ಎಲ್ಲ ಧರ್ಮಗಳ ಮೂಲ ಸೆಲೆಯಾದ ಮನುಷ್ಯತ್ವವನ್ನೇ ಮರೆತು ಮತಾಂಧತೆಯ ಅಮಲಿನ ಮೇಲೆ ದೇಶ ಕಟ್ಟಲು ಹೊರಟರೆ ಏನಾಗುತ್ತದೆ ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ತಮ್ಮದೇ ಸಹಪಾಠಿಯ ಮೇಲೆ ಬಿಜೆಪಿ ಮತ್ತು ಅದರ ವಿದ್ಯಾರ್ಥಿ ಸಂಘಟನೆಯ ಯುವಕರು ನಡೆಸಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಚ್ಚಿಬೀಳಿಸುವ ತಾಜಾ ಉದಾಹರಣೆ.
ಹಿಂದುತ್ವದ ಪ್ರಯೋಗಶಾಲೆಯ ಕೇಂದ್ರವೆಂದೇ ಹೆಸರಾಗಿರುವ ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಈ ಕೃತ್ಯ ನಡೆಸಿರುವುದು ಅವರೇ ಚಿತ್ರೀಕರಿಸಿ ವೈರಲ್ ಮಾಡಿರುವ ಅತ್ಯಾಚಾರದ ವೀಡಿಯೋ ಮೂಲಕವೇ ಪೊಲೀಸರಿಗೆ ಗೊತ್ತಾಗಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಐವರು ಆರೋಪಿಗಳನ್ನೂ ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಗಾಣದಮನೆ ಗುರುನಂದನ್(19), ಅರ್ಯಾಪು ಗ್ರಾಮದ ಪಿಲಿಗುಂಡದ ಸುನೀಲ್(19), ಬಂಟ್ವಾಳ ತಾಲೂಕಿನ ಪೆರ್ನೆಯ ಪ್ರಜ್ವಲ್(19) ಮತ್ತು ಕಿಶನ್(19) ಹಾಗೂ ಬರಿಮಾರು ಗ್ರಾಮದ ಬಲ್ಯದ ಪ್ರಖ್ಯಾತ್(19) ಎಂಬುವರೇ ತಮ್ಮದೇ ಸಹಪಾಠಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಕ್ರಿಮಿಗಳು.
ವಿಚಿತ್ರವೆಂದರೆ, ಈ ಎಲ್ಲಾ ಆರೋಪಿಗಳೂ ಎಬಿವಿಪಿ ಎಂಬ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯ ಸಕ್ರಿಯ ಸದಸ್ಯರು ಮತ್ತು ಸಂತ್ರಸ್ತೆ ಕೂಡ ಬಿಜೆಪಿ ನಾಯಕಿಯೊಬ್ಬರ ಪುತ್ರಿ ಎಂಬ ಸಂಗತಿ ಕೂಡ ಬಯಲಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ. ವೀಡಿಯೋದಲ್ಲಿ ಐವರೂ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಪೊಲೀಸರು ಅವರ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಮತ್ತು ಯಾವುದೇ ರಿಯಾಯ್ತಿ ನೀಡದೆ ಅವರಿಗೆ ಉಗ್ರ ಶಿಕ್ಷೆಯಾಗುವಂತೆ ಪೊಲೀಸರು ಒತ್ತಡಗಳಿಗೆ ಮಣಿಯದೆ ದಕ್ಷತೆ ಪ್ರದರ್ಶಿಸಬೇಕು ಎಂಬ ಕೂಗು ಕೂಡ ಕೇಳಿಬಂದಿದೆ.
