ಆಪರೇಷನ್ ಕಮಲ ಎಂಬ ರಾಜಕಾರಣದ ಹೊಸ ಪರಿಭಾಷೆಯನ್ನು ಜಗತ್ತಿಗೆ ಪರಿಚಯಿಸಿದ ರಾಜ್ಯದಲ್ಲಿ ಇದೀಗ ನಡೆಯುತ್ತಿರುವ ರಾಜಕೀಯ ವಿಪ್ಲವಕಾರಿ ಬೆಳವಣಿಗೆಗಳು ಇಡೀ ದೇಶದ ಗಮನ ಸೆಳೆದಿವೆ. ಸರ್ಕಾರ ರಚನೆಯಾಗಿ ಕೇವಲ ಹದಿನಾಲ್ಕು ತಿಂಗಳಲ್ಲೇ ಆಡಳಿತ ಪಕ್ಷದ ಶಾಸಕರಿಗೆ ಆಮಿಷವೊಡ್ಡಿ, ಬೆದರಿಕೆ ಹಾಕಿ, ಒತ್ತೆಯಾಳುಗಳನ್ನಾಗಿ ಮಾಡಿ ಸರ್ಕಾರವನ್ನು ಕೆಡವುವ ಮೂಲಕ ಅಧಿಕಾರಕ್ಕೇರಲು ಪ್ರತಿಪಕ್ಷ ನಡೆಸಿರುವ ಲಜ್ಜೆಗೇಡಿ ರಾಜಕಾರಣದ ಕಾರಣಕ್ಕೆ ದೇಶಾದ್ಯಂತ ಚರ್ಚೆಯ ವಸ್ತುವಾಗಿದೆ. ಎಸ್ ನಿಜಲಿಂಗಪ್ಪ, ಶಾಂತವೇರಿ ಗೋಪಾಲಗೌಡ, ಕಡಿದಾಳ್ ಮಂಜಪ್ಪ ಅವರಂತಹ ಸಾಲುಸಾಲು ಮುತ್ಸದ್ಧಿಗಳನ್ನು ಕಂಡ ವಿಧಾನಸಭೆ, ಇದೀಗ ಆಪರೇಷನ್ ಕಮಲದ ರೂವಾರಿಗಳ ಮೇಲಾಟಕ್ಕೂ ಸಾಕ್ಷಿಯಾಗಿದೆ!
ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ರಾಜಕೀಯ ಸರ್ಕಸ್ಸಿನ ಕ್ಲೈಮ್ಯಾಕ್ಸ್ ನಿರೀಕ್ಷೆಯಲ್ಲಿದ್ದವರಿಗೆ ಗುರುವಾರ ಮತ್ತು ಶುಕ್ರವಾರದ ವಿಧಾನಸಭಾ ಕಲಾಪ ನಿರಾಶೆ ಮೂಡಿಸಿದ್ದು, ರಾಜ್ಯದ ರಾಜಕೀಯ ಅಸ್ಥಿರತೆ ಮತ್ತು ಗೊಂದಲಗಳು ಇನ್ನೂ ಒಂದೆರಡು ದಿನ ಮುಂದುವರಿಯುವ ಸೂಚನೆ ಸಿಕ್ಕಿದೆ. ಮುಖ್ಯವಾಗಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ತಮ್ಮ ಬೆಂಬಲವಿಲ್ಲ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ರೆಸಾರ್ಟ್ ಸೇರಿಕೊಂಡಿರುವ ಹದಿನೈದು ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಬುಧವಾರ ನೀಡಿರುವ ತೀರ್ಪು ರಾಜ್ಯದ ರಾಜಕೀಯ ಗೊಂದಲಗಳಿಗೆ ತೆರೆ ಎಳೆಯುವ ಬದಲಾಗಿ ಇನ್ನಷ್ಟು ಗೊಂದಲ ಮತ್ತು ಶಂಕೆಗಳಿಗೆ ಕಾರಣವಾಗಿದೆ.
