ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ವಿಧಾನಸಭೆಯ ವಿಶ್ವಾಸ ಗೊತ್ತುವಳಿ ಮೇಲಿನ ಸುದೀರ್ಘ ಚರ್ಚೆ ರಾಜ್ಯಾದ್ಯಂತ ಸಾರ್ವಜನಿಕ ಕುತೂಹಲದ ಕೇಂದ್ರವಾಗಿದೆ. ಹದಿನೈದು ಮಂದಿ ಆಡಳಿತಾರೂಢ ದೋಸ್ತಿ ಪಕ್ಷಗಳ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿ ತಲೆಮರೆಸಿಕೊಂಡ ಬಳಿಕ ಉದ್ಭವವಾಗಿರುವ ರಾಜಕೀಯ ಅನಿಶ್ಚಿತತೆ ಮತ್ತು ಗೊಂದಲಗಳಿಗೆ ತೆರೆ ಎಳೆಯಲಿದೆ ಎಂಬ ಹಿನ್ನೆಲೆಯಲ್ಲಿ ಎಲ್ಲರ ಕಣ್ಣು ಸದನದ ಕಲಾಪದ ಮೇಲೆ ನೆಟ್ಟಿವೆ.
ಈ ನಡುವೆ, ಕಳೆದ ಶುಕ್ರವಾರ ಮತ್ತು ಈ ಸೋಮವಾರ ನಡೆದ ಸದನದ ಕಲಾಪ ಸಂವಿಧಾನ, ಸದನದ ನಿಯಮಾವಳಿಗಳು, ಜನಪ್ರತಿನಿಧಿಗಳ ಹಕ್ಕುಬಾಧ್ಯತೆಗಳು, ಶಿಷ್ಟಾಚಾರ, ಸ್ಪೀಕರ್ ಅಧಿಕಾರ ಮತ್ತು ಸ್ವಾಯತ್ತತೆ, ರಾಜ್ಯಪಾಲರ ಅಧಿಕಾರ ವ್ಯಾಪ್ತಿ ಸೇರಿದಂತೆ ಹಲವು ಮಹತ್ವದ ವಿಷಯಗಳ ಮೇಲಿನ ಗಂಭೀರ ಚರ್ಚೆಗೆ ವೇದಿಕೆಯಾಯಿತು. ಪಕ್ಷಾಂತರ ನಿಷೇಧ ಮಸೂದೆ, ಜನಪ್ರತಿನಿಧಿ ಕಾಯ್ದೆ ಮತ್ತು ಎಸ್ ಆರ್ ಬೊಮ್ಮಾಯಿ ಪ್ರಕರಣ ಸೇರಿದಂತೆ ವಿವಿಧ ನ್ಯಾಯಾಲಯದ ತೀರ್ಪುಗಳ ಕುರಿತ ಹಲವು ಸಂಗತಿಗಳ ಮಂಡನೆ ಮತ್ತು ಚರ್ಚೆಯ ಮೂಲಕ ಇಡೀ ಕಲಾಪ ರಾಜಕೀಯ ಆಸಕ್ತರ ಪಾಲಿನ ಪಾಠಶಾಲೆಯಂತಾಗಿತ್ತು.
