ಪ್ರಧಾನಿ ಮೋದಿಯವರು 19ನೆಯ ತಾರೀಖಿನಿಂದು “ಒಂದು ರಾಷ್ಟ್ರ ಒಂದು ಚುನಾವಣೆ ನಡೆ” ಕುರಿತಂತೆ ಹಮ್ಮಿಕೊಂಡಿರುವ ಸರ್ವಪಕ್ಷಗಳ ಸಭೆಯನ್ನು ಬಹಿಷ್ಕರಿಸಿರುವ ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸಭೆಗೆ ಹಾಜರಾಗದಿರಲು ನಿರ್ಧರಿಸಿದ್ದಾರೆ. ಈ ಕುರಿತು ತಮ್ಮ ನಿರ್ಧಾರವನ್ನು ತಿಳಿಸಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಸಚಿವ ಪ್ರಹ್ಲಾದ್ ಜೋಶಿಗೆ ಪತ್ರ ಬರೆದಿರುವ ಮಮತಾ ಬ್ಯಾನರ್ಜಿ, ಇದು ಬಹಳ ಗಂಭೀರವಾದ ವಿಷಯ, ಈ ಕುರಿತು ಮೊದಲು ಶ್ವೇತ ಪತ್ರ ಹೊರಡಿಸಿ, ನಂತರ ಸಭೆ ಕರೆಯಿರಿ ಎಂದು ಆಗ್ರಹ ಪಡಿಸಿದ್ದಾರೆ.
ಸಂವಿಧಾನ ತಜ್ಞರೊಂದಿಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಬೇಕಾಗಿರುವ ವಿಷಯದ ಕುರಿತು ಕೇವಲ ಒಂದು ದಿನದ ಸಭೆಯಲ್ಲಿ ತೀರ್ಮಾನ ಮಾಡಲಾಗುವುದಿಲ್ಲ ಎಂದು “ದೀದಿ” ಹೇಳಿದ್ದಾರೆ.
“ಒಂದು ದೇಶ ಒಂದು ಚುನಾವಣೆ”ಯಂತಹ ಗಂಭೀರ ಮತ್ತು ಸೂಕ್ಷ್ಮವಾದ ವಿಷಯಕ್ಕೆ ಅಲ್ಪ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸಲು ಸಾಧ್ಯವಿಲ್ಲ. ಸಂವಿಧಾನ ತಜ್ಞರೊಂದಿಗೆ ಸಮಾಲೋಚಿಸುವ ಜೊತೆಗೆ, ಚುನಾವಣಾ ತಜ್ಞರೊಂದಿಗೂ ಚರ್ಚಿಸಬೇಕು, ಎಲ್ಲದಕ್ಕೂ ಮಿಗಿಲಾಗಿ ಪಕ್ಷದ ಸದಸ್ಯರೊಂದಿಗೆ ಚರ್ಚಿಸಬೇಕಾಗುತ್ತದೆ” ಎಂದು ಪ್ರಹ್ಲಾದ್ ಜೋಶಿಯವರಿಗೆ ಬರೆದಿರುವ ಪತ್ರದಲ್ಲಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
“ಈ ವಿಷಯವನ್ನು ತರಾತುರಿಯಲ್ಲಿ ಚರ್ಚಿಸುವ ಬದಲಿಗೆ, ವಿಷಯದ ಕುರಿತು ಶ್ವೇತಪತ್ರವೊಂದನ್ನು ಹೊರಡಿಸಿ ಎಲ್ಲಾ ರಾಜಕೀಯ ಪಕ್ಷಗಳಿಗೆ ವಿತರಿಸಲು ನಿಮ್ಮಲ್ಲಿ ಕೋರಿಕೊಳ್ಳುತ್ತೇನೆ. ಸಾಕಷ್ಟು ಸಮಯಾವಕಾಶ ನೀಡಿ ಎಲ್ಲಾ ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ಸ್ವೀಕರಿಸಿ ನಂತರದಲ್ಲಿಯೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಈ ರೀತಿಯಲ್ಲಿ ನೀವು ಚರ್ಚೆಗಳನ್ನು ನಡೆಸಿದರೆ ಮಾತ್ರ ನಾವು ಈ ಪ್ರಮುಖ ವಿಷಯದ ಬಗ್ಗೆ ನಮ್ಮ ನಿರ್ದಿಷ್ಟ ಸಲಹೆಗಳನ್ನು ನೀಡಲು ಸಾಧ್ಯವಾಗುತ್ತದೆ” ಎಂದು ಮಮತಾ ಬ್ಯಾನರ್ಜಿ ಬರೆದಿದ್ದಾರೆ.
ಇದೇ ಪತ್ರದಲ್ಲಿ ನೀತಿ ಆಯೋಗವು “ಮಹತ್ವಾಕಾಂಕ್ಷಿ ಜಿಲ್ಲೆಗಳು” ಎಂಬ ಯೋಜನೆಯಡಿ ದೇಶದ ಆಯ್ದ 117 ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವ ಕುರಿತಂತೆ ಚರ್ಚಿಸುವ ಆಹ್ವಾನವನ್ನು ಸಹ ಮಮತಾ ಬ್ಯಾನರ್ಜಿ ತಿರಸ್ಕರಿಸಿದ್ದಾರೆ. ಅಂತಹ ಒಂದು ಯೋಜನೆ “ರಾಜ್ಯಗಳ ಒಳಗೆ ಪ್ರಾದೇಶಿಕ ಅಸಮಾನತೆಗೆ ಕಾರಣವಾಗುತ್ತದೆ, ರಾಜ್ಯದಲ್ಲಿ ಸಮತೋಲಿತ ಬೆಳವಣಿಗೆಗೆ ಅದು ಸಹಕಾರಿಯಾಗುವುದಿಲ್ಲ” ಎಂದಿರುವ ಮಮತಾ ಬ್ಯಾನರ್ಜಿ “ನಮ್ಮ ರಾಜ್ಯವು ಯಾವುದೇ ಪ್ರಾದೇಶಿಕ ಅಸಮಾನತೆಗೆ ಒಳಪಡಿಸದ ರೀತಿಯಲ್ಲಿ ಎಲ್ಲಾ ಜಿಲ್ಲೆಗಳ ಸಮಾನ ಆರ್ಥಿಕ ಅಭಿವೃದ್ಧಿಯನ್ನು ಖಾತ್ರಿಗೊಳಿಸಲು ಬದ್ಧವಾಗಿದೆ” ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.