ಬೆಂಗಳೂರು: ರಂಗಭೂಮಿಯ ಹಿರಿಯ ಜೀವಿ, ರಂಗನಿರಂತರ ಕಾರ್ಯಾಧ್ಯಕ್ಷರಾಗಿದ್ದ ಡಿ ಕೆ ಚೌಟ ಅವರು ಜಯದೇವ ಆಸ್ಪತ್ರೆಯಲ್ಲಿಂದು ನಿಧನ ಹೊಂದಿದ್ದಾರೆ.
82 ವರ್ಷದ ಚೌಟ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.
ಬೆಂಗಳೂರು ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ದರ್ಬೆ ಕೃಷ್ಣಾನಂದ ಚೌಟ ಅವರು 1938ರ ಜೂನ್ 1ರಂದು ಕಾಸರಗೋಡು ಜಿಲ್ಲೆಯಲ್ಲಿ ಹುಟ್ಟಿದ್ದರು.
ತುಳು ಕನ್ನಡ ಸಾಹಿತಿಯಾಗಿದ್ದ ಚೌಟ ಮಿತ್ತಬೈಲ್ ಯಮುನಕ್ಕೆ ಮತ್ತು ಕರಿಯಜ್ಜನ ಕಥೆ ಎಂಬ ಕಾದಂಬರಿ, ತುಳು ನಾಟಕಗಳಾದ ಪಿಲಿಪತ್ತಿ ಗಡಸ್, ಮೂರು ಹೆಜ್ಜೆ ಮೂರು ಲೋಕ, ಪಾಟ್ ಪಜ್ಜೆಲು ನಾಟಕಗಳ ಮೂಲಕ ನಮ್ಮ ನಡುವೆ ಸದಾ ಜೀವಂತವಾಗಿರುತ್ತಾರೆ ಎಂದು ರಂಗಕರ್ಮಿಗಳು ವಿದಾಯದ ನುಡಿಗಳನ್ನಾಡಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಚೌಟ ಅವರು ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕ ಹಾಗೂ ರಂಗಕರ್ಮಿ ಶಶಿಕಾಂತ ಯಡಹಳ್ಳಿ, “ರಂಗಭೂಮಿಯ ಮಹಾಪೋಷಕರಾದ ಡಿ ಕೆ ಚೌಟರ ಅಗಲಿಕೆ ನಿಜಕ್ಕೂ ರಂಗಭೂಮಿಗೆ ನಷ್ಟ ಹಾಗೂ ನೋವನ್ನು ತರುವಂತಹುದು. ಸಿಜಿಕೆಯವರು ಕಟ್ಟಿ ಬೆಳೆಸಿದ ರಂಗನಿರಂತರವನ್ನು ಕ್ರಿಯಾಶೀಲವಾಗಿ ಮುಂದುವರೆಸಿಕೊಂಡು ಹೋಗುವಲ್ಲಿ ಚೌಟರ ಕೊಡುಗೆ ಮಹತ್ವದ್ದಾಗಿದೆ. ನೇಪಥ್ಯದಲ್ಲಿದ್ದುಕೊಂಡೇ ರಂಗಕರ್ಮಿ ಕಲಾವಿದರಿಗೆ ಆರ್ಥಿಕ ಸಹಾಯ ಮಾಡುತ್ತಿದ್ದ ಕೊಡುಗೈ ದಾನಿ ಚೌಟರ ಅನುಪಸ್ಥಿತಿ ಬಹು ದಿನಗಳ ಕಾಲ ಕಾಡುತ್ತದೆ. ಅವರ ನಾಟಕಗಳ ಮೂಲಕ ಚೌಟರವರು ನಮ್ಮ ನಡುವೆ ಸದಾ ಜೀವಂತವಾಗಿರುತ್ತಾರೆ,” ಎಂದು ಸಂತಾಪ ಸೂಚಿಸಿದ್ದಾರೆ.
ಡಿ ಕೆ ಚೌಟ ನಿಧನಕ್ಕೆ ಸಚಿವ ಕೃಷ್ಣ ಬೈರೇಗೌಡ ಸಂತಾಪ ಸೂಚಿಸಿದ್ದಾರೆ.
“ಡಿ ಕೆ ಚೌಟ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಹೆಸರು. ಅವರು ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ, ರಂಗನಿರಂತರದ ಪೋಷಕರಾಗಿ, ನಂತರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಮೂಲಕ ಆ ಸಂಸ್ಥೆಗಳ ಬೆಳವಣಿಗೆಗೆ ಕಾರಣರಾದರು. ಚಿತ್ರಕಲಾ ಪರಿಷತ್ತಿನ ಬೆಳವಣಿಗೆಯಲ್ಲಿ ಡಿ ಕೆ ಚೌಟ ಅವರ ಪಾತ್ರ ಬಹಳ ದೊಡ್ಡದು. ಚಿತ್ರಸಂತೆ ಮೂಲಕ ಅವರು ರಾಷ್ಟ್ರಮಟ್ಟದಲ್ಲಿ ಚಿತ್ರಕಲಾ ಪರಿಷತ್ತು ಖ್ಯಾತಿ ಪಡೆಯಲು ಕಾರಣರಾದರು. ದೊಡ್ಡ ಮಟ್ಟದಲ್ಲಿ ಕಲಾವಿದರಿಗೆ ನೆರವು ನೀಡುತ್ತಿದ್ದ ಚೌಟ ಸ್ವತಃ ಬರಹಗಾರರಾಗಿ ಅನೇಕ ಉತ್ತಮ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟಿದ್ದಾರೆ. ತುಳು ಸಾಹಿತ್ಯಕ್ಕೆ ಅವರ ಕೊಡುಗೆ ದೊಡ್ಡದು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಸನ್ಮಾನಗಳಿಗೆ ಅವರು ಪಾತ್ರರಾಗಿದ್ದರು. ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.