ಬೀಡ್, ಮಹಾರಾಷ್ಟ್ರ: ಒಂದು ಕಡೆ ಮಹಾರಾಷ್ಟ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಗ್ರಾಮೀಣ ಪ್ರದೇಶವು ತೀವ್ರ ಬರಗಾಲಕ್ಕೆ ತುತ್ತಾಗಿದ್ದರೆ, ಮತ್ತೊಂದೆಡೆ ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಶಿವಸೇನೆ ಮತ್ತು ಬಿಜೆಪಿಯ ರಾಜಕಾರಣಿಗಳು ಮಾತ್ರ, ಜಾನುವಾರುಗಳನ್ನು ಸಾಕುವ ಬಡರೈತರಿಗೆ ನೆರವಾಗಲೆಂದು ಮೀಸಲಿಟ್ಟಿದ್ದ ಹಣ ಮತ್ತು ಸಂಪನ್ಮೂಲಗಳನ್ನು ಗೋಶಾಲೆಗಳಿಂದ ವ್ಯವಸ್ಥಿತವಾಗಿ ಲಪಟಾಯಿಸಿ ತಮ್ಮ ಖಜಾನೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಅಧಿಕಾರಿಗಳು ಈ ಅವ್ಯವಹಾರಕ್ಕೆ ತಡೆಯೊಡ್ಡಲು ಯತ್ನಿಸಿದಾಗ, ಮಹಿಳಾ ಅಧಿಕಾರಿಯನ್ನೂ ಬಿಡದಂತೆ ಅವರ ಮೇಲೆ ಪುಂಡರು ದಾಳಿ ನಡೆಸಿ ಜೀವಬೆದರಿಕೆ ಒಡ್ಡಿದ್ದಾರೆ.
ರೈತರು, ಸಾಮಾಜಿಕ ಕಾರ್ಯಕರ್ತರು, ವಕೀಲರು, ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ HuffPost India, ಈ ಮೇವು ಹಗರಣದ ಕುರಿತು ವರದಿ ಮಾಡಿದೆ.
2019ರ ಮಾರ್ಚ್ ನಲ್ಲಿ ರಾಜ್ಯ ಸರ್ಕಾರ 1400ಕ್ಕೂ ಹೆಚ್ಚು ಗೋಶಾಲೆಗಳನ್ನು ಸ್ಥಾಪಿಸಿ ಬರಪೀಡಿತ ಪ್ರದೇಶಗಳ ರೈತರು ತಮ್ಮ ದನಕರುಗಳಿಗೆ ಪೋಷಣೆ ನೀಡಲು ಅನುವು ಮಾಡಿಕೊಟ್ಟಿತ್ತು. ರಾಜ್ಯದ ಅತಿಹೆಚ್ಚು ಬಾಧಿತ ಪ್ರದೇಶಗಳಲ್ಲೊಂದಾದ ಬೀಡ್ ಜಿಲ್ಲೆಗೆ 933 ಗೋಶಾಲೆಗಳು ಮಂಜೂರಾಗಿದ್ದವು. ಸರ್ಕಾರದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಇವುಗಳ ಪೈಕಿ 876 ಗೋಶಾಲೆಗಳನ್ನು ಸ್ಥಾಪಿಸಲಾಗಿದ್ದು 545 ಮೇವು ಸರಬರಾಜು ಕೇಂದ್ರಗಳು ಇನ್ನೂ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಪ್ರತಿದಿನವೂ 3,49,106 ಜಾನುವಾರುಗಳಿಗೆ ಇಲ್ಲಿ ಮೇವು ಒದಗಿಸಲಾಗುತ್ತಿದೆ.