ಬಹುಶಃ ಇತ್ತೀಚಿನ ದಶಕಗಳಲ್ಲೇ ಕರ್ನಾಟಕವೊಂದೇ ಅಲ್ಲದೆ, ದೇಶದ ಯಾವುದೇ ವಿಧಾನಸಭೆಯಲ್ಲಿಯೂ ಇಂತಹದ್ದೊಂದು ಗಂಭೀರ ಚರ್ಚೆಯ ಮತ್ತು ವಿಷಯ ಮಂಡನೆಯ ಕಲಾಪ ನಡೆದಿರುವುದು ವಿರಳ. ಅಷ್ಟರಮಟ್ಟಿಗೆ ಅನುಭವಿ ಸ್ಪೀಕರ್ ಮತ್ತು ಮುತ್ಸದ್ಧಿ ಕೆ ಆರ್ ರಮೇಶ್ ಕುಮಾರ್ ಅವರ ಸಭಾಧ್ಯಕ್ಷತೆಯಲ್ಲಿ ನಡೆದ ಕಲಾಪಗಳಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಸಚಿವ ಕೃಷ್ಣ ಭೈರೇಗೌಡ, ಜೆಡಿಎಸ್ ನಾಯಕ ಎ ಟಿ ರಾಮಸ್ವಾಮಿ, ಶಿವಲಿಂಗೇಗೌಡ, ಬಿಜೆಪಿ ನಾಯಕ ಜೆ ಸಿ ಮಾಧುಸ್ವಾಮಿ ಮತ್ತಿತರ ಕಲಾಪಪಟುಗಳು ಹೊಸ ತಲೆಮಾರಿನ ಶಾಸಕರು ಮತ್ತು ರಾಜಕೀಯ ಆಸಕ್ತರು ನೋಡಿ ಕಲಿಯಬೇಕಾದ ಹಲವು ಸಂಗತಿಗಳನ್ನು ಮಂಡಿಸಿದರು.
ಅದರಲ್ಲೂ ಮುಖ್ಯವಾಗಿ ಕೃಷ್ಣ ಭೈರೇಗೌಡ ಮತ್ತು ಎ ಟಿ ರಾಮಸ್ವಾಮಿ ಅವರು ಸೋಮವಾರ ಮಂಡಿಸಿದ ಕೆಲವು ಸಂಗತಿಗಳು ಇಡೀ ವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಗೆ ಹೊಸ ಆಯಾಮವನ್ನೇ ನೀಡಿದವು. ಶುಕ್ರವಾರ ಕೂಡ ಕೃಷ್ಣ ಭೈರೇಗೌಡ ಅವರು ಪ್ರಮುಖವಾಗಿ ಮಾತನಾಡಿ 15 ಮಂದಿ ಶಾಸಕರು ಕಲಾಪಕ್ಕೆ ಹಾಜರಾಗಬೇಕು ಎಂದು ಒತ್ತಡ ಹೇರುವಂತಿಲ್ಲ. ಕಲಾಪಕ್ಕೆ ಹಾಜರಾಗುವುದು ಅಥವಾ ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ತಮ್ಮ ಶಾಸಕರು ಪಕ್ಷದ ಶಿಸ್ತಿಗೆ ಒಳಪಡುವಂತೆ ಮಾಡುವ ವಿಪ್ ಜಾರಿಯ ತಮ್ಮ ಹಕ್ಕಿನ ಉಲ್ಲಂಘನೆಯಾಗಿದೆ ಎಂಬುದನ್ನು ಸಿದ್ದರಾಮಯ್ಯ ಮತ್ತು ಕೃಷ್ಣ ಭೈರೇಗೌಡ ಅವರಿಬ್ಬರೂ ಪ್ರಸ್ತಾವಿಸಿ ಕ್ರಿಯಾಲೋಪ ಮಂಡಿಸಿದ್ದರು.
