17ನೆಯ ಲೋಕಸಭೆಯ ಕಲಾಪಗಳು ಆರಂಭಗೊಂಡು ಮೂರು ದಿನಗಳಾದವು. ಮೊದಲನೆಯ ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉತ್ತಮ ಮಾತುಗಳನ್ನಾಡಿದರು. ಅವರು ಮಾತಾಡುತ್ತಾ ಸಂಸತ್ತಿನ ಒಳಗೆ ಇರುವ ಪ್ರತಿಪಕ್ಷಗಳಿಗೆ ವಿಶ್ವಾಸ ಮೂಡಿಸುವ ಕೆಲವು ಮಾತುಗಳನ್ನು ಆಡಿದರು. “ಸಂಸತ್ತಿಗೆ ಕಾಲಿಟ್ಟ ನಂತರ ನಾವು “ಪಕ್ಷ-ವಿಪಕ್ಷ” ಎಂಬುದನ್ನು ಮರೆತು, ಇಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು “ನಿಷ್ಪಕ್ಷ”ವಾಗಿ ನಮ್ಮ ಕೆಲಸ ನಿರ್ವಹಿಸಬೇಕು” ಎಂದರು. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿ ಮೋದಿ, “ಸಂಸದೀಯ ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳ ಸಕ್ರಿಯ ಪಾತ್ರ ಅತ್ಯಂತ ಮುಖ್ಯವಾದದ್ದು. ವಿಪಕ್ಷಗಳು ತಮ್ಮ ಸಂಖ್ಯೆ ಸಣ್ಣದು ಎಂದು ಆತಂಕಪಡಬೇಕಾಗಿಲ್ಲ. ಅವರು ಸದನದ ಕಲಾಪಗಳಲ್ಲಿ ನಿರ್ಭಿಡೆಯಿಂದ ಪಾಲ್ಗೊಳ್ಳುತ್ತಾರೆಂದು ನನಗೆ ವಿಶ್ವಾಸವಿದೆ. ಇಲ್ಲಿನ ಪ್ರತಿಯೊಬ್ಬರ ಭಾವನೆಯೂ ನಮಗೆ ಮುಖ್ಯ” ಎಂದು ಮಾತನಾಡಿದರು.
ಮೋದಿಯವರ ಈ ಮಾತುಗಳು ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಜವಾಬ್ದಾರಿಯುತ ಪ್ರಧಾನಿಯೊಬ್ಬ ಆಡಬೇಕಾದ ಮಾತುಗಳಾಗಿದ್ದವು. ಪ್ರತಿಪಕ್ಷ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಈ ಮಾತುಗಳ ಮೂಲಕ ನರೇಂದ್ರ ಮೋದಿ ಸೈ ಎನಿಸಿಕೊಂಡರು.
ಆದರೆ, ಕಳೆದ 5 ವರ್ಷಗಳಿಂದ ನೋಡಿದಾಗ ಅರ್ಥವಾಗುವ ಒಂದು ವಿಷಯ ಏನೆಂದರೆ ಮೋದಿ ಮಾತೊಂದನ್ನು ಚೆನ್ನಾಗಿ ಆಡುತ್ತಾರೆ. ಉಳಿದಂತೆ ಏನಾಗಬೇಕೋ ಅದೇ ಆಗುತ್ತಿರುತ್ತದೆ. ಹಾಗೆ ಆಗುವುದಕ್ಕೂ ಮೋದಿ ಆಡಿದ ಮಾತುಗಳಿಗೂ ತಾಳಮೇಳ ಇರುವುದಿಲ್ಲ. ನಂತರ ಮಾನ್ಯ ಮೋದಿಯವರು ಆಗಿದ್ದರ ಯಾವ ಕುರಿತೂ ಮಾತೇ ಆಡುವುದಿಲ್ಲ, ಮೌನಿ ಬಾಬಾ ಆಗಿಬಡುತ್ತಾರೆ! ಮೊನ್ನೆ ಅಂದರೆ ಸಂಸತ್ತಿನಲ್ಲಿ ಮೋದಿ ಮೇಲಿನ ಮಾತುಗಳನ್ನು ಆಡಿದ ಮರುದಿನ ಆದದ್ದೂ ಹೀಗೆಯೇ.
