ಕನಿಷ್ಠ ಮುಂದಾಲೋಚನೆ, ದೂರದೃಷ್ಟಿ ಮತ್ತು ನಗರ ಯೋಜನೆಯ ಪರಿಜ್ಞಾನವೇ ಇಲ್ಲದ ವ್ಯಕ್ತಿಗಳ ಕೈಯಲ್ಲಿ ಅಧಿಕಾರ ಸಿಕ್ಕರೆ ಏನಾಗಲಿದೆ ಎಂಬುದಕ್ಕೆ ಬೆಂಗಳೂರು ಎಂಬ ಮಹಾನಗರ ಕಣ್ಣೆದುರಿನ ಉದಾಹರಣೆ. ನಗರ ಯೋಜನೆ ರೂಪಿಸುವ ಮಂದಿಗೆ ಭವಿಷ್ಯದ ಕಲ್ಪನೆಯೇ ಇಲ್ಲದೆ ಹೋದರೆ ಬೆಂಗಳೂರಿನಂತಹ ನರಕಸದೃಶ ನಗರ ಸೃಷ್ಟಿಯಾಗುತ್ತದೆ ಮತ್ತು ಅಂತಹ ನರಕವನ್ನು ಕುಸಿತದ ಅಪಾಯದಿಂದ ಪಾರುಮಾಡುವ ನೆಪದಲ್ಲಿ ಇನ್ನಷ್ಟು, ಮತ್ತಷ್ಟು ಸರಿಪಡಿಸಲಾಗದ ಸ್ವಯಂಕೃತ ಅಪರಾಧಗಳ ಸರಣಿ ಜಾರಿಯಾಗುತ್ತದೆ ಎಂಬುದಕ್ಕೆ ಇದೀಗ ರಾಜ್ಯ ಸರ್ಕಾರ ವಿವರ ಯೋಜನಾ ವರದಿ(ಡಿಪಿಆರ್) ತಯಾರಿಸಲು ಆದೇಶಿಸಿರುವ ಮಹಾನಗರಕ್ಕೆ ಲಿಂಗನಮಕ್ಕಿ ಜಲಾಶಯದ ನೀರು ಸರಬರಾಜುನಂತಹ ಅಪ್ರಯೋಜಕ ಯೋಜನೆಗಳು ಚಾಲನೆ ಪಡೆಯುತ್ತವೆ!
ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು ಕಾವೇರಿಯನ್ನು ಹೊರತುಪಡಿಸಿ ಉಳಿದ ಜಲಮೂಲಗಳನ್ನು ಕಂಡುಕೊಳ್ಳುವುದು ಅನಿವಾರ್ಯ ಎಂಬ ಹಿನ್ನೆಲೆಯಲ್ಲಿ 2010ರ ನವೆಂಬರಿನಲ್ಲಿ ಅಂದಿನ ಬೆಂಗಳೂರು ಮಹಾನಗರ ನೀರು ಸರಬರಾಜು ಮಂಡಳಿಯ ಮುಖ್ಯಸ್ಥ ಬಿ ಎನ್ ತ್ಯಾಗರಾಜ್ ಅವರ ನೇತೃತ್ವದಲ್ಲಿ ಒಂಭತ್ತು ಮಂದಿ ತಜ್ಞರ ಸಮಿತಿ ರಚಿಸಲಾಗಿತ್ತು. ಆ ಸಮಿತಿ 2013ರಲ್ಲಿ ಅಂತಿಮ ವರದಿ ಸಲ್ಲಿಸಿ, ಲಿಂಗನಮಕ್ಕಿ ಜಲಾಶಯದಿಂದ ಶರಾವತಿ ನದಿ ನೀರನ್ನು ಮೇಲೆತ್ತಿ ವಾರಾಹಿ ಜಲಾಶಯಕ್ಕೆ ತುಂಬಿಸಿ, ಅಲ್ಲಿಂದ ಹಾಸನ ಜಿಲ್ಲೆಯ ಬೇಲೂರು ಸಮೀಪದ ಯಗಚಿ ಹೇಮಾವತಿ ಜಲಾಶಯಕ್ಕೆ ಹಾಯಿಸಿ, ನಂತರ ಗುರುತ್ವ ಬಲದಲ್ಲಿ ಬೆಂಗಳೂರಿಗೆ ನೀರು ಸರಬರಾಜು ಮಾಡುವ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹರಿಸುವುದು ಸಾಧ್ಯ ಎಂದು ಹೇಳಿತ್ತು.
