ಸುಮಾರು ಮೂರು ದಶಕಗಳ ಹಿಂದಿನ “ಲಾಕಪ್ ಡೆತ್” ಪ್ರಕರಣಕ್ಕೆ ಕಾರಣರೆಂದು ಆರೋಪಿಸಲಾಗಿದ್ದ ಗುಜರಾತಿನ ನಿಷ್ಠಾವಂತ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಅಪರಾಧಿ ಎಂದು ಘೋಷಿಸಿರುವ ಗುಜರಾತಿನ ಜಾಮ್ನಗರ್ ಸೆಷನ್ಸ್ ನ್ಯಾಯಾಲಯವು ಗುರುವಾರ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಈ ಕುರಿತು ಸಂಜೀವ್ ಭಟ್ ಅವರ ಪತ್ನಿ ಶ್ವೇತಾ ಸಂಜೀವ್ ಭಟ್ ಪ್ರತಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದಾರೆ. ಈ ಪ್ರಕರಣದ ವಿವರಗಳ ಜೊತೆ ನ್ಯಾಯಾಂಗದಲ್ಲಿ ತಮಗೆ ಉಂಟಾಗಿರುವ ಅನ್ಯಾಯದ ಕುರಿತ ಮಾಹಿತಿಗಳನ್ನು ಪತ್ರಿಕಾ ಹೇಳಿಕೆ ಒಳಗೊಂಡಿದೆ. ಸಂಜೀವ್ ಭಟ್ ಅವರ ಹೆಚ್ಚುವರಿ ಹೇಳಿಕೆ ಮತ್ತು ವಿಧಿವಿಜ್ಞಾನ ತಜ್ಞರ ವೈದ್ಯಕೀಯ - ಕಾನೂನಾತ್ಮಕ ಅಭಿಪ್ರಾಯವನ್ನೂ ಪತ್ರಿಕಾ ಹೇಳಿಕೆಯ ಜೊತೆಯಲ್ಲಿ ಲಗತ್ತಿಸಲಾಗಿದೆ.
ಸಂಜೀವ್ ಭಟ್ ಅವರ ಫೇಸ್ ಬುಕ್ ಖಾತೆಯನ್ನು ನಿರ್ವಹಿಸುತ್ತಿರುವ ನಲ್ಲಿ ಶ್ವೇತಾ ಸಂಜೀವ್ ಭಟ್ ಅದರಲ್ಲಿ ಹೀಗೆ ಬರೆದಿದ್ದಾರೆ:
“ತಾವು ಮಾಡಿಲ್ಲದ ಅಪರಾಧಕ್ಕಾಗಿ ಸಂಜೀವ್ ಭಟ್ ಅವರಿಗೆ ಇಂದು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಸಂಜೀವ್ ಅವರಿಗೆ ಆಧಾರಸ್ತಂಭವಾಗಿ ನಿಂತ ನಿಮ್ಮೆಲ್ಲರಿಗೂ ಒಂದು ಮಾತು ಹೇಳಬಯಸುತ್ತೇನೆ. ನಿಮ್ಮ ಬೆಂಬಲದ ನುಡಿಗಳು ಸಾಂತ್ವನ ಮತ್ತು ಪ್ರೋತ್ಸಾಹ ನೀಡಿವೆಯಾದರೂ ಕ್ರಿಯೆಯಿಲ್ಲದ ಮಾತುಗಳು ಕೆಲಸಕ್ಕೆ ಬಾರದು. ತನ್ನ ದೇಶ ಮತ್ತು ಜನರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದನ್ನು ಹೊರತುಪಡಿಸಿ ಬೇರೇನನ್ನೂ (ಯಾವ ತಪ್ಪನ್ನೂ) ಮಾಡದ ವ್ಯಕ್ತಿಗೆ ಈ ಪರಿ ಅನ್ಯಾಯವಾಗಲು ಬಿಟ್ಟರೆ ನಿಮ್ಮ ಬೆಂಬಲಕ್ಕೆ ಅರ್ಥವಿರುವುದಿಲ್ಲ.
ಐಪಿಎಸ್ ಅಧಿಕಾರಿಗಳ ಸಂಘಕ್ಕೆ ನಾನು ಹೇಳುವುದಿಷ್ಟೇ – ಒಬ್ಬ ಪ್ರಾಮಾಣಿಕ ಐಪಿಎಸ್ ಅಧಿಕಾರಿಯಾಗಿದ್ದಕ್ಕೆ ನಿಮ್ಮವನೊಬ್ಬನ ಮೇಲೆ ಪ್ರತೀಕಾರದ ಶಿಕ್ಷೆಯಾಗಿದೆ. ನೀವುಗಳು ಅವರನ್ನು ಬೆಂಬಲಿಸಲಿಲ್ಲ, ಅವರ ರಕ್ಷಣೆಗೆ ನಿಲ್ಲಲಿಲ್ಲ… ಸೇಡು ತೀರಿಸಿಕೊಳ್ಳಲು ನಿಂತಿರುವ ಈ ಸರ್ಕಾರದ ವಿರುದ್ಧ ಸಾರಿರುವ ಸಮರದಲ್ಲಿ ಅವರೊಬ್ಬರೇ ಏಕಾಂಗಿಯಾಗಿ ಸೆಣೆಸುತ್ತಿದ್ದಾರೆ. ಆದರೆ ಎಲ್ಲಿಯವರೆಗೆ ನೀವುಗಳು ಹೀಗೆ ಮೂಕ ಪ್ರೇಕ್ಷಕರಾಗಿ ಉಳಿಯುತ್ತೀರಿ?