ಯಾಕೆಂದರೆ, ಬಂಧಿತರಲ್ಲಿ ಪ್ರಮುಖನಾಗಿರುವ ವಿದ್ಯಾರ್ಥಿಯೊಬ್ಬ ಬಿಜೆಪಿ ಸ್ಥಳೀಯ ಶಾಸಕರ ಆಪ್ತನಾಗಿದ್ದು, ಶಾಸಕರು ಆತನ ಹೆಗಲ ಮೇಲೆ ಕೈಹಾಕಿಕೊಂಡು ನಿಂತು ಕ್ಯಾಮರಾಕ್ಕೆ ಪೋಜು ನೀಡಿರುವ ಫೋಟೋಗಳು ಕೂಡ ವೈರಲ್ ಆಗಿವೆ. ಹಾಗೇ ಅತ್ಯಾಚಾರಿಗಳು ಕೇಸರಿ ಶಾಲು ಹೊದ್ದು, ಬಿಜೆಪಿಯ ಕಮಲ ಚಿಹ್ನೆಯ ಧ್ವಜ ಹಿಡಿದುಕೊಂಡು ನಿಂತಿರುವ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತಮ್ಮದೇ ಹುಡುಗರ ಈ ಪೈಶಾಚಿಕ ಕೃತ್ಯದ ಬಗ್ಗೆ ಹಿಂದೂಗಳ ಪರ ಸದಾ ದೊಡ್ಡಗಂಟಲಿನ ಮಾತನಾಡುವ ಬಿಜೆಪಿ ಸಂಸದರಾದ ದಕ್ಷಿಣ ಕನ್ನಡದ ಸಂಸದ ನಳೀನ ಕುಮಾರ ಕಟೀಲು, ನೆರೆಯ ಉತ್ತರಕನ್ನಡದ ಸಂಸದ ಅನಂತಕುಮಾರ ಹೆಗಡೆ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮಡಿಕೇರಿ-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಈ ಹಿಂದೂ ಹುಡುಗಿಯ ಮೇಲೆ ತಮ್ಮದೇ ಸಂಘಟನೆಯ ಹುಡುಗರು ಎಸಗಿರುವ ಪೈಶಾಚಿಕ ಕೃತ್ಯದ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ? ಅವರ ಮೌನದ ಅರ್ಥವೇನು? ಎಂಬ ಪ್ರಶ್ನೆಗಳೂ ಎದ್ದಿವೆ.
ತಮ್ಮದೇ ಕಾಲೇಜಿನ, ತಮ್ಮದೇ ಹಿಂದುತ್ವವಾದಿ ಬಿಜೆಪಿ ಪಕ್ಷದ ಸದಸ್ಯೆಯ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದೇ ಅಲ್ಲದೆ, ಆ ದೃಶ್ಯವನ್ನು ವೀಡಿಯೋ ಚಿತ್ರೀಕರಣ ಮಾಡಿ ಆಕೆಗೆ ಘಟನೆಯ ಬಗ್ಗೆ ಬಾಯಿ ಬಿಡದಂತೆ ಬೆದರಿಕೆ ಹಾಕಿದ್ದರು. ಒಂದು ವೇಳೆ ಬಾಯಿಬಿಟ್ಟರೆ ಈ ವೀಡಿಯೋವನ್ನು ವೈರಲ್ ಮಾಡುವುದಾಗಿ ಹೆದರಿಸಿದ್ದರು ಎಂಬ ಅಂಶ ಸಂತ್ರಸ್ತೆಯ ಹೇಳಿಕೆಯಲ್ಲಿ ದಾಖಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದು, ಕಳೆದ ಮಾರ್ಚ್ ವೇಳೆಗೆ ನಡೆದ ಘಟನೆಯ ವೀಡಿಯೋವನ್ನು ಇದೀಗ ಆ ದುರುಳರೇ ವೈರಲ್ ಮಾಡಿದ್ದಾರೆ ಎನ್ನಲಾಗಿದೆ. ದಕ್ಷಿಣ ಕನ್ನಡ ಪೊಲೀಸರು ಈಗಾಗಲೆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡದಂತೆ ಸಾರ್ವಜನಿಕ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಲ್ಲದೆ, ಕಾಲೇಜು ಆಡಳಿತ ಮಂಡಳಿ ಐವರು ಹೇಯ ಮೃಗಗಳನ್ನು ಕಾಲೇಜಿನಿಂದ ಅಮಾನತು ಮಾಡಿರುವುದಾಗಿ ಹೇಳಿದೆ. ಈ ನಡುವೆ ಎಂದಿನಂತೆ ಎಬಿವಿಪಿ ಆ ಹುಡುಗರಿಗೂ ತಮ್ಮ ಸಂಘಟನೆಗೂ ಸಂಬಂಧವಿಲ್ಲ ಎಂಬ ಹೇಳಿಕೆ ನೀಡಿದೆ. ಆದರೆ, ದೇಶದ ಯಾವುದೇ ಮೂಲೆಯಲ್ಲಿ ಹಿಂದೂಗಳ ಮೇಲೆ ಯಾವುದೇ ಬಗೆಯ ದಾಳಿ ನಡೆದರೂ ಸಮಸ್ತ ಹಿಂದೂಗಳ ವಾರಸುದಾರಿಕೆಯ ಮಾತನಾಡುವ ಬಿಜೆಪಿ ನಾಯಕರು, ಅದರಲ್ಲೂ ಕರಾವಳಿಗೆ ಬೆಂಕಿ ಹಚ್ಚುವ ಮಾತುಗಳಿಂದಲೇ ಜನಪ್ರಿಯರಾಗಿರುವ ನಳೀನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಹಿಂದೂ ಹುಡುಗಿಯರನ್ನು ಮುಟ್ಟಿದರೆ ಕೈ ಕತ್ತರಿಸಿ ಎಂಬ ಹೇಳಿಕೆಯ ನೀಡಿದ್ದ ಅನಂತಕುಮಾರ ಹೆಗಡೆ ಮಾತ್ರ ಈವರೆಗೆ ಈ ಬಗ್ಗೆ ತುಟಿಬಿಚ್ಚಿಲ್ಲ!
ಜೊತೆಗೆ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಈ ಐದೂ ಮಂದಿ ಗಾಂಜಾ ಸೇವಿಸಿದ್ದರು ಮತ್ತು ಹುಡುಗಿಗೂ ಗಾಂಜಾ ನೀಡಿ ಅಮಲು ಭರಿಸಿ ಈ ಕೃತ್ಯ ಎಸಗಿದ್ದಾರೆ ಎಂದೂ ಕೆಲವು ವರದಿಗಳು ಹೇಳಿವೆ. ಇನ್ನೂ ಕೆಲವು ವರದಿಗಳು ಅಮಲು ಪದಾರ್ಥ ಸೇವಿಸಿರಲಿಲ್ಲ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಹೇಳಿವೆ. ಆದರೆ, ಒಂದಂತೂ ನಿಜ. ಈ ಯುವಕರ ಸಾಮಾಜಿಕ ಜಾಲತಾಣಗಳ ಫೋಟೋಗಳು ಮತ್ತು ಅವರ ಈ ಹಿಂದಿನ ಚಟುವಟಿಕೆಗಳ ಪ್ರಕಾರ ಅವರು ಧರ್ಮಾಂಧತೆಯ, ಕೋಮುವಾದದ ಅಮಲೇರಿಸಿಕೊಂಡಿದ್ದರು. ಅವರ ಮನಸ್ಸಿನಲ್ಲಿ ದ್ವೇಷ ಮತ್ತು ಸೇಡಿನ ಮೂಲಕವೇ ಧರ್ಮ ಕಲ್ಪನೆಯ ವಿಕೃತ ಹಿಂದುತ್ವದ ಅಮಲೇರಿತ್ತು. ಆ ವಿಕೃತಿಯ ಅಮಲೇ ಅವರಿಗೆ ಇಂತಹ ದುರ್ಬಲರ ವಿರುದ್ಧದ ಪುರುಷಹಂಕಾರದ, ಹೇಯ ನಡವಳಿಕೆ ಕುಮ್ಮಕ್ಕು ನೀಡಿರಬಹುದು ಎಂಬ ವಾದಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹಾಗೆ ನೋಡಿದರೆ, ಸನಾತನ ಧರ್ಮ, ಸಂಸ್ಕೃತಿಯ ಹೆಸರು ಹೇಳಿಕೊಂಡೇ ಹಿಂದುತ್ವದ ರಾಜಕಾರಣ ಮಾಡುವ ಬಿಜೆಪಿ ಮತ್ತು ಅದರ ಸಹ ಸಂಘಟನೆಗಳ ಪ್ರಾಬಲ್ಯ ಹೆಚ್ಚಿರುವ ಮತ್ತು ಆ ಪಕ್ಷ ಅಧಿಕಾರದಲ್ಲಿರುವ ಕಡೆಯೇ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಂತಹ ಹೇಯ ಮೃಗೀಯ ಕೃತ್ಯಗಳು ಹೆಚ್ಚುತ್ತಿವೆ ಎಂಬುದು ಗಮನಾರ್ಹ. ಜಾರ್ಖಂಡ್, ಉತ್ತರಪ್ರದೇಶ, ದೆಹಲಿ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಅತ್ಯಾಚಾರ, ಗುಂಪು ಹಲ್ಲೆ(ಮಾಬ್ ಲಿಂಚಿಂಗ್) ಪ್ರಕರಣಗಳು ಅತಿ ಹೆಚ್ಚು ವರದಿಯಾಗುತ್ತಿರುವ ಕಡೆಗಳಲ್ಲಿ ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವವರು ಕೂಡ ಅದೇ ಹಿಂದುತ್ವದ ಅಮಲೇರಿಸಿಕೊಂಡ ವ್ಯಕ್ತಿಗಳೇ ಎಂಬುದು ಆಘಾತಕಾರಿ.
ಇತ್ತೀಚೆಗಷ್ಟೇ ಉತ್ತರಪ್ರದೇಶದ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಸುನೀತಾ ಸಿಂಗ್ ಎಂಬಾಕೆ ಮುಸ್ಲಿಂಮರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲು ಹಿಂದೂಗಳಿಗೆ ಕರೆ ನೀಡಿದ್ದ ವೀಡಿಯೋ ವೈರಲ್ ಆಗಿತ್ತು. ಅದಾದ ನಾಲ್ಕೇ ದಿನದಲ್ಲಿ ಪುತ್ತೂರಿನಲ್ಲಿ ಅವರದ್ದೇ ಸಂಘಟನೆಗೆ ಸೇರಿದವರು ಎನ್ನಲಾದ ಯುವಕರು ಎಸಗಿರುವ ಈ ಮೃಗೀಯ ಕೃತ್ಯದ ವೀಡಿಯೋ ವೈರಲ್ ಆಗಿದೆ. ಅಂದರೆ, ಯಥಾ ರಾಜಾ ತಥಾ ಪ್ರಜಾ ಎಂಬ ಮಾತನ್ನು ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು ಅಕ್ಷರಶಃ ಪಾಲಿಸುತ್ತಿವೆ ಎಂಬುದು ನಿಜವಾಯಿತು ಎಂಬ ಅಭಿಪ್ರಾಯ ಕೂಡ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೊಳಗಾಗಿದೆ. ಅದೇ ಹೊತ್ತಿಗೆ, ತಮ್ಮದೇ ಪಕ್ಷದ ತಳಮಟ್ಟದ ನಾಯಕಿಯೊಬ್ಬರ ಮಗಳ ಮೇಲೆ ತಮ್ಮದೇ ಸಂಘಟನೆಯ ಹುಡುಗರು ನಡೆಸಿರುವ ಇಂತಹ ವಿಕೃತಿಯ ಬಗ್ಗೆ ಮರುಕ ಪಡದ, ಕನಿಷ್ಠ ಎಚ್ಚರಿಕೆಯ ಮಾತುಗಳನ್ನು ನೀಡದ, ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಹುಡುಗರಿಗೆ ಕಿವಿಮಾತು ಹೇಳುವ ಪ್ರಯತ್ನವನ್ನೂ ಮಾಡದ ಬಿಜೆಪಿ ನಾಯಕರ ಬಗ್ಗೆಯೂ ಆಕ್ರೋಶ ವ್ಯಕ್ತವಾಗುತ್ತಿದೆ.
