ರಾಜ್ಯ ರಾಜಕಾರಣದ ದಿಢೀರ್ ಬೆಳವಣಿಗೆಯಲ್ಲಿ, ಶಾಸಕರಾದ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು, ನಾಳೆ ಬೆಳಗ್ಗೆಯೊಳಗೆ ಇನ್ನೂ ಮೂವರು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆ ಹಿನ್ನೆಲೆಯಲ್ಲಿ ಈ ಶಾಸಕರ ದಿಢೀರ್ ರಾಜೀನಾಮೆ ಸರಣಿಯ ಹಿನ್ನೆಲೆಯಲ್ಲಿ ದೋಸ್ತಿ ಸರ್ಕಾರ ತೀವ್ರ ಇಕ್ಕಟ್ಟಿಗೆ ಸಿಲುಕಿದೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸದಲ್ಲಿರುವಾಗಲೇ ಇತ್ತ ರಾಜ್ಯ ಸರ್ಕಾರಕ್ಕೆ ಕುತ್ತು ತರುವ ಈ ಬೆಳವಣಿಗೆಗಳು ಬಿರುಸುಗೊಂಡಿದ್ದು, ಕಳೆದ 8-10 ತಿಂಗಳಿಂದ ನಿರಂತರ ಬಂಡಾಯ, ಭಿನ್ನಮತ ಮತ್ತು ರಾಜೀನಾಮೆಯ ಯತ್ನಗಳನ್ನು ನಡೆಸುತ್ತಿದ್ದ ಮತ್ತು ಕಾಂಗ್ರೆಸ್ಸಿನ ಭಿನ್ನಮತೀಯ ಶಾಸಕರ ಗುಂಪಿನ ನಾಯಕತ್ವ ವಹಿಸಿದ್ದ ರಮೇಶ್ ಜಾರಕಿಹೊಳಿ ರಾಜೀನಾಮೆ ರಾಜ್ಯ ಸರ್ಕಾರ ಪತನದ ಸೂಚನೆ ನೀಡಿದೆ. ಗೋಕಾಕ ಕಾಂಗ್ರೆಸ್ ಶಾಸಕ ಜಾರಕಿಹೊಳಿ ಸೋಮವಾರ ಮಧ್ಯಾಹ್ನ ರಾಜೀನಾಮೆ ಪತ್ರವನ್ನು ಫ್ಯಾಕ್ಸ್ ಮೂಲಕ ವಿಧಾನ ಸಭಾಧ್ಯಕ್ಷರಿಗೆ ರವಾನಿಸಿದ್ದರೆ, ಅವರಿಗೂ ಮುನ್ನವೇ ಸೋಮವಾರ ಬೆಳಗ್ಗೆಯೇ ವಿಜಯನಗರ ಶಾಸಕ ಆನಂದ ಸಿಂಗ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿಯವರು ತಮ್ಮ ರಾಜೀನಾಮೆಗೆ ಸ್ಪಷ್ಟ ಕಾರಣ ನೀಡಿಲ್ಲವಾದರೂ, ಆನಂದ್ ಸಿಂಗ್ ರಾಜೀನಾಮೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಜಿಂದಾಲ್ ವಿಷಯದಲ್ಲಿ ಸರ್ಕಾರದ ಧೋರಣೆ ವಿರೋಧಿಸಿ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರು, ಈ ಇಬ್ಬರ ರಾಜೀನಾಮೆ ಸರ್ಕಾರದ ಮೇಲೆ ಯಾವ ಪರಿಣಾಮ ಬೀರದು ಎಂದು ಮೇಲ್ನೋಟಕ್ಕೆ ವಿಶ್ವಾಸ ಪ್ರದರ್ಶಿಸುತ್ತಿದ್ದಾರೆ. ಆದರೆ, ದಿನ ಬೆಳಗಾಗುವುದರಲ್ಲಿ ಇನ್ನೂ ಮೂವರು ಶಾಸಕರು ರಾಜೀನಾಮೆ ನೀಡಬಹುದು ಎಂಬ ಮಾತುಗಳೂ ಕೇಳಿಬರುತ್ತಿದ್ದು, ಕಂಪ್ಲಿ ಗಣೇಶ್, ಶ್ರೀಮಂತಗೌಡ ಪಾಟೀಲ್ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರುಗಳು ರಾಜೀನಾಮೆಯ ಸರದಿಯಲ್ಲಿದ್ದಾರೆ ಎನ್ನಲಾಗುತ್ತಿದೆ.
