ಮಿತಿ ಮೀರಿ ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು ದೂರದ ಮಲೆನಾಡಿನ ಶರಾವತಿ ನೀರು ತರುವ ಸರ್ಕಾರದ ಪ್ರಸ್ತಾಪದ ವಿರುದ್ಧ ಶಿವಮೊಗ್ಗ, ಉತ್ತರಕನ್ನಡ ಹಾಗೂ ಚಿಕ್ಕಮಗಳೂರು ಸೇರಿದಂತೆ ಇಡೀ ಮಲೆನಾಡು ಭಾಗದಲ್ಲಿ ವ್ಯಾಪಕ ಪ್ರತಿರೋಧ ವ್ಯಕ್ತವಾಗುತ್ತಿದ್ದು. ಶರಾವತಿ ನದಿ ಉಳಿಸಿ ಹೋರಾಟ ಮಲೆನಾಡಿನ ಇತ್ತೀಚಿನ ದಶಕಗಳ ದೊಡ್ಡ ಜನಾಂದೋಲನವಾಗಿ ಬದಲಾಗಿದೆ.
ಜೂನ್ ಮೂರನೇ ವಾರದ ಹೊತ್ತಿಗೆ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಬೆಂಗಳೂರಿನ ಕುಡಿಯುವ ನೀರಿನ ಬಿಕ್ಕಟ್ಟಿನ ಕುರಿತು ಸಭೆ ನಡೆಸಿ, ನೀರು ಸರಬರಾಜು ಮಾಡಲು ಬೆಂಗಳೂರು ಜಲಮಂಡಳಿಯ ಮಾಜಿ ಅಧ್ಯಕ್ಷ ಬಿ ಎನ್ ತ್ಯಾಗರಾಜ್ ಸಮಿತಿ ಶಿಫಾರಸುಗಳ ಪ್ರಕಾರ ಲಿಂಗನಮಕ್ಕಿ ಜಲಾಶಯದಿಂದ ನೀರು ತರಲು ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಬೆನ್ನಲ್ಲೇ ಮಲೆನಾಡಿನಲ್ಲಿ ಹೋರಾಟ ಭುಗಿಲೆದ್ದಿದೆ. ಡಿಸಿಎಂ ಹೇಳಿಕೆ ನೀಡಿದ ಎರಡೇ ದಿನದಲ್ಲಿ ಶರಾವತಿಯ ಲಿಂಗನಮಕ್ಕಿ ಅಣೆಕಟ್ಟು ಇರುವ ಸಾಗರದಲ್ಲಿ ಹೋರಾಟದ ಕುರಿತ ಮೊದಲ ಸಮಾಲೋಚನಾ ಸಭೆ ನಡೆದು, ಹಿರಿಯ ಸಾಹಿತಿ ನಾ ಡಿಸೋಜಾ ಅವರ ನೇತೃತ್ವದಲ್ಲಿ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ ಅಸ್ತಿತ್ವಕ್ಕೆ ತಂದು, ಒಕ್ಕೂಟದ ಅಡಿ ಜಿಲ್ಲೆಯಾದ್ಯಂತ ಹೋರಾಟವನ್ನು ವಿಸ್ತರಿಸಲಾಗಿದೆ.