ಗುರುವಾರ ಇಡೀ ದಿನ ಕಲಾಪದಲ್ಲಿ ಪ್ರಮುಖವಾಗಿ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಶಾಸಕಾಂಗ ಪಕ್ಷದ ನಾಯಕರಿಗೆ ಕ್ರಿಯಾಲೋಪವಾಗಿದೆ ಎಂಬ ವಿಷಯ ಮತ್ತು ವಿಪ್ ಕುರಿತ ಚರ್ಚೆಯೇ ಪ್ರಮುಖವಾಗಿ ಕೇಳಿಬಂದರೂ, ಅಂತಿಮವಾಗಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ವಾಗ್ವಾದ, ಆರೋಪ, ಪ್ರತ್ಯಾರೋಪ, ಪ್ರತಿಭಟನೆಗಳಲ್ಲೇ ದಿನದ ಕಲಾಪ ಮುಗಿದುಹೋಯಿತು. ಬಿಜೆಪಿ ಆಹೋರಾತ್ರಿ ಸದನದಲ್ಲೇ ಉಳಿದು ಪ್ರತಿಭಟನೆ ನಡೆಸಿತು. ಈ ನಡುವೆ ಬಿಜೆಪಿ ನಾಯಕರ ಕೋರಿಕೆಯ ಮೇರೆಗೆ ರಾಜ್ಯಪಾಲರು ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಶುಕ್ರವಾರ ಮಧ್ಯಾಹ್ನ 1.30ರ ಗಡುವು ನೀಡಿದರು. ಆದರೆ, ಶುಕ್ರವಾರ ಕೂಡ ಸಭಾ ನಾಯಕ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸ ಮತ ಯಾಚನೆಗೆ ಮುನ್ನ ತಮ್ಮ ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳಬೇಕಿದೆ. ಸಚಿವರು ಮತ್ತು ಶಾಸಕರು ತಮ್ಮತಮ್ಮ ಅಭಿಪ್ರಾಯ ಹೇಳಿಕೊಳ್ಳಬೇಕಿದೆ. ಹಾಗಾಗಿ ನಿಗದಿತ ಗಡುವಿನಲ್ಲಿ ಪ್ರಕ್ರಿಯೆ ಮುಗಿಸುವುದು ಸಾಧ್ಯವೂ ಇಲ್ಲ ಮತ್ತು ರಾಜ್ಯಪಾಲರಿಗೆ ಸದನದ ಚರ್ಚೆಯನ್ನು ನಿಯಂತ್ರಿಸುವ ಅಧಿಕಾರವಿಲ್ಲ. ಅಂತಹ ಪ್ರಯತ್ನ ಶಾಸಕರ ಮತ್ತು ಸದನದ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದರು. ಕಾಂಗ್ರೆಸ್ ನಾಯಕ ಕೃಷ್ಣ ಭೈರೇಗೌಡ ಕೂಡ ಇದೇ ಅಭಿಪ್ರಾಯ ಮಂಡಿಸಿ ಬೊಮ್ಮಾಯಿ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿ ರಾಜ್ಯಪಾಲರು ಸದನದ ಕಲಾಪವನ್ನು ನಿರ್ದೇಶಿಸುವಂತೆಯೂ ಇಲ್ಲ, ನಿರ್ಬಂಧಿಸುವಂತೆಯೂ ಇಲ್ಲ ಎಂದರು. ಆ ಬಳಿಕ ಸಂಜೆಯವರೆಗೆ ವಿಪ್ ಮತ್ತು ರಾಜ್ಯಪಾಲರ ಕುರಿತೇ ಬಹುತೇಕ ಚರ್ಚೆ ನಡೆಯಿತು.
ವಿಶ್ವಾಸ ಮತ ಯಾಚನೆಯ ಮಾತುಗಳನ್ನಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಗುರುವಾರವೇ ವಿಶ್ವಾಸಮತ ಯಾಚಿಸಲಿದ್ದು, ಇನ್ನೇನು ಅಲ್ಪಮತಕ್ಕೆ ಕುಸಿದಿರುವ ಸರ್ಕಾರಕ್ಕೆ ವಿಶ್ವಾಸಮತದಲ್ಲಿ ಸೋಲಾಗಲಿದೆ. ಸರ್ಕಾರ ಬೀಳುತ್ತಲೇ ಹೊಸ ಸರ್ಕಾರ ರಚನೆ ಶತಸಿದ್ಧ ಎಂಬ ಉಮೇದಿನಲ್ಲಿ ಸದನಕ್ಕೆ ಆಗಮಿಸಿದ್ದ ಬಿಜೆಪಿ ಶಾಸಕರು, ಗುರುವಾರವೂ ಕಳೆದು ಶುಕ್ರವಾರವೂ ಚರ್ಚೆ ಮುಗಿಯದು ಎನಿಸಿದಾಗ ಚರ್ಚೆಯನ್ನು ಶುಕ್ರವಾರವೇ ಮುಗಿಸಬೇಕು ಎಂದು ಪಟ್ಟುಹಿಡಿದಿದ್ದಾರೆ.
