ಒರಿಸ್ಸಾ: ಕೇಂದ್ರ ಸರ್ಕಾರ ಅರ್ಪಿಸುವ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಯ ಪುರಸ್ಕೃತ ಸಾಧಕನೊಬ್ಬ ಇದೀಗ ತಿನ್ನಲು ಆಹಾರವಿಲ್ಲದೆ ಇರುವೆಯ ಮೊಟ್ಟೆಗಳನ್ನು ತಿಂದು ಜೀವಿಸುತ್ತಿದ್ದಾನೆ ಎಂದರೆ ನೀವು ನಂಬಲೇಬೇಕು. ಪ್ರಶಸ್ತಿ ಸಿಗುವ ಮುನ್ನ ಆತನಿಗೆ ಲಭಿಸುತ್ತಿದ್ದ ದಿನಗೂಲಿ ಕೆಲಸವೂ ಇದೀಗ ಸಿಗದಂತಾಗಿದೆ. ಪ್ರಶಸ್ತಿ ಪದಕ ಆತನ ಮನೆಯ ಕುರಿಯ ದೊಡ್ಡಿಯ ಮೂಲೆ ಸೇರಿದೆ. “ತಿನ್ನಲು ಒಪ್ಪೊತ್ತು ಅನ್ನವಿಲ್ಲದಾಗ, ಯಾವ ಪ್ರಶಸ್ತಿ ಬಂದರೇನು? ಈ ಪ್ರಶಸ್ತಿ ನನಗೆ ಬೇಕಾಗಿಲ್ಲ”, ಎನ್ನುತ್ತಾರೆ ಪದ್ಮಶ್ರಿ ಪುರಸ್ಕೃತ ಆದಿವಾಸಿ ಕೂಲಿ ಕಾರ್ಮಿಕ ದೈತರಿ ನಾಯಕ್.
ಹೌದು ಕೆಲವು ನೈಜ ಘಟನೆಗಳು ಊಹಿಸಲು ಸಾಧ್ಯವಲ್ಲದಿದ್ದರೂ, ನಮ್ಮ ಸಮಾಜದಲ್ಲಿ ನಡೆಯುತ್ತಿರುವುದಂತೂ ಸತ್ಯ. ಮೂರು ವರ್ಷದ ಸತತ ಪರಿಶ್ರಮದಿಂದ ಬೆಟ್ಟ ಕಡಿದು 3 ಕಿಲೋಮೀಟರ್ ನೀರಿನ ಕಾಲುವೆ ನಿರ್ಮಿಸಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ 75 ಹರೆಯದ ಬುಡಕಟ್ಟು ಸಮುದಾಯದ ದೈತರಿ ನಾಯಕ್ ಅವರದ್ದು ತೀರಾ ಬಡಕುಟುಂಬ. ಸಂಸಾರ ನಿರ್ವಹಣೆಗಾಗಿ ಇದೀಗ ಇತರ ಸಣ್ಣಪುಟ್ಟ ಕಸುಬುಗಳಿಗೆ ಮೊರೆ ಹೋಗಿರುವ ಅವರು ತಮಗೆ ಲಭಿಸಿರುವ ಪದ್ಮಶ್ರಿ ಪ್ರಶಸ್ತಿಯನ್ನು ಹಿಂದಿರುಗಿಸಲು ಮುಂದಾಗಿದ್ದಾರೆ.
ಕಾಲುವೆ ನಿರ್ಮಿಸಿದ್ದ ದೈತರಿ ನಾಯಕ್ ಗೆ ಪದ್ಮಶ್ರೀ..