ಸರ್ಕಾರದ ಮಾರ್ಗಸೂಚಿಗಳು ತಿಳಿಸುವಂತೆ ಈ ಕೇಂದ್ರಗಳನ್ನು ನಿರ್ವಹಿಸಲು ಹಾಗೂ ಜಾನುವಾರುಗಳಿಗೆ ಉಚಿತ ಮೇವು ಮತ್ತು ನೀರನ್ನು ಒದಗಿಸಲು ಸ್ಥಳೀಯ ಎನ್ ಜಿ ಒ ಗಳನ್ನು ಆಹ್ವಾನಿಸಲಾಗಿತ್ತು. ಈ ಕೇಂದ್ರಗಳಲ್ಲಿ ಪ್ರತಿ ದೊಡ್ಡ ಪ್ರಾಣಿಗೆ 15 ಕೆಜಿ ಮೇವು ಒದಗಿಸಲು ದಿನವೊಂದಕ್ಕೆ 90 ರೂಪಾಯಿಗಳಂತೆ ಮತ್ತು ಸಣ್ಣ ಪ್ರಾಣಿಯೊಂದಕ್ಕೆ 7.5 ಕಿಲೋ ಮೇವು ಪೂರೈಸಲು 45 ರೂಪಾಯಿಗಳಂತೆ ಎನ್ ಜಿ ಒ ಗಳಿಗೆ ಹಣ ಮರುಪಾವತಿ ಮಾಡಲಾಗುತ್ತಿತ್ತು.
ಗೋಶಾಲೆಗಳಲ್ಲಿ ಗುಳುಂ ಮಾಡಿದರೇ ಬಿಜೆಪಿ-ಶಿವಸೇನೆ ನಾಯಕರು?
ಬೀಡ್ ಜಿಲ್ಲೆಯಲ್ಲಿ ಸ್ಥಳೀಯ ಬಿಜೆಪಿ ರಾಜಕಾರಣಿ ರಾಜೇಂದ್ರ ಮಸ್ಕೆ ಮತ್ತು ಶಿವಸೇನೆಯ ಜಿಲ್ಲಾ ಅಧ್ಯಕ್ಷ ಕುಂಡಲೀಕ ಖಂಡೆ ಈ ಗೋಶಾಲೆಗಳನ್ನು ನಿಯಂತ್ರಿಸುತ್ತಿರುವುದಾಗಿ ಕಂಡುಬಂದಿದೆ. ಅವರು ತಮ್ಮ ಜೊತೆಗಾರರ ಹೆಸರಲ್ಲಿ ಎನ್ ಜಿ ಒ ಗಳನ್ನು ಸ್ಥಾಪಿಸಿ, ಗೋಶಾಲೆಗಳಲ್ಲಿನ ಜಾನುವಾರುಗಳ ಸಂಖ್ಯೆಯನ್ನು ವ್ಯವಸ್ಥಿತವಾಗಿ ಇರುವುದಕ್ಕಿಂತ ಹೆಚ್ಚು ತೋರಿಸಿ, ದನಕರುಗಳಿಗೆ ನೀಡುವ ಮೇವು ಮತ್ತು ನೀರಿನ ಪ್ರಮಾಣಕ್ಕೆ ಖೋತಾ ಮಾಡಿದ್ದಾರೆಂಬ ಸಂಗತಿ ಬೆಳಕಿಗೆ ಬಂದಿದೆ.
ಕಳೆದ ತಿಂಗಳು ಬೀಡ್ ನ ಜಿಲ್ಲಾಧಿಕಾರಿ ಆಸ್ತಿಕ್ ಕುಮಾರ್ ಪಾಂಡೆ ತನಿಖೆಗೆ ಆದೇಶಿಸಿದಾಗ ಬೀಡ್ ತಾಲ್ಲೂಕಿನಲ್ಲಿ ಮೇವು ಸರಬರಾಜು ಕೇಂದ್ರಗಳಲ್ಲಿದ್ದ ಜಾನವಾರುಗಳ ಸಂಖ್ಯೆ ದಿನಂಪ್ರತಿ 16 ಸಾವಿರ ಕಡಿಮೆ ಇದ್ದುದಾಗಿ ವರದಿಯಾಗಿದೆ. HuffPost India ಹೇಳುವ ಪ್ರಕಾರ, ಇದರರ್ಥ ಇಷ್ಟೇ – ನಕಲಿ ಲೆಕ್ಕಾಚಾರದಲ್ಲಿ ಯಾವ ಪ್ರಾಣಿಯನ್ನು ತೋರಿಸಲಾಗುತ್ತಿತ್ತು ಎಂಬುದನ್ನಾಧರಿಸಿ ಸುಮಾರು 7.2 ಲಕ್ಷ ರೂಪಾಯಿಗಳಿಂದ 14.4 ಲಕ್ಷ ರೂಪಾಯಿಗಳಷ್ಟು ಹಣವನ್ನು ಬರಗಾಲದಾದ್ಯಂತ ಪ್ರತಿದಿನವೂ ಬಿಜೆಪಿ ಮತ್ತು ಶಿವಸೇನೆ ತಮ್ಮ ಖಜಾನೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದವು.
