ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಜಾರ್ಖಂಡ್ ಲಿಂಚಿಂಗ್(ಗುಂಪು ಹಲ್ಲೆ) ಘಟನೆ ಈಗ ಸಂಸತ್ತಿನ ಒಳಹೊರಗೆ ಸದ್ದು ಮಾಡುತ್ತಿದೆ.
ದೇಶಾದ್ಯಂತ ಹೀನಾಯ ಘಟನೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಿಗೇ, ಪ್ರತಿಪಕ್ಷಗಳು, ಸಾಮಾಜಿಕ ಸಂಘಟನೆಗಳು, ದೇಶದ ಮಾನವೀಯತೆಯ ಪರ ದನಿಗಳು ಆತಂಕ ಮತ್ತು ಖಂಡನೆ ವ್ಯಕ್ತಪಡಿಸುತ್ತಿರುವ ಹೊತ್ತಿಗೆ, ದೇಶದ ಅಧಿಕಾರದ ಶಕ್ತಿ ಕೇಂದ್ರದಲ್ಲಿ ಲಿಂಚಿಂಗ್ ಪ್ರಕರಣ ಪ್ರತಿಧ್ವನಿಸಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಈ ದುರಂತದ ಕುರಿತು ‘ಇದೊಂದು ಖಂಡನಾರ್ಹ ಘಟನೆ. ಇದು ಎಲ್ಲರನ್ನು ನೋಯಿಸಿರುವ ದುರಂತ. ಆದರೆ, ಕೆಲವರು ರಾಜ್ಯಸಭೆಯಲ್ಲಿ ಈ ಘಟನೆಯನ್ನೇ ಮುಂದಿಟ್ಟುಕೊಂಡು ಜಾರ್ಖಂಡ್ ರಾಜ್ಯಕ್ಕೇ ಗುಂಪು ಹಲ್ಲೆಯ ಕೇಂದ್ರ ಎನ್ನುವ ಮೂಲಕ ಆ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ. ಒಂದು ಘಟನೆಗಾಗಿ ಒಂದಿಡೀ ರಾಜ್ಯಕ್ಕೇ ಕಳಂಕ ತರುವುದು ಸರಿಯಲ್ಲ’ ಎಂದಿದ್ದಾರೆ.
ಆದರೆ, ಒಬ್ಬ ಮುಸ್ಲಿಂ ಯುವಕನಿಗೆ, ಆತನ ಧರ್ಮದ ಒಂದೇ ಕಾರಣಕ್ಕೆ, ಆತ ಗೋ ಸಾಗಣೆಯನ್ನಾಗಲೀ, ಗೋ ಮಾಂಸ ಸೇವನೆಯನ್ನಾಗಲೀ ಮಾಡುತ್ತಿರಲಿಲ್ಲ ಮತ್ತು ಆತನ ಮೇಲೆ ಗೋ ರಕ್ಷಣೆಗೆ ಸಂಬಂಧಿಸಿದಂತೆ ಈ ದಾಳಿ ನಡೆದಿಲ್ಲ ಎಂಬುದು ಗಮನಾರ್ಹ. ಹಾಗೇ, ಆತ ಒಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಆತನ ಮೇಲೆ ಈ ಭೀಕರ ದಾಳಿ ನಡೆದಿದೆ ಮತ್ತು ಏಕಾಂಗಿಯಾಗಿದ್ದ ಆತನನ್ನು ಸುತ್ತುವರಿದ ಯುವಕರ ತಂಡ ಜೈ ಶ್ರೀರಾಮ್ ಎಂದು ಹೇಳುವಂತೆ ಹೀಗೆ ಬಡಿದು ಸಾಯಿಸಿದ್ದಾರೆ ಎಂಬುದು ಈ ದೇಶ ಎತ್ತ ಸಾಗುತ್ತಿದೆ ಎಂಬ ಆತಂಕಕ್ಕೆ ಕಾರಣವಾಗಿದೆ. ಒಂದು ಧರ್ಮದ ಪ್ರವರ್ತಕರು ಎಂದುಕೊಂಡವರು, ಇತರ ಧರ್ಮ ಮತ್ತು ನಂಬಿಕೆಯ ಜನರ ಮೇಲೆ ಹೀಗೆ, ದಬ್ಬಾಳಿಕೆ ನಡೆಸಿ, ದೇಶದ ಎಲ್ಲರೂ ಒಂದು ಧರ್ಮ, ಒಂದು ಪಕ್ಷ, ಒಂದು ಸಿದ್ಧಾಂತವನ್ನು ಒಪ್ಪಿಕೊಂಡರೆ ಮಾತ್ರ ಅವರಿಗೆ ಇಲ್ಲಿ ಬದುಕಲು ಅವಕಾಶ, ಇಲ್ಲವೆಂದರೆ ಅವರಿಗೆ ಇಲ್ಲಿ ಸಾವೇ ಗತಿ. ತಮ್ಮ ನಂಬಿಕೆ ಮತ್ತು ಸಿದ್ಧಾಂತವನ್ನು ಒಪ್ಪದವರನ್ನು ಹೊಡೆದು ಸಾಯಿಸಲು ಜೈ ಶ್ರೀರಾಮ್ ಎಂಬುದು ಒಂದು ಪರವಾನಗಿ ಎಂಬ ಆಘಾತಕಾರಿ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗುತ್ತಿದೆ ಎಂಬುದಕ್ಕೆ ಈ ಘಟನೆ ನಿದರ್ಶನ.
ಆದರೆ, ಇಂತಹ ಘಟನೆ ಇದೇ ಮೊದಲೇನಲ್ಲ. ಕಳೆದ ನಾಲ್ಕೈದು ವರ್ಷಗಳಲ್ಲಿ ಗೋರಕ್ಷಣೆ, ಧರ್ಮ, ಶ್ರೀ ರಾಮ, ಸುಳ್ಳು ವದಂತಿಗಳು ಮತ್ತಿತರ ಹೆಸರಲ್ಲಿ ದೇಶದ ಮೂಲೆಮೂಲೆಗಳಲ್ಲಿ ಇಂತಹ ಲಿಂಚಿಂಗ್ ಘಟನೆಗಳು ನಡೆದಿವೆ. ದೇಶದ ಉದ್ದಗಲಕ್ಕೆ ಮತ್ತೆ ಮತ್ತೆ ಮರುಕಳಿಸುತ್ತಲೇ ಇರುವ ಇಂತಹ ಘಟನೆಗಳಲ್ಲಿ ಕಾಣವ ಸಮಾನ ಅಂಶವೆಂದರೆ, ಇಂತಹ ದಾಳಿಗಳನ್ನು ನಡೆಸುವವರು ಬಹುತೇಕ ವಿವಿಧ ಹಿಂದುತ್ವವಾದಿ ಸಂಘಟನೆಗಳ ಮಂದಿ, ಇಲ್ಲವೇ ಹಿಂದುತ್ವವಾದದ ಚಿಹ್ನೆಗಳಾದ ಕೇಸರಿ ಶಲ್ಯ, ಹಣೆಯ ಉದ್ದನೆಯ ತಿಲಕ, ತ್ರಿಶೂಲ, ಭಗವಾಧ್ವಜ ಹಿಡಿದವರು ಮತ್ತು ಜೈ ಶ್ರೀ ರಾಮ್ ಘೋಷಣೆಯನ್ನು ಕೂಗುವವರೇ ಆಗಿದ್ದಾರೆ ಮತ್ತು ದಾಳಿಗೊಳಗಾಗುವವರು ಬಹುತೇಕ ಮುಸ್ಲಿಮರು. ಕೆಲವು ಪ್ರಕರಣಗಳಲ್ಲಿ ಕ್ರೈಸ್ತರು ಮತ್ತು ಆದಿವಾಸಿ, ದಲಿತರು ಕೂಡ ಇಂತಹ ಧರ್ಮಾಂಧ ದಾಳಿಗೆ ಜೀವ ಬಿಟ್ಟಿದ್ದಾರೆ.
