ರಾಜ್ಯ ರಾಜಕಾರಣದಲ್ಲಿ ಕಳೆದ ಇಪ್ಪತ್ತನಾಲ್ಕು ತಾಸುಗಳಿಂದ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ದೆಹಲಿ ಭೇಟಿಯಿಂದ ಆರಂಭವಾದ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಳು, ಇದೀಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಕಾರಿಣಿ ವಿಸರ್ಜನೆಯ ಮೂಲಕ ಒಂದು ಘಟಕ್ಕೆ ತಲುಪಿವೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷವು ರಾಜ್ಯದಲ್ಲಿ ಕಂಡಿರುವ ಹೀನಾಯ ಸೋಲಿನ ಬಳಿಕ ನಡೆಯುತ್ತಿರುವ ಕಾಂಗ್ರೆಸ್ ಆಂತರಿಕ ಸ್ಥಿತ್ಯಂತರಗಳು ಸದ್ಯಕ್ಕೆ ಸಾಗುತ್ತಿರುವ ದಿಕ್ಕು ಗಮನಿಸಿದರೆ, ದೊಡ್ಡ ಮಟ್ಟದ ಬದಲಾವಣೆಗೆ ಪಕ್ಷ ಮಗ್ಗಲು ಬದಲಾಯಿಸುತ್ತಿದೆ ಎನಿಸದೇ ಇರದು. ಅದೇ ಹೊತ್ತಿಗೆ, ಒಂದು ಕಡೆ ರೋಷನ್ ಬೇಗ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅಮಾನತುಗೊಳಿಸಿದ ಬಳಿಕದ ಕಾಂಗ್ರೆಸ್ ಭಿನ್ನಮತೀಯರ ನಡುವಿನ ಬೆಳವಣಿಗೆಗಳು ಮತ್ತು ಇನ್ನೊಂದು ಕಡೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು ಭಿನ್ನಮತೀಯ ಕಾಂಗ್ರೆಸ್ ನಾಯಕರ ಮನೆಗಳಿಗೆ ಸರಣಿ ಭೇಟಿ ನೀಡುತ್ತಿರುವುದು ಕಾಂಗ್ರೆಸ್ ಪಾಲಿಗೆ ಕಾದಿರುವ ಆಘಾತದ ಮುನ್ಸೂಚನೆ ನೀಡುತ್ತಿವೆ.
ಸಿದ್ದರಾಮಯ್ಯ ಅವರು ದೆಹಲಿಗೆ ಹೋಗುತ್ತಲೇ ಎಐಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಎ ಕೆ ಆಂಟನಿ ಅವರನ್ನು ಭೇಟಿ ಮಾಡಿದರು. ಆ ಭೇಟಿ ಮುಗಿದ ಕೆಲವೇ ತಾಸುಗಳಲ್ಲಿ ರೋಷನ್ ಬೇಗ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ ಆದೇಶ ಹೊರಬಿತ್ತು. ಅದಾದ ಬೆನ್ನಲ್ಲೇ ಕೆಪಿಸಿಸಿ ಹಾಲಿ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಪದಾಧಿಕಾರಿಗಳನ್ನು ಒಳಗೊಂಡ ಸಮಿತಿಯ ವಿಸರ್ಜನೆಯ ಆದೇಶ ಹೊರಬಿದ್ದಿದೆ. ಆ ಸಮಿತಿಯಲ್ಲಿ, ಸಚಿವ ಸ್ಥಾನ ವಂಚಿತರಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಟೀಕೆ ಮಾಡಿದ್ದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಘಟಾಘಟಿ ನಾಯಕರಿದ್ದರು. ಸುಮಾರು 170 ಮಂದಿಯ ಕೆಪಿಸಿಸಿಯನ್ನು ವಿಸರ್ಜಿಸುವ ಮೂಲಕ, ಪಕ್ಷದ ಸಂಘಟನೆಯಲ್ಲಿ ಆಮೂಲಾಗ್ರ ಬದಲಾವಣೆಯ ಸೂಚನೆಯನ್ನು ಎಐಸಿಸಿ ನೀಡಿದೆ.