“ಈ ಎನ್ ಜಿ ಒ ಗಳು ಅಥವಾ ಸ್ಥಳೀಯ ಸಂಘಟನೆಗಳು ಸ್ಥಳೀಯ ರಾಜಕಾರಣಿಗಳಿಗೆ ಸೇರಿದ ಅಂಗಸಂಸ್ಥೆಗಳೇ. ಈ ರಾಜಕಾರಣಿಗಳು ಅದೆಷ್ಟು ಲಜ್ಜೆಗೆಟ್ಟವರೆಂದರೆ ತೀವ್ರ ಬರಗಾಲದಿಂದಾಗಿ ಜನ ಬದುಕುವುದೇ ಕಷ್ಟವಾಗಿದ್ದಾಗಲೂ ಅವರಿಗೆ ತಮ್ಮ ಪಾಲು ಬೇಕೇ ಬೇಕು”
– ಅಜಿತ್ ದೇಶಮುಖ್,
ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಮತ್ತು ವಕೀಲ
ಮೇವು ಸರಬರಾಜು ಕೇಂದ್ರ ನಡೆಸುತ್ತಿರುವ ಎನ್ ಜಿ ಒ ಗಳ ಅಸಲಿ ಕತೆ ಏನು?
ಸರ್ಕಾರಿ ದಾಖಲೆಗಳ ಪ್ರಕಾರ, ಜ್ಯೋತಿಬಾ ಬಹುದ್ದೇಶೀಯ ಸೇವಾಭಾವಿ ಸಂಸ್ಥಾ ಎಂಬ ಎನ್ ಜಿ ಒ ಬೀಡ್ ಜಿಲ್ಲೆಯ ಅಂಬೇಸಾವಲಿ, ನಾಗಪುರ ಫಾಟ, ದಗಡಿ ಶಹಜಹಾನ್ ಪುರ್, ಸಾಮನಾಪುರ್, ಬೇಲ್ಖಂಡಿ, ಪಿಪರ್ನಯಿ, ಪದಲಿ, ಶಿರಾಪುರ್ ಗಟ್, ನಿರಗುಂದಿ, ಅಹೇರ್ ವಡಗಾಂವ್ ಮತ್ತು ಚಕಲಾಂಬ ಗ್ರಾಮಗಳಲ್ಲಿ 11 ಮೇವು ಸರಬರಾಜು ಕೇಂದ್ರಗಳನ್ನು ನಡೆಸುತ್ತಿದೆ.
ಬೀಡ್ ನ ದಗಡಿ ಶಹಜಹಾನ್ ಪುರ್ ಗ್ರಾಮದ ಸಣ್ಣ ರೈತ ಕಲ್ಯಾಣ್ ಪವಾರ್ ಅವರ ಪುಟ್ಟ ಮನೆಯೇ ಜ್ಯೋತಿ ಬಹುದ್ದೇಶೀಯ ಸೇವಾಭಾವಿ ಸಂಸ್ಥಾದ ನೋಂದಾಯಿತ ಕಚೇರಿ. ಇವರು ಎನ್ ಜಿ ಒ ದ ಅಧ್ಯಕ್ಷರೆಂದು ನೋಂದಣಿ ಪತ್ರದಲ್ಲಿ ಗುರುತಿಸಲಾಗಿದೆ. HuffPost India ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಪವಾರ್ ತನ್ನ ಏಳು ಎಕರೆ ಜಮೀನಿನಲ್ಲಿ ಪ್ರತಿ ವರ್ಷ 2.5 ಲಕ್ಷ ರೂಪಾಯಿಗಳು ಸಂಪಾದಿಸುವುದಾಗಿ ತಿಳಿಸಿದ್ದಾರೆ. ಹೀಗಿದ್ದಾಗ್ಯೂ ಅಷ್ಟೊಂದು ಕೇಂದ್ರಗಳನ್ನು ಒಬ್ಬನೇ ನಡೆಸಲು ಹೇಗೆ ಸಾಧ್ಯ? ಆತನಿಗೆ ಹಣ ಬರುವುದೆಲ್ಲಿಂದ? ಎಂಬ ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸುತ್ತವೆ.