ಅಲ್ಲದೆ, ಕೇಸರಿ ಶಾಲು ಮತ್ತು ಬಾವುಟಗಳು ಮತ್ತು ಹಿಂದುತ್ವದ ಚಿಹ್ನೆಗಳಾಗಿರುವ ಹಣೆಯ ಮೇಲಿನ ತಿಲಕಗಳು ಅತ್ಯಾಚಾರ, ಕೊಲೆ, ಸುಲಿಗೆ, ಗುಂಪು ಹಲ್ಲೆ ನಡೆಸುವ ಸಮಾಜಘಾತುಕ ಶಕ್ತಿಗಳ ಕೈಯಲ್ಲಿ ಸಿಕ್ಕು ಅವರಿಗೆ ರಕ್ಷಣೆ ಒದಗಿಸುತ್ತಿವೆಯೇ ಮತ್ತು ಅವರ ಎಲ್ಲಾ ಸಮಾಜಬಾಹಿರ ಕೃತ್ಯಗಳಿಗೆ, ಅಮಾನುಷ ಚಟುವಟಿಕೆಗಳಿಗೆ ಟ್ರಂಪ್ ಕಾರ್ಡ್ ಆಗಿ ಬಳಕೆಯಾಗುತ್ತಿವೆಯೇ ಎಂಬ ಅನುಮಾನಗಳನ್ನು ಪುತ್ತೂರಿನ ಘಟನೆ ಇನ್ನಷ್ಟು ಗಟ್ಟಿಗೊಳಿಸಿದೆ ಎಂಬುದು ಕೂಡ ದುರಂತವೇ ಸರಿ.
ಆದರೆ, ಮೂಲಭೂತವಾಗಿ ಮನುಷ್ಯತ್ವವನ್ನೇ ಮರೆತು, ಕೇವಲ ದ್ವೇಷ, ಸೇಡು, ದಬ್ಬಾಳಿಕೆಯ ಮೂಲಕವೇ ಹಿಂದುತ್ವವನ್ನು ಕಟ್ಟುವ ಮತ್ತು ಮಹಿಳೆಯರು, ದಲಿತರು, ದುರ್ಬಲರ ಮೇಲೆ ಸವಾರಿ ಮಾಡುವುದೇ ಪುರುಷತ್ವ, ಪೌರುಷ ಎಂಬ ಕಲ್ಪನೆಯನ್ನೆ ಹಿಂದುತ್ವದ ಛಾತಿ ಎಂಬಂತೆ ಬಿಂಬಿಸುವ ಮೂಲಕ ಮತಬ್ಯಾಂಕ್ ರಾಜಕಾರಣದ ದಾಳವಾಗಿ ಧರ್ಮವನ್ನು ಬಳಸಿಕೊಂಡದ್ದರ ಪರಿಣಾಮ ಇದು ಎಂಬುದು ತಳ್ಳಿಹಾಕಲಾದ ಮೂಲ ಸತ್ಯ. ಹಿಂದುತ್ವದ ಪ್ರಯೋಗಶಾಲೆಯಲ್ಲೇ ಆ ಪ್ರಯೋಗದ ಅಂತಿಮ ಫಲಿತಾಂಶ ಈಗ ಸಿಗತೊಡಗಿದೆ ಮತ್ತು ದುರಂತವೆಂದರೆ, ಯಾರು ಹಿಂದುತ್ವದ ಅಸ್ತ್ರವನ್ನೇ ತಮ್ಮ ರಾಜಕೀಯ ಸಾಧನೆಯ ಮೆಟ್ಟಿಲು ಮಾಡಿಕೊಂಡಿದ್ದರೋ ಅದೇ ಜನಗಳೇ ಈಗ ಈ ಫಲದ ರುಚಿ ನೋಡುವಂತಾಗಿರುವುದು!