ಜೂನ್ 2017ರಲ್ಲಿ ಉತ್ತರಪ್ರದೇಶ ರಾಜ್ಯದ ಉನ್ನಾವೊ ಜಿಲ್ಲೆಯಲ್ಲಿ 17 ವರ್ಷದ ಅಪ್ರಾಪ್ತ ಯುವತಿಯೊಬ್ಬಳು ಸ್ಥಳೀಯ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಸುತ್ತಾಳೆ.
ಜೂನ್ 2017ರಿಂದ ಏಪ್ರಿಲ್ 2018ರ ವರೆಗೆ ಯುವತಿ ದೂರು ನೀಡುವುದು, ಆಕೆಯ ಕುಟುಂಬವೂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವುದು, ಎಲ್ಲವೂ ನಡೆಯುತ್ತವೆ. ಆದರೂ ಕಾನೂನುರೀತ್ಯಾ ಪೊಲೀಸರು ಎಫ್ಐಆರ್ (ಪ್ರಥಮ ವರ್ತಮಾನ ವರದಿ) ದಾಖಲಿಸಲು ನಿರಾಕರಿಸುತ್ತಾರೆ. ಕೊನೆಗೆ ಸಂತ್ರಸ್ತ ಯುವತಿಯ ಕುಟುಂಬವು ನ್ಯಾಯಾಲಯದ ಮೊರೆ ಹೋಗುತ್ತದೆ. ಕೇಸ್ ದಾಖಲಿಸುವಂತೆ ಪಟ್ಟುಹಿಡಿದು ದೀರ್ಘಕಾಲ ಹೋರಾಡುತ್ತದೆ. ದೂರು ದಾಖಲಿಸುವಂತೆ ಸ್ಥಳೀಯ ಪೊಲೀಸರಿಗೆ ನ್ಯಾಯಾಲಯ ಆದೇಶಿಸುತ್ತದೆ.
2018ರ ಏಪ್ರಿಲ್ 3ರಂದು ಯುವತಿಯ ತಂದೆಯನ್ನು ಆಪಾದಿತ ಶಾಸಕನ ಬಂಟರು ಹಿಗ್ಗಾಮುಗ್ಗಾ ಥಳಿಸುತ್ತಾರೆ.
2018ರ ಏಪ್ರಿಲ್ 3ರಂದು ಪೊಲೀಸರು ಯುವತಿಯ ದೂರನ್ನೂ ಲೆಕ್ಕಿಸದೆ ಆಕೆಯ ತಂದೆಯ ಮೇಲೆ ಸುಳ್ಳು ಆರೋಪ ಹೊರಿಸಿ ಆತನನ್ನು ಬಂಧಿಸುತ್ತಾರೆ.
2018ರ ಏಪ್ರಿಲ್ 8ರಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಪಾದಿತ ಶಾಸಕನನ್ನು ರಕ್ಷಿಸುತ್ತಿರುವುದಾಗಿ ಆರೋಪಿಸಿದ ಸಂತ್ರಸ್ತ ಯುವತಿ ಮುಖ್ಯಮಂತ್ರಿಯ ಮನೆಯೆದುರು ಆತ್ಮಾಹುತಿ ಯತ್ನ ನಡೆಸುತ್ತಾಳೆ.
2018 ಏಪ್ರಿಲ್ 9ರಂದು ಬಂಧಿತ ಯುವತಿಯ ತಂದೆ ಪೊಲೀಸ್ ಕ್ರೌರ್ಯಕ್ಕೆ ಬಲಿಯಾಗಿ ಸಾವನ್ನಪ್ಪುತ್ತಾರೆ.
ಮಾರನೆಯ ದಿನ, ಅಂದರೆ 2018 ಏಪ್ರಿಲ್ 10ರಂದು ಯುವತಿಯ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ನಾಲ್ವರನ್ನು ಬಂಧಿಸುತ್ತಾರೆ. ಈ ನಾಲ್ಕೂ ಜನರು ಅತ್ಯಾಚಾರದ ಆಪಾದಿತ ಶಾಸಕನ ಸಹಚರರಾಗಿರುತ್ತಾರೆ.
2018 ಏಪ್ರಿಲ್ 2018ರಂದು ಉನ್ನಾವೊ ಶಾಸಕನಿಂದ ಅತ್ಯಾಚಾರಕ್ಕೊಳಗಾದ ಯುವತಿಯ ತಂದೆಯ ದೇಹದ ಮೇಲೆ 14 ಗಾಯದ ಪೆಟ್ಟುಗಳಾಗಿದ್ದನ್ನು ಮರಣೋತ್ತರ ಪರೀಕ್ಷೆ (ಪೋಸ್ಟ್ ಮಾರ್ಟಮ್) ವರದಿ ಸ್ಪಷ್ಟಪಡಿಸುತ್ತದೆ.
2018 ಏಪ್ರಿಲ್ 11ರಂದು ಈ ಅತ್ಯಾಚಾರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗುತ್ತದೆ.
