ಹದಿನಾಲ್ಕು ತಿಂಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ –ಜೆಡಿಎಸ್ ದೋಸ್ತಿ ಸರ್ಕಾರ ಪತನದ ಬಳಿಕ ಸರ್ಕಾರ ರಚನೆಯ ಹಕ್ಕುಮಂಡಿಸಿ, ರಾಜ್ಯಪಾಲರ ಆಶೀರ್ವಾದದೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಬಹಮತ ಸಾಬೀತಿಗೆ ಕ್ಷಣಗಣನೆ ಆರಂಭವಾಗಿದೆ.
ಸೋಮವಾರ ಬಹುಮತ ಸಾಬೀತಿಗೆ ಮುಹೂರ್ತ ನಿಗದಿಯಾಗಿದ್ದು, ಸದ್ಯ 221 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಗೆ ಸರಳ ಬಹುಮತ ಸಾಬೀತು ಮಾಡಲು 112 ಸ್ಥಾನ ಬಲ ಬೇಕಿದೆ. ಆದರೆ, ಬಿಜೆಪಿಗೆ ಈಗ ಇರುವುದು, ಒಬ್ಬ ಪಕ್ಷೇತರ ಶಾಸಕರ ಬೆಂಬಲವೂ ಸೇರಿ 105 ಸ್ಥಾನಬಲ ಮಾತ್ರ. ಕೊರತೆ ಇರುವ ಆರು ಸ್ಥಾನಗಳನ್ನು ಹೇಗೆ ತುಂಬಿಕೊಳ್ಳಲಿದೆ ಎಂಬುದು ಬಯಲಾಗಲು ನಾಳೆಯ ಭಾನುವಾರ ಒಂದು ದಿನ ಕಾಯಲೇಬೇಕಿದೆ.
ಆದರೆ, ಈಗಾಗಲೇ, ಕೇವಲ ಹದಿನಾಲ್ಕು ತಿಂಗಳ ಹಿಂದೆ ಒಮ್ಮೆ ಸರ್ಕಾರ ರಚನೆಯ ಹಕ್ಕು ಮಂಡಿಸಿ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನೂ ಸ್ವೀಕರಿಸಿ, ಸದನದಲ್ಲಿ ಬಹುಮತ ಸಾಬೀತುಪಡಿಸಲು ವಿಫಲರಾಗಿ ರಾಜೀನಾಮೆ ನೀಡಿದ್ದ ಬಿಜೆಪಿ ನಾಯಕ ಯಡಿಯೂರಪ್ಪ ಅವರಿಗೆ, ಈಗಲೂ ಮೇಲ್ನೋಟಕ್ಕೆ ಸರಳ ಬಹುಮತಕ್ಕೆ ಅಗತ್ಯ ಸ್ಥಾನಬಲವಿಲ್ಲ. ಹಾಗಿದ್ದರೂ, ಮೈತ್ರಿ ಸರ್ಕಾರ ಪತನವಾಗಿ ಎರಡೇ ದಿನಕ್ಕೆ ಮತ್ತೆ ಹಿಂದೆ ಬಹುಮತಸಾಬೀತು ಮಾಡಲು ವಿಫಲವಾದ ಪಕ್ಷ ಮತ್ತು ಆ ಪಕ್ಷದ ನಾಯಕರಿಗೆ ಯಾವ ಆಧಾರದ ಮೇಲೆ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಿದರು? ಕೊರತೆ ಬೀಳುವ ಆರು ಮಂದಿ ಶಾಸಕರನ್ನು ಯಡಿಯೂರಪ್ಪ ಮತ್ತು ಬಿಜೆಪಿ ಹೇಗೆ ಕರೆತರಲಿದೆ? ಅದಕ್ಕಾಗಿ ಕುದುರೆ ವ್ಯಾಪಾರ ನಡೆಸದೇ ಶಾಸಕರನ್ನು ಹೇಗೆ ತರುವುದು ಸಾಧ್ಯ? ಅಥವಾ ಸ್ಪೀಕರ್ ಮುಂದೆ ಬಾಕಿ ಇರುವ ಇನ್ನೂ 13 ಮಂದಿ ಶಾಸಕರ ರಾಜೀನಾಮೆ ಅಥವಾ ಅನರ್ಹತೆ ಪ್ರಕರಣಗಳ ಇತ್ಯರ್ಥವಾಗಿ ಆ ಶಾಸಕರು ಅನರ್ಹಗೊಳ್ಳಲಿದ್ದಾರೆ ಎಂಬ ವಿಶ್ವಾಸ ರಾಜ್ಯಪಾಲರಿಗೆ ಇದೆಯೇ? ಎಂಬ ಪ್ರಶ್ನೆಗಳು ಈಗ ಎದ್ದಿವೆ.
ಜೊತೆಗೆ, ಅತೃಪ್ತರ ಪೈಕಿ ಕೆಲವರು ಆಗಲೇ ತಮ್ಮ ಮಾತೃಪಕ್ಷಗಳ ನಾಯಕರನ್ನು ಸಂಪರ್ಕಿಸಿ ವಾಪಸು ಬರುವ ಮಾತನಾಡಿರುವುದಾಗಿ ವರದಿಯಾಗಿದೆ. ಪುಣೆಯಲ್ಲಿರುವ ಶಾಸಕರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತಿತರನ್ನು ಸಂಪರ್ಕಿಸಿ ತಮ್ಮ ನಡೆ ದುಡುಕಿನದ್ದು, ತಮ್ಮ ನಡೆಯಿಂದಾಗಿ ಸರ್ಕಾರ ಕುಸಿದದ್ದೇ ಅಲ್ಲದೆ, ರಾಜ್ಯದ ಇಷ್ಟು ದೊಡ್ಡ ರಾಜಕೀಯ ಮತ್ತು ಸಂವಿಧಾನಿಕ ಬಿಕ್ಕಟ್ಟು ಉಲ್ಬಣಿಸಲಿದೆ ಎಂದು ಗೊತ್ತಿರಲಿಲ್ಲ. ಆಗಿರುವ ಅನಾಹುತಕ್ಕೆ ಕ್ಷಮೆ ಕೋರಿ ವಾಪಸು ಬರುವುದಾಗಿ ಹೇಳಿರುವುದಾಗಿ ಕೆಲವು ವರದಿಗಳು ಹೇಳಿವೆ. ಅದೇ ಹೊತ್ತಿಗೆ, ತಾವು ಯಾರನ್ನೂ ಸಂಪರ್ಕಿಸಿಲ್ಲ. ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಎಂಟಿಬಿ ನಾಗರಾಜ್ ಮತ್ತು ಬಿ ಸಿ ಪಾಟೀಲ್ ಹೇಳಿದ್ದರೆ, ಸೋಮವಾರ ಬಿ ಎಸ್ ವೈ ವಿಶ್ವಾಸಮತ ಯಾಚನೆಯ ದಿನ ಸದನಕ್ಕೆ ಹಾಜರಾಗುವುದಿಲ್ಲ ಎಂದು ಮತ್ತೊಬ್ಬ ಅತೃಪ್ತ ಶಾಸಕ ಮುನಿರತ್ನ ಹೇಳಿರುವುದಾಗಿ ವರದಿಯಾಗಿದೆ.
ಈ ನಡುವೆ ಮತ್ತೊಂದು ಬೆಳವಣಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದಲ್ಲಿ ಕೆಲವು ಶಾಸಕರು ಬಿಜೆಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಒಲವು ವ್ಯಕ್ತಪಡಿಸಿದ್ದು, ನಾಯಕ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ ಎಂದು ಸ್ವತಃ ಜಿ ಟಿ ದೇವೇಗೌಡ ಹೇಳಿದ್ದಾರೆ. ಆಪರೇಷನ್ ಕಮಲದ ಮೂಲಕ ಬಿಜೆಪಿ ನಮ್ಮ ಶಾಸಕರನ್ನು ಸೆಳೆಯಲಿದೆ. ಅಂತಹ ಅಪಾಯದಿಂದ ಪಕ್ಷವನ್ನು ಉಳಿಸಿಕೊಳ್ಳಲು ಅವರಿಗೆ ಬಾಹ್ಯ ಬೆಂಬಲ ನೀಡುವುದು ಉಳಿದಿರುವ ಉಪಾಯ ಎಂದು ಶಾಸಕರು ನೀಡಿದ ಸಲಹೆಗೆ ಕುಮಾರಸ್ವಾಮಿ ಅವರು, ಈ ಬಗ್ಗೆ ಪಕ್ಷದ ವರಿಷ್ಠರಾದ ದೇವೇಗೌಡರೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರವಿಕುಮಾರ್, ಬಿಜೆಪಿ ಈವರೆಗೆ ಯಾವುದೇ ಪಕ್ಷದ ಬೆಂಬಲ ಯಾಚಿಸಿಲ್ಲ. ಒಂದು ವೇಳೆ ಜೆಡಿಎಸ್ ತಾವಾಗಿಯೇ ಬಾಹ್ಯ ಬೆಂಬಲ ನೀಡುವುದೇ ಆದರೆ, ಆ ಬಗ್ಗೆ ತಮ್ಮ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡಿದರೆ, ಹತ್ತು ದಿನಗಳ ಹಿಂದೆ ದೋಸ್ತಿ ಪಕ್ಷಗಳ ಶಾಸಕರು ರಾಜೀನಾಮೆ ನೀಡಿ ಮುಂಬೈ ಸೇರಿಕೊಂಡ ಆರಂಭದಲ್ಲಿ ಜೆಡಿಎಸ್ ಮುಖಂಡ ಸಾ ರಾ ಮಹೇಶ್ ಅವರು ಬಿಜೆಪಿ ನಾಯಕ ಮುರಳೀಧರ ರಾವ್ ತಂಗಿದ್ದ ಖಾಸಗೀ ಹೋಟೆಲೊಂದಕ್ಕೆ ರಹಸ್ಯ ಭೇಟಿ ನೀಡಿರುವುದು, ಅಂದು ಅವರು ಹೇಳಿದಂತೆ ಕೇವಲ ಆಕಸ್ಮಿಕ ಭೇಟಿಯಲ್ಲ ಎಂಬ ಅನುಮಾನಗಳು ಬಲಗೊಳ್ಳತೊಡಗಿವೆ.
ಮುಂಬೈಗೆ ಹೋಗಿ ಅತೃಪ್ತರ ಮನವೊಲಿಸಲು ಪ್ರಯತ್ನಿಸಿ ತಮ್ಮ ನಾಯಕರು ಬರಿಗೈಲಿ ವಾಪಸ್ಸಾಗುತ್ತಲೇ ಜೆಡಿಎಸ್ ವರಿಷ್ಠರು, ಅಧಿಕಾರದಲ್ಲಿ ಮುಂದುವರಿಯುವ ಉದ್ದೇಶದಿಂದ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಮೂಲಕ ಬಿಜೆಪಿಯೊಂದಿಗೆ ಮೈತ್ರಿಯ ಮಾತುಕತೆ ನಡೆಸಲು ಯತ್ನಿಸುತ್ತಿದೆ ಎಂಬ ಮಾತುಗಳು ಅಂದು ಕೇಳಿಬಂದಿದ್ದವು. ಇದೀಗ ಶಾಸಕಾಂಗ ಪಕ್ಷದಲ್ಲಿಯೇ ಬಹುತೇಕ ಶಾಸಕರು ಬಿಜೆಪಿ ಜೊತೆ ಕೈಜೋಡಿಸುವ ಮಾತನಾಡಿರುವುದು ಅಂದಿನ ಆ ಮಾತುಗಳು ಕೇವಲ ವದಂತಿಯಲ್ಲ ಎಂಬುದನ್ನು ಸಾರುತ್ತಿವೆ. ಸರ್ಕಾರ ಪತನ ಸನ್ನಿಹಿತ ಎಂದು ಅರಿವಾಗುತ್ತಲೇ, ಕೈತಪ್ಪುವ ಅಧಿಕಾರವನ್ನು ಹಿಡಿದಿಟ್ಟುಕೊಳ್ಳುವ ಮತ್ತೊಂದು ದಾರಿಯನ್ನು ಜೆಡಿಎಸ್ ವರಿಷ್ಠರು ಕಂಡುಕೊಂಡಿದ್ದರೇ? ಎಂಬ ಅನುಮಾನ ಕೂಡ ಈಗ ನಿಜವಾಗುತ್ತಿರುವಂತಿದೆ.