ಈ ಪ್ರಶ್ನೆಗಳಿಗೆ ಪವಾರ್ ಅವರ ಉತ್ತರ ಹೀಗಿದೆ: “ಈ ಕೇಂದ್ರಗಳನ್ನು ನಡೆಸಲು ನನಗೆ ಒಳ್ಳೆಯ ರಾಜಕಾರಣಿಗಳು ಸಹಾಯಹಸ್ತ ಚಾಚುತ್ತಾರೆ. ನಾನು ಕಾನೂನಾತ್ಮಕವಾಗಿ ಯಾವುದೇ ಸಮಸ್ಯೆ ಇಲ್ಲದಂತೆ ಎಚ್ಚರ ವಹಿಸುತ್ತೇನಷ್ಟೇ. ನಾನು ಶಿವಸೇನೆಯ ಸದಸ್ಯ, ಆದರೆ ರಾಜೇಂದ್ರ ಮಸ್ಕೆ ಅವರ ರಾಜಕೀಯ ಕಾರ್ಯಕರ್ತ. 2006ರಲ್ಲಿ ಈ ಸಂಸ್ಥೆಯನ್ನು ನೋಂದಾಯಿಸುವಂತೆ ನನಗೆ ಮಸ್ಕೆ ಸೂಚಿಸಿದ್ದರು.” ರಾಜೇಂದ್ರ ಮಸ್ಕೆ ಮೂಲತಃ ಶಿವ ಸಂಗ್ರಾಮ ಮರಾಠಾ ಗುಂಪಿನ ಸದಸ್ಯ. ಇತ್ತೀಚೆಗೆ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
“ಮೇವು ಕೇಂದ್ರಗಳಿಗೆ ಸಂಬಂಧಿಸಿದಂತೆ ಖಂಡೆ ಮತ್ತು ಮಸ್ಕೆ ಒಟ್ಟಾಗಿ ಕೆಲಸ ಮಾಡುತ್ತಾರೆ ಮತ್ತು ಅಂತಹ ಅನೇಕ ಕೇಂದ್ರಗಳನ್ನು ನಡೆಸುತ್ತಾರೆ. ಅವರೇ ನನಗೆ ಈ ಕೇಂದ್ರಗಳನ್ನು ನಿರ್ವಹಿಸಲು ಸಹಾಯ ಮಾಡುತ್ತಾರೆ. ಈ ಕೇಂದ್ರಗಳಿಗೆಂದು ಮೀಸಲಿಟ್ಟ ಹಣವನ್ನು ಸರ್ಕಾರ ಮಂಜೂರು ಮಾಡಿ ನನ್ನ ಖಾತೆಗೆ ಜಮಾ ಮಾಡಿದಾಗ ನಾನು ಅವರಿಗೆ ಅದನ್ನು ಹಿಂದಿರುಗಿಸುತ್ತೇನೆ” ಎಂದು ಪವಾರ್ ತಿಳಿಸುತ್ತಾರೆ.
ಹೌದು, ಬರ ಎಂದರೆ ಸುಲಿಗೆಕೋರರಿಗೆ ಇಷ್ಟವೇ…
ಕುಂಡಲೀಕ ಖಂಡೆ ಶಿವಸೇನೆಯ ಬೀಡ್ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಪ್ರತಿಕ್ರಿಯೆ ಕೇಳಿದಾಗ ತಾನು ಬೀಡ್ ನಲ್ಲಿ ಮೇವು ಸರಬರಾಜು ಕೇಂದ್ರ ನಡೆಸುತ್ತಿರುವುದನ್ನು ನಿರಾಕರಿಸಿದರೂ ಸ್ಥಳೀಯ ಶಿವಸೇನೆ ನಾಯಕರಿಗೂ ಕಾರ್ಯಕರ್ತರಿಗೂ 40 ಮೇವು ಕೇಂದ್ರಗಳನ್ನು ಮಂಜೂರು ಮಾಡಿಸಲು ನೆರವಾಗಿದ್ದಾಗಿ ಒಪ್ಪಿಕೊಂಡರು. “ನಾನು ಇಲ್ಲಿ ಯಾವುದೇ ಮೇವು ಕೇಂದ್ರವನ್ನೂ ನಡೆಸುತ್ತಿಲ್ಲ. ನಾನು ಅವುಗಳ ಮಂಜೂರಾತಿ ಸಿಗಲು ನನ್ನ ಕೆಲವು ಕಾರ್ಯಕರ್ತರಿಗೆ ಸಹಾಯ ಮಾಡಿದೆ. ಈ ಜಿಲ್ಲೆಯಲ್ಲಿ ಅನೇಕ ಬಿಜೆಪಿ-ಶಿವಸೇನೆ ನಾಯಕರು ಮೇವು ಕೇಂದ್ರಗಳನ್ನು ನಡೆಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ. ಯಾವ ಅವ್ಯವಹಾರವೂ ವರದಿಯಾಗದ ಕೇವಲ ಮೂರು ಕೇಂದ್ರಗಳನ್ನು ತಾನು ನಿರ್ವಹಿಸುತ್ತಿರುವುದಾಗಿ ಮಸ್ಕೆ ಹೇಳಿಕೊಂಡಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಅಧಿಕಾರಿಗಳು ತಾವು ರಾಜ್ಯ ಬಿಜೆಪಿ ಸರ್ಕಾರದ ಬೆಂಬಲವಿರುವ ಸ್ಥಳೀಯ ರಾಜಕಾರಣಿಗಳ ವಿರುದ್ಧ ಎದ್ದು ನಿಂತಿದ್ದೇವೆಂಬ ಅರಿವಿದ್ದೇ ಈ ಮೇವು ಅವ್ಯವಹಾರವನ್ನು ನಿಯಂತ್ರಿಸಲು ಹರಸಾಹಸ ಪಟ್ಟಿರುವುದೂ ನಿಜ.
ಅವ್ಯವಹಾರ ಮುಚ್ಚಿಹಾಕಲು ಅಧಿಕಾರಿಗಳಿಗೆ ಬೆದರಿಕೆ…
2019ರ ಮೇ 9ರಂದು ಅಂಬೇಜೋಗೈ ವಿಭಾಗದ ಉಪವಿಭಾಗೀಯ ಅಧಿಕಾರಿ ಶೋಭಾ ಜಾಧವ್ ಅವರು ಬೀಡ್ ಹೊರವಲಯದ ಕೊಲರ್ವಾಡಿ ಗ್ರಾಮದ ಅಂಚಿನಲ್ಲಿರುವ ಕೇಂದ್ರದ ತಪಾಸಣೆ ನಡೆಸಲು ಮುಂದಾದರು. ಅಧಿಕಾರಿಗಳ ಪ್ರಕಾರ ಈ ಕೇಂದ್ರವನ್ನು ಬೀಡ್ ನ ಮತ್ಸ್ಯಗಂಧ ಸೇವಾಭಾಯಿ ಸಂಸ್ಥಾ ಎಂಬ ಎನ್ ಜಿ ಒ ನಡೆಸಬೇಕಿತ್ತು. ಆದರೆ ಅದನ್ನು ನಿಜವಾಗಿ ಉಸ್ತುವಾರಿ ವಹಿಸಿದ್ದು ಗೋರಖ್ ಸಿಂಘಮ್ ಎಂಬುವವ. ಈತ ಶಿವಸೇನೆಯ ಬೀಡ್ ಜಿಲ್ಲಾ ಸಂಚಾಲಕ ಮತ್ತು ಜಿಲ್ಲಾ ಅಧ್ಯಕ್ಷ ಖಂಡೆಯ ಒಡನಾಡಿ.
“ನಾನು ಸುಮಾರು 5 ಗಂಟೆಗೆ ಈ ಕೇಂದ್ರಕ್ಕೆ ಹೋಗಿ ದಾಖಲೆಗಳನ್ನು ಕೇಳಿದರೆ, ಅಲ್ಲಿನ ಪ್ರತಿನಿಧಿಗಳು ನನ್ನನ್ನು ಕಾಯುವಂತೆ ಮಾಡಿದರು. ಅರ್ಧ ಗಂಟೆಯ ನಂತರ, ಶಿವಸೇನೆಯ ನಾಯಕ ಕುಂಡಲೀಕ ಖಂಡೆ ಬಂದು ಈ ಕೇಂದ್ರವನ್ನು ತನ್ನ ಕಾರ್ಯಕರ್ತರೊಬ್ಬರು ನಡೆಸುತ್ತಿರುವುದಾಗಿ ಹೇಳಿದರು. ಅವರು ಇಲ್ಲಿ ತಲುಪಿದಾಗ, ಈ ಕೇಂದ್ರದ ತಪಾಸಣೆ ಮಾಡಬಾರದಾಗಿ ನನ್ನ ಕೆಲವು ಅಧಿಕಾರಿಗಳು ನನಗೆ ಮೊಬೈಲ್ ನಲ್ಲಿ ಸಂದೇಶ ಕಳುಹಿಸಲು ಶುರು ಮಾಡಿದ್ದರು” ಎಂದು ಶೋಭಾ ಹೇಳುತ್ತಾರೆ. ಅವರು ದಾಖಲಾತಿಗಳನ್ನು ನೋಡಬೇಕೆಂದು ಮತ್ತು ಕೇಂದ್ರದ ತಪಾಸಣೆ ನಡೆಸಬೇಕೆಂದು ಒತ್ತಾಯಿಸಿದಾಗ, ಆಕೆಯ ಮತ್ತವರ ಸಿಬ್ಬಂದಿಯೆದುರು ಸುಮಾರು 200 ಜನರು ಜಮಾಯಿಸಿ ಕೇಂದ್ರದ ದೀಪಗಳನ್ನು ಆರಿಸಲಾಗಿತ್ತು.
“ರೈತರು ತಪಾಸಣೆಯನ್ನು ವಿರೋಧಿಸುತ್ತಿರುವುದಾಗಿ ಖಂಡೆ ಹೇಳಿದರು. ಅವರು ನಮ್ಮ ಸಿಬ್ಬಂದಿಗೆ ಬೆದರಿಕೆ ಹಾಕಿದರು. ಫೋನ್ ನಲ್ಲಿ ಅವರೊಡನೆ ಮಾತನಾಡಿದ ಜಿಲ್ಲಾಧಿಕಾರಿಗೂ ಬೆಲೆ ಕೊಡಲಿಲ್ಲ. ಪರಿಸ್ಥಿತಿಯನ್ನು ಅರಿತ ನಾನು ಅಲ್ಲಿಂದ ನನ್ನ ಸಿಬ್ಬಂದಿಯನ್ನು ದೂರ ಕಳಿಸಲು ತೀರ್ಮಾನಿಸಿದೆ” ಎಂದು ಶೋಭಾ ಹೇಳುತ್ತಾರೆ.
ಆದರೆ ಬೀಡ್ ಜಿಲ್ಲಾಧಿಕಾರಿ ಆಸ್ತಿಕ್ ಕುಮಾರ್ ಪಾಂಡೆ ತಪಾಸಣೆ ನಡೆಸಲೇಬೇಕೆಂದು ಹಠ ಹಿಡಿದು ವಿಶೇಷ ಜಿಲ್ಲಾಧಿಕಾರಿ ಮತ್ತು ಪೊಲೀಸ್ ತಂಡವನ್ನು ಸ್ಥಳಕ್ಕೆ ರವಾನಿಸಿದರು. ಹಾಗಾಗಿ ಶೋಭಾ ಮತ್ತು ಆಕೆಯ ತಂಡ ಕೊಲರ್ವಾಡಿ ಕೇಂದ್ರಕ್ಕೆ ಹಿಂದಿರುಗಿ ತಪಾಸಣೆಯನ್ನು ಆರಂಭಿಸಿತು. ಆದಾಗ್ಯೂ ಖಂಡೆ ಕರೆಸಿದ್ದ ಜನ ದೀಪ ಹಚ್ಚಲು ನಿರಾಕರಿಸಿದರು.
ವಿಶೇಷ ಜಿಲ್ಲಾಧಿಕಾರಿ ಟಾರ್ಚ್ ಬೇಕೆಂದು ಕೇಳಿದರು. ಅವರು ಪ್ರತಿಯೊಂದು ಜಾನುವಾರನ್ನೂ ವೈಯಕ್ತಿಕವಾಗಿ ಪರೀಕ್ಷಿಸಿದರಾದರೂ ಖಂಡೆ ಮತ್ತವರ ಜನ ತಪಾಸಣೆಯ ಮಧ್ಯೆ ಮೂಗು ತೂರಿಸುತ್ತಾ ಅಧಿಕಾರಿಗಳನ್ನು ಹೆದರಿಸುತ್ತಲೇ ಇದ್ದರು.
