ಇಡೀ ದೇಶದ ಆರ್ಥಿಕತೆ ಕುಸಿತಗೊಂಡು, ಜನಸಾಮಾನ್ಯರು ಸಂಕಷ್ಟ ಎದುರಿಸಲು ಕಾರಣವಾದ ನರೇಂದ್ರಮೋದಿ ಅವರ ತರ್ಕರಹಿತ ಯೋಜನೆ ‘ಅಪನಗದೀಕರಣ’ದಿಂದ ಆರ್ಥಿಕ ಅಭಿವೃದ್ಧಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದು ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ. ಈ ಹೇಳಿಕೆ ಆಘಾತಕಾರಿ ಏಕೆಂದರೆ ಹಿಂದಿನ ತಪ್ಪನ್ನು ಒಪ್ಪಿಕೊಂಡವರು ಮಾತ್ರವೇ ಮುಂದೆ ಅಂತಹ ಮತ್ತಷ್ಟು ತಪ್ಪುಗಳನ್ನು ಮಾಡದಿರುವ ಪ್ರಾಮಾಣಿಕ ಪ್ರಯತ್ನ ಮಾಡಬಹುದು. ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ ಅದನ್ನು ಸರಿಯೆಂದೇ ವಾದಿಸುವುದರಿಂದ ಮತ್ತು ಸಾಧಿಸುವವರಿಂದ ಮತ್ತಷ್ಟು ತಪ್ಪುಗಳೇ ಆಗುತ್ತವೆ.
ಸುಳ್ಳುಗಳನ್ನೇ ಹೇಳಿ ಸತ್ಯದ ಭ್ರಮೆ ಸೃಷ್ಟಿಸುವ ಬಿಜೆಪಿ…
ಈಗ ನಿರ್ಮಲಾ ಸೀತಾರಾಮನ್ ಅವರು ಅಪನಗದೀಕರಣದಿಂದ ಆರ್ಥಿಕ ಅಭಿವೃದ್ಧಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದಿರುವುದು ಹಳೆಯ ತಪ್ಪನ್ನು ಸಮರ್ಥಿಸಿಕೊಂಡು ಹೊಸದೊಂದು ತಪ್ಪು ಮಾಡಲು ಸಿದ್ದತೆ ನಡೆಸಿದಂತಿದೆ. ಇಡೀ ಚುನಾವಣಾ ಪ್ರಚಾರದ ವೇಳೆ ಆರ್ಥಿಕ ಅಭಿವೃದ್ಧಿಯ ಬಗ್ಗೆ ಚಕಾರ ಎತ್ತದೇ, ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಯೋಜನೆಯ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡದೇ ದೇಶಪ್ರೇಮದ ಹೆಸರಿನಲ್ಲಿ ಭಾರೀ ಬಹುಮತ ಪಡೆದ ಬಿಜೆಪಿ, ಒಂದು ಸುಳ್ಳನ್ನು ಹತ್ತಾರು ಬಾರಿ ಸತ್ಯವೆಂದು ಹೇಳಿ ಸುಳ್ಳನ್ನು ಸತ್ಯವೆಂದೇ ಭ್ರಮಿಸುವಂತೆ ಮಾಡುವ ತಂತ್ರ ಅನುಸರಿಸುತ್ತಿದೆ.