ಇದು ರಾಜಕೀಯ ಹಗ್ಗಜಗ್ಗಾಟದ ಸದ್ಯದ ಸರ್ಕಸ್ ಮತ್ತು ಜಗನ್ನಾಟಕದ ಒಂದು ಅಂಕ. ಟಿವಿ ಕ್ಯಾಮರಾಗಳು ಮತ್ತು ಸುದ್ದಿ ಪತ್ರಿಕೆಗಳು ತರಹೇವಾರಿ ರೀತಿಯಲ್ಲಿ ದಿನದ ಇಪ್ಪತ್ನಾಲ್ಕು ತಾಸು ಬಿಂಬಿಸುತ್ತಿರುವ ಈ ನಾಟಕದ ಹೊರತಾಗಿ ರಾಜ್ಯದ ಬೇರೆ ಜಗತ್ತು ಇದೆ ಮತ್ತು ಅದು ಬಡವರು, ದುರ್ಬಲರು, ರೈತರು, ಕೂಲಿಕಾರ್ಮಿಕರು ಇದ್ದಾರೆ. ಅರ್ಧ ಮುಂಗಾರು ಕಳೆದರೂ ಬಿತ್ತನೆಗೆ ಅಗತ್ಯ ಮಳೆ ಇಲ್ಲದೆ ರಾಜ್ಯದ ಉದ್ದಗಲಕ್ಕೆ ಮುಕ್ಕಾಲು ಪಾಲು ಹೊಲಗದ್ದೆಗಳು ಬೀಳುಬಿದ್ದಿವೆ. ರೈತ ಕಂಗಾಲಾಗಿ ಖಾಲಿ ಆಕಾಶದತ್ತ ಮುಖ ಮಾಡಿ ಕೂತಿದ್ದಾನೆ. ದೀನ-ದಲಿತರ ನಿತ್ಯದ ಬದುಕು ಸಂಕಷ್ಟದಲ್ಲಿದೆ. ಬೆಂಗಳೂರಿನಂತಹ ನಗರದಲ್ಲೇ ಕುಡಿಯುವ ನೀರಿನ ಹಾಹಾಕಾರವೆದ್ದಿದೆ. ರಾಜಕೀಯ ಗೊಂದಲ ಮತ್ತು ಅಸ್ಥಿರತೆಯ ನಡುವೆ ತಾಲೂಕು ಕಚೇರಿಯಿಂದ ವಿಧಾನಸೌಧದ ಮೂರನೇ ಮಹಡಿಯವರೆಗೆ ಇಡೀ ಆಡಳಿತ ವ್ಯವಸ್ಥೆ ನಿಂತ ನೀರಾಗಿದೆ.
ಆದರೆ, ಸರಿಸುಮಾರು ಒಂದು ತಿಂಗಳಿನಿಂದ ಶಾಸಕರು, ಸಚಿವರು, ಮುಖ್ಯಮಂತ್ರಿಗಳು ರಾಜ್ಯದ ಈ ಜ್ವಲಂತ ಸಮಸ್ಯೆಗಳತ್ತ ಕಣ್ಣು ಹಾಯಿಸದೆ, ಕೇವಲ ಕುರ್ಚಿ ಉಳಿಸಿಕೊಳ್ಳುವ ಮತ್ತು ಕುರ್ಚಿ ಕಿತ್ತುಕೊಳ್ಳುವ ಹಾವು ಏಣಿ ಆಟದಲ್ಲಿ ಮುಳುಗಿದ್ದಾರೆ. ಲಿಂಗನಮಕ್ಕಿ ಜಲಾಶಯದ ನೀರಿನ ವಿಷಯದಲ್ಲಿ ನಡೆದ ರಾಜ್ಯದ ಇತಿಹಾಸದಲ್ಲೇ ಅಪರೂಪದ ಒಂದು ಜನ ಹೋರಾಟ ಮತ್ತು ಐತಿಹಾಸಿಕ ಬಂದ್ ಬಗ್ಗೆ ಕೂಡ ಸರ್ಕಾರ ಮತ್ತು ಆಡಳಿತ ಕಿವಿಗೊಡದಷ್ಟು ನಿರ್ಲಕ್ಷ್ಯ ಮತ್ತು ಜಡ್ಡುತನ ಕವಿದಿದೆ.
ಇದೆಲ್ಲದರ ಹಿಂದಿರುವುದು; ಒಬ್ಬ ವ್ಯಕ್ತಿ ಮತ್ತು ಒಂದು ಪಕ್ಷದ ಅಧಿಕಾರ ಲಾಲಸೆಗಾಗಿ, ಆಗಲೇ ಅಧಿಕಾರದಲ್ಲಿರುವ ಒಂದು ಸರ್ಕಾರವನ್ನು ಕೆಡವಿ ಅಧಿಕಾರ ಹಿಡಿಯುವ ಹಪಾಹಪಿ ಮತ್ತು ಅದು ಸೃಷ್ಟಿಸಿರುವ ರಾಜಕೀಯ ಅಸ್ಥಿರತೆ. ಅದರಲ್ಲೂ ಮುಖ್ಯವಾಗಿ ಶತಾಯಗತಾಯ ತಾವು ಮತ್ತೊಮ್ಮೆ ಮುಖ್ಯಮಂತ್ರಿಯಾಗಲೇ ಬೇಕು ಎಂಬ ಜಿದ್ದಿಗೆ ಬಿದ್ದಿರುವ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಹಠಮಾರಿತನ ಮತ್ತು ಅದಕ್ಕೆ ಬೆಂಬಲವಾಗಿ ನಿಂತಿರುವ ಕೇಂದ್ರದ ಬಿಜೆಪಿ ಸರ್ಕಾರ ಎಂಬುದು ನಿರ್ವಿವಾದ.
