ಕಳೆದ ಒಂದು ದಶಕದಲ್ಲಿ ದೇಶದಲ್ಲಿ ದಲಿತರ ಮೇಲೆ ನಡೆದಿರುವ ಜಾತಿ ದೌರ್ಜನ್ಯಗಳು, ದಲಿತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಗಳು, ದಲಿತ ನಾಯಕರ ರಾಜೀಕಬೂಲಿಗಳು, ಎಚ್ಚೆತ್ತ ದಲಿತ ಯುವಜನರ ನಿರ್ಭೀತ ಸಂಘರ್ಷಮಯ ದಾರಿ, ಜಾತಿಗ್ರಸ್ತ ವ್ಯವಸ್ತೆಯೊಳಗಿನ ಸಿಕ್ಕುಗಳು, ಇವೆಲ್ಲವನ್ನೂ ಒಂದು ಕಥೆಯಾಗಿ ಹೆಣೆದು ಇಡೀ ಭಾರತದ ಆತ್ಮವನ್ನು ಸಿನಿಮಾ ಎಂಬ ಮೀಡಿಯಂ ಮೂಲಕ ನಿಮ್ಮ ಎದುರಿಗೆ ಹಿಡಿದರೆ ಹೇಗಿರಬಹುದು?
ಈ ಪ್ರಶ್ನೆಗೆ ಉತ್ತರವಾಗಿ ಬಂದಿದೆ ನೆನ್ನೆ ಬಿಡುಗಡೆಯಾದ ಬಾಲುವುಡ್ ಸಿನಿಮಾ ಆರ್ಟಿಕಲ್ 15.
ಈ ಹಿಂದೆ ಮುಲ್ಕ್ ಸಿನಿಮಾದ ಮೂಲಕ ದೇಶದ ಸಂವೇದನಾಶೀಲರ ಗಮನ ಸೆಳೆದಿರುವ ಸೂಕ್ಷ್ಮ ಮನಸಿನ ನಿರ್ದೇಶಕ ಅನುಭವ್ ಸಿನ್ಹಾ ನಿರ್ದೇಶನದ ಆರ್ಟಿಕಲ್ 15 ಸಿನಿಮಾ ಈ ಕಾಲದ ದಲಿತ ಭಾರತದ ಸಂಕಟ, ಸಂಘರ್ಷಗಳಿಗೆ ಕನ್ನಡಿ ಹಿಡಿದಿರುವ ಸಿನಿಮಾ.
ಭಾರತದ ಸಂವಿಧಾನದ ಆರ್ಟಿಕಲ್ 15 – ಸಾಮಾಜಿಕ ತಾರತಮ್ಯದ ವಿರುದ್ಧವಾದ ವಿಧಿಯಾಗಿದೆ. ಧರ್ಮ, ಜನಾಂಗ, ಜಾತಿ, ಲಿಂಗ ಹಾಗೂ ಜನ್ಮ ಸ್ಥಳದ ಆಧಾರದಲ್ಲಿ ತಾರತಮ್ಯ ಎಸಗುವುದನ್ನು ಸಂವಿಧಾನದ 15ನೇ ವಿಧಿ ನಿಷೇಧಿಸುತ್ತದೆ. ಆದರೆ ಐಪಿಎಸ್ ಅಧಿಕಾರಿಯಾಗಿ ಆಯ್ಕೆ ಆದ ತಕ್ಷಣದಲ್ಲಿ ಉತ್ತರ ಪ್ರದೇಶದ ಲಾಲ್ ಗಾಂವ್ ಎಂಬ ಊರಿಗೆ ಪ್ರವೇಶಿಸುವ ಅಧಿಕಾರಿ ಅಯಾನ್ ರಂಜನ್ಗೆ (ವಿಕ್ಕಿ ಡೋನರ್ ಖ್ಯಾತಿಯ ಆಯುಷ್ಮಾನ್ ಖುರಾನಾ) ಬರಬರುತ್ತಲೇ ಆಘಾತದ ಮೇಲೆ ಆಘಾತಗಳಾಗುತ್ತವೆ. ಯೂರೋಪಿನಲ್ಲಿ ಉನ್ನತ ಶಿಕ್ಷಣ ಮಾಡಿಕೊಂಡು ತನ್ನ ಕೌಟುಂಬಿಕ ಹಾಗೂ ಜಾತಿ ಹಿನ್ನೆಲೆ ಕಾರಣದಿಂದ ಸುಲಭವಾಗಿ ಉನ್ನತ ಪೊಲೀಸ್ ಅಧಿಕಾರಿಯಾಗಿರುವ ಅಯಾನ್ ತಲೆಯಲ್ಲಿ ಪುಸ್ತಕದಲ್ಲಿ ಓದಿದ ಆದರ್ಶಗಳನ್ನು ಬಿಟ್ಟರೆ ಭಾರತದ ಯಾವ ವಾಸ್ತವಗಳ ಅರಿವೂ ಇಲ್ಲದಿರುವ ವ್ಯಕ್ತಿ. ರಸ್ತೆ ಬದಿ ದಲಿತ ಕೇರಿಯೊಂದರ ಬಳಿ ಜೀಪು ನಿಲ್ಲಿಸಿ ಕುಡಿಯಲು ನೀರು ಕೊಳ್ಳಲು ತನ್ನ ಸಿಬ್ಬಂದಿಗೆ ಹೇಳಿದರೆ, “ಇದು ಪಾಸಿಗಳ (ದಲಿತರ) ಕೇರಿ, ಇಲ್ಲಿ ನೀರು ಕೊಳ್ಳುವುದಿರಲಿ ಅವರ ನೆರಳೂ ಮೈಮೇಲೆ ಬೀಳಬಾರದು ಎಂಬ ರಿವಾಜು ಇಲ್ಲಿದೆ” ಎಂಬ ಮಾತು ಕೇಳಿದ ಅಯಾನ್ ಮೊದಲ ಸಲ ಆಘಾತಕ್ಕೆ ಒಳಗಾಗುತ್ತಾನೆ.
ಇಬ್ಬರು ದಲಿತ ಬಾಲಕಿಯರ ಶವಗಳು ಮರಕ್ಕೆ ನೇತು ಹಾಕಲಾದ ಸ್ಥಿತಿಯಲ್ಲಿ ದೊರೆಯುತ್ತವೆ, ಅವರೊಂದಿಗಿದ್ದ ಒಬ್ಬ ಬಾಲಕಿ ನಾಪತ್ತೆಯಾಗಿರುತ್ತಾಳೆ. ಯಥಾ ಪ್ರಕಾರ ಈ ಪ್ರಕರಣ “ಮರ್ಯಾದಾ ಹತ್ಯೆ” ಎಂದು ಪೊಲೀಸ್ ಸರ್ಕಲ್ ಬ್ರಹ್ಮದತ್ತ ಆಫೀಸರ್ ಫತ್ವಾ ಹೊಡೆಸಿ ಕೇಸ್ ಫೈಲ್ ಕ್ಲೋಸ್ ಮಾಡಲು ಆತುರನಾಗಿರುತ್ತಾನೆ. ಅದರಂತೆ ಹುಡುಗಿಯರ ಅಪ್ಪಂದಿರನ್ನು ಬಂಧಿಸಿ, ತಪ್ಪೊಪ್ಪಿಗೆ ಹೇಳಿಸಿ ಜೈಲಿಗೆ ತಳ್ಳುವ ತಯಾರಿ ನಡೆಯುತ್ತಿರುತ್ತದೆ. ಆದರೆ ಆಯಾನ್ಗೆ ಮಹಿಳಾ ಹೋರಾಟಗಾರ್ತಿಯಾದ ಆತನ ಗೆಳತಿಯೊಂದಿಗಿನ ಮೊಬೈಲ್ ಚಾಟಿಂಗ್ ಇಡೀ ಪ್ರಕರಣವನ್ನು ಬೇರೊಂದು ರೀತಿಯಿಂದ ನೋಡುವಂತೆ ಪ್ರೇರಣೆ ನೋಡುತ್ತದೆ. ಸಿನಿಮೀಯ ರೀತಿಯಲ್ಲಿ ಇದನ್ನು ಬಗೆಹರಿಸಿಬಿಡಬಹುದು ಎಂದುಕೊಳ್ಳುವ ಆಯಾನ್ ಗೆ ಪ್ರಕರಣದ ಆಳಕ್ಕೆ ಇಳಿಯುವಂತೆ ಗೆಳತಿ ಅದಿತಿ ಹೇಳುತ್ತಾಳೆ. ಈ ಪ್ರಕರಣವನ್ನು “ನನ್ನ ಕೈಲಾದಷ್ಟು ಪ್ರಾಮಾಣಿಕವಾಗಿ ತನಿಖೆ ನಡೆಸುತ್ತೇನೆ” ಎಂದು ಆಯಾನ್ ನಿರ್ಧರಿಸುವಲ್ಲಿಗೆ ಸಿನಿಮಾದ ನಿಜವಾದ ಕತೆ ಹಾಗೂ ಭಾರತದ ಅದರಲ್ಲೂ ಉತ್ತರ ಪ್ರದೇಶದಂತಹ ರಾಜ್ಯದ ಜಾತಿವಾಸ್ತವಗಳು ಸಿನಿಮಾದುದ್ದಕ್ಕೂ ತೆರೆದುಕೊಳ್ಳುತ್ತಾ ಹೋಗುತ್ತವೆ. ತನ್ನ ಪ್ರಯತ್ನದಲ್ಲಿ ಆಯಾನ್ ಯಶಸ್ವಿಗೊಳ್ಳುತ್ತಾನಾ? ಭಾರತದಲ್ಲಿರುವ ಜಾತಿ ಪೂರ್ವಾಗ್ರಹ ಪೀಡಿತ ವ್ಯವಸ್ಥೆ ಆತನಿಗೆ ತನ್ನ ಸಂವಿಧಾನ ಬದ್ಧ ಕಾರ್ಯವನ್ನು ಸುಗಮವಾಗಿ ನೆರವೇರಿಸಲು ಅವಕಾಶ ನೀಡುತ್ತದೆಯಾ? ಸಮಾಜದ ಅತ್ಯಂತ ತಳಸ್ತರದ ದಲಿತರಿಗೆ ನ್ಯಾಯ ಸಲ್ಲಿಸಲು ಪೊಲೀಸ್ ಯಂತ್ರಾಂಗದಲ್ಲಿರುವ ಮೇಲ್ಜಾತಿ ಮನಸುಗಳು ಒಪ್ಪಿಗೆ ಕೊಡುತ್ತವೆಯೇ? ಇವೆಲ್ಲಾ ಅಂಶಗಳು ಸಿನಿಮಾದಲ್ಲಿ ಭಿತ್ತರಗೊಳ್ಳುತ್ತವೆ.
ಸಧ್ಯ ಭಾರತೀಯ ಸಮಾಜದಲ್ಲಿ ಸಂಭವಿಸಿರುವ ಹತ್ತು ಹಲವು ನಿಜಸಂಗತಿಗಳನ್ನು ಅನುಭವ್ ಸಿನ್ಹಾ ಆರ್ಟಿಕಲ್ 15 ಸಿನಿಮಾದಲ್ಲಿ ಮರುಸೃಷ್ಟಿಸಿದ್ದಾರೆ. ಉದಾಹರಣೆಗೆ 2014ರಲ್ಲಿ ಉತ್ತರ ಪ್ರದೇಶದ ಬಡಾಂವ್ ನಲ್ಲಿ ನಡೆದ ದಲಿತ ಬಾಲಕಿಯರ ಗ್ಯಾಂಗ್ ರೇಪ್ ಘಟನೆ, 2016ರಲ್ಲಿ ಭಾರತವನ್ನೇ ತಲ್ಲಣಗೊಳಿಸಿದ ಊನಾ ಘಟನೆಯಲ್ಲಿ ದಲಿತ ಯುವಕರನ್ನು ವಾಹನವೊಂದಕ್ಕೆ ಕಟ್ಟಿ ಹೀನಾಮಾನವಾಗಿ ಹಲ್ಲೆ ನಡೆಸಿದ ಮೇಲ್ಜಾತಿ ಜನ ನಡೆಸಿದ ದಲಿತ ದೌರ್ಜನ್ಯ, ಅದಕ್ಕೆ ಪ್ರತಿಯಾಗಿ ಗುಜರಾತಿನ ಚಮಾರ್ ದಲಿತರು, ಪೌರ ಕಾರ್ಮಿಕರು ನಡೆಸಿದ ಮಿಂಚಿನ ಅಸಹಕಾರ ಚಳವಳಿ, ಸರ್ಕಾರಿ ಕಚೇರಿಗಳ ಎದುರು ಸತ್ತ ದನಗಳ ಕಳೇಬರಗಳನ್ನು, ರಾಶಿ ಕಸವನ್ನು ತಂದು ಹಾಕಿ ತೋರಿದ ಪ್ರತಿರೋಧ, ವೈದಿಕ ಧರ್ಮದ ಹರಿಕಾರರು ದಲಿತ ನಾಯಕರನ್ನು ಆಪೋಶನ ತೆಗೆದುಕೊಳ್ಳುವ ವಿದ್ಯಮಾನಗಳು, ದಲಿತರ ಜ್ವಲಂತ ಸಮಸ್ಯೆಗಳಿಗೆ ಯಾವ ರೀತಿಯೂ ಸಂಬಂಧವಿಲ್ಲದಂತೆ, ಭ್ರಾಮಕ ಪರಿಹಾರದತ್ತ ಸೆಳೆಯುವ ದಲಿತರೊಂದಿಗೆ ಪಂಕ್ತಿ ಭೋಜನ ನಡೆಸುವ ನಾಟಕಗಳು, ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಚಂದ್ರಶೇಖರ್ ಆಜಾದ್ ನೇತೃತ್ವದ ಭೀಮ್ ಆರ್ಮಿ ಚಳವಳಿ, ಕಟ್ಟಿಕೊಂಡ ಮ್ಯಾನ್ ಹೋಲ್ ಒಳಗೆ ಮುಳುಗಿ ಏಳುವ ದಲಿತ ಪೌರ ಕಾರ್ಮಿಕರ ದಿನನಿತ್ಯದ ಭೀಕರವಾದ ಬದುಕು, ಇವೆಲ್ಲವುಗಳ ನಡುವೆ ಪಟ್ಟಭದ್ರರಿಗೆ ಹಿಂಸಾತ್ಮಕವಾಗಿ, ದೇಶದ್ರೋಹಿ ಘೋಷಣೆಯಾಗಿ ಕೇಳಿಸುತ್ತಿರುವ “ಜೈ ಭೀಮ್ ಘೋಷಣೆ” ಇವೆಲ್ಲವನ್ನೂ ನಿರ್ದೇಶಕ ಹಾಗೂ ಚಿತ್ರ ಕತೆ ಬರೆದ ಗೌರವ ಸೋಲಂಕಿ ಬಹಳ ಅಚ್ಚುಕಟ್ಟಾಗಿ ಮತ್ತು ಪರಿಣಾಮಕಾರಿಯಾಗಿ ಜೋಡಿಸಿದ್ದಾರೆ. ಇವಾನ್ ಮುಲ್ಲಿಗನ್ ಅವರ ಸಿನೆಮಾಟೊಗ್ರಫಿಯ ದೃಶ್ಯ ಸಂಯೋಜನೆಯಂತೂ ಅದ್ಭುತವಾಗಿದೆ. ನಾವೇ ಆ ಹಳ್ಳಿಗಳ ಭೌಗೋಳಿಕ ಹಾಗೂ ಸಾಮಾಜಿಕ ಪರಿಸರದಲ್ಲಿ ಹೊಕ್ಕು ಬಂದ ಅನುಭವವನ್ನು ಸಿನೆಮಾ ನೀಡುತ್ತದೆ.
ಇದು ಆನಂದ್ ಪಟವರ್ಧನ್ ಅವರ ಅದ್ಭುತವಾದ ‘ಜೈ ಭೀಮ್ ಕಾಮ್ರೇಡ್’ ನಂತಹ ಮತ್ತೊಂದು ಸಾಕ್ಷ್ಯಚಿತ್ರವೇ ಆಗಿಬಿಡಬಹುದಾಗಿದ್ದ ಸಾಧ್ಯತೆಯನ್ನು ನಿರ್ದೇಶಕ ಅನುಭವ್ ಸಿನ್ಹಾ ಹುಷಾರಾಗಿ ತಪ್ಪಿಸಿದ್ದಾರೆ. ಸಿನಿಮಾದ ಕಥೆ ಒಂದು ಕ್ರೈಂ ಥ್ರಿಲ್ಲರ್ ನಂತೆ ಕೊನೆಯವರೆಗೂ ಕುತೂಹಲ ಉಳಿಸಿಕೊಳ್ಳುವಂತೆ ಹೆಣೆದು ಇದನ್ನೊಂದು ಫೀಚರ್ ಸಿನಿಮಾ ಆಗಿಸುವಲ್ಲಿ ನಿರ್ದೇಶಕ ಅನುಭವ್ ಸಿನ್ಹಾ ಜಾಣ್ಮೆ ತೋರಿದ್ದಾರೆ. ಈ ಕಾರಣದಿಂದಾಗಿಯೇ ಅದು ಮೊದಲ ದಿನ ಬಾಕ್ಸ್ ಆಫೀಸಿನಲ್ಲಿ 4 ಕೋಟಿ ಗಳಿಸಲು ಸಾಧ್ಯವಾಗಿದೆ.

ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆದಾಗಲೆಲ್ಲಾ ಕೆಲ ಮೇಲ್ಜಾತಿ ಹಿನ್ನೆಲೆಯೆ ಗೆಳೆಯ/ಗೆಳತಿಯರು (ಅದರಲ್ಲಿ ಸ್ತ್ರೀವಾದಿಗಳೂ- ಮಹಿಳಾ ಪರ ಸೂಕ್ಷ್ಮವಾಗಿ ಆಲೋಚಿಸುವವರೂ ಸೇರಿದಂತೆ) ಕೇಳುವ ಒಂದು ಪ್ರಶ್ನೆ “ಅರೆ, ರೇಪ್ ಅಂದ್ರೆ ರೇಪ್ ಅಷ್ಟೆ. ಅದರಲ್ಲಿ ದಲಿತರ ಮೇಲಿನ ರೇಪ್ ಇತರರ ಮೇಲಿನ ರೇಪ್ ಎಂದು ಬೇರೆ ಬೇರೆಯಾಗಿ ಯಾಕೆ ನೋಡಬೇಕು? ಅತ್ಯಾಚಾರಕ್ಕೆ ಒಳಗಾದ ಮಹಿಳೆ ಯಾರೇ ಇರಲಿ ಅವರ ನೋವು ಒಂದೇ ಅಲ್ಲವೇ?” ಎಂದು ಪ್ರಶ್ನಿಸಿ ಸಂವಿಧಾನದ ಆರ್ಟಿಕಲ್ 15ರ “ಸಮಾನತೆ”ಯ ಪ್ರಶ್ನೆಯನ್ನು ತಮ್ಮ ಮೇಲ್ಜಾತಿ ಸಹಜ ಮುಗ್ದತೆಯೊಂದಿಗೆ ಕೇಳುತ್ತಿರುತ್ತಾರೆ. ಎರಡು ವರ್ಷದ ಹಿಂದೆ ಬಿಜಾಪುರದಲ್ಲಿ ನಡೆದ ದಲಿತ ಬಾಲಕಿಗೆ ನ್ಯಾಯ ಕೇಳುವ ಸಂದರ್ಭದಲ್ಲಿ ಹೀಗೇ ಆಯಿತು. ಇಂತಹ ಮೇಲ್ನೋಟಕ್ಕೆ ಮುಗ್ಧ ಎಂದು ತೋರುವ ಆದರೆ ಆಳದಲ್ಲಿ ಜಾತಿ ಪೂರ್ವಗ್ರಹಗಳಿಂದಾಗಿಯೇ ಬರುವ ಇಂತಹ ಪ್ರಶ್ನೆ ರೂಪದ ಅಭಿಪ್ರಾಯಗಳಿಗೆ “ಆರ್ಟಿಕಲ್ 15” ಸಿನಿಮಾ ಒಂದು ಸಮರ್ಥ ಉತ್ತರವಾಗಿ ಬಂದಿದೆ. ಜಾತಿಯಲ್ಲಿ ತಳಸ್ತರದ, ದಲಿತ, ಆದಿವಾಸಿಗಳ ಮೇಲೆ ಅತ್ಯಾಚಾರ ದೌರ್ಜನ್ಯಗಳು ಈ ದೇಶದಲ್ಲಿ ಯಾಕಾಗಿ ಆಗುತ್ತವೆ? (ಈ ಸಿನಿಮಾದಲ್ಲಿ 3 ರೂಪಾಯಿ ಸಂಬಳ ಜಾಸ್ತಿ ಕೇಳಿದ ತಪ್ಪಿಗೆ ಆಗುತ್ತದೆ), ಅತ್ಯಾಚಾರ ಆದ ನಂತರ ಅದರಲ್ಲಿ ಶಾಮೀಲಾದ ಮೇಲ್ಜಾತಿ ಅಧಿಕಾರಿಗಳು ಹೇಗೆ ವರ್ತಿಸುತ್ತಾರೆ, ಮೇಲ್ಜಾತಿ ಸಿದ್ಧಾಂತವನ್ನೇ ತನ್ನ ಮಾರ್ಗದರ್ಶಿಯಾಗಿ ಬರುವ ಸಿಬಿಐ ಏನು ಮಾಡುತ್ತದೆ, ಅತ್ಯಾಚಾರ ಸಂತ್ರಸ್ತರ ಪರ ನಿಲುವು ತಳೆಯುವ ಅಧಿಕಾರಿ ಅಯಾನ್ ಸಹ ಸಹೋದ್ಯೋಗಿಗಳ ಬಳಿ ಜಾತಿ ಕುರಿತು ಕೇಳಿದ್ದಕ್ಕೆ “ದಲಿತರ ಮೇಲೆ ಪೂರ್ವಾಗ್ರಹ” ಹೊಂದಿದ ಆರೋಪಕ್ಕೆ ಒಳಗಾಗುವುದು, ಸಮಾಜದಲ್ಲಿ ಪರಂಪರಾಗತ ಸಮತೋಲನವನ್ನು (ಸಂತುಲಿತ) ಹಾಳು ಮಾಡಲು ಬಂದವನಂತೆಯೂ ಆಗಿ ತೋರುವುದು ಎಲ್ಲವೂ ಮಾರ್ಮಿಕವಾಗಿವಾಗಿವೆ.