ಬಡ ಬುಡಕಟ್ಟು ರೈತ – ಕೂಲಿ ಕಾರ್ಮಿಕ ದೈತರಿ ನಾಯಕ್ ಒರಿಸ್ಸಾದ ಕೆನೊಝರ್ ಜಿಲ್ಲೆಯ ತಲಬೈತರಾನಿ ಗ್ರಾಮದಲ್ಲಿ ಗೊನಸಿಕಾ ಎಂಬ ಬೆಟ್ಟವನ್ನು 2010ರಿಂದ 2013ರವರೆಗೆ ಸತತ ದೈಹಿಕ ಪರಿಶ್ರಮ ಹಾಕಿ ಕಡಿದು 3 ಕಿಲೋಮೀಟರ್ ಕಾಲುವೆ ನಿರ್ಮಿಸಿದ್ದರು. ನಾಯಕ್ ಅವರ ಈ ಶ್ರಮದಿಂದ ಆ ಭಾಗದ 100 ಎಕರೆ ಪ್ರದೇಶವು ನೀರಾವರಿ ಭೂಮಿಯಾಗಿ ಮಾರ್ಪಟ್ಟಿತ್ತು ಎಂದರೆ ಅಚ್ಚರಿಯಲ್ಲ.
ನಾಯಕ್ ಯಾವ ಅಪೇಕ್ಷೆಯನ್ನೂ ಇಟ್ಟುಕೊಳ್ಳದೆ ಮಾಡಿದ್ದ ಈ ಸಮಾಜ ಸೇವೆಯ ಸಾಧನೆಯನ್ನು ಗಮನಿಸಿ ಕೇಂದ್ರ ಸರ್ಕಾರದಿಂದ ನೀಡಲ್ಪಡುವ ದೇಶದ ನಾಲ್ಕನೇ ಪ್ರತಿಷ್ಠಿತ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು 2019ರಲ್ಲಿ ಅವರಿಗೆ ಸಮರ್ಪಿಸಲಾಗಿತ್ತು.
ಎಲ್ಲವನ್ನೂ ಕಸಿದುಕೊಂಡ ಪ್ರಶಸ್ತಿ
ಆದರೆ ವಯೋವೃದ್ಧ ನಾಯಕ್ ಅವರ ಈ ಶ್ರಮಕ್ಕಾಗಲೀ ಪ್ರಶಸ್ತಿಯಿಂದಾಗಲೀ ಅವರ ಬದುಕು ಒಂದು ಸ್ವಲ್ಪವೂ ಬದಲಾಗಿಲ್ಲ. “ಪದ್ಮಶ್ರೀ ಪ್ರಶಸ್ತಿಯಿಂದ ನನಗೇನೂ ಪ್ರಯೋಜನವಾಗಿಲ್ಲ. ಪ್ರಶಸ್ತಿ ಬರುವುದಕ್ಕೂ ಮುನ್ನಾ ನನಗೆ ನಿತ್ಯ ದಿನಗೂಲಿ ಕೆಲಸ ಸಿಗುತ್ತಿತ್ತು. ಆದರೆ ಪ್ರಶಸ್ತಿ ದೊರೆತ ನನಗೆ ಯಾರೂ ಕೆಲಸ ಕೊಡುತ್ತಿಲ್ಲ. ದಿನಗೂಲಿ ಮಾಡುವುದು ನನ್ನ ಘನತೆಗೆ ಅರ್ಹವಲ್ಲ ಎಂದು ಯಾರೂ ನನಗೆ ಕೆಲಸವನ್ನೇ ಕೊಡುತ್ತಿಲ್ಲ”, ಎನ್ನುತ್ತಾರೆ ನಾಯಕ್.
“ಪ್ರಶಸ್ತಿ ಸಂದ ನಂತರ ಈದೀಗ ಕೆಲಸವೇ ಇಲ್ಲದ ನಮ್ಮ ಕುಟುಂಬದ ನಿತ್ಯ ಆಹಾರ ಇರುವೆಯ ಮೊಟ್ಟೆ. ಅದನ್ನೇ ತಿಂದು ಜೀವಿಸುತ್ತಿದ್ದೇವೆ. ತಂಬಾಕು ಎಲೆಗಳು ಮತ್ತು ಮಾವಿನ ಹಪ್ಪಳಗಳನ್ನು ಮಾರಾಟ ಮಾಡಿ ಬದುಕು ಸವೆಸುತ್ತಿದ್ದೇವೆ.”