ಹಾಗೆ ನೋಡಿದರೆ, ಇಂತಹ ಲಜ್ಜೆಗೇಡಿ ವರ್ತನೆ ಇದೇ ಮೊದಲೇನಲ್ಲ. ಸರಿಸುಮಾರು ಹತ್ತು ವರ್ಷಗಳ ಹಿಂದೆ ಇಡೀ ದೇಶವೇ ರಾಜ್ಯ ರಾಜಕಾರಣವನ್ನು ತೀರಾ ತುಚ್ಛವಾಗಿ ಕಾಣುವಂತೆ ಮಾಡಿದ, ವ್ಯಾಪಕ ಟೀಕೆಗೆ ಗುರಿಯಾದ ‘ಆಪರೇಷನ್ ಕಮಲ’ ಎಂಬ ಪ್ರಜಾಸತ್ತೆ ಮತ್ತು ದೇಶದ ಸಂವಿಧಾನಿಕ ವ್ಯವಸ್ಥೆಯನ್ನೇ ಅಣಕಿಸುವ ರಾಜಕೀಯ ದಲ್ಲಾಳಿ ವ್ಯವಸ್ಥೆಯನ್ನು ಪರಿಚಯಿಸಿದ್ದೇ ಬಿಜೆಪಿಯ ನಾಯಕರು ಎಂಬುದು ಗುಟ್ಟೇನಲ್ಲ. ಅಲ್ಲಿಂದ ಆರಂಭವಾದ ಅಪವಿತ್ರ ರಾಜಕಾರಣದ ಆ ವರಸೆ ರಾಜ್ಯಕ್ಕೆ ಮಾತ್ರ ಸೀಮಿತವಾಗದೆ, ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ತಮ್ಮ ಪ್ರತಿಸ್ಪರ್ಧಿ ಪಕ್ಷಗಳ ಸರ್ಕಾರಗಳನ್ನು ಕೆಡವಿ, ಅಧಿಕಾರ ಹಿಡಿಯಲು ರಾಷ್ಟ್ರಮಟ್ಟದಲ್ಲೂ ಭಾರತೀಯ ಜನತಾ ಪಕ್ಷಕ್ಕೆ ಒಂದು ಮಾದರಿಯಾಯಿತು. ಗೋವಾ, ಬಿಹಾರ, ಛತ್ತೀಸಗಢ, ಅಸ್ಸಾಂ, ಮಣಿಪುರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಈ ಮಾದರಿಯನ್ನೇ ಯಶಸ್ವಿಯಾಗಿ ಜಾರಿಗೊಳಿಸಿ, ಸಂವಿಧಾನ ಮತ್ತು ಶಾಸಕಾಂಗದ ನೀತಿ- ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಇರುವ ಸರ್ಕಾರವನ್ನು ಕೆಡವಿ ಅಧಿಕಾರ ಹಿಡಿದಿದೆ. ಇದೀಗ ಭಾರೀ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯ ಹೈಕಮಾಂಡ್ ಕೂಡ ಇಂತಹ ಆಪರೇಷನ್ ಕಮಲಕ್ಕೆ ಕುಮ್ಮಕ್ಕು ನೀಡುತ್ತಿದೆ ಮತ್ತು ಅದಕ್ಕೆ ತಕ್ಕಂತೆ ಇಡೀ ನ್ಯಾಯಾಂಗ ಮತ್ತು ರಾಜ್ಯಪಾಲರ ಕಚೇರಿಗಳನ್ನು ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ರಾಜ್ಯದ ವಿಷಯದಲ್ಲಿ ನಡೆದಿರುವ ಬೆಳವಣಿಗೆಗಳೇ ಸಾಕ್ಷಿ.
