ರಾಜ್ಯ ರಾಜಕಾರಣ ಕಳೆದ ಒಂದು ವಾರದಿಂದ ಮಗ್ಗಲು ಬದಲಾಯಿಸಿದೆ. ಮೂರೂ ಪ್ರಮುಖ ಪಕ್ಷಗಳಲ್ಲಿ ಭಾರೀ ಚಟುವಟಿಕೆಗಳು, ಬದಲಾವಣೆಗಳು ಗರಿಗೆದರಿದ್ದು, ಒಂದು ಕಡೆ ಚುನಾವಣೆಯ ತಯಾರಿಗಳು ಎದ್ದುಕಾಣುತ್ತಿದ್ದರೆ, ಮತ್ತೊಂದು ಕಡೆ ಪರ್ಯಾಯ ಸರ್ಕಾರ ರಚನೆಗೆ ಸಿದ್ಧತೆಗಳು ಬಿರುಸುಗೊಂಡಿವೆ.
ಒಂದು ಕಡೆ ಬಿಜೆಪಿ ವಲಯದಲ್ಲಿ ಮತ್ತೆ ದೋಸ್ತಿ ಸರ್ಕಾರದ ಪತನಕ್ಕೆ ಮುಹೂರ್ತ ನಿಗದಿ ಮಾಡುವ ಪರಿಪಾಠ ಮುಂದುವರಿದಿದೆ. ಅದೇ ನಿರೀಕ್ಷೆಯಲ್ಲಿ ಪರ್ಯಾಯ ಸರ್ಕಾರ ರಚನೆಗೆ ಸಿದ್ಧತೆಗಳು ತೆರೆಮರೆಯಲ್ಲಿ ಬಿರುಸುಗೊಂಡಿವೆ ಎಂಬ ವರದಿಗಳಿವೆ. ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರು ಮತ್ತು ಜೆಡಿಎಸ್ ನ ಕೆಲವು ಮುಖಂಡರು ತಮ್ಮ ಸಂಪರ್ಕದಲ್ಲಿದ್ದು, ಯಾವುದೇ ಕ್ಷಣದಲ್ಲಿ ಸರ್ಕಾರ ಉರುಳಬಹುದು. ಅಂತಹ ಸಂದರ್ಭ ಬಂದಲ್ಲಿ, ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಅವಕಾಶವಿಲ್ಲದಂತೆ ಪರ್ಯಾಯ ಸರ್ಕಾರ ರಚಿಸಲು ತಾವು ಸಿದ್ಧರಿದ್ದೇವೆ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.
ಮತ್ತೊಂದು ಕಡೆ, ದೋಸ್ತಿ ಪಕ್ಷದ ವರಿಷ್ಠರೇ ಮಧ್ಯಂತರ ಚುನಾವಣೆಯ ಮಾತನಾಡತೊಡಗಿದ್ದಾರೆ. ಸ್ವತಃ ದೇವೇಗೌಡರೇ ಕಳೆದ ವಾರ ಮತ್ತೆ ಮತ್ತೆ ಮಧ್ಯಂತರ ಚುನಾವಣೆಯ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಚುನಾವಣೆಗೆ ಸಜ್ಜಾಗುವಂತೆಯೂ ಕರೆ ನೀಡಿದ್ದಾರೆ. ಆ ಮೂಲಕ ಅವರು ಕಾಂಗ್ರೆಸ್ ನೊಂದಿಗಿನ ತಮ್ಮ ದೋಸ್ತಿ ಬಹಳ ದಿನ ಮುಂದುವರಿಯಲಾರದು ಎಂಬ ಸಂದೇಶವನ್ನು ರಾಜ್ಯದ ಮತದಾರರಿಗೆ ಮಾತ್ರವಲ್ಲ; ಪ್ರತಿಪಕ್ಷದವರಿಗೂ ರವಾನಿಸಿದ್ದಾರೆ.