ಈ ನಡುವೆ, ಸೋಮವಾರ ವಿಶ್ವಾಸಮತ ಸಾಬೀತುಪಡಿಸುವ ವಿಶ್ವಾಸದಲ್ಲಿರುವ ಬಿಎಸ್ ವೈ ವಿವಿಧ ಮಠಮಂದಿರಗಳಿಗೆ ಭೇಟಿ ಮುಂದುವರಿಸಿದ್ದರೆ, ಬಿಜೆಪಿ ನಾಯಕರ ನಡುವೆ ಸಚಿವ ಸಂಪುಟದಲ್ಲಿ ಆಯಕಟ್ಟಿನ ಖಾತೆಗಳನ್ನು ಪಡೆಯಲು ಲಾಬಿ ಬಿರುಸುಗೊಂಡಿದೆ. ಪ್ರಮುಖವಾಗಿ ಕೆ ಎಸ್ ಈಶ್ವರಪ್ಪ, ಸಿ ಟಿ ರವಿ, ಆರ್ ಅಶೋಕ್, ಶ್ರೀರಾಮುಲು, ಉಮೇಶ್ ಕತ್ತಿ ಮುಂತಾದವರು ಹೈಕಮಾಂಡ್ ಮೇಲೆ ಪ್ರಭಾವ ಬೀರಲು ಪಕ್ಷದ ತಮ್ಮದೇ ಮೂಲಗಳ ಮೂಲಕ ತೀವ್ರ ಲಾಬಿ ನಡೆಸಿದ್ದಾರೆ. ಈ ನಡುವೆ, ಒಬ್ಬರಿಗೆ ಒಂದು ಹುದ್ದೆ ನಿಯಮದಂತೆ ಬಿಎಸ್ ವೈ ಮುಖ್ಯಮಂತ್ರಿಯಾಗುತ್ತಲೇ ಪಕ್ಷದ ಅಧ್ಯಕ್ಷ ಹುದ್ದೆಯನ್ನು ತ್ಯಜಿಸಲಿದ್ದಾರೆ. ಆ ಸ್ಥಾನಕ್ಕೆ ಈಶ್ವರಪ್ಪ ಅಥವಾ ಸಿ ಟಿ ರವಿ ಹೆಸರು ಕೇಳಿಬರುತ್ತಿದೆ. ಆದರೆ, ಸಚಿವ ಸ್ಥಾನ ವಂಚಿರರಾಗುವ ಭಯದಿಂದ ಆ ನಾಯಕರು ಪಕ್ಷದ ಹೊಣೆಗಾರಿಕೆಯ ಬಗ್ಗೆ ತುಟಿಬಿಚ್ಚುತ್ತಿಲ್ಲ ಎನ್ನಲಾಗಿದೆ.
ಈ ನಡುವೆ, ಉಪಮುಖ್ಯಮಂತ್ರಿ ಸ್ಥಾನದ ಕುರಿತು ಹೈಕಮಾಂಡ್ ಈಗಾಗಲೇ ಸ್ಪಷ್ಟ ನಿರ್ಧಾರ ಕೈಗೊಂಡಿದ್ದು, ಯಾವುದೇ ಕಾರಣಕ್ಕೂ ಉಪ ಮುಖ್ಯಮಂತ್ರಿ ಹುದ್ದೆ ಇಲ್ಲ ಎಂದಿದೆ. ಯಡಿಯೂರಪ್ಪ ಅವರ ಕಾರ್ಯಶೈಲಿ ಮತ್ತು ಪಕ್ಷದ ಒಳಗೇ ಈಗಾಗಲೇ ಇರುವ ಮುಸುಕಿನ ಗುದ್ದಾಟದ ಹಿನ್ನೆಲೆಯಲ್ಲಿ ಮತ್ತೊಂದು ಅಧಿಕಾರ ಕೇಂದ್ರ ಸೃಷ್ಟಿ ಅಪಾಯಕಾರಿ ಎಂಬ ನಿಲುವಿಗೆ ಹೈಕಮಾಂಡ್ ಬಂದಿದೆ ಎನ್ನಲಾಗಿದೆ. ಹಾಗಾಗಿ ಈಗ ಬಿಜೆಪಿ ಹಿರಿಯ ನಾಯಕರ ನಡುವೆ ಪ್ರಮುಖ ಖಾತೆಗಳಿಗಾಗಿ ಮತ್ತು ಪಕ್ಷದ ಅಧ್ಯಕ್ಷ ಸ್ಥಾನದಿಂದ ದೂರವಿರಲು ಪೈಪೋಟಿ ಬಿರುಸಾಗಿದೆ.