ಎರಡು ವರ್ಷಗಳ ಹಿಂದೆ ಬಿಜೆಪಿ ಮುಖಂಡರು ಹಾಗೂ ಪ್ರಸಿದ್ಧ ವಕೀಲರಾದ ಸುಬ್ರಮಣಿಯನ್ ಸ್ವಾಮಿ ಜೋಧಪುರದಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ ಮಾತಾಡುತ್ತಾ, ಮೋದಿ ಸರ್ಕಾರ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯನ್ನು ಕೊನೆಗೊಳಿಸುತ್ತದೆ ಎಂಬಂತಹ ಮಾತುಗಳನ್ನು ಖಡಾಖಂಡಿತವಾಗಿ ನಿರಾಕರಿಸಿದ್ದರು. “ಆದರೆ ನಮ್ಮ ಸರ್ಕಾರ ಈ ಮೀಸಲಾತಿ ವ್ಯವಸ್ಥೆಯನ್ನು ಎಷ್ಟರ ಮಟ್ಟಿಗೆ ಅಪ್ರಸ್ತುತಗೊಳಿಸಲಿದೆ ಎಂದರೆ ಇಲ್ಲಿ ಖೋಟಾ ವ್ಯವಸ್ಥೆ ಇದೆಯೋ ಇಲ್ಲವೋ ಎಂಬುದು ವಿಷಯವೇ ಅಲ್ಲ ಎಂಬಂತಾಗಲಿದೆ” ಎಂದು ಅವರು ಹೇಳಿದ್ದರು. ಅಂದರೆ ಮೀಸಲಾತಿ ವ್ಯವಸ್ಥೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಮಾಡುವುದು ತಮ್ಮ ಉದ್ದೇಶ ಎಂಬರ್ಥದಲ್ಲಿ ಅವರು ಹೇಳಿದ್ದರು.
ಇತ್ತೀಚಿಗೆ ಮೋದಿ ಸರ್ಕಾರ ಕೈಗೊಂಡ ಕ್ರಮಗಳು, ದೇಶದಲ್ಲಿನ ಕೆಲವು ಬೆಳವಣಿಗೆಗಳನ್ನು ನೋಡಿದರೆ ಸುಬ್ರಮಣಿಯನ್ ಸ್ವಾಮಿ ಎರಡು ವರ್ಷದ ಹಿಂದೆ ಹೇಳಿದ್ದ ಮಾತುಗಳು ಅಕ್ಷರಶಃ ನಿಜವಾಗುತ್ತಿವೆ.
ದೇಶದ ಸಾಮಾಜಿಕ ತಕ್ಕಡಿಯಲ್ಲಿ ಹೇಳಲಾರದಷ್ಟು ವಂಚನೆಗೆ ಒಳಗಾಗಿರುವ ತಳಸಮುದಾಯಗಳನ್ನು – ದಲಿತ- ಹಿಂದುಳಿದ- ಅಲ್ಪಸಂಖ್ಯಾತ ಹಾಗೂ ಮಹಿಳೆಯರು- ಸಬಲಗೊಳಿಸಲು, ಸಮಾಜದ ಏರುಪೇರುಗಳನ್ನು ಸರಿದೂಗಿಸಲು ನಮ್ಮ ಸಂವಿಧಾನ ನಿರ್ಮಾತೃಗಳು ಜಾತಿ ಆಧಾರಿತ ಮೀಸಲಾತಿಯನ್ನು ಸಂವಿಧಾನಬದ್ಧಗೊಳಿಸಿದ್ದರು. ಭಾರತದಲ್ಲಿನ ಅಸಮಾನತೆಯ ಮುಖ್ಯ ಲಕ್ಷಣವಾದ “ಜಾತಿ” ಸಮಾಜದ ಅಸಮಾನತೆಯಲ್ಲಿ ಹುದುಗಿರುವ ಕಾರಣದಿಂದ ಜಾತಿ ಆಧಾರಿತ ಮೀಸಲಾತಿಯನ್ನು ಸಂವಿಧಾನ ಒಪ್ಪಿಕೊಂಡಿತ್ತು. ಸರ್ಕಾರದ ಯಾವುದೇ ಹಂತದಲ್ಲಿ ನೇಮಕಾತಿಗಳು ನಡೆದರೂ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯ ರೋಸ್ಟರ್ ಪದ್ಧತಿ ಅನುಸರಿಸಿಕೊಂಡೇ ನೇಮಕಾತಿಗಳು ನಡೆಯಬೇಕಿರುವುದು ಕಡ್ಡಾಯ. 10 ಹುದ್ದೆಗಳು ನೇಮಕಗೊಂಡರೆ ಅದರಲ್ಲಿ 5 ಹುದ್ದೆಗಳು ಕಡ್ಡಾಯವಾಗಿ ಒಬಿಸಿ ಮತ್ತು ಪರಿಶಿಷ್ಟ ವರ್ಗಗಗಳ ಅರ್ಹರಿಗೆ ಹಂಚಿಕೆಯಾಗಬೇಕು, ಮಿಕ್ಕ 5 ಹುದ್ದೆಗಳಲ್ಲಿ ಸಾಮಾನ್ಯ ಪ್ರವರ್ಗದಲ್ಲಿ ಎಲ್ಲರಿಗೂ ಮುಕ್ತವಾಗಿರುತ್ತವೆ. ಆದರೆ ಇದನ್ನು ಅಲ್ಲಗಳೆಯುವ ಕೆಲಸವನ್ನು ಮೋದಿ ಸರ್ಕಾರ ಉನ್ನತ ಸೇವೆಗಳಿಂದಲೇ ಶುರುವಿಟ್ಟುಕೊಂಡಿದೆ.
ಭಾರತದಲ್ಲಿ ಆಡಳಿತಾಂಗದ ಮೇಲೆ ಪ್ರಬಲ ಹಿಡಿತ ಹೊಂದಿರುವುದು ಕೇಂದ್ರ ಸರ್ಕಾರದ ಸೇವೆಗಳು. ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿ ಇರುವ ಈ ಕೇಂದ್ರೀಕೃತ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಐಎಎಸ್, ಐಪಿಎಸ್, ಐಎಫ್ಎಸ್, ಐಸಿಎಸ್, ಐಆರ್ ಎಸ್ ಮುಂತಾದ ಸೇವೆಗಳಿವೆ. ಇಡೀ ಕಾರ್ಯಾಂಗದ ಮೇಲೆ ಪ್ರಾಬಲ್ಯ ಹೊಂದಿರುವುದೇ ಈ ಸೇವೆಗಳು. ರಾಜ್ಯ ಸೇವೆಗಳೇನಿದ್ದರೂ ಈ ಕೇಂದ್ರದ ಸೇವೆಗಳಿಗೆ ಅಧಿನವಾಗಿರುತ್ತವೆ. ಯಾವುದೇ ಸರ್ಕಾರದ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು, ಜಿಲ್ಲಾಧಿಕಾರಿಗಳು, ಮೊದಲಾದ ಎಲ್ಲಾ ಸೇವೆಗಳನ್ನೂ ಐಎಎಸ್ ಅಧಿಕಾರಗಳೇ ನಿರ್ವಹಿಸುವ ಕಾರ್ಯಾಂಗ ವ್ಯವಸ್ಥೆ ನಮ್ಮದು.
ಕಳೆದ ಲೋಕಸಭಾ ಚುನಾವಣೆ ನಡೆಯುತ್ತಿರುವಂತೆಯೇ ಮೋದಿ ಸರ್ಕಾರ ಈ ಹಿಂದೆ ಎಂದೂ ಇಲ್ಲದ ಹೊಸ ಪದ್ಧತಿಯೊಂದನ್ನು ಜಾರಿಗೆ ತಂದಿತು. 9 ಮಂದಿ “ಹೊರಗಿನ ಚತುರ ಹಾಗೂ ಪ್ರಾವೀಣ್ಯತೆ ಪಡೆದ” ವೃತ್ತಿಪರರನ್ನು ಜಂಟಿ ಕಾರ್ಯದರ್ಶಿಗಳ ಹುದ್ದೆಗೆ ಆಯ್ಕೆ ಮಾಡಿತ್ತು. ಯಾವ ಮೀಸಲಾತಿ ನೀತಿ ಅನುಸರಿಸದೇ, ಸ್ಪರ್ಧಾತ್ಮಕ ಪರೀಕ್ಷೆಯೂ ಇಲ್ಲದೇ ಇವರನ್ನು ನೇಮಕ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿತು.
ಇದು ಹಿಂದೆಂದೂ ನಡೆಯದ “ಅಡ್ಡ ನೇಮಕಾತಿ” ವಿಧಾನದಲ್ಲಿ ಮೋದಿ ಸರ್ಕಾರ ನಡೆಸಿದ ದೊಡ್ಡ ಮಟ್ಟದ ನೇಮಕಾತಿ. ಮೀಸಲಾತಿ ಅನುಸರಿಸದೇ ನಡೆಸಲಾಗುವ ಈ ನೇಮಕಾತಿ ಕುರಿತು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರ ಶ್ಯಾಮ್ ಲಾಲ್ ಯಾದವ್ ಎಂಬುವವರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಯೊಂದಕ್ಕೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ನೀಡಿದ್ದ ಉತ್ತರ ಹೀಗಿತ್ತು. “ಸಿಂಗಲ್ ಕೇಡರ್ ಹುದ್ದೆಯಲ್ಲಿ ಮೀಸಲಾತಿ ಅನ್ವಯಿಸುವುದಿಲ್ಲ”
ಇದರ ಅರ್ಥವೇನೆಂದರೆ, ಮೋದಿ ಸರ್ಕಾರ ಮೀಸಲಾತಿಯನ್ನು ತಪ್ಪಿಸಿ ತನಗೆ ಬೇಕಾದವರನ್ನು ಉನ್ನತ ಅಧಿಕಾರಶಾಹಿಯಲ್ಲಿ ಕೂರಿಸಲು ಅನುಸರಿಸಿದ ತಂತ್ರ ಸಿಂಗಲ್ ಕೇಡರ್ ನೇಮಕಾತಿ. ಒಬ್ಬೊಬ್ಬರನ್ನಾಗಿ ನೇಮಕಾತಿ ಮಾಡಿಕೊಂಡರೆ ಮೀಸಲಾತಿ ಅನುಸರಿಸಬೇಕಾಗಿಲ್ಲದಿರುವ ಕಾರಣ 9 ಜನರನ್ನು ಕೇಂದ್ರ ಲೋಕಸೇವಾ ಆಯೋಗದ ಮೂಲಕ ಸಿಂಗಲ್ ಕೇಡರ್ ನೇಮಕಾತಿ ಮೂಲಕ ಸೇರಿಸಿಕೊಳ್ಳಲಾಗಿತ್ತು. ಈ ರೀತಿ ಸರ್ಕಾರದ ಜಂಟಿ ಕಾರ್ಯದರ್ಶಿಗಳ ಸ್ಥಾನಗಳಿಗೆ ಅಂತಿಮಗೊಳಿಸಲಾದವರೆಂದರೆ ಅಂಬರ್ ದುಬೇ, ರಾಜೀವ್ ಸಕ್ಸೇನಾ, ಸುಜಿತ್ ಕುಮಾರ್ ಬಾಜ್ಪಯೀ, ಸೌರಭ್ ಮಿಶ್ರಾ, ದಿನೇಶ್ ದಯಾನಂದ್ ಜಗ್ದಳೆ, ಕಾಕೋಳಿ ಘೋಶ್, ಭೂಶಣ್ ಕುಮಾರ್, ಅರುಣ್ ಗೋಯೆಲ್ ಮತ್ತು ಸುಮನ್ ಪ್ರಸಾದ್ ಸಿಂಗ್.