ಸಿನಿಮಾದ ಮತ್ತೊಂದು ವಿಶೇಷವೆಂದರೆ, ಸಿನಿಮಾದಲ್ಲಿ ನಾಯಕ ಪಾತ್ರದಲ್ಲಿ ಅಯಾನ್ ಎಷ್ಟು ಮುಖ್ಯವೋ ಅಷ್ಟೇ ಪ್ರಮುಖ ಪಾತ್ರ ವಹಿಸುವುದು ಭೀಮ್ ಆರ್ಮಿಯಯನ್ನು ಸಂಕೇತಿಸುವ ಆರ್ ಬಿ ಎಸ್ ಸಂಘಟನೆಯ ನಾಯಕ ನಿಷಾದ್ ( ಪಾತ್ರ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ನಿಜವಾದ ಸಾಮಾಜಿಕ ಬದಲಾವಣೆ ಬಯಸುವ ಭಿನ್ನ ಸಮುದಾಯದ ಯುವಕರಿಬ್ಬರು ತುಳಿಯುವ ಭಿನ್ನ ಹಾದಿಗಳು ಹಾಗೂ ಆ ಹಾದಿಗಳು ಯಶಸ್ವಿಗೊಳ್ಳಲು ಇರುವ ಅಡೆತಡೆ, ಸಾಧ್ಯತೆಗಳಗಳ ಕುರಿತು ಆರ್ಟಿಕಲ್ 15 ಚಿಂತಿಸುವಂತೆ ಮಾಡುತ್ತದೆ. ಇಬ್ಬರಿಗೂ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುವ ಗೆಳತಿಯರ ಸಖ್ಯ ವಹಿಸುವ ಪಾತ್ರ ವಿಶೇಷವಾಗಿ ಗಮನ ಸೆಳೆಯುತ್ತದೆ. ನಿಷಾದ್ನ ಗೆಳತಿ ಗೌರಾ (ಸಯಾನಿ ಗುಪ್ತ), ಆಯಾನ್ ಗೆಳತಿ ಅದಿತಿ (ಇಶಾ ತಲ್ವಾರ್) ಇಬ್ಬರಲ್ಲಿ ಗೌರಾ ಸ್ವಯಂ ನೋವುಂಡವಳು, ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಅಕ್ಕ. ಆದರೆ ಸಮುದಾಯಕ್ಕಾಗಿ ಜೀವದ ಹಂಗು ತೊರೆದು ಭೂಗತನಾಗಿರುವ ನಿಷಾದ್ ಹೆಸರು ಕೇಳಿದೊಡನೆ ಆಕೆಯ ಕಣ್ಣುಗಳಲ್ಲಿ ಹೊಳಪು ಮೂಡುವುದನ್ನು ಆಯಾನ್ ಗುರುತಿಸುತ್ತಾನೆ. ನಿಷಾದ್ ಗೆ ತನ್ನ ಹೋರಾಟದ ಬದುಕು ಐದು ನಿಮಿಷ ಆಗಸದ ಚಂದ್ರನನ್ನೂ ಮೈಮರೆತು ನೋಡದಂತಹ ಸ್ಥಿತಿ ನಿರ್ಮಿಸಿದೆ. ಗೆಳತಿ ಗೌರಾಳನ್ನು ಮಗುವಿನಂತೆ ತಬ್ಬಿಕೊಂಡು ಅಳುವ ನಿಷಾದ್ ಗೆ ಈಗಲೋ ಆಗಲೋ ತನ್ನ ಬದುಕು ಕೊನೆಗೊಳ್ಳುವುದೆಂದು ತಿಳಿದಿದ್ದರೂ “ಈ ದಾರಿಯಲ್ಲಿ ಹೋಗುತ್ತಿರುವ ನಾನು ಕೊನೆಯವನೇನಲ್ಲ” ಎಂಬ ದಾಷ್ಟ್ಯದಂತಹ ಆತ್ಮವಿಶ್ವಾಸ. ದಲಿತರ ಏಳಿಗೆಗಾಗಿ ತನ್ನ ನಂತರವೂ ತನ್ನನ್ನು ಅನುಸರಿಸುವ ಯುವಕರು ಇದ್ದಾರೆ ಎಂಬ ನಂಬಿಕೆ ಅವನದು. ಹಾಗಾಗಿ ಯಾವ ಸಂದರ್ಭದಲ್ಲಿಯೂ ಅವನ ಕಣ್ಣುಗಳಲ್ಲಿ ವಿಚಲತೆ ಕಂಡು ಬರುವುದಿಲ್ಲ. ದಲಿತ ಬಾಲಕಿಯರ ಅತ್ಯಾಚಾರ ಪ್ರಕರಣದ ತನಿಖೆಗೆ ನಿಷಾದ್ ಸಂಘಟನೆ ಘೋಷಿಸಿರುವ ಮುಷ್ಕರ ಅಡ್ಡಿಯಾದಾಗ ಅಯಾನ್ ತಾನೇ ಖುದ್ದಾಗಿ ಭೂಗತ ನಿಷಾದ್ ನನ್ನು ಭೇಟಿ ಮಾಡಿ ಮಾತುಕತೆ ನಡೆಸುವ ದೃಶ್ಯ ಇತ್ತೀಚೆಗೆ ಅಕಾಲಿಕ ಮರಣಕ್ಕೀಡಾದ ಕರ್ನಾಟಕದ ದಕ್ಷ ಅಧಿಕಾರಿ ಮಧುಕರ ಶೆಟ್ಟಿಯನ್ನು ನೆನಪಿಗೆ ತರುತ್ತದೆ. ಅಲ್ಲಿ ನಿಷಾದ್ ಮತ್ತು ಅಯಾನ್ ನಡುವಿನ ಮಾರುಕತೆ ಮಾರ್ಮಿಕವಾಗಿದೆ. “ಕೆಲವರಿಗೆ ಬದುಕೇ ಒಂದು ಶಾಪ. ಆದ್ರೆ ನಂಗೆ, ನನ್ನ ಹುಟ್ಟೇ ಮಾರಾಣಾಂತಿಕ ಅಪಘಾತವಾಗ್ಬಿಟ್ಟಿತ್ತು” ಎಂಬ ರೋಹಿತ್ ವೇಮುಲಾ ಡೆತ್ ನೋಟಿನ ಪ್ರಸಿದ್ಧ ಸಾಲುಗಳನ್ನೂ ಹಿನ್ನೆಲೆ ಸಂಗೀತದೊಂದಿಗೆ ಹೇಳಿಸುವ ನಿರ್ದೇಶಕ ಈ ಕಾಲದ ಯುವ ದಲಿತ ಮನಸ್ಸುಗಳ ತುಡಿತವನ್ನು ಸಿನಿಮಾ ಮೂಲಕ ಅಭಿವ್ಯಕ್ತಪಡಿಸಿದ್ದಾರೆ.

ಅಯಾನ್ ಗೆಳತಿ ಅದಿತಿ ಯಾವ ನೋವನ್ನೂ ಸ್ವತಃ ಅನುಭವಿಸದ ಕೌಟುಂಬಿಕ ಹಿನ್ನೆಲೆಯಿದ್ದರೂ ತನ್ನ ಸಾಮಾಜಿಕ ತಿಳುವಳಿಕೆಯಿಂದಲೇ ಪರಿಸ್ಥಿತಿಯನ್ನು ಗ್ರಹಿಸಿ ಅಧಿಕಾರಿ ಅಯಾನ್ಗೆ ಮಾರ್ಗದರ್ಶನವನ್ನೂ, ಧೈರ್ಯವನ್ನೂ ನೀಡಬಲ್ಲಳು. ಅಯಾನ್ ಗೆ ತನ್ನ ಸಾಮೀಪ್ಯ ಅಗತ್ಯ ಎನಿಸಿದಾಗ ರಾಜಧಾನಿಯಂದ ಸೀದಾ ಲಾಲ್ ಗಾಂವ್ ಗೇ ಬಂದುಬಿಡುವಂತಹ ಸೂಕ್ಷ್ಮತೆ ಉಳ್ಳವಳು.