ಅಲ್ಲದೆ, ರಾಜ್ಯಪಾಲರು, ಶುಕ್ರವಾರವೇ ವಿಶ್ವಾಸ ಮತ ಗೊತ್ತುವಳಿ ಮೇಲಿನ ಚರ್ಚೆ ಮುಗಿಸಿ ವಿಶ್ವಾಸ ಮತ ಯಾಚಿಸುವಂತೆ ನೀಡಿದ ಗಡುವು ಕೂಡ ಸಾಕಷ್ಟು ಚರ್ಚೆಗೆ ಒಳಗಾಯಿತು. ಆಗಲೂ ಪ್ರಮುಖವಾಗಿ ಕೃಷ್ಣ ಭೈರೇಗೌಡರು ಹಿಂದಿನ ಹಲವು ನ್ಯಾಯಾಲಯದ ತೀರ್ಪುಗಳನ್ನು ಪ್ರಸ್ತಾಪಿಸಿ ರಾಜ್ಯಪಾಲರು ಸದನದ ಮತ್ತು ಸ್ಪೀಕರ್ ಅವರ ಅಧಿಕಾರವ್ಯಾಪ್ತಿಯಲ್ಲಿ ಮೂಗು ತೂರಿಸುತ್ತಿದ್ದಾರೆ ಎಂಬುದನ್ನು ನಿರೂಪಿಸಿದ್ದರು. ಆ ಬಳಿಕ ಸದನ ರಾಜ್ಯಪಾಲರ ಗಡವಿಗೆ ಬೆಲೆ ನೀಡದೆ, ಯಥಾ ಪ್ರಕಾರ ವಿಸ್ತೃತ ಚರ್ಚೆಯ ಮೂಲಕ ವಿಶ್ವಾಸ ಮತ ಗೊತ್ತುವಳಿಯ ಕುರಿತ ಕಲಾಪವನ್ನು ಮುಂದುವರಿಸಿತ್ತು.
ಸೋಮವಾರ ಕೂಡ, ಕೃಷ್ಣ ಭೈರೇಗೌಡ ಅವರು ಪಕ್ಷಾಂತರ ನಿಷೇಧ ಕಾಯ್ದೆ, ಶಾಸಕರ ರಾಜೀನಾಮೆ, ವಿಪ್ ಜಾರಿ ಕ್ರಮಗಳು ಮತ್ತು ನ್ಯಾಯಾಲಯದ ಆದೇಶದ ಕುರಿತು ವ್ಯಾಪಕ ಅಧ್ಯಯನದ ಮೂಲಕ ಅತ್ಯಂತ ಕರಾರುವಕ್ಕಾಗಿ ವಿಷಯ ಮಂಡಿಸಿದರು. ಅದರಲ್ಲೂ, ಶಾಸಕರು ರಾಜೀನಾಮೆ ನೀಡಿದ ದಿನದಿಂದ ಈವರೆಗಿನ ಅವರ ಹೇಳಿಕೆಗಳು, ಪ್ರತಿಪಕ್ಷ ಬಿಜೆಪಿ ನಾಯಕರು ಮತ್ತು ಆ ಪಕ್ಷದ ಶಾಸಕರೊಂದಿಗೆ ಭಿನ್ನಮತೀಯರು ಹೊಂದಿರುವ ನಂಟು, ಅವರು ನಡೆಸಿದ ಸಂಭಾಷಣೆ, ಒಟ್ಟಿಗೆ ಪ್ರಯಾಣಿಸಿದ, ಸಭೆ ನಡೆಸಿದ ಮಾಹಿತಿಗಳನ್ನು ದಾಖಲೆ ಸಹಿತ ಸದನದಲ್ಲಿ ಮಂಡಿಸುವ ಮೂಲಕ, ಆ ಶಾಸಕರು ಹೇಗೆ ಸ್ಪಷ್ಟವಾಗಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ನಿರೂಪಿಸಿದರು.
ಜೊತೆಗೆ, 2008-09ರಿಂದ ಈವರೆಗೆ ಬಿಜೆಪಿ ನಡೆಸಿದ ಆಪರೇಷನ್ ಕಮಲ ಪ್ರಕರಣಗಳನ್ನೂ, ಮತ್ತು ದೇಶದ ಪಶ್ಚಿಮಬಂಗಾಳ, ಗುಜರಾತ್, ಗೋವಾ ಮುಂತಾದ ಕಡೆ ಬಿಜೆಪಿ ಅಲ್ಲಿನ ಸರ್ಕಾರಗಳನ್ನು ಕೆಡವಲು ಆಡಳಿತ ಪಕ್ಷದ ಶಾಸಕರಿಗೆ ಆಮಿಷವೊಡ್ಡಿ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದನ್ನು ಕೂಡ ಪ್ರಸ್ತಾಪಿಸಿ, ಇಡೀ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಬಹುಪಕ್ಷ ರಾಜಕೀಯ ಪದ್ಧತಿಯನ್ನೇ ಬುಡಮೇಲು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿ ಈ ವಿಷಯದಲ್ಲಿ ನೀವು ಅತ್ಯಂತ ವಿವೇಚನೆಯ ನಿರ್ಧಾರ ಕೈಗೊಳ್ಳಬೇಕು ಎಂದೂ ಸ್ಪೀಕರ್ ಗೆ ಮನವಿ ಮಾಡಿದರು.