ಅಲ್ಲದೆ, ಯಾವುದೇ ಅಂತಾರಾಜ್ಯ ವಿವಾದಗಳಿಲ್ಲದ ಮತ್ತು ಅದೇ ಹೊತ್ತಿಗೆ ಅಪಾರ ಪ್ರಮಾಣದ ಕುಡಿಯಲು ಯೋಗ್ಯವಾದ ನೀರು ದೊರೆಯುವುದು ಸದ್ಯಕ್ಕೆ ರಾಜ್ಯದಲ್ಲಿ ಲಿಂಗನಮಕ್ಕಿಯಲ್ಲಿ ಮಾತ್ರ. 151 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆಯ ಬಳಿಕ, ಶರಾವತಿ ಕಣಿವೆಯಲ್ಲಿ ಹರಿವ ನೀರು ಸಮುದ್ರದ ಪಾಲಾಗುತ್ತದೆ. ಹಾಗಾಗಿ, ಈ ನೀರು ಬಳಕೆಯಿಂದ ಯಾರಿಗೂ ಯಾವುದೇ ಬಗೆಯ ಹಾನಿ ಕೂಡ ಇಲ್ಲ ಎಂದು ತ್ಯಾಗರಾಜ್ ಸಮಿತಿ ತನ್ನ ಶಿಫಾರಸಿನಲ್ಲಿ ಹೇಳಿತ್ತು. ಹಾಗಾಗಿ, ಬೆಂಗಳೂರು ಮಹಾನಗರವಷ್ಟೇ ಅಲ್ಲದೆ, ಅದರ ಸುತ್ತಮುತ್ತಲ ಮೈಸೂರು, ಮಂಡ್ಯ, ರಾಮನಗರ, ತುಮಕೂರು ಸೇರಿದಂತೆ ಹಲವು ನಗರ-ಪಟ್ಟಣಗಳಿಗೂ ಇಲ್ಲಿಂದ ನೀರು ಸರಬರಾಜು ಮಾಡಬಹುದು ಎಂದೂ ಆ ಸಮಿತಿ ಸಲಹೆ ನೀಡಿತ್ತು!
ಅಂದು ಸಮಿತಿ, ಲಿಂಗನಮಕ್ಕಿ ಮತ್ತು ವಾರಾಹಿಯ ಮಾಣಿ ಅಣೆಕಟ್ಟೆಗಳಿಗೆ ಹಲವು ಬಾರಿ ಭೇಟಿ ನೀಡಿ, ಅಲ್ಲಿನ ಭೌಗೋಳಿಕ ಪರಿಸ್ಥಿತಿ ಮತ್ತು ನೀರಿನ ಗುಣಮಟ್ಟ ಮತ್ತು ಲಭ್ಯತೆಯ ಅಂಶಗಳನ್ನು ಖಚಿತಪಡಿಸಿಕೊಂಡು, ಮುಂದಿನ ಐವತ್ತು ವರ್ಷಗಳವರೆಗೆ ಬೆಂಗಳೂರಿನ ಬೆಳವಣಿಗೆ ಮತ್ತು ಅಗತ್ಯಕ್ಕೆ ತಕ್ಕಷ್ಟು ನೀರು ಯಾವ ವಿವಾದ, ಆಕ್ಷೇಪಗಳಿಲ್ಲದೆ, ಕಾನೂನು ತೊಡಕುಗಳಿಲ್ಲದೆ ಶರಾವತಿಯಲ್ಲಿ ಲಭ್ಯ ಎಂಬುದನ್ನೂ ತನ್ನ ವರದಿಯಲ್ಲಿ ನಮೂದಿಸಿತ್ತು.
