ಎರಡು ವರ್ಷದ ಕೆಳಗೆ ನಕಲಿ ಗೋರಕ್ಷಕರ ಗುಂಪಿನಿಂದ ಸಾಯಹೊಡೆಯಲ್ಪಟ್ಟು ಪ್ರಾಣ ಕಳೆದುಕೊಂಡಿದ್ದ ಪೆಹ್ಲುಖಾನ್ ವಿರುದ್ಧ ರಾಜಾಸ್ತಾನದ ಕಾಂಗ್ರೆಸ್ ಸರ್ಕಾರ ಈಗ ಆರೋಪ ಪಟ್ಟಿ ಸಲ್ಲಿಸಿದೆ.
ಏಪ್ರಿಲ್ 1, 2017ರಂದು ಪೆಹ್ಲೂಖಾನ್ನನ್ನು ಕೊಲ್ಲುವ ಮೊದಲು ಪಶು ಸಂಗೋಪನೆ ನಡೆಸುತ್ತಿದ್ದ ರೈತ ಪೆಹ್ಲುಖಾನ್ ಗೋಸಾಗಾಟ ನಡೆಸುತ್ತಿದ್ದ ಎಂದು ಆರೋಪಪಟ್ಟಿ ಸಲ್ಲಿಸಿರುವ ಪೊಲೀಸರು ನತದೃಷ್ಟ ಪೆಹ್ಲುಖಾನ್ ಮತ್ತು ಆತನ ಇಬ್ಬರು ಮಕ್ಕಳು ಹಾಗೂ ಪಿಕಪ್ ಟ್ರಕ್ ಮಾಲೀಕನ ವಿರುದ್ಧವೂ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ರಾಜಾಸ್ತಾನದ ಪೊಲೀಸರು ಕಳೆದ ಡಿಸೆಂಬರ್ 30ರಂದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲ ದಿನಗಳ ಬಳಿಕ ಹೊಸ ಆರೋಪ ಪಟ್ಟಿ ಸಿದ್ಧಪಡಿಸಿದ್ದರು. ಕಳೆದ ಮೇ 30ರಂದು ಅದನ್ನು ಬೆಹರೋರ್ ಅಡಿಶನಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿರುವುದು ತಿಳಿದು ಬಂದಿದೆ.
ರಾಜಾಸ್ತಾನ್ ಬಿವೈನ್ ಅನಿಮಲ್ (ಪ್ರಾಹಿಬಿಶನ್ ಅಂಡ್ ಸ್ಲಾಟರ್ ಅಂಡ್ ರೆಗ್ಯುಲೇಶನ್ ಆಫ್ ಟೆಂಪರರಿ ಮೈಗ್ರೇಶನ್ ಆರ್ ಎಕ್ಸ್ ಪೋರ್ಟ್ ) ಆಕ್ಟ್, 1995 ಅಂಡ್ ರೂಲ್ಸ್, 1995 ಸೆಕ್ಷನ್ 5,6 ಮತ್ತು 8ರ ಅಡಿಯಲ್ಲಿ ಆರೋಪ ಪಟ್ಟಿ ದಾಖಲಿಸಲಾಗಿದೆ.
“ನಕಲಿ ಗೋರಕ್ಷಕರಿಂದ ನಾವು ನಮ್ಮ ತಂದೆಯನ್ನು ಕಳೆದುಕೊಂಡಿದ್ದೇವೆ. ಆದರೆ ಈಗ ನಮ್ಮನ್ನು ದನಗಳ ಕಳ್ಳ ಸಾಗಾಟ ಮಾಡಿರುವ ಆರೋಪಿಗಳನ್ನಾಗಿ ಆರೋಪ ಪಟ್ಟಿ ಮಾಡಲಾಗಿದೆ. ಹೊಸ ಕಾಂಗ್ರೆಸ್ ಸರ್ಕಾರ ನಮ್ಮ ಮೇಲಿನ ಪ್ರಕರಣವನ್ನು ಹಿಂಪಡೆದು ನಮಗೆ ನ್ಯಾಯ ದೊರಕಿಸಿ ಕೊಡುತ್ತದೆ ಎಂದು ನಿರೀಕ್ಷಿಸಿದ್ದೆವು. ಆದರೆ ಮತ್ತೆ ನಮಗೆ ಅನ್ಯಾಯವೇ ಆಗಿದೆ” ಎಂದು ಆರೋಪ ಪಟ್ಟಿಯಲ್ಲಿ ಹೆಸರು ದಾಖಲಿಸಿದಾದ ಮೃತ ಪೆಹ್ಲೂಖಾನ್ ಆವರ ಹಿರಿಮಗ ಇರ್ಷಾದ್ (25) ಹೇಳುತ್ತಾರೆ. ಪೆಹ್ಲುಖಾನ್ ಕಿರಿಮಗ ಆರೀಫ್ ಹೆಸರನ್ನೂ ಆರೋಪಟ್ಟಿಯಲ್ಲಿ ಸೇರಿಸಲಾಗಿದೆ.
ಕಳೆದ ವರ್ಷ ಬಿಜೆಪಿ ಸರ್ಕಾರವು ಹಲ್ಲೆಕೋರ ನಕಲಿ ಗೋರಕ್ಷಕ ಗುಂಪಿನಿಂದ ಹಲ್ಲೆಗೊಳಗಾಗಿದ್ದ ಪೆಹ್ಲುಖಾನ್ ಸ್ನೇಹಿತರಾದ ಅಜ್ಮತ್, ರಫೀಕ್, ಅರ್ಜುನ್ ಹಾಗೂ ಜಗದೀಶ್ ಎಂಬುವವರ ಮೇಲೆಯೂ ಕೇಸು ದಾಖಲಿಸಿತ್ತು.
ದೇಶದೆಲ್ಲೆಡೆ ಇಂತಹ ಹಲವು ಘಟನೆಗಳ ಹಿನ್ನೆಲೆಯಲ್ಲಿ ಗೋರಕ್ಷಣೆ ಹೆಸರಿನಲ್ಲಿ ವ್ಯಕ್ತಿಗಳನ್ನು ಸಾಯಹೊಡೆಯುವ ಉಗ್ರ ಮತಾಂಧ ಗುಂಪುಗಳನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟು ರಾಜಾಸ್ತಾನ, ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರಗಳಿಗೆ 2017ರಲ್ಲೇ ನೋಟೀಸ್ ನೀಡಿದೆ.