ನಂತರ ಎ ಟಿ ರಾಮಸ್ವಾಮಿ ಕೂಡ ಭಿನ್ನಮತೀಯ ಶಾಸಕರ ವರ್ತನೆ, ಅವರ ಹಿಂದೆ ಇರುವ ಬಿಜೆಪಿಯ ಹುನ್ನಾರಗಳು, ಆಮಿಷ, ಅಪಹರಣ ಮುಂತಾದ ಸಂಗತಿಗಳನ್ನು ಪ್ರಸ್ತಾಪಿಸಿ, ಇದು ಒಂದು ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯಷ್ಟೇ ಅಲ್ಲ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದ ಘನತೆಯ ಪ್ರಶ್ನೆ. ಆ ಹಿನ್ನೆಲೆಯಲ್ಲಿ ಪ್ರಮುಖವಾಗಿ ರಾಜ್ಯಪಾಲರು ಭಿನ್ನಮತೀಯ ಶಾಸಕರಿಗೆ ನೀಡಿರುವ ವಿಶೇಷ ರಕ್ಷಣೆ ಮತ್ತು ಜೀರೋ ಟ್ರಾಫಿಕ್ ವ್ಯವಸ್ಥೆಯ ಕುರಿತು ತನಿಖೆಯಾಗಬೇಕು. ಯಾರು ಮತ್ತು ಯಾವ ಆಧಾರದ ಮೇಲೆ ಭಿನ್ನಮತೀಯ ಶಾಸಕರಿಗೆ ಮುಂಬೈನಿಂದ ವಾಪಸು ಬಂದು ಖುದ್ದು ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸುವಾಗ ಎಚ್ ಎ ಎಲ್ ವಿಮಾನ ನಿಲ್ದಾಣದಿಂದ ವಿಧಾನಸೌಧದವರೆಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು ಎಂಬ ಬಗ್ಗೆ ತನಿಖೆಗೆ ಸೂಚಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಪೀಕರ್ ಜೀರೋ ಟ್ರಾಫಿಕ್ ಆದೇಶದ ಬಗ್ಗೆ ಸದನಕ್ಕೆ ವಿವರ ನೀಡುವಂತೆ ಸೂಚಿಸಿದಾಗ, ಗೃಹ ಸಚಿವ ಎಂ ಬಿ ಪಾಟೀಲರು ನೀಡಿದ ಹಾರಿಕೆಯ ಮತ್ತು ಬೇಜವಾಬ್ದಾರಿಯ ಉತ್ತರ ಸ್ಪೀಕರ್ ಅವರನ್ನಷ್ಟೇ ಅಲ್ಲ, ಹಿರಿಯ ನಾಯಕ ಎ ಟಿ ರಾಮಸ್ವಾಮಿ ಅವರನ್ನೂ ಕೆರಳಿಸಿತು. ಭಿನ್ನಮತೀಯ ಶಾಸಕರು ರಕ್ಷಣೆ ನೀಡುವಂತೆ ಕೋರಿದ್ದ ಹಿನ್ನೆಲೆಯಲ್ಲಿ ರಾಜ್ಯಪಾಲರು ಅವರಿಗೆ ರಕ್ಷಣೆ ನೀಡುವಂತೆ ಸೂಚಿಸಿ ಪೊಲೀಸ್ ಮಹಾ ನಿರ್ದೇಶಕರಿಗೆ ಬರೆದ ಪತ್ರಗಳನ್ನು ಪ್ರದರ್ಶಿಸಿದ ಪಾಟೀಲ್, ರಕ್ಷಣೆ ನೀಡಲಾಗಿತ್ತು. ಅವರಿಗೆ ಜೀರೋ ಟ್ರಾಫಿಕ್ ನೀಡಿದ ಬಗ್ಗೆ ತಮ್ಮ ಬಳಿ ಮಾಹಿತಿ ಇಲ್ಲ ಎಂದು ಹಾರಿಕೆಯ ಉತ್ತರ ನೀಡಿದರು. ಆದರೆ, ಸ್ಪೀಕರ್ ರಮೇಶ್ ಕುಮಾರ್, ಒಬ್ಬ ಗೃಹ ಸಚಿವರಾಗಿ ನಿಮಗೆ ಇಡೀ ದೇಶವೇ ನೋಡಿದ ಜೀರೋ ಟ್ರಾಫಿಕ್ ವ್ಯವಸ್ಥೆ ಗಮನಕ್ಕೆ ಬಂದಿಲ್ಲವೇ? ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತೇ ಇಲ್ಲವೇ? ಮಾಡಲಾಗಿದ್ದರೆ ಯಾವ ಆಧಾರದ ಮೇಲೆ ಮತ್ತು ಯಾರ ಆದೇಶದ ಮೇಲೆ ಮಾಡಲಾಗಿತ್ತು ಎಂಬುದನ್ನು ಸದನಕ್ಕೆ ತಿಳಿಸಿ ಎಂದು ಜಾಡಿಸಿದರು. ಎ ಟಿ ರಾಮಸ್ವಾಮಿ ಅವರಂತೂ ಇಂತಹದ್ದೊಂದು ಗಂಭೀರ ಉಲ್ಲಂಘನೆ ಆಗಿರುವಾಗ ಗೃಹ ಸಚಿವರು ಸದನವನ್ನು ದಿಕ್ಕುತಪ್ಪಿಸುವ ರೀತಿ ಹಾರಿಕೆ ಉತ್ತರ ನೀಡುವುದು ಸರಿಯಲ್ಲ. ಇಂತಹ ವಿಷಯದಲ್ಲಿ ಇಷ್ಟು ಲಘುವಾಗಿ ಪರಿಗಣಿಸುವ ಈ ಸದನದಲ್ಲಿ ನನ್ನಂಥವರು ಇರುವುದು ಏತಕ್ಕೆ. ನಾನು ಈಗಲೇ ಹೊರನಡೆಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಹಿರಿಯ ಸಚಿವ ಎಚ್ ಕೆ ಪಾಟೀಲ್ ಕೂಡ ಇಡೀ ರಾಜ್ಯವೇ ಕಂಡಿರುವ ಜೀರೋ ಟ್ರಾಫಿಕ್ ಬಗ್ಗೆ ಗೃಹ ಸಚಿವರು ಸದನವನ್ನು ದಿಕ್ಕುತಪ್ಪಿಸುವಂತಹ ಹೇಳಿಕೆ ನೀಡುವುದು ಸರಿಯಲ್ಲ. ಅವರು ಕೂಡಲೇ ಸದನಕ್ಕೆ ಸರಿಯಾದ ಮಾಹಿತಿ ನೀಡಲಿ ಎಂದು ಆಗ್ರಹಿಸಿದರು. ಒಂದು ಹಂತದಲ್ಲಿ ಇದು ದೋಸ್ತಿ ಸರ್ಕಾರಗಳ ನಡುವೆಯೇ ಬಿಸಿಬಿಸಿ ಚರ್ಚೆಗೆ ಗ್ರಾಸವಾಯಿತು. ಬಳಿಕ ತಮ್ಮ ತಪ್ಪಿನ ಅರಿವಾಗಿ ಗೃಹ ಸಚಿವರು ನಾಳೆ ದಾಖಲೆ ಸಹಿತ ಸದನಕ್ಕೆ ಮಾಹಿತಿ ನೀಡುವುದಾಗಿ ಹೇಳಿದ ಬಳಿಕ ಆ ವಿಷಯದ ಚರ್ಚೆಗೆ ಮುಕ್ತಾಯ ಹಾಡಲಾಯಿತು.