ಜನರ ಕೊಳ್ಳುವಶಕ್ತಿ ಕಡಿತ – ದೇಶದ ಆರ್ಥಿಕತೆ ಕುಸಿತ
ಇಡೀ ದೇಶದ ಆರ್ಥಿಕತೆ ಕುಸಿದಿದೆ. ಜನರ ಕೊಳ್ಳುವ ಶಕ್ತಿಯೇ ಕುಂದಿದೆ. ಅಪನಗದೀಕರಣದ ನಂತರ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ವಾಹನ ಖರೀದಿ, ವಸತಿ ಖರೀದಿ, ಗೃಹೋಪಯೋಗಿ ವಸ್ತುಗಳ ಖರೀದಿ, ದಿನಸಿ ಮತ್ತಿತರ ವಸ್ತುಗಳ ಖರೀದಿ ಪ್ರಮಾಣ ಕುಸಿಯುತ್ತಲೇ ಇದೆ. ಇದೇ ವೇಳೆ ತೆರಿಗೆ ಸಂಗ್ರಹವೂ ಕುಗ್ಗುತ್ತಿದೆ. ಆದರೆ, ಬ್ಯಾಂಕುಗಳಿಗೆ ಮೋಸ ಮಾಡುವ ಪ್ರಕರಣಗಳು ಮಾತ್ರ ಹೆಚ್ಚುತ್ತಿವೆ. ಇಡೀ ಹಣಕಾಸು ಮಾರುಕಟ್ಟೆ ನಗದು ಕೊರತೆಯಿಂದಾಗಿ ಬಳಲುತ್ತಿದೆ. ಬ್ಯಾಂಕುಗಳಲ್ಲಿ ಗ್ರಾಹಕರಿಗೆ ಸಾಲ ಕೊಡಲು ಹಣವಿಲ್ಲ.
ಆರಂಭದಲ್ಲೇ ಪ್ರತಿ ಮಾಸಿಕ ಒಂದು ಲಕ್ಷ ಕೋಟಿ ತೆರಿಗೆ ಸಂಗ್ರಹ ಮಾಡುವುದಾಗಿ ಮತ್ತು ವಾರ್ಷಿಕ ಶೇ.12ಕ್ಕಿಂತಲೂ ಹೆಚ್ಚಿನ ವೃದ್ಧಿ ದಾಖಲಿಸುವುದಾಗಿ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ತರುವ ಹೊತ್ತಿನಲ್ಲಿ ಹೇಳಲಾಗಿತ್ತು. ಅದಾಗಿ ಎರಡು ವರ್ಷ ಕಳೆದಿದೆ. ತೆರಿಗೆ ಸಂಗ್ರಹ ಲಕ್ಷ ಕೋಟಿ ರೂಪಾಯಿಗಳು ದಾಟಿದ್ದು ಒಂದೆರಡು ತಿಂಗಳಲ್ಲಿ ಮಾತ್ರ. ಜೂನ್ ತಿಂಗಳ ತೆರಿಗೆ ಸಂಗ್ರಹವೂ ಸಹ ಒಂದು ಲಕ್ಷ ಕೋಟಿ ರೂ.ಗಳು ದಾಟಿಲ್ಲ. ತೆರಿಗೆ ಸಂಗ್ರಹ ನಿರೀಕ್ಷಿತ ಗುರಿ ಮುಟ್ಟಿಲ್ಲ ಎಂಬುದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದೇಶದ ಆರ್ಥಿಕತೆ ಹಳ್ಳ ಹಿಡಿದಿದೆ ಎಂಬುದರ ಪ್ರತಿಬಿಂಬವೇ.
