‘ಪಾರದರ್ಶಕ ಆಡಳಿತ ನೀಡಲು ಮೋದಿ ಸರ್ಕಾರಕ್ಕೆ ಸರಿಸಾಟಿ ಯಾರಿಲ್ಲ’ ಎಂಬಂತೆ ಬಿಂಬಿಸಿಕೊಂಡಿದ್ದ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಈಗ ಮಾಹಿತಿ ಹಕ್ಕು ಕಾಯಿದೆಯನ್ನೇ ದುರ್ಬಲಗೊಳಿಸಿ ಅದನ್ನೊಂದು ಹಲ್ಲು ಕಿತ್ತ ಹಾವಿನಂತಾಗಿಸಿ ತನ್ನ ಪರಮಾಧಿಕಾರ ಸ್ಥಾಪಿಸಲು ಎಲ್ಲಾ ತಯಾರಿ ನಡೆಸಿದೆ. ಸರ್ಕಾರದ ಈ ಕ್ರಮದ ಬಗ್ಗೆ ದೇಶದಾದ್ಯಂತ ಜನ ಚಳವಳಿಗಾರರ ತೀವ್ರ ವಿರೋಧ ಏರ್ಪಟ್ಟಿದೆ. ಸೋಮವಾರ ಲೋಕಸಭೆಯಲ್ಲಿ ವಿಪಕ್ಷಗಳ ಪ್ರತಿರೋಧದ ನಡುವೆಯೂ 2005ರ ಮಾಹಿತಿ ಹಕ್ಕು ಕಾಯಿದೆಗೆ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಲಾಗಿದೆ.
ಕೇಂದ್ರ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ಅಧಿಕಾರಾವಧಿ ಹಾಗು ಅವರ ವೇತನದ ಬಗ್ಗೆ ತೀರ್ಮಾನಿಸಲು ಕೇಂದ್ರ ಸರ್ಕಾರಕ್ಕೆ ಪರಮಾಧಿಕಾರ ನೀಡುವ ಪ್ರಸ್ತಾಪ ಈ ವಿಧೇಯಕದಲ್ಲಿದೆ. 79 ಸಂಸದರ ವಿರೋಧ ಮತಗಳಿಗೆ ಎದುರಾಗಿ 178 ಸದಸ್ಯರು ವಿಧೇಯಕಕ್ಕೆ ಬೆಂಬಲ ಸೂಚಿಸಿದ ನಂತರ ಲೋಕಸಭೆಯಲ್ಲಿ 2019 ರ ಆರ್ ಟಿ ಐ (ತಿದ್ದುಪಡಿ) ವಿಧೇಯಕ ಅನುಮೋದನೆಗೊಂಡಿದೆ. ರಾಜ್ಯಸಭೆಯಲ್ಲಿ ಈ ಮಸೂದೆ ಇನ್ನು ಚರ್ಚೆಗೆ ಬರಬೇಕಿದ್ದು, ಅಲ್ಲಿ ಈ ಮಸೂದೆಯನ್ನು ಸಂಸದೀಯ ಸದನ ಸಮಿತಿಗೆ ವರ್ಗಾಯಿಸುವಂತೆ ಒತ್ತಾಯಿಸಲು ವಿರೋಧಪಕ್ಷಗಳು ಚಿಂತನೆ ನಡೆಸಿವೆ.
