ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಳೆದ ಹದಿನಾಲ್ಕು ತಿಂಗಳಿಂದ ಅವಿರತವಾಗಿ ಶ್ರಮಿಸಿದ್ದ ರಾಜ್ಯ ಬಿಜೆಪಿ ನಾಯಕರು, ಆ ಸರ್ಕಾರ ಕುಸಿದ ಬಳಿಕ ತಮ್ಮ ಸರ್ಕಾರವನ್ನು ರಚಿಸುವ ಉಮೇದಿನಲ್ಲಿದ್ದರೂ, ಪಕ್ಷದ ಹೈಕಮಾಂಡ್ ಮಾತ್ರ ದಕ್ಷಿಣ ಭಾರತದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆಗೇರಲು ನಿರಾಸಕ್ತಿ ತಾಳಿದೆ!
ಹೌದು, 15 ಮಂದಿ ಆಡಳಿತ ಪಕ್ಷಗಳ ಶಾಸಕರು ಬಂಡಾಯವೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ರೆಸಾರ್ಟ್ ಸೇರಿಕೊಂಡ ಬಳಿಕ ತೀವ್ರ ಇಕ್ಕಟ್ಟಿಗೆ ಸಿಲುಕಿದ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ, ಮಂಗಳವಾರ ವಿಶ್ವಾಸ ಮತ ಸಾಬೀತುಪಡಿಸಲಾರದೆ ಕುಸಿದು ಹೋಯಿತು. ಕಳೆದ ಇಪ್ಪತ್ತು ದಿನಗಳಿಂದ ಬಂಡಾಯ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರೊಂದಿಗೆ ಆಪರೇಷನ್ ಕಮಲದ ಷರತ್ತುಗಳನ್ನೂ ಅಂತಿಮಗೊಳಿಸಿಕೊಂಡು ಅಲ್ಪಮತಕ್ಕೆ ಕುಸಿದ ಸರ್ಕಾರ ಕುಸಿಯುವುದನ್ನೇ ಕಾಯುತ್ತಿದ್ದ ಬಿಜೆಪಿ ನಾಯಕರು, ಸರ್ಕಾರದ ಕುಸಿದ ಮರುಕ್ಷಣವೇ ಭಾರೀ ಸಂಭ್ರಮಾಚರಣೆಯನ್ನೂ ಮಾಡಿದ್ದರು. ಅಷ್ಟೇ ಅಲ್ಲ; ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ದೋಸ್ತಿ ಸರ್ಕಾರದ ಪತನವನ್ನು ಸಂಭ್ರಮಿಸಿದ್ದರು.
ಆದರೆ, ದೋಸ್ತಿ ಸರ್ಕಾರ ಪತನವಾದ ಮರುಕ್ಷಣವೇ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು ಮತ್ತು ಸ್ವತಃ ಬಿಎಸ್ ವೈ ಸೇರಿದಂತೆ ಬಿಜೆಪಿ ನಾಯಕರು ಕೂಡ ಅದೇ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಅದಕ್ಕಾಗಿ ಜ್ಯೋತಿಷಿಗಳ ಮೂಲಕ ಮುಹೂರ್ತ ನಿಗದಿ ಮಾಡಿಸಿ, ಮಠಾಧೀಶರ ಆರ್ಶೀವಾದವನ್ನೂ ಪಡೆದು ಬಿಎಸ್ ವೈ ಸಜ್ಜಾಗಿದ್ದರು. ಆದರೆ, ಸರ್ಕಾರ ಪತನವಾಗಿ ಎರಡು ದಿನ ಕಳೆದರೂ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ನಿಂದ ಸರ್ಕಾರ ರಚನೆಗೆ ಯಾವುದೇ ಸೂಚನೆ ಬಂದಿಲ್ಲ ಎಂಬ ಸಂಗತಿ ಕುತೂಹಲ ಹುಟ್ಟಿಸಿದೆ.
