ನವದೆಹಲಿ: ಈಗ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವು, ತನ್ನ ಹೊಸ ಶಿಕ್ಷಣ ನೀತಿಯ ಕರಡನ್ನು ಘೋಷಿಸುವ ಮೂಲಕ ದೇಶದಲ್ಲಿ ಹಿಂದಿ ಹೇರಿಕೆಯನ್ನು ಸ್ಪಷ್ಟವಾಗಿ ಪ್ರಕಟಿಸಿತು. ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ಉಂಟಾದಾಗ, ಸರ್ಕಾರ ಆ ಪ್ರಸ್ತಾವನೆಯನ್ನು ಹಿಂಪಡೆದಿರುವುದಾಗಿ ಹೇಳಿಕೆ ನೀಡಬೇಕಾಯಿತು. ಆದರೆ ಸರ್ಕಾರದ ಈ ಹೇಳಿಕೆಯಿಂದ ಮಾತ್ರವೇ ಆರ್ ಎಸ್ ಎಸ್ – ಬಿಜೆಪಿ ಪರಿವಾರ ನಿರ್ಮಿಸಲು ಉದ್ದೇಶಿಸಿರುವ “ಹಿಂದಿಸ್ಥಾನ”ದ ಚಿಂತನೆ ಪೂರ್ಣವಾಗಿ ವಾಪಸ್ಸಾದಂತೆ ತೋರುತ್ತಿಲ್ಲ.
ಕಳೆದ ವರ್ಷವೇ, ಅಂದರೆ 2018ರ ಜೂನ್ 28ರಂದು ಮತ್ತು 2018ರ ಅಕ್ಟೋಬರ್ 24ರಂದು ಎಲ್ಲಾ ವಿಶ್ವವಿದ್ಯಾಲಯಗಳಿಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೊರಡಿಸಿದ್ದ ಸೂಚನಾಪತ್ರಗಳಲ್ಲಿ “ಭಾರತದ ರಾಷ್ಟ್ರಭಾಷೆ ಹಿಂದಿ” ಎಂಬುದಾಗಿ ಅಧಿಕೃತವಾಗಿ ಘೋಷಿಸಲಾಗಿತ್ತು. ಮತ್ತು “ದೇಶದ ಎಲ್ಲಾ ವಿದ್ಯಾಲಯಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿನ ಎಲ್ಲಾ ವಿದ್ಯಾರ್ಥಿಗಳೂ ‘ರಾಷ್ಟ್ರಭಾಷೆ’ ಹಿಂದಿ ಭಾಷೆಯನ್ನು ಕಲಿಯಬೇಕಾಗಿ” ಆದೇಶಿಸಲಾಗಿತ್ತು.
ಇದರ ಅನುಸಾರ ಇದೀಗ ದೆಹಲಿಯ ಪ್ರತಿಷ್ಠಿತ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯವು ಬಿ ಎ ಮತ್ತು ಬಿ ಟೆಕ್ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಹಿಂದಿ ಭಾಷೆಯನ್ನು ಹೇರಲು ಚಿಂತನೆ ನಡೆಸಿದೆ ಎಂದು ಅಲ್ಲಿನ ವಿದ್ಯಾರ್ಥಿ ಸಂಘ ಆರೋಪಿಸಿದೆ. ಇದೇ 2019ರ ಜೂನ್ 28ರಂದು ನಡೆಯಬೇಕಿರುವ ವಿವಿಯ 151ನೇ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಬಿ ಎ ಮತ್ತು ಬಿ ಟೆಕ್ ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆಯೊಂದಿಗೆ ಹಿಂದಿ ಹೇರಿಕೆಗೆ ಮುಂದಾಗುತ್ತಿರುವ ಉಪಕುಲಪತಿಗಳ ಕ್ರಮವನ್ನು ವಿರೋಧಿಸಿ ಜೆಎನ್ಯು ವಿದ್ಯಾರ್ಥಿ ಸಂಘ ಕೆಳಕಂಡ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

“ಆರ್ ಎಸ್ ಎಸ್ – ಬಿಜೆಪಿ ಸರ್ಕಾರ ಅತ್ಯಂತ ಲಜ್ಜೆಗೇಡಿತನದಿಂದಲೇ ತನ್ನ ಗೌಪ್ಯವಾದ ‘ಹಿಂದಿ, ಹಿಂದೂ, ಹಿಂದೂಸ್ಥಾನ್’ ಕಾರ್ಯಸೂಚಿಯನ್ನು ಜಾರಿಗೊಳಿಸಲು ಪುನರಾರಂಭಿಸಿದೆ. ಎಲ್ಲಾ ವಿಶ್ವವಿದ್ಯಾಲಯಗಳಿಗೂ 2018ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೊರಡಿಸಿದ್ದ ಅಧಿಕೃತ ಪತ್ರದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಘೋಷಿಸಿತ್ತು! ಅಷ್ಟೇ ಅಲ್ಲ, ಎಲ್ಲಾ ಪದವಿ ಕೋರ್ಸ್ ಗಳಲ್ಲೂ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವಂತೆ ಅದರಲ್ಲಿ ನಿರ್ದೇಶನ ನೀಡಲಾಗಿತ್ತು.


ಮೊಟ್ಟ ಮೊದಲಿಗೆ, ಭಾರತ ದೇಶಕ್ಕೆ ಒಂದು ರಾಷ್ಟ್ರಭಾಷೆ ಎಂಬುದು ಇಲ್ಲವೇ ಇಲ್ಲ. ನಮ್ಮ ದೇಶದ ವೈವಿಧ್ಯಮಯ ಮತ್ತು ಬಹುತ್ವದ ಗುಣಕ್ಕನುಸಾರವಾಗಿ 22 ಅಧಿಕೃತ ಭಾಷೆಗಳನ್ನು ಭಾರತ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಪಟ್ಟಿಮಾಡಲಾಗಿದೆ.