ಈಗ ಇದೇ ಹಾದಿಯಲ್ಲಿ ಮುಂದೆ ಸಾಗುತ್ತಿರುವ ಮೋದಿ ಸರ್ಕಾರ ಮತ್ತಷ್ಟು ಜನರನ್ನು ಇದೇ ಬಗೆಯ ಅಡ್ಡ ನೇಮಕಾತಿ ಮೂಲಕ ಉನ್ನತ ಸೇವೆಗಳಿಗೆ ಸೇರಿಸಿಕೊಳ್ಳಲಿದೆ. ಸರ್ಕಾರಿ ಥಿಂಕ್ ಟ್ಯಾಂಕ್ ಆಗಿರುವ ನೀತಿ ಆಯೋಗವು, ಹಾಲಿ ಇರುವ ಒಟ್ಟು 516 ಹುದ್ದೆಗಳಲ್ಲಿ 54 ಹುದ್ದೆಗಳಿಗೆ ಮೇಲೆ ತಿಳಿಸಿದ ಅಡ್ಡ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಬಹುದು ಎಂಬ ಸೂಚನೆ ನೀಡಿದೆ. ಮೇಲೆ ಹೇಳಿದ ಜಂಟಿ ಕಾರ್ಯದರ್ಶಿ ಹಂತದ 9 ಜನರನ್ನಲ್ಲದೇ ಸಹ ಕಾರ್ಯದರ್ಶಿಗಳು ಹಾಗೂ ನಿರ್ದೇಶಕರ ಮಟ್ಟದ ಇನ್ನೂ 40 ಜನರನ್ನು ಈ ರೀತಿ ಮೀಸಲಾತಿ ಹೊರಗಿನವರನ್ನು ನೇಮಕ ಮಾಡಿಕೊಳ್ಳುವುದು ಮೋದಿ ಸರ್ಕಾರದ ಗ್ರಾಂಡ್ ಪ್ಲಾನ್ ಆಗಿದೆ. ಇದನ್ನು ಹೀಗೇ ಮುಂದುವರಿಸುತ್ತಾ ಹೋದರೆ ಅಲ್ಲಿಗೆ ಅತಿಶೀಘ್ರದಲ್ಲಿ ದೇಶದ ಮೀಸಲಾತಿ ನೀತಿಯೇ ಅಪ್ರಸ್ತುತಗೊಳ್ಳುವುದು ದಿಟವಾಗಿದೆ.
ಲೋಕಸೇವಾ ಆಯೋಗದ ಹುದ್ದೆಗಳಿಗೆ ನೇಮಕಗೊಳ್ಳುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಹೊತ್ತಿನಲ್ಲೇ ಇಂತಹ ಅಡ್ಡ ನೇಮಕಾತಿ ಯಾವ ಪರಿಣಾಮ ಬೀರಬಹುದು ಯೋಚಿಸಿ. 2014ರಲ್ಲಿ ಒಟ್ಟು 1,236 ಹುದ್ದೆಗಳನ್ನು UPSC ಪರೀಕ್ಷೆ ಮೂಲಕ ಭರ್ತಿ ಮಾಡಲಾಗಿದ್ದರೆ 2018 ಕೇವಲ 759 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.
ಸರ್ಕಾರಿ ಉದ್ಯಮಗಳ ಬೃಹತ್ ಖಾಸಗೀಕರಣ:
ಭಾರತದಲ್ಲಿ 90ರ ದಶಕದಲ್ಲಿ ಸಾಮಾಜಿಕ ನ್ಯಾಯಕ್ಕೆ ಎಳ್ಳು ನೀರು ಬಿಟ್ಟು, ಮೀಸಲಾತಿಗೆ ಮರಣಾಘಾತ ನೀಡಿದ ನೀತಿ ಎಂದರೆ ಖಾಸಗೀಕರಣ ನೀತಿ. ಇದರ ಪರಿಣಾಮವಾಗಿ ಇಂದು ದೇಶದ ಒಟ್ಟು ಉದ್ಯೋಗಗಳ ಪೈಕಿ ಮೀಸಲಾತಿ ಮೂಲಕ ನೇಮಕಗೊಳ್ಳುವ ಉದ್ಯೋಗಗಳ ಸಂಖ್ಯೆ ಕೇವಲ 7% ಮಾತ್ರ. ಮಿಕ್ಕ 93% ಉದ್ಯೋಗಗಳಿಗೆ ಯಾವ ಮೀಸಲಾತಿಯೂ ಅನ್ವಯವಾಗುವುದಿಲ್ಲ. ಈ 7% ಸರ್ಕಾರಿ ಉದ್ಯೋಗಗಳನ್ನೇ ತೆಗೆದುಕೊಂಡರೂ ಉನ್ನತ ಹುದ್ದೆಗಳಲ್ಲಿ ಈಗಲೂ ಸಾಮಾಜಿಕ ಅನ್ಯಾಯ ರಾಚುತ್ತಿದೆ. ಉದಾಹರಣೆಗೆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಲಾದ ಒಂದು ಸಮೀಕ್ಷೆಯ ಪ್ರಕಾರ ಅವಕಾಶಗಳ 66% ಪಡೆದುಕೊಂಡಿರುವುದು ಹಿಂದೂ ಮೇಲ್ಜಾತಿಗಳಿಗೆ ಸೇರಿದವರು ಎಂಬುದು ತಿಳಿದು ಬಂದಿದೆ. ಇನ್ನು ಖಾಸಗಿ ಕ್ಷೇತ್ರದಲ್ಲಿ ಉನ್ನತ ಹಂತದ ಉದ್ಯೋಗಗಳಲ್ಲಿ ನೂರಕ್ಕೆ ನೂರು ಹುದ್ದೆಗಳು ಕೆಲವೇ ಬಲಿಷ್ಟ ವರ್ಗ-ಜಾತಿಗಳ ಪಾಲಾಗಿರುವುದು ಕಟುವಾಸ್ತವ.