ಆದರೆ, ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದ ಪ್ರಭಾವಿ ಒಕ್ಕಲಿಗ ನಾಯಕ ಡಿ ಕೆ ಶಿವಕುಮಾರ್ ಮತ್ತು ಲಿಂಗಾಯತ ಮುಖಂಡ ಡಾ ಎಂ ಬಿ ಪಾಟೀಲ್ ಅವರಿಗೆ ಈ ಬೆಳವಣಿಗೆಗಳು ನಿರಾಶೆ ಮೂಡಿಸಿದ್ದು, ಪಕ್ಷದ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷ ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಎಐಸಿಸಿ ಸೂಚನೆ, ಈ ಇಬ್ಬರು ನಾಯಕರ ನಡುವಿನ ತೀವ್ರ ಪೈಪೋಟಿಗೆ ಸದ್ಯಕ್ಕೆ ಬ್ರೇಕ್ ಹಾಕಿದೆ. ಆದರೆ, ಸಿದ್ದರಾಮಯ್ಯ ವಿರೋಧಿ ಬಣದ ಹಿರಿಯ ನಾಯಕರ ಬೆಂಬಲದೊಂದಿಗೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಇನ್ನಿಲ್ಲದ ಪ್ರಯತ್ನ ಮಾಡಿದ್ದ ಡಿ ಕೆ ಶಿವಕುಮಾರ್ ಅವರ ಮಟ್ಟಿಗೆ ಇದು, ಕೇವಲ ವೈಯಕ್ತಿಕ ಹಿನ್ನಡೆಯಲ್ಲ. ಬದಲಾಗಿ, ಅವರೊಂದಿಗೆ ಬೆಂಬಲವಾಗಿ ನಿಂತಿದ್ದ ಬಹುತೇಕ ಮೂಲ ಕಾಂಗ್ರೆಸ್ ನಾಯಕರೆಲ್ಲರ ಪ್ರಯತ್ನಗಳು ಸಿದ್ದರಾಮಯ್ಯ ತಂತ್ರಗಾರಿಕೆಯ ಎದುರು ವಿಫಲವಾದ ಫಲಿತಾಂಶ ಕೂಡ! ಹಾಗಾಗಿ, ಸಿದ್ದರಾಮಯ್ಯ ಅವರ ಆಪ್ತರಾಗಿರುವ ದಿನೇಶ್ ಗುಂಡೂರಾವ್ ಮತ್ತು ಈಶ್ವರ ಖಂಡ್ರೆ ಅವರನ್ನು ಪಕ್ಷದ ಸಾರಥ್ಯದಿಂದ ಬದಿಗೊತ್ತುವ ಮೂಲಕ, ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನೇ ಬದಿಗೊತ್ತುವ ತಂತ್ರಗಾರಿಕೆ ಹೆಣೆದಿದ್ದ ಸಿದ್ದರಾಮಯ್ಯ ವಿರೋಧಿ ಬಣದ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.
ಈ ನಡುವೆ, ಸಿದ್ದರಾಮಯ್ಯ ದೆಹಲಿಯಲ್ಲಿರುವಾಗಲೇ, ರಾಜ್ಯ ರಾಜಧಾನಿಯಲ್ಲಿ ಕೆಲವು ಕುತೂಹಲಕಾರಿ ಬೆಳವಣಿಗೆಗಳೂ ನಡೆದಿವೆ. ಸದ್ಯದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅವು ಕೇವಲ ಕಾಕತಾಳೀಯ ಅಲ್ಲ ಎಂಬ ಕಾರಣಕ್ಕೆ ಆ ಬೆಳವಣಿಗೆಗಳಿಗೆ ಮಹತ್ವ ಬಂದಿದೆ. ಆ ಪೈಕಿ ಒಂದು, ಸ್ವತಃ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಎಐಸಿಸಿ ಮಟ್ಟದಲ್ಲಿ ಪ್ರಭಾವಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವುದು. ಜೆಡಿಎಸ್ ವರಿಷ್ಠ ದೇವೇಗೌಡರು ಲೋಕಸಭಾ ಚುನಾವಣೆಗೆ ಮುನ್ನ ನೀಡಿದ ದಲಿತ ಮುಖ್ಯಮಂತ್ರಿ ಹೇಳಿಕೆ ಮತ್ತು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವಿನ ತೆರೆಮರೆಯ ಪೈಪೋಟಿಗಳು ಲೋಕಸಭಾ ಚುನಾವಣೆಯ ಮಂಡ್ಯ, ಮೈಸೂರು ಮತ್ತು ತುಮಕೂರು ಕ್ಷೇತ್ರಗಳ ಫಲಿತಾಂಶದ ಬಳಿಕ ಪಡೆದುಕೊಂಡಿರುವ ತೀವ್ರಗತಿಯ ಹಿನ್ನೆಲೆಯಲ್ಲಿ ಈ ಭೇಟಿ ಕೇವಲ ಸೌಹಾರ್ದವಲ್ಲ ಎಂಬುದನ್ನು ಭೇಟಿಯ ಸಂದರ್ಭ ಮತ್ತು ಭೇಟಿಯ ವರಸೆಗಳೇ ಹೇಳುತ್ತಿವೆ.
