ಯಾದಗಿರಿ- ಹದಿಮೂರು ವರ್ಷಗಳ ನಂತರ ಇಂದು ಗುರುಮಿಟ್ಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ಮತ್ತೊಮ್ಮೆ ಗ್ರಾಮ ವಾಸ್ತವ್ಯ ಆರಂಭಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಗ್ರಾಮದ ಜನರು ಅದ್ದೂರಿಯಾಗಿ ಸ್ವಾಗತಿಸಿದರು.
ಗ್ರಾಮದಲ್ಲಿ ಅಕ್ಷರಶಃ ಜಾತ್ರೆಯಂಥ ವಾತಾವರಣ ನಿರ್ಮಾಣವಾಗಿದೆ. ಹಸಿರು ಸೀರೆಯುಟ್ಟು, ತೆನೆಹೊತ್ತ ಮಹಿಳೆಯರು, ತಾಳ-ಮೇಳ, ಜಾನಪದ ನೃತ್ಯ ಸೊಗಡುಡಿನ ಜತೆ ಪೂರ್ಣಕುಂಭ ಮೇಳದ ಮೂಲಕ ಕುಮಾರಸ್ವಾಮಿ ಅವರಿಗೆ ಗ್ರಾಮಸ್ಥರು ಸ್ವಾಗತಿಸಿದರು.
ಬೆಂಗಳೂರಿನಿಂದ ರೈಲಿನ ಮೂಲಕ ಆಗಮಿಸಿದ ಮುಖ್ಯಮಂತ್ರಿಗಳು ಚಂಡರಕಿ ಗ್ರಾಮಕ್ಕೆ ಬಸ್ನಲ್ಲೇ ಪ್ರಯಾಣ ಮಾಡಿದರು.
ನಂತರ ಸ್ಥಳೀಯ ಶಾಸಕರು, ಸಂಸದರು, ಅಧಿಕಾರಿಗಳು ಸೇರಿದಂತೆ ಪಕ್ಷದ ಮುಖಂಡರ ಸಮ್ಮುಖದಲ್ಲಿ ಗ್ರಾಮ ವಾಸ್ತವ್ಯದ ಮೊದಲ ಸಮಾವೇಶ ಆರಂಭವಾಯಿತು.
ಈ ಗ್ರಾಮದಲ್ಲಿ ಇಂದು ದಿನವಿಡೀ ಜನರ ಅಹವಾಲುಗಳನ್ನು ಸಿಎಂ ಕುಮಾರಸ್ವಾಮಿ ಸ್ವೀಕರಿಸಲಿದ್ದಾರೆ. ಕೆಲವು ಬೇಡಿಕೆಗಳಿಗೆ ಸ್ಥಳದಲ್ಲೇ ಆದೇಶವನ್ನೂ ನೀಡಲಿದ್ದಾರೆ. ಆದೇಶಗಳನ್ನು ತಕ್ಷಣ ರವಾನಿಸಲು ಅಧಿಕಾರಿಗಳು ಎಲ್ಲಾ ಬಗೆಯ ಸಂಪರ್ಕ ಸಂವಹನ ಏರ್ಪಾಡು ಮಾಡಿಕೊಂಡಿದ್ದಾರೆ.
ಸಿ ಎಂ ಕುಮಾರಸ್ವಾಮಿ ಬರುವ ಹಿನ್ನೆಲೆಯಲ್ಲಿ ಚಂಡರಕಿ ಗ್ರಾಮದಲ್ಲಿ ರಸ್ತೆ, ಚರಂಡಿ, ಶಾಲೆ ಕಟ್ಟಡ ಇತ್ಯಾದಿ ಸೌಲಭ್ಯಗಳನ್ನು ಅಧಿಕಾರಿಗಳು ಕಳೆದ ಕೆಲವು ದಿನಗಳಲ್ಲಿ ವ್ಯವಸ್ಥೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದರು.
ಜನತಾದರ್ಶನಕ್ಕೆ ಅರ್ಜಿ ಸಲ್ಲಿಸಲು ಗ್ರಾಮದತ್ತ ಹರಿದು ಬರುತ್ತಿರುವ ಜನಸಾಗರ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಂದು ಯಾದಗಿರಿ ಜಿಲ್ಲೆಯ ಗುರುಮಿಠ್ಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಜನತಾದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಇಂದು ಬೆಳಿಗ್ಗೆ ಏಳು ಗಂಟೆಯಿಂದಲೇ ಸಾರ್ವಜನಿಕರು ಸಮರೋಪಾದಿಯಾಗಿ ಬರುತ್ತಿದ್ದಾರೆ.
ಹೆಚ್ಚಿನ ಜನಸಾಗರ ಬರುವ ನಿರೀಕ್ಷೆ ಇದ್ದ ಕಾರಣ ಜಿಲ್ಲಾಡಳಿತ ಅಗತ್ಯ ಸೌಕರ್ಯಗಳನ್ನು ಮಾಡಿಕೊಂಡು ಸನ್ನದ್ಧವಾಗಿದೆ ಎನ್ನಲಾಗಿದೆ. ಅರ್ಜಿ ಸಲ್ಲಿಸಲು ಅನುಕೂಲವಾಗಲು ಜಿಲ್ಲಾಡಳಿತ ಕೌಂಟರ್ ಗಳನ್ನು ತೆರೆಯಲಾಗಿದ್ದು, ಅರ್ಜಿ ಸಲ್ಲಿಸಿದವರಿಗೆ ಟೋಕನ್ ನೀಡಲಾಗುತ್ತಿದೆ.