ದೂರದೃಷ್ಟಿ ಇಲ್ಲದ ಯೋಜನೆ – ದೂರವೇ ಉಳಿದ ಆರ್ಥಿಕ ಪ್ರಗತಿ
ಈ ನಡುವೆ ಮೋದಿ ಸರ್ಕಾರದ ಆರ್ಥಿಕ ನೀತಿಯಿಂದಾಗಿ ದೇಶದ ವಿತ್ತೀಯ ಕೊರತೆ ಮಿತಿ ಮೀರಿದೆ. ವಿತ್ತೀಯ ಕೊರತೆ ಮಿತಿ ಮೀರಿರುವುದು ಸರ್ಕಾರದ ಆರ್ಥಿಕ ನಿರ್ವಹಣೆ ಸರಿಯಿಲ್ಲ ಎಂಬ ಅರ್ಥವನ್ನೇ ಸೂಚಿಸುತ್ತದೆ. ಮೋದಿ ಸರ್ಕಾರದ ಅವಧಿಯಲ್ಲಾಗಿರುವ ವಿತ್ತೀಯ ಕೊರತೆಗೆ ಆರ್ಥಿಕ ನಿರ್ವಹಣೆ ಸರಿಯಿಲ್ಲ ಎನ್ನುವುದಕ್ಕಿಂತಲೂ ಆಡಳಿತದ ವೈಫಲ್ಯತೆ ಎದ್ದುಕಾಣುತ್ತಿದೆ. ದೂರದೃಷ್ಟಿಯೇ ಇಲ್ಲದ ಅಪನಗದೀಕರಣದಂತಹ ಯೋಜನೆಗಳನ್ನು ಜಾರಿಗೆ ತಂದಿರುವುದರ ಪರಿಣಾಮವೇ ವಿತ್ತೀಯ ಕೊರತೆ ಹಿಗ್ಗಿರುವುದು. ವಿತ್ತೀಯ ಕೊರತೆ ನಮ್ಮ ಜಿಡಿಪಿಯ ಶೇ.3.4ರಷ್ಟಾಗುವ ಸಾಧ್ಯತೆಯೂ ಕಾಣುತ್ತಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರವೇ ಚಾಲ್ತಿ ಖಾತೆ ಕೊರತೆಯೂ ಹಿಗ್ಗಿದೆ. ಇದು ಜಿಡಿಪಿಯ ಶೇ.2.1ರಷ್ಟಕ್ಕೆ ಜಿಗಿದಿದೆ. ಕಳೆದ ವರ್ಷ ಶೇ.1.8ರಷ್ಟು ಇದ್ದ ಕೊರತೆಯು ಶೇ.2.1ಕ್ಕೆ ಜಿಗಿದಿರುವುದು ಆರ್ಥಿಕತೆ ಹಿನ್ನಡೆಯತ್ತ ಸಾಗಿರುವುದರ ಸಂಕೇತವೂ ಹೌದು. ನಮ್ಮ ಜಿಡಿಪಿ ಒಟ್ಟು 140 ಲಕ್ಷ ಕೋಟಿ ರುಪಾಯಿಗಳಾಗಿದೆ ಎಂದು ಅಂದಾಜಿಸಿದರೂ, ಜಿಡಿಪಿಯ ಶೇ.2.1ರಷ್ಟು ಚಾಲ್ತಿ ಖಾತೆ ಕೊರತೆ ಎಂದರೆ ಅದರ ಮೊತ್ತ 2.80 ಲಕ್ಷ ಕೋಟಿ ರುಪಾಯಿಗಳಷ್ಟಾಗುತ್ತದೆ.
ಮೋದಿ ಸರ್ಕಾರದ ಆರ್ಥಿಕ ವೈಫಲ್ಯಗಳು ಇಷ್ಟಕ್ಕೇ ಮುಗಿಯುವುದಿಲ್ಲ. ವ್ಯಾಪಾರ ವಹಿವಾಟು ಕೊರತೆಯು 2018-19ನೇ ಸಾಲಿನಲ್ಲಿ 12.4 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. ಕಳೆದ ಸಾಲಿನಲ್ಲಿ ಇದು 11.03 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಭಾರತ ರಫ್ತು ಮಾಡುವ ಸರಕುಗಳ ಮೌಲ್ಯ ಮತ್ತು ಆಮದು ಮಾಡಿಕೊಳ್ಳುವ ಸರಕುಗಳ ಮೌಲ್ಯಗಳಲ್ಲಿನ ವ್ಯತ್ಯಾಸವೇ ವ್ಯಾಪಾರ ವಹಿವಾಟು ಕೊರತೆ. ಅಂದರೆ ಭಾರತ ತಾನು ರಫ್ತು ಮಾಡಿದ ಮೌಲ್ಯಕ್ಕಿಂತ 12.4 ಲಕ್ಷ ಕೋಟಿ ರೂ. ಮೌಲ್ಯದ ಸರಕು ಮತ್ತು ಸೇವೆಗಳನ್ನು ಹೆಚ್ಚುವರಿಯಾಗಿ ಆಮದು ಮಾಡಿಕೊಂಡಿದೆ. ದೇಶದ ಆರ್ಥಿಕತೆ ಹಿನ್ನಡೆಯತ್ತ ಸಾಗಿರುವುದರ ಸ್ಪಷ್ಟ ಸೂಚನೆ ಇದು.
