ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ರೈತ ಹೋರಾಟಗಾರ ಗುಂಡಗದ್ದೆಯ ರತ್ನಾಕರ ಗೌಡ (64) ಸೋಮವಾರ ಸಂಜೆ 7.30 ರ ಸುಮಾರಿಗೆ ಸಂಭವಿಸಿದ ಬೈಕ್ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.
ಕೋಣಂದೂರು ಬೆಜ್ಜವಳ್ಳಿ ರಸ್ತೆಯಲ್ಲಿ ತಮ್ಮ ಬೈಕಿನಲ್ಲಿ ಉಪ್ಪಿನ ಮೂಟೆ ಇಟ್ಟುಕೊಂಡು ನಿಧಾನಗತಿಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಕುಡಿದು, ಮಿತಿಮೀರಿದ ವೇಗದಲ್ಲಿ ಪಲ್ಸಾರ್ ಬೈಕಿನಲ್ಲಿ ಬಂದ ಇಬ್ಬರು ಯುವಕರಿದ್ದ ಬೈಕು ಬಡಿದ ರಭಸಕ್ಕೆ ರತ್ನಾಕರಣ್ಣ ಮೇಲಕ್ಕೆ ಚಿಮ್ಮಿ ನೆಲಕ್ಕೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತರಾಗಿದ್ದಾರೆ.
ಒಂದೇ ಒಂದು ದಿನವೂ ಬಿಡದೇ ಹೆಲ್ಮೆಟ್ ಧರಿಸಿ ಇತರರಿಗೂ ಹೆಲ್ಮೆಟ್ ಧರಿಸಿ ಬೈಕ್ ಓಡಿಸಲು ಯಾವಾಗಲೂ ಹೇಳುತ್ತಿದ್ದ ರತ್ನಾಕರಣ್ಣ ದುರದೃಷ್ಟವಶಾತ್ ನೆನ್ನೆ ಹೆಲ್ಮೆಟ್ ಧರಿಸಿರಲಿಲ್ಲ. ಹೆಲ್ಮೆಟ್ ಧರಿಸಿದ್ದರೆ ಜೀವ ಉಳಿಯುತ್ತಿತ್ತೋ ಏನೋ ಎಂಬುದು ಹಲವರ ಅಭಿಪ್ರಾಯವಾಗಿದೆ. ಇವರಿಗೆ ಬಂದು ಬಡಿದ ಬೈಕಿನಲ್ಲಿದ್ದ ಯುವಕರಿಗೂ ಗಾಯಗಳಾಗಿದ್ದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಗುಂಡಗದ್ದೆ ರತ್ನಾಕರಣ್ಣ ತೀರ್ಥಹಳ್ಳಿ ತಾಲ್ಲೂಕಿನ ರೈತ ಮುಂದಾಳು ಆಗಿದ್ದರು. ರೈತ ಪರ, ಪ್ರಗತಿಪರ ಚಿಂತನೆ ಹೊಂದಿದ್ದ ಅವರು ಸರಳ ಜೀವಿ ಹಾಗೂ ಜನಾನುರಾಗಿ ಆಗಿದ್ದರಲ್ಲದೇ ಯಾರೇ ಕಷ್ಟದಲ್ಲಿದ್ದರೂ ಕ್ಷಣಕ್ಕೆ ಅವರ ಸಹಾಯಕ್ಕೆ ಧಾವಿಸುತ್ತಿದ್ದರು.
ಶ್ರೀಯುತರು ಪತ್ನಿ, ಇಬ್ಬರು ಪುತ್ರರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ರತ್ನಾಕರಣ್ಣ ಅವರ ಹಿರಿಯ ಮಗ ಪ್ರಗತ್ ಕೆ ಆರ್ ಪತ್ರಕರ್ತರಾಗಿದ್ದು, ತಮ್ಮ ಪ್ರಖರ ಚಿಂತನೆಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಕಿರಿಯ ಪುತ್ರ ಪುರಂಧರ ಸಹ ಬೆಂಗಳೂರಿನಲ್ಲಿ ವೃತ್ತಿಪರರಾಗಿದ್ದಾರೆ.
ಮೃತರ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆಯ ನಂತರ ಗುಂಡಗದ್ದೆಯ ಮನೆಗೆ ತಂದು ಅಂತಿಮ ಸಂಸ್ಕಾರ ನೆರವೇರಿತು.
ಸಾವಿರಾರು ಬಂಧು ಮಿತ್ರರೊಂದಿಗೆ ತೀರ್ಥಹಳ್ಳಿಯ ಮಾಜಿ ಶಾಸಕರಾದ ಕಿಮ್ಮನೆ ರತ್ನಾಕರ ಹಾಗೂ ಹಾಲಿ ಶಾಸಕ ಆರಗ ಜ್ಞಾನೇಂದ್ರ, ಹಿರಿಯ ಹೋರಾಟಗಾರ ನೆಂಪೆ ದೇವರಾಜ್, ಚಿಂತಕ ಶಿವಾನಂದ ಕರ್ಕಿ ಮತ್ತಿತರರು ಮೃತರ ಅಂತಿಮ ದರ್ಶನ ಪಡೆದಿದ್ದು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ್ದಾರೆ.