ಆದರೆ, ಜೆಡಿಎಸ್ ಪಾಳೆಯದ ಚುನಾವಣಾ ಮೂಡ್ ಅಷ್ಟಕ್ಕೇ ನಿಲ್ಲಲಿಲ್ಲ. ದೊಡ್ಡ ಗೌಡರ ಮಾತಿಗೆ ಪ್ರತಿಕ್ರಿಯಿಸುತ್ತಾ ಸಿಎಂ ಕುಮಾರಸ್ವಾಮಿ ಅವರು, ‘ದೇವೇಗೌಡರು ಯಾವ ಅರ್ಥದಲ್ಲಿ ಮಧ್ಯಂತರ ಚುನಾವಣೆಯ ಮಾತನಾಡಿದ್ದಾರೋ ಗೊತ್ತಿಲ್ಲ. ಸರ್ಕಾರವಂತೂ ಸುಭದ್ರವಾಗಿದೆ’ ಎಂದು ಹೇಳಿದ್ದರೂ, ಈ ವಿಷಯದಲ್ಲಿ ಅವರ ಮಾತಿಗೂ ಮತ್ತು ಕೃತಿಗೂ ತಾಳೆಯಾಗುತ್ತಿಲ್ಲ. ಏಕೆಂದರೆ, ಲೋಕಸಭಾ ಚುಣಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಮಿತ್ರಪಕ್ಷ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮುಖದಲ್ಲಿ ಗಂಟುಗಳು ಬಿಗಿಯಾಗುತ್ತಿರುವುದನ್ನು ಗಮನಿಸಿದ ಸಿಎಂ, ಕೂಡಲೇ ತಮ್ಮ ಜನಪ್ರಿಯ ‘ಗ್ರಾಮ ವಾಸ್ತವ್ಯ 2.0’ ಘೋಷಿಸಿದರು. ಜೊತೆಗೆ, ಸಾಲ ಮನ್ನಾ ವಿಷಯದಲ್ಲಿ ನೆನೆಗುದಿಗೆ ಬಿದ್ದಿದ್ದ ಬಿಕ್ಕಟ್ಟುಗಳನ್ನು ಪರಿಹರಿಸಿ ಕೂಡಲೇ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಪ್ರಕ್ರಿಯೆ ಜಾರಿಗೆ ಚಾಲನೆ ನೀಡಿದರು. ಈ ದಿಢೀರ್ ಕ್ರಮಗಳು ಸದ್ಯದ ಸ್ಥಿತಿಯಲ್ಲಿ ಚುನಾವಣಾ ತಯಾರಿಯನ್ನಲ್ಲದೇ ಬೇರೆ ತುರ್ತು ರಾಜಕೀಯ ನಡೆಗಳಾಗಿ ಕಾಣುತ್ತಿಲ್ಲ ಎಂಬುದು ವಾಸ್ತವ.