2018 ಏಪ್ರಿಲ್ 12ರಂದು ಬಿಜೆಪಿಯ ಶಾಸಕ ಕುಲದೀಪ್ ಸೆಂಗಾರ್ ವಿರುದ್ಧ ಅತ್ಯಾಚಾರದ ಆರೋಪ ಹೂಡಲಾಗುತ್ತದೆ.
2018 ಏಪ್ರಿಲ್ 13ರಂದು ಅಲಹಾಬಾದ್ ಉಚ್ಚನ್ಯಾಯಾಲಯ (ಹೈ ಕೋರ್ಟ್) ಆರೋಪಿ ಶಾಸಕನ ಬಂಧನಕ್ಕೆ ಆದೇಶಿಸುತ್ತದೆ.
2018 ಜುಲೈ 11 ರಂದು ಸಿಬಿಐ ಮೊದಲ ಆರೋಪಪಟ್ಟಿಯನ್ನು (ಚಾರ್ಜ್ ಶೀಟ್) ಸಲ್ಲಿಸಿ, ಅದರಲ್ಲಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ನನ್ನು ಆರೋಪಿ ಎಂದು ಹೆಸರಿಸುತ್ತದೆ.
2018 ಜುಲೈ 13ರಂದು ಎರಡನೇ ಆರೋಪ ಪಟ್ಟಿ ಸಲ್ಲಿಸಲಾಗಿ ಅದರಲ್ಲಿ ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಂದೆಯ ಮೇಲೆ ಸುಳ್ಳು ಆರೋಪ ಹೊರಿಸಿದ್ದಕ್ಕಾಗಿ ಶಾಸಕ ಮತ್ತವನ ಸಹೋದರ, ಮೂವರು ಪೊಲೀಸರು ಹಾಗು ಇತರ ಐವರ ಹೆಸರುಗಳನ್ನೂ ಸೇರಿಸಲಾಗುತ್ತದೆ.
2018 ಆಗಸ್ಟ್ 18ರಂದು ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿದ್ದ ಯೂನುಸ್ ಎಂಬ ವ್ಯಕ್ತಿ ಇದ್ದಕ್ಕಿದ್ದಂತೆ ಅಸುನೀಗುತ್ತಾನೆ. ಆತನ ಕುಟುಂಬಸ್ಥರು ಆರೋಪಿಸುವಂತೆ ಯೂನುಸ್ ಗೆ ವಿಷ ಬೆರೆಸಲಾಗಿರುತ್ತದೆ. ಅವನು ಅಸಹಜವಾಗಿ ಸಾವಿಗೀಡಾದರೂ ಸಹ ಮರಣೋತ್ತರ ಪರೀಕ್ಷೆ ಮಾಡದೆ ಶವವನ್ನು ಅಂತ್ಯಕ್ರಿಯೆ ನಡೆಸಲಾಗುತ್ತದೆ.
2018 ನವೆಂಬರ್ 21ರಂದು ಸಂತ್ರಸ್ತೆಯ ಚಿಕ್ಕಪ್ಪನನ್ನು 18 ವರ್ಷ ಹಿಂದಿನ ‘ಗನ್ ಫೈರಿಂಗ್’ ಪ್ರಕರಣದಲ್ಲಿ ಬಂಧಿಸಲಾಗುತ್ತದೆ. ಆತ ತನ್ನ ಅಣ್ಣನ ಸಾವಿಗೆ ಮತ್ತು ಅಣ್ಣನ ಮಗಳಿಗೆ ನ್ಯಾಯ ದೊರಕಬೇಕೆಂದು ಆಂದೋಲನ ಕೈಗೊಂಡು ಶಾಸಕ ಕುಲದೀಪ್ ಎಸಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿರುತ್ತಾನೆ.
2018 ಡಿಸೆಂಬರ್ 26ರಂದು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಜನ್ಮ ದಿನಾಂಕದಲ್ಲಿ ವ್ಯತ್ಯಾಸವಾಗಿದೆ ಎಂಬ ಹಿನ್ನೆಲೆಯಲ್ಲಿ ಯುವತಿ, ಆಕೆಯ ತಾಯಿ ಮತ್ತು ಚಿಕ್ಕಪ್ಪನ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ!
2019 ಜುಲೈ 12ರಂದು ಸಂತ್ರಸ್ತೆ ತನ್ನ ಕುಟುಂಬಕ್ಕೆ ಜೀವಬೆದರಿಕೆ ಇರುವ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾಗಿ ತಿಳಿದುಬಂದಿದೆ.
2019 ಜುಲೈ 13ರಂದು ಅಪರಿಚಿತ ವ್ಯಕ್ತಿಗಳು ಬಂದು ತಮಗೆ ಜೀವಬೆದರಿಕೆ ಒಡ್ಡುತ್ತಿರುವ ಬಗ್ಗೆ ಸಂತ್ರಸ್ತೆಯ ತಾಯಿಯೂ ಉತ್ತರಪ್ರದೇಶದ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಅಂತಿಮವಾಗಿ ಇದೀಗ 2019 ಜುಲೈ 28ರಂದು ಸಂತ್ರಸ್ತ ಯುವತಿ ರಾಯ್ ಬರೇಲಿ ಜೈಲಿನಲ್ಲಿರುವ ಚಿಕ್ಕಪ್ಪನ್ನು ಭೇಟಿ ಮಾಡಲು ತನ್ನ ವಕೀಲರೊಂದಿಗೆ ಕಾರ್ ನಲ್ಲಿ ಪ್ರಯಾಣ ನಡೆಸುತ್ತಿದ್ದಳು.