ಹೋರಾಟಗಳು, ಚಳವಳಿಗಳು ಸತ್ತು ಹೋದವು, ಈ ಸಮಾಜದಲ್ಲಿ ಇನ್ನು ಜನಾಂದೋಲನಗಳು ಹುಟ್ಟಲಾರದು ಎಂಬಂತಹ ಸ್ಥಿತಿಯಲ್ಲಿ ಒಂದು ನದಿಗಾಗಿ, ಘಟ್ಟದ ಪರಿಸರದ ಹಿತಕ್ಕಾಗಿ, ಮಲೆನಾಡಿನ ಜನಜೀವನದ ಭವಿಷ್ಯದ ಕಾಳಜಿಗಾಗಿ ಹೊಸ ತಲೆಮಾರಿನ ಚಳವಳಿಯೊಂದು ಅತ್ಯಲ್ಪ ಕಾಲದಲ್ಲಿ ವ್ಯಾಪಕವಾಗಿ ಹರಡಿದ್ದು, ವಯೋಮಾನ, ಲಿಂಗಭೇದ, ಸ್ಥಾನಮಾನ, ಮೇಲುಕೀಳು, ಜಾತಿ, ಧರ್ಮ ಮುಂತಾದ ಸಾಮಾಜಿಕ ತರತಮಗಳನ್ನು ಮೀರಿ ಇಡೀ ಮಲೆನಾಡಿನ ಒಕ್ಕೊರಲ ದನಿಯಾಗಿ ಶರಾವತಿ ಉಳಿಸಿ ಎಂಬುದು ಘಟ್ಟದ ಉದ್ದಕ್ಕೂ ಮೊಳಗತೊಡಗಿದೆ.
ಡಿಸಿಎಂ ಅವರ ಡಿಪಿಆರ್ ತಯಾರಿ ಆದೇಶ ಹೊರಬೀಳುತ್ತಿದ್ದಂತೆ ಒಂದು ವಾಟ್ಸಪ್ ಗುಂಪಿನ ಕೆಲವು ಜನಪರ ವ್ಯಕ್ತಿಗಳ ನಡುವಿನ ಚರ್ಚೆಯಾಗಿ ಆರಂಭವಾದ ಶರಾವತಿ ನದಿ ಉಳಿಸುವ ಕಾಳಜಿ, ‘ಶರಾವತಿ ನದಿಗಾಗಿ ನಾವು’ ಎಂಬ ಪ್ರತ್ಯೇಕ ವಾಟ್ಸಪ್ ಗುಂಪಿನ ಮೂಲಕ ಇಡೀ ಮಲೆನಾಡು ಮತ್ತು ಮಲೆನಾಡಿನ ಪರಿಸರದ ಕಾಳಜಿ ಹೊಂದಿದ ನಾಡಿನ ಉದ್ದಗಲದ ವ್ಯಕ್ತಿಗಳ ಸಂವಾದದ ಮೂಲಕ ಹೋರಾಟದ ರೂಪುರೇಷೆ ಪಡೆಯಿತು. ನಂತರ ಸಾಗರದಲ್ಲಿ ನಡೆದ ಮೊದಲ ಸಮಾಲೋಚನಾ ಸಭೆಯ ಬಳಿಕ ಕೇವಲ ಹತ್ತೇ ದಿನದಲ್ಲಿ ಇಡೀ ಮಲೆನಾಡಿನುದ್ದಕ್ಕೂ ಪ್ರತಿ ಗ್ರಾಮ ಪಂಚಾಯ್ತಿಯಿಂದ ಜಿಲ್ಲಾ ಕೇಂದ್ರದವರೆಗೆ ಯುವಕ-ಯುವತಿಯರು, ಸಾಮಾಜಿಕ ಕಾರ್ಯಕರ್ತರು, ಪಕ್ಷಭೇದ ಮರೆತು ರಾಜಕೀಯ ಮುಖಂಡರು, ಕಾರ್ಯಕರ್ತರು, ಪರಿಸರ ಹೋರಾಟಗಾರರು, ವಿವಿಧ ಸಂಘಸಂಸ್ಥೆಗಳ ಮುಖಂಡರು ಸ್ವಯಂಪ್ರೇರಿತ ಜನಾಂದೋಲನವಾಗಿ ಚಾಚಿಕೊಂಡಿದೆ. ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ಬಳಕೆಯ ಮೂಲಕ ಸಂಘಟನೆಯನ್ನು ಇಡೀ ಶಿವಮೊಗ್ಗ ಜಿಲ್ಲೆಯ ಮೂಲೆಮೂಲೆಗೆ ವಿಸ್ತರಿಸಿರುವ ಸಂಘಟಕರು, ಶರಾವತಿ ನದಿಗಾಗಿನ ಕೂಗನ್ನು ಜನಮಾನಸದ ಕೂಗನ್ನಾಗಿ ಪರಿವರ್ತಿಸುವಲ್ಲಿ ಆರಂಭಿಕ ಯಶಸ್ಸು ಕಂಡಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದ ಗೌರವಾಧ್ಯಕ್ಷರಾದ ನಾ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಈ ಇಡೀ ಹೋರಾಟದ ಮುಂಚೂಣಿಯಲ್ಲಿದ್ದುಕೊಂಡು ಅದರ ದಿಕ್ಕುದೆಸೆಗಳನ್ನು ನಿರ್ಧರಿಸುತ್ತಿರುವವರು ಪತ್ರಕರ್ತರು ಮತ್ತು ಪರಿಸರವಾದಿಗಳು ಎಂಬುದು!
ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಧಾರ್ಮಿಕ ಮುಖಂಡರು, ಮಠಮಾನ್ಯಗಳು, ಪಕ್ಷಾತೀತವಾಗಿ ರಾಜಕೀಯ ನಾಯಕರು ಕೂಡ ಹೋರಾಟಕ್ಕೆ ಕೈಜೋಡಿಸಿದ್ದು, ನಿತ್ಯವೂ ಜಿಲ್ಲೆಯ ಹತ್ತಾರು ಕಡೆ ಪ್ರತಿಭಟನೆ, ಸಮಾಲೋಚನಾ ಸಭೆಗಳು ನಡೆಯುತ್ತಲೇ ಇವೆ. ಜಿಲ್ಲಾಧಿಕಾರಿ ಮೂಲಕ ನಿತ್ಯವೂ ನೂರಾರು ಮನವಿಪತ್ರಗಳು, ಪೋಸ್ಟ್ ಕಾರ್ಡ್ ಚಳವಳಿಯ ಮೂಲಕ ಒಂದಿಲ್ಲೊಂದು ಕಡೆಯಿಂದ ನೂರಾರು ಪತ್ರಗಳು ಮುಖ್ಯಮಂತ್ರಿಗಳ ಕಚೇರಿ ತಲುಪುತ್ತಿವೆ. ಬೈಕ್ ರ್ಯಾಲಿ, ಪ್ರತಿಭಟನಾ ಮೆರವಣಿಗೆ, ಬೀದಿ ನಾಟಕ, ಅಣುಕು ಪ್ರದರ್ಶನ, ಧರಣಿ, ಪಾದಯಾತ್ರೆಗಳು ನಡೆಯುತ್ತಿವೆ.
ಕನ್ನಡದ ಪ್ರಮುಖ ಲೇಖಕರಾದ ಕುಂ ವೀರಭದ್ರಪ್ಪ, ಚಿಂತಕ ಹಾಗೂ ಭದ್ರಾ ಮೇಲ್ದಂಡೆ ಹೋರಾಟದ ರೂವಾರಿ ಡಾ. ಬಂಜಗೆರೆ ಜಯಪ್ರಕಾಶ್, ಚರಕ ಪ್ರಸನ್ನ, ಪರಿಸರವಾದಿ ಅ ನ ಯಲ್ಲಪ್ಪ ರೆಡ್ಡಿ, ನೀನಾಸಂ ಕೆ ವಿ ಅಕ್ಷರ, ಚಿದಂಬರ ರಾವ್ ಜಂಬೆ, ಲೇಖಕಿ ಎಲ್ ಸಿ ಸುಮಿತ್ರಾ, ಪ್ರೊ ರಾಜೇಂದ್ರ ಚೆನ್ನಿ, ಡಾ ಶ್ರೀಕಂಠ ಕೂಡಿಗೆ, ಅರ್ಥಶಾಸ್ತ್ರಜ್ಞ ಪ್ರೊ. ಬಿ ಎಂ ಕುಮಾರಸ್ವಾಮಿ, ಚಿತ್ರ ನಿರ್ದೇಶಕ ಕೇಸರಿ ಹರವು, ಕವಿ ಎಲ್ಸಿ ನಾಗರಾಜ್ ಸೇರಿದಂತೆ ಹಲವು ಸಾಂಸ್ಕೃತಿಕ ವ್ಯಕ್ತಿಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆ ಪೈಕಿ ಹಲವರು ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ ಕಿಮ್ಮನೆ ರತ್ನಾಕರ, ಶಾಸಕರಾದ ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಮಾಜಿ ಶಾಸಕ ಮಧು ಬಂಗಾರಪ್ಪ ಸೇರಿದಂತೆ ಹಲವು ರಾಜಕಾರಣಿಗಳು ಕೂಡ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ರೈತ ನಾಯಕರಾದ ಕಡಿದಾಳು ಶಾಮಣ್ಣ, ಕೆ ಟಿ ಗಂಗಾಧರ್ ಕೂಡ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೆ, ಜೆಡಿಎಸ್ ಮತ್ತು ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಕೂಡ ಅಧಿಕೃತವಾಗಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ. ದಲಿತ ಸಂಘಟನೆ, ಮಹಿಳಾ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ಪತ್ರಕರ್ತರು ಸೇರಿದಂತೆ ವಿವಿಧ ವೃತ್ತಿ ಸಂಘಟನೆಗಳು, ವಿವಿಧ ಜಾತಿ-ಜನಾಂಗ ಮತ್ತು ಧಾರ್ಮಿಕ ಸಂಘ-ಸಂಸ್ಥೆಗಳು ಕೂಡ ಹೋರಾಟದ ಪರ ದನಿ ಮೊಳಗಿಸಿವೆ. ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದಿವೆ.
ಪ್ರಮುಖವಾಗಿ ಜಿಲ್ಲೆಯ ಸುಮಾರು 28 ವೀರಶೈವ ಲಿಂಗಾಯತ ಮಠಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದು, ಹಲವು ಕಡೆ ಸ್ವಾಮೀಜಿಗಳೇ ಹೋರಾಟದ ಮಾರ್ಗದರ್ಶಕರಾಗಿದ್ದಾರೆ. ಹೊಸನಗರ, ಶಿಕಾರಿಪುರ, ಸೊರಬ ಭಾಗದಲ್ಲಿ ವಿವಿಧ ಸ್ವಾಮಿಗಳು ನಿತ್ಯ ಸಮಾಲೋಚನಾ ಸಭೆಗಳ ಮೂಲಕ ಹೋರಾಟದ ರೂಪುರೇಷೆಗಳನ್ನು ಚರ್ಚಿಸುತ್ತಿದ್ದಾರೆ. ಸಂಘಟನಾ ಸಮಿತಿ ಮತ್ತು ಸಂಚಾಲಕರು ನಿತ್ಯ ವಿವಿಧ ಹೋಬಳಿ ಕೇಂದ್ರ, ಪಂಚಾಯ್ತಿ ಕೇಂದ್ರಗಳಿಗೆ ಸುತ್ತಿ ನಿರಂತರ ಸಭೆಗಳನ್ನು ನಡೆಸುವ ಮೂಲಕ ಹೋರಾಟವನ್ನು ತಳಮಟ್ಟಕ್ಕೆ ತಲುಪಿಸುವ ಮತ್ತು ಆ ಮೂಲಕ ಒಂದು ಚಳವಳಿಯ ಸ್ವರೂಪ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಮತ್ತೊಂದು ಕಡೆ, ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದ ಆಗ್ರಹದಂತೆ, ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಕೂಡ ಶರಾವತಿ ನದಿ ನೀರು ಬೆಂಗಳೂರಿಗೆ ಒಯ್ಯುವುದರ ವಿರುದ್ಧ ನಿರ್ಣಯ ಅಂಗೀಕರಿಸಿದ್ದು, ಶರಾವತಿ ನದಿಯ ಲಿಂಗನಮಕ್ಕಿ ಅಣೆಕಟ್ಟೆಯಿಂದ ಯಾವುದೇ ನೀರನ್ನು ಬೆಂಗಳೂರಿಗೆ ಒಯ್ಯಬಾರದು ಮತ್ತು ಜಿಲ್ಲೆಯ ಸಮಗ್ರ ಕುಡಿಯುವ ನೀರು ಸರಬರಾಜು ಮತ್ತು ನೀರಾವರಿಗಾಗಿ ಆ ನೀರು ಬಳಕೆಗೆ ಡಿಪಿಆರ್ ತಯಾರು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ. ಇದೇ ಮಾದರಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಗ್ರಾಮ ಪಂಚಾಯ್ತಿಗಳಲ್ಲೂ ನಿರ್ಣಯ ಕೈಗೊಳ್ಳಬೇಕು ಎಂಬ ಒಕ್ಕೂಟದ ಆಗ್ರಹಕ್ಕೆ ಪೂರಕ ಸ್ಪಂದನೆ ವ್ಯಕ್ತವಾಗಿದ್ದು, ಸಾಗರ ತಾಲೂಕಿನ ಆವಿನಹಳ್ಳಿ ಸೇರಿದಂತೆ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಈಗಾಗಲೇ ನಿರ್ಣಯ ಕೈಗೊಳ್ಳಲಾಗಿದೆ.
ಕೂಡಲೇ ಸರ್ಕಾರ ಶರಾವತಿ ನೀರು ಬೆಂಗಳೂರಿಗೆ ತಿರುಗಿಸುವ ಪ್ರಸ್ತಾವನ್ನು ಕೈಬಿಡಬೇಕು, ಡಿಪಿಆರ್ ಆದೇಶ ವಾಪಸು ಪಡೆಯಬೇಕು ಹಾಗೂ ಶರಾವತಿ ನೀರನ್ನು ನದಿ ತಟದ ಹಳ್ಳಿಗಳೂ ಸೇರಿದಂತೆ ಇಡೀ ಶಿವಮೊಗ್ಗ ಜಿಲ್ಲೆಯ ಕುಡಿಯುವ ನೀರು ಮತ್ತು ನೀರಾವರಿಗಾಗಿ ಡಿಪಿಆರ್ ರೂಪಿಸಲು ಆದೇಶಿಸಬೇಕು ಎಂಬ ಎರಡು ಬೇಡಿಕೆ ಮುಂದಿಟ್ಟುಕೊಂಡು ಜು.10ರಂದು ಶಿವಮೊಗ್ಗ ಜಿಲ್ಲಾ ಬಂದ್ ಕರೆ ನೀಡಿದ್ದು, ಈಗಾಗಲೇ ಜಿಲ್ಲೆಯ ವಿವಿಧ ಸಂಚಾರಿ ವಾಹನ ಮಾಲೀಕರ ಮತ್ತು ಚಾಲಕರ ಸಂಘಟನೆಗಳು, ಶಾಲಾ ಕಾಲೇಜು ಆಡಳಿತ ಮಂಡಳಿಗಳು, ವರ್ತಕರ ಸಂಘಟನೆಗಳು ಸೇರಿದಂತೆ ಬಹುತೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಜಿಲ್ಲೆಯ ಪರಿಸರ ಮತ್ತು ನದಿ ಉಳಿವಿಗಾಗಿ ಸ್ವಯಂಪ್ರೇರಿತ ಬಂದ್ ನಡೆಸುವುದಾಗಿ ಘೋಷಿಸಿವೆ.
ಶರಾವತಿ ನದಿಯನ್ನು ಅದರ ಸದ್ಯದ ಪ್ರಕೃತಿದತ್ತ ಸ್ಥಿತಿಯನ್ನು ಯಥಾ ಸ್ಥಿತಿಯಲ್ಲಿ ಉಳಿಸಿಕೊಳ್ಳದೇ ಹೋದರೆ, ಆ ನೀರನ್ನು 450 ಕಿ.ಮೀ ದೂರದ ಬೆಂಗಳೂರಿಗೆ ಹರಿಸುವ ಯೋಜನೆ ಕಾರ್ಯಗತವಾದರೆ ಅದು ಅತ್ಯಂತ ಅವೈಜ್ಞಾನಿಕ ಯೋಜನೆಯಾಗಲಿದೆ. ಅದಕ್ಕಾಗಿ ಮೊದಲ ಹಂತದಲ್ಲಿ 12500 ಕೋಟಿ ವೆಚ್ಚ ಮಾಡುವುದು ಜನರ ತೆರಿಗೆ ಹಣವನ್ನು ಗುತ್ತಿಗೆದಾರರ ಲಾಬಿ ಮತ್ತು ಸಿಮೆಂಟ್ ಮತ್ತು ಉಕ್ಕಿನ ಲಾಬಿ ದೋಚಲು ರಹದಾರಿ ನೀಡಿದಂತೆ, ಮುಖ್ಯವಾಗಿ ನದಿ ಹರಿವಿನಲ್ಲಿ ಯಾವುದೇ ವ್ಯತ್ಯಯವಾದರೆ ಅದು ಲಿಂಗನಮಕ್ಕಿಯಿಂದ ಹೊನ್ನಾವರದವರೆಗಿನ ನದಿಯ ಹರಿವಿನುದ್ದಕ್ಕೂ ಇರುವ ಮೀನುಗಾರರು ಬದುಕು ಮತ್ತು ನದಿ ಪಾತ್ರ ಹಾಗೂ ನದಿಯಾಳದ ಜೀವ ಸಂಕುಲಗಳಿಗೆ ಕುತ್ತು ತರಲಿದೆ. ಈಗಾಗಲೇ ನದಿಯ ತಟದ ಹಳ್ಳಿಗಳೂ ಸೇರಿದಂತೆ ಸಾಗರ ತಾಲೂಕು ಸೇರಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತಲೆದೋರಿದೆ. ಜೊತೆಗೆ ಯಾವುದೇ ಬಗೆಯ ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ, ಜಿಲ್ಲೆಯ ಸುಮಾರು 3.5 ಲಕ್ಷ ಎಕರೆ ಒಣ ಭೂಮಿಗೆ(ಬಹುತೇಕ ಶರಾವತಿ ಕಣಿವೆಯ ಸರಣಿ ಅಣೆಕಟ್ಟುಗಳ ಸಂತ್ರಸ್ತರ ಭೂಮಿ) ನೀರು ಹರಿಸಲು ಸಮಗ್ರ ನೀರಾವರಿ ಯೋಜನೆ ರೂಪಿಸಬೇಕು ಎಂಬುದು ನಮ್ಮ ಬೇಡಿಕೆ. ಹಾಗಾಗಿ ಬೆಂಗಳೂರಿಗೆ ನೀರು ಕೊಡುವ ಪ್ರಶ್ನೆಯೇ ಉದ್ಭವಿಸದು ಎಂಬುದು ಒಕ್ಕೂಟದ ಸಂಚಾಲಕರಲ್ಲಿ ಒಬ್ಬರಾದ ಅಖಿಲೇಶ್ ಚಿಪ್ಪಳಿ ಅವರ ವಾದ.
