ಕಳೆದ ಕೆಲವಾರು ದಿನಗಳಿಂದ ಕಳೆಗಟ್ಟಿರುವ ಕರ್ನಾಟಕದ ರಾಜಕೀಯ ರಂಗ ಇಂದು ನಿರ್ಣಾಯಕ ಹಂತ ತಲುಪಿದೆ. ಒಂದು ಕಡೆ ವಿಪಕ್ಷ ನಾಯಕರು ಮೈತ್ರಿ ಸರ್ಕಾರಕ್ಕೆ ವಿಶ್ವಾಸಮತ ಸಾಬೀತು ಮಾಡಲು ಒತ್ತಡ ಹೇರುತ್ತಿದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ವಿಶ್ವಾಸಮತ ಯಾಚನೆಯ ಪ್ರಸ್ತಾಪ ಮಾಡಿದ್ದರೂ ವಿಶ್ವಾಸಮತ ಸಾಬೀತುಪಡಿಸುವ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ. ಈ ನಡುವೆ ಸದನದ ಚರ್ಚೆ ಸುಪ್ರೀಂ ಕೋರ್ಟಿನ ಇತ್ತೀಚಿನ ಆದೇಶದ ಕುರಿತು ಹುಟ್ಟಿಕೊಂಡಿರುವ ಗಂಭೀರ ಪ್ರಶ್ನೆಯತ್ತ ತಿರುಗಿಕೊಂಡಿದೆ.
ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ ಸಂಸದೀಯ ಪಕ್ಷವೊಂದರ ಸದಸ್ಯರು ಪಕ್ಷಾಂತರ ಮಾಡುವುದನ್ನು ತಡೆಯಲು ಅವಕಾಶ ಕಲ್ಪಿಸಿದೆ. ಪಕ್ಷದ ನೀತಿಗೆ ಬದ್ಧವಾಗಿ ಎಲ್ಲಾ ಸದಸ್ಯರೂ ಇರುವಂತೆ ಮಾಡಲು ವ್ಹಿಪ್ ಜಾರಿಮಾಡಲಾಗುತ್ತದೆ. “ರಾಜಕೀಯ ಪಕ್ಷವೊಂದು ತನ್ನ ಸದಸ್ಯರಿಗೆ ವ್ಹಿಪ್ ನೀಡಿದ ನಂತರವೂ ಸದನಕ್ಕೆ ಗೈರು ಹಾಜರಾಗುವ ಸದಸ್ಯರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬಹುದು ಎನ್ನುತ್ತದೆ ಸಂವಿಧಾನದ 10ನೇ ಶೇಡ್ಯೂಲ್. ಆದರೆ ಮೊನ್ನೆ ಸುಪ್ರೀಂ ಕೋರ್ಟು ಭಿನ್ನ ರಾಗ ಎತ್ತಿದೆ. ಅದು ತನ್ನ ಆದೇಶದಲ್ಲಿ ಸದನದಿಂದ ಹೊರಗಿದ್ದು, ಸ್ಪೀಕರ್ ಗೆ ರಾಜೀನಾಮೆ ನೀಡಿ ಹೊರಗಿರುವ 15 ಮಂದಿ ಮೈತ್ರಿ ಪಕ್ಷಗಳ ಶಾಸಕರು ಸದನಕ್ಕೆ ಹಾಜರಾಗುವುದು ಕಡ್ಡಾಯವಿಲ್ಲ ಎಂದು ತಿಳಿಸಿದೆ. ಇದು ಆಡಳಿತ ಪಕ್ಷದ ಈ ಸದಸ್ಯರಿಗೆ ಸಂವಿಧಾನದ 10ನೇ ಶೆಡ್ಯೂಲ್ ನಲ್ಲಿರುವ ಸಂವಿಧಾನಬದ್ಧ ನಿಯಮವನ್ನು ಉಲ್ಲಂಘಿಸಲು ಅವಕಾಶ ನೀಡುವುದಿಲ್ಲವೇ? ಸಂವಿಧಾನದ 10ನೇ ಶೆಡ್ಯೂಲ್ ದೇಶದಲ್ಲಿ ಅಸ್ತಿತ್ವದಲ್ಲಿ ಇರುವಾಗ ಸುಪ್ರೀಂ ಕೋರ್ಟಿನ ಇಂತಹ ವ್ಯತಿರಿಕ್ತ ಆದೇಶವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎಂಬ ಪ್ರಶ್ನೆಗಳನ್ನು ಆಡಳಿತ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕ್ರಿಯಾಲೋಪಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ ಸದನದಲ್ಲಿ ಪಾಯಿಂಟ್ ಆಫ್ ಆರ್ಡರ್ ಚರ್ಚೆಯನ್ನು ಗುರುವಾರ ಆರಂಭಿಸಿದ್ದಾರೆ. ಇದಕ್ಕೆ ದನಿಗೂಡಿಸಿರುವ ಸಚಿವರಾದ ಎಚ್ಕೆ ಪಾಟೀಲ್, ಕೃಷ್ಣ ಭೈರೇಗೌಡ ಸಹ ಸಿದ್ದರಾಮಯ್ಯ ಎತ್ತಿರುವ ಪ್ರಶ್ನೆ ಇತ್ಯರ್ಥವಾಗದೇ ಸದನದಲ್ಲಿ ವಿಶ್ವಾಸಮತಕ್ಕೆ ಅವಕಾಶ ಕೊಡಕೂಡದು, ಹಾಗೆ ಕೊಟ್ಟರೆ ವಿಶ್ವಾಸಮತ ಪ್ರಕ್ರಿಯೆ ಅಪೂರ್ಣಗೊಂಡು ಅಸಿಂಧುಗೊಳ್ಳಬಹುದು, ಇದಕ್ಕೆ ಸಭಾಧ್ಯಕ್ಷರು ಅವಕಾಶ ನೀಡಕೂಡದರು ಎಂದು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಕೇಳಿದ್ದಾರೆ.
ಸುಪ್ರೀಂ ಕೋರ್ಟಿನ ಆದೇಶದಲ್ಲಿ ವಾದಿಗಳಾದ ಪ್ರತಾಪ್ ಗೌಡ ಮತ್ತು ಇತರ 9 ಜನರು (ನಂತರ ಸೇರಿದ ಐವರು) ಕಾಂಗ್ರೆಸ್ ಪಕ್ಷವನ್ನಾಗಲೀ, ಸಿದ್ದರಾಮಯ್ಯ ಅವರನ್ನಾಗಲೀ ಪ್ರತಿ ವಾದಿಯನ್ನಾಗಿಸಿಲ್ಲ. ಸ್ಪೀಕರ್, ಕೇಂದ್ರ ಸರ್ಕಾರ, ಮುಖ್ಯಮಂತ್ರಿಗಳನ್ನು ಮಾತ್ರ ಪ್ರತಿವಾದಿಯಾಗಿಸಲಾಗಿದೆ. ಹೀಗಾಗಿ ಈ ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿರುವ ಬಿಕ್ಕಟ್ಟಿನ ಕುರಿತು ಪ್ರತಿವಾದಿಯೂ ಆಗಿರುವ ಸ್ಪೀಕರ್ ತಮ್ಮ ‘ರೂಲಿಂಗ್’ ನೀಡಬೇಕು, ಆ ನಂತರವೇ ತಾವು ತಮ್ಮ ಶಾಸಕರ ಮೇಲೆ ಯಾವ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ಧರಿಸಿಲು ಸಾಧ್ಯ ಎಂಬುದು ಕಾಂಗ್ರೆಸ್ ಮುಖಂಡರ ಆಗ್ರಹವಾಗಿದೆ.
ನೆನ್ನೆ ಸದನಕ್ಕೆ ಗೈರು ಹಾಜರಾಗಿದ್ದ ಶಾಸಕರ ಹಾಜರಾತಿ ವಿಶ್ವಾಸಮತದ ಸಂದರ್ಭದಲ್ಲಿ ಪ್ರಾಮುಖ್ಯತೆ ಇರುವುದರಿಂದ ಇವರ ಕುರಿತು ಸೂಕ್ತ ನಿಲುವು ಕೈಗೊಳ್ಳದೇ ವಿಶ್ವಾಸಮತಕ್ಕೆ ತಾವು ಸಿದ್ಧರಿಲ್ಲ ಎಂಬುದು ಮೈತ್ರಿ ಪಕ್ಷದವರ ನಿಲುವು.