“ಪ್ರಶಸ್ತಿ ನನ್ನ ಜೀವನದಲ್ಲಿ ನನಗೆ ಎಲ್ಲವನ್ನು ಕಳೆದುಕೊಳ್ಳುವಂತೆ ಮಾಡಿತು, ಇದರಿಂದ ಎಲ್ಲ ಮೌಲ್ಯಗಳು ಕಳೆದುಹೋಯಿತು. ಆದ್ದರಿಂದ ಪ್ರಶಸ್ತಿಯನ್ನು ಮತ್ತೆ ಹಿಂದುರಿಗಿಸಬೇಕೆಂದು ನಿರ್ಧರಿಸಿದ್ದೇನೆ, ಬಹುಶಃ ನಂತರ ನನಗೆ ಕೆಲಸ ನೀಡಬಹುದು”, ಎಂದು ದೈತರಿ ನಾಯಕ್ ನೋವಿನ ನುಡಿಗಳನ್ನಾಡಿದ್ದಾರೆ.
ಕುರಿ ದೊಡ್ಡಿಯಲ್ಲಿ ಬಿದ್ದಿರುವ ಪ್ರಶಸ್ತಿ ಪದಕ!
“ನನಗೆ ಹಿರಿಯ ನಾಗರಿಕರ ಪಿಂಚಣಿಯಡಿ ಮಾಸಿಕ 700 ರೂಪಾಯಿ ದೊರೆಯುತ್ತಿದ್ದು, ಇಷ್ಟು ಹಣದಲ್ಲಿ ನನ್ನ ದೊಡ್ಡ ಕುಟುಂಬವನ್ನು ಸರಿದೂಗಿಸುವುದು ಬಹಳ ಕಷ್ಟದಾಯಕವಾಗಿದೆ. ಅಲ್ಲದೇ ಇಂದಿರಾ ಆವಾಸ್ ಯೋಜನೆಯಡಿ ಕೆಲವು ವರ್ಷಗಳ ಹಿಂದೆ ನಾಯಕ್ ಅವರಿಗೆ ಮನೆ ಮಂಜೂರಾಗಿದ್ದರೂ ಮನೆ ಕಾಮಗಾರಿ ಪೂರ್ಣಗೊಳ್ಳದೆ ಹಳೇ ಗುಡಿಸಿಲಿನಲ್ಲೇ ವಾಸಿಸುವಂತಹ ಪರಿಸ್ಥಿತಿ ಎದುರಾಗಿದೆ. ಪ್ರಶಸ್ತಿಯ ಪದಕ ಕುರಿ ದೊಡ್ಡಿಯಲ್ಲಿ ಕೆಲಸಕ್ಕೆ ಬಾರದಂತೆ ಮೂಲೆಯಲ್ಲಿ ನೇತಾಡುತ್ತಿದೆ” ಎಂದು ನಾಯಕ್ ಹೇಳುವಾಗ, ಅಂತಹ ಬಡ ಬುಡಕಟ್ಟು ಜನರಿಗೆ ಪ್ರಶಸ್ತಿಗಳಿಗಿಂತ ಮಹತ್ವವಾದುದು ಅವರ ದಿನನಿತ್ಯದ ಬದುಕು ಎಂಬುದನ್ನು ಸೂಚಿಸುತ್ತಾರೆ.
“ಕೇಂದ್ರ ಸರ್ಕಾರ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿತ್ತು, ಆದರೆ ನಮ್ಮ ತಂದೆ ನಿರ್ಮಿಸಿದ್ದ ಕಾಲುವೆಗೆ ಭೂ ಸವೆತದಿಂದ ಹಾನಿ ಉಂಟಾಗುವುದನ್ನೂ ಸಹ ಅವರು ತಡೆದಿಲ್ಲ. ತಂದೆ ನಿರ್ಮಿಸಿದ್ದ ಕಾಲುವೆಯನ್ನು ಸಿಮೆಂಟ್ ನಲ್ಲಿ ನಿರ್ಮಿಸುವುದಾಗಿ ಹೇಳಿದ್ದರು. ಯಾವುದೇ ಒಂದು ಕೆಲಸವೂ ಆಗಿಲ್ಲ”, ಎನ್ನುತ್ತಾರೆ ನಾಯಕ್ ಪುತ್ರ ಅಲೇಖ್. ಇವರೂ ಕೂಡ ಕೂಲಿ ಕೆಲಸ ಮಾಡಿಯೇ ಹೊಟ್ಟೆ ಹೊರೆಯುತ್ತಿರುವುದು.