ಹಾಗೇ ಬಿ ನಾಗೇಂದ್ರ, ಬಿ ಸಿ ಪಾಟೀಲ್, ಅಮರೇಗೌಡ ಬಯ್ಯಾಪುರ, ಮಹೇಶ್ ಕಮಟಳ್ಳಿ, ಭೀಮಾ ನಾಯ್ಕ್ ಅವರುಗಳೂ ಮುಂದಿನ ಒಂದೆರಡು ದಿನಗಳಲ್ಲಿ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲಿಗೆ ದೊಡ್ಡ ಆತಂಕ ತಂದಿವೆ. ಸದ್ಯದ ವಿಧಾನಸಭಾ ಬಲಾಬಲದ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಕುತ್ತು ಬರಬೇಕಾದರೂ ಕನಿಷ್ಠ 15 ಶಾಸಕರು ರಾಜೀನಾಮೆ ನೀಡಬೇಕಿದೆ. ಆದರೆ, ಈವರೆಗೆ ಇಬ್ಬರು ಮಾತ್ರ ರಾಜೀನಾಮೆ ನೀಡಿದ್ದು, ಸರ್ಕಾರ ಪತನವಾಗಬೇಕಾದರೆ ಇನ್ನೂ 13 ಮಂದಿ ರಾಜೀನಾಮೆ ನೀಡಬೇಕಿದೆ. ಹಾಗಾಗಿ, ಸರ್ಕಾರಕ್ಕೆ ಅಪಾಯವಿಲ್ಲ ಎಂಬ ವಾದ ಕೂಡ ಇದೆ.
ಆದರೆ, ಕಾಂಗ್ರೆಸ್ ಅತೃಪ್ತ ನಾಯಕರಲ್ಲಿ ಪ್ರಮುಖರಾಗಿರುವ ಮತ್ತು ಸಿದ್ದರಾಮಯ್ಯ ಆಪ್ತರಾಗಿರುವ ಮಾಜಿ ಶಾಸಕ ಕೆ ಎನ್ ರಾಜಣ್ಣ ಅವರು, ಇನ್ನೂ ಹದಿನೈದು ಶಾಸಕರು ರಾಜೀನಾಮೆ ನೀಡಲಿದ್ದು, ಈ ಸರ್ಕಾರ ಉಳಿಯುವುದಿಲ್ಲ. ಇದು ರಾಜೀನಾಮೆ ಪರ್ವದ ಆರಂಭವಷ್ಟೇ. ನಾಯಕರ ವರ್ತನೆಯಿಂದ ಬೇಸತ್ತಿರುವ, ಸರ್ಕಾರದ ನಿಷ್ಕ್ರಿಯತೆಯಿಂದ ನೊಂದಿರುವ ಶಾಸಕರು, ತಮ್ಮ ಕ್ಷೇತ್ರಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ರಾಜೀನಾಮೆ ನೀಡುತ್ತಿದ್ದಾರೆ ಎಂದು ಹೇಳುವ ಮೂಲಕ, ದೋಸ್ತಿ ಸರ್ಕಾರದ ಭವಿಷ್ಯ ಬಹುತೇಕ ಮಂಕಾಗಿದೆ ಎಂಬ ಸೂಚನೆ ರವಾನಿಸಿದ್ದಾರೆ.