ಕಮ್ಯುನಿಸ್ಟ್ ಪಕ್ಷಗಳ ಬಾಹ್ಯ ಬೆಂಬಲ ಪಡೆದಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ-1 ಸರ್ಕಾರ, 2005ರಲ್ಲಿ ಮಾಹಿತಿ ಹಕ್ಕು ಕಾಯಿದೆಯನ್ನು ರೂಪಿಸಿ ಜಾರಿಗೆ ತಂದಿತು. ಈ ಕಾಯಿದೆ ವಿಕೇಂದ್ರೀಕೃತ ಪಾರದರ್ಶಕ ಆಡಳಿತ ವ್ಯವಸ್ಥೆಗೆ ಮುನ್ನುಡಿ ಬರೆಯಿತೆಂದು ಹೇಳಲಾಗುತ್ತದೆ. ಸಾಮಾಜಿಕ ಹೋರಾಟಗಾರ್ತಿ ಮತ್ತು ಮಾಜಿ ಐಎಎಸ್ ಅಧಿಕಾರಿ ಎಂಕೆಎಸ್ಎಸ್ ನ ಮುಖ್ಯಸ್ಥೆ ಅರುಣಾ ರಾಯ್, ನಿಖಿಲ್ ಡೇ ಮೊದಲಾದವರು ಈ ಕಾಯಿದೆ ರೂಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇವರೊಡನೆ ಇನ್ನೂ ಅನೇಕ ಜನಪರ ಸಂಘಟನೆಗಳು, ಸಂಘಸಂಸ್ಥೆಗಳು ಜನಾಂದೋಲನಗಳನ್ನು ಸಂಘಟಿಸಿ ಮಾಹಿತಿ ಹಕ್ಕು ಕಾಯಿದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹೋರಾಟ ಕೈಗೊಂಡಿದ್ದಾರೆ.
ಜನಪರವಾದ 2005ರ ಮಾಹಿತಿ ಹಕ್ಕು ಕಾಯಿದೆ
2005ರಲ್ಲಿ ರೂಪುಗೊಂಡ ಮಾಹಿತಿ ಹಕ್ಕು ಕಾಯಿದೆ ಸಾರ್ವಜನಿಕರಿಗೆ ಸರ್ಕಾರದ, ಸರ್ಕಾರಿ ಇಲಾಖೆಗಳ, ಸಾರ್ವಜನಿಕ ಅನುದಾನ ಪಡೆದ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆ ಅಧಿಕೃತವಾಗಿ ತಿಳಿವಳಿಕೆ/ ಮಾಹಿತಿ ಪಡೆಯಲು ಅನುಕೂಲ ಮಾಡಿಕೊಟ್ಟಿತು, ಅದನ್ನು ಕಾನೂನಾತ್ಮಕವಾಗಿ ಆಗುಮಾಡಿತು. ಇದರಿಂದಾಗಿ ಭ್ರಷ್ಟಾಚಾರವನ್ನು, ಭ್ರಷ್ಟರನ್ನು ಪ್ರಶ್ನಿಸಲು ಸಾಧ್ಯವಾಯಿತು. ಹಲವು ಹಗರಣಗಳು ಮಾಹಿತಿ ಹಕ್ಕು ಕಾಯಿದೆಯನ್ನು ಬಳಸಿಕೊಳ್ಳುವ ಮೂಲಕವೇ ಬಹಿರಂಗಗೊಂಡವು. ವ್ಯವಸ್ಥೆಯಲ್ಲಿನ ಅನ್ಯಾಯಗಳನ್ನು ಎತ್ತಿಹಿಡಿದು ಅವುಗಳನ್ನು ಪ್ರಶ್ನಿಸಿದ ಅನೇಕ ಮಾಹಿತಿ ಹಕ್ಕು ಕಾರ್ಯಕರ್ತರು ದೇಶಾದ್ಯಂತ ಕೊಲೆಗೀಡಾಗಿದ್ದಾರೆ. ಸಾಕಷ್ಟು ಬಾರಿ ಭಾರತೀಯ ಪ್ರಜೆಗಳು ತಮ್ಮ ಮೂಲಭೂತ ಹಕ್ಕುಗಳನ್ನು, ಸೌಕರ್ಯಗಳನ್ನು ಗಳಿಸಿಕೊಳ್ಳಲು ಈ ಕಾಯಿದೆಯನ್ನು ಬಳಸಿಕೊಂಡಿದ್ದಾರೆ. ಒಂದು ವರದಿಯ ಪ್ರಕಾರ ದೇಶಾದ್ಯಂತ ಪ್ರತಿ ವರ್ಷ ಮಾಹಿತಿ ಹಕ್ಕು ಕಾಯಿದೆಯನ್ನು ವಿವಿಧ ಕಾರಣಗಳಿಗಾಗಿ 6 ದಶಲಕ್ಷ ನಾಗರಿಕರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಭಾರತೀಯರ ತಿಳಿವಳಿಕೆ/ ಮಾಹಿತಿ ಪಡೆಯುವ ಮೂಲಭೂತ ಹಕ್ಕನ್ನು ಮೂಲ ಕಾಯಿದೆಯು ಸಾಕಾರಗೊಳಿಸುತ್ತದೆ. 2005ರಲ್ಲಿ ಅನುಮೋದನೆಗೊಂಡ ಈ ಕಾಯಿದೆ ಜನಚಳವಳಿಗಳಿಗೆ ಮತ್ತು ಆಂದೋಲನಗಳಿಗೆ ಸಂದ ಜಯ ಎಂದೇ ಭಾವಿಸಲಾಗಿತ್ತು.