ಈಗ ಅಳಿದುಳಿದ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನೂ ಖಾಸಗಿಕರಣ ಮೂಲಕ ಯಾರ ಅರಿವಿಗೂ ಬಾರದಂತೆ ಸಾಮಾಜಿಕ ನ್ಯಾಯಕ್ಕೆ ತಿಲಾಂಜಲಿ ಇಡಲು ಹೊರಟಿದೆ ಮೋದಿ ಸರ್ಕಾರ. ನೀತಿ (NITI) ಆಯೋಗದ ಅಧ್ಯಕ್ಷ ರಾಜೀವ್ ಕುಮಾರ್ ಅವರು ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ದೇಶದ 42 ಸಾರ್ವಜನಿಕ ರಂಗದ ಉದ್ದಿಮೆಗಳನ್ನು (PSUs) ಖಾಸಗೀಕರಿಸುವ ಯೋಜನೆ ಇರುವುದನ್ನು ತಿಳಿಸಿದ್ದಾರೆ. ಒಮ್ಮೆ ಇವು ಖಾಸಗೀಕರಣಗೊಂಡು ಕಾರ್ಪೊರೇಟ್ ಹಿಡಿತಕ್ಕೆ ಹೋದರೆ ಅಲ್ಲಿಗೆ ಮುಗಿಯಿತು. ಅಮೆರಿಕ, ಯೂರೋಪಿನ ದೇಶಗಳಲ್ಲಿನ ಕಾರ್ಪೊರೇಟ್ ಕಂಪನಿಗಳು ಅನುಸರಿಸುತ್ತಿರುವ ಮೀಸಲಾತಿ, ಸಾಮಾಜಿಕ ನ್ಯಾಯದ ಕ್ರಮಗಳನ್ನು ಭಾರತದ ಬ್ರಾಹ್ಮಣಶಾಹಿ ಕಾರ್ಪೊರೇಟ್ ಶಕ್ತಿಗಳು ಅನುಸರಿಸುವುದು ಸಾಧ್ಯವೇ ಇಲ್ಲ.
ಉದ್ಯೋಗ ನೇಮಕಾತಿಯಲ್ಲಿ ಖಾಸಗಿ ಕಾರ್ಪೊರೇಟ್ ಕಂಪನಿಗಳು ಯಾವ ನೀತಿ ಅನುಸರಿಸುತ್ತವೆ ಎಂಬುದನ್ನು ಪ್ರಾಯೋಗಿಕವಾಗಿ ತಿಳಿಯಲು ಖ್ಯಾತ ಸಾಮಾಜಿಕ ತಜ್ಞ ಸುಖದೇವ್ ಥೋರಟ್ ಅವರು ಪೌಲ್ ಆಟ್ವೆಲ್ ಅವರೊಂದಿಗೆ ದೆಹಲಿ ರಾಜದಾನಿಯಲ್ಲಿ ಒಂದು ಪ್ರಯೋಗ ನಡೆಸಿದ್ದರು. ಪ್ರಮುಖ ಇಂಗ್ಲಿಷ್ ಪತ್ರಿಕೆಗಳಲ್ಲಿ ಕಾರ್ಪೊರೇಟ್ ಕಂಪನಿಗಳು ನೀಡುವ ಜಾಹೀರಾತುಗಳಿಗೆ ಸ್ಪಂದಿಸಿದ ಅವರು ಮೂರು ಬಗೆಯ ಅರ್ಜಿಗಳನ್ನು ಕಳಿಸಿದ್ದರು. ಹಿಂದೂ ಮೇಲ್ಜಾತಿ (ಬ್ರಾಹ್ಮಣ, ಬನಿಯಾ) ಹೆಸರುಗಳು, ದಲಿತ ಹೆಸರುಗಳು ಹಾಗೂ ಮುಸ್ಲಿಂ ಹೆಸರುಗಳು ಇರುವ ಅರ್ಜಿಗಳನ್ನು ಕಂಪನಿಗಳಿಗೆ ಕಳಿಸಿದ್ದರು. ಈ ಅರ್ಜಿಗಳಲ್ಲಿ ಜಾತಿ ಸೂಚಕ ಹೆಸರುಗಳನ್ನು ಬಿಟ್ಟರೆ ಉಳಿದ ಎಲ್ಲಾ ವಿವರಗಳು ಒಂದೇ ರೀತಿ ಇದ್ದವು.