ನಮ್ಮ ರಾಷ್ಟ್ರವು ತೀರಾ ಕಗ್ಗತ್ತಲಲ್ಲಿ ಸಾಗುತ್ತಿದೆ. ನಾವು ನಮ್ಮ ಕೊನೆಯ ಉಸಿರಿರುವ ತನಕವೂ ಹೋರಾಡುತ್ತಲೇ ಇರುತ್ತೇವೆ. ನಾವು ಒಂಟಿ ಹೋರಾಟ ನಡೆಸುತ್ತಿದ್ದೇವೆಯೇ ಇಲ್ಲಾ ತಮಗಾಗಿ ಹೋರಾಡುವುದನ್ನು ಎಂದೂ ನಿಲ್ಲಿಸದ ವ್ಯಕ್ತಿಗೋಸ್ಕರ ಈ ಸಾರ್ವಭೌಮ ಪ್ರಜಾಪ್ರಭುತ್ವ ದೇಶದ ಜನತೆಯೂ ಎದ್ದು ನಿಲ್ಲುವರೇ ಎಂಬುದೇ ಈಗ ನಮ್ಮ ಮುಂದೆ ಉಳಿದಿರುವ ಪ್ರಶ್ನೆ.
ಕಾಲದ ಕರೆಯಿದು, ಎಚ್ಚರಗೊಳ್ಳು ಭಾರತ. ಇಂದು ನಾವು, ನಾಳೆ ಆ ಜಾಗದಲ್ಲಿ ನೀವೇ ನಿಲ್ಲಬಹುದು.
ದೇವರು ಒಳ್ಳೆಯದನ್ನು ಮಾಡಲಿ.
ಮಾತಿಗಲ್ಲ ಕಾಲವಿದು, ಕ್ರಿಯೆಗೆ ಮಾತ್ರ!
#EnoughIsEnough
#JusticeForSanjivBhatt
ಪತ್ರಿಕಾ ಹೇಳಿಕೆ:
24 ಅಕ್ಟೋಬರ್ 1990ರಂದು ಬಿಹಾರದಲ್ಲಿ ಎಲ್ ಕೆ ಅಡ್ವಾನಿಯವರ ರಥಯಾತ್ರೆಗೆ ತಡೆಯೊಡ್ಡಲಾಗಿ ತದನಂತರ ಅವರನ್ನು ಬಂಧಿಸಿದಾಗ, ಜಾಮ್ ನಗರದ ವಿವಿಧ ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಕೋಮು ಗಲಭೆಗಳು ಭುಗಿಲೆದ್ದವು. ಆ ಸಂದರ್ಭದಲ್ಲಿ ಶ್ರೀ ಸಂಜೀವ್ ಭಟ್ ಅವರು ಜಾಮ್ ನಗರ ಗ್ರಾಮಾಂತರ ವಿಭಾಗದ ಉಪ-ಅಧೀಕ್ಷಕರಾಗಿ ವರ್ಗವಾಗಿದ್ದರು. ಜಾಮ್ ನಗರ ಜಿಲ್ಲೆಯನ್ನು ಮೂರು ಪೊಲೀಸ್ ವಿಭಾಗಗಳನ್ನಾಗಿ ವಿಂಗಡಿಸಲಾಗಿತ್ತು – ಜಾಮ್ ನಗರ ನಗರ, ಜಾಮ್ ನಗರ ಗ್ರಾಮಾಂತರ ಮತ್ತು ಖಂಬಾಲಿಯ. ಖಂಬಾಲಿಯ ವಿಭಾಗದ ಡಿವೈಎಸ್ಪಿ, ಅನಾರೋಗ್ಯದ ಕಾರಣ ರಜೆಯಲ್ಲಿ ತೆರಳಿದ್ದರಿಂದ 16 ಅಕ್ಟೋಬರ್ 1990ರಂದು ಶ್ರೀ ಸಂಜೀವ್ ಭಟ್ ಅವರಿಗೆ ಖಂಬಾಲಿಯ ವಿಭಾಗದ ಹೆಚ್ಚುವರಿ ಜವಾಬ್ದಾರಿಯನ್ನೂ ವಹಿಸಲಾಗಿತ್ತು. 24 ಅಕ್ಟೋಬರ್ 1990ರಂದು ಜಾಮ್ ನಗರ ಜಿಲ್ಲೆಯಲ್ಲಿ ಕೋಮು ದಂಗೆಗಳು ವ್ಯಾಪಕವಾದವು, ಐಪಿಎಸ್ ಪ್ರವೀಣ್ ಗೊಂದಿಯ ಕೂಡ ರಜೆಯ ಮೇಲೆ ಹೋದರು. ಆಗ ಶ್ರೀ ಸಂಜೀವ್ ಭಟ್ ಅವರನ್ನು ಕೂಡಲೇ ಜಾಮ್ ನಗರ ನಗರ ವಿಭಾಗದ ಹೆಚ್ಚುವರಿ ಜವಾಬ್ದಾರಿಯನ್ನೂ ಹೊರಿಸಲಾಯಿತು. ಅಲ್ಲದೆ ಜಾಮ್ ನಗರ ನಗರದ ಬಂದೋಬಸ್ತ್ ಮೇಲೆ ನಿಗಾ ವಹಿಸಲು, ಅದಕ್ಕಾಗಿ ತಯಾರಿ ನಡೆಸಿ ಬಂದೋಬಸ್ತ್ ಕಾರ್ಯವನ್ನು ಜಾರಿಗೊಳಿಸುವ ಕೆಲಸ ವಹಿಸಲಾಯಿತು. ಹೀಗಾಗಿ 24ನೇ ಅಕ್ಟೋಬರ್ 1990ರಂದು ಶ್ರೀ ಸಂಜೀವ್ ಭಟ್ ಅಧಿಕೃತವಾಗಿ ಇಡೀ ಜಾಮ್ ನಗರ ಜಿಲ್ಲೆಯ ಹೊಣೆ ಹೊರಬೇಕಾಗಿ ಬಂದಿತ್ತು. ಹಾಗೂ ನಗರದಲ್ಲಿ ಕೋಮು ಹಿಂಸಾಚಾರವನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತಿದ್ದರು.
