ವಿಶಾಖಾಪಟ್ಟಣಂ: ಕೆಲ ರಾಜ್ಯಗಳಲ್ಲಿ ಮಕ್ಕಳಿಗೆ ಮದ್ಯಾಹ್ನ ಬಿಸಿಯೂಟ ನೀಡುವ ಟೆಂಡರ್ ಪಡೆದಿರುವ ಪ್ರತಿಷ್ಠಿತ ಇಸ್ಕಾನ್ ಸಂಸ್ಥೆಯ ಕಚೇರಿಯ ಮೇಲೆ ಖಚಿತ ಮಾಹಿತಿಯ ಆಧಾರದಲ್ಲಿ ವಿಚಕ್ಷಣೆ ಹಾಗೂ ಜಾರಿ ಇಲಾಖೆ (ವಿಜಿಲೆನ್ಸ್ ಅಂಡ್ ಎನ್ ಫೋರ್ಸ್ಮೆಂಟ್) ಅಧಿಕಾರಿಗಳು ಸೋಮವಾರ ರಾತ್ರಿ ನಡೆಸಿದ ಅಚ್ಚರಿ ದಾಳಿಯಲ್ಲಿ ಮಕ್ಕಳ ಬಿಸಿಯೂಟಕ್ಕೆ ಎಂದು ಇರಿಸಿದ ಅಪಾರ ಪ್ರಮಾಣದ ಪಡಿತರ ಅಕ್ಕಿ ದಾಸ್ತಾನನ್ನು ಇತರೆಡೆಗೆ ಅಕ್ರಮವಾಗಿ ಕಳಿಸುತ್ತಿರುವುದು ಪತ್ತೆಯಾಗಿದೆ. ಸರ್ಕಾರದಿಂದ ಪಡೆದ ಟನ್ಗಟ್ಟಳೆ ಪಡಿತರ ಅಕ್ಕಿಯನ್ನು ವಿಶಾಖಾಪಟ್ಟಣಂನಿಂದ ಕಾಕಿನಾಡಾಕ್ಕೆ ಅಕ್ರಮವಾಗಿ ಕಳಿಸಲಾಗುತ್ತಿದೆ ಎಂದು ಅಧಿಕಾರಿಗಳು ದೂರಿದ್ದಾರೆ. ಕಾಕಿನಾಡಾದಿಂದ ಇತರೆ ಪಟ್ಟಣಗಳಿಗೆ ಹಾಗೂ ವಿದೇಶಗಳಿಗೆ ದೊಡ್ಡ ಕಂಟೈನರುಗಳ ಮೂಲಕ ರವಾನಿಸಲಾಗುತ್ತಿದೆ ಎಂಬ ಗುಮಾನಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸಲು ಸಿದ್ಧಮಾಡಿ ಇಟ್ಟಿದ್ದ ಬೃಹತ್ ಪ್ರಮಾಣದ ಪಿಡಿಎಸ್ ಅಕ್ಕಿಯನ್ನು V&E ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟ ನೀಡಲು ಇಸ್ಕಾನ್ ಸಂಸ್ಥೆಗೆ ಟೆಂಡರ್ ವಹಿಸಲಾಗಿದೆ.
ನಂಬಲರ್ಹ ಮೂಲಗಳ ಮಾಹಿತಿಯನ್ನು ಆಧರಿಸಿ ನೆರೆಯ ಆಂಧ್ರ ಪ್ರದೇಶದ V&E ಇಲಾಖೆಯ ಅಧಿಕಾರಿಗಳು ಸಾಗರ್ ನಗರ್ ಕಚೇರಿಯ ಮೇಲೆ ದಾಳಿ ನಡೆಸಿದಾಗ ಅಲ್ಲಿನ ಕಾರ್ಮಿಕರು ಅಕ್ಕಿಯನ್ನು ಲಾರಿಗೆ ಸಾಗಿಸುತ್ತಿದ್ದುದು ಕಂಡು ಬಂದಿತು. ಆಂಧ್ರ ಪ್ರದೇಶದ ನಂಬರ್ ಪ್ಲೇಟ್ ಹೊಂದಿದ್ದ ಲಾರಿಯ ಮೂಲಕ ಅಕ್ರಮ ಸಾಗಾಣಿಕೆಗೆ ತಯಾರಾಗಿದ್ದುದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ.