ಅಷ್ಟೇ ಅಲ್ಲ, ತನಗೆ ಎಂಥಾ ದೊಡ್ಡ ಪ್ರಶಸ್ತಿ ಬಂದರೂ ತಾನು ಜನರಿಗೆ ಯಾವುದೇ ಒಂದು ಒಳ್ಳೆಯ ಕೆಲಸವನ್ನೂ ಮಾಡಲು ಸಾಧ್ಯವಾಗಿಲ್ಲ. ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನೂ ತನ್ನಿಂದ ಮಾಡಲು ಸಾಧ್ಯವಾಗಿಲ್ಲ ಎಂದು ತನ್ನ ತಂದೆ ಬಹಳ ನೊಂದಿರುವುದಾಗಿ ಅಲೇಖ್ ತಿಳಿಸುತ್ತಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಸತ್ಯಪ್ರಕಾಶ್ ನಾಯಕ್, “ಒರಿಸ್ಸಾ ಸರ್ಕಾರ ರೈತರಿಗೆ ನೀಡಿದ್ದ ಭರವಸೆ ಎಂಥಹದ್ದು ಎಂದು ತಿಳಿಯಬೇಕೆಂದರೆ ಇಲ್ಲಿನ ಬುಡಕಟ್ಟು ಜನಾಂಗದ ದುಃಸ್ಥಿತಿ ಕಂಡರೆ ಸಾಕು. ನವೀನ್ ಪಟ್ನಾಯಕ್ ಅವರು ರೈತರಿಗೆ ಕಲಿಯಾ ಯೋಜನೆಯನ್ನು ಜಾರಿಗೆ ತಂದರು. ಆದರೆ, ನೀರಾವರಿಗಾಗಿ ಕಾಲುವೆ ನಿರ್ಮಿಸಿದ್ದ ರೈತನಿಗಾಗಿ ಏನನ್ನೂ ಮಾಡದಿರುವುದು ನಿರಾಶದಾಯಕ. ಇದು ಶೋಚನೀಯ” ಎಂದು ಕಿಡಿಕಾರಿದ್ದಾರೆ.
ಕಿಯೋಂಝರ್ ಜಿಲ್ಲಾಧಿಕಾರಿ ಆಶಿಶ್ ಠಾಕ್ರೆ, ನಾಯಕ್ ಜತೆ ಚರ್ಚಿಸಿದ್ದು, ಯಾವ ಕಾರಣಕ್ಕಾಗಿ ಪ್ರಶಸ್ತಿಯನ್ನು ಹಿಂದಿರುಗಿಸಲಾಗುತ್ತಿದೆ ಎಂದು ವಿಚಾರಣೆ ನಡೆಸುವುದಾಗಿಯೂ, ಅವರ ಅಸಮಾಧಾನಕ್ಕೆ ಕಾರಣವನ್ನು ಅರಿತು ಪ್ರಶಸ್ತಿ ಹಿಂದಿರುಗಿಸದಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಅನ್ನವಿಲ್ಲದೆ ಪರದಾಡಲು ಬಿಡುವುದೇ ‘ಸಬ್ ಕಾ ವಿಕಾಸ್’ ಏನು?