ಜೂನ್ 17ರಂದು ನರೇಂದ್ರ ಮೋದಿ ಯಾವ ಆಶಯಗಳನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ್ದರೋ ಅದಕ್ಕೆ ತದ್ವಿರುದ್ಧವಾದ ಘಟನೆಗಳು ಮರುದಿನ ಅಂದರೆ ಜೂನ್ 18ರಂದು ಸಂಸತ್ತಿನಲ್ಲಿ ಜರುಗಿದವು. ಅಂದು ನಡೆದದ್ದನ್ನು ವಿವರಿಸಲು ಬಳಸಬಹುದಾದ ಸೂಕ್ತ ನುಡಿಗಟ್ಟು ಎಂದರೆ “ಬಹುಮತದ ಗೂಂಡಾಗಿರಿ” ಎನಿಸುತ್ತದೆ.
ಕಾಂಗ್ರೆಸ್ ಪಕ್ಷದ ಹಿರಿಯ ಸಂಸದೆ ಸೋನಿಯಾ ಗಾಂಧಿ, ಆಲ್ ಇಂಡಿಯಾ ಮಜ್ಲಿಸ್ –ಇ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಸಂಸದ ಅಸಾದುದೀನ್ ಓವೈಸಿ, ಸಮಾಜವಾದಿ ಪಕ್ಷದ ಶಾಫಿಕರ್ ರಹಮಾನ್ ಬಾರ್ಕ್ ಮತ್ತು ಎಸ್ ಟಿ ಹಸ್ಸನ್, ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಸಂಸದರು ಮತ್ತು ಡಿಎಂಕೆಯ ಕೆಲವು ಸಂಸದರು ಪ್ರತಿಜ್ಞಾವಿಧಿ ಸ್ವೀಕರಿಸುವಾಗ ಸಂಸತ್ತಿನಲ್ಲಿ ಬಹುಮತ ಹೊಂದಿರುವ ಬಿಜೆಪಿ ಸಂಸದ ತೋರಿದ ಅನುಚಿತ ವರ್ತನೆ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕಿಯಾಯಿತು.
ಸ್ವತಃ ತಮ್ಮ ಪ್ರಧಾನಿ ನರೇಂದ್ರ ಮೋದಿಯ ಒಂದು ದಿನ ಮುಂಚೆ ಆಡಿದ್ದ ಮಾತುಗಳನ್ನೇ ಗಾಳಿಗೆ ತೂರಿದ ಬಿಜೆಪಿ ಸದಸ್ಯರು ಪ್ರತಿಪಕ್ಷ ಸದಸ್ಯರನ್ನು ಲೇವಡಿ ಮಾಡಿದರು. ಪತ್ರಿಪಕ್ಷಗಳ ಸದರು ಪ್ರತಿಜ್ಞಾ ವಿಧಿ ಸ್ವೀಕರಿಸಲು ಬರುವ ಸಂದರ್ಭದಲ್ಲಿ “ಜೈ ಶ್ರೀ ರಾಂ’, ‘ಭಾರತ್ ಮಾತಾ ಕೀ ಜೈ’ ಮತ್ತು ‘ವಂದೇ ಮಾತರಂ” ಘೋಷಣೆಗಳನ್ನು ಬಿಜೆಪಿಯ ದೊಡ್ಡ ಸಂಖ್ಯೆಯ ಸಂಸದರು ಕೂಗಿ ಪ್ರತಿಪಕ್ಷ ಸದಸ್ಯರಿಗೆ ಇರುಸು ಮುರುಸು ಮಾಡಲು ಪ್ರಯತ್ನಿಸಿದ್ದು ನೀಚತನದ ದ್ಯೋತಕವಾಗಿತ್ತು. ಸೋನಿಯಾ ಗಾಂಧಿ ಬಂದ ಸಂದರ್ಭದಲ್ಲಿ ಘೋಷಣೆಗಳನ್ನು ಕೂಗಲಿಲ್ಲವಾದರೂ ಒಬ್ಬ ಬಿಜೆಪಿ ಸಂಸದ “ನೀವು ಹಿಂದಿಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು” ಎಂದು ಹೇಳಿದ್ದು ಮೂಲಕ ಕಾಂಗ್ರೆಸ್ ಹಿರಿಯ ಸದಸ್ಯೆಯ ಇಟಲಿ ಮೂಲದ ಕುರಿತಾಗಿ ಅಪಹಾಸ್ಯ ಮಾಡುವ ಪ್ರಯತ್ನವಾಗಿತ್ತು. ಪಶ್ಚಿಮ ಬಂಗಾಳದ ಟಿಎಂಸಿಯ ಪ್ರತಿ ಸಂಸದ ಬಂದಾಗಲೂ, ಪ್ರತಿ ಮುಸ್ಲಿಂ ಸಂಸದ ಬಂದಾಗಲೂ “ಜೈ ಶ್ರೀರಾಂ” ಘೋಷಣೆ ಮುಗಿಲು ಮುಟ್ಟುವಂತೆ ಕೂಗಿದರು.