ಇದೀಗ ರಾಜ್ಯದಲ್ಲಿ ನಡೆಯುತ್ತಿರುವುದು ಆ ಆಪರೇಷನ್ ಕಮಲ ಎಂಬ ಅನೈತಿಕ ರಾಜಕಾರಣದ ಕ್ಲೈಮ್ಯಾಕ್ಸ್ ಎಂಬುದು ಗಮನಾರ್ಹ. ಅದರ ಮೊದಲ ಪರಿಣಾಮವಾಗುತ್ತಿರುವುದು ರಾಜ್ಯದ ಜನ ಸಾಮಾನ್ಯರ ಮೇಲೆ. ಏಕೆಂದರೆ, ಜನರ ಸಂಕಷ್ಟಗಳ ಬಗ್ಗೆ, ಸಮಸ್ಯೆಗಳ ಬಗ್ಗೆ ಕಲಾಪದಲ್ಲಿ ಚರ್ಚಿಸಬೇಕಾಗಿದ್ದ, ಆಡಳಿತ ಯಂತ್ರದ ಮೇಲೆ ಕಣ್ಣಿಟ್ಟು ಚುರುಕು ಮುಟ್ಟಿಸಬೇಕಾಗಿದ್ದ ಮತ್ತು ಆ ಹೊಣೆಗಾರಿಕೆಯ ಕಾರಣಕ್ಕಾಗಿಯೇ ಆಯ್ಕೆಯಾಗಿದ್ದ ಶಾಸಕರುಗಳು ರೆಸಾರ್ಟುಗಳಲ್ಲಿ ಮೋಜುಮಸ್ತಿಯಲ್ಲಿ ತೊಡಗಿದ್ದಾರೆ. 15 ಮಂದಿ ಬಂಡಾಯ ಶಾಸಕರಂತೂ ಕಳೆದ ಇಪ್ಪತ್ತು ದಿನಗಳಿಂದ ತಮ್ಮನ್ನು ಆರಿಸಿದ ಮತದಾರರನ್ನೂ ಮರೆತು ಮುಂಬೈನಲ್ಲಿ ಕೂತು ಐಪಿಎಲ್ ಆಟಗಾರರಂತೆ ಕೋಟಿ ಕೋಟಿ ದುಡ್ಡಿಗೆ ಸ್ವಯಂ ಹರಾಜಿಗಿಟ್ಟುಕೊಂಡಿದ್ದಾರೆ.
ಹಾಗೇ, ರಾಜ್ಯ ಸರ್ಕಾರದ ವಿಷಯದಲ್ಲಿ ಸಂವಿಧಾನ, ಶಾಸಕಾಂಗ, ನ್ಯಾಯಾಂಗದ ನಡುವಿನ ಸಂಘರ್ಷಕ್ಕೆ ಕೂಡ ಈ ಆಪರೇಷನ್ ಕಮಲ ಇದೀಗ ಕಾರಣವಾಗಿದ್ದು, ಸಂವಿಧಾನಿಕ ಬಿಕ್ಕಟ್ಟು ಏರ್ಪಟ್ಟಿದೆ. ಇಡೀ ದೇಶವೇ ಇಲ್ಲಿನ ಬೆಳವಣಿಗೆಗಳ ಮೇಲೆ ಕಣ್ಣು ನೆಟ್ಟಿದೆ. ಹದಿನೈದು ಶಾಸಕರು ಮತ್ತು ವಿಧಾನಸಭಾ ಸ್ಪೀಕರ್ ಹಾಗೂ ಸಿಎಂ ಕುಮಾರಸ್ವಾಮಿ ಅವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಬುಧವಾರ ನೀಡಿದ ತೀರ್ಪು ಆಗಲೇ ತಲೆದೋರಿದ್ದ ರಾಜಕೀಯ ಗೊಂದಲವನ್ನು ಬಗೆಹರಿಸುವ ಬದಲಿಗೆ ಇನ್ನಷ್ಟು ಗೋಜಲುಗೊಳಿಸಿದೆ ಮತ್ತು ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.