ಮುಖ್ಯಮಂತ್ರಿಗಳ ಈ ಭರ್ಜರಿ ತಯಾರಿಗಳು ಸಹಜವಾಗೇ ಮಿತ್ರಪಕ್ಷದ ನಾಯಕ ಸಿದ್ದರಾಮಯ್ಯ ಅವರಲ್ಲಿ ಆತಂಕ ಹುಟ್ಟಿಸಿವೆ. ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಮತ್ತು ಕೆಪಿಸಿಸಿ ಕಾರ್ಯಕಾರಿಣಿ ವಿಸರ್ಜನೆ ಮೂಲಕ ಪಕ್ಷದಲ್ಲಿ ಮತ್ತು ಆ ಮೂಲಕ ದೋಸ್ತಿ ಸರ್ಕಾರದ ಮೇಲಿನ ತಮ್ಮ ಹಿಡಿತ ಮೇಲುಗೈ ಸಾಧಿಸುವಂತೆ ನೋಡಿಕೊಂಡಿದ್ದ ಸಿದ್ದರಾಮಯ್ಯ ಅವರಿಗೆ, ಮಿತ್ರಪಕ್ಷದ ದಿಢೀರ್ ಮಧ್ಯಂತರ ಚುನಾವಣೆಯ ಹೇಳಿಕೆ ಮತ್ತು ಪರೋಕ್ಷ ಚುನಾವಣಾ ತಯಾರಿಗಳು ಇನ್ನಷ್ಟು ಕ್ರಿಯಾಶೀಲರಾಗಲು ಮತ್ತು ಹೊಸ ದಾಳಗಳನ್ನು ಅಣಿಗೊಳಿಸಲು ಇಂಬು ನೀಡಿವೆ. ಹಾಗಾಗಿಯೇ, ಈಗ ಸಿದ್ದರಾಮಯ್ಯ ಮತ್ತೆ ತಮ್ಮ ಟ್ರಂಪ್ ಕಾರ್ಡ್ ಅಜೆಂಡಾ ಅಹಿಂದದ ಮೊರೆಹೋಗಿದ್ದಾರೆ! ಆ ಮೂಲಕ, 2006ರ ಇತಿಹಾಸಕ್ಕೆ ಮತ್ತೆ ರಾಜ್ಯ ರಾಜಕಾರಣ ಮರಳಿದಂತಾಗಿದೆ!
2006ರಲ್ಲಿ ಕೂಡ, ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ, ಜೆಡಿಎಸ್ ನಾಯಕರಾಗಿದ್ದ ಮತ್ತು ಉಪಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನದಿಂದ ತಮಗೆ ಅವಕಾಶ ವಂಚಿಸಿದರು ಎಂಬ ಹಿನ್ನೆಲೆಯಲ್ಲಿ ದೇವೇಗೌಡರ ವಿರುದ್ಧ ತಮ್ಮ ಬಲ ಪ್ರದರ್ಶನದ ಅಸ್ತ್ರವಾಗಿ ಚಾಲನೆಗೆ ತಂದಿದ್ದೇ ಅಹಿಂದ ಸಂಘಟನೆಯನ್ನು. ಸರಣಿ ಸಮಾವೇಶಗಳ ಮೂಲಕ ಅಹಿಂದ ವರ್ಗದ ರಾಜಕೀಯ ಸಂಘಟನೆ ಬಲಗೊಳ್ಳತೊಡಗಿದಂತೆ ದೇವೇಗೌಡರೊಂದಿಗಿನ ಸಿದ್ದರಾಮಯ್ಯ ಸಂಬಂಧ ಕೂಡ ಹದಗೆಟ್ಟಿತು. ಅಂತಿಮವಾಗಿ ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಇದೀಗ ಮತ್ತೆ ಅದೇ ದೇವೇಗೌಡರು ಮತ್ತು ಕುಮಾರಸ್ವಾಮಿ ವಿರುದ್ಧ ತಮ್ಮ ರಾಜಕೀಯ ಬಲಪ್ರದರ್ಶನಕ್ಕೆ ಸಿದ್ದರಾಮಯ್ಯ ಅಹಿಂದ ಮೊರೆಹೋಗಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲೇ ಸರಣಿ ಅಹಿಂದ ಸಮಾವೇಶಗಳಿಗೆ ಚಾಲನೆ ನೀಡುವ ಕುರಿತು ಈಗಾಗಲೇ ತಮ್ಮ ಆಪ್ತರೊಂದಿಗೆ ಚರ್ಚಿಸಿದ್ದಾರೆ ಎಂಬ ವರದಿಗಳಿವೆ.