ಪ್ರಮುಖವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಬಂಡಾಯ ಶಾಸಕರ ಬೆಂಬಲವನ್ನು ನೆಚ್ಚಿ ಬಹುಮತ ಸಾಬೀತುಪಡಿಸುವ ವಿಶ್ವಾಸದಲ್ಲಿದ್ದ ಬಿಜೆಪಿಗೆ, ಸ್ಪೀಕರ್ ರಮೇಶ್ ಕುಮಾರ್ ಅವರು ಈವರೆಗೆ ಆ ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಆಯಾ ಶಾಸಕಾಂಗ ಪಕ್ಷದ ನಾಯಕರು ನೀಡಿರುವ ವಿಪ್ ಹಿನ್ನೆಲೆಯಲ್ಲಿ ಅವರನ್ನು ವಜಾ ಮಾಡುವ ಕುರಿತ ಯಾವುದೇ ನಿರ್ಧಾರ ಕೈಗೊಳ್ಳದೇ ಇರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಂದು ವೇಳೆ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದರೆ ಮಾತ್ರ ಅಧಿಕಾರದ ಕುರ್ಚಿ ಏರುವ ಬಿಜೆಪಿಯ ದಾರಿ ಸುಗಮವಾಗಲಿದೆ. ಬದಲಾಗಿ ಒಂದು ವೇಳೆ ಸ್ಪೀಕರ್, ಪಕ್ಷಾಂತರ ನಿಷೇಧ ಕಾಯ್ದೆಯನ್ನು ಎತ್ತಿಹಿಡಿದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಶಾಸಕರಿಗೆ ನೀಡಿರುವ ವಿಪ್ ಆಧಾರದ ಮೇಲೆ ನಿರ್ಧಾರಕೈಗೊಂಡು ಅತೃಪ್ತ ಶಾಸಕರನ್ನು ಅಮಾನತುಗೊಳಿಸಿದರೆ ಸರ್ಕಾರ ರಚನೆಗೆ ಬಿಜೆಪಿಗೆ ಆತಂಕವಿಲ್ಲದವಾದರೂ, ಸರಳ ಬಹುಮತದ ಅಂಚಿನಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಂಡೇ ಸರ್ಕಾರ ರಚಿಸುವ ತಂತಿ ಮೇಲಿನ ನಡಿಗೆಗೆ ಬಿಜೆಪಿ ಸಜ್ಜಾಗಬೇಕಾಗಲಿದೆ.
ಆದರೆ, ಬಿಜೆಪಿ ಹೈಕಮಾಂಡ್ ಚಿಂತೆಗೀಡಾಗಿರುವುದು ಈಗ ಸ್ಪೀಕರ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಮತ್ತು ಆ ನಿರ್ಧಾರದ ಬಳಿಕ ಅತೃಪ್ತ ಶಾಸಕರ ಬೆಂಬಲಕ್ಕೆ ಪ್ರತಿಯಾಗಿ ಅವರು ಮುಂದಿಟ್ಟುರುವ ಡಿಸಿಎಂ ಹುದ್ದೆ ಸೇರಿದಂತೆ ಆಯಕಟ್ಟಿನ ಸಚಿವ ಸ್ಥಾನಗಳ ವಿಷಯದಲ್ಲಿ ಯಾವ ನಿರ್ಧಾರ ಕೈಗೊಳ್ಳುವುದು ಎಂಬ ಕಾರಣಕ್ಕೆ. ಒಂದು ವೇಳೆ ಆ 15 ಮಂದಿಗೆ ಅವರು ಬಯಸಿದ ಸಚಿವ ಸ್ಥಾನ ನೀಡಿದರೆ, ಆಗ ಮೂಲ ಬಿಜೆಪಿಯ ಹಿರಿಯರು ಮತ್ತು ಆರ್ ಎಸ್ ಎಸ್ ಹಿನ್ನೆಲೆಯ ಸಿದ್ಧಾಂತನಿಷ್ಠ ನಾಯಕರಿಗೆ ಉಂಟಾಗುವ ಅಸಮಾಧಾನ ಮತ್ತು ಅತೃಪ್ತಿಯನ್ನು ಹೇಗೆ ಶಮನ ಮಾಡುವುದು ಎಂಬ ಚಿಂತೆ ಕೂಡ ಹೈಕಮಾಂಡಿನದ್ದು. ಜೊತೆಗೆ ಈಗ ದೋಸ್ತಿ ಪಕ್ಷಗಳಿಗೆ ಕೈಕೊಟ್ಟು ಬಂದಿರುವ ಅತೃಪ್ತರು ಮುಂದೆ ತಮಗೂ ಕೈಕೊಡುವುದಿಲ್ಲ ಎಂಬುದಕ್ಕೆ ಯಾವ ಗ್ಯಾರಂಟಿ ? ಮೊದಲ ಸರಳ ಬಹುಮತದ ಸರ್ಕಾರವನ್ನು ಇವರು ಮೇಲಿಂದ ಮೇಲೆ ಬ್ಲ್ಯಾಕ್ ಮೇಲ್ ಮಾಡತೊಡಗಿದರೆ, 2008-09ರ ಇತಿಹಾಸ ಮರುಕಳಿಸಲಿದೆ. ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಅದು ಕರ್ನಾಟಕದ ಮಟ್ಟಿಗೆ ಮಾತ್ರವಲ್ಲ; ರಾಷ್ಟ್ರವ್ಯಾಪಿ ಪಕ್ಷದ ವರ್ಚಸ್ಸಿಗೆ ದೊಡ್ಡ ಪೆಟ್ಟು ಕೊಡಲಿದೆ ಎಂಬುದು ಕೂಡ ಮುಖ್ಯವಾಗಿ ಅಮಿತ್ ಶಾ ಮತ್ತು ಮೋದಿ ಅವರ ಹಿಂಜರಿಕೆಗೆ ಕಾರಣ ಎನ್ನಲಾಗುತ್ತಿದೆ.