ಬಿಜೆಪಿಯ ಸಂಸದರ ಈ ಘೋಷಣೆಗಳು ಏನನ್ನು ಪ್ರತಿಬಿಂಬಿಸುತ್ತವೆ?
ಪ್ರತಿಪಕ್ಷಗಳ ಸಂಸದರು ಪ್ರತಿಜ್ಞಾವಿಧಿ ಸ್ವೀಕರಿಸುವ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಜೈ ಶ್ರೀರಾಂ ಎಂದು ಕೂಗಿದ್ದು ರಾಮನ ಮೇಲಿನ ಭಕ್ತಿಯಾಗಿರಲಿಲ್ಲ, ಭಾರತ್ ಮಾತಾ ಕೀ ಜೈ ಎಂದಿದ್ದು ದೇಶಭಕ್ತಿಯೂ ಆಗಿರಲಿಲ್ಲ, ಹಾಗೆಯೇ ವಂದೇ ಮಾತರಂ ಘೋಷಣೆ ಭಾರತ ಮಾತೆಗೆ ವಂದಿಸುವುದೂ ಆಗಿರಲಿಲ್ಲ. ಬದಲಿಗೆ ಈ ಘೋಷಣೆಗಳು ಅಪ್ಪಟ ಪ್ರಜಾಪ್ರಭುತ್ವ ವಿರೋಧಿ ಗೂಂಡಾಗಿರಿಯನ್ನು ತೋರಿಸಿದವು.“ಲೋಕಸಭೆಯ 543 ಸೀಟುಗಳ ಪೈಕಿ 303 ಸೀಟು ಹೊಂದಿರುವ ನಾವು ಬಹುಸಂಖ್ಯಾತರು, ಇಲ್ಲಿ ನಮ್ಮದೇ ಕಾರುಬಾರು; ನೀವು, ನಿಮ್ಮ ಅಭಿಪ್ರಾಯ, ವಿಚಾರಗಳು, ನಿಮ್ಮ ಪಕ್ಷದ ಸಿದ್ಧಾಂತಗಳು ನಮ್ಮಿಂದ ಅಪಹಾಸ್ಯಗೊಳ್ಳಲಿಕ್ಕೇ ಲಾಯಕ್ಕು” ಎಂಬ ಸಂದೇಶವನ್ನು ಬಿಜೆಪಿ ಸಂಸದರ ಈ ನಡೆವಳಿಕೆ ತೋರಿಸಿತು ಎಂಬುದು ಸ್ಪಷ್ಟ. ಹಾಗಿದ್ದರೆ, ಹಿಂದಿನ ದಿನವಷ್ಟೇ ಪ್ರಧಾನಿ ಮೋದಿ ಹೇಳಿದ್ದ “ನಿಷ್ಪಕ್ಷ”, ಪ್ರಜಾಪ್ರಭುತ್ವದ ವಿಚಾರಗಳು ಎಲ್ಲಿ ಹೋದವು?
ದುರಂತವೆಂದರೆ ಪ್ರತಿಪಕ್ಷಗಳ ಸದಸ್ಯರನ್ನು ಬಿಜೆಪಿ ಸಂಸದರು ಹೀಗೆ ತಮ್ಮ ಅಸಭ್ಯ ಎನಿಸುವ ವರ್ತನೆಯಿಂದ ಮೂದಲಿಸುವಾಗ ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ಕನಿಷ್ಟ ತಡೆಯುವ ಪ್ರಯತ್ನ ಮಾಡಲಿಲ್ಲ. ಅಲ್ಲಿ ಇದಕ್ಕೆಲ್ಲಾ ಸಾಕ್ಷಿಯಾಗಿದ್ದ ಹಿರಿಯ ಬಿಜೆಪಿ ನಾಯಕರೊಬ್ಬರೂ ತಮ್ಮ ಸಂಸದ ದುಂಡಾವರ್ತನೆಯನ್ನು ನಿಯಂತ್ರಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ತೆಲಂಗಾಣದ ಸಿಕಂದರಾಬಾದ್ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸತ್ತನ್ನು ಪ್ರವೇಶಿಸಿರುವ ಬಿಜೆಪಿ ಸಂಸದ ಕಿಶನ್ ರೆಡ್ಡಿ ಮಾತ್ರ ಇದಕ್ಕೆ ಅಪವಾದವೆಂಬಂತೆ ಆಗಾಗ ತಮ್ಮ ಸಂಸದರನ್ನು ತಡೆಯುವ ಪ್ರಯತ್ನ ನಡೆಸುತ್ತಿದ್ದರು.
