ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ತಂದ ಹದಿನೈದು ಶಾಸಕರ ರಾಜೀನಾಮೆ ಮತ್ತು ಅವರ ವಿರುದ್ಧದ ಅನರ್ಹತೆ ದೂರುಗಳ ಕುರಿತ ಮಹತ್ವದ ನಿರ್ಧಾರವನ್ನು ವಿಧಾನಸಭಾ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಇದೀಗ ಪ್ರಕಟಿಸಿದ್ದು, ರಾಣೆಬೆನ್ನೂರು ಶಾಸಕ ಆರ್ ಶಂಕರ್, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಅಮಾನತುಗೊಳಿಸಿರುವುದಾಗಿ ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಈ ನಿರ್ಧಾರದಿಂದಾಗಿ ಇದೀಗ ಸರ್ಕಾರ ರಚನೆಯ ಪ್ರಯತ್ನಗಳಿಗೆ ಭಾರೀ ಹಿನ್ನಡೆಯಾಗಿದ್ದು, ಪ್ರಮುಖವಾಗಿ ಆಪರೇಷನ್ ಕಮಲದಡಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಹದಿನೈದು ಶಾಸಕರಲ್ಲಿ ಈ ಮೂವರು ಕೂಡ ನಿರ್ಣಾಯಕರಾಗಿದ್ದರು. ಅದರಲ್ಲೂ ಅತೃಪ್ತ ಶಾಸಕರ ಪೈಕಿ ಸಾಕಷ್ಟು ಮಂದಿಯ ನಾಯಕತ್ವವನ್ನು ಸ್ವತಃ ರಮೇಶ್ ಜಾರಕಿಹೊಳಿ ವಹಿಸಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಸ್ಪೀಕರ್ ಅವರ ಈ ನಿರ್ಧಾರ ಅತೃಪ್ತರಿಗೆ ದೊಡ್ಡ ಶಾಕ್ ನೀಡಿದ್ದು, ಉಳಿದ ಶಾಸಕರ ಅನರ್ಹತೆ ಮತ್ತು ರಾಜೀನಾಮೆ ಪ್ರಕರಣಗಳನ್ನೂ ಕೆಲವೇ ದಿನಗಳಲ್ಲಿ ನಿರ್ಧರಿಸುವುದಾಗಿ ಸ್ಪೀಕರ್ ಘೋಷಿಸಿರುವುದು ಅತೃಪ್ತರಲ್ಲಿ ನಡುಕ ಹುಟ್ಟಿಸಿದ್ದು, ಸಹಜವಾಗೇ ಅದು ಬಿಜೆಪಿ ಸರ್ಕಾರ ರಚನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.
ಒಟ್ಟು ಹದಿನೇಳು ಶಾಸಕರ ವಿರುದ್ಧ ವಿವಿಧ ಪ್ರಕರಣಗಳಲ್ಲಿ ಅನರ್ಹತೆ ದೂರುಗಳು ಬಂದಿದ್ದವು. ಆ ಪೈಕಿ ರಾಣೇಬೆನ್ನೂರು ಶಾಸಕ ಆರ್ ಶಂಕರ್ ಅವರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಚಿಹ್ನೆಯಡಿ ಅವರು ಆಯ್ಕೆಯಾಗಿದ್ದರು. ಆದರೆ, ಕಳೆದ ಜೂನ್ 14ರಂದು ಆರ್ ಶಂಕರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮಗೆ ಪತ್ರ ಬರೆದು ಕಾಂಗ್ರೆಸ್ ಪಕ್ಷದಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವನ್ನು ವಿಲೀನಗೊಳಿಸಿರುವುದಾಗಿ ಪತ್ರ ಬರೆದಿದ್ದರು. ಆ ಹಿನ್ನೆಲೆಯಲ್ಲಿ ಮುಂದಿನ ಕ್ರಮ ಜರುಗಿಸಲು ಕೋರಿದ್ದರು. ಅದಾದ ಜುಲೈ 8ರಂದು ರಾಜ್ಯಪಾಲರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ಮತ್ತು ಬಿಜೆಪಿ ಸರ್ಕಾರ ರಚನೆಗೆ ಬೆಂಬಿಲಿಸಿ ಎರಡು ಪ್ರತ್ಯೇಕ ಪತ್ರ ಬರೆದಿದ್ದರು ಮತ್ತು ಆ ಎರಡೂ ಪತ್ರವನ್ನು ರಾಜ್ಯಪಾಲರು ನನಗೆ ತಲುಪಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಸಂವಿಧಾನದ 10ನೇ ಪರಿಚ್ಛೇದದ ಪಕ್ಷಾಂತರ ನಿಷೇಧ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯನ್ನು ಗ್ರಹಿಸಿ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜತೆಗೆ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಕಳೆದ ಫೆಬ್ರವರಿಯಲ್ಲಿ ನೀಡಿದ್ದ ಅನರ್ಹತೆ ಅರ್ಜಿಯನ್ನು ಪರಿಗಣಿಸಿ ಅವರಿಬ್ಬರನ್ನೂ ಅನರ್ಹಗೊಳಿಸಿರುವುದಾಗಿ ಅವರು ಹೇಳಿದರು. ಅಲ್ಲದೆ, ಈ ಮೂವರೂ ಹಾಲಿ ವಿಧಾನಸಭೆಯ ಅವಧಿ ಮುಗಿಯುವವರೆಗೆ; ಅಂದರೆ 2023ರ ಮೇ 23ರವರೆಗೆ ಮತ್ತೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಹಾಗೂ ಸಂವಿಧಾನದ ಕಲಂ 361 ಬಿ ಅನ್ವಯ ಅವರು ಈ ವಿಧಾನಸಭೆಯ ಅವಧಿ ಮುಗಿಯವವರೆಗೆ ಸಚಿವ ಸಂಪುಟದಲ್ಲಿ ಕೂಡ ಸ್ಥಾನ ಪಡೆಯುವಂತಿಲ್ಲ ಎಂದೂ ಸ್ಪಷ್ಟಪಡಿಸಿದರು. ಅಲ್ಲದೆ, ತಮ್ಮ ನಿರ್ಧಾರದ ಹಿನ್ನೆಲೆಯಲ್ಲಿ ಹಲವು ದಾಖಲೆ ಮತ್ತು ಪತ್ರಗಳನ್ನೂ ಸ್ಪೀಕರ್ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.
ಒಟ್ಟಾರೆ, ಸ್ಪೀಕರ್ ರಮೇಶ್ ಕುಮಾರ್ ಅವರ ಈ ತೀರ್ಮಾನ, ದೋಸ್ತಿ ಸರ್ಕಾರದ ಪತನಕ್ಕೆ ಕಾರಣವಾದ 15 ಮಂದಿ ಅತೃಪ್ತ ಶಾಸಕರಷ್ಟೇ ಅಲ್ಲದೆ, ಆಪರೇಷನ್ ಕಮಲದ ಮೂಲಕ ಅವರನ್ನು ಸೆಳೆದು ಹೊಸ ಸರ್ಕಾರ ರಚಿಸುವ ಉಮೇದಿನಲ್ಲಿರುವ ಬಿಜೆಪಿಯ ಪಾಲಿಗೂ ಆಘಾತ ನೀಡಿದೆ. ಆ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರ ಮತ್ತು ಅವರ ಬೆನ್ನಿಗೆ ನಿಂತಿರುವ ಬಿಜೆಪಿಯ ಮುಂದಿನ ನಡೆ ಏನು ಎಂಬುದು ಸದ್ಯಕ್ಕೆ ಕುತೂಹಲ ಹುಟ್ಟಿಸಿದೆ!