1990ರ ಅಕ್ಟೋಬರ್ 30ರಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಭಾರತ್ ಬಂದ್ ಗೆ ಕರೆ ನೀಡಿದ್ದವು. 30 ಅಕ್ಟೋಬರ್ 1990ರಂದು ನೀಡಲಾಗಿದ್ದ ಬಂದ್ ಕರೆಯ ಸಂದರ್ಭದಲ್ಲಿ ದೇಶಾದ್ಯಂತ ಭಾರೀ ಪ್ರಮಾಣದ ಮತೀಯ ಹಿಂಸಾಚಾರ ಸಂಭವಿಸಬಹುದೆಂದು ನಿರೀಕ್ಷಿಸಲಾಗಿತ್ತು. ಭಾರತದ ಎಲ್ಲಾ ಮತೀಯ ಸೂಕ್ಷ್ಮ ರಾಜ್ಯಗಳಲ್ಲಿ ತೀವ್ರ ನಿಗಾ ವಹಿಸಲಾಗಿತ್ತು. 30ರಂದು ಜಾಮ್ ನಗರದಲ್ಲಿ ಮತೀಯ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ, ತಹಸೀಲ್ದಾರರು ಮತ್ತು ಜಮ್ ಜೋಧಪುರದ ಕಾರ್ಯನಿರ್ವಹಣಾಧಿಕಾರಿ ಇವರುಗಳು ಕೂಡಲೇ ಇಡೀ ಪಟ್ಟಣದಲ್ಲಿ ಕರ್ಫ್ಯೂ ಜಾರಿಗೊಳಿಸುವ ಘೋಷಣೆ ಮಾಡಿದರು. ಇನ್ನೂ ಕರ್ಫ್ಯೂ ಆರಂಭವಾಗಬೇಕೆನ್ನುವ ಮುನ್ನವೇ ಇಡೀ ಪಟ್ಟಣವು ದುಷ್ಕರ್ಮಿಗಳ ಹಿಂಸಾಚಾರದಲ್ಲಿ ಆವರಿಸಿಕೊಂಡಿಬಿಟ್ಟಿತ್ತು. ಜಮ್ ಜೋಧಪುರದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರ ಮೇಲೆ ದಾಳಿ ಮಾಡುತ್ತ ಅವರಿಗೆ ಸೇರಿದ ಅಂಗಡಿ ಮುಂಗಟ್ಟುಗಳನ್ನು, ಆಸ್ತಿಪಾಸ್ತಿಗಳನ್ನು ಲೂಟಿ ಮಾಡುತ್ತ ಬೆಂಕಿ ಹಚ್ಚುತ್ತಿದ್ದರು. ಹೀಗೆ ಗುರಿಯಿಟ್ಟು ಹಿಂಸಾಚಾರದಲ್ಲಿ ನಡೆಸಿದ್ದ ಅವರು ಭಯೋತ್ಪಾದನೆಯಲ್ಲಿ ತೊಡಗಿದ್ದರು.
ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಈ ಗಲಭೆಕೋರ ಗುಂಪುಗಳನ್ನು ಚದುರಿಸಿ ಕರ್ಫ್ಯೂವನ್ನು ಸಮರ್ಪಕವಾಗಿ ಜಾರಿಗೊಳಿಸುವುದೇ ಪೊಲೀಸ್ ಅಧಿಕಾರಿಯಾಗಿದ್ದ ಸಂಜೀವ್ ಭಟ್ ಅವರ ಮೊದಲ ಆದ್ಯತೆಯಾಗಿತ್ತು. ರಾಜ್ಯಾದ್ಯಂತ ಇಂತಹ ಹಲವಾರು ಹಿಂಸಾಚಾರದ ಘಟನೆಗಳನ್ನು ನಿಭಾಯಿಸಿ ಕರ್ಫ್ಯೂ ಜಾರಿಗೊಳಿಸಿದ್ದ ಸಂಜೀವ್ ಭಟ್, 30ನೇ ಅಕ್ಟೋಬರ್ 1990ರಂದು ಮಧ್ಯಾಹ್ನ 1.30ರ ಸುಮಾರಿಗೆ ಜಮ್ ಜೋಧಪುರ ಪೊಲೀಸ್ ಠಾಣೆಯನ್ನು ತಲುಪಿದರು. ಅಲ್ಲಿ ಜಮ್ ಜೋಧಪುರದ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಸ್ಥಳೀಯ ಪೊಲೀಸರು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.15ರ ನಡುವೆ ನಗರದಾದ್ಯಂತ 15 ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 133 ಜನರನ್ನು ಬಂಧಿಸಿದ್ದರೆಂದು ಸರ್ಕಲ್ ಇನ್ಸ್ಪೆಕ್ಟರ್ ಭನ್ವದ್ ತಿಳಿಸಿದರು. ಬಂಧಿತರ ಪೈಕಿ ನಿಧನರಾಗಿರುವ ಪ್ರಭುದಾದ್ ಮಾಧವಜಿ ವೈಷ್ಣಾನಿ ಸಹ ಒಬ್ಬನಾಗಿದ್ದ. ಇವರೆಲ್ಲರ ವಿರುದ್ಧ ಅಪರಾಧ ದಾಖಲೆ ಸಂಖ್ಯೆ 96/90ಯಡಿ ಐಪಿಸಿ ಸೆಕ್ಷನ್ 147, 148, 336, 337, 395, 436, 151, 327, 452, 454, 455 ಮತ್ತು TADA ಕಾಯಿದೆಯ ಸೆಕ್ಷನ್ 3-6, ಹಾಗೂ ಬಾಂಬೆ ಪೊಲೀಸ್ ಕಾಯಿದೆಯ ಸೆಕ್ಷನ್ 135(1) ಪ್ರಕರಣಗಳನ್ನು ಒಟ್ಟಾಗಿ ದಾಖಲಿಸಲಾಗಿತ್ತು.
ಪ್ರಭುದಾಸ್ ಮಾಧವಜಿ ವೈಷ್ಣಾನಿಯನ್ನು ಶ್ರೀ ಸಂಜೀವ್ ಭಟ್ ಮತ್ತವರ ಸಿಬ್ಬಂದಿ ಜಮ್ ಜೋಧಪುರ ಪೊಲೀಸ್ ಠಾಣೆ ತಲುಪುವದರೊಳಗಾಗಿಯೇ ಕೆ ಎನ್ ಪಟೇಲ್, ಸರ್ಕಲ್ ಇನ್ಸ್ಪೆಕ್ಟರ್ ಭನ್ವದ್, ಸಬ್ ಇನ್ಸ್ಪೆಕ್ಟರ್ ಠಾಕೂರ್ ಮತ್ತು ಮಹಾಶಂಕರ್ ಜೋಶಿ ಇವರನ್ನೊಳಗೊಂಡ ತಂಡ ಬಂಧಿಸಿತ್ತು. ನಿಧನ ಹೊಂದಿರುವ ವ್ಯಕ್ತಿ ಮತ್ತವನ ಸಹೋದರನೂ ಸೇರಿದಂತೆ 133 ಮಂದಿಯನ್ನು ಗಲಭೆ ಮತ್ತು ಮತೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸುವ ಸಮಯದಲ್ಲಿ ಬೆಳಿಗ್ಗೆ 9.30 ಮತ್ತು ಮಧ್ಯಾಹ್ನ 12.15ರ ನಡುವೆ ಶ್ರೀ ಸಂಜೀವ್ ಭಟ್ ಮತ್ತವರ ಸಿಬ್ಬಂದಿ ನಗರದ ಬೇರೆ ಭಾಗದಲ್ಲಿ ಗಲಭೆಕೋರ ಗುಂಪುಗಳನ್ನು ಚದುರಿಸುವಲ್ಲಿ ಶ್ರದ್ಧೆಯಿಂದ ಕಾರ್ಯಪ್ರವೃತ್ತರಾಗಿದ್ದರು.
ಯಾವುದೇ ಕ್ಷಣದಲ್ಲೂ ಬಂಧಿತ 133 ಮಂದಿಯ ಪೈಕಿ ನಿಧನಹೊಂದಿರುವ ವ್ಯಕ್ತಿ ಮತ್ತವನ ಸಹೋದರನೂ ಸೇರಿದಂತೆ ಯಾರೊಬ್ಬರೂ ಶ್ರೀ ಸಂಜೀವ್ ಭಟ್ ಮತ್ತವರ ಸಿಬ್ಬಂದಿಯ ವಶದಲ್ಲಿರಲಿಲ್ಲ. ಬಂಧನಕ್ಕೊಳಗಾದ 133 ಜನರಲ್ಲಿ ನಿಧನ ಹೊಂದಿರುವ ವ್ಯಕ್ತಿ ಮತ್ತವನ ಸಹೋದರನನ್ನೂ ಒಳಗೊಂಡಂತೆ ಯಾರೊಬ್ಬರನ್ನೂ ಶ್ರೀ ಸಂಜೀವ್ ಭಟ್ ಅಥವಾ ಅವರ ಯಾವುದೇ ಸಿಬ್ಬಂದಿ ವಿಚಾರಣೆಗೆ ಒಳಪಡಿಸಿರಲಿಲ್ಲ.
