ಪುತ್ತೂರು: ಮೂರು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರದ ದುರ್ಘಟನೆ ನಡೆದಿದೆ ಎನ್ನಲಾಗಿದ್ದು, ಇದೀಗ ವಾಟ್ಸಪ್ ಮೂಲಕ ವೀಡಿಯೊ ವೈರಲ್ ಆದ ನಂತರವಷ್ಟೇ ಈ ಪ್ರಕರಣ ಬೆಳಕಿಗೆ ಬಂದಿರುವುದು ಗೊತ್ತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮೂರ್ನಾಲ್ಕು ಮಂದಿ ಯುವಕರು ಯುವತಿಯೊಬ್ಬಳ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದರ ವೀಡಿಯೊ ತುಣುಕು ವೈರಲ್ ಆಗಿದ್ದನ್ನು ಗಮನಿಸಿದ ದ.ಕ.ಪೊಲೀಸರು ಸ್ವಯಂಪ್ರೇರಿತರಾಗಿ ತನಿಖೆ ನಡೆಸಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾಗಿ ತಿಳಿದುಬಂದಿದೆ.
ಯುವತಿ ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದಾಳೆ. ಆರೋಪಿಗಳೂ ಅದೇ ಕಾಲೇಜಿನಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಾರ್ಚ್ ತಿಂಗಳ ಕೊನೆಯ ವಾರದ ಒಂದು ಮಧ್ಯಾಹ್ನ, ತನ್ನ ಜೊತೆ ಏನೋ ಮಾತನಾಡಬೇಕಿದೆ ಎಂದು ಹೇಳಿ ಪುಸಲಾಯಿಸಿ ಯುವತಿಯನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದಾನೆ ಆರೋಪಿ ಸುನೀಲ. ಅವಳ ಜೊತೆಯಲ್ಲಿ ತನ್ನ ಸ್ನೇಹಿತರಾದ ಪ್ರಜ್ವಲ್ ಮತ್ತು ಪ್ರಕೃತ್ ಎಂಬುವವರನ್ನು ಸೇರಿಸಿಕೊಂಡು ಕಾರ್ ಚಾಲಕನ ಮುಖಾಂತರ ಒಂದು ನಿರ್ಜನ ಪ್ರದೇಶಕ್ಕೆ ಯುವತಿಯನ್ನು ಒಯ್ದಿದ್ದಾನೆ. ಅಲ್ಲಿ ನಾಲ್ಕೈದು ಮಂದಿ ಯುವಕರು ಸೇರಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಯುವತಿ ಪೊಲೀಸರಿಗೆ ತಿಳಿಸಿದ್ದಾಳೆಂದು ವರದಿಯಾಗಿದೆ.
ವೀಡಿಯೊ ಪ್ರಸಾರ ಮತ್ತು ಜೀವಬೆದರಿಕೆ ಒಡ್ಡಿದ್ದ ಆರೋಪಿಗಳು
ಅಷ್ಟೇ ಅಲ್ಲ, ಈ ಘಟನೆಯ ಬಗ್ಗೆ ಯಾರಿಗೂ ಹೇಳಬಾರದೆಂದು ಆರೋಪಿಗಳು ಜೀವಬೆದರಿಕೆ ಒಡ್ಡಿದ್ದರು ಮತ್ತು ಈ ವಿಷಯವನ್ನು ಯಾರಿಗಾದರೂ ತಿಳಿಸಿದ್ದೇ ಆದಲ್ಲಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುವುದಾಗಿಯೂ ಹೆದರಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಈ ಕಾರಣದಿಂದಾಗಿ ಸಾಕಷ್ಟು ಹೆದರಿದ್ದ ನೊಂದ ವಿದ್ಯಾರ್ಥಿನಿ, ನಡೆದ ಘಟನೆಯ ಬಗ್ಗೆ ಮಾತನಾಡದೆ ಈವರೆಗೂ ಮೌನ ವಹಿಸಿದ್ದಾಗಿ ಹೇಳಿಕೊಂಡಿದ್ದಾಳೆ. ಯುವತಿ ದಲಿತ ಸಮುದಾಯಕ್ಕೆ ಸೇರಿದವಳಾಗಿದ್ದು ಈ ಕುರಿತು ಇಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಐದು ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 341 ಮತ್ತು 376 (D) ಹಾಗೂ ಎಸ್ ಸಿ/ಎಸ್ ಟಿ ದೌರ್ಜನ್ಯ ನಿಷೇಧ ಕಾಯಿದೆ 2015ರ ಸೆಕ್ಷನ್ 3(1) (w) (i) (ii) ಮತ್ತು 3 (2) (v) ಜೊತೆಯಲ್ಲಿ ಐಟಿ ಕಾಯಿದೆಯ ಸೆಕ್ಷನ್ 66E, 67A ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಬಂಧನದ ಅಪರಾಧಕ್ಕಾಗಿ ಐಪಿಸಿ 341 ಮತ್ತು 376 (D) ಸೆಕ್ಷನ್ ಅನ್ನು ಸಾಮೂಹಿಕ ಅತ್ಯಾಚಾರದ ಅಪರಾಧದ ಪ್ರಕರಣದಲ್ಲಿ ದಾಖಲಿಸಲಾಗುತ್ತದೆ.
ಎಸ್ ಸಿ/ಎಸ್ ಟಿ ದೌರ್ಜನ್ಯ ನಿಷೇಧ ಕಾಯ್ದೆ ಅನ್ವಯ
ಯಾವುದೇ ದಲಿತ ಮಹಿಳೆಯನ್ನು ಆಕೆ ಎಸ್ ಸಿ/ಎಸ್ ಟಿ ಜಾತಿಗೆ ಸೇರಿದವಳೆಂದು ತಿಳಿದೂ, ಆಕೆಯ ಒಪ್ಪಿಗೆಯಿಲ್ಲದೆ ಉದ್ದೇಶಪೂರ್ವಕವಾಗಿ ಅವಳನ್ನು ಲೈಂಗಿಕವಾಗಿ ಸ್ಪರ್ಶಿಸಿದರೆ ಅಂತಹ ಅಪರಾಧವು ಎಸ್ ಸಿ/ಎಸ್ ಟಿ ದೌರ್ಜನ್ಯ ನಿಷೇಧ ಕಾಯ್ದೆ 2015ರ ಸೆಕ್ಷನ್ 3 (1) (w) (i) ಅಡಿ ದಾಖಲಾಗುತ್ತದೆ. ಎಸ್ ಸಿ/ಎಸ್ ಟಿ ಜಾತಿಗೆ ಸೇರಿದ ಮಹಿಳೆಗೆ ಆಕೆ ಆ ಜಾತಿಗೆ ಸೇರಿದವಳೆಂದು ತಿಳಿದೂ ಲೈಂಗಿಕ ಸೂಚಕ ಪದಬಳಕೆ, ಕೃತ್ಯ ಅಥವಾ ಸನ್ನೆಗಳನ್ನು ಮಾಡಿದರೆ ಅದನ್ನು ಅಪರಾಧವೆಂದು ಇದೇ ಕಾಯ್ದೆಯ ಸೆಕ್ಷನ್ 3 (1) (w) (iii) ಗುರುತಿಸುತ್ತದೆ. ಈ ಕಾಯ್ದೆಯ ಸೆಕ್ಷನ್ 3 (2) (v) ರ ಅನ್ವಯ ಎಸ್ ಸಿ/ಎಸ್ ಟಿ ಜಾತಿಗೆ ಸೇರಿದ ವ್ಯಕ್ತಿಯ ವಿರುದ್ಧ, ಅವನು/ಳು ಆ ಜಾತಿಗೆ ಸೇರಿದವನೆ/ಳೆಂದು ತಿಳಿದೂ ಎಸಗುವ 10 ವರ್ಷಗಳಿಗೂ ಹೆಚ್ಚು ಕಾರಾಗೃಹ ಶಿಕ್ಷೆ ವಿಧಿಸಬಹುದಾದ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
ಯಾವುದೇ ವ್ಯಕ್ತಿಯ ದೇಹದ ಖಾಸಗಿ ಭಾಗಗಳನ್ನು ಸೆರೆಹಿಡಿದು ಪ್ರಸಾರ ಮಾಡುವುದರ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಲೈಂಗಿಕ ವೀಡಿಯೊ ವಗೈರೆಗಳನ್ನು ಹಂಚುವುದರ ವಿರುದ್ಧ ದಾಖಲಿಸಿಕೊಳ್ಳಲು ಐಟಿ ಕಾಯ್ದೆಯ ಸೆಕ್ಷನ್ 66E, 67A ಬಳಕೆಯಾಗುತ್ತವೆ.