ಹಾಗೇ, ಶರಾವತಿ ನದಿಯೊಂದಿಗೆ ಇಡೀ ಪಶ್ಚಿಮಘಟ್ಟದ, ಮಲೆನಾಡಿನ ಜನಜೀವನ ಮತ್ತು ಪರಿಸರದ ಭವಿಷ್ಯ ನಿಂತಿದೆ. ಇಂತಹ ನದಿಯನ್ನು ಕಳೆದುಕೊಂಡರೆ ಮಲೆನಾಡು ತನ್ನ ಆತ್ಮವನ್ನೇ ಕಳೆದುಕೊಂಡಂತೆ. ಇದು ಮಲೆನಾಡಿಗರ ಅಸ್ತಿತ್ವದ ಮತ್ತು ಅಸ್ಮಿತೆಯ ಪ್ರಶ್ನೆ. ಶರಾವತಿ ಎಂದರೆ ಮಲೆನಾಡಿನ ಹೆಗ್ಗುರುತು. ಹಾಗಾಗಿ ಆ ನದಿ ಉಳಿಸಿಕೊಳ್ಳಲು ಮತ್ತು ಇಡೀ ಮಲೆನಾಡಿನ ನದಿ, ಕಣಿವೆ, ಪರಿಸರ, ಜೀವ ಜಗತ್ತು ಇರುವುದೇ ತಮ್ಮ ಭೋಗಕ್ಕೆ ಎಂಬ ಧೋರಣೆಯ ಹಿತಾಸಕ್ತಿಗಳಿಗೆ ಯಾವ ಕಾರಣಕ್ಕೂ ಇಲ್ಲಿ ಅವಕಾಶ ನೀಡಬಾರದು. ಆ ದಿಸೆಯಲ್ಲಿ ಶರಾವತಿ ಉಳಿಸಿ ಹೋರಾಟಕ್ಕೆ ಎಲ್ಲ ಲೇಖಕರು, ಹೋರಾಟದ ನೆಲದ ಜನರು ದನಿಗೂಡಿಸಬೇಕು ಎಂದು ಸಾಹಿತಿ ಕುಂ ವೀರಭದ್ರಪ್ಪ ಬಹಿರಂಗ ಕರೆ ಕೊಟ್ಟಿದ್ದಾರೆ.
ಈ ನಡುವೆ, ಶರಾವತಿ ಕಣಿವೆಯಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಬಗ್ಗೆ 2013ರಲ್ಲಿ ವರದಿ ನೀಡಿದ ಬಿ ಎನ್ ತ್ಯಾಗರಾಜ್ ಸಮಿತಿಯಲ್ಲಿ ಒಬ್ಬರಾಗಿದ್ದರು ಎನ್ನಲಾಗಿದ್ದ ಪರಿಸರವಾದಿ ಮತ್ತು ನಿವೃತ್ತ ಅಧಿಕಾರಿ ಅ ನ ಯಲ್ಲಪ್ಪ ರೆಡ್ಡಿ ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಾವು ಸಮಿತಿಯಲ್ಲಿ ಇರಲೇ ಇಲ್ಲ ಎಂದಿದ್ದು, ಈ ಯೋಜನೆ ಸಂಪೂರ್ಣವಾಗಿ ಹಣ ಮಾಡುವ ಯೋಜನೆ ವಿನಃ ಮತ್ತೇನಲ್ಲ, ಶರಾವತಿಯ ನೀರು ತರುವುದು ಮೂರ್ಖತನವಷ್ಟೇ. ನಾನು ಈ ವಿಷಯದಲ್ಲಿ ಮಲೆನಾಡಿನ ಜನರ ಹೋರಾಟದ ಪರ ಇದ್ದೇನೆ ಎಂದಿದ್ದಾರೆ.