ವಿಪರ್ಯಾಸವೆಂದರೆ, ಇಡೀ ರಾಜ್ಯ ರಾಜಕಾರಣದ ಪರಿಸ್ಥಿತಿ ಇದೀಗ ಒಂದು ದಶಕದ ಹಿಂದಿನ ಸ್ಥಿತಿಗೇ ಮರಳಿದೆ ಎಂಬುದು. ಒಂದು ಕಡೆ ಅಂದಿನಂತೆಯೇ ಇಂದೂ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವಿದೆ. ಅಂದಿನಂತೆಯೇ ಇಂದೂ ಸರ್ಕಾರಕ್ಕೆ ದೊಡ್ಡ ತಲೆನೋವಾಗಿರುವುದು ಕೇವಲ ಪ್ರತಿಪಕ್ಷ ಬಿಜೆಪಿಯಷ್ಟೇ ಅಲ್ಲ, ಬದಲಾಗಿ ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವಿನ ರಾಜಕೀಯ ವೈಷಮ್ಯ. ಹಾಗೇ, ಹಿಂದಿನಂತೆಯೇ ಈ ಇಬ್ಬರು ನಾಯಕರ ನಡುವಿನ ರಾಜಕೀಯ ಹಾವು ಏಣಿ ಆಟಕ್ಕೆ ದೋಸ್ತಿ ಸರ್ಕಾರವೇ ಪತನವಾಗುವ ಪರಿಸ್ಥಿತಿ ಕೂಡ ಮತ್ತೊಮ್ಮೆ ಉದ್ಭವಿಸಿದೆ. ಅದೇ ಹೊತ್ತಿಗೆ, ಬಿಜೆಪಿ ಕೂಡ, 2006ರಂತೆಯೇ ತನ್ನ ರೊಟ್ಟಿ ಜಾರಿ ತುಪ್ಪಕ್ಕೆ ಬೀಳುವ ಸರದಿಗಾಗಿ ಕಾಯುತ್ತಿದೆ ಮತ್ತು ಅಂತಹ ಅವಕಾಶ ಕೈತಪ್ಪದಂತೆ ತಯಾರಿ ನಡೆಸಿರುವುದಾಗಿ ಪಕ್ಷದ ಮುಖಂಡರಾದ ಯಡಿಯೂರಪ್ಪ, ಈಶ್ವರಪ್ಪ ಮುಂತಾದವರು ಪದೇ ಪದೇ ಪುನರುಚ್ಛರಿಸುತ್ತಲೇ ಇದ್ದಾರೆ.
ಆದರೆ, ಸಿದ್ದರಾಮಯ್ಯ ಪಾಲಿಗೆ ದಶಕದ ಹಿಂದಿನ ಅಹಿಂದದ ಯಶಸ್ಸು ಮತ್ತು ಅದು ತಂದುಕೊಟ್ಟ ಕಾಂಗ್ರೆಸ್ ಪಕ್ಷದ ನಾಯಕತ್ವದ ಅವಕಾಶದಂತಹ ರಾಜಕೀಯ ದಿಗ್ವಿಜಯ ಮತ್ತೆ ದೊರೆಯುವುದೇ ಎಂಬುದು ಈಗಿನ ಪ್ರಶ್ನೆ. ಏಕೆಂದರೆ, ಅಂದಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗೂ ಇಂದು, ಅವರು ನೆಚ್ಚಿಕೊಂಡಿರುವ ಅಹಿಂದ ವರ್ಗದ ಸ್ಥಿತಿಗೂ ಸಾಕಷ್ಟು ಬದಲಾವಣೆಗಳಿವೆ. ಅಹಿಂದ ವರ್ಗಗಳು ರಾಜಕೀಯ ಮತ್ತು ಸಾಮಾಜಿಕವಾಗಿ ಸಾಕಷ್ಟು ಪಲ್ಲಟಗೊಂಡಿವೆ. ಸ್ವತಃ ಸಿಎಂ ಆಗಿ, ಐದು ವರ್ಷಗಳ ಕಾಲ ಪ್ರತಿ ಬಜೆಟ್ಟಿನಲ್ಲಿಯೂ ಅಹಿಂದ ವರ್ಗಗಳ ಪರ ಹಲವಾರು ಯೋಜನೆಗಳನ್ನು ರೂಪಿಸಿ, ಆ ವರ್ಗಗಳ ಸಬಲೀಕರಣಕ್ಕೆ ಪ್ರಯತ್ನಿಸಿದ್ದರೂ, ಅದೇ ಕಾರಣಕ್ಕೆ ಇಡೀ ಸರ್ಕಾರವೇ ಅಹಿಂದ ಸರ್ಕಾರ ಎಂಬ ಕುಹಕದ ಮಾತುಗಳಿಗೆ ಈಡಾಗಿದ್ದರೂ, ಸಿದ್ದರಾಮಯ್ಯ ಅವರೊಂದಿಗೆ ಆ ವರ್ಗಗಳು ಎಷ್ಟರಮಟ್ಟಿಗೆ ನಿಂತವು ಎಂಬುದನ್ನು ಈಗಾಗಲೇ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳೆರಡೂ ತೋರಿಸಿಕೊಟ್ಟಿವೆ.