ಬಳಿಕ ಮತ್ತೊಂದು ಇಂತಹದ್ದೇ ಕುತೂಹಲಕಾರಿ ವಿಷಯದ ಚರ್ಚೆಗೂ ಸದನ ಸಾಕ್ಷಿಯಾಯಿತು. ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ವಿಶ್ವಾಸ ಗೊತ್ತುವಳಿ ಚರ್ಚೆಗೆ ಇನ್ನೂ ಎರಡು ದಿನ ಕಾಲಾವಕಾಶ ಬೇಕು ಎಂದು ಸ್ಪೀಕರ್ ಗೆ ಮನವಿ ಮಾಡುತ್ತಾ, ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಅವರದ್ದು ಎನ್ನಲಾಗುತ್ತಿರುವ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಲಿಂಗ ಕಾಮದ ವೀಡಿಯೋ ಮತ್ತು ಆಡಿಯೋ ತುಣುಕುಗಳ ಬಗ್ಗೆ ಪ್ರಸ್ತಾಪಿಸಿ ಶಾಸಕರ ವೈಯಕ್ತಿಕ ನಿಂದನೆಯ ಇಂತಹ ಪ್ರಯತ್ನಗಳಿಗೆ ಕಡಿವಾಣ ಹಾಕಲು ನಾವು ವಿಸ್ತೃತ ಚರ್ಚೆ ಮಾಡಬೇಕಾದ ಅಗತ್ಯವಿದೆ ಎಂದರು. ಆಗ ಸ್ಪೀಕರ್ ಅದು ಅವರ ವೈಯಕ್ತಿಕ ವಿಷಯ, ಸದನದಲ್ಲಿ ಅದರ ಪ್ರಸ್ತಾಪ ಬೇಡ ಎಂದರು. ಪ್ರತಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ಕೂಡ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಸ್ವತಃ ಲಿಂಬಾವಳಿಯವರು ಎದ್ದು ನಿಂತು, ‘ಇದು ತಮ್ಮ ತೇಜೋವಧೆಗೆ ಮಾಡಿರುವ ಪ್ರಯತ್ನ. ಈ ಕುರಿತು ತನಿಖೆಗೆ ಆದೇಶಿಸಬೇಕು. ಅದನ್ನು ಯಾರೇ ಮಾಡಿರಲಿ, ಆ ಕಡೆಯವರಾಗಲೀ(ಆಡಳಿತ ಪಕ್ಷದ ಕಡೆ ಕೈ ತೋರಿಸಿ) ಅಥವಾ ಈ ಕಡೆ(ತಮ್ಮದೇ ಪಕ್ಷದ ಸಾಲಿನ ಕಡೆ ಕೈ ತೋರಿಸಿ)ಯವರೇ ಮಾಡಿರಲಿ, ಇಂತಹದ್ದು ಯಾರಿಗೂ ಆಗಬಾರದು. ಹೆಂಡತಿ- ಮಕ್ಕಳಿರುವ ನಾನು ಅವರಿಗೆ ಹೇಗೆ ಮುಖ ತೋರಿಸಲಿ, ಅವರು ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ’ ಎಂದು ಕಣ್ಣೀರಿಟ್ಟರು. ಆಗ ಸ್ಪೀಕರ್, ಈಗ ಈ ಸದನ ಸಂದಿಗ್ಧತೆಯಲ್ಲಿದೆ. ಈ ಗೊತ್ತುವಳಿ ಬಳಿಕ ಮುಂದಿನ ದಿನಗಳಲ್ಲಿ ಆ ಬಗ್ಗೆ ನೋಡೋಣ ಎಂದು ಸಮಾಧಾನಪಡಿಸಿದರು.