ಆದರೆ, ಈ ಸುಪ್ರೀಂ ಕೋರ್ಟ್ ತೀರ್ಮಾನಕ್ಕೂ ಮುಖ್ಯಮಂತ್ರಿಗಳ ವಿಶ್ವಾಸಮತಕ್ಕೂ ಸಂಬಂಧವಿಲ್ಲ, ಮೊದಲು ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸಿ ನಂತರ ಬೇಕಾದರೆ ಈ ಚರ್ಚೆ ನಡೆಸಿ ಎಂಬುದು ಬಿಜೆಪಿಯವರ ವಾದ. ಅದರಲ್ಲೂ ಬಿಜೆಪಿ ಶಾಸಕ ಮಾಧುಸ್ವಾಮಿಯವರು ಒಂದು ಹಂತದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೇ ತಾಕೀತು ಮಾಡುವ ಮಟ್ಟಕ್ಕೆ ಹೋಗಿದ್ದರು. ಆದರೆ ಸ್ಪೀಕರ್ “ನಿಮ್ಮ ಅನುಕೂಲಕ್ಕೆ ನಾನು ಆದೇಶ ನೀಡಲು ಸಾಧ್ಯವಿಲ್ಲ, ನಾನು ನನ್ನ ಸ್ಥಾನಕ್ಕೆ ಬದ್ಧದನಾಗಿದ್ದು ಕಾನೂನು ಸಲಹೆ ಪಡೆಯದೇ ಈ ಕುರಿತು ತೀರ್ಮಾನ ಕೈಗೊಳ್ಳಲು ಸಿದ್ಧರಿಲ್ಲ” ಎಂದು ಖಚಿತವಾಗಿ ಹೇಳಿ ಸದನವನ್ನು ಮುಂದೂಡಿದ್ದಾರೆ.
ಈ ನಡುವೆ ಆಗಿರುವ ಮುಖ್ಯ ಬೆಳವಣಿಗೆ ಎಂದರೆ ಒಕ್ಕೂಟ ಆಡಳಿತದಲ್ಲಿ ಕೇಂದ್ರದ ಪ್ರತಿನಿಧಿಯಾಗಿರುವ ರಾಜ್ಯಪಾಲರ ಮಧ್ಯಪ್ರವೇಶ. ಗುರುವಾರ ಮಧ್ಯಾಹ್ನ ಊಟದ ಬಿಡುವಿನಲ್ಲಿ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ‘ಕೂಡಲೇ ವಿಶ್ವಾಸಮತ ಯಾಚಿಸುವಂತೆ ಆದೇಶ ನೀಡಲು ಸ್ಪೀಕರ್ ಅವರ ಮೇಲೆ ಒತ್ತಡ ತರಲು ಕೇಳಿಕೊಂಡಿತ್ತು.
ಇದರಂತೆ ಕೂಡಲೇ ಕಾರ್ಯಪ್ರವೃತ್ತರಾಗಿರುವ ರಾಜ್ಯಪಾಲ ವಾಜುಭಾಯಿ ರೂಢಬಾಯಿ ವಾಲಾ ಅವರು ತಮ್ಮ ಕಚೇರಿಯಿಂದ ವೀಕ್ಷಕರನ್ನು ಶಾಸನ ಸಭೆಗೆ ಕಳಿಸಿಕೊಟ್ಟಿದ್ದಲ್ಲದೇ ನಂತರ ನಾಳೆ (ಶುಕ್ರವಾರ) ಮಧ್ಯಾಹ್ನ 1.30ರ ಒಳಗೆ ವಿಶ್ವಾಸಮತ ಸಾಬೀತುಪಡಿಸಿ” ಎಂದು ಸಹ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಾಕೀತು ಮಾಡಿದ್ದಾರೆ.