ಆರ್ ಎಸ್ ಎಸ್ ನ ಹಿಂಬಾಲಕ ಮಮಿದಲ ಜಗದೀಶ್ ಕುಮಾರ್ ಎಂಎಚ್ಆರ್ಡಿ ಯ ನಿರ್ದೇಶನಗಳನ್ನು ನಿಷ್ಠೆಯಿಂದ ಪಾಲಿಸಿದ್ದಾರೆ. ಅಲ್ಲದೆ 28.06.2019ರಂದು ನಡೆಯಲಿರುವ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಜೆ ಎನ್ ಯು ನಲ್ಲಿ ಎಲ್ಲಾ ಪದವಿ ಕೋರ್ಸ್ ಗಳಿಗೂ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ಚಿಂತನೆಯಲ್ಲಿದ್ದಾರೆ. ಇದು ಜೆ ಎನ್ ಯು ವಿನ ಬಹುತ್ವ ಗುಣದ ಉಲ್ಲಂಘನೆಯಾಗಿದೆಯಲ್ಲದೆ ಅದರ ಸಂಸ್ಕೃತಿಗೆ ಅಪಮಾನ ಮಾಡುವಂತಿದೆ. ಈ ಕ್ರಮವು ಭಾರತ ಸಂವಿಧಾನದಲ್ಲಿ ಅಡಕವಾಗಿರುವ ತತ್ವಗಳಿಗೂ ವಿರುದ್ಧವಾಗಿದೆ.
ಇದೀಗ ಒಂದು ಕಡೆ ಸಾರ್ವಜನಿಕ ಒತ್ತಡದಿಂದಾಗಿ ಬಿಜೆಪಿ ಸರ್ಕಾರ ತನ್ನ ಶಿಕ್ಷಣ ನೀತಿಯ ಕರಡನ್ನು ಮತ್ತು ತ್ರಿಭಾಷಾ ಸೂತ್ರವನ್ನು ಪರಾಮರ್ಶಿಸುವ ಪರಿಸ್ಥಿತಿ ಬಂದಿದ್ದರೂ, ಜೆ ಎನ್ ಯು ಉಪಕುಲಪತಿಗಳು ಮಾತ್ರ ಒಳಗಿಂದೊಳಗೇ ಹಿಂದಿ ಹೇರಿಕೆ ಮಾಡಲು ಹೊರಟಿರುವುದು ತೀರಾ ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಅತ್ಯಂತ ಖಂಡನಾರ್ಹ. ಪ್ರತಿಯೊಬ್ಬರೂ ತಮ್ಮಿಚ್ಛೆಯ ಭಾಷೆಯನ್ನು ಕಲಿಯುವ ಹಕ್ಕು ಪಡೆದಿರುತ್ತಾರೆ. ಈ ದೇಶದಲ್ಲಿ ಯಾವೊಂದು ಭಾಷೆಯೂ ಹೆಚ್ಚಲ್ಲ, ಯಾವುದೂ ಕಡಿಮೆಯಲ್ಲ. ಕಲಿಕೆಯ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ವಿದ್ಯಾರ್ಥಿಗಳ ಮೇಲೆ ಯಾವುದೇ ರೀತಿಯ ಹೇರಿಕೆಯನ್ನೂ ನಾವು ಸಹಿಸೆವು.
ಪದವಿ ಕೋರ್ಸುಗಳಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯ ವಿಷಯವನ್ನಾಗಿಸುವ ಕಾರ್ಯಸೂಚಿ ಸಂಖ್ಯೆ 16ನ್ನು ಕೂಡಲೇ ಕೈಬಿಡಬೇಕೆಂದು ಜೆಎನ್ಯು ವಿದ್ಯಾರ್ಥಿ ಸಂಘ ಉಪಕುಲಪತಿಗಳನ್ನು ಆಗ್ರಹಿಸುತ್ತದೆ. ಅಲ್ಲದೇ ಜೆಎನ್ಯು ವಿದ್ಯಾರ್ಥಿ ಸಂಘವು ಹಿಂದಿ ಹೇರಿಕೆಯನ್ನು ನಿರಾಕರಿಸುತ್ತಲೇ ಬಹುಭಾಷಾ, ವೈವಿಧ್ಯಮಯ ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ಶಿಕ್ಷಣ ಪದ್ಧತಿಯನ್ನು ಹಾಗೂ ಭಾರತದ ಬಹುತ್ವದ ಪ್ರಜಾಪ್ರಭುತ್ವವನ್ನು ಬೆಂಬಲಿಸುತ್ತದೆ.”
ಮೋದಿ ಸರ್ಕಾರ ಮತ್ತು ವಿಶ್ವವಿದ್ಯಾಲಯದ ಹಿಂದಿ ಹೇರಿಕೆಯ ಯತ್ನವನ್ನು ಜವಹಾರ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಮೂಹ ತೀವ್ರವಾಗಿ ಪ್ರತಿರೋಧಿಸುತ್ತಿದೆ, ಬಹುಭಾಷಾ ಕಲಿಕೆಯನ್ನು, ವಿದ್ಯಾರ್ಥಿಗಳ ಕಲಿಕೆಯ ಆಯ್ಕೆಯ ಹಕ್ಕನ್ನು ಗಟ್ಟಿಯಾಗಿ ನಿರಂತರವಾಗಿ ಪ್ರತಿಪಾದಿಸುತ್ತಲೇ ಬಂದಿದೆ.
More Articles
By the same author
Related Articles
From the same category