ಮೊದಲ ಬಾರಿಗೆ ನಾನು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯ ಕಾರ್ಯಗಳನ್ನು ವರದಿ ಮಾಡಿದೆ. ಅವರು ನಿನ್ನೆ ಬೆಳಿಗ್ಗೆ 9 ಗಂಟೆಗೆ ಕೆಲಸ ಶುರು ಮಾಡಿ ರಾತ್ರಿ 11 ಗಂಟೆಗೆ ಮುಗಿಸಿದ್ರು. ನಡುವೆ ಒಂಚೂರೂ ವಿಶ್ರಾಂತಿ ಇಲ್ಲ. ಮತ್ತೆ ಇವತ್ತು ಬೆಳಿಗ್ಗೆ 5 ಗಂಟೆಗೆ ಎದ್ದು ಕಾರು ಹತ್ತಿ ಬಸವಕಲ್ಯಾಣಕ್ಕೆ ಹೋದ್ರು, ಇನ್ನೊಂದು ಗ್ರಾಮವಾಸ್ತವ್ಯಕ್ಕೆ.
ಬೆಳಿಗ್ಗೆ ಪತ್ರಿಕಾಗೋಷ್ಠಿ ಮುಗಿದ ಮೇಲೆ ರಾತ್ರಿ ಹನ್ನೊಂದರ ತನಕ ಅಕ್ಷರಶಃ ಜನರ ನಡುವೇ ಇದ್ದರು. ಜನರು ತಮ್ಮ ಕಷ್ಟ ಕಾರ್ಪಣ್ಯಗಳನ್ನು, ದುಃಖ ದುಮ್ಮಾನವನ್ನು ಮುಖ್ಯಮಂತ್ರಿ ಬಳಿ ಹಂಚಿಕೊಳ್ಳುತ್ತಲೇ ಇದ್ದರು. ಕೆಲವರು ತಮ್ಮ ತಮ್ಮ ಕುಟುಂಬದ ಗೋಳು ತೋಡಿಕೊಳ್ಳುತ್ತಿದ್ದರು. ಕುಮಾರಸ್ವಾಮಿ ಮಾತ್ರ ಬಹಳ ತಾಳ್ಮೆಯಿಂದ ಎಲ್ಲವನ್ನೂ ಕೇಳಿಸಿಕೊಳ್ಳುತ್ತಾ, ಕೆಲವನ್ನು ಸ್ಥಳದಲ್ಲೇ ಪರಿಹರಿಸುತ್ತಾ, ಕೆಲವನ್ನು ಇಂತಿಷ್ಟೇ ಸಮಯದ ಒಳಗೆ ಪರಿಹರಿಸಬೇಕೆಂದು ಅಧಿಕಾರಿಗಳಿಗೆ ಆದೇಶಿಸುತ್ತಾ ಹೋದರು. ಪ್ರಾಯಶಃ, ಜಿಲ್ಲಾಧಿಕಾರಿ ಶರತ್ ಒಳಗೊಂಡಂತೆ ಎಲ್ಲಾ ಅಧಿಕಾರಿಗಳು ಒಂದೇ ದಿನ ಇಷ್ಟು ಕೆಲಸ ಎಂದೂ ಮಾಡಿರಲಿಕ್ಕಿಲ್ಲ.