ರಾಜ್ಯಪಾಲರ ಈ ಪತ್ರ ಇಂದಿನ ಸದನದಲ್ಲಿ ಕೋಲಾಹಲವನ್ನುಂಟು ಮಾಡುವ ಎಲ್ಲಾ ಸಾಧ್ಯತೆ ಇದೆ. ಬಿಜೆಪಿ ಸದಸ್ಯರ ಅಭಿಪ್ರಾಯದಂತೆಯೇ ರಾಜ್ಯಪಾಲರ ಅಭಿಪ್ರಾಯವೂ ಇರುವ “ಕಾಕತಾಳೀಯ” ಸಂಗತಿಯ ಬಗ್ಗೆ ನೆನ್ನೆಯೇ ತಕರಾರು ಎತ್ತಿದ್ದ ಕೃಷ್ಣ ಭೈರೇಗೌಡ “ಸದನದ ಕಲಾಪಗಳಲ್ಲಿ ರಾಜ್ಯಪಾಲರು ಈ ಬಗೆಯಲ್ಲಿ ಮೂಗುತೂರಿಸುವ” ರೀತಿಯನ್ನು ಪ್ರಶ್ನಿಸಿದ್ದರು.
ಇಲ್ಲಿ ಮುಖ್ಯವಾಗುವ ಪ್ರಶ್ನೆ, ರಾಜ್ಯವೊಂದರ ರಾಜ್ಯಪಾಲರಿಗೆ ಈ ರೀತಿಯಲ್ಲಿ ಸದನವೊಂದರ ಕಲಾಪಗಳು ಹೀಗೆಯೇ ನಡೆಯಬೇಕು ಎಂದು ತಾಕೀತು ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆಯೇ?
ಖಂಡಿತಾ ಇಲ್ಲ ಎಂಬುದೇ ಉತ್ತರ.
ಈ ಕುರಿತು ಕೆಲವು ಮುಖ್ಯ ವಿಷಯಗಳನ್ನು ನೋಡೋಣ:
ಶಾಸಕಾಂಗಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಸಂವಿಧಾನದತ್ತ ಅಧಿಕಾರಗಳೇನು?
ಭಾರತದ ಸಂವಿಧಾನದ 174ನೇ ವಿಧಿಯು ರಾಜ್ಯದ ಶಾಸಕಾಂಗಕ್ಕೆ ಸಂಬಂಧಿದಂತೆ ರಾಜ್ಯಪಾಲರು ಹೊಂದಿರುವ ಅಧಿಕಾರಗಳು ಏನೆಂದು ತಿಳಿಸುತ್ತದೆ. ವಿಧಾನ ಮಂಡಲದ ಯಾವುದಾದರೂ ಒಂದು ಸದನವನ್ನು ಅಥವಾ ಎರಡೂ ಸದನಗಳನ್ನು ಮುಂದೂಡುವ ಮತ್ತು ಶಾಸಕಾಂಗ ಸಭೆಯನ್ನು ಬರ್ಕಾಸ್ತುಗೊಳಿಸುವ ಅಧಿಕಾರವನ್ನು ಈ ವಿಧಿ ರಾಜ್ಯಪಾಲರಿಗೆ ನೀಡುತ್ತದೆ.
ಸಂವಿಧಾನದ 175ನೇ ವಿಧಿಯು ಯಾವುದಾದರೂ ಒಂದು ಸದನಕ್ಕೆ ಅಥವಾ ಉಭಯ ಸದನಗಳಿಗೆ ಸಂದೇಶಗಳನ್ನು ಕಳಿಸುವ ಅಧಿಕಾರವನ್ನು ರಾಜ್ಯಪಾಲರಿಗೆ ನೀಡುತ್ತದೆ. ಇನ್ನು 176ನೇ ವಿಧಿಯು ರಾಜ್ಯಪಾಲರು ಉಭಯ ಸದನಗಳನ್ನು ಸೇರಿಸಿ ಆಡುವ ವಿಶೇಷ ಭಾಷಣದ ಕುರಿತು ತಿಳಿಸುತ್ತದೆ. 200ನೇ ವಿಧಿಯ ಅನ್ವಯ ಕಾಯ್ದೆಯಾಗಬೇಕಾದ ಕೆಲವು ಮಸೂದೆಗಳನ್ನು ಅಂಗೀಕರಿಸಲು ರಾಷ್ಟ್ರಪತಿಯವರಿಗೆ ಕಳುಹಿಸುವ ಮುನ್ನ ತಡೆಹಿಡಿಯುವ ಅಧಿಕಾರ ರಾಜ್ಯಪಾಲರಿಗೆ ಇರುತ್ತದೆ. ಇನ್ನು ರಾಜ್ಯಪಾಲರಿಗಿರುವ ಅತಿಮುಖ್ಯ ಅಧಿಕಾರವೆಂದರೆ ಸಂವಿಧಾನದ 213ನೆಯ ವಿಧಿಯ ಪ್ರಕಾರ ಶಾಸನ ಸಭೆಯ ಅಧಿವೇಶನವಿಲ್ಲದ ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ.