ಜೂನ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಒಂದು ಲಕ್ಷ ಕೋಟಿ ರೂಪಾಯಿಗಳು ದಾಟದಿರುವುದು, ಸತತ ಮೂರ್ನಾಲ್ಕು ತ್ರೈಮಾಸಿಕಗಳಿಂದ ದ್ವಿಚಕ್ರ ವಾಹನ, ಕಾರುಗಳು ಮತ್ತು ಸಾರ್ವಜನಿಕ ಬಳಕೆ ವಾಹನಗಳ ಮಾರಾಟ ಕುಸಿಯುತ್ತಲೇ ಇದೆ. ಟ್ರಾಕ್ಟರ್ ಗಳ ಮಾರಾಟ ಕುಸಿತವೂ ಕೃಷಿ ವಲಯದ ಹಿನ್ನಡೆಯನ್ನು ಸಂಕೇತಿಸುತ್ತದೆ. ಈ ನಡುವೆ ನಿರುದ್ಯೋಗ ಪ್ರಮಾಣ ಸರ್ವಾಕಾಲಿಕ ಗರಿಷ್ಠ ಮಟ್ಟಕ್ಕೇರಿದೆ. ಅದು ಇನ್ನೂ ಹೆಚ್ಚುತ್ತಲೇ ಇದೆ.
ಮೋದಿ ಸರ್ಕಾರ, ಹುಸಿದೇಶಪ್ರೇಮ ಮತ್ತು ಆರ್ಥಿಕ ಹಿನ್ನಡೆ…
ಈ ಎಲ್ಲಾ ಆರ್ಥಿಕ ಹಿನ್ನಡೆಗಳ ನಡುವೆಯೂ ದೇಶಪ್ರೇಮದ ಹೆಸರಿನಲ್ಲಿ ನರೇಂದ್ರ ಮೋದಿ ಬಿಜೆಪಿಯನ್ನು ಅಭೂತಪೂರ್ವವಾಗಿ ಗೆಲ್ಲಿಸಿ ಮತ್ತೆ ಅಧಿಕಾರ ಹಿಡಿದಿದ್ದಾರೆ. ಈ ಹೊತ್ತಿನಲ್ಲಿ ಆರ್ಥಿಕ ಹಿನ್ನಡೆಗಳ ಬಗ್ಗೆ ಮಾತನಾಡಿದರೆ ಇತ್ತೀಚೆಗೆ ದಕ್ಕಿರುವ ವಿತ್ತ ಸಚಿವೆಯ ಸ್ಥಾನ ಕಳೆದುಕೊಳ್ಳುವ ಭೀತಿಯಿಂದ ನಿರ್ಮಲಾ ಸೀತಾರಾಮನ್ ವಸ್ತುಸ್ಥಿತಿಯನ್ನು ಮರೆಮಾಚಿ ಮಾತನಾಡುತ್ತಿದ್ದಾರೆಯೇ?
ವಸ್ತುಸ್ಥಿತಿ ಮರೆಮಾಚಿದರೆ ಮುಂದೆ ಆಗುವ ಅನಾಹುತಗಳಿಂದ ದೇಶದ ಜನರು ಮತ್ತಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ. ಚುನಾವಣೆ ಗೆಲ್ಲುವ ತಂತ್ರ ಅರಿತವರು ಮತ್ತಷ್ಟು ದಾಳಿಗಳನ್ನು ಸೃಷ್ಟಿಸಿ ಇನ್ನಷ್ಟು ದೇಶಪ್ರೇಮವನ್ನು ಉದ್ದೀಪಿಸಬಹುದು. ಆದರೆ, ದೇಶಪ್ರೇಮ ಉದ್ದೀಪಿಸುವುದರಿಂದ ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಅದನ್ನು ನೂತನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮನದಟ್ಟುಮಾಡಿಕೊಳ್ಳುವುದು ಅತ್ಯವಶ್ಯಕ.