ಶ್ರೀ ಸಂಜೀವ್ ಭಟ್ ಅವರ ವಿರುದ್ಧ ಸುಳ್ಳು ಆರೋಪ ಹೊರಿಸಿ ದೂರು ದಾಖಲಿಸಿರುವ VHP/BJP ಯ ಸಕ್ರಿಯ ಕಾರ್ಯಕರ್ತ ಅಮೃತಲಾಲ್ ಮಾಧವಜಿ ವೈಷ್ಣಾನಿ, ಬಂಧಿತ ಗಲಭೆಕೋರರನ್ನು ಸೆರೆಯಲ್ಲಿರುವಾಗ ಬಸ್ಕಿ ಹೊಡೆಸಲಾಗಿ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಬಯಲು ಚೌಕಿಯಲ್ಲಿ ಇರಿಸಲಾಗಿತ್ತು ಎಂದು ಆರೋಪಿಸಿದ್ದಾರೆ. ಆದರೆ 31ನೇ ಅಕ್ಟೋಬರ್ 1990ರಂದು ಸ್ಥಳೀಯ ಪೊಲೀಸರು ಹತ್ತಿರದ ನ್ಯಾಯಾಧೀಶರ ಎದುರು ಹಾಜರುಪಡಿಸಿದಾಗ ಸಾವನ್ನಪ್ಪಿರುವ ಪ್ರಭುದಾಸ್ ಮಾಧವಜಿ ವೈಷ್ಣಾನಿಯಾಗಲೀ ಅಥವಾ 133 ಬಂಧಿತ ಗಲಭೆಕೋರರ ಪೈಕಿ ಯಾರೊಬ್ಬರೂ ಯಾವುದೇ ಹಿಂಸೆಯ ಬಗ್ಗೆ ದೂರು ನೀಡಲಿಲ್ಲ ಇಲ್ಲವೇ ಕುಂದುಕೊರತೆಯನ್ನು ಹೇಳಿಕೊಳ್ಳಲಿಲ್ಲ ಎಂಬುದು ಗಮನಾರ್ಹ. ಪ್ರಭುದಾಸ್ ಮಾಧವಜಿ ವೈಷ್ಣಾನಿಯೂ ಸೇರಿದಂತೆ 133 ಗಲಭೆಕೋರರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾದ ನಂತರವೂ ಯಾವುದೇ ಹಿಂಸೆ ಅಥವಾ ತೊಂದರೆಯ ಬಗ್ಗೆ ದೂರು ಇರಲಿಲ್ಲ.
ನವೆಂಬರ್ 12, 1990ರಂದು ಅನಾರೋಗ್ಯದ ಕಾರಣ ಪ್ರಭುದಾಸ್ ಮಾಧವಜಿ ವೈಷ್ಣಾನಿಯನ್ನು ಜಾಮ್ ನಗರದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿ ಆನಂತರ ರಾಜಕೋಟ್ ಗೆ ವರ್ಗಾಯಿಸಲಾಯಿತು. ಆತನನ್ನು ಆಸ್ಪತ್ರೆಗೆ ಒಯ್ಯುವಾಗಲೂ ಸಹ ಸಂಜೀವ್ ಭಟ್ ಅವರ ವಿರುದ್ಧ ಯಾವ ದೂರಾಗಲೀ ಅಸಮಾಧಾನವಾಗಲೀ ವ್ಯಕ್ತವಾಗಲಿಲ್ಲ. ನವೆಂಬರ್ 18, 1990ರಂದು ರಾಜಕೋಟ್ ನಲ್ಲಿ ಚಿಕಿತ್ಸೆ ಪಡೆಯುವಾಗ ವೈಷ್ಣಾನಿ ಸಾವನ್ನಪ್ಪಿದರು. ಪ್ರಭುದಾಸ್ ಮಾಧವಜಿ ವೈಷ್ಣಾನಿಯ ಆಸ್ಪತ್ರೆ ದಾಖಲೆಗಳು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಮರಣೋತ್ತರ ಪರೀಕ್ಷಾ ವರದಿಗಳು, ಯಾವುದೇ ಗಾಯದ ಅಥವಾ ಹಿಂಸೆಯ ಇಲ್ಲವೇ ತೊಂದರೆಯಾಗಿರುವ ಆಂತರಿಕ ಅಥವಾ ಬಾಹ್ಯ ಸೂಚನೆಗಳಿಲ್ಲ ಎಂದು ಗಮನಿಸಿವೆ.
ಪೊಲೀಸರ ವಶದಲ್ಲಿರುವಾಗ ಹಿಂಸೆ ನೀಡಲಾಗಿದೆ ಎಂದು ಅಮೃತಲಾಲ್ ಮಾಧವಜಿ ವೈಷ್ಣಾನಿ ದೂರು ನೀಡಿರುವುದು ಪ್ರಭುದಾಸ್ ಮಾಧವಜಿ ವೈಷ್ಣಾನಿಯ ನಿಧನ ಹೊಂದಿದ ನಂತರವಷ್ಟೇ. ದೂರುದಾರ ಸಹ VHP/ BJPಯ ಸಕ್ರಿಯ ಕಾರ್ಯಕರ್ತನೇ.