ನಮಗೆ ಅವರನ್ನು ದಿನವಿಡೀ ಹಿಂಬಾಲಿಸುತ್ತಾ ವರದಿ ಮಾಡಿ ಸುಸ್ತಾಗಿ ಹೋಗಿತ್ತು. ಅಧಿಕಾರಿಗಳೂ ಬಸವಳಿದಂತೆ ಕಾಣುತ್ತಿದ್ದರು. ಅದರೆ ಅ ಮನುಷ್ಯ ಮಾತ್ರ ಸುಸ್ತಾದಂತೆ ಕಂಡರೂ ಉತ್ಸಾಹದಿಂದಲೇ ಜನರ ನೊವುಗಳಿಗೆ ಕಿವಿಯಾದ. ಯರಮರಸ್ ಸರ್ಕಿಟ್ ಹೌಸ್ ನಿಂದ ಹೊರಟ ಅವರ ಬಸ್ಸು ವಾಸ್ತವ್ಯಕ್ಕಾಗಿ ಆಯ್ದುಕೊಂಡ ಕರೆಗುಡ್ಡ ಹಳ್ಳಿಗೆ ಬರಲು ನಾಲ್ಕು ತಾಸು ತೆಗೆದುಕೊಂಡಿತು. ಮೊದಲ15-20 ನಿಮಿಷ ಯರಮರಸ್ ಶಾಖೋತ್ಪನ್ನ ವಿದ್ಯತ್ ಕೇಂದ್ರದ ನೌಕರರ ಪ್ರತಿಭಟನೆಯ ಕಾರಣಕ್ಕೆ ತಡವಾಯಿತು. ಬಸ್ ಏರಿದ ಮುಖ್ಯಮಂತ್ರಿ ದಾರಿಯುದ್ದಕ್ಕೂ ಜನ ಎಲ್ಲೆಲ್ಲಿ ಬಸ್ಸಿಗೆ ಕೈ ತೋರಿದರೋ ಅಲ್ಲೆಲ್ಲೆಲ್ಲಾ ನಿಲ್ಲಿಸುತ್ತಾ, ಕೆಳಗಿಳಿದು ಜನರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸುತ್ತಾ ಹೋದರು.
ಕರೆಗುಡ್ಡಕ್ಕೆ ಬಂದ ಮೇಲೂ ಒಂದು ಪುಟ್ಟ ಸಮಾರಂಭ. ಜನರನ್ನು ಉದ್ದೇಶಿಸಿ ಕುಮಾರಸ್ವಾಮಿ ಮತ್ತು ಇತರರ ಪುಟ್ಟ ಭಾಷಣ. ರಾಯಚೂರು ಜಿಲ್ಲೆಯ ದಶಕಗಳ ಬೇಡಿಕೆಗಳಿಗೆ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರಿಂದ ಸಮಾಧಾನಕರ ಭರವಸೆ.
ಆಮೇಲೆ ಮತ್ತೆ ಜನರ ಸಮಸ್ಯೆಗಳ ಆಲಿಕೆ, ಪರಿಹಾರ. ಸಣ್ಣ ಸಣ್ಣ ಸಮಸ್ಯೆಗಳನ್ನೂ ವಿವರವಾಗಿ ಕೇಳಿತಿಳಿದುಕೊಳ್ಳುತ್ತಿದ್ದ ಅವರ ತಾಳ್ಮೆ ನನಗೆ ಹೆಚ್ಚು ಇಷ್ಟವಾಯಿತು. “ಯಾರೂ ಅವಸರ ಮಾಡಬೇಡಿ. ನಿಮ್ಮೆಲ್ಲರ ಸಮಸ್ಯೆ ಕೇಳುತ್ತೇನೆ. ರಾತ್ರಿ ಹತ್ತು ಗಂಟೆಯಾದರೂ ಪರವಾಗಿಲ್ಲ, ನಿಮ್ಮೆಲ್ಲರ ಸಮಸ್ಯೆ ಕೇಳಿಯೇ ಮಲಗುತ್ತೇನೆ. ಯಾರನ್ನೂ ಭೇಟಿಯಾಗದೇ ಹಿಂದಕ್ಕೆ ಕಳಿಸಿ ನಿರಾಶೆ ಮಾಡುವುದಿಲ್ಲ” ಎಂದು ಅವರು ಮೊದಲೇ ಹೇಳಿ ಜನರ ಭೇಟಿಗೆ ಕುಳಿತರು. ಅವರು ಎಲ್ಲಾ ಜನರನ್ನು ಭೇಟಿಯಾಗಿ ಮೇಲೆದ್ದಾಗ ರಾತ್ರಿ 11 ಗಂಟೆಯಾಗಿತ್ತು.
ಏನೇ ಹೇಳಿ, ಕುಮಾರಸ್ವಾಮಿಯವರ ತಾಳ್ಮೆ ಮೆಚ್ಚತಕ್ಕದ್ದೆ.
Kumara Swamy is honest and hardworking. He’s shown concern for the poor and downtrodden especially for agriculturists. Even his enemies admire his style of functioning.