ಪ್ರಸ್ತಾಪಿತ ಕಾಯಿದೆ ತಿದ್ದುಪಡಿಯಲ್ಲೇನಿದೆ?
ಇದೀಗ ಮೋದಿ 2.0 ಸರ್ಕಾರ ಮಾಹಿತಿ ಹಕ್ಕು ಕಾಯಿದೆಯನ್ನು ದುರ್ಬಲಗೊಳಿಸಿ, ಮಾಹಿತಿ ಆಯೋಗವನ್ನು ತನ್ನ ಕಪಿಮುಷ್ಟಿಯಲ್ಲಿರಿಸಿಕೊಳ್ಳಲು ತಿದ್ದುಪಡಿಗೆ ಮುಂದಾಗಿದೆ. ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಸಮಿತಿಯನ್ನು ಕೈಬಿಟ್ಟು ನೇರವಾಗಿ ಕೇಂದ್ರ ಸರ್ಕಾರವೇ ಕೈಗೊಳ್ಳುವಂತೆ ಕಾಯಿದೆಗೆ ಬದಲಾವಣೆಯನ್ನು ಪ್ರಸ್ತಾಪಿಸಿದೆ. ಕೇಂದ್ರ ಸರ್ಕಾರ ಪ್ರಜಾತಾಂತ್ರಿಕ ಮೌಲ್ಯಗಳನ್ನು ಕಡೆಗಣಿಸಿ ಎಲ್ಲಾ ಅಧಿಕಾರವನ್ನೂ ತನ್ನಲ್ಲೇ ಉಳಿಸಿಕೊಳ್ಳುವ ಹುನ್ನಾರ ನಡೆಸಿರುವುದು ಇಲ್ಲಿ ಸ್ಪಷ್ಟವಾಗಿದೆ. ಅಲ್ಲದೆ ಆಡಳಿತದಲ್ಲಿ ಪಾರ್ದರ್ಶಕತೆ ತರಬೇಕೆಂಬ ಮಾಹಿತಿ ಹಕ್ಕು ಕಾಯಿದೆಯ ಮೂಲ ಉದ್ದೇಶಕ್ಕೆ ಕೊಡಲಿಪೆಟ್ಟು ನೀಡಿದೆ.
