ದೇಶದಲ್ಲಿ ಮುಸ್ಲಿಂ ಮಹಿಳೆಯರ ಹಕ್ಕುಗಳಿಗಾಗಿ ಸುಮಾರು ಒಂದು ದಶಕಕ್ಕಿಂತಲೂ ಹೆಚ್ಚಿನ ಕಾಲದಿಂದಲೂ ಸಮುದಾಯದ ಮಹಿಳೆಯರನ್ನು ಸಂಘಟಿಸಿ ಮತ್ತು ಕಾನೂನಾತ್ಮಕ ವಿಧಾನದಲ್ಲಿಯೂ ಹೋರಾಟ ನಡೆಸುತ್ತಿರುವ ರಾಷ್ಟ್ರಮಟ್ಟದ ಸಂಘಟನೆ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ (BMMA). ಭಾರತದ ಮುಸ್ಲಿಮರಲ್ಲಿ ಚಾಲ್ತಿಯಲ್ಲಿರುವ ತತ್ಕ್ಷಣದ ತ್ರಿವಳಿ ತಲಾಖ್, ಹಲಾಲಾ, ಬಹುಪತ್ನಿತ್ವ ಮತ್ತಿತರ ಅನಿಷ್ಟ ಪದ್ಧತಿಗಳ ವಿರುದ್ಧ ಈ ಸಂಘಟನೆ ನಿರಂತರವಾಗಿ ಹಲವು ಸ್ತರಗಳಲ್ಲಿ ಹೋರಾಡುತ್ತಾ ಬಂದಿದೆ. 2017ರಲ್ಲಿ ತತ್ಕ್ಷಣದ ತ್ರಿವಳಿ ತಲಾಖ್ ನಿಷೇಧಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಸಂಬಂಧ ಶಾಸನ ರೂಪಿಸಲು ಮುಂದಾಗಿತ್ತು. ಆದರೆ ಕೇಂದ್ರ ಸರ್ಕಾರದ ಈ ನಡೆ ಹಲವು ವಿವಾದಗಳಿಗೆ ಗ್ರಾಸವಾಗಿದ್ದು, ಇದು ಮುಸ್ಲಿಮ್ ಪುರುಷರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವಂತಿದೆಯೇ ಹೊರತು ಮುಸ್ಲಿಂ ಮಹಿಳೆಯರ ಹಕ್ಕುಗಳ ಸಮರ್ಥನೆಯಾಗಿಲ್ಲ ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ. ತತ್ಕ್ಷಣದ ತ್ರಿವಳಿ ತಲಾಖ್ ವಿರುದ್ಧ ಮತ್ತು ಭಾರತದ ಮುಸ್ಲಿಂ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ವಿರುದ್ಧ ಇದೀಗ ಅಪವಾದ ಹೊರಿಸಲಾಗಿದ್ದು, ಆ ಆರೋಪವನ್ನು ಅಲ್ಲಗಳೆದು ಸ್ಪಷ್ಟನೆ ನೀಡಿರುವ ಸಂಘಟನೆ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಸಂಘಟನೆಯ ಕೇಂದ್ರ ಕಚೇರಿಯಿಂದ ಹೊರಡಿಸಲಾಗಿರುವ ಪತ್ರಿಕಾ ಹೇಳಿಕೆಯ ಪೂರ್ಣಪಾಠ ಇಲ್ಲಿದೆ.
