ನವದೆಹಲಿ: ಪೂರ್ವ ದೆಹಲಿಯ ವಸುಂಧರಾ ಎನ್ಕ್ಲೇವ್ ಬಳಿ ಕಾರಿನಲ್ಲಿ ಬೆನ್ನತ್ತಿದ ದುಷ್ಕರ್ಮಿಗಳ ಗುಂಪು ಪತ್ರಕರ್ತೆಯ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಘಟನೆಯಿಂದಾಗಿ ಗುಂಡೇಟು ತಗುಲಿರುವ ಪತ್ರಕರ್ತೆ ಮಿಥಾಲಿ ಚಾಂದೋಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಮಿಥಾಲಿ ಇಂದು ಮುಂಜಾನೆ ಕಾರಿನಲ್ಲಿ ತೆರಳುತ್ತಿದ್ದಾಗ ಮತ್ತೊಂದು ಕಾರಿನಲ್ಲಿ ಅವರನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ಪತ್ರಕರ್ತೆಯಿದ್ದ ಕಾರಿನ ಮೇಲೆ ಮೊಟ್ಟೆಗಳನ್ನೆಸೆದು ನಂತರ ಎರಡು ಸುತ್ತು ಗುಂಡು ಹಾರಿಸಿದ್ದಾರೆ, ಗುಂಡು ಕಿಟಕಿಯ ಗಾಜನ್ನು ತೂರಿ ಮಿಥಾಲಿಯವರ ಕೈಗೆ ಬಲವಾಗಿ ಪೆಟ್ಟು ಬಿದ್ದಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಮಿಥಾಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದು ದರೋಡೆಕೋರರ ಕೃತ್ಯವೇ ಅಥವಾ ವೈಯಕ್ತಿಕ ದ್ವೇಷದಿಂದ ಕೊಲೆಗೆ ನಡೆಸಿರುವ ಯತ್ನವೇ ಎಂಬ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಜಸ್ಮಿತ್ ಸಿಂಗ್ ತಿಳಿಸಿದ್ದಾರೆ.