2005ರ ಮಾಹಿತಿ ಹಕ್ಕು ಕಾಯಿದೆಯಲ್ಲಿ ಕೆಲವು ಮೂಲಭೂತ ಬದಲಾವಣೆಗಳನ್ನು ತಂದು ಮಾಹಿತಿ ಹಕ್ಕು (ತಿದ್ದುಪಡಿ) ವಿಧೇಯಕವನ್ನು ಲೋಕಸಭೆಯಲ್ಲಿ ಅನುಮೋದಿಸಲಾಗಿದೆ. ಇವು ಆತಂಕಕಾರಿಯಾಗಿವೆ. ಮಾಹಿತಿ ಆಯುಕ್ತರ ಅಧಿಕಾರಾವಧಿಗೆ ಸಂಬಂಧಿಸಿದಂತೆ ಮಹತ್ವದ ಮತ್ತು ಅಪಾಯಕಾರಿ ತಿದ್ದುಪಡಿಗಳನ್ನು ತರಲಾಗಿದೆ. ಮೂಲ ಕಾಯಿದೆಯ ಪ್ರಕಾರ ಮುಖ್ಯ ಮಾಹಿತಿ ಆಯುಕ್ತರು (CIC) ಮತ್ತು ಕೇಂದ್ರ ಹಾಗು ರಾಜ್ಯ ಮಟ್ಟದ ಮಾಹಿತಿ ಆಯುಕ್ತರು 5 ವರ್ಷದ ನಿಗದಿತ ಅಧಿಕಾರಾವಧಿ ಹೊಂದಿರುತ್ತಾರೆ. ಆದರೆ 2019ರ ತಿದ್ದುಪಡಿ ವಿಧೇಯಕದಲ್ಲಿ ಈ ಷರತ್ತನ್ನು ತೆಗೆದುಹಾಕಿದೆ. ಕೇಂದ್ರ ಸರ್ಕಾರವೇ CIC ಮತ್ತು ಮಾಹಿತಿ ಆಯುಕ್ತರ ಅಧಿಕಾರಾವಧಿಯನ್ನು ನಿಗದಿಪಡಿಸಿ ಆದೇಶ ಹೊರಡಿಸುತ್ತದೆ. ಇದು ನಿರ್ದಿಷ್ಟ ಅವಧಿ ಎಂದಿರುವುದಿಲ್ಲ. ಸರ್ಕಾರದ ವಿರುದ್ಧವಾಗಿ ನಡೆದುಕೊಳ್ಳುವ, ಅದರ ಭ್ರಷ್ಟಾಚಾರವನ್ನು ಪ್ರಾಮಾಣಿಕವಾಗಿ ಹೊರಹಾಕುವ ಆಯುಕ್ತರು ದೀರ್ಘಕಾಲ ಅಧಿಕಾರ ಹೊಂದಿರಲಾರರು ಎಂಬುದೇ ಇದರ ಸಾರ!
ಮಾಹಿತಿ ಆಯುಕ್ತರ ವೇತನಕ್ಕೆ ಸಂಬಂಧಿಸಿದಂತೆಯೂ ತಿದ್ದುಪಡಿ ಪ್ರಸ್ತಾಪಿಸಲಾಗಿದೆ. ಮೂಲ ಕಾಯಿದೆಯಲ್ಲಿ ಮುಖ್ಯ ಮಾಹಿತಿ ಆಯುಕ್ತರು ಮತ್ತು ಇತರ ಮಾಹಿತಿ ಆಯುಕ್ತರ ವೇತನವು ಕ್ರಮವಾಗಿ ಮುಖ್ಯ ಚುನಾವಣಾ ಆಯುಕ್ತರ ಮತ್ತು ಚುನಾವಣಾ ಆಯುಕ್ತರ ವೇತನದಷ್ಟಿರುತ್ತದೆ. ಅದೇ ರೀತಿ ರಾಜ್ಯ ಮಟ್ಟದಲ್ಲೂ ಚುನಾವಣಾ ಆಯುಕ್ತರು ಮತ್ತು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ವೇತನಕ್ಕೆ ಸರಿಸಮನಾಗಿ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಮತ್ತಿತರ ಮಾಹಿತಿ ಆಯುಕ್ತರ ವೇತನ ನಿಗದಿಯಾಗಿರುತ್ತದೆ. ಇದರ ಬದಲಿಗೆ ರಾಜ್ಯ ಮತ್ತು ಕೇಂದ್ರದ ಎಲ್ಲಾ ಚುನಾವಣಾ ಆಯುಕ್ತರ ವೇತನವನ್ನೂ ಕೇಂದ್ರ ಸರ್ಕಾರವೇ ನಿರ್ಧರಿಸುವಂತೆ ಮೋದಿ 2.0 ಸರ್ಕಾರ ಕಾನೂನು ಮಾರ್ಪಾಟು ಮಾಡಲು ಹೊರಟಿದೆ. ಅಧಿಕಾರಿಗಳನ್ನು ತನ್ನ ಗುಲಾಮರನ್ನಾಗಿಸಿಕೊಳ್ಳುವುದು ಮತ್ತು ಅದರಿಂದ ತನ್ನ ಬೇಳೆ ಬೇಯಿಸಿಕೊಳ್ಳುವುದು ನರೇಂದ್ರ ಮೋದಿ ಸರ್ಕಾರದ ಆಶಯವಾಗಿದೆ.