“ಮುಸ್ಲಿಂ ಮಹಿಳೆಯರ ಸಂಘಟನೆಯಾಗಿ ನಾವು ಕಳೆದ 12 ವರ್ಷಗಳಿಂದಲೂ ನಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಡುತ್ತಾ ಬಂದಿದ್ದೇವೆ. ನಾವು ತ್ರಿವಳಿ ತಲಾಖ್ ಹಾಗೂ ಮಹಿಳೆ ಮತ್ತವಳ ಕುಟುಂಬದ ಮೇಲೆ ಅದು ಬೀರುವ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದ್ದಕ್ಕಾಗಿ, ಪ್ರಸಕ್ತ ಬಲಪಂಥೀಯ ಹಿಂದೂತ್ವ ಸರ್ಕಾರದ ಕೈಗೊಂಬೆಗಳಾಗಿದ್ದೇವೆಂಬ ಅಪವಾದಕ್ಕೆ ಗುರಿಯಾಗಿದ್ದೇವೆ. ಇದು ಈ ಐದು ವರ್ಷಗಳಲ್ಲಿ ನಾವು ಎದುರಿಸಿರುವ ಹಲವು ಸವಾಲುಗಳ ಪೈಕಿ ಒಂದಾಗಿದೆ. ನಾವು ಈ ಆಪಾದನೆಯನ್ನು ಹೊತ್ತಿದ್ದರೂ ನಮ್ಮ ಹೋರಾಟವನ್ನು ನಿಲ್ಲಿಸದೆ ಮುಂದುವರಿಸಿದ್ದೇವೆ, ಏಕೆಂದರೆ ನಾವು ಹೋರಾಡದಿದ್ದರೆ ಬೇರಾರೂ ಈ ಹೋರಾಟ ನಡೆಸುವುದಿಲ್ಲವಲ್ಲದೆ ಮುಸ್ಲಿಂ ಮಹಿಳೆಯರು ತಮ್ಮ ಸಂಕಟಗಳಿಗೆ ಮೂಕ ಪ್ರೇಕ್ಷಕರಾಗಿ ಉಳಿದುಬಿಡುತ್ತಾರೆ.
ಕಳೆದ 5 ವರ್ಷಗಳಲ್ಲಿ ಮುಸ್ಲಿಂ ಯುವಜನತೆಯನ್ನು ಸರ್ಕಾರ ಹೇಗೆ ಥಳಿಸುತ್ತಲಿದೆ ಎಂಬುದರ ಬಗ್ಗೆಯೂ ನಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾ, ಇದು ಒಂದಲ್ಲಾ ಒಂದು ಕೊನೆಗೊಳ್ಳುತ್ತದೆ ಎಂದು ಆಶಿಸಿದ್ದೆವು.
ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಇನ್ನಷ್ಟು ಜವಾಬ್ದಾರಿ ಮತ್ತು ಉತ್ತಮ ರೀತಿಯಲ್ಲಿ ಒಳಗೊಳ್ಳುವಿಕೆಯನ್ನು ನಿರೀಕ್ಷಿಸಿದ್ದೆವು. ಆದರೆ ಪರಿಸ್ಥಿತಿ ಇನ್ನೂ ಹದಗೆಡುತ್ತಿದೆ ಎಂಬುದೇ ದುರಂತದ ಸಂಗತಿ. ಪ್ರಧಾನಿಯವರು ‘ಸಬ್ ಕಾ ವಿಶ್ವಾಸ್’ ಬಗ್ಗೆ ಮಾತನಾಡಿದ್ದಾರಾದರೂ ರಕ್ಷಕ ಪಡೆಗಳು ಸಾಯಹೊಡೆಯುವುದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಾಯಹೊಡೆಯುವ ಕೃತ್ಯಗಳು ಮುಸ್ಲಿಂ ಮಹಿಳೆಯರ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳುತ್ತದೆ ಎಂದು ನಾವು ನಂಬಿದ್ದೇವೆ. ನೇರವಾಗಿ ಮಾತ್ರವಲ್ಲ, ಪರೋಕ್ಷವಾಗಿ ಕೂಡ ಅವಳನ್ನು ಈ ಮೊದಲು ಮೌನವಾಗಿರಿಸುತ್ತಿದ್ದ ಶಕ್ತಿಗಳಿಗೆ ಈಗ ಹೆಚ್ಚು ಬಲ ಸಿಕ್ಕಿದೆ. ಆದರೆ ಇದು ಇನ್ನೆಷ್ಟು ಕಾಲ ನಡೆಯಲಿದೆ? ಇನ್ನೆಷ್ಟು ಸಮಯ ಮುಸ್ಲಿಂ ಮಹಿಳೆ ತನ್ನ ಹಕ್ಕುಗಳ ಮತ್ತು ಸಮುದಾಯದ ಅಸ್ತಿತ್ವದ ನಡುವೆ ಆಯ್ಕೆ ಮಾಡಿಕೊಳ್ಳುತ್ತಾ ಕೂರಬೇಕಾಗಿದೆ? ಅವಳು ಆಯ್ದುಕೊಳ್ಳಲು ಅದೂ ಒಂದು ಆಯ್ಕೆಯೇನು?