ಶಾಸಕರ ರಾಜೀನಾಮೆ ಅಂಗೀಕಾರ ಮೊದಲಾಗಬೇಕೆ ಅಥವಾ ಆಡಳಿತ ಪಕ್ಷಗಳ ಕೋರಿಕೆಯ ಅನರ್ಹತೆ ವಿಷಯ ಮೊದಲು ಇತ್ಯರ್ಥವಾಗಬೇಕೆ ಎಂಬ ಬಗ್ಗೆ ಸ್ಪಷ್ಟತೆ ನೀಡುವ ಬದಲಾಗಿ ನ್ಯಾಯಾಲಯ, ಒಂದು ಕಡೆ ಸ್ಪೀಕರ್ ಗೆ ತಮ್ಮ ವಿವೇಚನಾ ಅಧಿಕಾರದಂತೆ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುವುದಾಗಿ ಹೇಳುತ್ತಲೇ, ಬಂಡಾಯ ಶಾಸಕರು ವಿಶ್ವಾಸಮತ ಯಾಚನೆ ವೇಳೆ ಸದನಕ್ಕೆ ಹಾಜರಾಗಲು ಅಥವಾ ಹಾಜರಾಗದೇ ಇರಲು ನಿರ್ಧಾರ ಕೈಗೊಳ್ಳಲು ಸ್ವತಂತ್ರರು. ಅವರಿಗೆ ಒತ್ತಾಯಪೂರ್ವಕವಾಗಿ, ಯಾವುದೇ ಒತ್ತಡ ಹೇರಿ ಸದನಕ್ಕೆ ಹಾಜರಾಗುವಂತೆ ಮಾಡುವಂತಿಲ್ಲ ಎಂದಿದೆ. ಆ ಮೂಲಕ ಬಂಡಾಯ ಶಾಸಕರು ವಿಶ್ವಾಸಮತ ಪ್ರಕ್ರಿಯೆಯಿಂದ ಹೊರಗುಳಿಯುವ ಮೂಲಕ ಸರ್ಕಾರದ ಪತನಕ್ಕೆ ನೆರವಾಗಲು ಪೂರಕವಾಗಿ ನ್ಯಾಯಾಲಯದ ಆದೇಶ ಬಂದಿದೆ.
ಹಾಗಾಗಿ ಈಗಾಗಲೇ ಜಾರಿಯಾಗಿರುವ ವಿಪ್ ವ್ಯಾಪ್ತಿಗೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿರುವ ಶಾಸಕರು ಬರುತ್ತಾರೆಯೇ? ಅವರಿಗೂ ವಿಪ್ ಅನ್ವಯವಾಗಲಿದೆಯೇ? ಅಥವಾ ಇಲ್ಲವೇ? ಎಂಬ ಗೊಂದಲ ಇಡೀ ಬಿಕ್ಕಟ್ಟನ್ನು ಇನ್ನಷ್ಟು ಜಟಿಲಗೊಳಿಸಿದೆ.
ಈ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡುವ ಸಂವಿಧಾನದ 10ನೇ ಪರಿಚ್ಛೇದ ಖಾತ್ರಿಪಡಿಸುವ ತಮ್ಮ ಹಕ್ಕಿಗೆ ಧಕ್ಕೆಯಾಗಿದೆ ಎಂದು ಕ್ರಿಯಾಲೋಪ ಗೊತ್ತುವಳಿ ಮಂಡಿಸಿದ್ದಾರೆ. ಕಾಂಗ್ರೆಸ್ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಕೃಷ್ಣಬೈರೇಗೌಡ ಅವರು ಪ್ರತ್ಯೇಕ ಕ್ರಿಯಾಲೋಪ ಗೊತ್ತುವಳಿ ಮಂಡಿಸಿದ್ದಾರೆ. ಆ ಮೂಲಕ ನ್ಯಾಯಾಲಯದ ಅಸ್ಪಷ್ಟ ಮತ್ತು ಗೊಂದಲಕಾರಿ ತೀರ್ಪು ನ್ಯಾಯಾಂಗ ಮತ್ತು ಶಾಸಕಾಂಗದ ಸಂಘರ್ಷಕ್ಕೆ ಎಡೆಮಾಡಿದೆ. ಶಾಸಕಾಂಗದ ಮೇಲೆ ನ್ಯಾಯಾಂಗ ಸವಾರಿ ಮಾಡುತ್ತಿದೆ ಎಂಬ ಆತಂಕಕ್ಕೆ ಕಾರಣವಾಗಿದೆ.
ಮತ್ತೊಂದು ಕಡೆ ರಾಜ್ಯಪಾಲರು, ಬಿಜೆಪಿ ನಾಯಕರ ಮನವಿ ಮೇರೆಗೆ ವಿಶ್ವಾಸಮತ ಸಾಬೀತು ಪಡಿಸಲು ಗಡುವು ನೀಡಿ ಸೂಚನೆ ನೀಡಿದ್ದು ಮತ್ತೊಂದು ಸಂಘರ್ಷಕ್ಕೆ ಕಾರಣವಾಗಿದೆ. ಸದನದ ಕಲಾಪದ ಅವಧಿ ಮತ್ತು ವಿಷಯವನ್ನು ರಾಜ್ಯಪಾಲರು ನಿರ್ಧರಿಸುವುದು ಸಾಧ್ಯವಿಲ್ಲ. ವಿಶ್ವಾಸಮತ ಯಾವಾಗ ಕೋರಬೇಕು, ಅದರ ಕುರಿತ ಚರ್ಚೆ ಯಾವಾಗ ನಡೆಸಬೇಕು ಎಂಬುದು ಸದನದ ಮುಖ್ಯಸ್ಥರ ವಿವೇಚನೆಗೆ ಬಿಟ್ಟದ್ದು, ಆದರೆ, ರಾಜ್ಯಪಾಲರು ಈ ಸೂಚನೆ ನೀಡುವ ಮೂಲಕ ಸ್ಪೀಕರ್ ಅಧಿಕಾರ ಮತ್ತು ಸದನದ ಹಕ್ಕಿನಲ್ಲಿ ಮೂಗು ತೂರಿಸಿದ್ದಾರೆ ಎಂದು ಆಡಳಿತ ಪಕ್ಷಗಳು ಆಕ್ಷೇಪವೆತ್ತಿವೆ. ರಾಜ್ಯಪಾಲರ ಈ ನಡೆಯ ಹಿಂದೆ ಬಿಜೆಪಿ ಇದೆ. ಬಿಜೆಪಿ ಹೈಕಮಾಂಡ್ ರಾಜ್ಯಪಾಲರ ಮೂಲಕ ಸರ್ಕಾರವನ್ನು ಕೆಡವಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಆಡಳಿತ ಪಕ್ಷಗಳದ್ದು. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.
ಒಂದು ಕಡೆ ನ್ಯಾಯಾಂಗದ ಅಸ್ಪಷ್ಟ ಮತ್ತು ಗೊಂದಲಕಾರಿ ಆದೇಶ. ಸಂವಿಧಾನದ 10ನೇ ಪರಿಚ್ಛೇದದ ಪಕ್ಷಾಂತರ ನಿಷೇಧ ಕಾಯ್ದೆಯನ್ನೇ ಅಪ್ರಸ್ತುತಗೊಳಿಸುವ ತೀರ್ಪು. ಆ ಮೂಲಕ ಆಪರೇಷನ್ ಕಮಲದಂತಹ ಅನೈತಿಕ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೇ ಮಾರಕವಾದ ರಾಜಕಾರಣದ ವರಸೆಗೆ ಪೂರಕ ವಾತಾವರಣ ನಿರ್ಮಿಸುವ ಪ್ರಯತ್ನದ ಅನುಮಾನ. ಮತ್ತೊಂದು ಕಡೆ, ತಮ್ಮ ವ್ಯಾಪ್ತಿಯನ್ನು ಮೀರಿ ರಾಜ್ಯಪಾಲರು ಕಲಾಪದ ಚಟುವಟಿಕೆಗಳನ್ನು ನಿರ್ದೇಶಿಸುವ ಪ್ರಯತ್ನ ಮತ್ತು ಅದರ ಹಿಂದೆ ಕೇಂದ್ರ ಸರ್ಕಾರ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಶಂಕೆ. ಮತ್ತೊಂದು ಕಡೆ ಸ್ಪೀಕರ್ ಮತ್ತು ಶಾಸಕಾಂಗ ಪಕ್ಷದ ನಾಯಕರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ. ಹೀಗೆ ಶಾಸಕಾಂಗ, ನ್ಯಾಯಾಂಗ ಮತ್ತು ರಾಜ್ಯಪಾಲರ ಕಚೇರಿ ನಡುವಿನ ಸಂಘರ್ಷ ಮತ್ತು ತಮ್ಮ ತಮ್ಮ ಮಿತಿ ಮತ್ತು ವ್ಯಾಪ್ತಿಗಳ ಪರಸ್ಪರ ತಾಕಲಾಟಗಳು. ಈ ಎಲ್ಲದರ ಮೂಲ ಇರುವುದು ಆಪರೇಷನ್ ಕಮಲದಲ್ಲಿ ಎಂಬುದು ವಿಪರ್ಯಾಸ.