ಈ ತಿದ್ದುಪಡಿಯಿಂದ ಜನತೆಗೇನು ನಷ್ಟ?
ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಾಪಾಡುವ ಶಾಸನಾತ್ಮಕವಾದ ಅತಿ ಮಹತ್ವದ ಹುದ್ದೆಯ ನೇಮಕಾತಿಯಲ್ಲಿ ಅಭ್ಯರ್ಥಿಗಳ ಎಲ್ಲಾ ಅರ್ಹತೆಗಳನ್ನೂ ಮೀರಿ ಕೇಂದ್ರ ಸರ್ಕಾರ ಏಕಮುಖಿಯಾಗಿ ತಾನೇ ನಿರ್ಧಾರ ಕೈಗೊಳ್ಳುವ ಕಾನೂನನ್ನು ರೂಪಿಸಿಕೊಳ್ಳುತ್ತಿದೆ. ಇದರ ಅರ್ಥ ಕೇಂದ್ರ ಸರ್ಕಾರ ತನ್ನ ಚೇಲಾ ಬಾಲಗಳನ್ನು ಆ ಸ್ಥಾನದಲ್ಲಿ ಕೂರಿಸಿ ಪಾರದರ್ಶಕ ಆಡಳಿತದ ನಾಟಕವಾಡುತ್ತದೆ. ಆಗ ಸರ್ಕಾರದ, ಸರ್ಕಾರಿ ಸಂಸ್ಥೆಗಳಲ್ಲಿನ, ಜನಪ್ರತಿನಿಧಿಗಳಿಗೆ ಸಂಬಂಧಪಟ್ಟ, ಯಾವುದೇ ಸಾರ್ವಜನಿಕ ಮಾಹಿತಿಯೂ ಜನತೆಗೆ ಲಭ್ಯವಾಗುವುದಿಲ್ಲ. ಪ್ರಜಾತಂತ್ರದ ಮೂಲ ಆಶಯವೇ ಮಣ್ಣುಪಾಲಾಗುತ್ತದೆ. ಜನತೆ ಹೋರಾಟದಿಂದ ಗಳಿಸಿದ ಮಾಹಿತಿ ಹಕ್ಕನ್ನು ಮೋದಿ ಸರ್ಕಾರ ಕಸಿಯುವ ಸಂಚು ರೂಪಿಸಿದೆ. ಸರ್ಕಾರಗಳ ಬೃಹದಾಕಾರದ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿಹಾಕಲು ಅವುಗಳಿಗೆ ಸುಲಭವಾಗುತ್ತದೆ. ಜನಸಾಮಾನ್ಯರೂ ಸಹ ತಮ್ಮ ಅಹವಾಲುಗಳುಗಳನ್ನು ಮೇಲಧಿಕಾರಿಗಳ ಬಳಿ ಹೊತ್ತೊಯ್ದು ನ್ಯಾಯ ಪಡೆಯಬಹುದೆಂಬ ಕನಸನ್ನು ಈಗ ನುಚ್ಚುನೂರು ಮಾಡಲಾಗಿದೆ. ಏಕೆಂದರೆ ಮಾಹಿತಿ ಆಯುಕ್ತರು ಇನ್ನು ಮುಂದೆ ಆ ಕ್ಷೇತ್ರದ ತಜ್ಞರಾಗಿರುವುದಿಲ್ಲ, ಬದಲಿಗೆ ಕೇಂದ್ರ ಸರ್ಕಾರವೇ ನೇಮಿಸುವ ತನ್ನ ಪಕ್ಷದ ರಾಜಕಾರಣಿಯಾಗಿರುತ್ತಾರೆ (ಬಿಜೆಪಿ ನಾಯಕರಾದ ರಾಜ್ಯಪಾಲರು ತಮ್ಮ ವಿರೋಧಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಸರ್ಕಾರಗಳನ್ನು ಸಂವಿಧಾನದ ವಿರುದ್ಧವಾಗಿ ನಡೆಸಿಕೊಳ್ಳುತ್ತಿರುವುದನ್ನು ನಾವು ಈಗ ಕಾಣುತ್ತಿದ್ದೇವೆ. ಹೊಸ ತಿದ್ದುಪಡಿಯಿಂದ ಮಾಹಿತಿ ಆಯುಕ್ತರೂ ರಾಜ್ಯಪಾಲರಂತೆಯೇ ಸ್ವಜನ ಪಕ್ಷಪಾತಿ ಆಗಲಿದ್ದಾರೆ!) ಈ ತಿದ್ದುಪಡಿ ಮಾಹಿತಿ ಹಕ್ಕಿಗೆ ಸಂಬಂಧಿಸದಂತೆ ಮರಣಶಾಸನವಾಗಲಿದೆ.