ಇದೀಗ, ರಾಜ್ಯ ಸಮ್ಮಿಶ್ರ ಸರ್ಕಾರದ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು, ತ್ಯಾಗರಾಜ್ ವರದಿಯನ್ನೇ ಆಧಾರವಾಗಿಟ್ಟುಕೊಂಡು ಸಮೀಕ್ಷೆ ನಡೆಸಿ ವಿವರ ಯೋಜನಾ ವರದಿಯನ್ನು ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸುವ ಮೂಲಕ, ಮಿತಿ ಇಲ್ಲದೆ ಬೆಳೆದ ಮತ್ತು ನೀರು ಸಂರಕ್ಷಣೆಯ ಪರಿಜ್ಞಾನವಿಲ್ಲದೆ ಸೊಕ್ಕಿದ ಬೆಂಗಳೂರಿನ ದಾಹ ತೀರಿಸಲು ಮಲೆನಾಡಿನ ನದಿಗೆ ಕನ್ನ ಹಾಕಲು ಸಿದ್ಧತೆಗಳು ನಡೆದಿವೆ. ಕಾವೇರಿ ನದಿ ಕಣಿವೆಯ ನೀರಿನ ತನ್ನ ಪಾಲನ್ನು ಬಳಸಿಕೊಳ್ಳುತ್ತಿರುವ ಬೆಂಗಳೂರಿಗೆ, ಆ ನೀರು ಇದೀಗ ಅರ್ಧ ನಗರಕ್ಕೂ ಸಾಲದಾಗುತ್ತಿದೆ. ಹಾಗಾಗಿ ಲಿಂಗನಮಕ್ಕಿಯಿಂದ ನೀರು ತರುವ ಯೋಜನೆ ಅನಿವಾರ್ಯ ಎಂಬುದು ಸರ್ಕಾರದ ಸಮರ್ಥನೆ.
ಆದರೆ, ಸ್ವತಃ ಶರಾವತಿ ನದಿ ತಟದಲ್ಲೇ ಬೇಸಿಗೆಯ ಆರು ತಿಂಗಳು ಹಲವು ಪಟ್ಟಣ, ಗ್ರಾಮಗಳ ಜನ ಕುಡಿಯುವ ನೀರಿನ ಬಿಕ್ಕಟ್ಟು ಎದುರಿಸುತ್ತಿದ್ದ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ, ಜಲಾಶಯ ನಿರ್ಮಾಣದ ವೇಳೆ ಮನೆಮಠ, ತೋಟ, ಜಮೀನು ಮುಳುಗಡೆಯಾಗಿ ಮುಳುಗಡೆ ಸಂತ್ರಸ್ತರಾಗಿ ಎತ್ತಂಗಡಿಯಾದ ಜನ ಈಗ ಬದುಕು ಕಂಡುಕೊಂಡಿರುವ ಬಹುತೇಕ ಶಿವಮೊಗ್ಗ ಜಿಲ್ಲೆಯ ಪ್ರದೇಶಗಳು ಇಂದಿಗೂ ತೀವ್ರ ಬರಪೀಡಿತ ಪ್ರದೇಶಗಳಾಗೇ ಇವೆ. ಶರಾವತಿ ಸಂತ್ರಸ್ತರು ನೆಲೆಸಿರುವ ಶಿವಮೊಗ್ಗ, ಸಾಗರ, ಹೊಸನಗರ, ಸೊರಬ ಭಾಗದಲ್ಲಿ ಒಂದೇ ಒಂದು ಎಕರೆ ಜಮೀನು ಕೂಡ ನೀರಾವರಿ ಕಂಡಿಲ್ಲ. ಕಳೆದ ನಾಲ್ಕು ವರ್ಷಗಳ ನಿರಂತರ ಬರದ ಹಿನ್ನೆಲೆಯಲ್ಲಿ ಈ ಭಾಗದ ರೈತರು ಒಂದು ಸಮರ್ಪಕವಾಗಿ ಬೆಳೆಯನ್ನೂ ತೆಗೆಯಲಾಗಿಲ್ಲ. ಪರಿಸ್ಥಿತಿ ಹೀಗಿರುವಾಗ, ನದಿ ಪಾತ್ರದ ಮತ್ತು ಜಲಾನಯನ ಪ್ರದೇಶದ ಜನರ ಸಂಕಷ್ಟವನ್ನು ಗಾಳಿಗೆ ತೂರಿ, ಇಲ್ಲಿನ ನೀರನ್ನು ಈ ಭೂಭಾಗಕ್ಕೆ ಸಂಬಂಧವೇ ಪಡದ ನಗರಕ್ಕೆ ಒಯ್ಯುವುದು ಯಾವ ನ್ಯಾಯ ಎಂಬ ಪ್ರಶ್ನೆ ಈಗ ಮಲೆನಾಡಿಗರದ್ದು.