ಕಾಡಿ ಬೇಡಿ ಶಿಫಾರಸ್ಸುಗಳನ್ನು ತಂದು ಪ್ರಶಸ್ತಿಗಳನ್ನು ಬಾಚಿಕೊಳ್ಳಲು ನಡೆಸುವ ಹರಸಾಹಸಗಳು ಒಂದು ಕಡೆಯಾದರೆ, ಇನ್ನೊಂದು ಕಡೆ ಬಯಸದೇ ಬಂದ ಭಾಗ್ಯವೆಂಬಂತೆ ಪ್ರಶಸ್ತಿ ಲಭಿಸಿದರೂ ಅದರಿಂದ ಬದುಕೇ ನಾಶವಾಗುವಂತಹ ದುಃಸ್ಥಿತಿ ನಾಯಕ್ ಅಂತಹವರದ್ದು ! ಬಡತನದ ಬೇಗೆಯಲ್ಲಿ ಬೇಯುತ್ತಾ ಒಪ್ಪೊತ್ತು ಊಟಕ್ಕೂ ಇಲ್ಲದೆ ಇರುವೆ ಮೊಟ್ಟೆಗಳನ್ನು ತಿಂದು ಬದುಕುವ ಬುಡಕಟ್ಟು ಜನಾಂಗದ ಪದ್ಮಶ್ರೀ ಪುರಸ್ಕೃತರ ಬದುಕಿನ ಸ್ಥಿತಿಗತಿಯತ್ತ ತಿರುಗಿ ನೋಡದ ಅಧಿಕಾರಿಗಳು ಅವರು ಕೇವಲ ಪ್ರಶಸ್ತಿ ವಾಪಸ್ ಮಾಡದಂತೆ ನೋಡಿಕೊಳ್ಳುವುದಾಗಿ ಹೇಳುತ್ತಾರೆ! ದೈತರಿ ನಾಯಕ್ ಕುಟುಂಬಕ್ಕೆ ಪದ್ಮಶ್ರೀ ಪ್ರಶಸ್ತಿ ಅನ್ನ-ನೀರು-ಮನೆ-ಕೆಲಸ ನೀಡುವಂತಿದ್ದರೆ ಮಾತ್ರ ಪ್ರತಿಷ್ಠೆಯಾಗುತ್ತದೆಯೇ ಹೊರತು ಅವುಗಳನ್ನು ಕಸಿದುಕೊಂಡರೆ ಪ್ರಶಸ್ತಿ ಅವರ ಪಾಲಿಗೆ ವಿಷದ ಮುಳ್ಳಾಗುತ್ತದೆ. ಮೋದಿಯವರ ‘ಸಬ್ ಕಾ ಸಾಥ್ – ಸಬ್ ಕಾ ವಿಕಾಸ್ – ಸಬ್ ಕಾ ವಿಶ್ವಾಸ್’ ನೀತಿ ಎಂದರೆ ಪದ್ಮಶ್ರೀ ಪುರಸ್ಕೃತರು ಅನ್ನವಿಲ್ಲದೆ ಪರದಾಡುವುದೇ ಏನು?
ಪದ್ಮಶ್ರೀ ಪುರಸ್ಕೃತ ದೈತರಿ ನಾಯಕ್ ಗೆ ಸರ್ಕಾರ ನೆರವಾಗಲಿ
—————————————————————————
ಬಡತನದ ನಡುವೆ ಬೆಟ್ಟ ಕಡಿದು ಕಾಲುವೆ ನಿರ್ಮಿಸುವ ಮೂಲಕ ದೇಶದ ಗಮನ ಸೆಳೆದು ಹೆಸರು ಮಾಡಿದ್ದ ಒರಿಸ್ಸಾ ರಾಜ್ಯದ ತಲಬೈತರಾನಿ ಗ್ರಾಮದ ದೈತರಿ ನಾಯಕ್ ನಮ್ಮ ದೇಶದ ಹೆಮ್ಮೆ. ಅಂತಹ ಸಾಧಕನನ್ನು ಗುರುತಿಸಿ ದೇಶದ ಅತ್ಯುತ್ತಮ ನಾಗರಿಕ ಪ್ರಶಸ್ತಿ ಪದ್ಮಶ್ರೀ ನೀಡಿ ಗೌರವಿಸಿರುವುದು ನಿಜವಾಗಿಯೂ ಕೇಂದ್ರ ಸರ್ಕಾರದ ಹೆಮ್ಮೆ. ಅದರಲ್ಲಿ ಎರಡು ಮಾತಿಲ್ಲ.