ಆದರೆ, ದೋಸ್ತಿ ಪಕ್ಷಗಳ ಈ ಬೆಳವಣಿಗೆಯಿಂದ ಲಾಭ ಪಡೆಯಲಿರುವ ಬಿಜೆಪಿ ಮಾತ್ರ ಈ ಬಾರಿಯ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದು, ಅತೃಪ್ತರ ಸರಣಿ ರಾಜೀನಾಮೆಯ ಹೊರತಾಗಿಯೂ ತಾವು ಯಾವುದೇ ಪಕ್ಷದ ಯಾವುದೇ ಶಾಸಕರೊಂದಿಗೂ ಸಂಪರ್ಕದಲ್ಲಿ ಇಲ್ಲ. ಅವರನ್ನು ಆಪರೇಷನ್ ಕಮಲದ ಮೂಲಕ ಸೆಳೆದು ಸರ್ಕಾರ ರಚಿಸುವ ಇರಾದೆಯೂ ಇಲ್ಲ. ಶಾಸಕರ ರಾಜೀನಾಮೆಯಿಂದ ಸರ್ಕಾರ ಪತನವಾದ ನಂತರ ಮುಂದಿನ ನಡೆ ನಿರ್ಧರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರ ಚಾಣಾಕ್ಷ ಹೇಳಿಕೆ ನೀಡಿದ್ದಾರೆ.
ಈ ಮೊದಲು ಹೀಗೆ ಶಾಸಕರ ರೆಸಾರ್ಟ್ ಯಾತ್ರೆ, ರಾಜೀನಾಮೆ ಪ್ರಯತ್ನಗಳು ನಡೆದಾಗ, ಆಪರೇಷನ್ ಕಮಲದ ಮಾತುಗಳು ಕೇಳಿಬಂದಿದ್ದವು ಮತ್ತು ಬಿಜೆಪಿ ನಾಯಕರು ಕೂಡ ಅಷ್ಟು ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನುತ್ತಾ ಸರ್ಕಾರದ ಪತನಕ್ಕೆ ಮುಹೂರ್ತ ನಿಗದಿ ಮಾಡುತ್ತಿದ್ದರು. ಆದರೆ, ಈ ಬಾರಿ ಅಂತಹ ಪ್ರಯತ್ನಗಳು ಬಿಜೆಪಿಯ ಪಾಳೆಯದಿಂದ ಕಾಣುತ್ತಿಲ್ಲ ಎಂಬುದು ವಿಶೇಷ. ತಮ್ಮ ತಂತ್ರಗಾರಿಕೆಯನ್ನು ಬಹಿರಂಗಪಡಿಸಿ ದೋಸ್ತಿ ಪಕ್ಷಗಳ ಪ್ರತಿತಂತ್ರ ಹೆಣೆದು ಸರ್ಕಾರ ಉಳಿಸಿಕೊಳ್ಳಲು ಕಾರಣವಾದ ಹಿನ್ನೆಲೆಯಲ್ಲಿ, ಬಿಜೆಪಿ ನಾಯಕರು ಈ ಬಾರಿ ಚಾಣಾಕ್ಷತನದ ಮೂಲಕ ಪ್ರತಿ ತಂತ್ರವನ್ನೂ ಬಹಳ ರಹಸ್ಯವಾಗಿ, ಮುಗುಮ್ಮಾಗಿ ಮಾಡಿ ಮುಗಿಸಲು ಯೋಜಿಸಿದ್ದಾರೆಯೇ ಎಂಬ ಅನುಮಾನಗಳು ಕೂಡ ಇವೆ.
