ಕಳೆದ ಎರಡು ದಿನಗಳಿಂದ ಬಿರುಸುಗೊಂಡಿರುವ ರಾಜ್ಯದ ಮೈತ್ರಿ ಸರ್ಕಾರದ ದೋಸ್ತಿ ಪಕ್ಷಗಳ ನಡುವಿನ ಪರಸ್ಪರ ದೋಷಾರೋಪಣೆ, ಮುಸುಕಿನ ಗುದ್ದಾಟ ಮತ್ತು ಪರಸ್ಪರ ಬೆದರಿಕೆ- ಹೆದರಿಕೆಯ ವರಸೆಗಳು ಗುರುವಾರವೂ ಮುಂದುವರಿದಿದ್ದು, ಸ್ವತಃ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಮತ್ತು ರಾಜ್ಯ ಅಧ್ಯಕ್ಷ ಎಚ್ ವಿಶ್ವನಾಥ್ ಅವರು ಪ್ರತ್ಯೇಕ ಪತ್ರಿಕಾಗೋಷ್ಠಿಗಳ ಮೂಲಕ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ಸಂದೇಶ ರವಾನೆಯ ಪ್ರಯತ್ನ ಮಾಡಿದ್ದಾರೆ!
ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ದೆಹಲಿಗೆ ಭೇಟಿ ನೀಡಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ, ಮೈತ್ರಿ ಸರ್ಕಾರ ಮುಂದುವರಿಸುವ ಬಗ್ಗೆ ಯೋಚನೆ ಮಾಡಿ. ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ಸಿಗೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ಹೇಳಿದ್ದಾರೆ ಎಂಬ ಮಾಧ್ಯಮಗಳ ವರದಿಗಳ ಬೆನ್ನಲ್ಲೇ, ಜೆಡಿಎಸ್ ನಾಯಕರ ಈ ಪತ್ರಿಕಾಗೋಷ್ಠಿಗಳು ನಡೆದಿವೆ ಎಂಬುದು ಗಮನಾರ್ಹ.
ಈಗಾಗಲೇ, ಪ್ರಮುಖವಾಗಿ ತಾವು ಸಂಪುಟ ಅಥವಾ ಸಮನ್ವಯ ಸಮಿತಿ ಸೇರಲು ತಮ್ಮ ರಾಜಕೀಯ ವಿರೋಧಿ ಸಿದ್ದರಾಮಯ್ಯ ಅಡ್ಡಗಾಲಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿಯೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್ ವಿಶ್ವನಾಥ್, ತಮ್ಮ ರಾಜೀನಾಮೆ ಅಂಗೀಕರಿಸದೇ ಇದ್ದಲ್ಲಿ ತಾವು ಪಕ್ಷದ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಜೆಡಿಎಸ್ ನಾಯಕರಿಗೆ ಪರೋಕ್ಷ ಧಮಕಿ ಹಾಕಿದ್ದಾರೆ. ಅದೇ ವೇಳೆ, ವಿಶ್ವನಾಥ್, ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಹೇಳದೇ, ಒಬ್ಬ ನಾಯಕನನ್ನು ರಾಜಕೀಯವಾಗಿ ಮುಗಿಸುವುದು ಒಳ್ಳೆಯದಲ್ಲ. ನಾನೂ ಕಾಂಗ್ರೆಸ್ಸಿನಲ್ಲಿ ಇದ್ದಿದ್ರೆ ರೋಷನ್ ಬೇಗ್ ಅವರಿಗಾದ ಗತಿಯೇ ನನಗೂ ಆಗುತ್ತಿತ್ತು ಎಂದಿದ್ದಾರೆ. ಅಲ್ಲದೆ, “ಸಮನ್ವಯದ ಅರ್ಥವೇ ಗೊತ್ತಿಲ್ಲದ ನೀವು ಯಾವ ಸೀಮೆ ಸಮನ್ವಯ ಸಮಿತಿ ಅಧ್ಯಕ್ಷರ್ರೀ..” ಎಂದು ಕಿಡಿಕಾರಿದ್ದಾರೆ.
ವಿಶ್ವನಾಥ್ ಅವರ ಈ ಆಕ್ರೋಶ ಒಂದು ಕಡೆಯಾದರೆ, ಮತ್ತೊಂದು ಕಡೆ, ಅವರ ಪತ್ರಿಕಾಗೋಷ್ಠಿಯ ಬೆನ್ನಲ್ಲೇ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು, ತಮ್ಮ ಎಂದಿನ ವ್ಯಂಗ್ಯ ಮತ್ತು ನಿರುದ್ವಿಗ್ನ ಶೈಲಿಯಲ್ಲೇ ಕಾಂಗ್ರೆಸ್ ನಾಯಕತ್ವಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಜೆಡಿಎಸ್ ನೊಂದಿಗಿನ ಮೈತ್ರಿಯಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಪೆಟ್ಟು ಬಿದ್ದಿದೆ. ಹಾಗಾಗಿಯೇ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ. ಆ ಹಿನ್ನೆಲೆಯಲ್ಲಿ ಇನ್ನೂ ಎಷ್ಟು ದಿನ ಈ ಮೈತ್ರಿ ಮುಂದುವರಿಸಬೇಕು ಎಂಬುದನ್ನು ನಿರ್ಧರಿಸಿ ಎಂದು ರಾಹುಲ್ ಗಾಂಧಿಯವರಿಗೆ ಸಿದ್ದರಾಮಯ್ಯ ಹೇಳಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಗೌಡರು, ಕೆಲವರು ನಾಯಕರು ಹಾಗೆ ಹೇಳಿದ್ದಾರೆ. ಆ ಬಗ್ಗೆ ನಾನೇನೂ ಹೇಳುವುದಿಲ್ಲ. ಆದರೆ, ಒಂದು ನೆನಪಿರಲಿ, ಈ ಸರ್ಕಾರ ರಚಿಸಿದ್ದು ನಾನಲ್ಲ. ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ ಬೇಡ ಎಂದೇ ನಾನು ಹೇಳಿದ್ದೆ. ಆದರೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಗುಲಾಂ ನಬಿ ಆಜಾದ್ ಅವರನ್ನು ಕಳಿಸಿ, ಸರ್ಕಾರದ ರಚನೆ ಮಾಡೋಣ ಎಂದರು. ಆಗಲೂ ನಾನು ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ ಆಗಲಿ ಎಂದೆ. ಅದಕ್ಕೂ ಅವರು ಒಪ್ಪದೆ, ಕುಮಾರಸ್ವಾಮಿಯೇ ಸಿಎಂ ಆಗಲಿ ಎಂದು ಸರ್ಕಾರ ರಚನೆಗೆ ಕಾರಣರಾದರು. ನಂತರ ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್, ಕೆ.ಎಚ್.ಮುನಿಯಪ್ಪ ಮೈತ್ರಿ ಸರ್ಕಾರ ಮಾಡೋಣ ಎಂದು ಬಂದರು ಎಂದು ದೇವೇಗೌಡರು ಹೇಳಿದ್ದಾರೆ.
ಆ ಮೂಲಕ, ಮೈತ್ರಿ ಸರ್ಕಾರ ತಮ್ಮ ಕೂಸಲ್ಲ, ಅದು ಕಾಂಗ್ರೆಸ್ ನಾಯಕರ ಕೂಸು, ಅದರ ಆಯಸ್ಸನ್ನು ನಿರ್ಧರಿಸುವುದು ಕೂಡ ಅದೇ ಕಾಂಗ್ರೆಸ್ ನಾಯಕರೇ ಹೊರತು ತಾವಲ್ಲ ಎಂಬ ಸಂದೇಶವನ್ನೂ ನೇರವಾಗಿ ರವಾನಿಸಿದ್ದಾರೆ.
