಾರೆ’. ಸ್ಕಾಚ್ ವಿಸ್ಕಿ ಮತ್ತು ಅಮೆರಿಕನ್ ವಿಸ್ಕಿ, ಬಿಯರ್ ಮತ್ತಿತರ ಮದ್ಯಪಾನಿಯಗಳಿಗೆ ಹೋಲಿಸಿದರೆ ವಿಸ್ಕಿ ಸುಲಭದರದಲ್ಲಿ ಸಿಗುತ್ತದೆ.
ನರೇಂದ್ರಮೋದಿ ಸರ್ಕಾರದ ಅವಧಿಯಲ್ಲಿ ದೇಶವು ಜಗತ್ತಿನಲ್ಲೇ ಅತಿ ತ್ವರಿತವಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದು ಪ್ರಚಾರ ಮಾಡಲಾಗುತ್ತಿತ್ತು. ಆದರೆ, ಮೋದಿ ಸರ್ಕಾರವೇ ನೇಮಕ ಮಾಡಿದ್ದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರೇ ದೇಶದ ಆರ್ಥಿಕ ಅಭಿವೃದ್ಧಿಯ ಅಂಕಿಅಂಶಗಳು ಅತಿ ಉತ್ಪ್ರೇಕ್ಷಿತವಾಗಿವೆ, ವಾಸ್ತವವಾಗಿ ಶೇ.4.5ರಷ್ಟು ಮಾತ್ರ ಆರ್ಥಿಕ ಅಭಿವೃದ್ಧಿಯಾಗಿದೆ ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ಜಗತ್ತಿನಲ್ಲಿ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ ಭಾರತವಲ್ಲ ಎಂದಾಯಿತು.
ಆದರೆ, ಮೋದಿ ಸರ್ಕಾರದ ಅವಧಿಯಲ್ಲಿನ ಅತಿ ದೊಡ್ಡ ಹೆಗ್ಗಳಿಕೆ ಏನು ಗೊತ್ತೇ? ಅತಿ ಹೆಚ್ಚು ವಿಸ್ಕಿ ಮಾರಾಟ! ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, 2018ರಲ್ಲಿ ಜಗತ್ತಿನಲ್ಲಿ ಮಾರಾಟವಾದ ಐದು ಕೇಸ್ ವಿಸ್ಕಿ ಪೈಕಿ ಭಾರತದಲ್ಲಿ ತಯಾರಿಸಿದ ಮೂರು ಕೇಸ್ ವಿಸ್ಕಿ ಮಾರಾಟವಾಗಿದೆ. ಅಂದರೆ, ಭಾರತ ತ್ವರಿತವಾಗಿ ವಿಸ್ಕಿ ಬಳಸುತ್ತಿರುವ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಈ ಸಾಧನೆ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಾಗಿ ಎಂಬುದು ವಿಶೇಷ.
ಕುಡಿತ- ನಿರುದ್ಯೋಗ- ಹತಾಶೆ ನಡುವೆ ಸಂಬಂಧವಿದೆ. ಉದ್ಯೋಗಿಯೊಬ್ಬ ಕೆಲಸ ಕಳೆದುಕೊಂಡಾಗ ಹತಾಶೆಗೊಳಗಾಗುತ್ತಾನೆ. ಮತ್ತೊಂದು ಉದ್ಯೋಗ ಸಿಗದಿದ್ದಾಗ ಮತ್ತಷ್ಟು ಹತಾಶೆಗೊಂಡು ಕುಡಿತಕ್ಕೆ ಶರಣಾಗುತ್ತಾನೆ.
ಮೋದಿ ಸರ್ಕಾರದ ನಿಜವಾದ ಪವಾಡ ಇದೇ ನೋಡಿ! ದೇಶದಲ್ಲಿನ ನಿರುದ್ಯೋಗ ಸಮಸ್ಯೆ ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ. ಇದೇ ವೇಳೆ ದೇಶದಲ್ಲಿನ ವಿಸ್ಕಿ ಮಾರಾಟವು ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ!