ಉದ್ಯೋಗಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವ ಶಾಸನವನ್ನು ಬಿಗಿಗೊಳಿಸುವ ಸಲುವಾಗಿ ಕಳೆದ ವರ್ಷ ರಚಿಸಲಾಗಿದ್ದ ಸಚಿವರ ಸಲಹಾ ಸಮಿತಿಯನ್ನು ಇದೀಗ ಕೇಂದ್ರ ಸರ್ಕಾರ ಪುನರ್ರಚಿಸಿದೆ. ಅದರ ಅಧ್ಯಕ್ಷರು ಯಾರೆಂದು ತಿಳಿದರೆ ಮಾತ್ರ ಗಾಬರಿಯಗದೇ ಇರದು! ಸ್ವತಃ ಹಲವು ಅಪರಾಧ ಮತ್ತು ಮಾನವ ಹಕ್ಕು ದಮನ ಪ್ರಕರಣಗಳಲ್ಲಿ ಆರೋಪಿತರಾಗಿದ್ದ ಗೃಹ ಸಚಿವ ಅಮಿತ್ ಶಾ ಈಗ ದೇಶದ ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳ ತಡೆಗಟ್ಟುವ ಮೇಲುಸ್ತುವಾರಿ ಮತ್ತು ಸಲಹಾ ಸಮಿತಿಯ ಮುಖ್ಯಸ್ಥರು!
#MeToo ಬಳಿಕ ಅಸ್ತಿತ್ವಕ್ಕೆ ಬಂದ ಸಲಹಾ ಸಮಿತಿ!
ವಿವಿಧ ಕ್ಷೇತ್ರಗಳ ಉದ್ಯೋಗಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ, ದೌರ್ಜನ್ಯಗಳ ವಿರುದ್ಧ ಕಳೆದ ವರ್ಷ #MeToo ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ದೇಶಾದ್ಯಂತ ಆರಂಭವಾದ ಆಂದೋಲನ ಗಾಢನಿದ್ರೆಯಲ್ಲಿದ್ದ ಕೇಂದ್ರ ಸರ್ಕಾರವನ್ನು ಬಡಿದೆಬ್ಬಿಸಿತ್ತು. ಮೋದಿ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿದ್ದ ಎಂ.ಜೆ.ಅಕ್ಬರ್ ವಿರುದ್ಧವೂ #MeToo ಆರೋಪ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಅವರು ಸಚಿವಸ್ಥಾನವನ್ನೂ ಕಳೆದುಕೊಳ್ಳಬೇಕಾಯಿತು. ಈ ಆಂದೋಲನ ದೇಶವ್ಯಾಪಿ ಹರಡಿ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಲೇ, ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಅಸ್ತಿತ್ವದಲ್ಲಿರುವ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಚಿವರ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸುವುದಾಗಿ ಅಂದಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮನೇಕಾ ಗಾಂಧಿ ಘೋಷಿಸಿದ್ದರು.
ಕೆಲವೇ ತಿಂಗಳಲ್ಲಿ ಮಹಾಚುನಾವಣೆಗಳನ್ನು ನಿರೀಕ್ಷಿಸಿದ್ದ ಕೇಂದ್ರ ಸರ್ಕಾರ, ಉದ್ಯೋಗಸ್ಥ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯಿದೆಯನ್ನು ಬಲಗೊಳಿಸುವ ನೆಪದಲ್ಲಿ 2018ರ ಅಕ್ಟೋಬರ್ 24ರಂದು ಸಚಿವರ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯ ಅಧ್ಯಕ್ಷತೆಯನ್ನು ಅಂದಿನ ಗೃಹ ಮಂತ್ರಿ ರಾಜನಾಥ ಸಿಂಗ್ ವಹಿಸಿದ್ದರು. ಸಚಿವರಾಗಿದ್ದ ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಮತ್ತು ಮನೇಕಾ ಗಾಂಧಿ ಸಮಿತಿಯ ಇತರ ಸದಸ್ಯರಾಗಿದ್ದರು.

ಸಲಹಾ ಸಮಿತಿಯ ಜವಾಬ್ದಾರಿಗಳು
ಸಚಿವರ ಸಲಹಾ ಸಮಿತಿಗೆ ಕೆಲವು ನಿರ್ದಿಷ್ಟ ಜವಾಬ್ದಾರಿಗಳನ್ನು ವಹಿಸಲಾಗಿತ್ತು: ಆ ಪೈಕಿ ಪ್ರಮುಖವಾಗಿ, ಉದ್ಯೋಗಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಹಾಲಿ ಇರುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗು ಕಾನೂನಾತ್ಮಕ ಮತ್ತು ಸಾಂಸ್ಥಿಕ ಚೌಕಟ್ಟುಗಳ ಬಲವರ್ಧನೆಗಾಗಿ ಅಗತ್ಯವಾದ ಕ್ರಮಗಳನ್ನು ಶಿಫಾರಸ್ಸು ಮಾಡುವುದು, ವಿಸ್ತೃತವಾದ ಚರ್ಚೆ ನಡೆಸಿ ಸೂಕ್ತ ಶಿಫಾರಸುಗಳನ್ನು ಮತ್ತು ಸಮಗ್ರ ಕ್ರಿಯಾ ಯೋಜನೆಯನ್ನು ತಯಾರಿಸುವುದು, ಮತ್ತು ಆ ಶಿಫಾರಸುಗಳ ಕಾಲಮಿತಿಯ ಅನುಷ್ಠಾನ ಖಚಿತಪಡಿಸುವುದು. ಸಮಿತಿ ರಚನೆಯಾದ ಮೂರು ತಿಂಗಳೊಳಗಾಗಿ ಮೇಲೆ ಹೇಳಿದ ಎಲ್ಲವನ್ನೂ ಒಳಗೊಂಡಂತೆ ಉದ್ಯೋಗಸ್ಥ ಮಹಿಳೆಯರಿಗೆ ಹಾಲಿ ಇರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಅವುಗಳನ್ನು ಇನ್ನಷ್ಟು ಬಲಗೊಳಿಸಲು ಮತ್ತು ಪರಿಣಾಮಕಾರಿ ಮಾಡಲು ಕ್ರಮಗಳನ್ನು ಶಿಫಾರಸ್ಸು ಮಾಡುವುದು.
ಅಮಿತ್ ಶಾ ನೇತೃತ್ವದ ನೂತನ ಸಮಿತಿ!
ಆದರೆ, ಯಾವಾಗ ದೇಶದಲ್ಲಿ #MeToo ಅಭಿಯಾನದ ಹವಾ ತಗ್ಗಿತೋ ಆಗ ಈ ಸಮಿತಿಯ ಕಾರ್ಯಚಟುವಟಿಕೆಗಳ ಸದ್ದೂ ಇಲ್ಲದಾಯಿತು. ಆ ಹಿನ್ನೆಲೆಯಲ್ಲಿ ಸಮಿತಿ ಹೇಗೆ ಮತ್ತು ಎಷ್ಟರ ಮಟ್ಟಿಗೆ ಅನುಷ್ಠಾನಗೊಳಿಸಿದೆ ಎಂಬುದರ ಕುರಿತು The Quint ಪತ್ರಿಕೆ ಮಾಹಿತಿ ಹಕ್ಕು ಕಾಯಿದೆಯನ್ವಯ ಮಾಹಿತಿ ಕೋರಿದಾಗ, 2018ರಲ್ಲಿ ರಚನೆಯಾದ ಸಮಿತಿಯು ವಿಸರ್ಜನೆಯಾಗಿದೆ ಎಂಬುದಾಗಿ ಮತ್ತು ಅನುಷ್ಠಾನದ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲವೆಂದು ಸರ್ಕಾರ ಪ್ರತಿಕ್ರಿಯೆ ನೀಡಿರುವ ದಾಖಲೆಯಿದೆ.
ಆದರೆ ಇದಾದ ಎರಡೇ ದಿನಗಳಲ್ಲಿ, ಈಗ ಬುಧವಾರದಂದು ಅಂತಹದ್ದೇ ಮತ್ತೊಂದು ಸಮಿತಿಯನ್ನು ರಚಿಸಿ ಗೃಹ ಸಚಿವ ಅಮಿತ್ ಶಾ ಅವರನ್ನು ಅದರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಕ್ರಿಯಾಲ್ ನಿಶಾಂಕ್ ಹಾಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಸಮಿತಿಯ ಇತರ ಸದಸ್ಯರಾಗಿದ್ದಾರೆ.
ಸಲಹಾ ಸಮಿತಿಯಲ್ಲಿ ನ್ಯಾಯವೆಂಬ ಭ್ರಮೆ…
ವಿಪರ್ಯಾಸವೆಂದರೆ, ಸಮಿತಿಯ ಮೂಲ ರಚನೆಯಲ್ಲಿರುವ ನ್ಯೂನತೆಗಳೇ ಸಮಿತಿಯನ್ನು ರಚಿಸುವ ಸಂದರ್ಭದಲ್ಲಿ ಘೋಷಿಸಲಾಗಿರುವ ಉದ್ದೇಶವನ್ನು ಸೋಲಿಸುವ ಎಲ್ಲಾ ಲಕ್ಷಣಗಳನ್ನೂ ಸ್ಪಷ್ಟವಾಗಿ ಸೂಚಿಸುತ್ತಿವೆ.
ಈ ಹೊಸ ಸಮಿತಿಯ ಸದಸ್ಯರು ಮಹಿಳೆಯರ ಸುರಕ್ಷತೆ ಬಗ್ಗೆ ಧ್ವನಿಯೆತ್ತುತ್ತಾರೆ ಮತ್ತು ಮಹಿಳೆಯರ ಹಕ್ಕುಗಳನ್ನು ರಕ್ಷಿಸುತ್ತಾರೆಂದರೆ ಅದು ಸಹಸ್ರಮಾನದ ಜೋಕ್ ಎಂಬಂತೆ ಭಾಸವಾಗುತ್ತಿದೆ. ಏಕೆಂದರೆ, ಜುಮ್ಮುಕಾಶ್ಮೀರದ ಕಥುವಾದಲ್ಲಿ ಕಳೆದ ವರ್ಷ ನಡೆದಿದ್ದ ಅಪ್ರಾಪ್ತ ಬಾಲಕಿಯ ಬಾಲಕಿಯ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣ, ಉತ್ತರಪ್ರದೇಶದ ಉನ್ನಾವ್ ನಲ್ಲಿ ಯುವತಿಯ ಅತ್ಯಾಚಾರ ಪ್ರಕರಣ ಸೇರಿದಂತೆ ಸ್ವತಃ ತಮ್ಮದೇ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಭಾಗಿಯಾದ ಹೀನಾಯ ಮತ್ತು ಅಮಾನುಷ ಪ್ರಕರಣಗಳಲ್ಲಿ ಬಿಜೆಪಿಯ ಈ ಉನ್ನತ ನಾಯಕರು ನಡೆದುಕೊಂಡ ರೀತಿ, ಅವರು ಮಹಿಳೆಯರ ಮತ್ತು ಲಿಂಗತ್ವದ ವಿಷಯದಲ್ಲಿ ಹೊಂದಿರುವ ಸಂವೇದನೆಗೆ ಸಾಕ್ಷಿ. ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತರ ಪರ ನಿಲ್ಲುವ ಬದಲಾಗಿ ಈ ವ್ಯಕ್ತಿಗಳು ಆರೋಪಿಗಳನ್ನು ಬೆಂಬಲಿಸಿದ ಉದಾಹರಣೆಗಳಿವೆ. ಅಷ್ಟೇ ಅಲ್ಲ; #MeToo ಆಂದೋಲನದಲ್ಲೂ ಉದ್ಯೋಗಸ್ಥ ಮಹಿಳೆಯರು ತಮ್ಮ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳವನ್ನು ಸಾರ್ವಜನಿಕವಾಗಿ ಹೇಳಿಕೊಂಡಾಗಲೂ ಸಹ ಇವರುಗಳು ಅವರಿಗೆ ನೈತಿಕ ಬೆಂಬಲ ನೀಡಲಿಲ್ಲ. ಇಂತಹವರಿಂದ ಉದ್ಯೋಗಸ್ಥ ಮಹಿಳೆಯರಿಗೆ ನ್ಯಾಯ ಸಿಗುವುದು ಭ್ರಮೆಯಲ್ಲದೆ ಮತ್ತೇನು ಎಂಬುದು ಈಗಿರುವ ಪ್ರಶ್ನೆ.
ಮಹಿಳೆಯರಿಗೆ ಸ್ಪಂದಿಸುವ ಅರ್ಹತೆ ಸಮಿತಿಗಿದೆಯೇ?
ಮೊಟ್ಟಮೊದಲಿಗೆ, ಮಹಿಳೆಯರ ಕುರಿತ ವಿಷಯಗಳನ್ನು ಚರ್ಚಿಸಿ ನೀತಿ ನಿರೂಪಣೆ ಮಾಡುವಂತಹ ಸಂದರ್ಭದಲ್ಲಿ ಸಮಿತಿಯ ಸದಸ್ಯರು ಆ ಕರ್ತವ್ಯ ನಿರ್ವಹಿಸಲು ಎಷ್ಟು ಅರ್ಹರು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ನೈತಿಕತೆ ಕಳೆದುಕೊಂಡ, ಲಿಂಗತ್ವ ಸಂವೇದನೆಯ ಲವಲೇಶವೂ ಇಲ್ಲದ ಅಥವಾ ಮಾನವೀಯ ಮೌಲ್ಯಗಳ ಬಗ್ಗೆಯೇ ಅಸಡ್ಡೆ ಹೊಂದಿರುವ ಸಮಿತಿ ಸದಸ್ಯರಿಂದ ಮಹಿಳೆಯರ ನೋವಿಗೆ ಸ್ಪಂದನೆ ಸಿಗುವುದೇ ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ.
ಎರಡನೆಯದು, ಮಹಿಳೆಯರ ಸಮಾನತೆಯ ಬಗ್ಗೆ ವೇದಿಕೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ಏರುಧ್ವನಿಯಲ್ಲಿ ಮಾತನಾಡುವುದನ್ನು ಕಾಣುತ್ತೇವೆ. ಹೀಗಿದ್ದರೂ ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಚರ್ಚೆಗಳಾಗಿ, ನಿರ್ಣಯ ಕೈಗೊಳ್ಳಬೇಕಾದ ಸಮಿತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸದಸ್ಯೆಯಾಗಿದ್ದರೂ, ಅವರ ಬದಲಿಗೆ ಗೃಹ ಸಚಿವರನ್ನೇ ಸಮಿತಿಯ ಅಧ್ಯಕ್ಷನನ್ನಾಗಿಸಿದ್ದು ಏಕೆ? 2013ರ ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ, ಪರಿಹಾರ) ಕಾಯಿದೆಯನ್ವಯ ದೂರು ಸಮಿತಿಗಳ ಅಧ್ಯಕ್ಷತೆಯನ್ನು ಮಹಿಳೆಯರೇ ನಿರ್ವಹಿಸತಕ್ಕದ್ದು. ಆದರೆ ಇದೇ ವಿಷಯಕ್ಕೆ ಸಂಬಂಧಿಸಿದ ಸಚಿವರ ಸಲಹಾ ಸಮಿತಿಯಲ್ಲಿ ಮಾತ್ರ ಪುರುಷರೇ ಅಧ್ಯಕ್ಷರು!
ಬೇಲಿಯೇ ಎದ್ದು ಹೊಲ ಮೇಯುವಾಗ, ಅಂತಹ ಬೇಲಿಯನ್ನು ನಂಬುವುದಾದರೂ ಹೇಗೆ? ಇಂತಹ ಸಮಿತಿಗಳಿಂದ ನಿಜಕ್ಕೂ ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷತೆ ಸಿಗದು. ಕಾರ್ಮಿಕ ಕಾಯಿದೆಗಳ ಸುಧಾರಣೆ ಎಂಬ ಹೆಸರಿನಲ್ಲಿ ಮೋದಿ ಸರ್ಕಾರ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಂಡಂತೆ ಉದ್ಯೋಗಸ್ಥ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯಿದೆಗೆ ಶಕ್ತಿ ತುಂಬುವ ನೆಪದಲ್ಲಿ ಹಾಲಿ ಇರುವ ಶಾಸನವನ್ನು ದುರ್ಬಲಗೊಳಿಸಿದರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಈ ಸಮಿತಿಯ ಶಿಫಾರಸುಗಳಲ್ಲಿ ಅನುಭವಸ್ಥ ಮಹಿಳಾಪರ ಚಿಂತಕರು ಮತ್ತು ಹೋರಾಟಗಾರ್ತಿಯರ ಸಲಹೆಗಳಿಗೆ ಅವಕಾಶವೇ ಇಲ್ಲ!