ಆಗ ನಡೆದದ್ದೇನೆಂದರೆ….
- ಏಕಾಏಕಿ ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆಯುತ್ತದೆ.
- ಯುವತಿಯ ಭದ್ರತಾ ಅಧಿಕಾರಿ ಅವಳ ಕಾರ್ ನೊಳಗಿರಲಿಲ್ಲ!
- ಢಿಕ್ಕಿ ಹೊಡೆದ ಲಾರಿಯ ಸಂಖ್ಯಾ ಫಲಕಕ್ಕೆ (ನಂಬರ್ ಪ್ಲೇಟ್) ಕಪ್ಪು ಮಸಿ ಬಳಿಯಲಾಗಿರುತ್ತದೆ!
- ಯುವತಿಯ ಇಬ್ಬರು ಕುಟುಂಬಸ್ಥರು ಸಾವನ್ನಪ್ಪುತ್ತಾರೆ (ತಾಯಿಯೂ ಸೇರಿದಂತೆ)
- ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿರುವ ಯುವತಿ ಜೀವನ್ಮರಣದ ಮಧ್ಯೆ ಸೆಣೆಸುತ್ತಿದ್ದಾಳೆ
- ಯುವತಿಯ ಕುಟುಂಬದ ಪರ ವಾದ ಮಂಡಿಸುತ್ತಿದ್ದ ವಕೀಲ ಮರಣ ಹೊಂದಿದ್ದಾರೆ
- ಇಷ್ಟಾದರೂ ಈ ಅಪಘಾತ “ಪಿತೂರಿ ಅಥವಾ ಕೊಲೆಯ ಉದ್ದೇಶ” ಹೊಂದಿದೆ ಎಂದೆನಿಸದು ಎಂದು ಉತ್ತರಪ್ರದೇಶದ ಪೊಲೀಸರು ನೇರವಾಗಿ ಸ್ಪಷ್ಟವಾಗಿ ಹೇಳುತ್ತಾರೆ
ಉತ್ತರಪ್ರದೇಶದ ಆಸ್ಪತ್ರೆಗಳಲ್ಲಷ್ಟೇ ಅಲ್ಲ ಆಮ್ಲಜನಕದ ಕೊರತೆ ಇದ್ದದ್ದು, ನೂರಾರು ಮಕ್ಕಳು ಸಾವನ್ನಪ್ಪಿದ್ದು… ಯೋಗಿ ರಾಜ್ಯದಲ್ಲಿ ನ್ಯಾಯ ವ್ಯವಸ್ಥೆಯೂ ತುರ್ತು ಚಿಕಿತ್ಸಾ ಘಟಕದಲ್ಲಿ ಏದುಸಿರುಬಿಡುತ್ತಿದೆ…. ಸಂತ್ರಸ್ತ ಮಹಿಳೆಯರು, ಜನಸಾಮಾನ್ಯರೂ ಕೊಲೆಯಾಗುತ್ತಿದ್ದಾರೆ, ನ್ಯಾಯದ ಜೊತೆಜೊತೆಗೇ….
ತಂದೆಯನ್ನು ಹೊಡೆದು ಕೊಲ್ಲಲಾಯಿತು
ಚಿಕ್ಕಪ್ಪನನ್ನು ಸೆರೆಮನೆಗೆ ತಳ್ಳಲಾಯಿತು
ತಾಯಿಯೂ ಇನ್ನಿಲ್ಲ
ಚಿಕ್ಕಮ್ಮ ಉಳಿದಿಲ್ಲ
ಸಾಕ್ಷಿ ಕಣ್ಮುಚ್ಚಿದೆ
ಗಂಭೀರ ಸ್ಥಿತಿಯಲ್ಲಿ ಸಂತ್ರಸ್ತೆ
ಸಾವನ್ನಪ್ಪಿದ್ದಾರೆ ವಕೀಲ
ಶಾಸಕ ಮಾತ್ರ ಸುರಕ್ಷಿತವಾಗಿದ್ದಾನೆ ಪೊಲೀಸ್ ಭದ್ರತೆಯಲಿ
ಇನ್ನೂ….
ಅತ್ಯಾಚಾರಿಯ ವಿರುದ್ಧ ದೂರುವಿರಾ?
ರೇಪ್ ವಿರುದ್ಧ ಧ್ವನಿ ಎತ್ತುವಿರಾ?
ಅಂದ ಹಾಗೆ…
ಇದು ಬೇಟಿ ಬಚಾವೊ ಅಲ್ಲ
ಅತ್ಯಾಚಾರಿ ಶಾಸಕ ಬಚಾವೊ ಅಲ್ಲವೇನು?
(ಮೂಲ ಬರಹ: ಪೇರಿ ಮಹೇಶ್ವರ್)