ಅದರಲ್ಲೂ ಮುಖ್ಯವಾಗಿ ದಲಿತರು ಸಂಪೂರ್ಣವಾಗಿ ಸಿದ್ದರಾಮಯ್ಯ ಅವರಿಂದ ವಿಮುಖರಾಗಿದ್ದಾರೆ ಎಂಬ ಪರಿಸ್ಥಿತಿ ಇದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನದ ಅವಕಾಶ ನೀಡದಿರುವುದು, ಕೋಲಾರದಲ್ಲಿ ಕೆ ಎಚ್ ಮುನಿಯಪ್ಪ ಚುನಾವಣಾ ಸೋಲು ಮತ್ತು ಮುಖ್ಯವಾಗಿ ನ್ಯಾ. ಸದಾಶಿವ ಆಯೋಗ ಜಾರಿಗೊಳಿಸದೆ ಎಡಗೈ ಮತ್ತು ಬಲಗೈ ದಲಿತರ ಆಕ್ರೋಶಕ್ಕೆ ಈಡಾಗಿರುವುದು ಈಗ ಸಿದ್ದರಾಮಯ್ಯ ಅವರಿಂದ ದಲಿತ ಸಮುದಾಯಗಳನ್ನು ದೂರ ಸರಿಸಿವೆ ಎಂಬ ವಾತಾವರಣ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂಡ ಎಡಗೈ- ಬಲಗೈ ಒಳ ಮೀಸಲಾತಿ ವಿಷಯವೇ ಸಾಕಷ್ಟು ದಲಿತ ಮತಗಳನ್ನು ಕಾಂಗ್ರೆಸ್ ವಿರುದ್ಧ ದಿಕ್ಕಿಗೆ ಹರಿಸಿದ್ದವು ಎಂಬುದು ಗುಟ್ಟೇನಲ್ಲ. ಜೊತೆಗೆ, ಬಿಜೆಪಿಯ ವಿಷಯದಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಹತ್ತು ವರ್ಷದ ಹಿಂದೆ ಇದ್ದ ಒಂದು ರೀತಿಯ ರಾಜಕೀಯ ಅಸ್ಪೃಶ್ಯತಾ ಭಾವನೆ ಈಗ ಇಲ್ಲ ಎಂಬುದು ಕೂಡ ಹಲವು ಚುನಾವಣೆಗಳಲ್ಲಿ ಸಾಬೀತಾಗಿದೆ. ದಲಿತ ಸಂಘಟನೆಗಳು ಪ್ರಬಲವಾಗಿದ್ದ ಕ್ಷೇತ್ರಗಳಲ್ಲೇ ಬಿಜೆಪಿ ಅಭ್ಯರ್ಥಿಗಳ ಜಯಭೇರಿ ಬಾರಿಸಿರುವುದು ಈ ಬಾರಿಯ ಲೋಕಸಭಾ ಚುನಾವಣೆಯ ಒಂದು ವಿಶೇಷ ಎಂಬುದನ್ನು ತಳ್ಳಿಹಾಕಲಾಗದು. ಹಾಗಾಗಿ, ಈಗ ಸಿದ್ದರಾಮಯ್ಯ ಸಂಘಟನೆ, ಸಮಾವೇಶಗಳಿಗೆ ಮುಂದಾದರೂ, ಸಿದ್ದರಾಮಯ್ಯ ಅವರೊಂದಿಗೆ ದಲಿತ ಸಮುದಾಯಗಳು ಹೆಜ್ಜೆ ಹಾಕಲಾರವು. ಆದ್ದರಿಂದ ಈ ಬಾರಿಯ ಅವರ ಈ ಸಂಘಟನೆ ‘ಅಹಿಂದ’ ಬದಲಾಗಿ, ಕೇವಲ ‘ಅಹಿಂ’ ಆಗಿ ಉಳಿದರೂ ಅಚ್ಚರಿ ಇಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.