ಆದರೆ, ಯಾವುದೇ ಪ್ರಶಸ್ತಿಯಾಗಲಿ ಹೊಟ್ಟೆ ತುಂಬಿಸುವುದಿಲ್ಲ ಎಂಬುದು ಮುಖ್ಯವಾದ ವಿಚಾರ. ಅದರ ಅನುಭವ ನನಗೆ ಆಗಿದೆ. ರಾಷ್ಟ್ರೀಯ ಯುವ ವಪ್ರಶಸ್ತಿ ಪುರಸ್ಕೃರಾಗಿರುವ ನಾನು ಒಂದು ರೀತಿಯಲ್ಲಿ ಅನೇಕ ಸಮಸ್ಯೆಗಳನ್ನು ಎದರಿಸುತ್ತಿದ್ದೇನೆ. ಯಾವುದೇ ಪ್ರಶಸ್ತಿಯಾದರೂ ಸರಿ ಅದು ಗೌರವ ಹೆಚ್ಚಿಸುತ್ತದೆ. ಆದರೆ ಹೊಟ್ಟೆ ತುಂಬಿಸುವುದಿಲ್ಲ. ಸರ್ಕಾರ ಪ್ರಶಸ್ತಿ ಕೊಟ್ಟು ಕೈ ತೊಳೆದುಕೊಂಡರೆ ಸಾಲದು. ಅವರ ಅನ್ನ ಮತ್ತು ಆರ್ಥಿಕ ಸ್ಥಿತಿ ಹೇಗಿದೆ ಎಂಬುದನ್ನು ಗುರುತಿಸುವುದು ಮುಖ್ಯ. ಅದು ಸಾಧ್ಯವಾಗದಿದ್ದರೆ ತುತ್ತು ಕೂಳಿಗೂ ಪರದಾಡಬೇಕಾಗುತ್ತದೆ ಎಂಬುದಕ್ಕೆ ದೈತರಿ ನಾಯಕ್ ಅವರ ಈಗಿನ ಸ್ಥಿತಿ ನಿದರ್ಶನವಾಗಿದೆ.
ಬಸಣ್ಣನವರ ಕಲ್ಯಾಣ ರಾಜ್ಯದ ಕನಸ್ಸು “ಸರ್ವರಿಗು ಸಮಪಾಲು. ಸರ್ವರಿಗು ಸಮಬಾಳು”. ರಾಜಕೀಯಕ್ಕಾಗಿ ಎಲ್ಲರೂ ಬಳಸಿಕೊಂಡು ಸವೆಸಿದ್ದಾರೆ. ಆದರೆ, ಸರ್ವರಿಗೆ ಸಮ ಪಾಲು. ಸರ್ವರಿಗೂ ಸಮಬಾಳು ಸಿಕ್ಕಿದೆಯೇ ಕಂಡಿತ ಇಲ್ಲ. ಹಣವಂತರು ಹಣವಂತರಾಗಿ ಮೆರೆಯುತ್ತಿದ್ದಾರೆ. ಬಡವರು ಬಡವರಾಗಿಯೇ ಬಡತನದ ಬೇಗುದಿಯಲ್ಲಿ ಕರಗಿ ಹೋಗುತ್ತಿದ್ದಾರೆ ಎಂಬುದಕ್ಕೆ ದೈತರಿ ನಾಯಕ್ ಅವರ ಸ್ಥಿತಿ ಸಾಕ್ಷಿಯಾಗಿದೆ.