ಅದೇ ವೇಳೆ, ಸರ್ಕಾರ ಮತ್ತು ತಮ್ಮ ಪಕ್ಷದ ಬಗ್ಗೆ ಕಾಂಗ್ರೆಸ್ ರಾಜ್ಯ ನಾಯಕರು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿ ಎಂದೂ ಗೌಡರು, ಪತ್ರಿಕಾಗೋಷ್ಠಿಯಲ್ಲಿಯೇ ಕಾಂಗ್ರೆಸ್ ಹೈಕಮಾಂಡಿಗೆ ತಾಕೀತು ಮಾಡಿದ್ದಾರೆ. ಆ ಎಚ್ಚರಿಕೆಯ ಗುರಿ ನೇರವಾಗಿ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ಹಿರಿಯ ನಾಯಕರೇ ಎಂಬುದು ಕೂಡ ಗುಟ್ಟೇನಲ್ಲ.
ಹಾಗೇ, ತಾವು ಇತ್ತೀಚೆಗೆ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದು ನಿಜ ಎಂದೂ ಹೇಳಿರುವ ಅವರು, ಆ ಭೇಟಿ ವೇಳೆ ಸರ್ಕಾರ ಮತ್ತು ತಮ್ಮ ಪಕ್ಷದ ವಿರುದ್ಧ ನಿಮ್ಮ ನಾಯಕರು ಹೇಳಿಕೆ ನೀಡದಂತೆ ಕ್ರಮಕೈಗೊಳ್ಳಿ ಎಂದಷ್ಟೇ ಹೇಳಿದ್ದೇನೆ ವಿನಃ ಮತ್ತಾವುದೇ ರಾಜಕೀಯ ವಿಷಯ ಪ್ರಸ್ತಾಪ ಮಾಡಿಲ್ಲ ಎಂದಿದ್ದಾರೆ. ಅಂದರೆ; ಪ್ರಮುಖವಾಗಿ ಕಾಂಗ್ರೆಸ್ ಹಿರಿಯ ನಾಯಕರು ಮೈತ್ರಿ ಸರ್ಕಾರದ ವಿರುದ್ಧ ನೀಡುತ್ತಿರುವ ಹೇಳಿಕೆಗಳು ಮತ್ತು ಸಿದ್ದರಾಮಯ್ಯ ಗುರಿಯಾಗಿಸಿಕೊಂಡು ಮೈತ್ರಿ ಸರ್ಕಾರದಲ್ಲಿ ನಡೆಯುತ್ತಿರುವ ಕೆಸರೆರಚಾಟದ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಹೈಕಮಾಂಡ್ ನಡುವೆ ಚರ್ಚೆ ನಡೆದಿರುವುದನ್ನು ಸ್ವತಃ ಗೌಡರೇ ಇಂದು ದೃಢಪಡಿಸಿದ್ದಾರೆ.
ಒಟ್ಟಾರೆ, ಮೈತ್ರಿ ಸರ್ಕಾರ ಕಾಂಗ್ರೆಸ್ ನಾಯಕರಿಗೇ ಬೇಡವಾಗಿದ್ದರೆ, ನಮಗೂ ಬೇಡ. ನಮಗೂ ಅದರ ಜರೂರೇನೂ ಇಲ್ಲ ಎಂಬರ್ಥದಲ್ಲಿ ಮಾತನಾಡಿರುವ ಗೌಡರು, ತಾವು ಸರ್ಕಾರದ ವಿಷಯದಲ್ಲಿ ತಲೆಕೆಡಿಸಿಕೊಳ್ಳುವುದಿಲ್ಲ. ಪಕ್ಷ ಸಂಘಟನೆಗೆ ತೊಡಗಿಸಿಕೊಂಡು, ಮುಂದಿನ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು ತಮ್ಮ ಆದ್ಯತೆ ಎಂದಿದ್ದಾರೆ. ಈ ಹೇಳಿಕೆ ಖಂಡಿತವಾಗಿಯೂ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡಿಗೆ ಸ್ಪಷ್ಟ ಸಂದೇಶವಾಗಿದ್ದು, ಒಂದು ವೇಳೆ ಈ ಸರ್ಕಾರ ಉಳಿಯವುದು ನಿಮಗೆ ಬೇಕಿಲ್ಲದಿದ್ದರೆ ನಮಗೂ ಬೇಕಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.