ಸಂಸತ್ತಿನ ಕಲಾಪ ಆರಂಭಗೊಂಡ ಆರಂಭದಲ್ಲಿ, ಪ್ರತಿಜ್ಞಾವಿಧಿ ಸ್ವೀಕರಿಸುವ ಸಂದರ್ಭದಲ್ಲಿಯೇ ಈ ಬಗೆಯ ಬಹುಮತದ ಗೂಂಡಾಗಿರಿಯನ್ನು ಆಳುವ ಪಕ್ಷದ ಸದಸ್ಯರು ಪ್ರದರ್ಶಿಸಿದರೆ ಮುಂದಿನ 5 ವರ್ಷಗಳ ಕಲಾಪಗಳು ಎಷ್ಟರ ಮಟ್ಟಿಗೆ ನಡೆಯಬಹುದು ಎಂದು ಯಾರಾದರೂ ಊಹಿಸಬಹುದಾಗಿದೆ.
ಪ್ರತಿಪಕ್ಷ ಸದಸ್ಯರ ಪ್ರಬುದ್ಧ ತಿರುಗೇಟು!
ತಮ್ಮನ್ನು ಘೋಷಣೆಗಳ ಮೂಲಕ ಮೂದಲಿಸಲು ಯತ್ನಿಸಿದ ಬಿಜೆಪಿ ಸಂಸದರ ಪ್ರಯತ್ನಗಳಿಗೆ ಪ್ರತಿಪಕ್ಷಗಳ ಸದಸ್ಯರು ಅಷ್ಟೇ ಪ್ರಬುದ್ಧತೆಯಿಂದ ತಿರುಗೇಟು ನೀಡಿದ್ದೂ ನಡೆಯಿತು.
ಬಿಜೆಪಿ ಸಂಸದರ ಜೈ ಶ್ರೀರಾಂ ಘೋಷಣೆಗಳ ನಡುವೆ ನಗುತ್ತಲೇ ನಡೆದ ಅಸಾದುದೀನ್ ಓವೈಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿ “ಜೈ ಭೀಮ್, ತಕದೀರ್ ಅಲ್ಲಾ ಹೂ ಅಕಬರ್, ಜೈ ಹಿಂದ್” ಘೋಷಣೆ ಹೇಳಿದರು. ಇದರ ಮೂಲಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನುಸ್ಮರಿಸಿದ ಓವೈಸಿ ತನ್ನ ಮುಸ್ಲಿಂ ಅಸ್ಮಿತೆಯನ್ನು ಸದನದಲ್ಲಿ ಒತ್ತಿ ಹೇಳಿದರು ಹಾಗೂ ಜೈ ಹಿಂದ್ ಹೇಳುವ ಮೂಲಕ ತನ್ನ ತಾಯ್ನೆಲಕ್ಕೂ ಗೌರವ ಸೂಚಿಸಿದರು.
ಸಮಾಜವಾದಿ ಪಕ್ಷದ ಬಾರ್ಕ್ ಅವರು ತಮ್ಮ ಪ್ರತಿಜ್ಞಾವಿಧಿ ಸ್ವೀಕರಿಸಿದ ಬಳಿಕ “ಸಂವಿಧಾನ ಜಿಂದಾಬಾದ್, ಆದರೆ ವಂದೇ ಮಾತರಂ ಎನ್ನುವುದು ಇಸ್ಲಾಂಗೆ ವಿರುದ್ಧವಾಗಿರುವುದರಿಂದ ನಾನು ಹಾಗೆ ಹೇಳುವುದಿಲ್ಲ” ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಉತ್ತರ ಪ್ರದೇಶದ ಅವರ ಸಹೋದ್ಯೋಗಿ ಹಸ್ಸನ್ “ಹಿಂದೂಸ್ತಾನ್ ಜಿಂದಾಬಾದ್” ಎಂಬ ಘೋಷಣೆಯ ಮೂಲಕ ತಮ್ಮ ಪ್ರತಿಜ್ಞಾ ವಿಧಿ ಪೂರೈಸಿದರು.