ಆ ಹಿನ್ನೆಲೆಯಲ್ಲಿ ಈಗಿನ ಬೆಳವಣಿಗೆಗಳು ಮುಂದಿನ ಪರಿಣಾಮಗಳೇನು? ನಿಜವಾಗಿಯೂ ಎಷ್ಟು ಮಂದಿ ಶಾಸಕರು ರಾಜೀನಾಮೆ ನೀಡಲಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತು ಆನಂದ್ ಸಿಂಗ್ ರಾಜೀನಾಮೆ ಕೇವಲ ಮುಂದಿನ ಬೆಳವಣಿಗೆಗಳ ಮುನ್ನುಡಿಯೇ? ಎಂಬ ಪ್ರಶ್ನೆಗಳು ಎದ್ದಿವೆ. ಕಾಂಗ್ರೆಸ್ ಹಿರಿಯ ನಾಯಕ, ಡಿಸಿಎಂ ಡಾ ಜಿ ಪರಮೇಶ್ವರ್ ಕೂಡ ಇದೇ ಅನುಮಾನವನ್ನು ವ್ಯಕ್ತಪಡಿಸಿದ್ದು, “ಆ ಶಾಸಕರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ? ಬಿಜೆಪಿಯವರು ಇದರ ಹಿಂದೆ ಇದ್ದಾರೆಯೇ? ಅಥವಾ ಇವರು ವೈಯಕ್ತಿಕವಾಗಿ ರಾಜೀನಾಮೆ ನೀಡಿದ್ದಾರೆಯೇ ? ಎಂಬುದು ಗೊತ್ತಾಗಿಲ್ಲ. ಆದರೆ, ನಮ್ಮ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ನಾವು ಮಾಡುತ್ತೇವೆ” ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, “ಬಿಜೆಪಿಯವರು ಕೇಂದ್ರದ ತಮ್ಮ ಅಧಿಕಾರ ಬಳಸಿಕೊಂಡು, ವಿವಿಧ ಸರ್ಕಾರಿ ಸಂಸ್ಥೆಗಳ ಅಸ್ತ್ರ ಪ್ರಯೋಗಿಸಿ ನಮ್ಮ ಶಾಸಕರನ್ನು ಬೆದರಿಸುವ, ಬ್ಲಾಕ್ ಮೇಲ್ ಮಾಡುವ ಪ್ರಯತ್ನಗಳನ್ನು ಮೊದಲಿನಿಂದಲೂ ನಡೆಸಿಕೊಂಡೇ ಬಂದಿದ್ದಾರೆ. ಈಗಲೂ ಅಂತಹದ್ದೇ ಪ್ರಯತ್ನ ನಡೆದಿರಬಹುದು. ಏನೇ ಆಗಲಿ ಸರ್ಕಾರಕ್ಕೆ ಅಪಾಯವಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ” ಎಂದಿದ್ದಾರೆ.
ಈ ನಡುವೆ, ದಿಢೀರ್ ರಾಜೀನಾಮೆ ಬೆಳವಣಿಗೆ ಮೂರೂ ಪಕ್ಷಗಳನ್ನು ಬಿರುಸಿನ ಚಟುವಟಿಕೆಗಳನ್ನು ಗರಿಗೆದರಿಸಿದ್ದು, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಮಧ್ಯಾಹ್ನದಿಂದಲೇ ಸರಣಿ ಸಭೆಗಳು ನಡೆಯುತ್ತಿದ್ದು, ರಾಜೀನಾಮೆ ನೀಡಲಿದ್ದಾರೆ ಎಂಬ ಶಂಕೆ ಇದ್ದ ಹಲವು ಶಾಸಕರು ಸೇರಿದಂತೆ ಪಕ್ಷದ ಹಿರಿಯ ನಾಯಕರೂ ಆ ಸಭೆಗಳಲ್ಲಿ ಭಾಗವಹಿಸಿದ್ದಾರೆ ಎಂಬುದು ಗಮನಾರ್ಹ. ಸರ್ಕಾರ ಪತನ ತಡೆಯುವ ನಿಟ್ಟಿನಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸರಣಿ ಸಭೆಗಳು ನಡೆಯುತ್ತಿದ್ದರೆ, ಅತ್ತ ಬಿಜೆಪಿ ನಾಯಕರು ಕೂಡ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಈ ನಡುವೆ, ಬಿಜೆಪಿಯ ಹಿರಿಯ ಶಾಸಕರೊಬ್ಬರು, ಯಡಿಯೂರಪ್ಪ ಮತ್ತು ರಾಜೀನಾಮೆ ನೀಡಿರುವ ಶಾಸಕರ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದು, ರಹಸ್ಯವಾಗಿ ಅತೃಪ್ತ ಶಾಸಕರನ್ನು ಬಿಜೆಪಿಗೆ ಸೆಳೆಯುವ ಯತ್ನ ನಡೆಸಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಒಟ್ಟಾರೆ, ಸೋಮವಾರದ ಇಡೀ ದಿನದ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ದೋಸ್ತಿ ಸರ್ಕಾರದ ಭವಿಷ್ಯ ತೂಗುಯ್ಯಾಲೆಯಲ್ಲಿದೆ.