ಅಷ್ಟಕ್ಕೂ ಲಿಂಗನಮಕ್ಕಿ ಸೇರಿದಂತೆ ಶರಾವತಿ ಕೊಳ್ಳದ ಸರಣಿ ಜಲಾಶಯಗಳ ಏಕೈಕ ಉದ್ದೇಶವೇ ಜಲವಿದ್ಯುತ್ ಉತ್ಪಾದನೆ. ಕೆಪಿಸಿ ಮತ್ತು ರಾಜ್ಯ ಸರ್ಕಾರದ ನಡುವಿನ ಒಪ್ಪಂದದಲ್ಲೂ ಅದು ಸ್ಪಷ್ಟವಾಗಿದೆ. ಈಗ ಒಂದು ವೇಳೆ ಆ ಒಪ್ಪಂದವನ್ನು ಮೀರಿ, ಈ ಕಣಿವೆಯ ನೀರನ್ನು ವಿದ್ಯುತ್ ಉತ್ಪಾದನೆ ಹೊರತುಪಡಿಸಿ ಅನ್ಯ ಉದ್ದೇಶಕ್ಕೆ ಬಳಸುವುದೇ ಆಗಿದ್ದರೆ, ಅಂತಹ ಬದಲಾವಣೆಯ ಮೊದಲ ಫಲಾನುಭವಿಗಳಾಗಬೇಕಿರುವುದು ಈ ಯೋಜನೆಗಳಿಂದಾಗಿ ಬದುಕು ಕಳೆದುಕೊಂಡ, ನಾಡಿಗೆ ಬೆಳಕು ನೀಡುವ ದೊಡ್ಡ ಉದ್ದೇಶಕ್ಕಾಗಿ ಮನೆಮಠ, ಆಸ್ತಿಪಾಸ್ತಿ ತ್ಯಾಗ ಮಾಡಿದ ಜನರೇ ಅಲ್ಲವಾ ಎಂಬುದು ಈಗಿರುವ ಪ್ರಶ್ನೆ. ನೀವು ಇಲ್ಲಿನ ಜನರನ್ನು ಯೋಗ್ಯ ಕುಡಿಯುವ ನೀರು, ಕನಿಷ್ಠ ಒಂದು ಹಂಗಾಮಿನ ಬೆಳೆಗಳಿಂದ ವಂಚಿತರನ್ನಾಗಿ ಮಾಡಿ, ಪರಿಸರ ಮತ್ತು ಜಲ ಸಂರಕ್ಷಣೆಯ ಹೊಣೆಯನ್ನೇ ಅರಿಯದ, ಧನದಾಹಿ ನಗರಕ್ಕೆ ನಮ್ಮ ನೀರನ್ನು ಲಪಟಾಯಿಸುವುದು ಎಷ್ಟು ಸರಿ ಎಂಬುದು ಶರಾವತಿ ಕಣಿವೆಯ ಜನರ ಪ್ರಶ್ನೆ!
ಇಂತಹ ಪ್ರಶ್ನೆಯ ಭಾಗವಾಗಿಯೇ ಇದೀಗ ‘ಶರಾವತಿ ನದಿಗಾಗಿ ನಾವು’ ಎಂಬ ನಾಗರಿಕ ವೇದಿಕೆಯ ಮೂಲಕ ‘ಶರಾವತಿ ಉಳಿಸಿ, ನೀರು ಕೊಡುವುದಿದ್ದರೇ ನಮಗೆ ಮೊದಲು ಕೊಡಿ’ ಎಂಬ ಹೋರಾಟಕ್ಕೆ ಚಾಲನೆ ಸಿಕ್ಕಿದೆ. ಮಲೆನಾಡಿನ ಹಿರಿಯ ಸಾಹಿತಿ ಮತ್ತು ಶರಾವತಿಯ ಸಖನಂತಿರುವ ನಾ ಡಿಸೋಜ ಅವರ ನೇತೃತ್ವದಲ್ಲಿ ಸಾಮಾಜಿಕ ಹೋರಾಟಗಾರರು, ಪರಿಸರವಾದಿಗಳು, ಸಾಹಿತಿಗಳು, ಪತ್ರಕರ್ತರು, ರೈತ ನಾಯಕರು, ವಿದ್ಯಾರ್ಥಿ ಮುಖಂಡರು, ಕಲಾವಿದರು ಈ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ. ಶನಿವಾರ ಸಾಗರ ಪಟ್ಟಣದಲ್ಲಿ ಸಮಾಲೋಚನಾ ಸಭೆ ಕೂಡ ನಡೆಯುತ್ತಿದೆ.
ಸರ್ಕಾರದ ಮತಿಗೇಡಿ ಯೋಜನೆ ಮತ್ತು ಅದರ ವಿರುದ್ಧ ಕಾವೇರುತ್ತಿರುವ ಮಲೆನಾಡಿನ ಪ್ರಜ್ಞಾವಂತರ ಹೋರಾಟದ ನಡುವೆ, ಇದೀಗ ಇಂತಹ ಉದ್ಧಟತನದ ನಿರ್ಧಾರದ ಹಿಂದೆ ಇರುವ ರಾಜಕೀಯ ಅಂಶಗಳು ಚರ್ಚೆಯ ಮುನ್ನೆಲೆಗೆ ಬಂದಿವೆ. ಮಲೆನಾಡು ಮತ್ತು ಹಳಮೈಸೂರು ಭಾಗದ(ಮೈಸೂರು, ಮಂಡ್ಯ, ತುಮಕೂರು) ರಾಜಕೀಯ ಲಾಬಿಗಳ ಮೇಲಾಟದ ಮೇಲೆ ಬೆಳಕು ಚೆಲ್ಲುವ ಈ ಚರ್ಚೆ, ಸದ್ಯ ರಾಜ್ಯ ರಾಜಕಾರಣದಲ್ಲಿ ಮೇಲುಗೈ ಸಾಧಿಸಿರುವ ಹಳೆ ಮೈಸೂರು ಭಾಗದ ಲಾಬಿಗಳ ಹಿತಾಸಕ್ತಿ ಮತ್ತು ಅದೇ ಹೊತ್ತಿಗೆ ದಶಕಗಳ ಕಾಲ ರಾಜ್ಯ ರಾಜಕಾಣದ ಮೇಲೆ ಪ್ರಭಾವ ಹೊಂದಿದ್ದ ಮಲೆನಾಡಿನ ರಾಜಕೀಯ ಇತ್ತೀಚಿನ ವರ್ಷಗಳಲ್ಲಿ ಹಿನ್ನೆಲೆಗೆ ಸರಿದಿರುವ ಪರಿಣಾಮವೇ ಇಂತಹ ಯೋಜನೆಗಳು ಎಂಬ ವಾದ ಕೂಡ ಕೇಳಿಬರುತ್ತಿದೆ. ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡ, ಡಿ ಬಿ ಚಂದ್ರೇಗೌಡ, ಎಸ್ ಬಂಗಾರಪ್ಪರಂತಹ ಧೀಮಂತ ನಾಯಕರನ್ನು ಕಂಡಿದ್ದ ಮಲೆನಾಡು, ದಶಕಗಳ ಕಾಲ ರಾಜ್ಯ ರಾಜಕಾರಣದ ಮೇಲೆ ಹಿಡಿತ ಸಾಧಿಸಿತ್ತು. ಆದರೆ, ಇದೀಗ ಯಡಿಯೂರಪ್ಪ ಅವರಂತಹ ನಾಯಕರಿದ್ದರೂ, ಒಟ್ಟಾರೆ ರಾಜಕೀಯ ವಿದ್ಯಮಾನಗಳ ಮೇಲೆ ಹಿಡಿತ ಸಾಧಿಸುವಲ್ಲಿ ಮಲೆನಾಡಿನ ರಾಜಕಾರಣಿಗಳು ವಿಫಲರಾಗಿದ್ದಾರೆ. ಅದರಲ್ಲೂ 90ರ ದಶಕದ ಕೊನೆಯ ಭಾಗದ ಹೊತ್ತಿಗೆ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗುತ್ತಲೇ ಆರಂಭವಾದ ಹಳೇಮೈಸೂರು ಭಾಗದ ರಾಜಕೀಯ ಪಾರುಪಥ್ಯ, ಕಳೆದ ಒಂದು ದಶಕದಿಂದ ರಾಜ್ಯ ರಾಜಕಾರಣದ ಚುಕ್ಕಾಣಿ ಹಿಡಿದಿದೆ. ಹಾಗಾಗಿ, ಇಂತಹ ಮಲೆನಾಡು ವಿರೋಧಿ ಯೋಜನೆಗಳು ಜೀವ ಪಡೆಯುತ್ತಿವೆ ಎಂಬ ಚರ್ಚೆ ಕೂಡ ಆರಂಭವಾಗಿದೆ.