ಅತೃಪ್ತಿ ಮತ್ತು ಅಸ್ಥಿರತೆಯ ಆಧಾರದ ಮೇಲೆಯೇ ದೋಸ್ತಿ ಸರ್ಕಾರವನ್ನು ಕೆಡವಿದ್ದ ಬಿಜೆಪಿಗೇ ಈಗ, ಅದೇ ಆತಂಕ ಕಾಡತೊಡಗಿದ್ದು, ಸರ್ಕಾರ ರಚಿಸುವ ಮೂದಲೇ ಅಂತಹ ಅಪಾಯವನ್ನು ಗ್ರಹಿಸಿರುವ ಹೈಕಮಾಂಡ್, ಮೊದಲು ಬಂಡಾಯ ಶಾಸಕರ ರಾಜೀನಾಮೆ ಅಥವಾ ವಜಾ ವಿಷಯ ಇತ್ಯರ್ಥವಾಗಲಿ, ಆ ಬಳಿಕವಷ್ಟೇ ಸರ್ಕಾರ ರಚನೆಗೆ ತೀರ್ಮಾನಿಸೋಣ. ಅಲ್ಲಿಯವರೆಗೆ ಸಮಧಾನದಲ್ಲಿರಿ ಎಂದು ಬಿಎಸ್ ವೈ ಗೆ ತಾಕೀತು ಮಾಡಿದೆ. ಒಂದು ವೇಳೆ ಶೀರ್ಘದಲ್ಲಿ ಸ್ಪೀಕರ್ ಈ ಕುರಿತು ನಿರ್ಧಾರ ಕೈಗೊಳ್ಳದೇ ಹೋದರೆ, ಕೆಲವು ದಿನಗಳ ಮಟ್ಟಿಗೆ ರಾಷ್ಟ್ರಪತಿ ಆಡಳಿತ ಜಾರಿಮಾಡಿ, ನಂತರ ಪರಿಸ್ಥಿತಿ ನೀಡಿ ಸರ್ಕಾರ ರಚನೆ ಮಾಡುವುದೇ ಅಥವಾ ಚುನಾವಣೆ ನಡೆಸುವುದೇ ಎಂಬುದನ್ನು ನಿರ್ಧರಿಸೋಣ ಎಂದು ಅಮಿತ್ ಶಾ ಯಡಿಯೂರಪ್ಪ ಅವರು ಕಳಿಸಿದ್ದ ಜಗದೀಶ್ ಶೆಟ್ಟರ್ ಮತ್ತು ಜೆ ಸಿ ಮಾಧುಸ್ವಾಮಿ ಅವರ ನಿಯೋಗಕ್ಕೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ, ಮೋದಿ ಮತ್ತು ಶಾ ಜೋಡಿ ತಮ್ಮ ದೆಹಲಿ ರಾಜಕಾರಣದ ಆರಂಭದಲ್ಲಿ ಜಾರಿಗೆ ತಂದ ನಿಯಮ ಕೂಡ ಈಗ ಅವರಿಗೆ ಕರ್ನಾಟಕದ ವಿಷಯದಲ್ಲಿ ಕ್ಷಿಪ್ರ ನಿರ್ಧಾರ ಕೈಗೊಳ್ಳಲು ಅಡ್ಡಬರುತ್ತಿದೆ. ಅಂದು ಅವರು ಬಿಜೆಪಿಯ ಭೀಷ್ಮ ಎಲ್ ಕೆ ಅಡ್ವಾಣಿ, ಮುರುಳಿ ಮನೋಹರ ಜೋಷಿ, ಯಶವಂತ ಸಿನ್ಹಾ ಸೇರಿ ಹಲವು ಪ್ರಮುಖರನ್ನು ಬದಿಗೆ ಸರಿಸಲು 75 ವರ್ಷ ವಯಸ್ಸಾದವರಿಗೆ ಸರ್ಕಾರ ಮತ್ತು ಪಕ್ಷದಲ್ಲಿ ಅಧಿಕಾರ ಸ್ಥಾನವಿಲ್ಲ. ಅವರು ಮಾರ್ಗದರ್ಶಕರಾಗಿ ಪಕ್ಷದಲ್ಲಿ ಮುಂದುವರಿಯಲಿ ಎಂಬ ನಿಯಮ ಜಾರಿಗೆ ತಂದಿದ್ದರು. ಆ ನಿಯಮದಂತೆಯೇ ಅಂದು ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ 76 ವರ್ಷ ವಯಸ್ಸಾಗಿರುವ ಯಡಿಯೂರಪ್ಪ ವಿಷಯದಲ್ಲಿಯೂ ಅದೇ ನಿಯಮ ಅನ್ವಯವಾದರೆ ಅವರಿಗೆ ಸಿಎಂ ಸ್ಥಾನ ಕೊಡುವಂತಿಲ್ಲ. ಅವರಿಗೆ ಸಿಎಂ ಸ್ಥಾನ ಕೊಡದೇ ಹೋದರೆ ರಾಜ್ಯದಲ್ಲಿ ಪಕ್ಷದ ಒಗ್ಗಟ್ಟು ಪುಡಿಯಾಗಲಿದ್ದು, ಸಂಕಷ್ಟಕ್ಕೆ ಸಿಲುಕಲಿದೆ. ಜೊತೆಗೆ ಈಗಾಗಲೇ ಸಿಎಂ ಸ್ಥಾನ ನೀಡದೇ ಇದ್ದಲ್ಲಿ ಬಿಎಸ್ ವೈ ಮತ್ತೆ ಪಕ್ಷದ ತೊರೆದರೂ ಅಚ್ಚರಿಯಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಹಾಗಾಗಿ, ಎಣ್ಣೆ ಬರೋ ಕಾಲಕ್ಕೆ ಗಾಣ ಮುರಿಯಿತು ಎಂಬ ಸ್ಥಿತಿ ಈಗ ಯಡಿಯೂರಪ್ಪ ಪಾಲಿಗಷ್ಟೇ ಅಲ್ಲ; ಸ್ವತಃ ಬಿಜೆಪಿ ಹೈಕಮಾಂಡ್ ಪಾಲಿಗೂ ಬಂದೊದಗಿದೆ!
ಈ ನಡುವೆ, ಉಪ ಮುಖ್ಯಮಂತ್ರಿ ಸ್ಥಾನದ ವಿಷಯದಲ್ಲಿ ಯಡಿಯೂರಪ್ಪ ಮತ್ತು ಹೈಕಮಾಂಡ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಉಪ ಮುಖ್ಯಮಂತ್ರಿ ಹುದ್ದೆಯೇ ಬೇಡ ಎಂಬುದು ಯಡಿಯೂರಪ್ಪ ವಾದವಾದರೆ, ಎರಡು ಉಪಮುಖ್ಯಮಂತ್ರಿ ಹುದ್ದೆ ಮೂಲಕ ಸಂಪೂರ್ಣ ಅಧಿಕಾರ ಯಡಿಯೂರಪ್ಪ ಕೈಯಲ್ಲಿರದಂತೆ ನೋಡಿಕೊಳ್ಳುವ ಲೆಕ್ಕಾಚಾರ ಹೈಕಮಾಂಡನದ್ದು. ಮುಖ್ಯವಾಗಿ ಸಂಘಪರಿವಾರದ ಹಿನ್ನೆಲೆಯ ಹಿರಿಯ ನಾಯಕರೊಬ್ಬರು ಮತ್ತು ಹಿಂದುಳಿದ ವರ್ಗದ ಪ್ರಭಾವಿ ನಾಯಕರೊಬ್ಬರು ಸೇರಿ ಇಬ್ಬರನ್ನು ಡಿಸಿಎಂ ಮಾಡುವ ಮೂಲಕ ಯಡಿಯೂರಪ್ಪ ಅವರ ಹಿಂದಿನ ಅವಧಿಯ ತುಘಲಕ್ ದರ್ಬಾರ್ ಮರುಕಳಿಸದಂತೆ ನೋಡಿಕೊಳ್ಳುವ ತಂತ್ರಗಾರಿಕೆ ಹೈಕಮಾಂಡ್ ಹೂಡಿದ್ದು, ಅದಕ್ಕೆ ಯಡಿಯೂರಪ್ಪ ಒಪ್ಪದೇ ಇರುವುದೇ ಈ ವಿಳಂಬಕ್ಕೆ ಮತ್ತೊಂದು ಕಾರಣ ಎನ್ನಲಾಗುತ್ತಿದೆ.