ಇದೀಗ, ಒಂದು ಕಡೆ ದೆಹಲಿಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ “ಈ ದೋಸ್ತಿ ಸರ್ಕಾರ ಇನ್ನೂ ಮುಂದುವರಿಯಬೇಕಾ?” ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ ಎಂಬ ವರದಿಗಳಿವೆ. ಆ ವರದಿಗಳ ಬೆನ್ನಲ್ಲೇ ಮತ್ತೊಂದು ಕಡೆ, ಜೆಡಿಎಸ್ ಅಧಿನಾಯಕ ದೊಡ್ಡ ಗೌಡರು, ‘ಇದು ನಮ್ಮ ಕೂಸಲ್ಲ, ನಿಮ್ಮದೇ ಕೂಸು. ಬೇಕಿದ್ದರೆ ಉಳಿಸಿಕೊಳ್ಳಿ, ಇಲ್ಲವಾದರೆ ಬಿಡಿ’ ಎಂದಿದ್ದಾರೆ. ಅಲ್ಲಿಗೆ ಈ ಸರ್ಕಾರ ಯಾರಿಗೂ ಬೇಡದ ಕೂಸಾಗುವ ಹಂತಕ್ಕೆ ಬಂದು ತಲುಪಿದೆ. ತೊಟ್ಟಿಲನ್ನೂ ತೂಗುವ, ಮಗುವನ್ನೂ ಚಿವುಟುವ ಸುಮಾರು ಆರು ತಿಂಗಳ ಆಟಗಳ ಬಳಿಕ, ಇದೀಗ ತೊಟ್ಟಿಲ ಎಡಬಲದ ಕೈಗಳ ಪಾಲಿಗೆ ಮಗು ಸವತಿಯ ಕುಡಿಯಾದಂತಾಗಿದೆ. ಹಾಗಾಗಿ ದೋಸ್ತಿ ಸರ್ಕಾರವನ್ನು ಈಗ ಧಾರಾಳವಾಗಿ ಅನಾಥಮಗು ಎನ್ನಬಹುದು!
ಆ ಹಿನ್ನೆಲೆಯಲ್ಲಿ; ರಾಜ್ಯ ಬಿಜೆಪಿ ಮತ್ತು ಪ್ರಮುಖವಾಗಿ ಕೆಲವು ಮಾಧ್ಯಮಗಳ ನಿರೀಕ್ಷೆಯಂತೆ ರಾಜ್ಯ ಸರ್ಕಾರದ ಭವಿಷ್ಯ ಈಗ ಡೋಲಾಯಮಾನ ಪರಿಸ್ಥತಿಗೆ ತಲುಪಿದೆ. ಇನ್ನು ದಿನಗಣನೆ ಆರಂಭವಾಗಬಹುದು. ಈ ನಡುವೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರದ ಕೇಂದ್ರದ ರಾಜಧಾನಿಗೆ ಬೆನ್ನು ಮಾಡಿ ದೂರದ ಗುರುಮಿಟ್ಕಲ್ ಕ್ಷೇತ್ರದಲ್ಲಿ ತಮ್ಮ ಮಹತ್ವಾಕಾಂಕ್ಷೆಯ ಗ್ರಾಮ ವಾಸ್ತವ್ಯ ಆರಂಭಿಸಿದ್ದಾರೆ. ಇತ್ತ ರಾಜಧಾನಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಕುತೂಹಲ ಮೂಡಿಸಿವೆ.