ಮತ್ತೊಂದು ಬೆಳವಣಿಗೆ, ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಕಡೆ ಮುಖಮಾಡಿದ್ಧಾರೆ ಎನ್ನಲಾಗುತ್ತಿರುವ ಮತ್ತು ಪ್ರಮುಖವಾಗಿ ಸಿದ್ದರಾಮಯ್ಯ ವಿರುದ್ಧ ಬಹಿರಂಗ ಸಮರ ಸಾರಿರುವ ಎಚ್ ವಿಶ್ವನಾಥ್ ಅವರು ಸಿದ್ದರಾಮಯ್ಯ ವಿರೋಧಿ ಹೇಳಿಕೆ ಮೂಲಕ ಸುದ್ದಿ ಮಾಡಿರುವ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿರುವುದು. ಅನುಭವಿ ನಾಯಕರಾದ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಂಡಿಲ್ಲ ಎಂಬ ಹಿನ್ನೆಲೆಯಲ್ಲಿ ರೆಡ್ಡಿ ಅವರು ಇತ್ತೀಚಿನ ಸಂಪುಟ ವಿಸ್ತರಣೆಗೆ ಮುನ್ನ, ಸಂಪುಟ ಪುನರ್ ರಚನೆಗೆ ಆಗ್ರಹಿಸಿದ್ದರು ಮತ್ತು ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ಬಹಿರಂಗ ಟೀಕೆ ಮಾಡಿದ್ದರು. ಆ ಟೀಕೆಯ ಗುರಿ ನೇರವಾಗಿ ಸಿದ್ದರಾಮಯ್ಯ ಅವರೇ ಆಗಿದ್ದರು ಮತ್ತು ಆ ಮೂಲಕ ಅವರು ಪಕ್ಷದ ಸಿದ್ದರಾಮಯ್ಯ ವಿರೋಧಿ ಬಣದ ಹಿರಿಯ ನಾಯಕರ ಅತೃಪ್ತಿ ಮತ್ತು ಆಕ್ರೋಶಕ್ಕೆ ದನಿ ನೀಡಿದ್ದರು.
ಅದೇ ಹೊತ್ತಿಗೆ, ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಸರ್ಕಾರವನ್ನು ತಮ್ಮ ಕೈಗೊಂಬೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳಿಗೆ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂಬ ಆರೋಪದ ಮೂಲಕ ಮತ್ತೊಂದು ಕಡೆಯಿಂದ ಎಚ್ ವಿಶ್ವನಾಥ್ ಅದೇ ಸಿದ್ದರಾಮಯ್ಯ ವಿರುದ್ಧ ಸಮರ ಸಾರಿದ್ದರು. ಇದೀಗ ಜಿಂದಾಲ್ ಭೂ ವಿವಾದದ ವಿಷಯದಲ್ಲಿ ಸ್ವತಃ ತಮ್ಮದೇ ಪಕ್ಷದ ಮುಖ್ಯಮಂತ್ರಿಯವರನ್ನು ಕೇಳುವ ಬದಲಾಗಿ, ಸಿದ್ದರಾಮಯ್ಯ ಪ್ರತಿಕ್ರಿಯೆ ಏನು ಎಂದು ಕೇಳುವ ಮೂಲಕ ಮಾಜಿ ಸಿಎಂ ಕೆಣಕಿದ್ದರು. ಆ ಎಲ್ಲಾ ಹಿನ್ನೆಲೆಯಲ್ಲಿ, ಒಂದೇ ದೋಣಿಯಲ್ಲಿ ಸಾಗುತ್ತಿರುವ ಈ ಇಬ್ಬರು ನಾಯಕರ ಆಪ್ತ ಭೇಟಿ ಮಾತ್ತು ಮಾತುಕತೆ ಮಹತ್ವ ಪಡೆದುಕೊಂಡಿದೆ.