ಐವರು ಆರೋಪಿಗಳೀಗ ಪೊಲೀಸರ ವಶದಲ್ಲಿ…
ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿದ್ದರೆನ್ನಲಾದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶೇಷ ತಂಡಗಳನ್ನು ರಚಿಸಿದ್ದರು ಮತ್ತು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆಯುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಗೆ ಸಹಕರಿಸಿದವರೂ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು ಅವರ ಹೆಸರುಗಳನ್ನು ಪ್ರಕಟಣೆಯಲ್ಲಿ ಪೊಲೀಸ್ ಇಲಾಖೆ ಬಹಿರಂಗಪಡಿಸಿದೆ. ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆನ್ನಲಾದ ಆರೋಪಿಗಳನ್ನು ಪುತ್ತೂರು ತಾಲ್ಲೂಕಿನ ಸುನೀಲ್ ಮತ್ತು ಗುರುನಂದನ್ ಹಾಗೂ ಬಂಟ್ವಾಳ ತಾಲ್ಲೂಕಿನ ಪ್ರಜ್ವಲ್, ಕಿಶನ್ ಮತ್ತು ಪ್ರಖ್ಯಾತ್ ಎಂದು ಗುರುತಿಸಲಾಗಿದೆ. ಐದೂ ಮಂದಿ ಯುವಕರು 19 ವರ್ಷ ಪ್ರಾಯದವರಾಗಿದ್ದಾರೆಂದು ಹೇಳಲಾಗಿದೆ.
ಬಂಧಿತ ಯುವಕರು ಕಾಲೇಜಿನಲ್ಲಿ ಎಬಿವಿಪಿ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದರೆಂದು ಹೇಳಲಾಗುತ್ತಿದ್ದು ನಿಖರವಾದ ಮಾಹಿತಿಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ!!
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ವೀಡಿಯೊಗಳನ್ನೂ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡದಂತೆ ಮತ್ತು ಯಾರದ್ದೇ ಫೋನ್ ಇಲ್ಲವೇ ಕಂಪ್ಯೂಟರ್ ಗಳಲ್ಲೂ ಬಳಸದಂತೆ, ಉಳಿಸದಂತೆ ಸಾರ್ವಜನಿಕರಲ್ಲಿ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಕೋರಿದ್ದಾರೆ. ಹಾಗೇನಾದರೂ ಯಾರಾದರೂ ಈ ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ಪ್ರಸಾರ ಮಾಡಿದ್ದೇ ಆದಲ್ಲಿ, ಅದು ಐಪಿಸಿ 354 ಸಿ ಹಾಗೂ ಐಟಿ ಕಾಯ್ದೆಯ 66 ಇ ಮತ್ತು 66 ಎ ಅಡಿ ಅಪರಾಧವಾಗಲಿದೆ. ಅಲ್ಲದೆ ಅಂತಹ ವ್ಯಕ್ತಿಗಳು ಮತ್ತು ಗುಂಪುಗಳ ನಿರ್ವಾಹಕರ (ಅಡ್ಮಿನ್) ವಿರುದ್ಧ ಈ ಸೆಕ್ಷನ್ ಗಳನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಬಹಿರಂಗ ಎಚ್ಚರಿಕೆ ನೀಡಿದ್ದಾರೆ.