ಮತೀಯ ಹಿಂಸಾಚಾರ ಸಂಭವಿಸಿದ ಮತ್ತು ಪ್ರಭುದಾಸ್ ಮಾಧವಜಿ ವೈಷ್ಣಾನಿಯ ಬಂಧನವಾದ ದಿನ, ಅಕ್ಟೋಬರ್ 30, 1990, ಶ್ರೀ ಸಂಜೀವ್ ಭಟ್ ಅವರು ಜಾಮ್ ನಗರದಲ್ಲಿ ವರ್ಗವಾದ ಕೇವಲ 20ನೇ ದಿನವಾಗಿತ್ತು. ಅವರಿಗೆ ಯಾರ ವಿರುದ್ಧವೂ ಸೇಡಿರುವುದು ಹಾಗಿರಲಿ, ಬಂಧನಕ್ಕೊಳಗಾದ ಯಾವ ವ್ಯಕ್ತಿಯ ಪರಿಚಯವೂ ಇರಲಿಲ್ಲ.
ಶ್ರೀ ಸಂಜೀವ್ ಭಟ್ ಅವರ ವಿರುದ್ಧ ದಾಖಲಾಗಿರುವ ದೂರು ರಾಜಕೀಯ ಪ್ರತೀಕಾರದ ತಾಜಾ ಪ್ರಕರಣವಾಗಿದೆ. ಏಕೆಂದರೆ 1990ರ ನವೆಂಬರ್ 1ರಂದು ಗುಜರಾತ್ ವಿಧಾನಸಭೆಯಲ್ಲಿ ಗುಜರಾತಿನ ಅಂದಿನ ಮುಖ್ಯಮಂತ್ರಿ ಚಿಮನ್ ಭಾಯಿ ಪಟೇಲ್ ವಿಶ್ವಾಸಮತ ಎದುರಿಸಬೇಕಾದಾಗ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಪಟೇಲ್ ಸಮುದಾಯದ ಶಾಸಕರ ಬೆಂಬಲವನ್ನು ಪಡೆಯಲು ಅವರು ತವಕಿಸುತ್ತಿದ್ದರು. ಬಂಧಿತರಲ್ಲಿ ಬಹುತೇಕರು ಪಟೇಲ್ ಸಮುದಾಯಕ್ಕೆ ಸೇರಿದವರಾಗಿದ್ದರು. ಸಂಜೀವ್ ಭಟ್ ಅವರು ಅಪರಾಧ ಪ್ರಕರಣಗಳ ಪಟ್ಟಿಯಿಂದ TADA ಕಾಯಿದೆಯ ಸೆಕ್ಷನ್ ಗಳನ್ನು ತೆಗೆಯಲು ನಿರಾಕರಿಸಿದರು. ಇದು ಪಟೇಲ್ ಜನಾಂಗಕ್ಕೆ ಸೇರಿದ್ದ ಅಂದಿನ ಗೃಹ ಸಚಿವರಾಗಿದ್ದ ನರಹರಿ ಅಮಿನ್ ಮತ್ತು ಮುಖ್ಯಮಂತ್ರಿ ಚಿಮನ್ ಭಾಯಿ ಪಟೇಲ್ ಇವರಿಬ್ಬರಿಗೂ ವೈಯಕ್ತಿಕ ಅಪಮಾನವೆಂಬಂತೆ ನೋಡಲಾಯಿತು.
ಸಂಜೀವ್ ಭಟ್ ಅಪ್ಪಟ ನಿಷ್ಠೆ ಮತ್ತು ನಿಯತ್ತಿನಿಂದ ತಮ್ಮ ಕರ್ತವ್ಯ ಪಾಲಿಸುತ್ತಿರುವುದಕ್ಕಾಗಿ ಸುಳ್ಳು ಆರೋಪಗಳನ್ನು ಹೊರಿಸಿ ಬಲಿಪಶುಮಾಡಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಮತ್ತು ಗೃಹ ಇಲಾಖೆಯೊಳಗಿನ ಅವರ ಮೇಲಧಿಕಾರಿಗಳಿಗೆ ಪೂರ್ಣ ಅರಿವಿತ್ತು. ಆದ್ದರಿಂದಲೇ ಗುಜರಾತ್ ಸರ್ಕಾರದ ಗೃಹ ಇಲಾಖೆ ಸಂಜೀವ್ ಭಟ್ ಅವರಿಗೆ ಜನವರಿ 9, 1991ರ ಗುಜರಾತ್ ಸರ್ಕಾರದ ನಿರ್ಣಯದ ಸಂಖ್ಯೆ MIS/1090/6152-B ಆದೇಶದ ಅನ್ವಯ ಕಾನೂನು ನೆರವು ನೀಡಲು ತೀರ್ಮಾನಿಸಿತು. ಸಿಐಡಿ ನಡೆಸಿದ ತನಿಖೆಯಲ್ಲಿ ಸಂಜೀವ್ ಭಟ್ ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಕಂಡುಬರಲಿಲ್ಲವಾದ್ದರಿಂದ ರಾಜ್ಯ ಸರ್ಕಾರ ಅವರನ್ನು ಪ್ರಾಸಿಕ್ಯೂಟ್ ಮಾಡಲು ಒಪ್ಪಿಗೆ ನೀಡಲಿಲ್ಲ.
