ಇತ್ತೀಚಿನ ದಿನಗಳಲ್ಲಿ ಇಸ್ಲಾಮಿನ ತಲಾಖ್ ಅಥವಾ ವಿವಾಹ ವಿಚ್ಛೇದನ ಪದ್ಧತಿಗಳು ಹೆಚ್ಚಿನ ವಿಮರ್ಶೆಗೆ ಒಳಪಡುತ್ತಿವೆ. ಮುಸ್ಲಿಂ ಮಹಿಳೆ ಪುರುಷನಿಗೆ ಸಮಾನವಾದ ಹಕ್ಕುಗಳನ್ನು ಅನುಭವಿಸಲು ಸಾಧ್ಯವಾದ್ದದ್ದು ಈ ಧರ್ಮದ ಆರಂಭದ ಕಾಲದಲ್ಲಿ ಮಾತ್ರ ಎಂದು ಹೇಳಬಹುದು. ಇಂದು ಮತ್ತೆ ಮುಸ್ಲಿಂ ಮಹಿಳೆಯ ತಲಾಖ್ ಕುರಿತಂತೆ ಚರ್ಚೆಗಳಾಗುತ್ತಿವೆ.
ಭಾರತದ ವೈಸರಾಯ್ ವಾರನ್ ಹೆಸ್ಟಿಂಗ್ಸ್ 1772ರಲ್ಲಿ ಹಿಂದೂ ಮುಸ್ಲಿಂ ಕಾಯ್ದೆಗಳ ಮೇಲೆ ನಿಯಂತ್ರಣ ಹೇರಿದ. 1780ರಲ್ಲಿ ಅದನ್ನು ಕಾನೂನಿನ ಮೂಲಕ ಕಾರ್ಯರೂಪಕ್ಕೆ ತರಲಾಯಿತು. ಆಗ ಮುಸ್ಲಿಮರಿಗೆ ಅವರ ಮದುವೆ, ಉತ್ತರಾಧಿಕಾರ ಮುಂತಾದ ವಿಚಾರಗಳಿಗೆ ಸಂಬಂಧಿಸಿದ ಕಾನೂನು ಮಾತ್ರ ಉಳಿಯಿತು. ಮುಂದೆ 1937ರಲ್ಲಿ ಬ್ರಿಟಿಷರು ಜಾರಿಗೆ ತಂದ “ಮುಸ್ಲಿಂ ಪರ್ಸನಲ್ ಲಾ (ಷರಿಯತ್) ಅಪ್ಲಿಕೇಷನ್ ಆಕ್ಟ್ 1937” ಅನ್ನು ಜಸ್ಟಿಸ್ ಅಮೀರ್ ಅಲಿ ಅವರು ಕ್ರೋಢೀಕರಿಸಿದ್ದಾರೆ. ಷಿಯಾ ಪಂಗಡಕ್ಕೆ ಸೇರಿದ್ದ ಅವರು, ಭಾರತದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಇರುವ ಸುನ್ನಿ ಪಂಗಡಕ್ಕೆ ಅವಶ್ಯಕವೆನಿಸುವಂಥ ಕಾನೂನನ್ನು ರೂಪಿಸುವಲ್ಲಿ ವಿಫಲರಾಗಿದ್ದಾರೆ. ಅವರು ಕಾಯ್ದೆ ತಜ್ಞರಾಗಿದ್ದರೂ ಷರಿಯತ್ನ್ನು ಆಳವಾಗಿ ಅಧ್ಯಯನ ಮಾಡಿದವರಾಗಿರಲಿಲ್ಲ ಎಂಬ ವಾದವೂ ಇದೆ. ಇಸ್ಲಾಂ ಮೂಲತಃ ಏಕಪತ್ನಿತ್ವವನ್ನು ಬೆಂಬಲಿಸುತ್ತದೆ ಮತ್ತು ವಿವಾಹ ವಿಚ್ಛೇದನವನ್ನು ತಿರಸ್ಕರಿಸುತ್ತದೆ ಎಂಬುದು ಅವರ ಗಮನಕ್ಕೆ ಬರಲೇ ಇಲ್ಲ. ಹೀಗಾಗಿ ಅವರು ಕ್ರೋಢೀಕರಿಸಿದ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಕುರಾನ್ ಮತ್ತು ಹದೀಸ್ಗೆ ಅಪಚಾರವೆಸಗುವಂಥ ವಿಚಾರಗಳಿವೆ. ಆದ್ದರಿಂದ ಮುಸ್ಲಿಮರು ಷರಿಯತ್ನ ತಿರುಳನ್ನು ಅರ್ಥೈಸಿಕೊಂಡು ಮುನ್ನಡೆಯುವುದು ಅವಶ್ಯವಾಗಿದೆ.