ಹಾಗೆ ನೋಡಿದರೆ, ಕಾಂಗ್ರೆಸ್ ಪಕ್ಷದ ಒಳಗೆ ಕಳೆದ ಆರು ತಿಂಗಳಿನಿಂದ ತೀವ್ರಗೊಂಡಿರುವ ಈ ರಾಜಕೀಯ ವಿದ್ಯಮಾನಗಳು ಮೂಲಭೂತವಾಗಿ ರಾಜ್ಯ ಕಾಂಗ್ರೆಸ್ ಮೇಲಿನ ಹಿಡಿತಕ್ಕೆ ನಡೆಯುತ್ತಿರುವ ಪೈಪೋಟಿ. ಸಿದ್ದರಾಮಯ್ಯ ಮತ್ತು ಅವರ ಆಪ್ತ ವಲಯದಲ್ಲಿರುವ ಎರಡನೇ ತಲೆಮಾರಿನ ಕಾಂಗ್ರೆಸ್ ನಾಯಕರು ಹಾಗೂ ಇನ್ನೂ ಬಹಿರಂಗವಾಗಿ ಸ್ಪಷ್ಟ ನಾಯಕತ್ವ ಸಿಕ್ಕದೇ ಇರುವ ಸಿದ್ದರಾಮಯ್ಯ ವಿರೋಧಿ ಮೂಲ ಕಾಂಗ್ರೆಸ್ಸಿನ ಹಿರಿಯ ನಾಯಕರ ನಡುವಿನ ಪೈಪೋಟಿ ಅದು. ಸಿದ್ದರಾಮಯ್ಯ ಪಾಲಿಗೆ ಪಕ್ಷದ ಮೇಲಿನ ಸಂಪೂರ್ಣ ಹಿಡಿತ ಸ್ಥಾಪಿಸಿ, ಮುಂದಿನ ಚುನಾವಣೆಯ ಹೊತ್ತಿಗೆ ಎಲ್ಲಾ ಹಂತದಲ್ಲೂ ಪಕ್ಷವನ್ನು ತಮ್ಮ ಆಣತಿಗೆ ಒಗ್ಗಿಸುವುದು ಮತ್ತು ಆ ಮೂಲಕ ಪಕ್ಷ ಸಂಘಟಿಸಿ ಮತ್ತೊಮ್ಮೆ ಅಧಿಕಾರಕ್ಕೆ ತಂದು, ಸಿಎಂ ಕುರ್ಚಿಗೆ ಏರುವುದು ಸದ್ಯದ ಕಾರ್ಯತಂತ್ರದ ಗುರಿ ಮತ್ತು ಅದು ಅವರ ರಾಜಕೀಯ ಅಸ್ತಿತ್ವದ ಪ್ರಶ್ನೆ ಕೂಡ. ಹಾಗೆಯೇ, ಸಿದ್ದರಾಮಯ್ಯ ವಿರೋಧಿ ಬಣದ ನಾಯಕರಿಗೂ ಇದು ಅವರ ರಾಜಕೀಯ ಅಸ್ತಿತ್ವದ ಪ್ರಶ್ನೆ.
ಇನ್ನು ಜೆಡಿಎಸ್ ನಾಯಕರ ಪಾಲಿಗೆ ಇದು ಸರ್ಕಾರದ ಮತ್ತು ಅಧಿಕಾರದ ಅಳಿವು ಉಳಿವಿನ ಪ್ರಶ್ನೆ. ಆದರೆ, ವಿಚಿತ್ರವೆಂದರೆ, ದೋಸ್ತಿಗಳ ನಡುವೆ ಇದೀಗ ಏಕಕಾಲಕ್ಕೆ ಬಹುದಿಕ್ಕಿನಿಂದ ಏಕ ಕೇಂದ್ರಿತ ಕಾರ್ಯಾಚರಣೆಗಳು ಆರಂಭವಾಗಿವೆ. ಈ ಎಲ್ಲಾ ಕಾರ್ಯಾಚರಣೆ, ತಂತ್ರಗಾರಿಕೆಗಳ ಗುರಿ ಮಾತ್ರ ಸಿದ್ದರಾಮಯ್ಯ ಅವರೇ ಎಂಬುದು ಗುಟ್ಟೇನಲ್ಲ. ಅಂತಿಮವಾಗಿ ಈ ತಂತ್ರ, ಪ್ರತಿತಂತ್ರಗಳ ಆಚೆಗೆ ಯಾರು ನಿಜವಾಗಿಯೂ ಮೇಲುಗೈ ಸಾಧಿಸುತ್ತಾರೆ ಎಂಬುದು ದೋಸ್ತಿ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ ಎಂಬುದು ತಿಳಿದ ಸತ್ಯವೇ.
ಆದರೆ, ಈ ರಾಜಕೀಯ ಆಟ- ಮೇಲಾಟಗಳ ನಡುವೆ, ಈಗಾಗಲೇ ಸತತ ಭೀಕರ ಬರದ ಹೊಸ್ತಿಲಲ್ಲಿರುವ ರಾಜ್ಯದ ಜನತೆ ಅಬ್ಬೇಪಾರಿಗಳಾಗಲಿದ್ದಾರೆ ಎಂಬುದಂತೂ ದಿಟ. ಏಕೆಂದರೆ, ಬರ ನಿರ್ವಹಣೆಗೆ ಸಮರೋಪಾದಿಯಲ್ಲಿ ಟೊಂಕ ಕಟ್ಟಿ ನಿಲ್ಲಬೇಕಾದ ಹೊತ್ತಲ್ಲಿ ಇಡೀ ರಾಜ್ಯ ಸರ್ಕಾರ ತಮ್ಮ ಕುರ್ಚಿ ಉಳಿಸಿಕೊಳ್ಳಲು ಅವಡುಗಚ್ಚಿ ಜಂಗೀ ಕುಸ್ತಿಗೆ ಇಳಿದಿದೆ. ಇದು ಕರ್ನಾಟಕದ ಜನಸಾಮಾನ್ಯರ ದೌರ್ಭಾಗ್ಯ!