ಇವುಗಳನ್ನು ಹೊರತುಪಡಿಸಿದರೆ ರಾಜ್ಯಪಾಲರಿಗೆ ಶಾಸನ ಸಭೆಗೆ ಸಂಬಂಧಿಸಿದಂತೆ 163ನೇ ವಿಧಿಯು ವಿವೇಚನಾಧಿಕಾರವನ್ನು ದಯಪಾಲಿಸುತ್ತದೆ. ಅದರ ಪ್ರಕಾರ ರಾಜ್ಯಪಾಲರಾದವರು ತಮ್ಮ ಸಂವಿಧಾನಿಕ ಕರ್ತವ್ಯ ನಿರ್ವಹಣೆಯ ವಿಷಯದಲ್ಲಿ ಮಂತ್ರಿಮಂಡಲದ ಸಲಹೆ ಪಡೆಯುತ್ತಾರೆ, ಆದರೆ ಈ ವಿಷಯದಲ್ಲಿ ಯಾವುದೇ ಪ್ರಶ್ನೆ ಉದ್ಭವಿಸಿದರೆ ಸ್ವಂತ ತೀರ್ಮಾನ ಕೈಗೊಳ್ಳುವ ವಿವೇಚನಾಧಿಕಾರ ರಾಜ್ಯಪಾಲರಿಗಿರುತ್ತದೆ.
ಹೀಗೆ ಹೇಳುವಾಗ ಸಂವಿಧಾನವು ರಾಜ್ಯಪಾಲರ ವಿವೇಚನಾ ಅಧಿಕಾರ ಎಂದರೆ ಏನು ಎಂಬುದನ್ನು ವಿವರಿಸಲು ಹೋಗಿಲ್ಲ. ಈ ವಿಧಿಯು ಸ್ವಾತಂತ್ರ್ಯಪೂರ್ವದಲ್ಲಿದ್ದ ಭಾರತ ಸರ್ಕಾರ ಕಾಯ್ದೆ 1935ರ ಸೆಕ್ಷನ್ 50 (1)ರ ನಕಲು ರೂಪವಾಗಿದ್ದು, ಹೊಸ ಸಂವಿಧಾನದಲ್ಲಿ ಇದನ್ನು ವ್ಯಾಖ್ಯಾನಿಸುವ ವಿಷಯ ಕೊಲ್ಕತ ಹೈಕೋರ್ಟಿನಲ್ಲಿ ಸುನಿಲ್ ಕುಮಾರ್ ವರ್ಸರ್ ಗವರ್ನಮೆಂಟ್ ಆಫ್ ವೆಸ್ಟ್ ಬೆಂಗಾಲ್ (AIR 1950, Cal, 274) ಕೇಸಿನಲ್ಲಿ ಪ್ರಸ್ತಾಪಗೊಂಡು ನ್ಯಾಯಾಲಯವು ಈ ರೀತಿಯಾಗಿ ತಿಳಿಸಿತ್ತು:
“ಹಾಲಿ ಸಂವಿಧಾನದ ಅಡಿಯಲ್ಲಿ ರಾಜ್ಯಪಾಲರಾದವರು ತನ್ನ ಸಚಿವರ ಸಲಹೆಯ ವಿನಾ ತೀರ್ಮಾನ ಕೈಗೊಳ್ಳುವಂತಿಲ್ಲ. ಭಾರತ ಸರ್ಕಾರದ ಕಾಯಿದೆ 1935ರಲ್ಲಿ ಇದ್ದ ಸ್ಥಿತಿ ಬೇರೆಯಾಗಿತ್ತು… ಈಗ ಚಾಲ್ತಿಯಲ್ಲಿರುವ ಸಂವಿಧಾನದ ಅಡಿಯಲ್ಲಿ, ರಾಜ್ಯಪಾಲರು ತಮ್ಮ ವಿವೇಚನೆಗೆ ತಕ್ಕಂತೆ ವರ್ತಿಸುವ ಅಥವಾ ತಮ್ಮ ವೈಯಕ್ತಿಕ ಸಾಮರ್ಥ್ಯದ ಮೇಲೆ ವರ್ತಿಸುವ ಅಧಿಕಾರ ಇರುವುದಿಲ್ಲ, ಹೀಗಾಗಿ ರಾಜ್ಯಪಾಲರು ತನ್ನ ಸಚಿವರ ಸಲಹೆಯ ಆಧಾರದಲ್ಲಿಯೇ ವರ್ತಿಸತಕ್ಕದ್ದು…” ಎಂದು ಹೇಳಿದೆ.