ಮುಸ್ಲಿಂ ವೈಯಕ್ತಿಕ ಕಾನೂನು ಷರಿಯತ್ ಅಲ್ಲ. ಷರಿಯತ್ ಯಾವತ್ತೂ ಸ್ತ್ರೀವಿರೋಧಿಯಲ್ಲ. ಕೆಲವು ಮೂಲಭೂತ ಸನಾತನ ಹಿತಾಸಕ್ತಿಗಳ ಕಪಿಮುಷ್ಟಿಯಲ್ಲಿ ಸಿಕ್ಕು ನಲುಗುವಂತಾಗಿ ಯಥಾಸ್ಥಿತಿ ಮುಂದುವರೆದಿದೆ. ಷರಿಯತ್ ಪ್ರಕಾರ ಬಹುಪತ್ನಿತ್ವ ಮತ್ತು ತಲಾಖ್ ನ್ನು ಕಾನೂನು ಬಾಹಿರಗೊಳಿಸುವುದು. ಒಂದು ವೇಳೆ ಗಂಡ ಹೆಂಡತಿ ಕೂಡಿ ಬಾಳುವುದು ಸಾಧ್ಯವೇ ಇಲ್ಲ ಎನ್ನುವುದಾದರೆ, ತಲಾಖ್ ನೀಡಿ ಅವಳಿಗೆ ಗೌರವದಿಂದ ಬದುಕಲು ಅವಶ್ಯವಾದ ಜೀವನಾಂಶವನ್ನು ಒದಗಿಸುವುದು ಪ್ರತಿಯೊಬ್ಬ ನಿಷ್ಠಾವಂತ ಮುಸ್ಲಿಮನ ಕರ್ತವ್ಯವಾಗಿದೆ.
‘‘ಷರಿಯತ್ ಚಲನಶೀಲವಾದುದು. ಇಸ್ಲಾಂ ಧರ್ಮದ ಪ್ರಬುದ್ಧ ಅನುಯಾಯಿಗಳು ಯಾವ ಕಾಲಕ್ಕೂ ಹೆಂಡತಿಗೆ “ತಲಾಖ್ ತಲಾಖ್ ತಲಾಖ್” ಎಂದು ಹೇಳುವುದಿಲ್ಲ. ಕಾಮದಾಸೆಗಾಗಿ ಎರಡನೇ ಮದುವೆಯಾಗುವುದಿಲ್ಲ. ‘ತಲಾಖ್ ತಲಾಖ್ ತಲಾಖ್’ ಎಂದು ಹೇಳಿ ಹೆಂಡತಿಯನ್ನು ಹೊರಗಟ್ಟುವ ಗಂಡನನ್ನು ಪ್ರಶ್ನಿಸುವ ಹಕ್ಕು ಭಾರತದಲ್ಲಿ ಪ್ರಚಲಿತವಿರುವ ಮುಸ್ಲಿಂ ವೈಯಕ್ತಿಕ ಕಾನೂನಿಗೆ ಇಲ್ಲ. ಆದರೆ ಷರಿಯತ್ಗೆ ಇದೆ. ಮುಸ್ಲಿಮರ ಪವಿತ್ರ ಧರ್ಮಗ್ರಂಥ ಕುರಾನ್ನಿಂದ ಮತ್ತು ಷರಿಯತ್ತಿನ ಆಧಾರದ ಮೇಲೆ ಮುಸ್ಲಿಂ ವೈಯಕ್ತಿಕ ಕಾನೂನನ್ನು ರಚಿಸಲಾಗಿದೆ. ಆದ್ದರಿಂದ ಅದನ್ನು ಪರೀಕ್ಷೆಗೆ ಒಳಪಡಿಸಲು ಅವಕಾಶವಿಲ್ಲ ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು 2016ನೇ ಸೆಪ್ಟೆಂಬರ್ 18ರಂದು ಸುಪ್ರೀಂ ಕೋರ್ಟಿಗೆ ತಿಳಿಸಿದೆ. ರಾಷ್ಟ್ರೀಯ ಮುಸ್ಲಿಂ ಮಹಿಳಾ ಮಂಚ್ ಎಂಬ ಸಂಸ್ಥೆ ತಲಾಖಿನ ವಿರುದ್ದ ಸಹಿ ಸಂಗ್ರಹ ಅಭಿಯಾನವನ್ನು ನಡೆಸಿತು.