ಈ ನಡುವೆ, ಬಿಜೆಪಿಯ ಕಡೆಯಿಂದ ಸ್ಪಷ್ಟವಾದ ಸೂಚನೆಗಳು ಬರದೇ ಇರುವ ಹಿನ್ನೆಲೆಯಲ್ಲಿ ಮುಂಬೈಗೆ ತೆರಳಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಲ್ಲಿ ಒಬ್ಬೊಬ್ಬರೇ ವಾಪಸ್ ತಮ್ಮ ತಮ್ಮ ಕ್ಷೇತ್ರದತ್ತ ಮುಖಮಾಡಿದ್ದು, ಬುಧವಾರ ಸಂಜೆ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಸ್ವಕ್ಷೇತ್ರಕ್ಕೆ ಮರಳಿ, ಗುರುವಾರ ವಿವಿಧ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಇನ್ನೂ ಕೆಲವರು ವಾಪಸ್ಸಾಗಲಿದ್ದಾರೆ ಎಂಬ ವರದಿಗಳೂ ಇವೆ.
ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಕಾದು ನೋಡುವ ನಿರ್ಧಾರ ಹೈಕಮಾಂಡಿದ್ದಾದರೆ, ಸದಾ ಆತುರಕ್ಕೆ ಹೆಸರಾಗಿರುವ ಯಡಿಯೂರಪ್ಪ ಮಾತ್ರ ಸಿಎಂ ಕುರ್ಚಿಗೇರಲು ತುದಿಗಾಲಲ್ಲಿದ್ದಾರೆ. ಅಭಿನಂದನೆ, ಶುಭಾಶಯ ಕೋರುವವರ ಹಸ್ತಲಾಘವ, ಹಾರ ತುರಾಯಿಗಳಿಗೆ ಕೈ ಮತ್ತು ಕೊರಳೊಡ್ಡುತ್ತಾ ಬೆಂಗಳೂರಿನ ತಮ್ಮ ನಿವಾಸದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ದೋಸ್ತಿ ಸರ್ಕಾರಕ್ಕೆ ಕಾಡಿದ್ದ ಶಾಸಕರ ‘ಅತೃಪ್ತಿ’ಯೇ ಈಗ ಬಿಜೆಪಿಯ ಭವಿಷ್ಯದ ಸರ್ಕಾರಕ್ಕೂ ಕಾಡುವ ಆತಂಕ ಅವರನ್ನು ಸಿಎಂ ಕುರ್ಚಿಯಿಂದ ಕ್ಷಣಕ್ಷಣಕ್ಕೂ ದೂರ ಸರಿಸತೊಡಗಿದೆ. ಅಂತಿಮವಾಗಿ ಸ್ಪೀಕರ್ ರಮೇಶ್ ಕುಮಾರ್ ಅವರು ಎಷ್ಟು ಬೇಗ ತಮ್ಮ ತೀರ್ಪು ನೀಡುವರು ಎಂಬುದರ ಮೇಲೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೇರುವುದೇ ಅಥವಾ ರಾಷ್ಟ್ರಪತಿ ಆಡಳಿತ ಹೇರಲಾಗುತ್ತದೆಯೇ ಎಂಬುದನ್ನು ನಿರ್ಧರಿಸಲಿದೆ! ಅವರ ನಿರ್ಧಾರದ ವರೆಗೆ ರಾಜ್ಯದ ಸಂವಿಧಾನಿಕ ಮತ್ತು ರಾಜಕೀಯ ಬಿಕ್ಕಟ್ಟು ಮುಂದುವರಿಯಲಿದೆ!