ಹಾಗೆ ನೋಡಿದರೆ, ರಾಜ್ಯದಲ್ಲಿ ನಡೆಯುತ್ತಿರುವ ಈ ಸಂಘರ್ಷ ಕೇವಲ ರಾಜ್ಯ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಒಂದು ಬಾರಿ ಒಂದು ಪಕ್ಷದ ಚಿಹ್ನೆಯಲ್ಲಿ ಆರಿಸಿಬಂದ ಶಾಸಕನೊಬ್ಬ ಆ ವಿಧಾನಸಭಾ ಅವಧಿ ಮುಗಿಯುವ ಮುನ್ನವೇ ಕೇವಲ ಅಧಿಕಾರ, ಹಣ ಮತ್ತು ಸ್ಥಾನಮಾನದ ಆಮಿಷಕ್ಕಾಗಿ ರಾಜೀನಾಮೆ ನೀಡಿ ಮತ್ತೊಂದು ಪಕ್ಷಕ್ಕೆ ಸೇರಿ ಮತ್ತೆ ಚುನಾವಣೆ ಎದುರಿಸುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವ ‘ಆಪರೇಷನ್ ಕಮಲ’ ದೇಶದ ರಾಜಕೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹದ್ದು. ಆ ಕಾರಣಕ್ಕೆ ಈ ವಿಷಯದಲ್ಲಿ ಸುಪ್ರೀಂಕೋರ್ಟ್, ರಾಜಭವನ ಮತ್ತು ವಿಧಾನಸಭಾ ಸ್ಪೀಕರ್ ಅತ್ಯಂತ ಹೊಣೆಗಾರಿಕೆಯಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯುವ ರೀತಿಯಲ್ಲಿ ನಡೆದುಕೊಳ್ಳಬೇಕಾಗಿತ್ತು. ಆದರೆ, ಆದದ್ದೇನು? ಎಂಬುದು ಎಲ್ಲರಿಗೂ ಗೊತ್ತಿದೆ. . ಆ ಅರ್ಥದಲ್ಲಿ ಸದನದಲ್ಲಿ ಪ್ರದರ್ಶನಗೊಂಡ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲರು ಆಸ್ಪತ್ರೆಯ ಸ್ಟ್ರೆಚರ್ ಮೇಲೆ ಮಲಗಿರುವ ಚಿತ್ರ ಒಂದು ರೂಪಕದಂತಿದೆ. ಅವರ ಅದೇ ಸ್ಥಿತಿ ಇವತ್ತಿನ ಇಡೀ ರಾಜಕೀಯ ವ್ಯವಸ್ಥೆಯದ್ದು ಎಂಬುದು ವಿಪರ್ಯಾಸ.
ಪಕ್ಷಾಂತರ ಮತ್ತು ಆಪರೇಷನ್ ಕಮಲದಂತಹ ಅಪಾಯಗಳ ಬಗ್ಗೆ; ತತಕ್ಷಣದ ರಾಜಕೀಯ ಅಸ್ಥಿರತೆ ಮತ್ತು ಆಡಳಿತ ಯಂತ್ರದ ಕುಸಿತದ ಜೊತೆಗೆ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನಿಕ ಚೌಕಟ್ಟನ್ನು ನಾಶಮಾಡುವ ದೂರಗಾಮಿ ಪರಿಣಾಮಗಳ ಬಗ್ಗೆ ಅರಿವಿರುವ ಯಾವುದೇ ಸಂವಿಧಾನಿಕ ಸಂಸ್ಥೆ ಇಂತಹ ಹೊತ್ತಲ್ಲಿ ನಡೆದುಕೊಳ್ಳಬೇಕಾದ ರೀತಿಯಲ್ಲಿ ನಡೆದುಕೊಳ್ಳಲಾಗಿದೆಯೇ ಎಂಬುದಕ್ಕೆ ಚರಿತ್ರೆ ಸಾಕ್ಷಿಯಾಗಲಿದೆ. ಆದರೆ, ಸಂವಿಧಾನಿಕ ಸಂಸ್ಥೆ ಮತ್ತು ವ್ಯಕ್ತಿಗಳು ತಮ್ಮ ಸ್ಥಾನದ ಹೊಣೆಗಾರಿಕೆ ಮರೆತು, ಒಬ್ಬ ವ್ಯಕ್ತಿ, ಒಂದು ಪಕ್ಷದ ವಾರಸುದಾರರಂತೆ ನಡೆದುಕೊಂಡರೆ ಏನಾಗುತ್ತದೆ ಎಂಬುದಕ್ಕೂ ಈ ಬೆಳವಣಿಗೆಗಳು ನಿದರ್ಶನ.
ಹಾಗಾಗಿ, ಇದು ಆಪರೇಷನ್ ಕಮಲ ಎಂಬ ಇತ್ತೀಚಿನ ವರ್ಷಗಳ ಭಾರತದ ಹೊಸ ರಾಜಕೀಯ ವರಸೆಯ ಕ್ಲೈಮ್ಯಾಕ್ಸ್. ಈಗ ಕರ್ನಾಟಕದ ಅಧಿಕಾರದ ಕುರ್ಚಿ ಅಥವಾ ರಾಜಕಾರಣವಷ್ಟೇ ಅಲ್ಲದೆ, ದೇಶದ ಶಾಸಕಾಂಗ ವ್ಯವಸ್ಥೆ, ನ್ಯಾಯಾಂಗದ ಘನತೆ ಮತ್ತು ರಾಜಭವನದ ಸ್ವಾಯತ್ತತೆಗಳ ಭವಿಷ್ಯ ಕೂಡ ನಿರ್ಣಯವಾಗುವ ನಿರ್ಣಾಯಕ ಹೊತ್ತು.