ಪರಿತ್ಯಕ್ತೆಯರಲ್ಲಿ ಒಬ್ಬರಾದ ಜಶೋದಾ ಬೆನ್ (ಪ್ರಧಾನಿ ನರೇಂದ್ರಮೋದಿ ಪತ್ನಿ) 43 ವರ್ಷಗಳ ವರೆಗೂ ತಮ್ಮೊಂದಿಗೆ ಸಂಸಾರ ಮಾಡದಿರುವ ಪತಿಯ ಜತೆ ಬಾಳಲು ಆತನ ಒಂದು ಕರೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. 2014ರ ನವೆಂಬರ್ 24 ರಂದು ಜಶೋದಾ ಬೆನ್ ಹೇಳುತ್ತಾರೆ, “ಮೋದಿ ಅವರು ಒಂದು ಬಾರಿ ಕರೆ ಮಾಡಿದರೆ, ಅವರ ಜತೆಗೆ ಹೋಗುತ್ತೇನೆ” ಎಂದು. ಆದರೆ ಪ್ರಧಾನಿ ಮೋದಿ ಅದಕ್ಕೆ ಸ್ಪಂದಿಸಲೇ ಇಲ್ಲ. ದೇಶದಲ್ಲಿ ಇಂದು 24 ಲಕ್ಷ ಜಶೋದಾ ಬೆನ್ನಂತಹ ಒಂಟಿ ಮಹಿಳೆಯರು ಬದುಕುತ್ತಿದ್ದಾರೆ. ಅವರ ಬಗ್ಗೆಯೂ ಕಾಳಜಿ ಅವಶ್ಯಕವಾಗಿದೆ. ಸಂಕಷ್ಟದಲ್ಲಿರುವ ಎಲ್ಲಾ ಮಹಿಳೆಯರ ದು:ಖದುಮ್ಮಾನಗಳು ಅಂತ್ಯ ಕಾಣಬೇಕಾಗಿದೆ. ಬದಲಿಗೆ ಅದು ರಾಜಕೀಯ ಲಾಭದ ವಿಷಯವಾಗಬಾರದು.

ಮೋದಿಯವರಿಗೆ ಇದ್ದಕ್ಕಿದ್ದಂತೆ ಮುಸ್ಲಿಂ ಮಹಿಳೆಯರ ಬಗ್ಗೆ ಮಮತೆ ಉಕ್ಕಿದ್ದು ಯಾಕೆ ?