ದಾಖಲಿಸಿದ್ದು 1607 ಜಾನುವಾರು, ಇದ್ದದ್ದು ಬರೀ 863!
“ಈ ಕೇಂದ್ರದಲ್ಲಿ 1607 ಜಾನುವಾರು ಇವೆ ಎಂದು ದಾಖಲಿಸಿದ್ದಾದರೂ ನಾವು ನಡೆಸಿದ ತಪಾಸಣೆಯಲ್ಲಿ ಕೇವಲ 863 ದನಕರುಗಳಿದ್ದವು. ಇನ್ನೂ 744 ಜಾನುವಾರುಗಳು ಕಣ್ಮರೆಯಾಗಿದ್ದವು” ಎನ್ನುತ್ತಾರೆ ಶೋಭಾ ಜಾಧವ್.
ಈ ಪ್ರಕರಣದ ನಂತರ ಜಿಲ್ಲಾಡಳಿತವು ಇಲ್ಲಿ ಮೇವು ಸರಬರಾಜು ಕೇಂದ್ರಕ್ಕೆ ಅನುಮತಿ ನೀಡುವುದನ್ನು ರದ್ದುಗೊಳಿಸಿತು. ಕೆಲವೇ ದಿನಗಳಲ್ಲಿ ಈ ಕೇಂದ್ರವನ್ನು ನಡೆಸುತ್ತಿದ್ದ ಸ್ವಯಂ ಸೇವಾ ಸಂಸ್ಥೆಯನ್ನೂ ಬದಲಿಸಲಾಯಿತು.
ಸಿಂಘಮ್ ಹೇಳುವುದನ್ನೆಲ್ಲಾ ನಂಬುವುದೇ ಆದರೆ, ಈಗ ಅವರ ಕೇಂದ್ರವು ಎಂದಿನಂತೆ ಸಹಜವಾಗಿ ನಡೆಯುತ್ತಿದ್ದು ತಾವು ಸರ್ಕಾರಿ ಅನುದಾನವನ್ನೂ ಪಡೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಹೇಳುವ ಪ್ರಕಾರ, ಕೊಲರ್ವಾಡಿ ಕೇಂದ್ರವನ್ನು ಮುಚ್ಚಲಾಗಿದೆ.
ಈ ಪ್ರಕರಣದ ನಂತರ ಜಿಲ್ಲಾಧಿಕಾರಿಯು ಇನ್ನೂ 18 ಇತರ ಕೇಂದ್ರಗಳ ಬಗ್ಗೆ ಕೂಲಂಕುಶ ತನಿಖೆಗೆ ಆದೇಶಿಸಿದರು. ಅವುಗಳ ಪೈಕಿ ಬಹುತೇಕ ಕೇಂದ್ರಗಳು ಒಂದಲ್ಲಾ ಒಂದು ರೀತಿ ಖಂಡೆಗೆ ಸಂಬಂಧಿಸಿದ್ದೇ. ಮಾರನೆಯ ದಿನ ಬೀಡ್ ತಾಲ್ಲೂಕಿನ ಎಲ್ಲಾ ಮೇವು ಕೇಂದ್ರಗಳಲ್ಲೂ ಜಾನವಾರುಗಳ ಸಂಖ್ಯೆ 16 ಸಾವಿರದಷ್ಟು ಕಡಿತಗೊಂಡಿತ್ತು.