ಈ ನಡುವೆ ಪಕ್ಷೇತರ ಶಾಸಕರಿಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರ ಕೈಗೆತ್ತಿಕೊಳ್ಳಲಿದೆ. ಜೊತೆಗೆ ಕಾಂಗ್ರೆಸ್ ನಾಯಕರು ಮತ್ತು ಸಿಎಂ ಸಲ್ಲಿಸಿರುವ ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳನ್ನು ಕೂಡ ಕೋರ್ಟ್ ಮಂಗಳವಾರವೇ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಹಾಗಾಗಿ ಕಲಾಪವನ್ನು ವಿಸ್ತರಿಸುವಂತೆ ಮತ್ತು ವಿಶ್ವಾಸ ಗೊತ್ತುವಳಿಯನ್ನು ಮಂಗಳವಾರ ಮತಕ್ಕೆ ಹಾಕುವಂತೆ ಸಿಎಂ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿದ ಮನವಿಯನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಮಾನ್ಯ ಮಾಡಲಿಲ್ಲ. ಆದರೂ ಕೊನೇ ಕ್ಷಣದವರೆಗೆ ಆಡಳಿತ ಪಕ್ಷದ ನಾಯಕರು ಕಲಾಪವನ್ನು ನಾಳೆಗೆ ಮುಂದೂಡುವ ಬಗ್ಗೆ ಸ್ಪೀಕರ್ ಮನವೊಲಿಸುವ ಪ್ರಯತ್ನ ಮುಂದುವರಿಸಿದ್ದರು.
ಅಂದರೆ; ಸೋಮವಾರದ ಕಲಾಪ, ಏಕ ಕಾಲಕ್ಕೆ ಕೃಷ್ಣ ಭೈರೇಗೌಡರಂತಹ ಘನ ಗಂಭೀರ ಸಂಸದೀಯ ಸಂಗತಿಗಳನ್ನು ಮಂಡಿಸಿದ ಅಪರೂಪದ ಸಂಸದೀಯ ಪಟುಗಳ ಪ್ರತಿಭೆ ಮತ್ತು ಪಾಂಡಿತ್ಯ ಪ್ರದರ್ಶನಕ್ಕೆ ಸಾಕ್ಷಿಯಾದಂತೆ, ಗೃಹ ಸಚಿವ ಎಂ ಬಿ ಪಾಟೀಲರಂತಹ ಬೇಜವಾಬ್ದಾರಿಯ ಹೇಳಿಕೆ ಮತ್ತು ನಡವಳಿಕೆಗಳಿಗೂ ಸಾಕ್ಷಿಯಾಯಿತು. ಎ ಟಿ ರಾಮಸ್ವಾಮಿಯವರಂತಹ ಹಿರಿಯ ಮುತ್ಸದ್ಧಿಯ ಆಕ್ರೋಶದಂತೆಯೇ, ಲಿಂಬಾವಳಿಯವರಂತಹ ನಾಯಕರ ಕಣ್ಣೀರಿಗೂ ಸಾಕ್ಷಿಯಾಯಿತು. ಒಟ್ಟಾರೆ, ದೇಶದ ಇತ್ತೀಚಿನ ವರ್ಷಗಳ ಸಂಸದೀಯ ಪಟುತ್ವದ ಇತಿಹಾಸದಲ್ಲಿ ಸೋಮವಾರದ ಕಲಾಪ ಒಂದು ಮೈಲಿಗಲ್ಲಾಗಿ ದಾಖಲಾಯಿತು!