ಅವರದೇ ಕ್ಷೇತ್ರವಾದ ಗುಜರಾತಿನ ದಂಗೆಗಳಲ್ಲಿ ಅವರ ಭಂಟರು ಮುಸ್ಲಿಂ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ, ಬಲಾತ್ಕಾರ, ಹಿಂಸೆ, ಲೂಟಿ, ಕೊಲೆಗಳು ನಡೆಸಿದಾಗ, ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಇವರೇಕೆ ಮುಸ್ಲಿಂ ಮಹಿಳೆಯರ ಪರವಾಗಿ ನಿಲ್ಲಲಿಲ್ಲ? ಆ ಮುಸ್ಲಿಂ ಸಹೋದರಿಯರ ಅಪರಾಧವಾದರೂ ಏನಿತ್ತು? ತಮ್ಮ ಹೆಂಡತಿ ಜಶೋದಾ ಬೆನ್ಗೆ ಯಾವ ಕಾನೂನಡಿಯಲ್ಲಿ ಅವರು ತಲಾಖ್ ನೀಡಿದ್ದಾರೆ? ಎಂದು ಜನ ಕೇಳುವುದಿಲ್ಲವೆ? ಪಾಪ! ಆ ಹೆಣ್ಣಿನ ಬದುಕು ಹಾಳಾಗಿಹೋಗಲಿಲ್ಲವೇ? ಆ ಹೆಣ್ಣುಮಗಳು ಮಾಡಿದ ತಪ್ಪಾದರೂ ಏನು? ಯಾಕೆ ಅವರನ್ನು ಹೊರ ದಬ್ಬಿದಿರಿ? ಅಥವಾ ಅವರನ್ನು ಬಿಟ್ಟು ಓಡಿಹೋದಿರಿ? ಯಾವ ಕಾನೂನಿನ ಪ್ರಕಾರ ಆಕೆಯನ್ನು ಬಿಟ್ಟಿದ್ದಿರಿ? ಎಂಬ ಪ್ರಶ್ನೆಗಳು ಉದ್ಭವಿಸಲಾರವೇ? ಒಂದು ರಾಷ್ಟ್ರದ ಪ್ರಧಾನಿಯಾದರೇನಂತೆ, ಕಾನೂನಿನಡಿಯಲ್ಲಿ ಎಲ್ಲರೂ ಸಮಾನರಲ್ಲವೆ?
ಮಹಿಳೆಯ ಇಷ್ಟ-ಕಷ್ಟಗಳನ್ನು ಪುರುಷಾಧಿಪತ್ಯ ಕೇಳುವುದೇ ಇಲ್ಲ. ಇದು ಭೂಮಿ ಮೇಲಿನ ಎಲ್ಲ ಧರ್ಮಗಳಿಗೂ ಅನ್ವಯಿಸುತ್ತದೆ. ಇಸ್ಲಾಂನಲ್ಲಿ “ಮೇಲು ಕೀಳಿಲ್ಲ, ಒಡೆಯ-ಗುಲಾಮನಿಲ್ಲ ಯಾರೂ ಸರ್ವಾಧಿಕಾರಿಯಲ್ಲ. ಹೆಣ್ಣು ಗಂಡಿನ ದಾಸಿಯಲ್ಲ. ಅವಳೂ ಸಮಾನ ಮನುಷ್ಯಳು” ಎಂಬುದು ಈ ಧರ್ಮದ ವ್ಯಾಖ್ಯಾನ. ಆದರೂ ಇಂದಿನ ಇಸ್ಲಾಂ ಲೋಕದಲ್ಲಿ ಮೇಲು-ಕೀಳು, ಬಡವ-ಶ್ರೀಮಂತ ಎಂಬ ವರ್ಗ ಭೇದಗಳು ಉಳಿದುಕೊಂಡು ಬಂದಿವೆ. ಅಂದಿನ ಅರಬ್ಬರಲ್ಲಿ ಹೆಣ್ಣು ಶಿಶುವನ್ನು ಜೀವಂತ ಹುಗಿದು ಸಾಯಿಸುವ ಪದ್ಧತಿ ಜಾರಿಯಲ್ಲಿತ್ತು. ಅದು ಹಿಂದೂಗಳಲ್ಲಿನ ಸತಿ ಪದ್ಧತಿಯಷ್ಟೇ ಕ್ರೂರವಾಗಿತ್ತು. ಪೈಗಂಬರರು ಈ ಪದ್ಧತಿಯನ್ನು ಧರ್ಮಬಾಹಿರವಾಗಿಸಿದರು.