ಜಾರ್ಖಂಡ್ ರಾಜ್ಯವೊಂದರಲ್ಲೇ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 18 ಲಿಂಚಿಂಗ್ ಪ್ರಕರಣಗಳು ನಡೆದಿದ್ದು, ಹದಿನೆಂಟು ಮಂದಿ ಮುಸ್ಲಿಮರು, ಆದಿವಾಸಿಗಳು ಮತ್ತು ಕೈಸ್ತ ಸಮುದಾಯದವರನ್ನು ಪಶುಪ್ರಾಣಿಗಳಂತೆ ಬಡಿದು ಸಾಯಿಸಲಾಗಿದೆ. ಅಲ್ಲದೆ, ಆ ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕೂಡ ಪ್ರಧಾನಿ ಮೋದಿಯವರ ಬಿಜೆಪಿ ಪಕ್ಷವೇ. ಹಾಗೇ ಬಿಜೆಪಿ ಅಧಿಕಾರದಲ್ಲಿರುವ ಉತ್ತರಪ್ರದೇಶ, ಗುಜರಾತ್ ಮತ್ತು ರಾಜಸ್ತಾನ(ಬಿಜೆಪಿ ಅಧಿಕಾರದಲ್ಲಿದ್ದಾಗ)ಗಳಲ್ಲೇ ಕಳೆದ ನಾಲ್ಕೈದು ವರ್ಷಗಳಲ್ಲಿ ಅತಿ ಹೆಚ್ಚು ಲಿಂಚಿಂಗ್ ಪ್ರಕರಣಗಳು ನಡೆದಿವೆ ಎಂಬುದು ಕೂಡ ಕಣ್ಣೆದುರಿನ ಸತ್ಯ. ಈ ನಡುವೆ, ಪಶ್ಚಿಮಬಂಗಾಳ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತಿತರ ಕಡೆ ಕೂಡ ಇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಇಂತಹ ಬಿಡಿ ಘಟನೆಗಳು ನಡೆದಿವೆ. ಆದರೆ, ಇಂತಹ ಹಲ್ಲೆಗಳನ್ನು ನಡೆಸುತ್ತಿರುವ ಹಿಂದೂ ಸಂಘಟನೆಗಳನ್ನು ಮತ್ತು ದೇಶದ ಕಾನೂನು, ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಬೆಲೆ ನೀಡದ ‘ಅಸಲೀ ದೇಶದ್ರೋಹಿ’ಗಳಿಗೆ ಖಡಕ್ ಎಚ್ಚರಿಕೆ ನೀಡುವಂತಹ, ಮತ್ತು ಶಾಶ್ವತವಾಗಿ ಇಂತಹ ಅನಾಗರಿಕ ವರ್ತನೆಗಳಿಗೆ ಕಡಿವಾಣ ಹಾಕಲು ಸೂಕ್ತ ಬಿಗಿ ಕಾನೂನು ತರುವ ಬಗ್ಗೆ ಮತ್ತು ಅದೇ ಹೊತ್ತಿಗೆ ಇಂತಹ ಘಟನೆಗಳಿಂದ ಭಯಭೀತರಾಗಿರುವ ಅಲ್ಪಸಂಖ್ಯಾತರು, ದಲಿತರು ಮತ್ತಿತರ ದುರ್ಬಲ ಸಮುದಾಯಗಳಿಗೆ ಸಮಾಧಾನ ಹೇಳುವ, ಭರವಸೆ ಮೂಡಿಸುವ ಪ್ರಯತ್ನ ಮಾಡಬೇಕಾದ ಸರ್ಕಾರದ ಮುಖ್ಯಸ್ಥರು, ನೊಂದವರ ಕಣ್ಣೀರು ಒರೆಸುವ ಮಾತನಾಡುವ ಬದಲು, ಅಂತಹ ಘಟನೆಗಳನ್ನು ಖಂಡಿಸುವ ದನಿಗಳನ್ನೇ ಹತ್ತಿಕ್ಕುವ ಮಾತನಾಡಿರುವುದು ದುರಂತ.
ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೇ ಅತಿ ಹೆಚ್ಚು ಲಿಂಚಿಂಗ್ ಘಟನೆಗಳೂ ಸೇರಿದಂತೆ ವಿವಿಧ ಬಗೆಯ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಯ, ಬೆದರಿಕೆಯ ಘಟನೆಗಳು ನಡೆದಿವೆ ಮತ್ತು ಅದರಲ್ಲೂ ಜಾರ್ಖಂಡ್ ನಲ್ಲಿ ಅತಿ ಹೆಚ್ಚು ಮಂದಿ ಲಿಂಚಿಂಗ್ ಘಟನೆಗಳಿಗೆ ಬಲಿಯಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಆ ರಾಜ್ಯದ ಆಡಳಿತದ ಬಗ್ಗೆ ಟೀಕೆ ಮಾಡಿದ್ದನ್ನೇ ಮುಂದಿಟ್ಟುಕೊಂಡು ಮೋದಿಯವರು ಆಡಿರುವ, ರಾಜ್ಯದ ಘನತೆಯ, ಸ್ವಾಭಿಮಾನದ ಪ್ರಶ್ನೆಯ ಮಾತುಗಳು ಅಸಲೀ ವಿಚಾರವನ್ನು ಬೇರೊಂದು ದಿಕ್ಕಿನಲ್ಲಿ ತಿರುಚಿ ಮರೆಮಾಚುವ ಅವರ ಎಂದಿನ ಯತ್ನಕ್ಕೆ ಸಾಕ್ಷಿ. 2002ರ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಕೂಡ, ಮುಖ್ಯಮಂತ್ರಿಯಾಗಿ ತಮ್ಮ ವೈಫಲ್ಯಗಳನ್ನು ಪ್ರಶ್ನಿಸಿದವರಿಗೂ ಇದೇ ರಾಜ್ಯದ ಸ್ವಾಭಿಮಾನ, ಗೌರವದ ಸವಾಲುಗಳನ್ನು ಮುಂದಿಟ್ಟೇ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದರು ಎಂಬುದು ಈಗ ಇತಿಹಾಸ!
ಈಗಲೂ ಅದೇ ವರಸೆಗೆ ಮೋದಿಯವರು ಮೊರೆಹೋಗಿದ್ದು, ಜಾರ್ಖಂಡ್ ನ ಇತ್ತೀಚಿನ ಲಿಂಚಿಂಗ್ ಘಟನೆಗೆ ಬಲಿಯಾಗಿರುವ ಅಲ್ಲಿನ ಸರಾಯ್ ಖಾರ್ಸಾವನ್ ಜಿಲ್ಲೆಯ ತಬ್ರೇಜ್ ಅನ್ಸಾರಿ ಎಂಬ 24 ವರ್ಷದ ಮುಸ್ಲಿಂ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳುವ, ಧೈರ್ಯ ತುಂಬುವ ಒಂದೇ ಒಂದು ಮಾತನಾಡದ ಅವರು, ಆತನ ಸಾವಿಗೆ ಮಿಡಿದವರು ಆ ರಾಜ್ಯದಲ್ಲಿ ನಡೆದಿರುವ ಸರಣಿ ಲಿಂಚಿಂಗ್ ಘಟನೆಗಳನ್ನು