ಫಲಿತಾಂಶವೇನು ಗೊತ್ತೇ?
ಈ ಅರ್ಜಿಗಳ ಪೈಕಿ 100 ಜನ ಮೇಲ್ಜಾತಿ ಹಿಂದೂಗಳನ್ನು ಆಹ್ವಾನಿಸಿದ್ದರೆ ಕೇವಲ 60 ಮಂದಿ ದಲಿತ ಅಭ್ಯರ್ಥಿಗಳನ್ನೂ 30 ಮಂದಿ ಮುಸ್ಲಿಂ ಅಭ್ಯರ್ಥಿಗಳನ್ನೂ ಆಹ್ವಾನಿಸಲಾಗಿತ್ತು. ಆಯ್ಕೆ ಮಾಡುವ ಹತ್ತೋ ಇಪ್ಪತ್ತೋ ಹುದ್ದೆಗಳಿಗೆ ಆರಂಭಿಕ ಎಲಿಮಿನೇಶನ್ ಹಂತದಲ್ಲೇ ಈ ರೀತಿ ಆದರೆ ಅಂತಿಮ ಆಯ್ಕೆಯಲ್ಲಿ ದಲಿತರಾಗಲೀ, ಹಿಂದುಳಿದವರಾಗಲೀ, ಮುಸ್ಲಿಮರಾಗಲೀ ಎಷ್ಟು ಸಂಖ್ಯೆಯಲ್ಲಿ ಇರಲು ಸಾಧ್ಯ ಎಂದು ಸುಲಭವಾಗಿ ಊಹಿಸಬಹುದು ಅಲ್ಲವೇ?
ಇಂತಹ ಅಧ್ಯಯನ ವರದಿಗಳಿದ್ದರೂ ಸಹ ಜೆ ಜೆ ಇರಾನಿ ಸಮಿತಿ ವರದಿಯಲ್ಲಿ ತಿಳಿಸಲಾದಂತೆ 2006ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾತಿಗೊಳಿಸುವ ಪ್ರಸ್ತಾವವನ್ನು ಖಡಾಖಂಡಿತವಾಗಿ ನಿರಾಕರಿಸಿತ್ತು. ತಳ ಸಮುದಾಯಗಳಲ್ಲಿ ಕೌಶಲ್ಯ ಮತ್ತು ಶಿಕ್ಷಣ ಪ್ರಗತಿಗೆ ಕಾರ್ಪೊರೇಟುಗಳು ಸಹಾಯ ಮಾಡಲಿ ಎಂಬ ವಾದವನ್ನು ಮುಂದೆ ತರಲಾಗಿತ್ತು. ಅದೆಷ್ಟರ ಮಟ್ಟಿಗೆ ನಡೆಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಮೋದಿ ಸರ್ಕಾರ ಸಹ ಮೊದಲ ಅವಧಿಯಲ್ಲೇ ತಾನು ಖಾಸಗಿ ಕ್ಷೇತ್ರದ ಮೀಸಲಾತಿಗೆ ವಿರುದ್ಧ ಎಂದು ಸ್ಪಷ್ಟಪಡಿಸಿದೆ.
