ಮೋದಿ ಸರ್ಕಾರದ ನೀತಿಗಳ ಬಗ್ಗೆ ವಿಮರ್ಶೆ ಮಾಡಿದ ಹಾಗೂ ಆಡಳಿತ ಪಕ್ಷದ ನೀತಿಗಳನ್ನು ಟೀಕಿಸಿದ ಕಾರಣಕ್ಕೆ ಟೈಮ್ಸ್ ಆಫ್ ಇಂಡಿಯಾ, ದ ಹಿಂದೂ, ದ ಎಕನಾಮಿಕ್ ಟೈಮ್ಸ್, ಟ ಟೆಲಿಗ್ರಾಫ್, ಆನಂದ ಬಝಾರ್ ಪತ್ರಿಕಾ (ಎಬಿಪಿ) ಸೇರಿದಂತೆ ಹಲವಾರು ದೇಶದ ಪ್ರತಿಷ್ಟಿತ ಪತ್ರಿಕೆಗಳಿಗೆ ಕೇಂದ್ರ ಸರ್ಕಾರ ನೀಡುವ ಜಾಹೀರಾತುಗಳನ್ನು ನಿಲ್ಲಿಸಲಾಗಿದೆ. ನರೇಂದ್ರ ಮೋದಿ ವಿರುದ್ಧ ನಿಲುವು ತಳೆದಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.
ರಾಫೇಲ್ ಅವ್ಯವಹಾರಗಳನ್ನು ದಾಖಲೆ ಸಮೇತ ಬಯಲಿಗೆಳೆದ ದ ಹಿಂದೂ ಪತ್ರಿಕೆಗೆ ಕಳೆದ ಮಾರ್ಚ್ ತಿಂಗಳಿಂದಲೇ ಜಾಹೀರಾತು ನಿಲ್ಲಿಸಲಾಗಿದೆ. ಸಮೀರ್ – ವಿನೀತ್ ಜೈನ್ ಸೋದರರ ಮಾಲೀಕತ್ವದ ಟೈಮ್ಸ್ ಗ್ರೂಪ್ಗೆ ಜೂನ್ ತಿಂಗಳಿನಿಂದ ಜಾಹೀರಾತುಗಳನ್ನು ನಿಲ್ಲಿಸಲಾಗಿದೆ.
ಜೈನ್ ಸೋದರರ ಮಾಲೀಕತ್ವದ ಟೈಮ್ಸ್ ನೌ ಹಾಗೂ ಮಿರರ್ ನೌ ಸುದ್ದಿ ವಾಹಿನಿಗಳಿಗೂ ಈ ಜಾಹೀರಾತು ನಿಷೇಧ ಅನ್ವಯವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಕುರಿತು ಸರಣಿಯಾಗಿ ವರದಿ ಮಾಡಿದ ಟೈಮ್ಸ್ ಗ್ರೂಪ್ ಪತ್ರಿಕೆ ಹಾಗೂ ಸುದ್ದಿ ವಾಹಿನಿಗಳಿಗೆ ಮೋದಿ ಸರ್ಕಾರ ಜಾಹೀರಾತು ನಿಷೇಧಿಸಿದೆ ಎನ್ನಲಾಗಿದೆ. ಟೈಮ್ಸ್ ನೌ ವಾಹಿನಿ ಸಂಪೂಣರ್ಣ ಮೋದಿ ಪರವಾದ ನಿಲುವು ತಳೆದಿತ್ತು, ಆದರೆ ಮಿರರ್ ನೌ ಮೋದಿಯನ್ನು ಟೀಕಿಸುತ್ತಿತ್ತು. ಆದರೆ ಈಗ ವಿಧಿಸಿರುವ ನಿಷೇಧ ಎಲ್ಲವನ್ನೂ ಒಳಗೊಂಡಿದೆ.