ಒಟ್ಟಾರೆ ಮಲೆನಾಡಿಗರ ಈ ಹೋರಾಟಕ್ಕೆ ಬೆಂಗಳೂರಿಗರೂ ಸೇರಿದಂತೆ ರಾಜ್ಯದ ಮೂಲೆಮೂಲೆಗಳ ಬೆಂಬಲ ದೊರೆಯುತ್ತಿದ್ದು, ಹೋರಾಟ ಕ್ಷಿಪ್ರಗತಿಯಲ್ಲಿ ದೊಡ್ಡ ಮಟ್ಟದ ಜನಾಂದೋಲನವಾಗಿ ಹೊರಹೊಮ್ಮಿದೆ. ಈ ಹೋರಾಟದ ಹಿಂದಿನ ಜನಾಕ್ರೋಶದ ಮೂಲವಿರುವುದು ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಶರಾವತಿ ನದಿಯ ಏಳು ಜಲಾಶಯಗಳೂ ಸೇರಿದಂತೆ ಕೇವಲ ನೂರು ಕಿ.ಮೀ ಸುತ್ತಳತೆಯಲ್ಲಿ ಹತ್ತಕ್ಕೂ ಹೆಚ್ಚು ಜಲಾಶಯಗಳನ್ನು ಕಟ್ಟಿ ಜನರ ಬದುಕನ್ನು ಮತ್ತೆ ಮತ್ತೆ ಮುಳುಗಿಸಿರುವುದು, ಮುಳಗಡೆ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ, ಪುನರ್ವಸತಿಗಳನ್ನು ಮಾಡದೇ ವಂಚಿಸಿದ್ದು ಮತ್ತು ವಿವಿಧ ಕಾನೂನು, ಆದೇಶಗಳ ಮೂಲಕ ಸಂತ್ರಸ್ತರ ಬದುಕನ್ನು ನಿರಂತರವಾಗಿ ಸಂಕಷ್ಟಕ್ಕೆ ತಳ್ಳಿದ್ದು. ಆ ನಿರಂತರ ಐತಿಹಾಸಿಕ ಅನ್ಯಾಯಗಳಿಂದ ರೋಸಿದ ಜನ ಈಗ ಶರಾವತಿಯನ್ನು ತಮ್ಮಿಂದ ಕಿತ್ತುಕೊಳ್ಳಲಾಗುತ್ತಿದೆ ಎಂಬುದನ್ನು ಕೇಳಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದಾರೆ.
90ರ ದಶಕದ ಗಣಿಗಾರಿಕೆ ವಿರುದ್ಧದ ಹೋರಾಟ, 50ರ ದಶಕದ ಕಾಗೋಡು ಚಳವಳಿಯನ್ನು ಕಂಡ ನೆಲದಲ್ಲಿ ಇದೀಗ ನದಿ ಮತ್ತು ಪರಿಸರದ ಉಳಿವಿಗಾಗಿನ ಕೂಗು ಮೊಳಗತೊಡಗಿದೆ. ಆದರೆ, ಇದೀಗ ಆ ಹೋರಾಟ ಕೇವಲ ಶರಾವತಿ ನದಿಗಾಗಿನ ಹೋರಾಟವಾಗಿ ಮಾತ್ರ ಉಳಿದಿಲ್ಲ, ಮಲೆನಾಡಿಗರ ಮೇಲೆ ತಮ್ಮ ತೀರ್ಮಾನಗಳನ್ನು ಹೇರುವ, ಮಲೆನಾಡಿನ ವನ ಮತ್ತು ಜನರನ್ನು ತಮ್ಮ ಮನಸೋಇಚ್ಛೆ ಬಳಸಿ ಬಿಸಾಡುವ ರಾಜಧಾನಿಯ ಪ್ರಭಾವಿಗಳ, ಅಧಿಕಾರಸ್ಥರ ದಬ್ಬಾಳಿಕೆಯ ನೀತಿಯ ವಿರುದ್ಧದ ಜನಾಕ್ರೋಶವಾಗಿ ಬದಲಾಗಿದೆ. ಹಾಗಾಗಿ ಭವಿಷ್ಯದಲ್ಲಿ ಹೋರಾಟ ಪಡೆಯುವ ತಿರುವು ಕುತೂಹಲ ಮೂಡಿಸಿದೆ!