ವಿಶ್ವದ ಗಮನ ಸೆಳೆಯುತ್ತಿರುವ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ” ಸಬ್ ಕಾ ಸಾಥ್. ಸಬ್ ಕಾ ವಿಕಾಸ್” ಘೋಷಣೆ ರಾಜಕೀಯಕ್ಕೆ ಸೀಮಿತವಾಗಿದೆಯೇ ವಿನಾ ಅನುಷ್ಟಾನಕ್ಕೆ ಬಂದಿಲ್ಲ ಎಂಬುದಕ್ಕೆ ದೇಶದ ಉದ್ದಗಲಕ್ಕೂ ಲಕ್ಷಾಂತರ ಉದಾಹರಣೆಗಳಿವೆ. ಸಬ್ ಕಾ ಸಾಥ್ ನಿಜಾವಾಗಿಯೂ ಚುನಾವಣೆಯಲ್ಲಿ ಆಗಿದೆ. ಚುನಾವಣೆಯಲ್ಲಿ ಪ್ರತಿಯೊಬ್ಬರು ಸಾಥ್ ನೀಡುವ ಮೂಲಕ ಮೋದಿ ಪ್ರಧಾನಿ ಮಾಡಿದ್ದಾರೆ. ಆದರೆ, ಸಬ್ ಕಾ ವಿಕಾಸ್ ಕಂಡಿತ ಆಗಿಲ್ಲ. ಆಗಿದ್ದರೆ ಬುಡಕಟ್ಟು ಜನಾಂಗದ ದೈತರಿ ನಾಯಕ್ ಇರುವೆ ಮೊಟ್ಟೆ ಅವಲಂಬಿಸುತ್ತಿರಲಿಲ್ಲ.
ದೈತರಿ ನಾಯಕ್ ಅವರ ಹೊಟ್ಟೆ ತುಂಬಿಸುತ್ತಿದ್ದ ಕೂಲಿಯನ್ನೇ ಪದ್ಮಶ್ರೀ ಪ್ರಶಸ್ತಿ ಕಿತ್ತುಕೊಂಡಿರುವುದು ನಮ್ಮ ದೇಶದ ದುರಂತಕ್ಕೆ ನಿದರ್ಶನವಾಗಿದೆ. ಪ್ರಶಸ್ತಿಗಳನ್ನು ಪಡೆದುಕೊಂಡವರು ಅದರ ಲಾಭಗಳನ್ನು ಉಡುಕಿ ಸತಾಯಗತಾಯ ಪಡೆದುಕೊಳ್ಳುವ ಜನರು ನಮ್ಮ ಕಣ್ಣ ಮುಂದೆ ಇದ್ದಾರೆ. ಆದರೆ, ಪ್ರಶಸ್ತಿಯನ್ನು ತಮ್ಮ ಸ್ವಾರ್ಥ ಮತ್ತು ಲಾಭಕ್ಕೆ ಬಳಸಿಕೊಳ್ಳದ ದೈತರಿ ನಾಯಕ್ ನಮಗೆಲ್ಲ ಅನುಕರಣೀಯರಾಗಿದ್ದಾರೆ. ಜಗ ಮೆಚ್ಚುವ ಕಾರ್ಯದ ಮೂಲಕ ಆದರ್ಶವಾಗಿರುವ ದೈತರಿ ನಾಯಕ್ ಅವರ ಅನ್ನಕ್ಕೆ ಸರ್ಕಾರ ದಾರಿ ಮಾಡಿಕೊಡುವ ಮೂಲಕ ಮಾನವೀಯತೆಯ ಮುಖ ಪ್ರದರ್ಶಿಸಬೇಕಾಗಿದೆ.
ದೈತರಿ ನಾಯಕ್ ಅವರ ವಾಸ್ತವತೆಯನ್ನು ಹೊರ ಜಗತ್ತಿಗೆ ತೆರೆದಿಟ್ಟ TRUTH INDIA ಕನ್ಬಡಕ್ಕೆ ನನ್ನ ಕೋಟಿ ಕೋಟಿ ನಮನಗಳು.
*ಹಿರೇಮಗಳೂರು ಪುಟ್ಟಸ್ವಾಮಿ
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರು
ಹಿರೇಮಗಳೂರು
ಚಿಕ್ಕಮಗಳೂರು ಜಿಲ್ಲೆ
ಕರ್ನಾಟಕ.
—————————————————–