ರಾಜ್ಯ ಸರ್ಕಾರವು ಪೊಲೀಸ್ ಅಧಿಕಾರಿಗಳು ಮತ್ತು ಶ್ರೀ ಭಟ್ ಅವರಿಗೆ 2011ರ ವರೆಗೂ ಮನಃಪೂರ್ವಕವಾಗಿ ರಕ್ಷಣೆ ಕೊಟ್ಟಿತ್ತು. 2002ರ ಗಲಭೆಗಳ ವಿಚಾರಣೆ ನಡೆಸುತ್ತಿದ್ದ ನ್ಯಾ. ನಾನಾವತಿ ಆಯೋಗ ಮತ್ತು ನ್ಯಾ. ಮೆಹ್ತಾ ಆಯೋಗಗಳು 2011ರಲ್ಲಿ ಶ್ರೀ ಸಂಜೀವ್ ಭಟ್ ಅವರನ್ನು ಸಾಕ್ಷ್ಯದ ಹೇಳಿಕೆ ನೀಡಲು ಕರೆ ಕಳುಹಿಸಿತು. ಆಯೋಗಗಳ ಎದುರು ಸಂಜೀವ್ ಭಟ್, ಗುಜರಾತಿನಲ್ಲಿ 2002ರಲ್ಲಿ ನಡೆದ ಗಲಭೆಗಳಲ್ಲಿ ಗುಜರಾತಿನ ಅಂದಿನ ಮುಖ್ಯಮಂತ್ರಿ, ಇತರ ಸಚಿವರಗಳು ಮತ್ತು ಉನ್ನತ ಅಧಿಕಾರಿಗಳು ವಹಿಸಿದ ಪಾತ್ರದ ಬಗ್ಗೆ ಪ್ರಾಮಾಣಿಕವಾಗಿ ಸತ್ಯ ನುಡಿದರು. ಭಟ್ ಅವರ ಸಾಕ್ಷ್ಯ ಹೇಳಿಕೆಯ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಕೂಡಲೇ ಅದೇ ದಿನ ಸಂಜೆಯೇ ಹಿಂಪಡೆಯಲಾಯಿತು. ಅಲ್ಲದೆ ಅಲ್ಲಿಯ ವರೆಗೂ ಗುಜರಾತ್ ಸರ್ಕಾರ ರಕ್ಷಿಸಿಕೊಂಡು ಬಂದಿದ್ದಂತಹ ಸಂಜೀವ್ ಭಟ್ ಮತ್ತಿತರ ಅಧಿಕಾರಿಗಳನ್ನು ಪ್ರಾಸಿಕ್ಯೂಟ್ ಮಾಡಲು ಮರುದಿನವೇ ಆದೇಶ ನೀಡಲಾಯಿತು.
ಪ್ರತೀಕಾರದ ಕಿರುಕುಳ ಶುರು ಮಾಡಿದ್ದರಿಂದ 300 ಸಾಕ್ಷ್ಯಗಳ ಪೈಕಿ ಕೇವಲ 32 ಸಾಕ್ಷ್ಯಗಳ ವಿಚಾರಣೆ ನಡೆಸಲಾಗಿದೆ. 1990-2012ರ ತನಕ ಮೌನವಾಗಿದ್ದ ದೂರುದಾರರು ಇದ್ದಕ್ಕಿದ್ದಂತೆ ಜಾಗೃತಗೊಂಡು ಸುಪ್ರೀಂ ಕೋರ್ಟ್ ಸೇರಿದಂತೆ ನ್ಯಾಯಾಲಯಗಳಲ್ಲಿ, ಹಿರಿಯ ವಕೀಲರನ್ನು ನೇಮಿಸಿದರು. ಅನ್ಯಾಯ ಹೇಗಿತ್ತೆಂದರೆ ಸಂಜೀವ್ ಭಟ್ ಅವರಿಗೆ ತಮ್ಮ ಯಾವುದೇ ಡಿಫೆನ್ಸ್ (ಪ್ರತಿವಾದಿ) ಸಾಕ್ಷ್ಯವನ್ನು ಹಾಜರುಪಡಿಸಲು ಅವಕಾಶ ನೀಡಲಿಲ್ಲ. ವಿಧಿವಿಜ್ಞಾನ ವೈದ್ಯಕೀಯ ತಜ್ಞ ಡಾ|| ರೆಡ್ಡಿ ಅವರನ್ನು ಹಾಜರುಪಡಿಸಲು ಕೇಳಿಕೊಂಡಾಗ, ನ್ಯಾಯಾಲಯವು ಅಣುಕಿಸಿದಂತೆ, ಅವರನ್ನು ಅದೇ ದಿನ ಮಧ್ಯಾಹ್ನ 3 ಗಂಟೆಯೊಳಗೆ ನ್ಯಾಯಾಲಯದಲ್ಲಿ ಹಾಜರಿರುವಂತೆ ಮಧ್ಯಾಹ್ನ 12.30 ಗಂಟೆಗೆ ಆದೇಶಿಸಿತು. ತಜ್ಞರು ಹೈದರಾಬಾದಿನಲ್ಲಿ ವಾಸಿಸುವರೆಂಬುದಾಗಿ, ಪ್ರಯಾಣ ಬೆಳೆಸಲು ಕನಿಷ್ಠ ಒಂದು ದಿನ ಮೊದಲಾದರೂ ಸೂಚನೆ ನೀಡಬೇಕೆಂದು ಚೆನ್ನಾಗೇ ತಿಳಿದ ನ್ಯಾಯಾಲಯ ಈ ರೀತಿ ಆದೇಶ ನೀಡಿತ್ತು. ಹೀಗಾಗಿ ಒಂದು ಪ್ರಮುಖ ಸಾಕ್ಷ್ಯದ ವಿಚಾರಣೆಯ ಕೋರಿಕೆಯನ್ನು ನ್ಯಾಯಾಲಯ ತಳ್ಳಿಹಾಕಿತು. ಇನ್ನೂ ಮಿಗಿಲಾಗಿ ವಿಚಾರಣೆಯನ್ನು ಪೂರ್ಣಗೊಳಿಸುವ ಆದೇಶವನ್ನು ಅಂದರೆ ಪ್ರತಿವಾದಿಗಳ (ಸಂಜೀವ್ ಭಟ್) ಅರಿವಿಗೆ ಬಾರದಂತೆ, ಭಟ್ ಅವರ ವಕೀಲರ ಅನುಪಸ್ಥಿತಿಯಲ್ಲಿ ನೀಡಲಾಯಿತು.