ಇಷ್ಟೆಲ್ಲಾ ಆಗಿಯೂ ಬಹಳ ಸಲ ಕೇಳಲ್ಪಟ್ಟಿರುವ ಒಂದು ಪ್ರಶ್ನೆ ಹಾಗೇ ಉಳಿಯುತ್ತದೆ. ದಲಿತರಿಗೆ ನ್ಯಾಯ ಸಲ್ಲಿಸಲು ಬ್ರಾಹ್ಮಣ ಅಯಾನ್ ಅಧಿಕಾರಿಯೇ ಆಗಬೇಕೇ? ಯಥಾ ಪ್ರಕಾರ ಇದಕ್ಕೆ ಎರಡು ರೀತಿಯ ಪ್ರತಿಕ್ರಿಯೆಗಳಿವೆ. ಇಂತಹ ಚಿತ್ರಣಗಳು ಅವಾಸ್ತವವಾದದ್ದು, ಭ್ರಮೆ ಮೂಡಿಸುವಂತಾದ್ದು, ವಾಸ್ತವ ಬದುಕಿನಲ್ಲಿ ಇದೆಲ್ಲಾ ಸಾಧ್ಯವಿಲ್ಲ ಎಂಬ ವಾದ. ಮತ್ತೊಂದು, ಹೀಗೆ ಚಿತ್ರಿಸುವ ಮೂಲಕ ಮೇಲು ಜಾತಿಗಳ ಜನರು ಜಾತಿ ತಾರತಮ್ಯವನ್ನು ಹೋಗಲಾಡಿಸುವ ಹೊಣೆ ಹೊರಬೇಕು ಎಂಬ ಗಾಂಧೀವಾದಿ ಆಶಯ.

ವಾದ ವಿವಾದಗಳೇನೇ ಇರಲಿ, ವಾಸ್ತವದಲ್ಲಿ ಎರಡು ಸಾಧ್ಯತೆಗಳಿವೆ. ಒಂದು ನಿಷಾದ್ ನಂತಹ ದಲಿತ, ಹಿಂದುಳಿದ ಸಮುದಾಯಗಳ ಯುವಕರು ಜನಸಂಘಟನೆಯ ಮೂಲಕ ಅಧಿಕಾರಕ್ಕೆ ಬಂದು ಸಮುದಾಯಗಳಿಗೆ ನ್ಯಾಯ ಒದಗಿಸುವುದು ಹಾಗೂ ಅವರೇ ಐಪಿಎಸ್, ಐಎಎಸ್ ಹುದ್ದೆಗಳಲ್ಲಿ ನಿಂತು ರಾಜಿಯಾಗದೇ ತಮ್ಮ ಸಮುದಾಯಗಳಿಗೆ ನ್ಯಾಯ ದೊರಕಿಸಲು ಬದುಕಿನಲ್ಲಿ ಅಂಬೇಡ್ಕರ್ ಚಿಂತನಗಳ ಮೂಲಕ ರಾಜಿಯಾಗದೇ ಕಡೆ ವರೆಗೂ ಸಂಘರ್ಷ ನಡೆಸುವುದು. ಆದರೆ ಅಧಿಕಾರ, ಅಧಿಕಾರಿ ಎರಡೂ ತಳಸ್ತರಗಳಿಂದ ದೂರಕ್ಕೆ ಬಹು ಬಹು ದೂರಕ್ಕೆ ಸರಿಯುತ್ತಲೇ ಇರುವ ಈ ಹೊತ್ತಿನಲ್ಲಿ ಇದೊಂದು ಮರೀಚೀಕೆಯ ಬೆನ್ನು ಹತ್ತಿದ ಕೆಲಸವಾಗುತ್ತಿರುವುದಂತೂ ವಾಸ್ತವ.
Very good analysis.
Have to watch the movie.