ಸಾಗರ : ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಒಯ್ಯುವ ಯೋಜನೆ ಕಾರ್ಯಸಾಧುವಲ್ಲ. ಈ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಇಂತಹ ಯೋಜನೆ ಕೈಗೆತ್ತಿಕೊಳ್ಳುವುದರಿಂದ ಸ್ಥಳೀಯ ಜನರು ರೊಚ್ಚಿಗೇಳುವ ಸಾಧ್ಯತೆ ಇರುತ್ತದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಒತ್ತಾಯಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುತ್ತೇನೆ ಎನ್ನುವುದು ಹುಚ್ಚುತನದ ಕಲ್ಪನೆಯಾಗಿದೆ. ಲಿಂಗನಮಕ್ಕಿ ಜಲಾಶಯವನ್ನು ವಿದ್ಯುತ್ ಉತ್ಪಾದನೆ ಉದ್ದೇಶದಿಂದ ನಿರ್ಮಾಣ ಮಾಡಲಾಗಿದೆ. ಈಗಾಗಲೆ ಜಲಾಶಯದಲ್ಲಿ ನೀರಿನ ಕೊರತೆ ಇರುವುದರಿಂದ ವಿದ್ಯುತ್ ಉತ್ಪಾದನೆಗೂ ತೊಂದರೆಯಾಗುತ್ತಿದೆ ಎಂದರು.
ಪ್ರಸ್ತಾವಿತ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಜು. 10 ರಂದು ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ ಕರೆ ಕೊಟ್ಟಿರುವ ಶಿವಮೊಗ್ಗ ಜಿಲ್ಲಾ ಬಂದ್ ಕರೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಯೋಜನೆ ಕೈಬಿಡುವಂತೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸುತ್ತೇನೆ ಎಂದರು.
ಕೆಲವು ದಿನಗಳ ಹಿಂದೆ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತಿರುಗಿಸುವ ಯೋಜನೆಗೆ ಡಿಪಿಆರ್ ತಯಾರಿಸಲು ಆದೇಶ ನೀಡಿರುವುದಾಗಿ ಡಾ.ಪರಮೇಶ್ವರ ತಿಳಿಸಿದ್ದು ಮಲೆನಾಡು ಭಾಗದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಶರಾವತಿ ನದಿ ನೀರನ್ನು ಸಾಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ ತರುವ ಸಂದರ್ಭದಲ್ಲಿ ದೊಡ್ಡ ಸಾಹಸವನ್ನೆ ಮಾಡಲಾಗಿದೆ. ಇನ್ನು ಇಲ್ಲಿಂದ ಬೆಂಗಳೂರಿಗೆ ನೀರು ಹರಿಸುವುದು ಎಂದರೆ ಅದು ಅಸಾಧ್ಯವಾದದ್ದು. ಯಾವ ದೃಷ್ಟಿಯಿಂದಲೂ ಈ ಯೋಜನೆ ಕಾರ್ಯಗತಗೊಳಿಸಲು ಸಾಧ್ಯವಾದದ್ದಲ್ಲ ಎಂದು ಅಭಿಪ್ರಾಯಪಟ್ಟರು.
ಸ್ಥಳ ಪರಿಶೀಲನೆ ನಡೆಸದೆ, ಅಂಕಿ ಅಂಶ ಸಂಗ್ರಹಿಸದೆ ವಾಸ್ತವಾಂಶದ ಅರಿವಿಲ್ಲದೆ ಯಾವುದೆ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಬಾರದು. ಈ ಮಾತು ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆಗೂ ಅನ್ವಯಿಸುತ್ತದೆ. ಸರ್ಕಾರಕ್ಕೆ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.