ಅಧಿಕಾರಿಗಳ ಅಮಾನತ್ತಿಗೆ ಶಿಫಾರಸ್ಸು
ಇಬ್ಬರು ತಹಶೀಲ್ದಾರರು ಸೇರಿದಂತೆ ಜಿಲ್ಲೆಯ ಮೂವರು ಅಧಿಕಾರಿಗಳ ಅಮಾನತ್ತಿಗೆ ಜಿಲ್ಲಾಧಿಕಾರಿ ಪಾಂಡೆ ಶಿಫಾರಸ್ಸು ಮಾಡಿದ್ದಾರೆಂದು ತಿಳಿದುಬಂದಿದೆ. ಬೀಡ್ ತಹಶೀಲ್ದಾರ ಅವಿನಾಶ್ ಶಿಂಗಾಟೆ ಅವರ ಸಂಬಂಧಿ ಎಂದು ಹೇಳಲಾದ ಖಂಡೆಗೆ ಕೇಂದ್ರಗಳನ್ನು ಮಂಜೂರು ಮಾಡಲು ಸಂಚು ರೂಪಿಸಿದ್ದಕ್ಕಾಗಿ ಶಿಂಗಾಟೆ ಅವರ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಕಚೇರಿಯಿಂದ ಹೊರಡಿಸಲಾದ ಆಂತರಿಕ ಟಿಪ್ಪಣಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಆದರೆ ಸ್ಥಳೀಯ ಆಡಳಿತ ಮಾತ್ರ ಯಾವ ತಪ್ಪೂ ನಡೆದೇ ಇಲ್ಲ ಎಂಬಂತೆ ಸಾರ್ವಜನಿಕವಾಗಿ ತೋರ್ಪಡಿಸಿಕೊಳ್ಳಲು ಹೆಣಗುತ್ತಿದೆ.
ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ… ಎನ್ನುವಂತಹವರು!
“ದಾಖಲೆಯಲ್ಲಿ ಎಲ್ಲವೂ ಕಾನೂನಾತ್ಮಕವಾಗಿಯೇ ಇದೆ. ಅಂತಹ ತಪ್ಪೇನೂ ನಡೆದಿಲ್ಲ. ಕೇಂದ್ರವನ್ನು ಯಾವುದೇ ಸ್ವಯಂ ಸೇವಾ ಸಂಘಕ್ಕೆ ಮಂಜೂರು ಮಾಡಬೇಕಾದರೆ ದತ್ತಿ ಆಯುಕ್ತರ ಬಳಿ ಅದರ ನೋಂದಣಿ ಆಗಬೇಕಿತ್ತು, ಅಷ್ಟೇ” ಎಂದು ಬೀಡ್ ನ ಉಪ-ಜಿಲ್ಲಾಧಿಕಾರಿ ಆರ್ ಎಸ್ ಪರ್ಲೀಕರ್ ಸಮರ್ಥಿಸಿಕೊಳ್ಳುತ್ತಾರೆ.
ಗೋರಕ್ಷಣೆಯನ್ನು ತಮ್ಮ ಮುಖ್ಯ ಕಾರ್ಯಸೂಚಿಯಲ್ಲಿ ಒಂದಾಗಿಸಿಕೊಂಡು ಅದರ ಹೆಸರಿನಲ್ಲಿ ನೂರಾರು ಮುಗ್ಧ ಜನರನ್ನು ಬೇಟೆಯಾಡಿರುವ ಬಿಜೆಪಿ ಪರಿವಾರದ ಕಾರ್ಯಕರ್ತರು ಮತ್ತು ಶಿವಸೇನೆಯ ನಾಯಕರು ಇದೀಗ ಬರಗಾಲದ ಸಂದರ್ಭದಲ್ಲಿ ಗೋವುಗಳಿಗೆ ಪೂರೈಸುವ ಮೇವಿನ ಹಗರಣದಲ್ಲಿ ಭಾಗಿಯಾಗಿರುವುದು ವಿಪರ್ಯಾಸವೇ. ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆಂದು ಆಶ್ವಾಸನೆ ನೀಡಿ ಪಾರದರ್ಶಕ ಆಡಳಿತದ ಭರವಸೆ ಕೊಟ್ಟ ಬಿಜೆಪಿಯದ್ದೇ ಕಾರ್ಯಕರ್ತರು ಮಹಾರಾಷ್ಟ್ರದಲ್ಲಿ ಮೂಕಪ್ರಾಣಿಗಳಾದ ದನಕರುಗಳ ಆಹಾರಕ್ಕೂ ಕೈಹಾಕಿದಾಗ, ನಾನು ಚೌಕೀದಾರ್ ಎಂದೂ ದೇಶವನ್ನು ಕಾಯುವ ಕಾವಲುಗಾರ ಎಂದು ಹೇಳಿಕೊಂಡಿದ್ದ ಪ್ರಧಾನಿ ಮೋದಿಯವರು ಮೌನವಾಗಿರುವುದೇಕೆ ಎಂಬ ಪ್ರಶ್ನೆ ಈಗ ಜನಸಾಮಾನ್ಯರನ್ನು ಕಾಡುತ್ತಿದೆ.