ಪ್ರವಾದಿಗಳು ಹೇಳುತ್ತಾರೆ: ‘ನೀವು ವಿವಾಹವಾಗಿರಿ. ತಲಾಖ್ ಹೇಳಬೇಡಿ. ಕೇವಲ ಭೋಗಿಸಲಿಕ್ಕಾಗಿ ಹಾಗೆ ಮಾಡುವ ಸ್ತ್ರೀ-ಪುರುಷರನ್ನು ಅಲ್ಲಾಹ್ನು ಸರ್ವಥಾ ಮೆಚ್ಚುವುದಿಲ್ಲ’ (ದಾರಕುತ್ನಿ). ಇಲ್ಲಿ ಒಬ್ಬ ಅಮಲುಕೋರನ, ಕುಪಿತನಾದವನ ಮತ್ತು ಒತ್ತಾಯಕ್ಕೆ ತಲಾಖ್ ನೀಡುವವನ, ತಮಾಷೆಗಾಗಿ, ಅಥವಾ ಮತಿಭ್ರಾಂತನ ತಲಾಖ್ ಗಳೂ ಸಿಂಧುವಾಗುವುದಿಲ್ಲ. ಅದೇ ರೀತಿ ಒಂದೇ ಉಸಿರಿಗೆ ನೀಡುವ ಮೂರು ತಲಾಖ್ ಗಳೂ (ತತ್ಕ್ಷಣದ ತ್ರಿವಳಿ ತಲಾಖ್) ಸಹ ಸಿಂಧುವಾಗುವುದಿಲ್ಲ. ಇದು ಇಸ್ಲಾಂನ ಧಾರ್ಮಿಕ ಕಾನೂನು ಆಗಿರುವಾಗ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದನ್ನು ಬಿಟ್ಟು ತಾನೇ ಹೊಸದಾಗಿ ಮಾಡುತ್ತಿರುವುದಾಗಿ ಪ್ರಧಾನಿಗಳು ಬಿಂಬಿಸುತ್ತಿರುವುದು ಓಟಿನ ರಾಜಕಾರಣದ ಭಾಗವಾಗಿದೆಯೇ ಹೊರತು ಅದರಲ್ಲಿ ಮುಸ್ಲಿಂ ಮಹಿಳೆಯರ ಹಿತಾಸಕ್ತಿಗಳಿಲ್ಲ. 2019ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡನೇ ಬಾರಿಗೆ ಮಂಡಿಸುತ್ತಿರುವ ಮೊದಲ ಮಸೂದೆಯಾಗಿದೆ ಇದು.
ಗುಜರಾತಿನಲ್ಲಿ ಮೋದಿಯೇ ಮುಖ್ಯಮಂತ್ರಿಯಾಗಿರುವ ಕಾಲದಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ದೌರ್ಜನ್ಯಗಳ ಬಗ್ಗೆ ಅವರು ಏನು ಹೇಳುತ್ತಾರೆ? ಈಗಲೂ ತ್ರಿವಳಿ ತಲಾಖ್ ಮುಸ್ಲಿಂ ಮಹಿಳೆಯ ಕಷ್ಟ ಪರಿಹಾರಕ್ಕಾಗಿ ಅಲ್ಲ. ಬದಲಾಗಿ ತಲಾಖ್ ನೀಡಿದ ಗಂಡಸನ್ನು ಜಾಮೀನಿಗೂ ಅವಕಾಶವಿಲ್ಲದಂತೆ ಜೈಲಿಗೆ ತಳ್ಳುವ ಯೋಜನೆಯಾಗಿದೆ. ಈಗಾಗಲೇ ಚಿಕ್ಕಪುಟ್ಟ ಕೇಸುಗಳಲ್ಲಿ, ಸಂಶಯದ ಮೇಲೆ ಅನೇಕ ಮುಸ್ಲಿಂ ಗಂಡಸರು ಜೈಲಿನಲ್ಲಿದ್ದಾರೆ. ಮುಸ್ಲಿಂ ಆಗಿರುವ ಕಾರಣಕ್ಕೆ ಮತ್ತು ಗೋಮಾಂಸ ಇತರೆ ಚಿಕ್ಕಪುಟ್ಟ ಘಟನೆಗಳಲ್ಲಿ ಅವರನ್ನು ಸಾಯಿಸಲಾಗುತ್ತಿದೆ ಇಲ್ಲವೇ ಜೈಲಿಗೆ ತಳ್ಳಲಾಗುತ್ತಿದೆ. ‘ಮುಸ್ಲಿಂ ಮಹಿಳೆಯ ವಿವಾಹ ಹಕ್ಕು ರಕ್ಷಣೆ ಮಸೂದೆ 2019’ ಸಂವಿಧಾನದ ಉಲ್ಲಂಘನೆಯಾಗಿದೆ. ಇದಕ್ಕೆ 186 ಸಂಸದರು ಬೆಂಬಲಿಸಿದರೆ 74 ಸದಸ್ಯರು ವಿರೋಧಿಸಿದರು. ಬಿಜೆಪಿಗೆ ಮುಸ್ಲಿಂ ಮಹಿಳೆಯರ ಬಗ್ಗೆ ತೋರಿಸುವ ಪ್ರೀತಿ ಶಬರಿಮಲೈನಲ್ಲಿ ಹಿಂದೂ ಮಹಿಳೆಯರ ಮೇಲೆ ಯಾಕೆ ತೋರುತ್ತಿಲ್ಲ? ಕೋರ್ಟಿನ ಒಪ್ಪಿಗೆಯ ಮೇರೆಗೆ ಹೋದರೂ ಯಾಕೆ ತಡೆಯುತ್ತಿದೆ?
ಹಿಂದೂ ಗಂಡಸು ಹೆಂಡತಿಗೆ ನೀಡುವ ವಿಚ್ಛೇದನ ಸಿವಿಲ್ ಕಾಯ್ದೆ ಎಂದಾದರೆ ಅದನ್ನೇ ಮುಸ್ಲಿಂ ಗಂಡಸು ನೀಡಿದರೆ ಅದು ಕ್ರಿಮಿನಲ್ ಪ್ರಕರಣ ಹೇಗಾಗುತ್ತದೆ? ತಲಾಖ್ ನೀಡಿದ ಇತರೆ ಗಂಡಸಿಗೆ ಕೇವಲ ಒಂದು ವರ್ಷ ಶಿಕ್ಷೆಯಾದರೆ, ಮುಸ್ಲಿಂ ಗಂಡಸಿಗೆ ಯಾಕೆ ಮೂರು ವರ್ಷ ಶಿಕ್ಷೆ? ಎಂಬುದು ಪ್ರಶ್ನೆಯಾಗಿದೆ. ಗಂಡ ಜೈಲಿಗೆ ಹೋದ ನಂತರ ಅವಳ ಮತ್ತು ಮಕ್ಕಳ ಜೀವನ ನಿರ್ವಹಣೆ ಹೇಗೆಂಬುದಕ್ಕೆ ಕಾನೂನಿನಲ್ಲಿ ಯಾವ ಪರಿಹಾರವೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಗಂಡನಿಗೆ 3 ವರ್ಷಗಳ ಜೈಲು ಶಿಕ್ಷೆ ಸರಿಯೇ? ಎಂಬುದು ಮಹತ್ವದ ಪ್ರಶ್ನೆ.
ಇಸ್ಲಾಂನಲ್ಲಿ ಒಬ್ಬ ನಿಜವಾದ ಮುಸ್ಲಿಂ ಪುರುಷನಿಗೆ ತಲಾಖ್ ನೀಡಲು ಅನುಮತಿಸುವುದಿಲ್ಲ. ಅದರಲ್ಲೂ ಅವಳಿಗೆ ಘನತೆಯ ಬದುಕು ನೀಡದೇ ಬೀದಿ ಭಿಕ್ಷುಕಿಯಾಗಿ ಮಾಡಲು ಯಾವುದೇ ಅವಕಾಶವಿರುವುದಿಲ್ಲ.
ಡಾ. ಕೆ ಷರೀಫಾ