ಪ್ರಸ್ತಾಪಿಸಿದ್ದನ್ನೇ ಬಳಸಿ ಘಟನೆಗೆ ರಾಜಕೀಯ ಬಣ್ಣ ಬಳಿಯುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ, ಜೂನ್ 18ರಂದು ಲಿಂಚಿಂಗ್ ಘಟನೆ ನಡೆದು, ಆತನ ಜೂನ್ 22ರಂದು ಪೊಲೀಸರು ವಶದಲ್ಲಿರುವಾಗಲೇ ಸಾವನ್ನಪ್ಪಿದ ಘಟನೆ ನಡೆದಾಗ ಇಡೀ ದೇಶ ಆ ಘಟನೆಗೆ ಆಘಾತ ಮತ್ತು ಆತಂಕದ ಪ್ರತಿಕ್ರಿಯೆ ನೀಡುತ್ತಿರುವಾಗ, ಪ್ರಧಾನಮಂತ್ರಿಗಳು ಕ್ರಿಕೆಟಿಗನೊಬ್ಬನ ಬೆರಳ ಗಾಯದ ಬಗ್ಗೆ ಟ್ವಟಿರ್ ನಲ್ಲಿ ಆತಂಕ ವ್ಯಕ್ತಪಡಿಸಿ, ಆತನಿಗೆ ಸಮಾಧಾನ ಹೇಳುವುದರಲ್ಲಿ ಮಗ್ನರಾಗಿದ್ದರು ಎಂಬುದು ಕೂಡ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಈ ನಡುವೆ, ಜೈ ಶ್ರೀರಾಮ್ ಎಂಬ ಉಗ್ರ ಹಿಂದುತ್ವದ ಬ್ರಾಂಡ್ ಹೇಳಿಕೆ ಇದೀಗ ದೇಶದ ಪ್ರಜಾಪ್ರಭುತ್ವದ ಹೃದಯ ಸಂಸತ್ತಿನ ಒಳಗೂ ಮೊಳಗಿದ್ದು, ಈ ಬಾರಿಯ ಲೋಕಸಭೆಗೆ ಆಯ್ಕೆಯಾಗಿರುವ ಬಿಜೆಪಿಯ ಸಂಸದರು, ಪ್ರಮಾಣ ವಚನ ಸ್ವೀಕಾರದ ಹೊತ್ತಲ್ಲೇ ಮುಸ್ಲಿಂ ಸಮುದಾಯಕ್ಕೆ ಸೇರಿದ ಮತ್ತು ಇತರ ರಾಜಕೀಯ ಪಕ್ಷಗಳ ಕೆಲವು ನಾಯಕರ ಪ್ರಮಾಣವಚನದ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿ ಬಹುಸಂಖ್ಯಾತರ ಧಾರ್ಮಿಕತೆಯನ್ನು ಹೇರುವ ಯತ್ನ ನಡೆದಿದೆ. ಅತ್ತ ದೇಶದ ಕಾನೂನು, ಸುವ್ಯವಸ್ಥೆ ಕಾಯುವ, ಧರ್ಮ, ಜಾತಿ, ನಂಬಿಕೆ, ಸಿದ್ಧಾಂತಗಳನ್ನು ಮೀರಿ ಎಲ್ಲ ಭಾರತೀಯರಿಗೆ ಸುರಕ್ಷಿತ ಬದುಕನ್ನು ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಸಂಸದರೇ ಒಂದು ಪ್ರಬಲ ಬಹುಸಂಖ್ಯಾತ ಧರ್ಮದ ಉಗ್ರ ಪ್ರವರ್ತಕರಂತೆ ಸಂಸತ್ತಿನ ಕಲಾಪದಲ್ಲೇ ನಡೆದುಕೊಂಡಿರುವುದು