ದೇಶದಲ್ಲಿ ಬಿಜೆಪಿ-ಆರೆಸ್ಸೆಸ್ ಪ್ರಣೀತ ನಗರ ನಕ್ಸಲರ ಪಟ್ಟಿ ಬೆಳೆಯುತ್ತಿದೆ. ದಲಿತ ಚಿಂತಕರಾದ ಆನಂದ್ ತೇಲ್ತುಂಬ್ಡೆ, ಸತ್ಯನಾರಾಯಣ, ಸಾಹಿತಿ ಗಿರೀಶ್ ಕಾರ್ನಾಡ್ ಮುಂತಾದವರ ನಂತರದಲ್ಲಿ ಇಡೀ ದೇಶದದಲ್ಲಿ ಸಾಮಾಜಿಕ ಸುಧಾರಣೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿರುವು ಅರುಣಾ ರಾಯ್ ಹಾಗೂ ನಿಕಿಲ್ ಡೇಯವರನ್ನೂ ಈಗ ನಗರ ನಕ್ಸಲ್ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಹೆಸರಾಂತ ಸಾಮಾಜಿಕ ಕಾರ್ಯಕರ್ತೆ, ಚಿಂತಕಿ ಅರುಣಾ ರಾಯ್ ತಾವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ದೂರಿದ್ದಾರೆ.
“ರಾಜಾಸ್ತಾನದ ಜೈಪುರದ ವಿಶ್ವನಾಥ ಸಂವಾದ ಕೇಂದ್ರ ಎಂಬ ಆರೆಸ್ಸೆಸ್ ಸಂಘಟನೆಯೊಂದು ಹೊರತಂದಿರುವ “ಕೌನ್ ಹೇ ಅರ್ಬನ್ ನಕ್ಸಲ್? ಎಂಬ ಕಿರುಹೊತ್ತಿಗೆಯನ್ನು ಹೊರತಂದಿದ್ದು, ಅದರಲ್ಲಿ ನಾನು ಮತ್ತು ನಿಖಿಲ್ ಡೇ ಒಳಗೊಂಡಂತೆ ಜನಕಲ್ಯಾಣಕ್ಕಾಗಿ ಕೆಲಸ ಮಾಡುತ್ರಿರುವ ಕಾರ್ಯಕರ್ತರು ಹಾಗೂ ಜನರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತರನ್ನು “ಅರ್ಬನ್ ನಕ್ಸಲ್” ಎಂದು ಹೇಳಲಾಗಿದೆ” ಎಂದು ರಾಯ್ ತಿಳಿಸಿದ್ದಾರೆ. ಹೋರಾಟಗಾರರು, ಪತ್ರಕರ್ತರು, ಶಿಕ್ಷಣ ತಜ್ಞರು ಮತ್ತು ನ್ಯಾಯದ ಪರವಾಗಿ ಧ್ವನಿ ಎತ್ತುತ್ತಿರುವ ದೊಡ್ಡ ಸಮೂಹವನ್ನೇ ನಗರ ನಕ್ಸಲ್ ಎಂದು ಹಣೆಪಟ್ಟಿ ಹಚ್ಚಿ ಪ್ರಚಾರ ಮಾಡಲಾಗುತ್ತಿದೆ. ಆರೆಸ್ಸೆಸ್ ಅಂಗ ಸಂಘಟನೆ ಹೊರತಂದಿರುವ ಈ ಪುಸ್ತಕರದಲ್ಲಿ ಆರ್ ಟಿ ಐ ಕಾಯ್ದೆ ಕುರಿತು ಪ್ರಸ್ತಾಪ ಮಾಡಲಾಗಿದ್ದು ಮಾಹಿತಿ ಹಕ್ಕಿಗಾಗಿ ಹೋರಾಡುವವರನ್ನು ಸಹ ರಾಷ್ಟ್ರದ್ರೋಹಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ರಾಯ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅರುಣಾ ರಾಯ್ ಐಎಎಸ್ ಅಧಿಕಾರಿಯಾಗಿದ್ದು ತಮ್ಮ ಕೆಲಸ ತೊರೆದು ರಾಜಾಸ್ತಾನದ ಗ್ರಾಮೀಣ ಜನರನ್ನು ಸಂಘಟಿಸುತ್ತಾ ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆ (MKSS) ಕಟ್ಟಿಕೊಂಡು ಕಳೆದ ಮೂರು ದಶಕಗಳಿಂದ ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ನಾಗರಿಕರಿಗೆ ಮಾಹಿತಿ ಹಕ್ಕಿನ ಕುರಿತು ಈ ಸಂಘಟನೆ ನಡೆಸಿದ ಜನಾಂದೋಲನದ ಪರಿಣಾಮವಾಗಿ ದೇಶದಲ್ಲಿ ಆರ್ ಟಿ ಐ ಕಾಯ್ದೆ ರೂಪುಗೊಂಡಿತ್ತು. ಹಾಗೆಯೇ ಗ್ರಾಮೀನ ಜನರ ಉದ್ಯೋಗದ ಹಕ್ಕಿಗಾಗಿ ನಡೆಸಿದ ಹೋರಾಟದ ಪರಿಣಾಮವಾಗಿ ಉದ್ಯೋಗ ಖಾತ್ರಿಯಂತಹ ಯೋಜನೆ ದೇಶದಲ್ಲಿ ಸಾಕಾರಗೊಂಡಿತ್ತು. ಈ ಸುಧಾರಣಾ ಕಾರ್ಯದ ಮುಖಾಂತರ ಯುಪಿಎ-1ರಲ್ಲಿ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ರಚನೆಗೊಂಡಿದ ರಾಷ್ಟ್ರೀಯ ಸಲಹಾ ಮಂಡಳಿಯಲ್ಲಿ ಅರುಣಾ ರಾಯ್, ನಿಖಿಲ್ ಡೇ ಮುಖ್ಯ ಪಾತ್ರ ವಹಿಸಿದ್ದು ಇವರ ಮುಂದೊಡಗಿನಿಂದಾಗಿಯೇ ನರೇಗಾ ಹಾಗೂ ಮಾಹಿತಿ ಹಕ್ಕು ಕಾಯ್ದೆಗಳು ಸಾಕಾರಗೊಂಡಿದ್ದವು. ಯುಪಿಎ-2ರಲ್ಲಿ ಜಾರಿಗೊಂಡಿದ್ದ ಆಹಾರ ಭದ್ರತಾ ಕಾಯ್ದೆಯ ರಚನೆಯಲ್ಲಿ ಸಹ ಅರುಣಾ ರಾಯ್ ಹಾಗೂ ನಿಖಿಲ್ ಡೇ ಪಾತ್ರ ವಹಿಸಿದ್ದಾರೆ.
ಇದೀಗ ಆರೆಸ್ಸೆಸ್ ಇವರನ್ನು ನಗರ ನಕ್ಸಲರ ಪಟ್ಟಿಗೆ ಸೇರಿಸಿ ಅಪಪ್ರಚಾರದ ಅಭಿಯಾನ ನಡೆಸುತ್ತಿದೆ. ದೇಶದಲ್ಲಿ ಸಾಮಾಜಿಕ ಸುಧಾರಣೆಗಾಗಿ ಪ್ರಯತ್ನಿಸುತ್ತಿರುವ, ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ, ದಲಿತರ ಹಕ್ಕುಗಳಿಗಾಗಿ, ದೇಶದ ಹಕ್ಕು ವಂಚಿತ ಜನರ ಪರವಾಗಿ ಧ್ವನಿ ಎತ್ತುವ ಸಾಮಾಜಿಕ ಕಾರ್ಯಕರ್ತರನ್ನು, ಬುದ್ಧಿ ಜೀವಿ, ಸಾಹಿತಿಗಳನ್ನು ನಗರ ನಕ್ಸಲ್, ದೇಶದ್ರೋಹಿ ಎಂದು ಬಿಂಬಿಸಿ ಭಿನ್ನ ಧ್ವನಿಗಳನ್ನು ಅಡಗಿಸುವ ಪ್ರಯತ್ನವನ್ನು ನಡೆಸಲಾಗುತ್ತಿದೆ.
ಇದೀಗ ಎಂಕೆಎಸ್ಎಸ್ ಮೇಲಿನ ಅಪಪ್ರಚಾರದ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಯಾಗಿ ಎಂಕೆಎಸ್ ಎಸ್ ಹೋರಾಟ ಹಾಗೂ ಸಾಧನೆಗಳ ಕುರಿತು ದೇಶದ ಜನತೆಗೆ ಜಾಗೃತಿ ಮೂಡಿಸಲು ಪ್ರಜ್ಞಾವಂತರು ಸಹಾಯ ನೀಡಬೇಕೆಂದು ಅರುಣಾ ರಾಯ್ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.