ಚಂಡರಕಿ: ಕಲಬುರ್ಗಿ ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ಮಳೆ ಸೃಷ್ಟಿಸಿದ ಅವಾಂತರದಿಂದಾಗಿ, ಇಡೀ ಊರಿನ ಜನತೆ ಬಹುನಿರೀಕ್ಷೆಯಿಂದ ಕಾತುರವಾಗಿ ಕಾಯುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾರ್ಯಕ್ರಮ ರದ್ದಾಗಿದೆ.
ಮುಖ್ಯಮಂತ್ರಿಯವರ ಆಗಮನಕ್ಕಾಗಿ ಗ್ರಾಮದಲ್ಲಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿತ್ತು, ಇಲ್ಲಿ ಅಕ್ಷರಶಃ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಆದರೆ ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಯಿಂದಾಗಿ ಜನತಾ ದರ್ಶನ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳ ಸಂಪೂರ್ಣ ಕೆಸರಾಗಿದೆ. ವೇದಿಕೆ ನಿರ್ಮಿಸಿದ್ದ ಜಾಗದ ಮುಂಭಾದಲ್ಲಂತೂ ನೀರು ನಿಂತು ಕೆರೆಯಂತಾಗಿದೆ, ಮಾಡಿಕೊಂಡಿದ್ದ ಸಕಲ ಸಿದ್ಧತೆಗಳೂ ಹಾಳಾಗಿವೆ.

ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, “ಗ್ರಾಮ ವಾಸ್ತವ್ಯ ರದ್ದಾಗಿಲ್ಲ, ಕಲಬುರ್ಗಿ ಜಿಲ್ಲೆಯ ಅಫ್ಜಲಪುರ ತಾಲ್ಲೂಕಿನ ಹೆರೂರು (ಬಿ) ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಇಲ್ಲಿ ನಡೆಯಬೇಕಿದ್ದ ಗ್ರಾಮ ವಾಸ್ತವ್ಯವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಜುಲೈ ಎರಡನೇ ವಾರದಲ್ಲಿ ಇಲ್ಲೇ ಗ್ರಾಮ ವಾಸ್ತವ್ಯ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
ಚಂಡರಕಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, “ಗ್ರಾಮ ವಾಸ್ತವ್ಯ ಮುಂದೂಡಲಾಗಿದೆ ಎನ್ನುವುದಕ್ಕಿಂತಲೂ ಮಿಗಿಲಾಗಿ ಈ ಭಾಗದಲ್ಲಿ ಮಳೆ ಬಿದ್ದಿರುವುದು ಅತ್ಯಂತ ಆಶಾದಾಯಕವಾಗಿದೆ. ಹೀಗಾಗಿ ಗ್ರಾಮ ವಾಸ್ತವ್ಯ ಮುಂದೂಡಲಾಗಿದೆ” ಎಂದು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.
ಮುಂದುವರೆದು, “ಈ ಭಾಗದ ಜನರು ಏನೆಲ್ಲಾ ನಿರೀಕ್ಷೆ ಇಟ್ಟುಕೊಂಡಿದ್ದರೋ, ಅವರ ಕ್ಷಮೆ ಯಾಚಿಸುತ್ತೇನೆ. ಜುಲೈನಲ್ಲಿ 10 ದಿನಗಳ ವಿಧಾನಸಭಾ ಅಧಿವೇಶನ ನಡೆಸಬೇಕಾಗಿದೆ. ಆದ್ದರಿಂದ ಜುಲೈ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು” ಎಂದು ಭರವಸೆ ನೀಡಿದ್ದಾರೆ.
“ಚಂಡರಕಿ ಗ್ರಾಮ ವಾಸ್ತವ್ಯದಲ್ಲಿ ಜನಸಾಮಾನ್ಯರಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗಿದೆ. ಕೆಲ ಅರ್ಜಿಗಳಲ್ಲಿರುವ ಸಮಸ್ಯೆಗಳಿಗೆ ನ್ಯಾಯಾಲಯದಲ್ಲಿ ಮಾತ್ರ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗಾಗಿ ಅಂತಹ ಪ್ರಕರಣಗಳನ್ನು ಈಗ ಇತ್ಯರ್ಥಪಡಿಸಿಲ್ಲ” ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಯಶಸ್ವಿಯಾಗಿ ಒಂದು ದಿನದ ಗ್ರಾಮ ವಾಸ್ತವ್ಯ ಮುಗಿಸಿದ ಕುಮಾರಸ್ವಾಮಿ ಅವರನ್ನು ಇಂದು ಬೆಳಿಗ್ಗೆ ಗ್ರಾಮಸ್ಥರು ಆತ್ಮೀಯತೆಯಿಂದ ಬೀಳ್ಕೊಟ್ಟಿದ್ದಾರೆ.
ಗ್ರಾಮ ವಾಸ್ತವ್ಯವನ್ನು ಮುಂದುವರೆಸಿ ಹೆರೂರು ಗ್ರಾಮದತ್ತ ತೆರಳಬೇಕಿದ್ದ ಸಿಎಂ ಮಳೆಯ ಕಾರಣದಿಂದ ಬೆಂಗಳೂರಿನತ್ತ ಪಯಣ ಬೆಳೆಸಿದ್ದಾರೆ.
More Articles
By the same author