ಇನ್ನು ಬಿಜೆಪಿ ಸಂಸದರ ಜೈ ಶ್ರೀರಾಮ್ ಘೋಷಣೆಗೆ ಟಿಎಂಸಿ ಸದಸ್ಯರ ತಿರುಗೇಟು ಬೇರೆಯದೇ ಶೈಲಿಯಲ್ಲಿತ್ತು. ಉದಾಹರಣೆಗೆ, ಟಿಎಂಸಿ ಸಂಸದ ಕಾಕೋಲಿ ಘೋಶ್ ದಸ್ತಿದಾರ್ ತಮ್ಮ ಪ್ರತಿಜ್ಞಾ ವಿಧಿ ಕೊನೆಗೊಳಿಸುವಾಗ “ಕೈ ಮಾ ಕಾಳಿ” ಎಂದು ಕೂಗಿದರು. ಇದು ಹಿಂದೂ ಧರ್ಮದ ರಾಮನನ್ನು ಪ್ರತಿನಿಧಿಸುವ ವೈಷ್ಣವ ಪಂಥಕ್ಕೆ ವಿರುದ್ಧ ನೆಲೆಯ ತಾಂತ್ರಿಕ ಪಂಥದ ಕಾಳಿಗೆ ಜೈಕಾರ ಹಾಕಿದ್ದಾಗಿತ್ತು. ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಎಂಬುವವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ದೇವಿ ಕಾಳಿಗೆ ಗೌರವ ಸಲ್ಲಿಸುವ ಸಂಸ್ಕೃತ ಶ್ಲೋಕವೊಂದನ್ನು ಪಠಿಸಿದಾಗ ಬಿಜೆಪಿ ಸಂಸದರು ಕಕ್ಕಾಬಿಕ್ಕಿಯಾದಂತೆ ಕಂಡಿತು!. ಟಿಎಂಸಿ ಸಂಸದರೆಲ್ಲರೂ ಜೈ ಹಿಂದ್ ಜೊತೆಯಲ್ಲಿ ಜೈ ಬಾಂಗ್ಲಾ ಎಂದೂ ತಮ್ಮ ಬಂಗಾಳಿ ಅಸ್ಮಿತೆಯನ್ನು ಪ್ರದರ್ಶಿಸಿದರು.
ಹಾಗೆ ನೋಡಿದರೆ ಸಂಸತ್ತಿನಲ್ಲಿ ಪ್ರವೇಶಿಸುವ ಪ್ರತಿಯೊಬ್ಬ ಸಂಸದನೂ ತನ್ನ ಪಕ್ಷ ಸಿದ್ಧಾಂತವನ್ನು ಮೀರಿ ತನ್ನ ಕ್ಷೇತ್ರದ ಜನತೆಗೆ ಯಾವುದೇ ರಾಗ ದ್ವೇಶಗಳಿಲ್ಲದೆ, ಭಯ ಅಥವಾ ಪ್ರೇಮವಿಲ್ಲದೆ ಸೇವೆ ಸಲ್ಲಿಸುವ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುತ್ತಾನೆ. ಒಬ್ಬ ಸಂಸದ ಯಾವುದೇ ಜಾತಿ, ಧರ್ಮ, ಪಕ್ಷ ಸಿದ್ಧಾಂತ ಹೊಂದಿದ್ದರೂ ಒಬ್ಬ ಸಂಸದನಾಗಿ ಸಂವಿಧಾನವನ್ನು ಆತ ಎತ್ತಿ ಹಿಡಿಯಬೇಕಾಗುತ್ತದೆ. ಆದರೆ ಜೂನ್ 18ರಂದು ಲೋಕಸಭೆಯ ಸಂಸದರು ಸದನದಲ್ಲಿ ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳನ್ನು, ಪಕ್ಷದ ಸಿದ್ಧಾಂತಗಳನ್ನು ಎತ್ತಿ ಹಿಡಿಯುವಂತಾಗಿರುವುದು ದೇಶದ ಪ್ರಜಾಪ್ರಭುತ್ವದ ದೃಷ್ಟಿಯಿಂದ ದುಷ್ಪರಿಣಾಮ ಬೀರುವಂತಾಗಿದೆ.
ಈ ವಿಷಯದಲ್ಲಿ ಪ್ರತಿಪಕ್ಷಗಳ ಸಂಸದರ ನಡವಳಿಕೆಗಳು ಬಹುಮತ ಹೊಂದಿರುವ ಬಿಜೆಪಿ ಸಂಸದರ ಬಹುಮತದ ಗೂಂಡಾಗಿರಿಗೆ ಪ್ರತಿಕ್ರಿಯಾತ್ಮಕವಾಗಿದ್ದವೇ ಹೊರತು ಅವರಿಂದ ಆರಂಭವಾಗಿರಲಿಲ್ಲ.
ಇದು ಹೀಗೇ ಮುಂದುವರಿಯುತ್ತಾ ಹೋದರೆ ಭಾರತದ ರಾಜಕೀಯ ಪ್ರಜಾಪ್ರಭುತ್ವ ಅಪಾಯಕಾರಿ ದಿನಗಳನ್ನು ಎದುರಿಸಲಿದೆ.