ಮಾಹಿತಿ ಹಕ್ಕು ಕಾಯಿದೆಗೆ ಬೆಚ್ಚಿಬಿದ್ದಿದ್ದ ಭ್ರಷ್ಟರು
ಮಾಹಿತಿ ಹಕ್ಕು ಕಾಯಿದೆಯು ಶೋಷಿತ ಮತ್ತು ತಳಸಮುದಾಯಗಳಿಗೆ ನ್ಯಾಯ ಒದಗಿಸುವ ಪ್ರಮುಖ ಸಾಧನವಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಹಿಳೆಯರೂ ಸಹ ಈ ಕಾಯಿದೆಯ ಸದುಪಯೋಗ ಪಡೆದುಕೊಂಡು ತಮ್ಮ ಮೂಲಭೂತ ಹಕ್ಕುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಅಧಿಕಾರಿಗಳು ಬಾಯಿಮಾತಿನಲ್ಲಿ ಒದಗಿಸಲು ನಿರಾಕರಿಸುವ “ಸಾರ್ವಜನಿಕ” ಮಾಹಿತಿಯೊಂದು ಜನಸಾಮಾನ್ಯರಿಗೆ ಬೇಕೆಂದಾಗ, ಸಾರ್ವಜನಿಕರು ಲಿಖಿತವಾಗಿ ನಿಗದಿತ ನಮೂನೆಯ ಅರ್ಜಿಯಲ್ಲಿ ನೀಡಬಹುದು. 30 ಕೆಲಸದ ದಿನಗಳೊಳಗಾಗಿ ಸಂಬಂಧಪಟ್ಟ ಅಧಿಕಾರಿ ಆ ಮಾಹಿತಿಯನ್ನು ಅರ್ಜಿದಾರರಿಗೆ ಒದಗಿಸತಕ್ಕದ್ದು. ಅಧಿಕಾರಿಯು ಮಾಹಿತಿ ನೀಡದೆ ಲೋಪ ಎಸಗಿದ್ದು ಕಂಡುಬಂದಲ್ಲಿ ಆತನ ಕೃತ್ಯ ಕಾನೂನು ಪ್ರಕಾರ ಶಿಕ್ಷಾರ್ಹವಾಗುತ್ತದೆ. ಇದು ಕಾಯಿದೆಯ ಮೂಲ ಅಂಶ. ಈ ಕಾಯಿದೆಯನ್ನು ಸ್ವಾರ್ಥ ಲಾಭಕ್ಕೆ ದುರುಪಯೋಗ ಮಾಡಿಕೊಳ್ಳುವವರು ಸಹ ಹಲವೆಡೆ ಇದ್ದರೂ, ಇದು ದೇಶದಲ್ಲಿ ಭ್ರಷ್ಟಾಚಾರವಿರೋಧಿ ಶಕ್ತಿಗಳಿಗೆ ಬಲ ತುಂಬಿರುವುದಂತೂ ನಿಜ.