ಸಹಜವಾಗೆ ದೇಶದ ಉದ್ದಗಲಕ್ಕೆ ಇರುವ ಉಗ್ರ ಹಿಂದುತ್ವವಾಗಿ ಶಕ್ತಿಗಳಿಗೆ ಬಲತುಂಬಿದೆ. ಆ ಹಿನ್ನಲೆಯಲ್ಲಿಯೇ ಇಂತಹ ಘಟನೆಗಳು ಕಳೆದ ಒಂದೆರಡು ವಾರಗಳಲ್ಲಿ ಹೆಚ್ಚಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಅದಕ್ಕೆ ಪೂರಕವೆಂಬಂತೆ, ತಬ್ರೇಜ್ ಅನ್ಸಾರಿ ಅನ್ಸಾರಿಯ ಭೀಕರ ಹತ್ಯೆ ಘಟನೆ ನಡೆದ ಎರಡು ದಿನಗಳಲ್ಲೇ ಕೊಲ್ಕತ್ತಾದಲ್ಲಿ, ಜೈ ಶ್ರೀರಾಮ್ ಎಂದು ಹೇಳಲಿಲ್ಲ ಎಂಬ ಕಾರಣಕ್ಕೆ ಗುಂಪೊಂದು ಚಲಿಸುತ್ತಿರುವ ರೈಲಿನಿಂದ ಮದ್ರಸಾ ಶಿಕ್ಷಕನೊಬ್ಬನ್ನು ತಳ್ಳಿ ಸಾಯಿಸುವ ಪ್ರಯತ್ನ ಮಾಡಿದ ಘಟನೆ ನಡೆದಿದೆ. ಇದೀಗ, ಮಹಾರಾಷ್ಟ್ರದಲ್ಲಿ ಕೂಡ ಅಂತಹದ್ದೇ ಘಟನೆ ವರದಿಯಾಗಿದ್ದು, ಮುಂಬೈನ ಠಾಣೆಯಲ್ಲಿ ಮುಸ್ಲಿಂ ಆಟೋ ಚಾಲಕನೊಬ್ಬನ ಮೇಲೆ ಹಾಡಹಗಲೇ ನಟ್ಟನಡುಬೀದಿಯಲ್ಲಿ ದಾಳಿ ನಡೆಸಿರುವ ಗುಂಪೊಂದು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ ಮಾರಣಾಂತಿಕ ಹಲ್ಲೆ ನಡೆಸಿದೆ. ಸಂಸತ್ತಿನ ಒಳಗಿನಿಂದ ಹೊರಟ ದನಿಗಳಿಗೆ ದೇಶದ ಉದ್ದಗಲಕ್ಕೆ ಬೀದಿ-ಬೀದಿಗಳಲ್ಲೂ ಪ್ರತಿಸ್ಪಂದನೆಯ ವಿಕೃತಿಗಳು ಕಾಣತೊಡಗಿವೆ.
ಈ ನಡುವೆ, ಪ್ರಧಾನಿ ಮೋದಿಯವರು ಸಂತ್ರಸ್ತರ ಪರ ನಿಲ್ಲುವ ಬದಲು, ಅವರ ನೋವಿಗೆ ಮಿಡಿದವರನ್ನೇ ರಾಜ್ಯದ ಸ್ವಾಭಿಮಾನ, ಗೌರವದ ಮಾತನ್ನೆತ್ತಿ ಕಟಕಟೆಗೆ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಒಂದು ಧರ್ಮ, ಒಂದು ದೇಶ, ಒಂದು ಸಿದ್ಧಾಂತ, ಒಂದೇ ಪಕ್ಷ ಎಂಬ ಬಿಜೆಪಿ ಮತ್ತು ಸಂಘಪರಿವಾರದ ಅಸಲೀ ಪ್ರಣಾಳಿಕೆಗಳು ಜಾರಿಯಾಗುತ್ತಿರುವ ಸೂಚನೆಗಳು ಎಲ್ಲೆಡೆ ಕಣ್ಣಿಗೆ ರಾಚತೊಡಗಿವೆ!