ಇಂದು ಸಂಜೀವ್ ಭಟ್ ತಾವು ಮಾಡಿಲ್ಲದ ಅಪರಾಧಕ್ಕಾಗಿ ಅವರನ್ನು ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗಿದೆ. ರಾಜಕೀಯ ಒತ್ತಡವನ್ನು ಲೆಕ್ಕಿಸದೆ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಮತ್ತು ನಿಷ್ಠುರ ಅಧಿಕಾರಿಯಾಗಿದ್ದಕ್ಕಾಗಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಪೊಲೀಸ್ ಕಸ್ಟಡಿಯಿಂದ ಹೊರಹೋದ 18 ದಿನಗಳ ನಂತರ ಸಾವು ಸಂಭವಿಸುವುದಾದರೂ ಹೇಗೆ; ಅದರಲ್ಲೂ ಯಾವುದೇ ಆಂತರಿಕ ಅಥವಾ ಬಾಹ್ಯ ಪೆಟ್ಟು ಗಾಯಗಳ ಸೂಚನೆಯಿಲ್ಲದೆ, ವಿಧಿವಿಜ್ಞಾನ ವೈದ್ಯಕೀಯ ತಜ್ಞರು ಪರೀಕ್ಷಿಸಿ ಯಾವ ಹಿಂಸೆಯ ಅಥವಾ ತೊಂದರೆಯ ಸೂಚನೆಯೂ ಇಲ್ಲವೆಂದು ವರದಿ ಮಾಡಿರುವ ಸಾವನ್ನು ಕೊಲೆ ಎಂದು ಘೋಷಿಸುವುದು ಎಷ್ಟು ವಿಚಿತ್ರವಲ್ಲವೇ!
ಕೋಮು ಗಲಭೆಗಳ ಅತ್ಯಂತ ಕಷ್ಟಕರ ಸಂದರ್ಭದಲ್ಲಿ ಅದ್ಭುತವಾಗಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದ ಶ್ರೀ ಸಂಜೀವ್ ಭಟ್ ಮತ್ತವರ ಸಿಬ್ಬಂದಿಯನ್ನೂ ಒಳಗೊಂಡಂತೆ ತೀರಾ ಅಮಾಯಕ ಅಧಿಕಾರಿಗಳಿಗೆ ಪ್ರತೀಕಾರದ ಶಿಕ್ಷೆ ನೀಡುವುದಕ್ಕೆ ಇದಕ್ಕಿಂತ ಹೆಚ್ಚು ಸ್ಪಷ್ಟ ನಿದರ್ಶನ ಬೇರೆ ಸಿಗಲಾರದು.
ನ್ಯಾಯಾಲಯದ ಆದೇಶ ನಮ್ಮ ಕೈ ಸೇರಿದ ತಕ್ಷಣವೇ ನಾವು ಅದನ್ನು ಕೂಲಂಕುಶವಾಗಿ ಪರಿಶೀಲಿಸಿ ಸೂಕ್ತ ವೇದಿಕೆಯಲ್ಲಿ ಅದನ್ನು ಪ್ರಶ್ನಿಸಲಿದ್ದೇವೆ. ನ್ಯಾಯವನ್ನು ಕೇವಲ ನಿರಾಕರಿಸಲಾಗಿಲ್ಲ, ಅಮಾಯಕ ವ್ಯಕ್ತಿಯೊಬ್ಬ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದ್ದಕ್ಕಾಗಿ ಅವನಿಗೆ ಶಿಕ್ಷೆ ವಿಧಿಸಲಾಗಿದೆ.
ಸಂಜೀವ್ ಭಟ್ ಅವರ ಹೆಚ್ಚುವರಿ ಹೇಳಿಕೆ ಮತ್ತು ವಿಧಿವಿಜ್ಞಾನ ತಜ್ಞರ ವೈದ್ಯಕೀಯ – ಕಾನೂನಾತ್ಮಕ ಅಭಿಪ್ರಾಯ (ಓದಲು ಇಮೇಜಿನ ಮೇಲೆ ಕ್ಲಿಕ್ ಮಾಡಿ)