ಹೀಗಾಗಿ ಸಂವಿಧಾನವು ಸ್ಪಷ್ಟವಾಗಿ ತಿಳಿಸದ ಯಾವುದೇ ವಿಷಯದಲ್ಲಿ ರಾಜ್ಯಪಾಲರಿಗೆ ವಿವೇಚನಾ ಅಧಿಕಾರ ಬಳಸುವ ಸ್ವಾತಂತ್ರ್ಯ ಇಲ್ಲ ಎಂಬುದು ಇದರ ಅರ್ಥವಾಗಿದೆ.
ಈಗ ಕರ್ನಾಟಕದಲ್ಲಿ ಉದ್ಭವವಾಗಿರುವ ಹೊಸ ಪರಿಸ್ಥಿತಿಯಲ್ಲಿ ರಾಜ್ಯಪಾಲರು ಸದನದ ಕಲಾಪಗಳು ಹೀಗೇ ನಡೆಯಬೇಕು ಎಂದು ತಾಕೀತು ಮಾಡಿದ್ದಾರೆ. ವಿಶ್ವಾಸಮತ ಸಾಬೀತುಪಡಿಸಿ ಎಂದು ಮುಖ್ಯಮಂತ್ರಿಗಳಿಗೆ ಆದೇಶ ನೀಡುವ ಮೂಲಕ ಸ್ಪೀಕರ್ ಮಾಡಬೇಕಾದ ಕೆಲಸವನ್ನು ತಾವೇ ಮಾಡಲು ರಾಜ್ಯಪಾಲ ವಜೂಭಾಯಿ ವಾಲಾ ಹೊರಟಿದ್ದಾರೆ. ರಾಜ್ಯಪಾಲರಾದವರು ಸಭಾಧ್ಯಕ್ಷರಿಗಾಗಲೀ, ಮಾನ್ಯ ಮುಖ್ಯಮಂತ್ರಿಗಳಿಗಾಗಲೀ ಕಲಾಪವನ್ನು ಹೀಗೇ ನಡೆಸಿ ಎಂದು ಹೇಳುವುದು ಎಷ್ಟು ಸಮಂಜಸ?
ವಾಸ್ತವದಲ್ಲಿ ಸಂವಿಧಾನವು ರಾಜ್ಯಪಾಲರಿಗೆ ಎಲ್ಲೂ ಈ ಅಧಿಕಾರವನ್ನು ನೀಡಿಲ್ಲ ಎಂಬುದು ಸ್ಪಟಿಕ ಸ್ಪಷ್ಟವಾಗಿದೆ. ಮೇಲೆ ತಿಳಿಸಿದ ಕೆಲವು ಅಧಿಕಾರಗಳ ಹೊರತಾಗಿ ರಾಜ್ಯಪಾಲರಿಗೆ ಶಾಸನ ಸಭೆಯ ಕಲಾಪವೊಂದನ್ನು ನಿರ್ದೇಶಿಸಿಸುವ ಯಾವುದೇ ಹಕ್ಕನ್ನಾಗಲೀ, ಅಧಿಕಾರವನ್ನಾಗಲೀ ಸಂವಿಧಾನವು ನೀಡಿಲ್ಲ.
ಶುಕ್ರವಾರ ಮಧ್ಯಾಹ್ನ 1.30ರೊಳಗೆ ಮುಖ್ಯಮಂತ್ರಿಗಳು ವಿಶ್ವಾಸಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಕಳಿಸಿರುವ ಪತ್ರವು ಸಂವಿಧಾನಬಾಹಿರವಾಗಿದೆಯಲ್ಲದೇ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಶಾಸಕಾಂಗವೊಂದು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಆಗದಂತೆ ಮಾಡುತ್ತಿರುವ ಪ್ರಯತ್ನವೂ ಆಗಿದೆ.