ಮುಸ್ಲಿಂ ಮಹಿಳೆಯರಾದ ನಾವು, ನಮ್ಮ ಅಣ್ಣತಮ್ಮ, ಅಪ್ಪ ಮತ್ತು ನಮ್ಮ ಕುಟುಂಬದ ಇತರ ಪುರುಷ ಸದಸ್ಯರ ಬಗ್ಗೆಯೂ ಚಿಂತಿಸುತ್ತೇವೆ.
ಮುಸ್ಲಿಮರಿಗಾಗಿ ಕಾನೂನಾತ್ಮಕ ಸುಧಾರಣೆಗಳನ್ನು ಸದಾಕಾಲ ರಾಜಕೀಕರಣಗೊಳಿಸಲಾಗಿದೆ ಮತ್ತು ಅದನ್ನು ಹಾಗೆಯೇ ಮುಂದುವರಿಸಲಾಗಿದೆ. ಇದರೊಟ್ಟಿಗೆ ಕಳೆದ 7 ದಶಕಗಳಲ್ಲಿ, ಬಹುಸಂಖ್ಯಾತ ಸಮುದಾಯವು ಇದನ್ನು ಪರಿಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅಷ್ಟೇ ಅಲ್ಲದೆ ಈಗ ಸರ್ಕಾರವು ಈ ಸಮುದಾಯದ ವಿರುದ್ಧ ದ್ವೇಷಮಯ ವಾತಾವರಣವನ್ನು ಸೃಷ್ಟಿಸಿದೆ. ಈ ಎಲ್ಲಾ ಅಪಾಯಗಳ ನಡುವೆ ಮುಸ್ಲಿಂ ಮಹಿಳೆಯರು ನಿಲ್ಲುವುದಾದರೂ ಎಲ್ಲಿ? ಈ ಸಮುದಾಯವು ಶಾಂತಿಯುತವಾಗಿ ಬದುಕುವ ಮತ್ತು ಕುಟುಂಬದೊಳಗೆ ಮಹಿಳೆಯರ ಹಕ್ಕುಗಳನ್ನು ಖಾತ್ರಿಪಡಿಸುವ ಆ ಸುಂದರ ದಿನ ಬರುವುದಾದರೂ ಯಾವಾಗ?
ಎಲ್ಲಾ ಪುಡಿ ಸಂಘಟನೆಗಳ ವಿರುದ್ಧ ಮತ್ತು ಹಿಂಸಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸ್ಪಷ್ಟ ನಿರ್ದೇಶನ ಹೊರಡಿಸಬೇಕೆಂದು ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ. ಅಲ್ಲದೆ ಕೇಂದ್ರ ಸರ್ಕಾರವು ದೇಶದ ಧರ್ಮನಿರಪೇಕ್ಷ ಮತ್ತು ಒಳಗೊಳ್ಳುವ ಚೌಕಟ್ಟಿಗೆ ಬದ್ಧವಾಗಿರಬೇಕೆಂದು ಆಗ್ರಹಿಸುತ್ತೇವೆ.
ನಾವು ಮುಸ್ಲಿಂ ಮಹಿಳೆಯರು, ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುತ್ತಲೇ, ಶಾಂತಿಗಾಗಿ ಮತ್ತು ದ್ವೇಷದ ರಾಜಕಾರಣವನ್ನು ಅಂತ್ಯಗೊಳಿಸಲು ರಾಜ್ಯಾಡಳಿತವನ್ನು ಒತ್ತಾಯಿಸುತ್ತೇವೆ.”