ಸುಮಾರು 110 ಗನ್ನಿಬ್ಯಾಗ್ಗಳಲ್ಲಿ ತುಂಬಿದ್ದ ಪಡಿತರ ಅಕ್ಕಿಯನ್ನು ಲಾರಿಗಳಿಗೆ ತುಂಬಲಾಗುತ್ತಿತ್ತು.
ಇಸ್ಕಾನ್ ತನ್ನ ಅಭಿಪ್ರಾಯವನ್ನು ತಿಳಿಸುವಂತೆ ಜಿಲ್ಲಾ ಅಧಿಕಾರಿ ವಿನಯ್ ಚಂದ್ ಇಸ್ಕಾನ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.
“ಅಕ್ಕಿಯನ್ನು ನಾಗರಿಕ ಸರಬರಾಜು ಇಲಾಖೆಯ ಪಡಿತರ ಸಾಮಾನು ಚೀಲಗಳಿಂದ ತೆಗೆದು ಪ್ಲಾಸ್ಟಿಕ್ ಚೀಲಗಳಿಗೆ ತುಂಬಿಸಿರುವುದು ನಿಜ ಹಾಗೂ ಅದನ್ನು ಕಾಕಿನಾಡಾಕ್ಕೆ ಸಾಗಾಟ ಮಾಡುವು ಉದ್ದೇಶ ಇತ್ತು ಎಂದು ಲಾರಿ ಚಾಲಕ ಕಂ ಮಾಲೀಕ ಈಶ್ವರ್ ರಾವ್ ಹಾಗೂ ಕಾರ್ಮಿಕ ವಿ ಸನ್ಯಾಸಿ ರಾವ್ ತಿಳಿಸಿದ್ದಾರೆ. ಇಸ್ಕಾನ್ ಪರವಾಗಿ ಅಡಿಗೆ ಮಾಡುವ ಜವಾಬ್ದಾರಿ ಹೊತ್ತಿರುವ ಪುರೋಹಿತ ಶ್ಯಾಮ್ ಸುಂದರ್ ಪ್ರಿಯಾ ದಾಸ್ ಈ ಅಕ್ರಮ ಸಾಗಾಣಿಕೆಯ ಹಿಂದಿದ್ದಾರೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುರೋಹಿತನೇ ನೇರವಾಗಿ ಲಾರಿ ಮಾಲೀಕನಿಗೆ ಕರೆ ಮಾಡಿ ಕರೆಸಿಕೊಂಡಿದ್ದ ಎನ್ನಲಾಗಿದೆ.
ಮದ್ಯಾಹ್ನ ಬಿಸಿಯೂಟದ 110 ಗನ್ನಿ ಬ್ಯಾಗ್ಗಳಲ್ಲಿದ್ದ ಅಕ್ಕಿಯ ಜೊತೆಗೆ ಇತರೆ 286 ಚೀಲಗಳ ಅಕ್ಕಿಯನ್ನೂ ನಾಗರೀಕ ಸರಬರಾಜು ಇಲಾಖೆಯ ಗನ್ನಿ ಬ್ಯಾಗುಗಳಿಂದ ತೆಗೆದು ಬೇರೆ ಚೀಲಗಳಿಗೆ ವರ್ಗಾಯಿಸಲಾಗಿತ್ತು. ಒಟ್ಟು 396 ಚೀಲಗಳ (19.80 ಮೆಟ್ರಿಕ್ ಟನ್) ಅಕ್ಕಿಯನ್ನು ನಾಗರಿಕ ಸರಬರಾಜು ಇಲಾಖೆಯ ಚೀಲಗಳಿಂದ ವರ್ಗಾಯಿಸಲಾಗಿತ್ತಲ್ಲದೇ ಅಕ್ರಮ ಸಾಗಾಣಿಕೆಗೆ ಸಿದ್ಧಪಡಿಸಿಕೊಂಡು ಇಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಪ್ಲಾಸ್ಟಿಕ್ ಚೀಲಗಳ ಮೇಲೆ “ಸಾಯಿಲೋನಿ ಅಂಡ್ ಎಕ್ಸ್ಪೋರ್ಟ್ ಪಾರ್ ಶ್ರೀ ಸೀತಾರಾಮಾಂಜನೇಯ ಕಾಕಿನಾಡ’ ಎಂದು ಬರೆಯಲಾಗಿತ್ತು. ಅಂದರೆ ಆ ಅಕ್ಕಿ ಕಾಕಿನಾಡಕ್ಕೆ ಸಾಗಿಸಲು ಸಿದ್ಧವಾಗಿತ್ತು ಎನ್ನಲಾಗಿದೆ.