ಮಾಹಿತಿ ಆಯೋಗವೆಂಬ ಸ್ವಾಯತ್ತ ಸಂಸ್ಥೆಗೆ ಈಗ ಮೂಗುದಾರ
ಈ ಎಲ್ಲಾ ವ್ಯವಹಾರಗಳನ್ನು ಕೈಗೊಳ್ಳಲು ಮಾಹಿತಿ ಹಕ್ಕು ಆಯೋಗ ಎಂಬ ಜವಾಬ್ದಾರಿಯುತ ಸ್ವಾಯತ್ತ ಸಂಸ್ಥೆಯನ್ನು ಸ್ಥಾಪಿಸಲು ಮೂಲ ಕಾಯಿದೆ ನಿರ್ದೇಶಿಸುತ್ತದೆ. ಕೇಂದ್ರ ಮಾಹಿತಿ ಆಯುಕ್ತರ ನೇಮಕಾತಿಯ ಕುರಿತು 2005ರ ಮಾಹಿತಿ ಹಕ್ಕು ಕಾಯಿದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಪ್ರಧಾನ ಮಂತ್ರಿಯವರ ಅಧ್ಯಕ್ಷತೆ ಹೊಂದಿರುವ ಮೂರು ಜನರ ಸಮಿತಿಯಲ್ಲಿ ಲೋಕಸಭೆಯ ವಿರೋಧಪಕ್ಷದ ನಾಯಕ/ಕಿ ಮತ್ತು ಪ್ರಧಾನಿ ನೇಮಿಸಿರುವ ಕೇಂದ್ರ ಸಂಪುಟ ಸಚಿವರೊಬ್ಬರಿದ್ದು, ಈ ಸಮಿತಿಯು ಕೇಂದ್ರ ಮಾಹಿತಿ ಆಯುಕ್ತರನ್ನು ನೇಮಿಸುವುದೆಂದು ಮೂಲ ಕಾಯಿದೆಯಲ್ಲಿ ನಮೂದಿಸಲಾಗಿದೆ. ಅಲ್ಲದೆ ಮಾಹಿತಿ ಆಯೋಗವು ಸ್ವಾಯತ್ತ ಸಂಸ್ಥೆಯಾಗಿದ್ದು, ಯಾವುದೇ ಸರ್ಕಾರವಾಗಲೀ ಇತರ ಸಂಸ್ಥೆಯಾಗಲೀ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲದಂತೆ, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮಾಹಿತಿ ಆಯೋಗ ಮತ್ತು ಅದರ ಆಯುಕ್ತರಿಗೆ ಅನುವಾಗುವಂತೆ ನಿಯಮಗಳನ್ನು ರೂಪಿಸಲಾಗಿತ್ತು.
ಸರ್ವಾಧಿಕಾರದತ್ತ ಭಾರತೀಯ ಪ್ರಜಾತಂತ್ರ
ನರೇಂದ್ರ ಮೋದಿ ಸರ್ಕಾರದ ಅಧಿಕಾರಾವಧಿಯಲ್ಲಿ ಖಾಲಿಯಿದ್ದ ಮಾಹಿತಿ ಆಯುಕ್ತರ ಹುದ್ದೆಗಳನ್ನು ಭರ್ತಿ ಮಾಡಲೇ ಇಲ್ಲ. ಇದರಿಂದಾಗಿ ಮಾಹಿತಿ ಹಕ್ಕು ಕಾಯಿದೆಯ ಅನುಷ್ಠಾನಕ್ಕೆ ತೀವ್ರ ಪೆಟ್ಟು ಬಿದ್ದಿತು. ಹತ್ಯೆಯಾದ ಮಾಹಿತಿ ಹಕ್ಕು ಕಾರ್ಯಕರ್ತರ ಪ್ರಕರಣಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. 