ಸದ್ಯ ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಮಲೆನಾಡು ಭಾಗದ ಕ್ಷೇತ್ರಗಳೂ ಸೇರಿದಂತೆ ಆರು ಕಡೆ ಬಿಜೆಪಿ ಶಾಸಕರಿದ್ದಾರೆ. ಬಯಲುಪ್ರದೇಶವಾದ ಭದ್ರಾವತಿಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ, ಪ್ರತಿಪಕ್ಷದ ಸ್ಥಾನದಲ್ಲಿದ್ದರೂ ಬಿಜೆಪಿ ಸಾಗರ ಶಾಸಕ ಹರತಾಳು ಹಾಲಪ್ಪ ಅವರನ್ನು ಹೊರತುಪಡಿಸಿ(ಶಾಸಕರು ಉಪಮುಖ್ಯಮಂತ್ರಿಗಳ ಹೇಳಿಕೆ ಹೊರಬಿದ್ದ ಮಾರನೇ ದಿನವೇ ಯೋಜನೆಯನ್ನು ವಿರೋಧಿಸಿ ಸಿಎಂ ಮತ್ತು ಡಿಸಿಎಂ ಸೇರಿದಂತೆ ಸರ್ಕಾರದ ಪ್ರಮುಖರಿಗೆ ಮನವಿ ಸಲ್ಲಿಸಿದ್ದಾರೆ) ಉಳಿದ ಯಾವ ನಾಯಕರೂ ಲಿಂಗನಮಕ್ಕಿ ನೀರನ್ನು ಬೆಂಗಳೂರಿಗೆ ಒಯ್ಯುವ ಸರ್ಕಾರದ ಪ್ರಸ್ತಾವನೆಯ ವಿರುದ್ಧ ಮಾತೆತ್ತಿಲ್ಲ. ಇಂತಹ ರಾಜಕೀಯ ನಿಷ್ಕ್ರಿಯತೆ ಮತ್ತು ಪ್ರಬಲ ರಾಜಕೀಯ ಧ್ವನಿಯ ಕೊರತೆಯ ಹಿನ್ನೆಲೆಯಲ್ಲೇ ಇಂತಹ ಒಂದು ರೀತಿಯಲ್ಲಿ ಮಲೆನಾಡಿನ ಜನರ ಮೇಲೆ ದಬ್ಬಾಳಿಕೆಗಳು ನಡೆಯುತ್ತಿವೆ. ಬಂಗಾರಪ್ಪ ಅಥವಾ ಶಾಂತವೇರಿ ಅವರ ಕಾಲದಲ್ಲಿ ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಿರಲಿ, ಹೆಸರೆತ್ತಲೂ ಅಂಜುವ ಪರಿಸ್ಥಿತಿ ಇತ್ತು ಎನ್ನುವ ಮಾತು ಸ್ವತಃ ರಾಜಕೀಯ ಪಕ್ಷಗಳ ಪಡಸಾಲೆಯಲ್ಲೇ ಕೇಳಿಬರುತ್ತಿದೆ.
‘ಹಾಗಾಗಿ, ಇದು ಬೆಂಗಳೂರಿನ ಕುಡಿಯುವ ನೀರಿನ ಬಿಕ್ಕಟ್ಟಿನ ಪರಿಹಾರದ ಪ್ರಯತ್ನದಂತೆಯೇ, ಮಲೆನಾಡು ಭಾಗದ ರಾಜಕೀಯ ಪ್ರಭಾವದ ಬಿಕ್ಕಟ್ಟಿನ ಪರಿಣಾಮವೂ ಹೌದು. ಹಾಗಾಗಿ, ಈಗ ಮಲೆನಾಡಿಗರಿಗೆ ಉಳಿದಿರುವುದು ಜನಾಂದೋಲದ ಮೂಲಕ ಏಕ ಕಾಲಕ್ಕೆ ಸರ್ಕಾರದ ಮೇಲೂ, ಮತ್ತು ಸ್ಥಳೀಯ ರಾಜಕೀಯ ನಾಯಕತ್ವದ ಮೇಲೂ ಒತ್ತಡ ಹೇರುವ ಮಾರ್ಗವೊಂದೇ!