ಈ ರೀತಿಯ ಅಕ್ರಮ ಸಾಗಾಣಿಕೆ ಹಲವು ತಿಂಗಳಿಂದ ನಡೆಯುತ್ತಿದ್ದು ವಿದೇಶಕ್ಕೆ ಸಾಗಾಣಿಕೆಯಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಗತ್ಯ ಸಾಮಗ್ರಿ ಕಾಯ್ದೆ 1955ರ ಅಡಿ ಗವಾರಾ ಈಶ್ವರ್ ರಾವ್, ವಿ ಸನ್ಯಾಸಿ ರಾವ್, ಮ್ಯಾನೇಜರ್ ಎಂ ಎಸ್ ಎನ್ ಮೂರ್ತಿ ಹಾಗೂ ಇಸ್ಕಾನ್ ಪುರೋಹಿತ ಶ್ಯಾಮ ಸುಂದರ್ ಪ್ರಿಯಾ ದಾಸ್ ಮೇಲೆ ಪ್ರಕರಣ ದಾಖಲಿಸಲಾಗಿದೆ.
“ಮಾರ್ಚ್ 2019ರ ನಂತರದಲ್ಲಿ ಇಸ್ಕಾನ್ ಸ್ಟಾಕ್ ರಿಜಿಸ್ಟರ್ ದಾಖಲಾತಿ ಇಟ್ಟಿರಲಿಲ್ಲ ಎಂಬುದು ನಮ್ಮ ಪರಿಶೀಲನೆಯಲ್ಲಿ ತಿಳಿದುಬಂದಿದೆ. ಇಸ್ಕಾನ್ ಪುರೋಹಿತ ಶ್ಯಾಮ ಸುಂದರ್ ಪ್ರಿಯಾ ದಾಸ್ ಗೆ ಅಕ್ಕಿಯನ್ನು ಅಕ್ರಮವಾಗಿ ಇತರೆಡೆ ಸಾಗಿಸಲು ಇದು ಅನುಕೂಲ ಮಾಡಿಕೊಟ್ಟಿದೆ” ಎಂದು DSP ಹಾಗೂ ವಿಶಾಖಾಪಟ್ಟಣಂ ಪ್ರಾದೇಶಿಕ ವಿಚಕ್ಷಣಾ ಜಾರಿ ಅಧಿಕಾರಿ ಕೆ ಶ್ರಾವಣಿ ತಿಳಿಸಿದ್ದಾರೆ.
ಆರೋಪ ಅಲ್ಲಗಳೆದ ಇಸ್ಕಾನ್
ಮದ್ಯಾಹ್ನದ ಬಿಸಿಯೂಟದ ಅಕ್ಕಿಯನ್ನ ಬೇರೆಡೆ ಸಾಗಿಸಲಾಗುತ್ತಿದೆ ಎಂಬ ಆರೋಪವನ್ನು ಇಸ್ಕಾನ್ ನಿರಾಕರಿಸಿದೆ. “ನಾವು ಬೇರೆ ಬೇರೆ ದಾನಿಗಳಿಂದ ಅಕ್ಕಿಯನ್ನು ಸಂಗ್ರಹಿಸುತ್ತೇವೆ. ಹೀಗೆ ದಾನ ಮಾಡಿದ ಅಕ್ಕಿ ಒಳ್ಳೆಯ ಗುಣಮಟ್ಟದಲ್ಲಿರೋದಿಲ್ಲ. ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿ ನಾವು ತೆಗೆದು ಹಾಕಿರುವ ನಮ್ಮ ಮಾಜಿ ಮ್ಯಾನೇಜರ್ V&E ಇಲಾಖೆಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ರೈಡ್ ಮಾಡಿಸಿದ್ದಾರೆ. ಮದ್ಯಾಹ್ನದ ಬಿಸಿಯೂಟದ ಅಕ್ಕಿಗೆ ಸಂಬಂಧಿಸಿದ ಎಲ್ಲಾ ರಶೀದಿಗಳು ನಮ್ಮ ಬಳಿ ಇವೆ, ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿದ್ದಾರೆ” ಎಂದುಇಸ್ಕಾನ್ ಅಧ್ಯಕ್ಷ ಸಾಂಬಾ ದಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.