ಆದರೆ ಕಳೆದ ಚುನಾವಣೆಗೆ ಕೆಲವೆ ತಿಂಗಳು ಮೊದಲು ಮೋದಿ ಸರ್ಕಾರ ಇನ್ನೂ ಒಂದು ಚಾಣಾಕ್ಷ ಹೆಜ್ಜೆ ಇಟ್ಟು ಇಡೀ ಸಾಮಾಜಿಕ ನ್ಯಾಯ ವ್ಯವಸ್ಥೆಯ ಮೇಲೆ ಪ್ರಹಾರ ಮಾಡಿತು. ಅದೆಂದರೆ ಮೇಲ್ಜಾತಿ ಬಡವರಿಗೆ ಶೇಕಡಾ 10ರ ಮೀಸಲಾತಿ ವ್ಯವಸ್ಥೆ. ಕಾಂಗ್ರೆಸ್, ಬಹುಜನ ಸಮಾಜ ಪಕ್ಷ, ಸಮಾಜವಾದಿ, ಆಮ್ ಆದ್ಮಿ, ಕಮ್ಯುನಿಷ್ಟ್ ಪಕ್ಷಗಳಾದಿಯಾಗಿ ಎಲ್ಲರೂ ಒಪ್ಪಿಕೊಂಡ ಈ “10% ಮೀಸಲಾತಿ” ಸಾಮಾಜಿಕ ನ್ಯಾಯದ ನಡೆಯಲ್ಲಿ ದೊಡ್ಡ ಹಿನ್ನಡೆಯೇ ಹೌದು.
ಜನಸಂಖ್ಯೆಯಲ್ಲಿ 85-% ಇರುವ ಜನಜಾತಿಗಳು 50% ಇರುವ ಮೀಸಲಾತಿಗಳಲ್ಲಿ ಅವಕಾಶಗಳಿಗಾಗಿ ತೀವ್ರ ಪೈಪೋಟಿ ನಡೆಸುವುದು ಒಂದು ಕಡೆಯಾದರೆ ಜನಸಂಖ್ಯೆಯಲ್ಲಿ ಕೆಲವೊಮ್ಮೆ ಕೇವಲ 3-4% ಇರುವ ಹಿಂದೂ ಮೇಲ್ಜಾತಿಗಳು 10% ಅವಕಾಶಗಳನ್ನು ಅನಾಯಾಸವಾಗಿ ಪಡೆದುಕೊಳ್ಳಲು ಈ ವ್ಯವಸ್ಥೆ ದಾರಿ ಮಾಡಿಕೊಟ್ಟಿದೆ. ಈಗ ಕರ್ನಾಟದ ಉದಾಹರಣೆಯನ್ನೇ ತೆಗೆದುಕೊಂಡು ನೋಡಿದರೂ ಇದು ಸ್ಪಷ್ಟವಾಗಿದೆ. ರಾಜ್ಯದ ಜನಸಂಖ್ಯೆಯ 5% ಒಳಗಿರುವ ಬ್ರಾಹ್ಮಣ ಮತ್ತಿತರ ಅತಿ ಸಣ್ಣ ಸಮುದಾಯಗಳು ನೇಮಕಾತಿಗಳ 10% ಅವಕಾಶಗಳನ್ನು ಪಡೆಯುವಂತಾಗಿದೆ. ಈ 10% ಮೀಸಲಾತಿಯನ್ನು ಜನರಲ್ ಕೆಟಗರಿ ಮೀಸಲಾತಿಯೆ ಶೇಕಡಾ 50ರಲ್ಲಿ ನೀಡಿರುವ ಕಾರಣ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೈಪೋಟಿ ನಡೆಸುತ್ತಿದ್ದ ಲಿಂಗಾಯತ, ಒಕ್ಕಲಿಗ, ಬಂಟ್ಸ್ ಮೊದಲಾದ ಸಮುದಾಯಗಳ ಅವಕಾಶ ಗಣನೀಯವಾಗಿ ಕುಸಿದಿದೆ. ಇತ್ತೀಚೆಗೆ ಪ್ರಕಟವಾದ ನೀಟ್ ಪರೀಕ್ಷಾ ಫಲಿತಾಂಶದಲ್ಲಿ ಸಹ ಇದರ ಪರಿಣಾಮ ಸ್ಪಷ್ಟವಾಗಿ ಗೋಚರವಾಗಿದೆ.
ಅದಕ್ಕಿಂತ ಮುಖ್ಯವಾಗಿ ಮೀಸಲಾತಿ ಪಡೆಯಲು ಆರ್ಥಿಕತೆ ಒಂದು ಮಾನದಂಡ ಎಂಬುದನ್ನು ಸಂವಿಧಾನ ಒಪ್ಪಿಕೊಂಡಿರಲಿಲ್ಲ. ಈಗ ಮೋದಿ ಸರ್ಕಾರ ಸಂವಿಧಾನದ 15-16ನೇ ವಿಧಿಗಳಿಗೆ ತಿದ್ದುಪಡಿ ತರುವ ಮೂಲಕ ಈ ಪ್ರತಿಗಾಮಿ ನಡೆಯನ್ನು ಸಂವಿಧಾನಬದ್ಧಗೊಳಿಸಿದ್ದಾರೆ.