2014ರಲ್ಲಿ ಸಂಸತ್ತಿನಲ್ಲಿ ಅಂಗೀಕಾರವಾಗಿದ್ದ Whistle blowers Protection ಕಾಯಿದೆಗೆ 2015ರಲ್ಲಿ ತಿದ್ದುಪಡಿ ತರಲಾಯಿತು. ಈ ಶಾಸನವನ್ನು ಅಕ್ರಮ ಮತ್ತು ಭ್ರಷ್ಟಾಚಾರ ಕೃತ್ಯಗಳ ಬಗ್ಗೆ ಸುಳಿವು ನೀಡುವ ಮಾಹಿತಿದಾರರಿಗೆ ರಕ್ಷಣೆ ಒದಗಿಸುವ ದಿಶೆಯಲ್ಲಿ ರೂಪಿಸಲಾಗಿತ್ತು. ಆದರೆ ಈ ವರೆಗೂ ಈ ಕಾಯಿದೆಯ ಕುರಿತು ಹೆಚ್ಚಿನ ಚರ್ಚೆಗೆ ಅವಕಾಶ ನೀಡದ ನರೇಂದ್ರ ಮೋದಿ ಸರ್ಕಾರ ಇದನ್ನು ಕಾರ್ಯರೂಪಕ್ಕೆ ತಂದಿರುವುದಿಲ್ಲ. ಎನ್ ಡಿ ಎ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಕೇಂದ್ರ ಚುನಾವಣಾ ಆಯೋಗ, ಸಿಬಿಐ, ಆದಾಯ ತೆರಿಗೆ ಇಲಾಖೆ, ಕೇಂದ್ರ ಜಾರಿ ನಿರ್ದೇಶನಾಲಯ, ಮೊದಲಾದ ಕೇಂದ್ರೀಯ ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ತನ್ನ ಕೈಗೊಂಬೆ ಮಾಡಿಕೊಂಡಿದೆ. ಇದೀಗ ಶಾಸನವನ್ನೇ ಬದಲಿಸಿ ಮಾಹಿತಿ ಆಯೋಗವನ್ನೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವ ಮೋದಿ 2.0 ಸರ್ಕಾರ ದೇಶವನ್ನು ಸರ್ವಾಧಿಕಾರದತ್ತ ಕೊಂಡೊಯ್ಯುತ್ತಿರುವುದು ಅತ್ಯಂತ ಅಪಾಯಕಾರಿ ಲಕ್ಷಣ.
“ಕನಿಷ್ಟ ಸರ್ಕಾರ, ಗರಿಷ್ಟ ಆಡಳಿತ” ಎಂದು ಪ್ರಚಾರ ಗಿಟ್ಟಿಸಿದ್ದ ನರೇಂದ್ರ ಮೋದಿ ಈಗ ದೇಶದ ಎಲ್ಲಾ ಸ್ವಾಯತ್ತ ಸಂಸ್ಥೆಗಳಲ್ಲೂ ಅನಗತ್ಯ ಹಸ್ತಕ್ಷೇಪ ನಡೆಸಿ ಪ್ರಜಾತಂತ್ರವನ್ನು ಕಗ್ಗೊಲೆಗೈಯುತ್ತಿದ್ದಾರೆ. ಭಾರತ ಒಪ್ಪಿಕೊಂಡಿರುವ ವಿಕೇಂದ್ರೀಕರಣ ತತ್ವವನ್ನು ಮೂಲೆಗೆ ತಳ್ಳಿ ಅಧಿಕಾರವನ್ನು ಕೇಂದ್ರೀಕರಿಸಿಕೊಳ್ಳಲು ಕಾನೂನುಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಭಾರತ ಪ್ರಜಾತಂತ್ರದಿಂದ ಸರ್ವಾಧಿಕಾರದೆಡೆಗೆ ಸಾಗುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಪುರಾವೆ. ಅತಿ ದೊಡ್ಡ ಕಾರ್ಯನಿರತ ಪ್ರಜಾತಂತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಸಂಸದೀಯ ಪ್ರಜಾಸತ್ತೆ ಮೋದಿ ಸರ್ಕಾರದ ದುಷ್ಟ ನೀತಿಗಳಿಂದಾಗಿ ನಿರ್ನಾಮದ ಹಾದಿಯಲ್ಲಿದೆ ಎಂಬುದಕ್ಕೆ ಈ ತಿದ್ದುಪಡಿ ಇನ್ನೊಂದು ಅಪಾಯದ ಮುನ್ಸೂಚನೆಯಾಗಿದೆ.