ಒಟ್ಟಾರೆ, ಸಿದ್ದರಾಮಯ್ಯ ಪಾಲಿಗೆ ಈ ದಿನಗಳು ದಶಕದ ಹಿಂದಿನಷ್ಟು ಸರಳವಿಲ್ಲ. ಪ್ರಮುಖವಾಗಿ ಎಚ್ ವಿಶ್ವನಾಥ್ ಸೇರಿದಂತೆ ಅಂದು ಜೊತೆ ನಿಂತ ಅಹಿಂದ ಸಂಘಟನೆಯ ಮುಖಂಡರೇ ಈಗ ಅವರ ವಿರೋಧಿ ಪಾಳೆಯದಲ್ಲಿದ್ದಾರೆ. ಎಚ್ ಸಿ ಮಹಾದೇವಪ್ಪ ಅವರಂಥ ನಾಯಕರೊಂದಿಗಿನ ಅವರ ಸಂಬಂಧ ಹಳಸಿದೆ. ಮುಕುಡಪ್ಪ ಅವರಂತಹ ನಾಯಕರು ಕೂಡ ಜೊತೆಯಲ್ಲಿಲ್ಲ. ಹಾಗೇ, ಒಟ್ಟಾರೆ ರಾಜಕೀಯ ಪರಿಸ್ಥಿತಿ ಕೂಡ ಹಿಂದಿನಂತೆ ಪೂರಕವಾಗಿಲ್ಲ. ಆ ಹಿನ್ನೆಲೆಯಲ್ಲಿ ಈಗ ಸಿದ್ದರಾಮಯ್ಯ ‘ಅಹಿಂದ’ ಕೈಗೆತ್ತಿಕೊಂಡರೆ, ಎದುರಿಸಬೇಕಾದ ಸವಾಲು ದೊಡ್ಡದಿದೆ. ಆದರೆ, ಸದ್ಯದ ರಾಜಕೀಯ ಸ್ಥಿತಿಯಲ್ಲಿ ತಮ್ಮ ವೈಯಕ್ತಿಕ ರಾಜಕೀಯ ಅಸ್ತಿತ್ವ ಕಾಯ್ದುಕೊಳ್ಳುವ ಜೊತೆಗೆ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಅಹಿಂದ ಸಂಘಟನೆ ಹೊರತುಪಡಿಸಿ ಬೇರೆ ಸಿದ್ಧ ಮಾದರಿಗಳು ಅವರ ಮುಂದಿಲ್ಲ. ಹಾಗಾಗಿ ಮತ್ತೆ ಸಿದ್ದರಾಮಯ್ಯ ಅಹಿಂದ ಜಪ ಪಠಿಸತೊಡಗಿದ್ದಾರೆ.
ಆದರೆ, ಈ ಬಾರಿಯ ಅಹಿಂದ ಚಳವಳಿ ಆರಂಭವಾಗಿದ್ದೇ ಆದರೆ, ಅದರ ಪರಿಣಾಮಗಳು ಏನೆಲ್ಲಾ ಇರಬಹುದು ಎಂಬುದನ್ನು ಕಾದುನೋಡಬೇಕಿದೆ.