ಮೀಸಲಾತಿ ವ್ಯವಸ್ಥೆ ಭಾರತದಲ್ಲಿ ಸಾಮಾಜಿಕವಾಗಿ ಉಪೇಕ್ಷೆಗೊಳಗಾದ ಜನವರ್ಗಗಳಿಗೆ ಅವಕಾಶ ನೀಡುವ ಒಂದು ಸಂವಿಧಾನಬದ್ಧ ವ್ಯವಸ್ಥೆಯೇ ಹೊರತು ನಿರುದ್ಯೋಗ ನಿರ್ಮೂಲನೆಯ ವ್ಯವಸ್ಥೆ ಅಲ್ಲ. ಹಿಂದೂ ಮೇಲ್ಜಾತಿಗಳನ್ನು ಒಳಗೊಂಡಂತೆ ಪ್ರತಿಯೊಂದು ಜಾತಿಗಳಲ್ಲಿ ಬಡವರಿದ್ದಾರೆ. ಆದರೆ ಅವಕಾಶಗಳ ಹಂಚಿಕೆಯಲ್ಲಿ ಹಿಂದೂ ಮೇಲ್ಜಾತಿಗಳಿಗೆ ವಂಚನೆಯಾಗುವುದಿಲ್ಲ, ಸಮಾಜದ ತಳಸ್ತರಗಳಲ್ಲಿ ಇರುವವರನ್ನು ಅದರಲ್ಲೂ ಅಸ್ಪೃಶ್ಯ ಸಮುದಾಯಗಳನ್ನು ಬೇಕೆಂದೇ ಅವಕಾಶಗಳಿಂದ ಹೊರಕ್ಕಿಡುವ ಸಾಮಾಜಿಕ ಸಂವಿಧಾನ ಭಾರತದಲ್ಲಿ ಶತಮಾನಗಳಿಂದ ಜಾರಿಯಲ್ಲಿದೆ. ಈ ಪ್ರತಿಗಾಮಿ ಸಾಮಾಜಿಕ ಸಂವಿಧಾನದಿಂದ ರಕ್ಷಣೆಯಾಗಿ ತಳಸಮುದಾಯಗಳು ಪಡೆದಿರುವ ರಕ್ಷಣಾ ವ್ಯವಸ್ಥೆಯೇ ಜಾತಿ ಆಧಾರಿತ ಮೀಸಲಾತಿಯಾಗಿತ್ತು. ಈಗ ಮೋದಿ ಸರ್ಕಾರ ಆರ್ಥಿಕತೆಯನ್ನೂ ಮೀಸಲಾತಿಗೆ ಒಂದು ಮಾನದಂಡವಾಗಿ ಮಾಡುವ ಮೂಲಕ ಈ ತಳಸಮುದಾಯಗಳ ರಕ್ಷಣಾ ವ್ಯವಸ್ಥೆಯನ್ನು ಅಷ್ಟರ ಮಟ್ಟಿಗೆ ದುರ್ಬಲಗೊಳಿಸಿದೆ ಎನ್ನಬಹುದು.
ಹೀಗೆ ಮೋದಿ ಸರ್ಕಾರದ ಹಿಂದೆ ಸೂತ್ರದಾರರ ಸ್ಥಾನದಲ್ಲಿ ಕುಳಿತಿರುವ ಸಾಮಾಜಿಕ ಶಕ್ತಿಗಳು ಸಾಮಾಜಿಕ ನ್ಯಾಯದ ಒಂದು ಏಣಿಯಾಗಿದ್ದ ಮೀಸಲಾತಿಯ ಒಂದೊಂದೇ ಮೆಟ್ಟಿಲುಗಳನ್ನು ವ್ಯವಸ್ಥಿತವಾಗಿ, ಯೋಜಿತವಾಗಿ ಕಡಿದು ಹಾಕುವ ಕೆಲಸ ಮಾಡುತ್ತಿದ್ದಾರೆ.
3 Comments
Yes this is true plese protect our constitution
It is very dangerous . we should awear all obc sc and st
absolutely right first i want tell thanks to truth india reporter plz protest of constitution bcz this central govt doing idiot routs plz everyones resposibility to protest our constitution