ಈ ಜಾಹೀರಾತು ನಿಷೇದದ ಕುರಿತು ಬಾಧಿತ ದೊಡ್ಡ ಸುದ್ದಿ ಸಂಸ್ಥೆಗಳು ಇದುವರೆಗೆ ಎಲ್ಲೂ ದೂರು ನೀಡಿಲ್ಲವಾದರೂ ಬುಧವಾರ ಕಾಂಗ್ರೆಸ್ ಮುಖಂಡ ಅಧಿರ್ ರಂಜನ್ ಚೌಧುರಿ ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಮೋದಿ ಸರ್ಕಾರ ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸಲು ಯತ್ನಿಸುತ್ತಿರುವುದಾಗಿ ಆರೋಪಿಸಿದ್ದರು. ಜಾಹೀರಾತು ಹಾಗೂ ದೃಶ್ಯ ಕೇಂದ್ರ ಸರ್ಕಾರದ ಜಾಹೀರಾತು ಬಿಡುಗಡೆ ಸಂಸ್ಥೆಯಾದ ಪ್ರಸಾರ ಮಾಧ್ಯಮ ನಿರ್ದೇಶನಾಲಯವು (ಡಿಎವಿಪಿ) “ದ ಹಿಂದೂ, ಟೈಮ್ಸ್ ಗ್ರೂಪ್ ಮಾಧ್ಯಮಗಳಲ್ಲಿ ವಿಮರ್ಶಾತ್ಮಕ ವರದಿಗಳು ಪ್ರಕಟವಾದ ಕಾರಣಕ್ಕೆ” ಜಾಹೀರಾತು ನೀಡುವುದನ್ನು ನಿಲ್ಲಿಸಿದೆ. ಇದು “ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಹಾಗೂ ಸರ್ವಾಧಿಕಾರ ಧೋರಣೆಯನ್ನು ಪ್ರದರ್ಶಿಸಿಸುತ್ತಿದೆ, ಮಾಧ್ಯಮಗಳು ತಾನು ಹೇಳಿದಂತೆ ಕೇಳಬೇಕು ಎಂಬ ಸಂದೇಶ ನೀಡಲು ಕೇಂದ್ರ ಸರ್ಕಾರ ಈ ರೀತಿ ಮಾಡಿದೆ” ಎಂದು ಚೌಧುರಿ ವಾಗ್ದಾಳಿ ನಡೆಸಿದ್ದರು.
“ರಾಫೇಲ್ ವ್ಯವಹಾರವು ವಿವಾದಕ್ಕೆ ಒಳಗಾಗಿತ್ತು, ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ಅದರಲ್ಲಿ ಕಂಡುಬಂದಿತ್ತು. ದ ಹಿಂದೂ ದಿನಪತ್ರಿಕೆ ಅದನ್ನು ಬಯಲಿಗೆಳೆಯಿತು. ಪ್ರಧಾನಿ ನರೇಂದ್ರ ಮೋದಿಯವರಿಂದ ಆದ ಚುನಾವಣಾ ನೀತಿ ಸಂಹಿತಿ ಉಲ್ಲಂಘೆನೆಯನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಬಯಲಿಗೆಳೆದಿತ್ತು. ಟೆಲಿಗ್ರಾಫ್ ಹಾಗೂ ಎಬಿಪಿಗಳು ಸಹ ನರೇಂದ್ರ ಮೋದಿಯವರನ್ನು ವಿಮರ್ಶೆಗೊಳಪಡಿಸಿದ್ದವು. ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯಗಳು ಅತ್ಯಂತ ಮುಖ್ಯವಾಗಿದ್ದು ಈ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಪ್ರತಿಯೊಬ್ಬರೂ ಹೋರಾಡಬೇಕಾಗಿದೆ” ಎಂದು ಅವರು ಸರ್ಕಾರದ ನೀತಿಯನ್ನು ಖಂಡಿಸಿದ್ದರು.
ಉದ್ಯಮದ ಅಂಕಿ ಅಂಶಗಳ ಪ್ರಕಾರ ಕೇಂದ್ರ ಸರ್ಕಾರದ ಜಾಹೀರಾತುಗಳಿಂದ ಟೈಮ್ಸ್ ಗ್ರೂಪ್ ತಿಂಗಳಿಗೆ 15 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಆದಾಯವಿದೆ ಹಾಗೆಯೇ ದ ಹಿಂದೂ ಪತ್ರಿಕೆ ತಿಂಗಳಿಗೆ ಸುಮಾರು 4 ಕೋಟಿ ರೂಪಾಯಿಗಳನ್ನು ತಾನು ಪ್ರಕಟಿಸುವ ಕೇಂದ್ರ ಸರ್ಕಾರದ ಜಾಹೀರಾತುಗಳಿಂದ ಪಡೆಯುತ್ತಿತ್ತು ಎನ್ನಲಾಗಿದೆ.
ಟೈಮ್ಸ್ ಗ್ರೂಪ್ ನ ಎಂಡಿ ವಿನೀತ್ ಜೈನ್ ಅವರು ತಮ್ಮ ಸಂಸ್ಥೆಯನ್ನು ಬಾಧಿಸಲಿರುವ ಈ ನಿಷೇಧದ ಕುರಿತು ಮಾತನಾಡಲು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆಗೆ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.